ಶಾಸ್ತ್ರೀಯ ಸಂಗೀತ: ರಸಗ್ರಹಣದ ಸಮಸ್ಯೆಗೆ ಪರಿಹಾರವೇನು?

ಭಾವಗೀತೆ, ವಚನಗಾಯನ, ದಾಸವಾಣಿ, ತತ್ವಪದ ಗಾಯನ, ಠುಮರಿ, ಗಜಲ್, ಭಜನೆ, ಅಭಂಗ್ ಪ್ರಕಾರಗಳ ಹಾಗೆ ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸಲು ಯಾಕೆ ಸಾಧ್ಯವಾಗುವುದಿಲ್ಲ? ಶಾಸ್ತ್ರೀಯ ಗಾಯನ ಬೋರು ಹೊಡೆಸುವುದು ಏಕೆ? ಚಲನಚಿತ್ರ ಗೀತೆಗಳನ್ನು ಆಲಿಸಿ ಎಂಜಾಯ್ ಮಾಡಿದ ಹಾಗೆ ಶಾಸ್ತ್ರೀಯ ಸಂಗೀತವನ್ನು ಸವಿಯಲು ಏನು ಮಾಡಬೇಕು? -ಈ ಪ್ರಶ್ನೆಗಳಿಗೆ ಸ್ವತಃ ಗಾಯಕಿ ಮತ್ತು ಸಂಗೀತ ತಜ್ಞೆ ಡಾ.ಜಯದೇವಿ ಜಂಗಮಶೆಟ್ಟಿ ಅವರು ಇಲ್ಲಿ ಉತ್ತರ ಹುಡುಕಲು ಹೊರಟಿದ್ದಾರೆ.

-ಡಾ.ಜಯದೇವಿ ಜಂಗಮಶೆಟ್ಟಿ

ಬಂದೀಶ – ಚೀಜ್ ಬಳಸಿ ಹಾಡುವ ಖ್ಯಾಲ್ ಗಾಯನ ಪದ್ಧತಿಯನ್ನು ಮಾತ್ರ ಶಾಸ್ತ್ರೀಯ ಸಂಗೀತವೆಂದು ಹಲವರು ಭಾವಿಸಿದಂತಿದೆ. ವಾಸ್ತವದಲ್ಲಿ ಸಂಗೀತದ ಶಾಸ್ತ್ರೀಯ ತಳಹದಿ ಎಲ್ಲ ಗಾಯನ ಪ್ರಕಾರಗಳಿಗೂ ಇರುತ್ತದೆ. ಖ್ಯಾಲ್ ಗಾಯನ ಪದ್ದತಿಯಲ್ಲಿ ಸಂಗೀತದ ಶಾಸ್ತ್ರೀಯ ಸಂಗತಿಗಳನ್ನು ಹೆಚ್ಚು ಬಳಸಲಾಗುತ್ತದೆಯಷ್ಟೆ. ಸಂಗೀತದ ಸೌಂದರ್ಯಾಭಿವ್ಯಕ್ತಿ ಮತ್ತು ರಸಾನುಭೂತಿಗೆ ಶಾಸ್ತ್ರೀಯ ಅಂಶಗಳು ಅಗತ್ಯವಾಗಿರುತ್ತವೆ. ಶಾಸ್ತ್ರೀಯತೆ ಜಡವಾಗಿ, ಯಾಂತ್ರಿಕವಾಗಿ ಬಳಕೆಯಾದಾಗ ಸಂಗೀತ ನೀರಸವಾಗುತ್ತದೆ.

ಶ್ರೇಷ್ಟ ಸೃಜನಶೀಲ ಸಂಗೀತಗಾರ ಶಾಸ್ತ್ರೀಯ ಚೌಕಟ್ಟನ್ನು ಉಲ್ಲಂಘಿಸದೆ ಗಾಯನ ವಾದನವನ್ನು ಹೆಚ್ಚು ರಂಜನೀಯವೂ, ಉತ್ಕøಷ್ಟವೂ ಆಗುವಂತೆ ಮಾಡುತ್ತಾನೆ. ಪ್ರಜ್ಞಾಪೂರ್ವಕವಾಗಿ ಮಾಡುತ್ತಾನೆ ಎಂದಲ್ಲ. ಸಂಗೀತಗಾರನ ಪ್ರತಿಭೆ, ಸೃಜನಶೀಲ ಸಾಮಥ್ರ್ಯ, ತಾಲೀಮಿನ ಬಲ ಒಟ್ಟಿಗೆ ಮೇಳೈಸಿ ಅಪ್ರಜ್ಞಾಪೂರ್ವಕವಾಗಿ `ಅದ್ಭುತವಾದ ಸಂಗೀತ’ ಸಂಭವಿಸುತ್ತದೆ. ಆ ಸಂಗೀತ ಪ್ರೇಕ್ಷಕನಿಗೆ ಸುಂದರವೂ, ರಸಭಾವಗಳನ್ನು ಉತ್ತೇಜಿಸುವ ವಿಸ್ಮಯವಾಗಿಯೂ ಒದಗಿಬರುತ್ತದೆ. 

ರಸಭಾವದ ಅರ್ಥ ಗೊತ್ತಾದರೆ; ರಸಗ್ರಹಣದ ಸ್ವರೂಪ ಮನದಟ್ಟಾಗುತ್ತದೆ. ರಸಗ್ರಹಣದ ಸ್ವರೂಪದ ಬಗ್ಗೆ ಮನವರಿಕೆಯಾದರೆ ರಸಗ್ರಹಣದ ಸಮಸ್ಯೆ ಬಗೆಹರಿಸಿಕೊಳ್ಳುವ ಹಾದಿ ತೆರೆದುಕೊಳ್ಳುತ್ತದೆ. ರಸಗ್ರಹಣದ ಸಮಸ್ಯೆ ಕೇವಲ ಖ್ಯಾಲ್ ಗಾಯನಕ್ಕೆ ಸೀಮಿತವಾಗಿದೆಯೆಂದು ಭಾವಿಸುವಂತಿಲ್ಲ. ಕೆಲವರ ಸಂಗೀತಾಸಕ್ತಿ ಚಲನಚಿತ್ರ ಗೀತೆಗಳ ಆಲಿಸುವಿಕೆಯ ಹಂತದಲ್ಲೇ ನಿಂತಿರುತ್ತದೆ. ಅವರಿಗೆ ಭಾವಗೀತೆ, ವಚನಗಾಯನ, ದಾಸವಾಣಿ, ತತ್ವಪದಗಾಯನ ರುಚಿಸುವುದಿಲ್ಲ. ಇನ್ನೂ ಕೆಲವರಿಗೆ ಉಪಶಾಸ್ತ್ರೀಯ ಗಾಯನ ಪ್ರಕಾರಗಳಾದ ಠುಮರಿ, ಟಪ್ಪಾ, ಖಜರಿ, ಗಜಲ್ ಬೋರು ಹೊಡೆಸುತ್ತವೆ.

ಇದರರ್ಥ ಆಯಾ ಗಾಯನ ಪ್ರಕಾರಗಳಿಗೆ ಸೀಮಿತವಾಗಿರುವ ಅವರ ಸಂಗೀತಾಸಕ್ತಿ ಮುಂದಿನ ಹಂತ ತಲುಪಲು ಪ್ರಯಾಸ ಪಡುತ್ತಿದೆ. ರಸಭಾವಗಳು ಉತ್ತೇಜನಗೊಳ್ಳುತ್ತಿಲ್ಲ. ರಸಭಾವಗಳು ಉತ್ತೇಜನಗೊಳ್ಳದೆ ರಸೋತ್ಪತ್ತಿಯಾಗದು. ಸಂಗೀತದ ಆಲಿಸುವಿಕೆಯ ಸಂದರ್ಭದಲ್ಲಿ ಕೇಳುಗನಲ್ಲಿ ರಸೋತ್ಪತ್ತಿ ಸಹಜವಾಗಿ ಆಗುತ್ತಿದ್ದರೆ; ರಸಗ್ರಹಣದ ಪ್ರಕ್ರಿಯೆ ಪೂರ್ಣಗೊಂಡಂತೆ. ಸಂಗೀತ ಕಲೆ ಸಾರ್ಥಕ ಗೊಳ್ಳುವುದು ಕೇವಲ `ಪ್ರಸ್ತುತಿ’ಯಿಂದಲ್ಲ. ಸಂಗೀತದ ಸಾರ್ಥಕತೆ ಇರುವುದೇ ಪ್ರೇಕ್ಷಕನಲ್ಲಿ ರಸಗ್ರಹಣದ ಪ್ರಕ್ರಿಯೆ ಪೂರ್ಣಗೊಂಡಾಗ…

ಸಂಗೀತ ಸೇರಿದಂತೆ ಎಲ್ಲ ಲಲಿತಕಲೆಗಳಲ್ಲಿ ನವರಸ ಭಾವಗಳನ್ನು ಉತ್ತೇಜಿಸುವ ಸಾಮಥ್ರ್ಯ ಇರುತ್ತದೆ. ಪ್ರೇಕ್ಷಕನಾದವನು ಸಹಜ ಭಾವದಲ್ಲಿ ಸಂಗೀತವನ್ನು ಆಲಿಸುತ್ತಿದ್ದರೆ; ಸಂಗೀತಗಾರ ಗಾಯನ-ವಾದನಗಳ ಮೂಲಕ ಸೃಷ್ಟಿಸುವ ನಿರ್ದಿಷ್ಟ ರಸಭಾವದ ಸಂಗೀತ ಕೇಳುಗನಲ್ಲಿ ರಸೋತ್ಪತ್ತಿಗೆ ಕಾರಣವಾಗುತ್ತದೆ. ನವರಸಗಳಾದ ಶೃಂಗಾರ, ಹಾಸ್ಯ, ಕರುಣಾ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಹಾಗೂ ಶಾಂತರಸಗಳ ಭಾವದ ಅಸ್ತಿತ್ವ ಸಂಗೀತ ಮತ್ತು ಪ್ರೇಕ್ಷಕನಲ್ಲಿ ಅಂತರ್ಗತವಾಗಿರುವುದರಿಂದ ಪರಸ್ಪರ ಸ್ಪಂದನಾಶೀಲವಾಗಿರುತ್ತವೆ.

ಸಂಗೀತಗಾರ; ಗಾಯನ-ವಾದನದ ಮೂಲಕ ಕರುಣಾರಸದ ಸಂಗೀತ ಸೃಜಿಸಿದರೆ ಅದು ಪ್ರೇಕ್ಷಕ/ ಕೇಳುಗನಲ್ಲಿ ಕರುಣಾ ರಸಭಾವಗಳನ್ನು ಉತ್ತೇಜಿಸುತ್ತದೆ. ಸಹಜವಾಗಿ ಕರುಣಾ ರಸ ಉತ್ಪತ್ತಿಯಾಗುತ್ತದೆ. ಸಂಗೀತದ ರಸಕ್ಕನುಗುಣವಾಗಿ ಪ್ರೇಕ್ಷಕನಲ್ಲಿ ಹುಟ್ಟುವ ಉತ್ತೇಜಿಸಲ್ಪಟ್ಟ ಭಾವವನ್ನು `ರಸಭಾವ’ ಎನಿಸಿಕೊಳ್ಳುತ್ತದೆ. ಒಮ್ಮೆ ರಸಭಾವ ಸ್ಫುರಿಸಲ್ಪಟ್ಟರೆ; ರಸೋತ್ಪತ್ತಿ ಆಗುತ್ತಲೇ ಇರುತ್ತದೆ.. ನಿರಂತರ ರಸೋತ್ಪತ್ತಿ ಪ್ರೇಕ್ಷಕನಲ್ಲಿ ರಸಾನುಭೂತಿಗೆ ಕಾರಣವಾಗುತ್ತದೆ.

ಸಂವೇದನಾಶೀಲ ಕೇಳುಗನಿಗೆ ರಸಾನುಭೂತಿ ಎನ್ನುವುದು ಪರಮಾನಂದದ ಸ್ಥಿತಿ.. ಒಂದರ್ಥದಲ್ಲಿ ದೈವ ಸಾಕ್ಷಾತ್ಕಾರವೇ ಆದಂತೆ. ಸಂಗೀತಗಾರ ಬಂದೀಶ,- ಸಾಹಿತ್ಯದ ಭಾವದ ಅಗತ್ಯಕ್ಕನುಗುಣವಾಗಿ ವಿವಧ `ರಸಗಳನ್ನು’ ಸೃಜಿಸುತ್ತಾ ಹೋಗುತ್ತಾನೆ.  ಸಂವೇದನಾಶೀಲ ಪ್ರೇಕ್ಷಕ/ ಕೇಳುಗನ ರಸಭಾವಗಳು ಉತ್ತೇಜನಗೊಂಡು ಆತನಲ್ಲಿ ರಸೋತ್ಪತ್ತಿ- ರಸಾನುಭೂತಿಯ ಪ್ರಕ್ರಿಯೆ ಅಬಾಧಿತ ಮತ್ತು ಅಪ್ರಜ್ಞಾಪೂರ್ವಕವಾಗಿ ನಡೆಯುತ್ತಿರುತ್ತದೆ. ಸಂಗೀತಗಾರ- ಸಂಗೀತ- ಪ್ರೇಕ್ಷಕರ ಮನೋಧರ್ಮ `ಸಮಾನ ಮನಸ್ಕ’ ಸ್ಥಿತಿಯಲ್ಲಿದ್ದರೆ ರಸಭಾವಗಳ ಸ್ಫುರಣೆ, ರಸೋತ್ಪತ್ತಿ ಮತ್ತು ರಸಾನುಭೂತಿಯ ಪ್ರಮಾಣ ಉತ್ತುಂಗದಲ್ಲಿರುತ್ತದೆ.

ಖ್ಯಾಲ್ ಗಾಯನ ಮಾತ್ರವಲ್ಲ; ಚಲನಚಿತ್ರ ಸಂಗೀತವೂ ಸೇರಿದಂತೆ ಎಲ್ಲ ಗಾಯನ ಪ್ರಕಾರಗಳ ಸಂಗೀತ ಸಂಗೀತಗಾರನಿಂದ ಪ್ರೇಕ್ಷಕನಲ್ಲಿ ನೆಲೆ ನಿಲ್ಲುವಂತಾಗಲು, ಅರ್ಥಾತ್ ರಸಭಾವ ಸ್ಫುರಣೆಗೊಂಡು ರಸೋತ್ಪತ್ತಿಯಾಗಿ ರಸಾನುಭೂತಿಯ ಹಂತಕ್ಕೆ ಹೋಗಬೇಕಾದರೆ ಮನೋಧರ್ಮ ಪ್ರಧಾನ ಪಾತ್ರ ವಹಿಸುತ್ತದೆ. ಮನೋಧರ್ಮಕ್ಕೆ ಬಹುಮುಖಿ ಆಯಾಮಗಳಿವೆ. ಯಾವಾಗಲೂ `ಶೋಕರಾಗ’ಗಳನ್ನು ಆಲಿಸುವ ಪ್ರೇಕ್ಷಕನಿಗೆ ಭಕ್ತಿ, ಶೃಂಗಾರ, ರಸಭಾವಗಳನ್ನು ಸೃಜಿಸುವ ಸಂಗೀತ ಸಂಗೀತಗಾರ ಇಷ್ಟವಾಗುವುದಿಲ್ಲ ಹಾಗೆಯೇ `ಭಕ್ತಿ’ ಸಂಗೀತದಲ್ಲೇ ಮಿಂದೇಳುವ ಸಂಗೀತಗಾರ `ಭಿನ್ನರಸ’ದ ಸಂಗೀತದ ಸೃಜನೆಯಲ್ಲಿಯೂ `ಭಕ್ತಿ’ ಭಾವದ ಛಾಯೆ ಗಾಢವಾಗಿರುತ್ತದೆ. ತಾಯಿಯನ್ನು ಕಳೆದುಕೊಂಡು ಶೋಕದ ಮನಸ್ಥಿತಿಯಲ್ಲಿರುವ ಪ್ರೇಕ್ಷಕನಿಗೆ ಶೋಕರಾಗದ ಸಾಧಾರಣ ಸಂಗೀತವೂ ಬೇಗ ರಸಭಾವಗಳನ್ನು ಉತ್ತೇಜಿಸಿ, ರಸೋತ್ಪತ್ತಿಗೆ ಕಾರಣವಾಗಬಲ್ಲುದು. ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಬಲ್ಲದು. ಮನೋಧರ್ಮ: ರಸೋತ್ಪತ್ತಿಯಲ್ಲಿ, ರಸಭಾವ ಸೃಜಿಸುವಲ್ಲಿ, ಸೌಂದರ್ಯಾಭಿವ್ಯಕ್ತಿ ಮತ್ತು ರಸಾನುಭೂತಿಯ ಮೌಲ್ಯ ನಿರ್ಣಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಷ್ಟಾಗಿಯೂ ಉತ್ಕøಷ್ಟ ಸಂಗೀತಗಾರ, ಸಹಜಭಾವದ ಸಂಗೀತಾರಾಧಕ ಸೀಮಿತ ಮನೋಧರ್ಮಗಳ ಚೌಕಟ್ಟಿನಾಚೆಗೂ ಪರಸ್ಪರ ಪ್ರತಿಸ್ಪಂದಿಸಬಲ್ಲರು.

ಪ್ರತಿ ಮನುಷ್ಯ ಜೀವಿಯಲ್ಲೂ, ಅಕ್ಷರಸ್ಥ-ಅನಕ್ಷರಸ್ಥ, ಬಡವ – ಬಲ್ಲಿದ, ಹೆಣ್ಣ್ಣು- ಗಂಡು, ದೊಡ್ಡವ-ಚಿಕ್ಕವ ಇತ್ಯಾದಿ ಭೇದವೆಣಿಸದೆ `ರಸಭಾವಗಳು’ ಅಂತರ್ಗತವಾಗಿರುತ್ತದೆ. ರಸಭಾವಗಳು ಅವರವರ ಮನೋಧರ್ಮ ಮತ್ತು ಅಭಿರುಚಿಗೆ ತಕ್ಕಂತೆ ವಿವಿಧ ಬಗೆಯ ಲಲಿತಕಲೆಗಳಿಗೆ ಪ್ರತಿಸ್ಪಂದಿಸಿ ರಸೋತ್ಪತ್ತಿ ಹಾಗೂ ರಸಾನುಭೂತಿ ಪ್ರಕ್ರಿಯೆಗೊಳಪಡುತ್ತವೆ. ಕೆಲವರಿಗೆ ಸಾಹಿತ್ಯ ಇಷ್ಟವಾಗಬಹುದು. ಇನ್ನೂ ಕೆಲವರಿಗೆ ಸಂಗೀತ – ನೃತ್ಯ ಆಕರ್ಷಿಸಬಹುದು. ರಸಗ್ರಹಣದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕೆಂದರೆ, ಈ ಎಲ್ಲ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳನ್ನು ಗಮನಿಸಬೇಕಾಗುತ್ತದೆ. ಬಯಲು ಸೀಮೆಯ ವ್ಯಕ್ತಿಗೆ ಯಕ್ಷಗಾನ ರುಚಿಸಬೇಕೆಂದರೆ, ಆ ಕಲಾಪ್ರಕಾರದ ಬಗೆಗಿನ ಮನೋಧರ್ಮ ಬದಲಾಗಬೇಕು. ಆಸಕ್ತಿ-ಅಭಿರುಚಿ ಮೂಡಿಸಿಕೊಳ್ಳಬೇಕು. ಅಷ್ಟಾಗಿಯೂ ಕರಾವಳಿ ಜನರಂತೆ ಯಕ್ಷಗಾನದ ಸಂಪೂರ್ಣ ಸವಿಯನ್ನು ಆತ ಆಸ್ವಾದಿಸಬಲ್ಲ ಎಂದು ಹೇಳಲಾಗದು. ಮತ್ತೆ ಮತ್ತೆ ಆ ಕಲಾಪ್ರಕಾರದೊಂದಿಗೆ ಮುಖಾಮುಖಿಯಾಗಬೇಕು ಒಡನಾಡಬೇಕು. ಆಗ ಅದು ಬಯಲಸೀಮೆಯ ವ್ಯಕ್ತಿಯೊಳಗೂ ಇಳಿದು ಫಲಗೊಡಲು ಶುರು ಮಾಡುತ್ತದೆ. ಈ ನಿದರ್ಶನ ಎಲ್ಲ ಕಲಾಪ್ರಕಾರಗಳಿಗೂ ಅನ್ವಯಿಸಿ ಹೇಳಬಹುದು.

ಶಾಸ್ತ್ರೀಯ ಸಂಗೀತದ ರಸಗ್ರಹಣ ಸುಲಭ ಸಾಧ್ಯವಾಗಬೇಕಾದರೆ, ಶಾಸ್ತ್ರೀಯ ಪದದ ಬಗೆಗಿನ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬರಬೇಕು.  ಸಂಗೀತ ಸೇರಿದಂತೆ ಎಲ್ಲ ಲಲಿತಕಲೆಗಳೂ ಶಾಸ್ತ್ರೀಯ – ವ್ಯಾಕರಣದ ಆಶ್ರಯ ಪಡೆದಿರುತ್ತವೆ. ಸಂಗೀತ-ಸಂಗೀತಗಾರ- ಪ್ರೇಕ್ಷಕರ ನಡುವಿನ ಪ್ರತಿಸ್ಪಂದನೆ ಶಾಸ್ತ್ರ-ವ್ಯಾಕರಣಗಳ ಚೌಕಟ್ಟಿನಾಚೆಗೆ ಸಂಭವಿಸುತ್ತಿರುತ್ತದೆ. ಒಲವೇ ಜೀವನ ಸಾಕ್ಷಾತ್ಕಾರ ಎಂಬಂತೆ ಆಭಿರುಚಿ- ಆಸಕ್ತಿಯೇ ಸಂಗೀತದ ಸಾಕ್ಷಾತ್ಕಾರಕ್ಕಿರುವ `ಏಕೈಕ’ ಹಾದಿ. ರಸ ಸಿದ್ಧಾಂತ ಮತ್ತು ಸೌಂದರ್ಯ ಶಾಸ್ತ್ರದ ಪ್ರಾಥಮಿಕ ತಿಳವಳಿಕೆಯನ್ನೂ ಹೊಂದಿರದ ವ್ಯಕ್ತಿ ಸಂಗೀತದ ಬಗ್ಗೆ  ಉತ್ಕಟ ಪ್ರೀತಿ ಇಟ್ಟುಕೊಂಡಿದ್ದರೆ, ಭಾವಗೀತೆ ಚಲನಚಿತ್ರಗೀತೆಗಳ ಹಾಗೆ ಶಾಸ್ತ್ರೀಯ ಸಂಗೀತ ಅರ್ಥಾತ್ ಖ್ಯಾಲ್‍ಗಾಯನವನ್ನು ರಸಗ್ರಹಣ ಮಾಡಬಹುದು. ಒಂದು ಕಲಾಪ್ರಕಾರದ ಆಸಕ್ತಿ- ಅಭಿರುಚಿ ಹೊಂದುವುದು ಪ್ರಾಥಮಿಕ ಅರ್ಹತೆ ಮಾತ್ರ. ಆಸಕ್ತಿ ಅಭಿರುಚಿ ಹೊಂದಿದ ಮಾತ್ರಕ್ಕೆ ರಸಗ್ರಹಣದ ಸಮಸ್ಯೆ ಬಗೆಹರಿಯುವುದಿಲ್ಲ.

`ಚಲನಚಿತ್ರ ಸಂಗೀತ ಥಟ್ಟನೆ ಆವರಿಸುತ್ತದೆ. ಶಾಸ್ತ್ರೀಯ ಸಂಗೀತ ಆಸ್ವಾದಿಸಲು ಯಾಕೆ ಕಷ್ಟಪಡಬೇಕು…?’ ಈ ತರಹದ ಪ್ರಶ್ನೆಗಳು ಸಂಗೀತಗಾರರಿಗೆ ಎದುರಾಗುತ್ತವೆ. ಮನುಷ್ಯರ ಮನೋಪ್ರವೃತ್ತಿಗಳನ್ನು ಸೂಕ್ಷ್ಮವಾಗಿ ಗಮನಿಸಿ.. ಮನೋವಲಯದ ವ್ಯಾಪ್ತಿಯಲ್ಲಿರುವ ರೂಢಿಗತ ಭಾಷೆ, ಸಂಗತಿಗಳ ಜೊತೆ ನಿತ್ಯ ಒಡನಾಟದಲ್ಲಿರುತ್ತವೆ. ಮನುಷ್ಯ ಸಂವಹನದ ಮಾಧ್ಯಮವಾಗಿ ಭಾಷೆಯನ್ನು ಬಳಸುತ್ತಲೇ ಇರುತ್ತಾನೆ. ಹಾಗೆ ನೋಡಿದರೆ, ಭಾಷೆಯೊಳಗೂ ಸಂಗೀತ ಅಂತರ್ಗತವಾಗಿರುತ್ತದೆ. ಪರಸ್ಪರ ಮಾತನಾಡುವ ಮೂಲಕ ಪತ್ರಿಕೆ ಓದುವ ಮೂಲಕ, ಸುದ್ದಿ ನೋಡುವ ಮೂಲಕ ಭಾಷೆಯೊಂದಿಗೆ ನಿಕಟ ಸಂಬಂಧ ಹೊಂದಿರುತ್ತೇವೆ.

ಚಲನಚಿತ್ರ ಗೀತರಚನೆಕಾರರು ದಿನನಿತ್ಯ ಬಳಕೆಯಲ್ಲಿರುವ ರೂಢಿಗತ ಭಾಷಾ ಸಂಪತ್ತನ್ನೇ ಬಳಸಿ ಹಾಡುಗಳನ್ನು ರಚಿಸುತ್ತಾರೆ. ಆ ಹಾಡುಗಳಿಗೆ ಸಂಗೀತ ಪೂರಕವಾಗಿ ಬಳಕೆಯಾಗುತ್ತದೆ. ಹಾಗಾಗಿ ಚಲನಚಿತ್ರ ಸಂಗೀತ ಮನಸ್ಸಿಗೆ ತಕ್ಷಣ ತಟ್ಟುತ್ತದೆ. ಚಲನಚಿತ್ರ ಸಂಗೀತವನ್ನು ಆಸ್ವಾದಿಸುವ ಕೇಳುಗ/ ಪ್ರೇಕ್ಷಕ ಭಾವಗೀತೆಗಳನ್ನು ಆಲಿಸಿ ರಸಸ್ವಾದನೆ ಮಾಡಬೇಕೆಂದರೆ, ಆತನ ಮನೋವಲಯಕ್ಕೆ ಭಾವಗೀತೆಗಳ ಭಾಷೆ, ಅದಕ್ಕೆ ಹೊಂದಿಕೊಂಡಂತಿರುವ ಸಂಗೀತದ ಲಯ ರೂಢಿಗತವಾಗಬೇಕು. ರೂಢಿಗತವಲ್ಲದ ಭಾಷೆ ಮತ್ತು ಸಂಗೀತ ಮನೋವಲಯದ ಆವರಣದೊಳಗೆ ರಸಭಾವದ ಪ್ರಕ್ರಿಯೆಗೆ ಒಳಗಾಗುವುದಿಲ್ಲ;

ನಾನೇ ಕಂಡಂತೆ ಹಲವು ಜನ ಪ್ರತಿಭಾವಂತ ಕನ್ನಡ ಅಧ್ಯಾಪಕರು; ಹಳೆಗನ್ನಡ, ನಡುಗನ್ನಡ ಕಾವ್ಯದ ಪಠ್ಯಗಳನ್ನು ಅದ್ಭುತ ಎನ್ನುವಂತೆ ಅರ್ಥೈಸುತ್ತಾರೆ. ಆದರೆ ಅಲ್ಲಮಪ್ರಭು, `ಅಕ್ಕಮಹಾದೇವಿಯ ವಚನಗಳನ್ನು ಆಧುನಿಕ ಕನ್ನಡ ಕಾವ್ಯವನ್ನು ಪಾಠ ಮಾಡಲು ಹಿಂಜರಿಯುತ್ತಾರೆ. ಅದರರ್ಥ ಅವರಿಗೆ ಸಾಹಿತ್ಯ ಗೊತ್ತಿಲ್ಲವೆಂದಲ್ಲ. ಆ ಪಠ್ಯಗಳ ಜೊತೆ ಒಡನಾಟ ಕಡಿಮೆ ಇರುವುದರಿಂದ ಆತ್ಮವಿಶ್ವಾಸ ದೊಂದಿಗೆ ಪಾಠಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಚಲನಚಿತ್ರ ಸಂಗೀತ ಆಲಿಸುವಲ್ಲಿ, ಆಸ್ವಾದಿಸುವಲ್ಲಿ ಪರಿಣತಿ ಸಾಧಿಸಿರುವ ಪ್ರೇಕ್ಷಕ ಠುಮರಿ, ಟಪ್ಪಾ, ಗಜಲ್ ಭಜನ್-ಅಭಂಗ, ವಚನಗಾಯನ, ದಾಸವಾಣಿ, ತತ್ವಪದ ಗಾಯನದತ್ತ ಒಲವು ತೋರುವುದಿಲ್ಲ.

ಪ್ರತಿಯೊಂದು ಗಾಯನ ಪ್ರಕಾರಕ್ಕೂ ಅದರದೆಯಾದ ಸಾಂಸ್ಕøತಿಕ, ಭಾಷಾ ಹಾಗೂ ಸಂಗೀತಾತ್ಮಕ ವಲಯಗಳಿರುತ್ತವೆ. ಆ ವಲಯದ ಹೊರಗಿರುವವರಿಗೆ ಆರಂಭದಲ್ಲಿ ಅಪರಿಚಿತ ಭಾವ ಮೂಡುತ್ತದೆ. ಮತ್ತೆ ಮತ್ತೆ ಒಡನಾಡಿದರೆ; ಆ ವಲಯ ತನ್ನತ್ತ ಸೆಳೆದುಕೊಳ್ಳುತ್ತದೆ. ಉರ್ದುವಿನ ಗಜಲ್‍ಗಳು ನಿರ್ದಿಷ್ಟ ಸಾಂಸ್ಕøತಿಕ-ಭಾಷಿಕ ವಲಯದ ಸೊಗಡಿನೊಂದಿಗೆ ಹುಟ್ಟಿಕೊಂಡಿರುತ್ತವೆ. ಸಂಗೀತ, ಗಜಲ್‍ಗಳ ಸೌಂದರ್ಯಾಭಿವ್ಯಕ್ತಿ ಮತ್ತು ರಸಾನುಭೂತಿ ಹೆಚ್ಚಿಸಲು ಪೂರಕ ಸಾಧನವಾಗಿರುತ್ತದೆ. ಉಪಶಾಸ್ತ್ರೀಯ ಗಾಯನ ಪ್ರಕಾರಗಳಲ್ಲಿ ಸಂಗೀತ-ಸಾಹಿತ್ಯ ಸಮಪ್ರಮಾಣದಲ್ಲಿ ಹದಗೊಂಡಿರುವುದರಿಂದ ಸಾಹಿತ್ಯದ ಭಾಷಿಕ ಲೋಕದ ಜೊತೆಗೆ ಒಡನಾಡುವುದು ಅಪೇಕ್ಷಣೀಯ.

ವಚನಗಾಯನ, ದಾಸವಾಣಿ, ತತ್ವಪದಗಾಯನ, ಭಜನ್-ಅಭಂಗ ಗಾಯನ ಪ್ರಕಾರಗಳು ಮುಖ್ಯವಾಗಿ ಅನುಭಾವಿಕ ನೆಲೆಯ ಭಕ್ತಿ ಭಾವದ ಅಭಿವ್ಯಕ್ತಿಗಳು. ಸಾಹಿತ್ಯದ ಭಾಷಿಕ ವಲಯದೊಂದಿಗೆ, ಭಕ್ತಿ ಪರಂಪರೆಯ ಹಿರಿಯ ಚೇತನಗಳೊಂದಿಗೆ ಸಂವೇದನಾಶೀಲ ಒಡನಾಟ ನಡೆಸದಿದ್ದರೆ, ಸಂಗೀತದ ಸೌಂದರ್ಯ ಮೇಲು ಪದರಿನಲ್ಲಿ ಮಾತ್ರ ಸ್ಪರ್ಷಿಸುತ್ತದೆ. ಭಕ್ತಿಯ ಭಾವತೀವ್ರತೆಯ ರಸಭಾವಗಳು ಸ್ಫುರಿಸಿದಾಗಲೇ ಭಕ್ತಿರಸ ಉಕ್ಕುವುದು. ರಸಾನುಭೂತಿ ಉನ್ಮಾದದ ಹಂತಕ್ಕೆ ಕೊಂಡೊಯ್ಯುತ್ತದೆ. ಭಕ್ತಿ ಸಾಹಿತ್ಯದ ಭಾಷೆ ರೂಢಿಗತವಾಗಿದ್ದರೂ, ಆಧ್ಯಾತ್ಮದ ಪರಿಕಲ್ಪನೆಗಳು ಭಿನ್ನವಾಗಿರುತ್ತವೆ. ರೂಪಕಗಳು, ಪ್ರತಿಮೆಗಳು, ನುಡಿಗಟ್ಟುಗಳು ರೂಢಿಗತ ಭಾಷಾವಲಯಕ್ಕಿಂತಲೂ ವಿಶಿಷ್ಟ ಧ್ವನ್ಯಾರ್ಥ ಹೊರಹೊಮ್ಮಿಸುತ್ತವೆ. ಉಪಶಾಸ್ತ್ರೀಯ ಗಾಯನ ಪ್ರಕಾರಗಳು ಭಕ್ತಿ ಹಾಗೂ ಶೃಂಗಾರ ರಸಭಾವಗಳನ್ನು ಸ್ಫುರಿಸುವುದರಿಂದ ಸಂಗೀತಗಾರ ಭಕ್ತಿಭಾವದ ಗಾಢ ತನ್ಮಯತೆ ಭಾವಪರವಶತೆಯೊಂದಿಗೆ ಪ್ರಸ್ತುತಪಡಿಸಬೇಕಾಗುತ್ತದೆ. ಸಂಗೀತಗಾರ ಸಾಹಿತ್ಯದ ಅರ್ಥವಂತಿಕೆಯೊಂದಿಗೂ ಅನುಸಂಧಾನ ನಡೆಸಬೇಕಾಗುತ್ತದೆ.

ಸಾಹಿತ್ಯ-ಸಂಗೀತದ ಸಮಪ್ರಮಾಣದ ಉಪಶಾಸ್ತ್ರೀಯ ಗಾಯನ ಪ್ರಕಾರಗಳಲ್ಲಿ ಸಂಗೀತಗಾರ ಸಾಹಿತ್ಯಕ್ಕೇ ಹೆಚ್ಚು ಒತ್ತು ನೀಡುತ್ತಾನೆ. ಸಾಹಿತ್ಯವನ್ನು ಭಾವಪೂರ್ಣವಾಗಿ, ಅರ್ಥಕೆಡದಂತೆ ಹಾಡುವಲ್ಲಿ ಸಂಗೀತಗಾರನ ಯಶಸ್ಸು ಅಡಗಿರುತ್ತದೆ. ಉಪಶಾಶ್ತ್ರೀಯ ಗಾಯನ ಪ್ರಕಾರಗಳ ರಸಗ್ರಹಣಕ್ಕೆ ಸಂಗೀತಕ್ಕಿಂತಲೂ ಸಾಹಿತ್ಯದ ತಿಳವಳಿಕೆ ಅಗತ್ಯವಾಗಿರುತ್ತದೆ. ಸಂಗೀತ ಒಂದು ಪೂರಕ ಸಾಧನವಾಗಿ ಸಾಹಿತ್ಯದ ಧ್ವನಿ ಸಾಧ್ಯತೆಗಳನ್ನು ಹೆಚ್ಚಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ತಲ್ಲೀನವಾಗಿರುತ್ತದೆ. ಪ್ರೇಕ್ಷಕ/ ಕೇಳುಗ ಸಾಹಿತ್ಯದ ಅರ್ಥ ಸಾಧ್ಯತೆ ಯೊಂದಿಗೆ ಮೊದಲೇ ಒಡನಾಟ ಸಾಧಿಸಿದ್ದರೆ ಸಂಗೀತ ರಸಭಾವಗಳನ್ನು ಬೇಗ ಸ್ಫುರಿಸಲು ಉತ್ತೇಜಿಸುತ್ತದೆ.

ಅರ್ಥ ಸಂದಿಗ್ಧತೆ ರಸೋತ್ಪತ್ತಿಗೆ ಹೆಚ್ಚು ಅಡ್ಡಿಯಾಗುವುದಿಲ್ಲವಾದರೂ ಪೂರ್ಣ ಪ್ರಮಾಣದ ರಸಾನುಭೂತಿಗೆ ಅವಕಾಶ ಸಿಗುವುದಿಲ್ಲ. ಸಾಹಿತ್ಯದ ಅರ್ಥ ಸಾಧ್ಯತೆ ವಿಸ್ತಾರಗೊಳ್ಳುತ್ತಲೇ ಇರುತ್ತದೆ. ಖಚಿತವಾದ ಅರ್ಥ ಎಂಬುದು ಇರುವುದಿಲ್ಲ. ಸಾಹಿತ್ಯದ ಮೂಲ ಭಾವದ ಪರಿಚಯವಿದ್ದರೆ, ಸಾಹಿತ್ಯ-ಸಂಗೀತದ ಸಾಹಚರ್ಯದಲ್ಲಿ ಹೊಸ ಅರ್ಥಗಳು, ಕಾಣ್ಕೆಗಳು ದಕ್ಕಬಹುದು. ರಸಗ್ರಹಣ ಮತ್ತಷ್ಟು ಗಾಢsÀವಾಗಬಹುದು. ಸಂಗೀತ ಏಕಕಾಲಕ್ಕೆ ರಸಭಾವಗಳ ತೀವ್ರತೆ ಹೆಚ್ಚಿಸುತ್ತದೆ ಮತ್ತು ಸಾಹಿತ್ಯದ ಪ್ರತಿಪದಕ್ಕೂ ಜೀವಚೈತನ್ಯವನ್ನು ಧಾರೆ ಎರೆಯುತ್ತದೆ.

ರಸಗ್ರಹಣದ ವಿವಿಧ ಮಜಲುಗಳನ್ನು ಕಂಡವರಿಗೆ ರಸಾನುಭೂತಿಯ ಆರಂಭಿಕ ಹಂತ ಸಂಗೀತವಾಗಿ ತೋರುವುದಿಲ್ಲ. ಶಾಸ್ತ್ರೀಯ ಉಪಶಾಸ್ತ್ರೀಯ ಸಂಗೀತ ಪ್ರೇಕ್ಷಕರಿಗೆ ಚಲನಚಿತ್ರ ಸಂಗೀತ ರಸಗ್ರಹಣದ ಸಂದರ್ಭದಲ್ಲಿ `ರಸಹೀನ’ ಎನಿಸುತ್ತದೆ. ರಸಾನುಭೂತಿಯ ಉತ್ತುಂಗ ಸಾಕ್ಷಾತ್ಕಾರ ಮಾಡಿಕೊಂಡವರಿಗೆ ಹಾಗೆನಿಸುವುದು ಸಹಜವಾದರೂ ರಸಹೀನ ಸಂಗೀತ ಎಂಬ ಮೂದಲಿಕೆ ಸರಿಯಲ್ಲ. ಚಲನಚಿತ್ರ ಸಂಗೀತದಲ್ಲಿ ಸಂಗೀತದ ರಸ ಕಡಿಮೆ ಇರಬಹುದು. ಹಾಗಂತ ಅದರ ಪ್ರಾಮುಖ್ಯ ತಳ್ಳಿ ಹಾಕುವಂತಿಲ್ಲ.

ಶಾಸ್ತ್ರೀಯ ಸಂಗೀತದ ರಸಗ್ರಹಣದ ಸಮಸ್ಯೆ ಎದುರಿಸುತ್ತಿರುವವರು ಎರಡು ಅತಿಗಳ ನಡುವಿನ ವಿವಿಧ ರಸಗ್ರಹಣದ ಮಜಲುಗಳನ್ನು ಅರ್ಥ ಮಾಡಿಕೊಳ್ಳಬೇಕು. ಚಲನಚಿತ್ರ ಗೀತೆಗಳಲ್ಲಿ, ಶಾಸ್ತ್ರೀಯ ಉಪಶಾಸ್ತ್ರೀಯ ಗಾಯನ ಪ್ರಕಾರಗಳಲ್ಲಿ ಸಾಹಿತ್ಯದ ಭಾವದ ಅಗತ್ಯಕ್ಕೆ ತಕ್ಕಂತೆ ರಸಭಾವಗಳು, ರಸೋತ್ಪತ್ತಿ ಹಾಗೂ ರಸಾನುಭೂತಿಯ ಪ್ರಕ್ರಿಯೆ ನಡೆಯುತ್ತಿರುತ್ತದೆ. ನಿಜವಾದ ಪ್ರೇಕ್ಷಕ ರಸಗ್ರಹಣದಲ್ಲಿ ತರತಮಭಾವ ಕಾಣುವುದಿಲ್ಲ. ಭಾರತೀಯ ಸಂಗೀತಗಾರರು ಎಲ್ಲ ಗಾಯನ ಪ್ರಕಾರಗಳನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ.

ಶಾಸ್ತ್ರೀಯ-ಉಪಶಾಸ್ತ್ರೀಯ ಭೇದಗಳು ಸಂಗೀತದ ಪ್ರಸ್ತುತಿ ಮತ್ತು ಉದ್ದೇಶಗಳ ಕಾರಣಕ್ಕಾಗಿ ಇವೆಯೇ ಹೊರತು ಹೆಚ್ಚು-ಕಮ್ಮಿ ಎಂಬ ತರತಮಭಾವದಿಂದ ರೂಪುಗೊಂಡಿಲ್ಲ. ಲತಾಮಂಗೇಶ್ಕರ್ ಅವರ ಗಾಯನ ಖ್ಯಾಲ್ ಗಾಯನದಷ್ಟೇ ಉತ್ಕøಷ್ಟವಾದುದು. ಸಂಗೀತದ ರಸಗ್ರಹಣ ಮಾಡಬೇಕು ಎನ್ನುವವರು ಮೊದಲು ಶಾಸ್ತ್ರೀಯ-ಉಪಶಾಸ್ತ್ರೀಯ ಭೇದಗಳನ್ನು ಮರೆತು ಸಂಗೀತದ ಆರಾಧಕರಾಗಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ, ಮೊದಲ ಹಂತದಲ್ಲಿ ಇಷ್ಟವಾದ ಸಂಗೀತವನ್ನು ಆಲಿಸಬೇಕು. ಅದು ಸದಭಿರುಚಿಯ ಸಂಗೀತವಾಗಿರಬೇಕು.

ಜಾನಪದ ಸಂಗೀತ, ಚಲನಚಿತ್ರ ಸಂಗೀತ ಯಾವುದೇ ಇರಲಿ ಉತ್ಕಟ ಪ್ರೀತಿಯಿಂದ ಆಲಿಸುತ್ತಾ ಹೋದಂತೆ ಆಯಾ ಗಾಯನ ಪ್ರಕಾರಗಳ ಭಾಷಿಕ-ಸಂಗೀತಾತ್ಮಕ ಲೋಕ ಪರಿಚಯವಾಗುತ್ತಾ ಹೋಗುತ್ತದೆ. ಒಂದು ಗಾಯನ ಪ್ರಕಾರದಿಂದ ಇನ್ನೊಂದು ಗಾಯನ ಪ್ರಕಾರಕ್ಕೆ ಶಿಫ್ಟ್ ಆಗುವಾಗ ನಮ್ಮ ಮನದ ಗಾನಲೋಕ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಚಲನಚಿತ್ರ ಸಂಗೀತದಿಂದ ವಚನಗಾಯನ, ದಾಸವಾಣಿ, ತತ್ವಪದ ಗಾಯನ ಪ್ರಕಾರಗಳಿಗೆ ಶಿಫ್ಟ್ ಆಗುವಾಗ ಆಯಾ ಗಾಯನ ಪ್ರಕಾರಗಳೊಳಗಿನ ಭಾಷಿಕ ಆಯಾಮ ಸಂಗೀತದ ಪರಿಕರಗಳ ಬಳಕೆ, ಆ ಪ್ರಕಾರವನ್ನು ಅತ್ಯುನ್ನತ ಹಂತಕ್ಕೆ ಕೊಂಡೊಯ್ದ ಶ್ರೇಷ್ಠ ಸಂಗೀತಗಾರರ ಸ್ಥೂಲ ಮಾಹಿತಿ ಇಟ್ಟುಕೊಂಡು ಮುಂದುವರೆಯಬೇಕು. ಆಯಾ ಪ್ರಕಾರಗಳ ರೂಢಿಗತ ಭಾವಲೋಕ ಅರ್ಥ ಮಾಡಿಕೊಂಡರೆ; ರಸಸ್ವಾಧನೆಗೆ ನಮ್ಮ ಮನೋಲೋಕವನ್ನು ಅಣಿಗೊಳಿಸಿದಂತೆ.

ವಚನ ಗಾಯನ, ದಾಸವಾಣಿ, ತತ್ವಪದಗಾಯನದ ರಸಗ್ರಹಣಕ್ಕೆ ಸಂಗೀತದ ಜೊತೆಗೆ ಸಾಹಿತ್ಯದ ಸ್ಥೂಲ ಪರಿಚಯ ಮಾಡಿಕೊಂಡರೆ ಪ್ರವೇಶ ಸಿಕ್ಕಂತೆ. ಮೂರೂ ಪ್ರಕಾರಗಳು ಬೆಳೆದು ಬಂದ ಬಗೆ, ಆ ಗಾಯನ ಪ್ರಕಾರಗಳಲ್ಲಿ ಕರ್ನಾಟಕ- ಹಿಂದೂಸ್ಥಾನಿ ಸಂಗೀತದಲ್ಲಿನ ಯಾವೆಲ್ಲ ಹಿರಿಯರು ಹಾಡಿದ್ದಾರೆ ಎಂಬ ಸಂಕ್ಷಿಪ್ತ ಮಾಹಿತಿ ಇಟ್ಟುಕೊಂಡರೆ. ಆಲಿಸುವಿಕೆ ಮತ್ತು ರಸಗ್ರಹಣಕ್ಕೆ ಪೂರಕ ಸಾಮಗ್ರಿ ಒದಗಿಸಿದಂತಾಗುತ್ತದೆ. ವಿಶೇಷವಾಗಿ ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಭೀಮಸೇನ ಜೋಶಿ, ಪಂ. ಬಸವರಾಜಗುರು, ಪಂ. ಸಿದ್ದರಾಮ ಜಂಬಲದಿನ್ನಿಯವರ ಗಾಯನ ಶೈಲಿಗಳ ಮಾದರಿಗಳನ್ನು ಮತ್ತೆ ಮತ್ತೆ ಆಲಿಸುತ್ತಾ ಹೋದರೆ ಮನಸ್ಸು ಉಪಶಾಸ್ತ್ರೀಯ ಗಾಯನ ಪ್ರಕಾರಗಳ ಒಟ್ಟಾರೆ ಸೌಂದರ್ಯ ಗ್ರಹಿಸಲು ಸಿದ್ದವಾಗುತ್ತದೆ. ಮೊದಮೊದಲು ಗಾಯನದಲ್ಲಿನ ಸಾಹಿತ್ಯ ಭಾಗ ಹೆಚ್ಚು ಹೆಚ್ಚು ಸೆಳೆಯುತ್ತದೆ. ಕೇಳುತ್ತಾ ಕೇಳುತ್ತಾ ಹೋದಂತೆ ಸಾಹಿತ್ಯ -ಸಂಗೀತ ಒಂದೇ ಆಗಿ ರಸಭಾವಗಳು ಸ್ಫುರಿಸತೊಡಗುತ್ತವೆ. ರಸೋತ್ಪತ್ತಿಯ ಹಂತ ತಲುಪುತ್ತಲೇ ಆ ಗಾಯನ ಪ್ರಕಾರಗಳಲ್ಲಿನ ಸಾಹಿತ್ಯ ಅನುಭಾವದ ನೆಲೆಯ ಬೆಳಕಾಗಿ, ದಿವ್ಯಪ್ರಭೆಯಾಗಿ ತೋರತೊಡಗುತ್ತದೆ. ಪ್ರೇಕ್ಷಕನಿಗೆ ರಸಾನುಭೂತಿಯಾದಾಗ ಸಾಹಿತ್ಯ-ಸಂಗೀತದ ಬೇಧ ಅಳಿಸಿಹೋಗಿರುತ್ತದೆ.

ಉಪಶಾಸ್ತ್ರೀಯ ಗಾಯನ ಪ್ರಕಾರಗಳಾದ ಠುಮರಿ, ಟಪ್ಪಾ, ಗಜಲ್, ಭಜನ್-ಅಭಂಗಗಳು, ಹೆಚ್ಚಾಗಿ ಉತ್ತರ ಭಾರತದ ಉಪ ಭಾಷೆಗಳಲ್ಲಿ ಲಭ್ಯ ಇವೆ. `ಸಂಗೀತದಷ್ಟೇ ಸಾಹಿತ್ಯ ಮುಖ್ಯ ಪಾತ್ರ ವಹಿಸುತ್ತದೆ. ಖ್ಯಾಲ್‍ಗಾಯನ ಪದ್ಧತಿಯ ಸಂಗೀತದ ರಸಗ್ರಹಣ ಠುಮರಿ, ಗಜಲ್, ಭಜನ- ಅಭಂಗಗಳ ಆಲಿಸುವಿಕೆ ಪೂರ್ವಭಾವಿ ಸಿದ್ಧತೆ ಇದ್ದಂತೆ. ಗಜಲ್ ಉರ್ದುವಿನಲ್ಲಿದ್ದರೆ ಭಜನ್ – ಅಭಂಗ ಗಳನ್ನು ಮರಾಠಿ, ಬೃಜ್ ಭಾಷೆಗಳಲ್ಲಿ ರಚಿಸಲಾಗಿದೆ.

ಈ ಗಾಯನ ಪ್ರಕಾರಗಳನ್ನು ಭಾರತದ ಹೆಸರಾಂತ ಗಾಯಕರು ಹಾಡಿ ಜನಪ್ರಿಯಗೊಳಿಸಿದ್ದಾರೆ. ಪಂ.ಕುಮಾರ ಗಂಧರ್ವರು ನಿರ್ಗುಣಿ ಭಜನಗಳನ್ನು, ಪಂ. ಭೀಮಸೇನ ಜೋಶಿಯವರು ಅಭಂಗಗಳನ್ನು ಬಡೇಗುಲಾಂ ಅಲಿಖಾನ, ಪರ್ವೀನ ಸುಲ್ತಾನ, ಜಗಜಿತ್‍ಸಿಂಗ್ ಮುಂತಾದವರು ಗಜಲ್‍ಗಳನ್ನು ಸುಶ್ರಾವ್ಯವಾಗಿ ಹಾಡಿ ಆ ಗಾಯನ ಪ್ರಕಾರದ ಘನತೆ ಹೆಚ್ಚಿಸಿದ್ದಾರೆ. ಸಾಹಿತ್ಯ-ಸಂಗೀತ ಸಮಪ್ರಮಾಣದಲ್ಲಿ ಬಳಕೆಯಾಗುವುದರಿಂದ ಸಾಹಿತ್ಯದ ವೈಶಿಷ್ಟ್ಯವನ್ನು, ಭಾಷೆಯ ಬನಿಯನ್ನು ಸ್ಥೂಲವಾಗಿಯಾದರೂ ಅರಿಯಬೇಕು. ಉರ್ದು ಭಾಷೆಯ ಪರಿಮಳದ ಘಮ ಅನುಭವಕ್ಕೆ ಬಂದರೆ; ಗಾಯನ ಕೇಳುಗನನ್ನು ರಸಭಾವಗಳ ಆಳಕ್ಕೆ ಸೆಳೆದುಕೊಂಡು ಹೋಗುತ್ತದೆ. ಸಾಹಿತ್ಯದ ಅರ್ಥ ಮತ್ತು ಭಾವ ಕೇಳುಗನಲ್ಲಿ ಅನುರಣಿಸಿ ರಸಗ್ರಹಣದ ಪ್ರಕ್ರಿಯೆ ಸಹಜವಾಗಿ ನಡೆಯುತ್ತದೆ. ಭಜನ್-ಅಭಂಗಗಳ ಆಲಿಸುವಿಕೆ ಭಕ್ತಿಯ ಉನ್ಮಾದದ ಹಂತಕ್ಕೆ ತಲುಪಿಸುತ್ತದೆ.

ಠುಮರಿ, ಗಜಲ್, ಭಜನ್-ಅಭಂಗಗಳನ್ನು ನಿರಂತರ ಕೇಳುತ್ತಾ ಹೋದರೆ ಸಂಗೀತದ ಅಭಿರುಚಿ ಮತ್ತು ಆಸಕ್ತಿ ತೀವ್ರಗೊಳ್ಳುತ್ತದೆ. ಅಷ್ಟು ಮಾತ್ರವಲ್ಲ, ಆಯಾ ಗಾಯನ ಪ್ರಕಾರಗಳ ಪ್ರತಿ ಅಂಗಗಳು ಚಿರಪರಿಚಿತ ಎಂಬ ಭಾವ ಮೂಡತೊಡಗುತ್ತದೆ. ಶಾಸ್ತ್ರೀಯ ಸಂಗತಿಗಳ ಪರಿಚಯ ಇಲ್ಲದಿದ್ದರೂ, ಸಂಗೀತದ ಆಲಿಸುವಿಕೆಯ ಕ್ರಮದಲ್ಲೇ ಶಾಸ್ತ್ರದ ಸೂಕ್ಷ್ಮಗಳು ಗಾಯಕನ ಕೌಶಲ, ಸಾಮಥ್ರ್ಯ ಅರಿವಿಗೆ ಬರುತ್ತದೆ. ಸಾಹಿತ್ಯದ ಅರ್ಥವನ್ನು ಒಟ್ಟು ಭಾವದಲ್ಲಿ ತಿಳಿದುಕೊಂಡು ಮರೆತು ಬಿಡಬೇಕು. ಸಂಗೀತ ಆಲಿಸುವಿಕೆಯ ಹಂತದಲ್ಲಿ ರಸಭಾವಗಳು, ರಸೋತ್ಪತ್ತಿ ಆವರಿಸುತ್ತಾ ಹೋದಂತೆ, ಸಾಹಿತ್ಯದ ಅರ್ಥ ವಿಶಿಷ್ಟವೆನಿಸುತ್ತದೆ. ಹೊಸ ಅರ್ಥಗಳು ಕಾಣುತ್ತಾ ಹೋಗುತ್ತವೆ.

ಸಾಹಿತ್ಯ ಮರೆತು ಸಂಗೀತದ ಬೆನ್ನು ಹತ್ತಿದರೆ ನಿಜವಾದ ರಸಗ್ರಹಣ ಸಾಧ್ಯವಾಗುತ್ತದೆ.  ಸಾಹಿತ್ಯದ ಸ್ಥರದಲ್ಲೇ ನಿಂತರೆ; ಸಂಗೀತ ಆಳಕ್ಕೆ ಇಳಿಯಲು ಆಗುವುದಿಲ್ಲ. ಸಂಗೀತಗಾರ ಸಾಹಿತ್ಯದ ಒಟ್ಟು ಭಾವವನ್ನು ಕರಗಿಸಿ ರಸಭಾವಗಳನ್ನಾಗಿಸಲು ತನ್ನ ಸೃಜನಶಕ್ತಿಯನ್ನು ವ್ಯಯಿಸುತ್ತಿರುತ್ತಾನೆ. ಮೂರ್ತವಾಗಿದ್ದ ಸಾಹಿತ್ಯ ಅಮೂರ್ತಗೊಳ್ಳುವ ಹಾದಿಯಲ್ಲಿ ಸಾಹಿತ್ಯ ಸಂಗೀತ ಒಂದರೊಳಗೊಂದು ಬೆರೆದು ವಿಶಿಷ್ಟ ಪಾಕವಾಗಿ ರಸಾನುಭೂತಿಗೆ ಮನಸ್ಸನ್ನು ಹದಗೊಳಿಸುತ್ತವೆ.

ಶಾಸ್ತ್ರೀಯ ಸಂಗೀತದ ಅರ್ಥಾತ್ ಖ್ಯಾಲ್ ಗಾಯನದ ರಸಗ್ರಹಣಕ್ಕೆ ಮನಸ್ಸು ಸಂಪೂರ್ಣ ಹದಗೊಂಡಿರುತ್ತದೆ. ಆರಂಭದಲ್ಲಿ ಛೋಟಾಖ್ಯಾಲ್‍ಗಳನ್ನು ಆಲಿಸಬೇಕು. ಉಪಶಾಸ್ತ್ರೀಯ ಗಾಯನ ಪ್ರಕಾರಗಳ ನಿರಂತರ ಆಲಿಸುವಿಕೆಯಲ್ಲೇ ಮನಸ್ಸು ಸಂಗೀತದ ರೂಢಿಗತ ಸಂಸ್ಕಾರಕ್ಕೆ ಒಗ್ಗಿಕೊಂಡಿರುತ್ತದೆ. ಸಾಹಿತ್ಯ-ಸಂಗೀತ ಒಂದಾದ ಗಾಯನದಲ್ಲಿ ಅರ್ಥದ ಹಿಂದೆ ಬೀಳಬಾರದು. ಅನುಭೂತಿ, ಅದರಲ್ಲೂ ರಸಾನುಭೂತಿಯತ್ತ ಚಿತ್ತವನ್ನು ಹರಿಬಿಡಬೇಕು. ಚಿತ್ತಕ್ಕೆ ರಸಾನುಭೂತಿಯ ರುಚಿ ತೋರಿಸಿದರೆ, ಅದು ಚಂಚಲತೆ ಕಳೆದುಕೊಂಡು ರಸಾನುಭೂತಿಯ ನಿರೀಕ್ಷೆಯಲ್ಲಿ ತಾಳ್ಮೆ ರೂಢಿಸಿಕೊಳ್ಳುತ್ತದೆ. ಆಗ ಬಡಾಖ್ಯಾಲ್ ಆಲಿಸಲು ಮನಸ್ಸು ಸಂಪೂರ್ಣ ತಯಾರಾಗಿದೆ ಎಂದು ಭಾವಿಸಬಹುದು. ಇಷ್ಟಾಗಿಯೂ ಬಡಾಖ್ಯಾಲ್ ಆಲಿಸುವಾಗ ಸಾಹಿತ್ಯ ಕರಗಿ ಸಂಗೀತದ ಸಮಸ್ತ ಪರಿಕರಗಳು ಮುನ್ನೆಲೆಗೆ ಬಂದಾಗ ಚಿತ್ತ ಚಡಪಡಿಸುತ್ತದೆ. ಸಾಹಿತ್ಯದ ಆಸರೆಯಿಲ್ಲದೆ ಅಪ್ಪಟ ಸಂಗೀತದ-ಸಂಗೀತಗಾರನ ಸೃಜನ ಸಾಮಥ್ರ್ಯದಿಂದಲೇ ರಸಭಾವಗಳು ಸ್ಫುರಿಸಲು ಚಿತ್ತ ಕ್ರಮೇಣ ಸ್ಪಂದಿಸುತ್ತದೆ.

ಒಂದು ಸಾಲಿನ ಬಂದೀಶ ಮತ್ತದರ ಭಾವ ಸ್ಥಾಯಿಯಾಗಿದ್ದರೂ ಸಂಗೀತದ ವಿವಿಧ ಸಾಮಗ್ರಿಗಳನ್ನು ಸ್ವರ-ಲಯಕಾರಿಕೆಯ ಮೂಲಕ ಮರುಸಂಯೋಜಿಸುವ ಸಂಗೀತಗಾರ ಪ್ರೇಕ್ಷಕನ ಅದು ಸಂವೇದನಾಶೀಲ ಕೇಳುಗನ ಭಾವಕೋಶದಲ್ಲಿ ಚಮತ್ಕಾರಗಳನ್ನು ಸೃಷ್ಟಿಸುತ್ತಾನೆ. ಬೋಲ್‍ತಾನ, ತಾನ ಲಯಕಾರಿಕೆಯ ಏರಿಳಿತ. ಕೊನೆಯ ಸಂ ಎಲ್ಲವೂ ರಸಭಾವಗಳ ಉತ್ತೇಜಿಸಿ ರಸೋತ್ಪತ್ತಿ ಮಾಡುತ್ತವೆ. ಪ್ರತಿ ಬಾರಿ ಕೇಳುಗ ಉದ್ಘಾರಗಳ ಕಣಜವಾಗುತ್ತಾನೆ. ತನಗೆ ಅರಿವಿಲ್ಲದೆ ಸಂಗೀತದ ರಸಾಭಾವಗಳೊಂದಿಗೆ ಒಂದಾಗಿ ಹೋಗಿರುತ್ತಾನೆ.

ರಸಾನುಭೂತಿಯ ಅನುಭವ ಪುನರಾವರ್ತನೆಗೊಳ್ಳುತ್ತಾ ಹೋದಹಾಗೆ ರಸಗ್ರಹಣದ ಸಮಸ್ಯೆ, ಸಮಸ್ಯೆಯಾಗಿ ಉಳಿದಿರುವುದಿಲ್ಲ. ಶಾಸ್ತ್ರೀಯ-ಉಪಶಾಸ್ತ್ರೀಯ ಯಾವುದೇ ಗಾಯನ ಪ್ರಕಾರ ಆಲಿಸಿದರೂ ಕೇಳುಗನಿಗೆ ಸಂಗೀತ ಮಾತ್ರ ಕೇಳುತ್ತಿರುತ್ತದೆ. ಸಾಹಿತ್ಯದ ಭಾವ ಸಂಗೀತವೇ ಆಗಿರುತ್ತದೆ. ಅಷ್ಟೆ ಯಾಕೆ ಚಲನಚಿತ್ರ ಸಂಗೀತ, ರಂಗ ಸಂಗೀತ ಏನೇ ಆಲಿಸಿದರೂ ಸಂಗೀತದ ಗುಂಗು ಮಾತ್ರ ಇರುತ್ತದೆ. ಪ್ರೇಕ್ಷಕ ಈ ಮಟ್ಟ ತಲುಪಬೇಕೆಂದರೆ, ನಿರಂತರ ಸಂಗೀತದ ಆಲಿಸುವಿಕೆಯಿಂದ ಮಾತ್ರ ಸಾಧ್ಯವಾಗುತ್ತದೆ.

ಸಂಗೀತ ಆಲಿಸುವಿಕೆಗೆ ಮನಸ್ಸನ್ನು ಹದಗೊಳಿಸುವುದೆಂದರೆ ಆಯಾ ಗಾಯನ ಪ್ರಕಾರಗಳ `ಮನೋಭೂಮಿಕೆ’ಯೊಡನೆ ಸಂವೇದನಾಶೀಲನಾಗಿ ಒಡನಾಡುವುದು. ಆ ಭಾವಲೋಕದೊಂದಿಗೆ ಕನೆಕ್ಟ್ ಆಗುವುದು. ಸಂಗೀತಗಾರರ ಮನೆಯಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೂ ಸಂಗೀತದ ಪರಿಸರವೇ ದಕ್ಕುವುದರಿಂದ ಅವರಿಗೆ ರಸಗ್ರಹಣ ಒಂದು ಸಮಸ್ಯೆಯಾಗಿ ಕಾಡುವುದಿಲ್ಲ. ಸಂಗೀತಕ್ಕೆ ಹೊರತಾದ ಪರಿಸರದಲ್ಲಿ ನಮ್ಮ ಸಾಂಗತ್ಯ ಇರುವುದರಿಂದ ಪರಿಚಿತವಲ್ಲದ ಗಾಯನ ಲೋಕ ವಿಚಿತ್ರವಾಗಿ ತೋರುತ್ತದೆ. ಅದನ್ನು ಅನುಸರಿಸುತ್ತಾ ಹೋದಂತೆ ನಾವು ಆ ಲೋಕದ ಸಮಸ್ತ ವಿದ್ಯಮಾನಗಳಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಉತ್ತರ ಕರ್ನಾಟಕದ ಬಹುತೇಕ ಕಡೆ ಕುಮಾರವ್ಯಾಸಭಾರತ, ಜೈಮಿನಿ ಭಾರತಗಳನ್ನು ನಾಲ್ಕು ಐದನೆಯ ತರಗತಿ ಓದಿದವರು ಓದುವ ಮತ್ತು ಅರ್ಥೈಸುವ ಸಾಮಥ್ರ್ಯ ಪಡೆದಿರುತ್ತಾರೆ. ಅದು ಹೇಗೆ ಸಾಧ್ಯ… ಪರಿಸರದಲ್ಲಿ ಆ ಸಾಹಿತ್ಯದ ಓದು ನಿತ್ಯ ನಡೆಯುತ್ತಿದ್ದರೆ ಸಹಜವಾಗಿ ಎಲ್ಲವನ್ನೂ ತಮ್ಮದಾಗಿಸಿಕೊಳ್ಳುತ್ತಾರೆ.

ಈ ಕ್ಷಣದಿಂದಲೇ ಸಂಗೀತಕ್ಕೆ ಹತ್ತಿರವಾಗಲು ಸಮಯ ಮಾಡಿಕೊಳ್ಳಿ. ಗೂಗಲ್ ಮತ್ತು ಯೂಟ್ಯೂಬ್‍ನಲ್ಲಿ ಬೆರಳ ತುದಿಯಲ್ಲೇ ಭಾರತದ ಸಮಸ್ತ ಶ್ರೇಷ್ಟ ಸಂಗೀತ ಆಲಿಸಲು ಲಭ್ಯ ಇದೆ. ಪ್ರತಿದಿನ ಒಂದೆರಡು ತಾಸು ಸಂಗೀತ ಆಲಿಸಲು ಸಮಯ ಮೀಸಲಿಟ್ಟರೆ ಕೇವಲ ಆರು ತಿಂಗಳಲ್ಲಿ ಸಂಗೀತದ ರಸಗ್ರಹಣದ ಸಮಸ್ಯೆ ನಿವಾರಿಸಿಕೊಳ್ಳಬಹುದು. ನನ್ನ ತಂದೆ- ತಾಯಿಗೆ ಸಂಗೀತದ ಶಾಸ್ತ್ರೀಯ ತಿಳವಳಿಕೆ ಇಲ್ಲ. ಆದರೆ ಚಲನಚಿತ್ರ ಸಂಗೀತದಿಂದ ಹಿಡಿದು ಸಂಕೀರ್ಣ ರಾಗಗಳ ಖ್ಯಾಲ್ ಗಾಯನವನ್ನು ಆಲಿಸುತ್ತಾರೆ. ಮತ್ತು ರಸಾನುಭೂತಿ ಪಡೆಯುತ್ತಾರೆ. ಗಾಯನದ ಆಲಾಪ ಶುರುವಾಗುತ್ತಲೇ ಯಾವ ರಾಗ ಮತ್ತು ಯಾರು ಹಾಡಿದ್ದಾರೆ ಎಂದು ಗುರುತಿಸುತ್ತಾರೆ. ಮತ್ತೆ ಮತ್ತೆ ಶ್ರೇಷ್ಠ ಸಂಗೀತ ಆಲಿಸುವುದರಿಂದ ನಿಮಗೆ ಗೊತ್ತಿಲ್ಲದ ಹಾಗೆ ರಾಗಚಿಕಿತ್ಸೆಗೆ ಒಳಗಾಗುತ್ತೀರಿ. ಸಂಗೀತದ ಮೂಲಕವೇ ರಾಗ, ಸ್ವರ, ತಾಳ ಇತ್ಯಾದಿಗಳ ಅರಿವು ವಿಸ್ತಾರಗೊಳ್ಳುತ್ತದೆ. ರಸಗ್ರಹಣ ಉಸಿರಾಡುವಷ್ಟೇ ಸಹಜ ಎನಿಸುತ್ತದೆ.      

*ಲೇಖಕರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರು; ಕನ್ನಡ ಸಿನಿಮಾದ ಪ್ರಪ್ರಥಮ ಮಹಿಳಾ ಸಂಗೀತ ನಿರ್ದೇಶಕರು, ಪ್ರಸ್ತುತ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.