ಶಿಕ್ಷಣನೀತಿ: ಸ್ವಾಯತ್ತ ಸಂಸ್ಥೆಗೆ ಅಧಿಕಾರ ಕೊಡಿ

ಎಳೆಯ ವಯಸ್ಸಿನ ಮಕ್ಕಳು ಮತ್ತು ಪ್ರೌಢತೆಯನ್ನು ಪಡೆಯದ ಹರೆಯದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ರಾಜಕೀಯ ಕಸಗಳು ಮತ್ತು ಸರ್ಕಾರ ತಮ್ಮ ಸಿದ್ಧಾಂತವನ್ನು ಬಿತ್ತುವುದು ವಿಷಬೀಜ ಬಿತ್ತಿದಂತೆ ಹಾನಿಕಾರಕ.

ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿರುವ ಒಂದು ಗಹನವಾದ ವಿಷಯವನ್ನು ಶಿಕ್ಷಕರ ಮತ್ತು ಪೋಷಕರ ಗಮನಕ್ಕೆ ತರಲು ಬಯಸುತ್ತೇನೆ. ಆ ಅಂಶವೆAದರೆ ಶಿಕ್ಷಣ ನೀತಿಯನ್ನು ಯಾರು ರೂಪಿಸಬೇಕು? ಸಿಲಬಸ್ ಮತ್ತು ಪಠ್ಯಪುಸ್ತಕಗಳನ್ನು ಎಂಥವರು ರಚಿಸಬೇಕು ಎಂಬುದು.

ಇದುವರೆಗೆ ಶಿಕ್ಷಣ ನೀತಿಯನ್ನು ಸ್ವತಂತ್ರ ಭಾರತದಲ್ಲಿ ಆಡಳಿತಾರೂಢ ರಾಜಕೀಯ ಪಕ್ಷಗಳು ರೂಪಿಸುತ್ತಿವೆ. ಬಹುಮಟ್ಟಿಗೆ ಈ ನೀತಿ ನಿರೂಪಕರು ಆಡಳಿತರೂಢ ಪಕ್ಷದವರಿಗೆ ಬೇಕಾದ ಶಿಕ್ಷಣತಜ್ಞರು. ಎನ್‌ಸಿಇಆರ್‌ಟಿಯಲ್ಲಿ ಕೂಡ ಆಡಳಿತದ ಧೋರಣೆಗೆ ಹೊಂದಿಕೊಳ್ಳುವವರೇ ಇರುತ್ತಾರೆ.

ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷರಾದ, ಸ್ವತಂತ್ರ ಮನೋವೃತ್ತಿಯ ಶಿಕ್ಷಣವೇತ್ತರೇ ಇದ್ದು ಅವರು ಪರಿಶುದ್ಧವಾದ ಶಿಕ್ಷಣ ನೀತಿಯನ್ನೇ ಪಾಲಿಸುತ್ತಿದ್ದರು. ಆದರೂ ಆಗಲೂ ಆಗೊಮ್ಮೆ ಈಗೊಮ್ಮೆ ಆಡಳಿತಾರೂಢ ಇಂಗ್ಲಿಷರ ಮೂಗಿನ ನೇರಕ್ಕೆ ಇತಿಹಾಸದ ಪುಸ್ತಕಗಳು ನಿರ್ಮಾಣವಾಗುತ್ತಿದ್ದವು. ಅವುಗಳನ್ನು ಪಠ್ಯಪುಸ್ತಕಗಳನ್ನಾಗಿ ಆಯ್ಕೆ ಮಾಡುವ ಪರಿಪಾಠವೂ ಇತ್ತು. ಸ್ವಾತಂತ್ರ್ಯ ಪೂರ್ವದಲ್ಲಿಯೂ, ಸ್ವಾತಂತ್ರ್ಯೋತ್ತರದ ಕೆಳವರ್ಷಗಳವರೆಗೂ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಶರಣುಹೋದ ವಿದ್ವಾಂಸರು ರಚಿಸಿದ ಇತಿಹಾಸ ಪುಸ್ತಕಗಳನ್ನೂ ಪಠ್ಯವಾಗಿ ಇಡಲಾಗುತ್ತಿತ್ತು. ಈ ಎಲ್ಲಾ ಆಪಾದನೆಗಳು ಇದ್ದರೂ ಒಟ್ಟಿನಲ್ಲಿ ಶಿಕ್ಷಣ ನೀತಿ ಮತ್ತು ಪಠ್ಯಪುಸ್ತಕ ರಚನೆ ಎರಡೂ ಪಕ್ಷರಹಿತರ ಕೈಲಿ ಇರುತ್ತಿತ್ತು. ಇತ್ತೀಚೆಗೆ ಈ ವ್ಯವಸ್ಥೆ ವ್ಯವಸ್ಥಿತವಾಗಿ ಮಾರ್ಪಾಡಾಗುತ್ತಿದೆ.

ಮುರಳಿ ಮನೋಹರ ಜೋಶಿಯವರು ವಿದ್ಯಾಮಂತ್ರಿಗಳಾದಾಗ ಶಿಕ್ಷಣ ನೀತಿಯನ್ನು ಬದಲು ಮಾಡಲು ಪ್ರಯತ್ನಿಸಿದರು. ಆದರೆ ಇದಕ್ಕೆ ರಾಜ್ಯಗಳ ಶಿಕ್ಷಣ ಮಂತ್ರಿಗಳು ಪ್ರತಿಭಟನೆ ತೋರಿದ್ದರಿಂದ, ಆ ಪ್ರಸ್ತಾಪ ಅಲ್ಲಿಗೇ ಕೊನೆಗೊಂಡಿತು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಡಿಪಿಐಗಳಾಗಿ ನಿವೃತ್ತರಾಗಿದ್ದ ಎಚ್.ವಿ.ಶ್ರೀರಂಗರಾಜು ಮತ್ತು ಮುಡಂಬಡಿತ್ತಾಯ ಇಬ್ಬರನ್ನೂ ಬಳಸಿಕೊಂಡು, ಶಿಕ್ಷಣ ನೀತಿಯಲ್ಲೂ ಪಠ್ಯಪುಸ್ತಕ ರಚನೆಯಲ್ಲೂ ಬದಲಾವಣೆಗಳನ್ನು ತರಲಾಯಿತು. ಕೇಂದ್ರದಲ್ಲೂ ಎನ್‌ಸಿಇಆರ್‌ಟಿ ಈಗ ಇದೇ ಕೆಲಸ ಮಾಡುತ್ತಿದೆ.

ಇಷ್ಟೆಲ್ಲಾ ಹೇಳಲು ಕಾರಣವೇನೆಂದರೆ ಸರ್ಕಾರಗಳು ಬದಲಾದಾಗ ಅವು ತಮ್ಮ ಪಕ್ಷದ ಸಿದ್ಧಾಂತವನ್ನು ಒಳಗೊಂಡ ಪಠ್ಯಪುಸ್ತಕಗಳ ರಚನೆ ಮಾಡಲು ತೊಡಗುತ್ತವೆ ಎಂಬ ಕಟುಸತ್ಯವನ್ನು ತಿಳಿಸುವುದೇ ಆಗಿದೆ.

ಮಕ್ಕಳ ಮನಸ್ಸು ಶುದ್ಧವಾಗಿರುತ್ತದೆ. ಅದನ್ನು ಶಿಕ್ಷಣನೀತಿ ಮತ್ತು ಪಠ್ಯಪುಸ್ತಕಗಳು ಅಶುದ್ಧಗೊಳಿಸಬಾರದು. ಕಮ್ಯುನಿಸ್ಟ್ ಪಕ್ಷದ ಕೈಗೆ ರಾಜ್ಯ ಬಂದಾಗ, ಕಮ್ಯುನಿಸ್ಟ್ ಸಿದ್ಧಾಂತವನ್ನು ಪಠ್ಯಪುಸ್ತಕಗಳ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುರುಕುವುದು, ಬಿಜೆಪಿ ಅಧಿಕಾರಕ್ಕೆ ಬಂದಾಗ ಹಿಂದುತ್ವ ಪ್ರತಿಪಾದನೆಗೆ ಒತ್ತು ಕೊಟ್ಟು ಪಠ್ಯಪುಸ್ತಕಗಳನ್ನು ರಚಿಸುವುದು ಉಚಿತವಲ್ಲ.

ಮಕ್ಕಳು ಮೇಲಿನ ತರಗತಿಗೆ ಹೋದಂತೆ ಅವರು ಎಲ್ಲ ರಾಜಕೀಯ ಸಿದ್ಧಾಂತಗಳನ್ನು ತಿಳಿಯುವುದು ಅವಶ್ಯಕ. ವಿದ್ಯಾರ್ಥಿಗಳು ಪೌರತ್ವ ಪಡೆದ ಮೇಲೆ ಈ ಸಿದ್ಧಾಂತಗಳಲ್ಲಿ ಯಾವುದು ದೇಶಕ್ಕೆ ಹಿತಕರವಾದುದು ಎಂಬುದನ್ನು ನಿರ್ಧರಿಸುವಉ ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು. ಎಳೆಯ ವಯಸ್ಸಿನ ಮಕ್ಕಳು ಮತ್ತು ಪ್ರೌಢತೆಯನ್ನು ಪಡೆಯದ ಹರೆಯದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ರಾಜಕೀಯ ಕಸಗಳು ಮತ್ತು ಸರ್ಕಾರ ತಮ್ಮ ಸಿದ್ಧಾಂತವನ್ನು ಬಿತ್ತುವುದು ವಿಷಬೀಜ ಬಿತ್ತಿದಂತೆ ಹಾನಿಕಾರಕ.

ಆದ್ದರಿಂದ ಶಿಕ್ಷಣನೀತಿಯನ್ನು ರೂಪಿಸುವ ಮತ್ತು ಪಠ್ಯಪುಸ್ತಕ ರಚನೆಯ ಅಧಿಕಾರವನ್ನು ಒಂದು ಸ್ವಾಯತ್ತ ಸಂಸ್ಥೆಗೆ ವಹಿಸಬೇಕು. ಈ ಸ್ವಾಯತ್ತ ಸಂಸ್ಥೆಯ ಸದಸ್ಯರು ಯಾವ ರಾಜಕೀಯ ಪಕ್ಕಕ್ಕೂ ಸೇರಿದವರಾಗಿರಕೂಡದು, ಒಲವು ತೋರಿಸುವವರಾಗಿರಕೂಡದು. ಅವರು ನಿರ್ಭೀತರಾಗಿರಬೇಕು, ನಿರ್ದಲೀಯರಾಗಿರಬೇಕು. ನಿರ್ವಿಕಾರ ಬುದ್ಧಿವಂತ ಉತ್ತಮ ಶಿಕ್ಷಣತಜ್ಞರೂ ಆಗಿರಬೇಕು. ಇವರು ಶಿಕ್ಷಣ ನೀತಿಯನ್ನು ರೂಪಿಸುತ್ತಾರೆ. ಸಿಲಬಸ್ ಸಿದ್ಧಪಡಿಸುತ್ತಾರೆ. ಮತ್ತು ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಹೊಣೆ ಹೊರುತ್ತಾರೆ. ಇವರ ಈ ಕಾರ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಈ ಸ್ವಾಯತ್ತ ಸಂಸ್ಥೆಯ ತೀರ್ಮಾನಗಳೇ ಅಂತಿಮ. ಸರ್ಕಾರ ಈ ಸ್ವಾಯತ್ತ ಸಂಸ್ಥೆ ತಯಾರಿಸಿದ ಶಿಕ್ಷಣ ನೀತಿಯನ್ನು ಒಪ್ಪಿಕೊಂಡು, ಕಾರ್ಯಗತಗೊಳಿಸಬೇಕು. ಶಿಕ್ಷಕರೂ ಈ ಬಗೆಯ ಶಿಕ್ಷಣ ನೀತಿಯನ್ನು ಜಾರಿಗಳು ಸರ್ಕಾರದ ಮೇಲೆ ಒತ್ತಡ ಹಾಕÀಬೇಕು. ರಾಜಕೀಯ ಹಸ್ತಕ್ಷೇಪವನ್ನು ತಡೆಹಿಡಿಯಲು ಶ್ರಮಿಸಬೇಕು.

*ಲೇಖಕರು ಹಿರಿಯ ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರರು, ಶತಾಯುಷಿ. ಸಾಮಾಜಿಕ ಹೋರಾಟಗಳಿಗೆ ಸದಾ ಮುಂದು.

 

Leave a Reply

Your email address will not be published.