ಕಾನೂನು ರಚಿಸುವ ಹೊಣೆ ಸರ್ವೋಚ್ಚ ನ್ಯಾಯಾಲಯಕ್ಕೆ!

ಕಾನೂನು ರಚಿಸುವ ಹೊಣೆ ಸರ್ವೋಚ್ಚ ನ್ಯಾಯಾಲಯಕ್ಕೆ!
ಕುರುಡರ ರಾಜ್ಯದಲ್ಲಿ ಒಕ್ಕಣ್ಣಿನ ಹೆಳವನೇ ರಾಜನಂತೆ. ಮೂಗರ ಮಠದಲ್ಲಿ ತೊದಲುವ ಹೆಡ್ಡನೇ ಗುರುವಂತೆ.

ದೇಶದ ಕಾನೂನು ರಚಿಸುವ ಪ್ರಕ್ರಿಯೆಯಲ್ಲಿನ ‘ಗರಬಡಿದ’ ಪರಿಸ್ಥಿತಿಯಲ್ಲಿ ಯಾರು ಕಾನೂನು ರಚನೆ ಮಾಡಬೇಕು ಹಾಗೂ ಅದನ್ನು ಅರ್ಥೈಸಬೇಕು ಎನ್ನುವ ಲೆಕ್ಕಾಚಾರವೇ ತಲೆಕೆಳಗಾಗಿದೆ. ದೇಶದ ಸಂಸತ್ತು ಮತ್ತು ರಾಜ್ಯಗಳ ವಿಧಾನಮಂಡಳಗಳು ಶಾಸನ ರಚಿಸಬೇಕೆನ್ನುವ ತಮ್ಮ ಇರಾದೆಯನ್ನೇ ಮರೆತುಬಿಟ್ಟಿವೆ ಎಂದು ಅನ್ನಿಸುತ್ತಿದೆ. ದೇಶದ ಯಾವುದೇ ಸಾಮಾಜಿಕ ಅಥವಾ ರಾಜಕೀಯ ಸಮಸ್ಯೆಗಳಿಗೆ ಕಾನೂನು ಸಮಾಧಾನ ಹುಡುಕುವ ಸಾಧ್ಯತೆಯೇ ಬದಲಾಗಿದೆ. ಇದಕ್ಕೆ ಹಲವು ಕಾರಣಗಳಿವೆ.

  • ಯಾವುದೇ ವಿಷಯದಲ್ಲಿ ಸರ್ವಾನುಮತದಿಂದ ಕಾನೂನು ರಚನೆಯ ಸಾಧ್ಯತೆ ಇಂದು ಕಾಣಬರುತ್ತಿಲ್ಲ. ಸಮಸ್ಯೆ ಬಗೆಹರಿಯುವ ಕಾನೂನು ರಚನೆ ಮಾಡಿದರೆ ಆಡಳಿತ ಪಕ್ಷಕ್ಕೆ ಕೋಡು ಮೂಡಬಹುದು ಎಂದೆಣಿಸಿ ಇಂದು ಯಾವುದೇ ವಿರೋಧ ಪಕ್ಷಗಳು ಶಾಸಕಾಂಗ ಸಹಕಾರ ನೀಡುತ್ತಿಲ್ಲ. ಹೀಗಾಗಿ ಸರ್ವಾನುಮತದ ಶಾಸನ ರಚನೆ ಕನಸಿನ ಗಂಟಾಗಿದೆ.
  • ಸಾಂವಿಧಾನಿಕ ಬದಲಾವಣೆ ತರಬೇಕಾದ ವಿಚಾರಗಳಲ್ಲಿ 2/3 ರಷ್ಟು ಬಹುಮತವನ್ನು ಇಂದು ಯಾವುದೇ ಒಕ್ಕೂಟಗಳೂ ಹೊಂದದ ಪರಿಸ್ಥಿಯಿದೆ. ಆ ಕಾರಣದಿಂದ ಮಹತ್ತರ ಕಾನೂನು ಬೆಳವಣಿಗೆಗಳಿಗೆ ಹಿಂದೇಟಾಗಿದೆ.
  • ದಕ್ಷ ಮತ್ತು ದೂರಾಲೋಚನೆಯ ಕಾನೂನು ರಚನೆಯ ಸಾಮಥ್ರ್ಯ ಇಂದು ಶಾಸನಸಭೆಗಳಲ್ಲಿ ಹಾಗೂ ಅಧಿಕಾರ ವರ್ಗದಲ್ಲಿ ಇಲ್ಲವಾಗಿದೆ. ಅರೆಬೆಂದ ಹಾಗೂ ತತ್ಕಾಲೀನ ಶಮನ ಮಾಡುವ ಕಾನೂನು ರಚಿಸಲಷ್ಟೇ ನಮ್ಮ ಸಾಮಥ್ರ್ಯ ಇರುವಂತಿದೆ. ಹೀಗಾಗಿ, ಕಾನೂನುಗಳನ್ನು ವಿಶ್ಲೇಷಿಸಿ, ತಮಗೆ ತಕ್ಕಂತೆ ತಿದ್ದುವ ಸ್ವಾತಂತ್ರ್ಯವನ್ನು ಶಾಸಕಾಂಗವೇ ನ್ಯಾಯಾಲಯಗಳಿಗೆ ಬಿಟ್ಟುಕೊಟ್ಟಿದೆ.
  • ನ್ಯಾಯಾಲಯಗಳ ಹಾಗೂ ವಿಶೇಷವಾಗಿ ಸವೋಚ್ಚ ನ್ಯಾಯಾಲಯದ ಅತಿ ಉತ್ಸಾಹದ ಮತ್ತು ಜನಪ್ರಿಯತೆ ಬಯಸುವ ನ್ಯಾಯಿಕ ಪ್ರಕ್ರಿಯೆಯಿಂದಾಗಿ ಶಾಸಕಾಂಗದ ಹಲವು ವಿಷಯಗಳಲ್ಲಿ ನ್ಯಾಯಾಂಗದ ಪ್ರವೇಶ ಅಬಾಧಿತವಾಗಿವೆ. ಈ ಜ್ಯುಡಿಷಿಯಲ್ ಆಕ್ಟಿವಿಸಂನ ಕಾರಣಕ್ಕೆ ಶಾಸಕಾಂಗದ ಮೇಲಿನ ವಿಶ್ವಾಸಾರ್ಹತೆಯೂ ಕಡಿಮೆಯಾಗಿದೆ.
  • ನ್ಯಾಯಾಂಗದ ಮೇಲೆ ತನ್ನ ಸಾರ್ವಭೌಮತ್ವ ಸಾಧಿಸ ಬೇಕೆನ್ನುವ ಪ್ರಜಾತಾಂತ್ರಿಕ ಶಾಸಕಾಂಗದ ಪ್ರಯತ್ನವನ್ನು ಮೊಗ್ಗಿನಲ್ಲಿಯೇ ಚಿವುಟಲಾಗಿದೆ. ನ್ಯಾಷನಲ್ ಜ್ಯುಡಿಷಿಯಲ್ ಅಪಾಯಿಂಟ್‍ಮೆಂಟ್ ಸಮಿತಿಗೆ ಸುಪ್ರೀಂ ಕೆಂಪು ಬಾವುಟ ತೋರಿಸಿ ತಡೆಹಿಡಿದಿದೆ. ಸಂವಿಧಾನದ ಮೂಲ ಆಶಯಗಳನ್ನು ಕಾಪಾಡುವ ಸೋಗಿನಲ್ಲಿ ಸಂಸದೀಯ ಸಾರ್ವಭೌಮತ್ವದ ಮೂಲ ಪ್ರಜಾಪ್ರಭುತ್ವದ ಆಶಯವನ್ನು ಸುಪ್ರೀಂ ಕಿತ್ತುಕೊಂಡಿದೆ.
  • ಕಾನೂನು ಸುವ್ಯವಸ್ಥೆಯಿಂದ ಹಿಡಿದು ಸಲಿಂಗಿ ಸ್ವಾತಂತ್ರ್ಯ, ವ್ಯಭಿಚಾರ ಸ್ವಾತಂತ್ರ್ಯ, ಧಾರ್ಮಿಕ ಹಕ್ಕುಗಳು ಮತ್ತಿತರ ಹಲವು ವಿಷಯಗಳಲ್ಲಿ ನ್ಯಾಯಾಂಗ ತನ್ನದೇ ಆದ ಕಾನೂನು ರಚನೆ ಮಾಡಿ ಈಗಾಗಲೇ ಕಾನೂನು ರಚನೆಯ ಜವಾಬ್ದಾರಿಯನ್ನು ಶಾಸಕಾಂಗದಿಂದ ‘ಕಣ್ಣಿಗೆ ಕಾಣದಂತೆ’ ತನ್ನ ಹೆಗಲೇರಿಸಿಕೊಳ್ಳಲು ವೇದಿಕೆ ಸಜ್ಜಾಗಿದೆ.
  • ಕಾರ್ಯಾಂಗದ ಯಾವುದೇ ಕ್ರಮವನ್ನು ಪ್ರಶ್ನೆ ಮಾಡಬಹುದು ಎಂಬ ಮನೋಭಾವದಲ್ಲಿ ನ್ಯಾಯಾಲಯಗಳು ಆಡಳಿತದ ಎಲ್ಲಾ ವಿಷಯಗಳಲ್ಲಿಯೂ ಮೂಗು ತೂರಿಸಿಯಾಗಿದೆ. ಹಾಗಾಗಿ, ಇಂದು ಬೇಡವೆಂದರೂ ನ್ಯಾಯಾಂಗ ತನ್ನ ಸಾರ್ವಭೌಮತೆಯನ್ನು ಸಾಗಿಸುತ್ತಾ ಬಂದಿರುವುದು ಎದ್ದು ಕಾಣುತ್ತದೆ.
  • ರಾಜ್ಯ ಸರ್ಕಾರಗಳ ಅಧಿಕಾರವನ್ನೂ ಮೊಟಕುಗೊಳಿಸಲು ದೇಶದ ಸವೋಚ್ಚ ನ್ಯಾಯಾಲಯ ಮುಂದಾಗಿದೆ. ಶಿಕ್ಷಣ, ಮೀಸಲಾತಿ, ಉದ್ಯೋಗ, ಕಾನೂನು ಸುವ್ಯವಸ್ಥೆ, ಆರೋಗ್ಯ, ಪಂಚಾಯಿತಿ ರಾಜ್ ಮತ್ತಿತರ ಹಲವು ಕ್ಷೇತ್ರಗಳಲ್ಲಿ ದೇಶದಾದ್ಯಂತ ಏಕತಾನತೆ ತರಬೇಕೆಂಬ ಘನಂದಾರಿ ಉದ್ದೇಶದಲ್ಲಿ ನ್ಯಾಯಾಲಯ ರಾಜ್ಯಗಳ ಸೀಮಿತ ಅಧಿಕಾರವನ್ನು ಸಹಾ ಮೊಟಕುಗೊಳಿಸಿದೆ.

ಕಾನೂನು ಕಣ್ಣಿಗೆ ಸುಲಭವಾಗಿ ಸಿಗಲಾರದ ಧಾರ್ಮಿಕ ನಂಬಿಕೆ ಮುಂತಾದ ಅಸ್ಪಷ್ಟ ಹಾಗೂ ವೈಯಕ್ತಿಕ ವಿಷಯಗಳಲ್ಲಿಯೂ ನ್ಯಾಯಾಂಗ ತನ್ನದೇ ಮಾನದಂಡವನ್ನು ಹೇರಿದೆ. ಮಸೀದಿ ಇಸ್ಲಾಂ ಧರ್ಮಕ್ಕೆ ಮೂಲಭೂತವಾದುದೇ ಎಂಬ ವಿಷಯದಲ್ಲಾಗಲೀ ಅಥವಾ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶದ ವಿಷಯದಲ್ಲಾಗಲೀ ಸುಪ್ರೀಂ ಕೋರ್ಟ್ ತನ್ನ ಬಹುಮತದ ನಿರ್ಣಯಗಳೊಂದಿಗೆ ವಿಷಯದ ಸಂಕೀರ್ಣತೆ ಮತ್ತು ಗಂಭೀರತೆಯನ್ನು ಬದಿಗೊತ್ತಿದೆ. ಈ ಎಲ್ಲಾ ಸಾಂದರ್ಭಿಕ ಅಂಶಗಳನ್ನು ನೋಡುವಾಗ ದೇಶದಲ್ಲಿ ಕಾನೂನು ರಚನೆಯ ಜವಾಬ್ದಾರಿಯನ್ನು ನ್ಯಾಯಾಂಗವೇ ಹೊಂದಿದೆಯೇನೋ ಎಂದು ಅನಿಸುತ್ತಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಏನನ್ನು ನಾವು ಒಪ್ಪಿಕೊಂಡಿದ್ದೇವೆಯೋ ಅದು ಬುಡಮೇಲಾಗಿದೆ ಎಂದು ಸಂದೇಹ ಮೂಡುತ್ತಿದೆ. ಪರಿಹಾರವಾಗಿ, ಇದನ್ನು ಬದಲಾಯಿಸಲು ನಾವು ನ್ಯಾಯಾಂಗದ ಅಧಿಕಾರವನ್ನು ಮೊಟಕು ಮಾಡಲು ಸಿದ್ಧರಾಗಬೇಕು. ಆದರೆ, ಇದು ಹೇಳಿದಷ್ಟು ಸುಲಭವಲ್ಲ. ನ್ಯಾಯಾಂಗದ ಅಧಿಕಾರ ಮೊಟಕು ಮಾಡುವ ಯಾವುದೇ ಕಾನೂನನ್ನು ಸುಪ್ರೀಂ ಅನೂರ್ಜಿತ ಮಾಡಬಹುದು. ಈ ವಿಷಯದಲ್ಲಿ ಸಂಸತ್ತು ಮಾಡುವ ಯಾವುದೇ ಕಾನೂನನ್ನು ಸಂವಿಧಾನದ ಮೂಲ ಆಶಯಗಳಿಗೆ ವಿರೋಧವಾಗಿವೆ ಎಂದು ಹೇಳಿ ಅಸಾಂವಿಧಾನಿಕ’ ಕಾನೂನೆಂದು ಘೋಷಿಸಬಹುದು.

ಈ ಕಷ್ಟಸಾಧ್ಯದ ‘ಕನ್ನಡಿಗಂಟು’ ಪರಿಹಾರದ ಬದಲು ಶಾಸನ-ಕಾನೂನು ರಚನೆಯ ಸಂಪೂರ್ಣ ಜವಾಬ್ದಾರಿಯನ್ನು ನ್ಯಾಯಾಲಯಗಳಿಗೇ ನೀಡಿದರೆ ಹೇಗೆ? ಉಚ್ಚ ನ್ಯಾಯಾಲಯಗಳು ಅಗತ್ಯವಿರುವ ಕಾನೂನುಗಳನ್ನು ಸೂಚಿಸಬಹುದು ಹಾಗೂ ಇಂತಹ ಸೂಚಿಸಲಾದ ಕಾನೂನುಗಳನ್ನು ಸರ್ವೋಚ್ಚ ನ್ಯಾಯಾಲಯ ಅಂಗೀಕರಿಸಿ ಕಾಯ್ದೆ ಹೊರಡಿಸಬಹುದು. ಇಂತಹ ಕಾನೂನುಗಳನ್ನು ವಿಶ್ಲೇಷಿಸುವ, ಪರಿಷ್ಕರಿಸುವ ಹಾಗೂ ವ್ಯಾಖ್ಯಾನ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ನ್ಯಾಯಾಲಯಗಳಿಗೆ ಬಿಟ್ಟುಕೊಡಬಹುದು. ಆಗ ತಾವೇ ರಚನೆ ಮಾಡಿದ ಕಾನೂನನ್ನು ತಾವೇ ಅನೂರ್ಜಿತಗೊಳಿಸುವ ಸಾಧ್ಯತೆ ಎದುರಾಗದೆ ಇರಬಹುದು.

ನ್ಯಾಯಾಲಯಗಳಿಗೆ ಕಾನೂನು ರಚನೆಯ ಸ್ವಾತಂತ್ರ್ಯ ನೀಡಿದರೆ, ದೇಶದಲ್ಲಿ ಸಂಸತ್ತು ಹಾಗೂ ರಾಜ್ಯಗಳಲ್ಲಿ ವಿಧಾನಸಭೆಯ ರಚನೆಯ ಖರ್ಚಿನ ಬಾಬತ್ತು ಉಳಿಯುತ್ತದೆ. ದೇಶಕ್ಕೆ ಒಬ್ಬ ಪ್ರಧಾನಿ ಹಾಗೂ ರಾಜ್ಯಗಳಿಗೆ ಮುಖ್ಯಮಂತ್ರಿಗಳನ್ನು ನೇರವಾಗಿ ಜನರಿಂದಲೇ ಚುನಾಯಿಸಿ ಕೇವಲ ಕಾರ್ಯಾಂಗದ ಅಧಿಕಾರವನ್ನು ಇವರಿಗೆ ನೀಡಬಹುದು. ಇದರಿಂದ ಹಣ ಉಳಿತಾಯದ ಜೊತೆಗೆ ಶಾಸಕಾಂಗ-ನ್ಯಾಯಾಂಗಗಳ ತಿಕ್ಕಾಟ ಇಲ್ಲದಂತಾಗುತ್ತದೆ. ಶಾಸಕಾಂಗದಲ್ಲಿ ಬಹುಮತದ ರಾಜ ಕೀಯ ಬೆಂಬಲದೊಂದಿಗೆ ಶಾಸನ ರಚನೆ ಮಾಡಬೇಕಾದ ಗೋಜಲು ಬಗೆಹರಿಯುತ್ತದೆ. ಸಂಸದೀಯ ಪ್ರಜಾಪ್ರಭುತ್ವದ ಬದಲು ನಾವು ನಮ್ಮ ವ್ಯವಸ್ಥೆಯನ್ನು ಅಧ್ಯಕ್ಷೀಯ ಪ್ರಜಾಪ್ರಭುತ್ವವೆಂಬ ಸುಲಭದ ಹೆಸರು ನೀಡಿ ಕರೆಯಬಹುದು.