ಶಾಂತ-ಸ್ವಚ್ಛ-ಸ್ವಸ್ಥ ಜಗತ್ತು ಕಟ್ಟೋಣ

-ಮಾಲತಿ ಪಟ್ಟಣಶೆಟ್ಟಿ

  1. ವಿಶ್ವದಾದ್ಯಂತ ಆಕ್ರಮಿಸಿಕೊಂಡು ಜನರನ್ನು ನಲುಗಿಸಿದ ಕೊರೋನಾ ಸಾಂಕ್ರಾಮಿಕದಿಂದ ಜನಮನದಲ್ಲಿ ಆವರಿಸಿದ ಭಯ, ಆತಂಕ, ಅಸಹಾಯಕತೆ, ಖಿನ್ನತೆ ಮತ್ತು ನಿಷ್ಕ್ರಿಯತೆ ಗಳನ್ನು ಹೊಡೆದೋಡಿಸುವ ರೋಗನಿರೋಧಕ ಔಷಧಿ, ಚುಚ್ಚುಮದ್ದುಗಳ ಆವಿಷ್ಕಾರಗಳು ಇತ್ತೀಚಿಗೆ ಆಗಿವೆ. ಇದು ಹಲವು ದೇಶಗಳ ವಿಜ್ಞಾನಿಗಳ ಕಠಿಣ ಪರಿಶ್ರಮದ ಫಲ. ಈ ಔಷಧಿಗಳ ಪ್ರಯೋಗಗಳು ರೋಗಿಗಳ ಮೇಲೆ ಆಗಿ ಯಶಸ್ಸನ್ನು ಕಂಡಿವೆಯಾದ್ದರಿಂದ ಈ ರೋಗದ ಕರಿನೆರಳು ಕರಗಿ ನೆಮ್ಮದಿಯ ಬಾಳು ನಮ್ಮದಾಗಬಹುದೆಂದು ಆಶಿಸೋಣ.
  2. ಈ ಭೂಮಿಯ ಮೂಲ ಸಂಪತ್ತುಗಳೆಂದರೆ ಜಲ, ನೆಲ ಮತ್ತು ವಾಯು. ದುರ್ದೈವದಿಂದ ಎಲ್ಲವೂ ಕಲುಷಿತಗೊಂಡಿವೆ, ನಿಸ್ಸತ್ವವಾಗಿವೆಯಾದ್ದರಿಂದ ಅಸಂಖ್ಯ ಪ್ರಾಣಿ, ಪಕ್ಷಿ, ಮನುಷ್ಯ -ಒಟ್ಟಾರೆ ಇಡೀ ಜೀವ ಸಂಕುಲಗಳೆಲ್ಲವೂ ಸಾವಿಗಾಹುತಿಯಾಗಿವೆ. ಈ ದೆಸೆಯಲ್ಲಿ ವಿಶ್ವ, ರಾಷ್ಟ್ರ, ರಾಜ್ಯಮಟ್ಟಗಳಲ್ಲಿ ಕೆಲವು ಪ್ರಯತ್ನಗಳು ನಡೆದಿವೆಯಾದರೂ ಆಮೆಗತಿಯಲ್ಲಿ! ಆದ್ದರಿಂದ ತೀವ್ರ ಕ್ರಮಗಳ ರೂಪದಲ್ಲಿ ಕಾಯ್ದೆ, ಕಾನೂನು ಮತ್ತು ಯೋಜನೆಗಳು ರಚನೆಗೊಂಡು ಅತಿ ಶೀಘ್ರವಾಗಿ ಸಂರಕ್ಷಣಾ ಕಾರ್ಯಗಳು ನಡೆಯಬೇಕಾಗಿವೆ.
  3. ಚೀನಾ, ಪಾಕಿಸ್ತಾನ, ಭಾರತ, ಇಸ್ರೇಲ್, ಪ್ಯಾಲಿಸ್ಟಾಯಿನ್, ಅಫಘಾನಿಸ್ತಾನ್ ಮಧ್ಯ ಏಶಿಯಾ ಮತ್ತು ಆಫ್ರಿಕಾ ದೇಶಗಳಲ್ಲಿ ನಿರಂತರವಾಗಿ ಯುದ್ಧಗಳು ನಡೆದೇ ಇವೆ. ಲಕ್ಷಾವಧಿ ಸೈನಿಕರು ಮತ್ತು ನಾಗರಿಕರ ಮಾರಣಹೋಮವಾಗಿದೆ. ಇಲ್ಲಿಯ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ಯುದ್ಧಗಳಲ್ಲ, ಶಾಂತಿಸಂಧಾನಗಳು ಬೇಕು ಎಂಬ ಅರಿವು ಉಭಯ ರಾಷ್ಟ್ರನಾಯಕರಲ್ಲಿ ಮೂಡಲಿ ಎಂದು ಆಶಿಸೋಣ.
  4. ರೈತ ಚಳವಳಿ, ರೈತರ ಉಪವಾಸ, ಧರಣಿ ಸತ್ಯಾಗ್ರಹಗಳು ಮತ್ತು ಆತ್ಮಹತ್ಯೆಗಳು ಹೆಚ್ಚುತ್ತಲಿವೆ. ಇವುಗಳ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರತಿನಿಧಿಗಳೊಂದಿಗೆ ಸರಕಾರಗಳು ನೇರವಾಗಿ ಚರ್ಚೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಬಹುದು.
  5. ಕೊರೊನಾದಿಂದಾಗಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು -ಒಟ್ಟಾರೆ ಎಲ್ಲ ಬಗೆಯ ವಿದ್ಯಾಸಂಸ್ಥೆಗಳಲ್ಲಿಯ ಶಿಕ್ಷಣವು ಹದಗೆಟ್ಟಿದೆ. ಈಗ ಮೊದಲಿನಂತೆ ಕಲಿಕಾ ವಿಧಾನಗಳು ಮುಂದುವರೆಯಲಿ ಎಂದು ಆಶಿಸೋಣ.
  6. ಅಧಃಪತನಗೊಳ್ಳುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯು ಕೊರೊನಾ ಅನಿಷ್ಟದ ಬಿಡುಗಡೆಯ ನಂತರ ಸುಧಾರಿಸಬಹುದು ಎಂದುಕೊಳ್ಳೋಣ.
  7. ಕೊರೊನಾದಿಂದಾಗಿ ಕೆಲಸಗಳಿಂದ ಹೊರನೂಕಲ್ಪಟ್ಟ ಕೂಲಿ ಕಾರ್ಮಿಕರು ಮತ್ತು ನೌಕರರು ನಿರ್ಗತಿಕರಾಗಿ ದಿಕ್ಕೆಟ್ಟು ಸಾಯುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯಗಳ ಸರಕಾರಗಳು ತಕ್ಷಣ ಅವರ ಉಪಜೀವನಕ್ಕಾಗಿ ಕೆಲಸಗಳನ್ನು ಸೃಷ್ಟಿಸಬೇಕಾದ ತುರ್ತು ತಿಳಿದುಕೊಂಡು ಕಾರ್ಯೋನ್ಮುಖವಾಗುತ್ತವೆ ಎಂದು ಆಶಿಸೋಣ.
  8. ಭಯೋತ್ಪಾದನೆಯ ಮುಳ್ಳು ಅರ್ಧ ಮುರಿದು ಉಳಿದರ್ಧವು ಕರುಳಿಗೆ ಚುಚ್ಚುತ್ತಲೇ ಇವೆ. ಜಾಗತಿಕ ಮಟ್ಟದಲ್ಲಿ ರಾಷ್ಟ್ರಗಳೆಲ್ಲ ಒಗ್ಗೂಡಿ ಈ ವಿನಾಶವನ್ನು ಹೋಗಲಾಡಿಸಲು ಒಪ್ಪಂದ ಮಾಡಿಕೊಳ್ಳಬೇಕೆಂಬ ಆಶಯವು ನನ್ನದು.
  9. ಹಿಂದಿಗಿಂತ ಇಂದಿನ ದಿನಗಳಲ್ಲಿ ಬಡ, ದಲಿತ, ಕೂಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ಅಧಿಕಗೊಂಡಿವೆ. ಅಪರಾಧ ನಡೆದ ತಕ್ಷಣ ತನಿಖೆಗಳು ನಡೆದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯಾದರೆ ಈ ವಿಕೃತ ಕಾಮಿಗಳ ಅಪರಾಧಗಳಿಗೆ ನಿಲುಗಡೆ ತಂದುಕೊಳ್ಳಬಹುದು.
  10. ಪತ್ರಕರ್ತರ ಬಂಧನ, ಜೈಲುವಾಸ, ಮರಣದಂಡನೆ ಮತ್ತು ಹತ್ಯೆಗಳಂಥ ಕ್ರಮಗಳು ನಡೆದು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆಯಾಗುತ್ತಿದೆ. ಪ್ರಜಾಪ್ರಭುತ್ವದ ಬೇರುಗಳು ಸಡಿಲಾಗುತ್ತಿವೆ. ಇವನ್ನೆಲ್ಲ ತಡೆಯಲು ಅಗತ್ಯವಿದ್ದ ಎಲ್ಲ ಉಪಕ್ರಮಗಳನ್ನು ಬೇರೆಬೇರೆ ದೇಶಗಳು ತೆಗೆದುಕೊಳ್ಳುವಂತಾಗಲಿ ಎಂದು ಆಶಿಸೋಣ.

 

Leave a Reply

Your email address will not be published.