“ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ”

ಹತ್ತನೇ ತರಗತಿಗೆ ಬರುವವರೆಗೂ ಮಕ್ಕಳಿಗೆ ಪರೀಕ್ಷೆಯ ಗಾಂಭೀರ್ಯ ಇಲ್ಲದ ಕಾರಣ ಕಲಿಕಾಸಕ್ತಿ ಕಡಿಮೆಯಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಈ ನಿಲುವು ಶೈಕ್ಷಣಿಕ ವಲಯದಲ್ಲಿ ವಿವಾದ ಹುಟ್ಟಿಸಿದೆ. ಈ ಕುರಿತು ಅವರು ಹಂಚಿಕೊಂಡ ಅಭಿಪ್ರಾಯಗಳು ಹೀಗಿವೆ:

ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಉದ್ದೇಶವೇನು? ಅಗತ್ಯ ಇತ್ತೇ?

ಮಕ್ಕಳಲ್ಲಿ ಪರೀಕ್ಷೆಯ ಗಾಂಭೀರ್ಯ ತರುವ ಉದ್ದೇಶದಿಂದ ಏಳನೆಯ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಮಾಡಲಾಗುತ್ತದೆ. ಹತ್ತನೇ ತರಗತಿಯವರೆಗೂ ಮಕ್ಕಳಿಗೆ ಪರೀಕ್ಷೆ ಎದುರಿಸುವ ಯಾವ ವಿಧಾನವೂ ಇಲ್ಲ, ಮಕ್ಕಳಲ್ಲಿ ಕ್ರಮೇಣ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ಮಕ್ಕಳಿಗೆ ಪರೀಕ್ಷೆ ಬಗ್ಗೆ ಗಾಂಭೀರ್ಯ ಮೂಡಿಸಲು ಈ ಪ್ರಯತ್ನಕ್ಕೆ ಮುಂದಾಗಿದೆ. ಪರೀಕ್ಷೆಯ ಒತ್ತಡವಿಲ್ಲದ ಕಾರಣ ಹತ್ತನೇ ತರಗತಿಗೆ ಬಂದ ಮಕ್ಕಳಿಗೆ ಕನ್ನಡವೂ ಬರುತ್ತಿಲ್ಲ, ಇಂಗ್ಲಿಷ್ ಅಂತೂ ಮೊದಲೇ ಬರುತ್ತಿಲ್ಲ, ಇದರಿಂದ ಸರ್ಕಾರಿ ಶಾಲೆಗಳಲ್ಲಿ ಆತಂಕ ಮೂಡಿದೆ.

ಈ ಆತಂಕ ದೂರ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನಿರ್ಧಾರ ಮುನ್ನ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿಯೇ ಈ ನಿರ್ಧಾರಕ್ಕೆ ಬರಲಾಗಿದೆ.

2004 ರವರೆಗೂ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿತ್ತು. ಆನಂತರ ಅದನ್ನು ರದ್ದುಪಡಿಸಿ ಎಸ್‍ಎಸ್‍ಎಲ್‍ಸಿಗೂ ಮುನ್ನ ಯಾವುದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್ ಮಾಡದೆ ಪಾಸ್ ಮಾಡುವ ವ್ಯವಸ್ಥೆ ಜಾರಿಗೆ ಬಂದಿತ್ತು. ಇದರಿಂದ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಪರಿಣಾಮ ಕೇಂದ್ರದ ನೀತಿಯನ್ವಯ 6 ಅಥವಾ 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕು ಎಂಬ ಕುರಿತು ಚರ್ಚೆ ಕೂಡ ನಡೆಯುತ್ತಿತ್ತು ಈಗ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಜಾರಿ ಮಾಡಲಾಗಿದ್ದು ಈ ಬಾರಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಮಕ್ಕಳು ಫೇಲ್ ಆದರೆ ಶಾಲೆಯಿಂದ ದೂರ ಉಳಿಯುತ್ತಾರೆ ಎನ್ನುವ ಆತಂಕ ಸರ್ಕಾರಕ್ಕೆ ಇಲ್ಲವೇ?

ಇದೇ ಕಾರಣಕ್ಕೆ ಕೆಲವರು ಪಬ್ಲಿಕ್ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಂತ ಮಕ್ಕಳಿಗೆ ಪರೀಕ್ಷೆಯ ಗಾಂಭೀರ್ಯ ಇಲ್ಲದೆ ಹೋದರೆ ಕಲಿಕಾ ಸಾಮಥ್ರ್ಯದ ಮೇಲೆ ಪರಿಣಾಮ ಬೀರಲಿದೆ. ಹಲವಾರು ವಿದ್ಯಾರ್ಥಿಗಳು ಹತ್ತನೇ ತರಗತಿಗೆ ಬರುವವರೆಗೂ ಏನನ್ನು ಕಲಿಯದೆ ಇರುವವರು ಇದ್ದಾರೆ. ಇದು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.

ಇನ್ನು ಪಬ್ಲಿಕ್ ಪರೀಕ್ಷೆಯಲ್ಲಿ ಫೇಲ್ ಆದರೆ ಶಾಲೆಯಿಂದ ದೂರ ಉಳಿಯುತ್ತಾರೆ ಎನ್ನುವುದು ಅಷ್ಟು ಸಮಂಜಸವಲ್ಲ. ಹತ್ತನೇ ತರಗತಿಯಲ್ಲಿ ಫೇಲ್ ಆದ ನಂತರವೂ ಕೆಲವರು ಶಾಲೆಯಿಂದ ದೂರ ಉಳಿಯುತ್ತಾರೆ. ಕೆಲವೇ ಕೆಲವು ಮಕ್ಕಳು ಈ ಪಬ್ಲಿಕ್ ಪರೀಕ್ಷೆಯಿಂದ ಫೇಲ್ ಆದರೆ ಶಾಲೆಯಿಂದ ದೂರ ಉಳಿಯಬಹುದು ಆದರೆ ಶಿಕ್ಷಣದ ಗುಣಮಟ್ಟ ಹೆಚ್ಚಿಸದಿದ್ದರೆ ಪ್ರಯೋಜನವಾಗುವುದಿಲ್ಲ. ಆ ಉದ್ದೇಶದಿಂದಲೇ ನಾವು ಈ ಬಾರಿ ಪ್ರಾಯೋಗಿಕವಾಗಿ ಪಬ್ಲಿಕ್ ಪರೀಕ್ಷೆಯನ್ನು ಜಾರಿಗೆ ತರುತ್ತಿದ್ದು ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಲಾಗಿದೆ.

ಹಾಗಾಗಿ ನಾವು ಈಗಿನಿಂದಲೇ ರಾಜ್ಯದ ಎಲ್ಲಾ ಡಿಡಿಪಿಐ, ಬಿಇಓ, ಎಲ್ಲಾ ಸಬ್ಜಕ್ಟ್ ಅಧಿಕಾರಿಗಳನ್ನು ವಾರದಲ್ಲಿ ಐದು ಶಾಲೆಗಳಿಗೆ ತೆರಳಿ ಮಕ್ಕಳು ಮತ್ತು ಶಿಕ್ಷಕರ ಜೊತೆ ಮಾತನಾಡಬೇಕು ಮತ್ತು ಪೋಷಕರ ಜೊತೆ ಮಾತನಾಡಿ ಪರೀಕ್ಷೆಯ ಮಹತ್ವವವನ್ನು ತಿಳಿಸಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಪಬ್ಲಿಕ್ ಪರೀಕ್ಷೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಕ್ಕಳ ಪ್ರವೇಶ ಇನ್ನೂ ಹೆಚ್ಚಾಗಲಿದೆಯೇ? ಇದರ ಹಿಂದೆ ಏನಾದರೂ ಲಾಬಿ ನಡೆದಿದೆಯೇ?

ಛೇ..ಛೇ.. ಅಂತ ಯಾವ ಹೊಂದಾಣಿಕೆಯೂ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಸಮವಸ್ತ್ರ, ಬಸ್ ವ್ಯವಸ್ಥೆಯ ಮೂಲಕ ಮಕ್ಕಳನ್ನು ಆಕರ್ಷಿಸುವ ಕೆಲಸ ಮಾಡುತ್ತಿವೆ. ಜೊತೆಗೆ ಇಂಗ್ಲಿಷ್ ಆಕರ್ಷಣೆಯನ್ನು ಮಾಡುತ್ತಿವೆ. ಈಗ ಸರ್ಕಾರ ಕೂಡ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಜಾರಿ ಮಾಡುವುದರಿಂದ ಖಾಸಗಿ ಶಾಲೆಗಳಿಗೆ ಹೋಗುವುದು ಕ್ರಮೇಣ ಕಡಿಮೆಯಾಗುತ್ತಿದೆ.

ಸರ್ಕಾರದ ಈ ನಿರ್ಧಾರದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಲಾಭವಾಗುವುದಿಲ್ಲ. ಅವರು ಹತ್ತನೇ ತರಗತಿಗೆ ಬರುವ ಮುನ್ನವೇ ಅಂದರೆ 9ನೇ ತರಗತಿಯಲ್ಲಿಯೇ ಶೇಕಡ 90ಕ್ಕೂ ಹೆಚ್ಚು ಅಂಕ ಗಳಿಸಲು ಸಾಮಥ್ರ್ಯವಿಲ್ಲದ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಕಳಿಸುತ್ತಾರೆ. ಇದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಈ ಬಗ್ಗೆ ಯಾವ ಪೋಷಕರು ದೂರು ನೀಡದಿರುವುದೆ ಆಶ್ಚರ್ಯ ತಂದಿದೆ. ಹೀಗಾಗಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಿಂದ ಅವರಿಗೆ ಯಾವುದೇ ಲಾಭವಿಲ್ಲ. ಬದಲಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸುವ ಒಂದೇ ಉದ್ದೇಶವೇ ಹೊರೆತು ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ನಾವು ಆಸಕ್ತರಾಗಿಲ್ಲ. ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೇಕಾಬಿಟ್ಟಿ ಅನುಮತಿ ಕೊಡಲಾಗಿದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ ಕ್ರಮೇಣ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವ ಕಡಿಮೆಮಾಡಬೇಕು. ಆ ರೀತಿ ನಮ್ಮ ಪ್ರಯತ್ನಗಳು ನಡೆಯುತ್ತಿವೆ.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಯಾವೆಲ್ಲಾ ನಿರ್ಧಾರಗಳನ್ನು ತಗೆದುಕೊಳ್ಳಲಾಗಿದೆ?

ಇದು ಸರ್ಕಾರಕ್ಕೆ ಚಾಲೆಂಜ್ ಆಗಿ ಪರಿಣಮಿಸಿದೆ. ಮಕ್ಕಳಿಗೆ ಆಸಕ್ತಿ ಮೂಡಿಸಲು ಪ್ರತಿನಿತ್ಯ ಎತ್ತರದ ವ್ಯಕ್ತಿಗಳು ತಮ್ಮ ವ್ಯಕ್ತಿತ್ವವನ್ನು ಯಾವ ರೀತಿ ರೂಪಿಸಿಕೊಂಡಿದ್ದರು, ಅದರಿಂದ ಸಮ ಸಮಾಜದಲ್ಲಿ ಅವರ ಪಾತ್ರ ಹಾಗೂ ಅವರ ಬದಲಾವಣೆಗಳ ಬಗ್ಗೆ ತಿಳಿಹೇಳುವ ಪ್ರಯತ್ನ ನಡೆದಿದೆ. ಅಂತಹ ಮಾದರಿ ವ್ಯಕ್ತಿಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. ಅಲ್ಲದೆ, ಪೋಷಕರಿಗೂ ಕೂಡ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಕಾಗುವುದಿಲ್ಲ. ಉತ್ತೇಜನ ತುಂಬುವ ಪ್ರಯತ್ನ ನಡೆಸುವ ಕುರಿತಂತೆ ತಿಳಿಸಲಾಗುವುದು. ಶಿಕ್ಷಕರು, ಸರ್ಕಾರ, ಪೋಷಕರು, ಸ್ವಯಂಸೇವಾ ಸಂಸ್ಥೆಗಳು ಕೂಡ ಇದರಲ್ಲಿ ಭಾಗಿಯಾಗಿದ್ದು ಎಲ್ಲಾ ಕಡೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಕೆಲಸ ನಿರ್ವಹಿಸಲಿವೆ.

ನಮ್ಮ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿತವರೆ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ ಎನ್ನುವಂತಾಗಬೇಕು. ಆ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ನಮ್ಮ ಊರು ನಮ್ಮ ಶಾಲೆ ಎಂಬ ಮಾದರಿಯಲ್ಲಿ ಆಯಾ ಗ್ರಾಮಸ್ಥರು ಆಸಕ್ತಿ ವಹಿಸಬೇಕು. ಶಾಲೆಗಳನ್ನು ದತ್ತು ಪಡೆದು ಮಕ್ಕಳ ಗುಣಮಟ್ಟಕ್ಕೆ ಅನುವು ಮಾಡುವ ಪ್ರಯತ್ನಗಳು ನಡೆಯುತ್ತಿವೆ.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪಠ್ಯಪುಸ್ತಕಗಳ ಬದಲಾವಣೆ ಆಗಲಿದೆಯೇ?

ಈಗ ಪಠ್ಯಗಳನ್ನು ಬದಲಾವಣೆ ಮಾಡುವುದಿಲ್ಲ. ಇದರ ಅಗತ್ಯವೂ ಇಲ್ಲ. ಏಕೆಂದರೆ, ಈಗಾಗಲೇ ಉತ್ತಮ ಪಠ್ಯಗಳೇ ಇವೆ. ಸದ್ಯಕ್ಕೆ ಇದರ ಬಗ್ಗೆ ಚರ್ಚೆಗಳು ನಡೆದಿಲ್ಲ. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಬದಲಾವಣೆ ಮಾಡಬೇಕೆ, ಬೇಡವೇ ಎಂಬ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು.
ಸಚಿವರಾಗಿ ತಾವು ಯಾವೆಲ್ಲಾ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ?

ಕಲ್ಯಾಣ ಕರ್ನಾಟಕ ಭಾಗ ಶಿಕ್ಷಣದಲ್ಲಿ ಹಿಂದುಳಿದಿದೆ. ಅಲ್ಲಿನ ಏಳು ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಏನೆಲ್ಲಾ ಮಾಡಬಹುದು ಎಂಬ ಕುರಿತು ಅಲ್ಲಿನ ಶಿಕ್ಷಣಾಧಿಕಾರಿಗಳ ಸಭೆ ಕರೆದು ಆ ಮಕ್ಕಳಲ್ಲಿ ಕಲಿಕಾ ವಿಧಾನಕ್ಕೆ ಅನುವಾಗುವಂತೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಹಾಗಾಗಿಯೇ ನಾನು ಅಲ್ಲಿನ ಶಾಲೆಗಳಿಗೂ ಭೇಟಿ ನೀಡಿ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಯಾವೆಲ್ಲಾ ಬದಲಾವಣೆ ಮಾಡಬೇಕು, ಅದರಿಂದ ಮಕ್ಕಳು ಶಿಕ್ಷಣದಲ್ಲಿ ಹೇಗೆ ಸುಧಾರಣೆಯಾಗುತ್ತಾರೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ಆ ಏಳು ಜಿಲ್ಲೆಯಲ್ಲಿ ಮಕ್ಕಳು ಆಸಕ್ತರಾಗಬೇಕು ಮತ್ತು ಇತರೆ ಜಿಲ್ಲೆಗಳಂತೆ ಫಲಿತಾಂಶವೂ ಹೆಚ್ಚಾಗಬೇಕು ಆ ರೀತಿ ಕಲಿಕಾ ಮಟ್ಟವನ್ನು ಹೆಚ್ಚಿಸುವ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಲಾಗುತ್ತದೆ.

ಶಿಕ್ಷಣದ ಗುಣಮಟ್ಟ ಕುಸಿಯಲು ಶಿಕ್ಷಕರ ನಿರುತ್ಸಾಹವೂ ಕಾರಣವೇ?

ಇರಬಹುದು. ಆ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಕರಿಗೂ ಅರಿವು ಮೂಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಶಿಕ್ಷಣಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದ್ದು ಯಾವೆಲ್ಲಾ ಶಿಕ್ಷಕರು ಆಸಕ್ತಿ ಹೊಂದಿಲ್ಲ ಅಂತವರ ವಿರುದ್ಧ ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆ ನೀಡಬೇಕು ಮತ್ತು ಕಾಲಕಾಲಕ್ಕೆ ತರಬೇತಿ ನೀಡಬೇಕು ಎಂದು ಸೂಚಿಸಲಾಗಿದೆ.

ಒಟ್ಟಾರೆ ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಬೇಕು, ಕಲಿಕಾ ವಿಧಾನವನ್ನು ಆಮೂಲಾಗ್ರವಾಗಿ ಬದಲಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುವ ಕೆಲಸ ಮಾಡುವುದು ನಮ್ಮ ಕೆಲಸ. ಆ ನಿಟ್ಟಿನಲ್ಲಿ ಏನೆಲ್ಲಾ ಪ್ರಯತ್ನಗಳು ಆಗಬೇಕೋ ಅವೆಲ್ಲವನ್ನೂ ಹಂತಹಂತವಾಗಿ ಜಾರಿಗೆ ತರಲಾಗುತ್ತದೆ.

ಸಂದರ್ಶನ: ತುರುವನೂರು ಮಂಜುನಾಥ

Leave a Reply

Your email address will not be published.