ಶಿಕ್ಷಣ ಕ್ಷೇತ್ರದಲ್ಲಿ ಸಜೀವ ತರಗತಿಗಳೇ ಉಳಿಯಲಿ!

‘ಶಿಕ್ಷಣ ಎಂದರೆ, ಶಾಲೆಗಳಲ್ಲಿ ಕಲಿತಿದ್ದನ್ನು ಮರೆತ ನಂತರ ನಮ್ಮೊಂದಿಗೆ ಉಳಿಯುವಂಥಾದ್ದು’ ಎನ್ನುತ್ತಾರೆ ಅಲ್ಬರ್ಟ್ ಐನ್‌ಸ್ಟೈನ್. ಎಂದರೆ ಶಿಕ್ಷಣದ ಹೆಸರಿನಲ್ಲಿ ನಮ್ಮ ತಲೆಗಳಲ್ಲಿ ತುಂಬಿರುವುದಕ್ಕಿಂತ ಮುಂದೆ ನಮ್ಮ ಬದುಕಿಗೆ ಜೊತೆಯಾಗುವುದು ಶಾಲಾ ವ್ಯವಸ್ಥೆಯಲ್ಲಿ ನಾವು ರೂಢಿಸಿಕೊಂಡಿರುವ ಸಮಗ್ರ ವ್ಯಕ್ತಿತ್ವ. ಆದರೆ ಇಂದಿನ ಆನ್‌ಲೈನ್ ಶಿಕ್ಷಣವೇ ಶಾಶ್ವತವಾಗಿ ಮುಂದುವರಿದರೆ ಕೊನೆಗೆ ನಮ್ಮೊಂದಿಗೆ ಉಳಿಯುವುದು ಶೂನ್ಯ ಮಾತ್ರ!

‘ಶಿಕ್ಷಣ ಎಂದರೆ, ಮಾಹಿತಿ, ಅರಿವು, ಜ್ಞಾನ, ಜೀವನ ಕೌಶಲಗಳನ್ನು ನೀಡಿ, ಮೌಲ್ಯಗಳು, ನಂಬಿಕೆಗಳು ಮತ್ತು ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಂಡು ಅದಕ್ಕೆ ತಕ್ಕ ವರ್ತನೆಗಳನ್ನು ರೂಢಿಸಿಕೊಳ್ಳುವುದನ್ನು ಸುಗಮಗೊಳಿಸುವ ಪ್ರಕ್ರಿಯೆ.’ ಶಾಲೆಗೆ ಹೋಗುವುದಷ್ಟೇ ಶಿಕ್ಷಣದ ಗುರಿಯೂ ಅಲ್ಲ, ವಿಧಾನವೂ ಅಲ್ಲ. ‘ಶಿಕ್ಷಣ ಎಂದರೆ ಬದುಕುವ ಪ್ರಕ್ರಿಯೆಯೇ ಹೊರತು, ಮುಂದಿನ ಬದುಕಿಗಾಗಿ ಸಜ್ಜುಗೊಳಿಸುವ ಪ್ರಕ್ರಿಯೆಯಲ್ಲ’ ಎನ್ನುತ್ತಾರೆ ತತ್ತ್ವಜ್ಞಾನಿ, ಮನೋವಿಜ್ಞಾನಿ ಜಾನ್ ಡೆವಿ. “ಶಿಕ್ಷಣ ಎಂದರೆ ಪರಿಪೂರ್ಣ ಬದುಕು” ಎನ್ನುತ್ತಾರೆ ಸ್ಪೆನ್ಸರ್.

ಸಂವಿಧಾನದ 86ನೆ ತಿದ್ದುಪಡಿಯಲ್ಲಿ ಅನುಚ್ಛೇದ 21-1ರಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಮಗುವಿನ ಮೂಲಭೂತ ಹಕ್ಕನ್ನಾಗಿ ಮಾಡಿದಾಗ ದೇಶದ ಗುರಿಯಿದ್ದದ್ದೂ ಇಂಥ ಸಮಗ್ರ ಶಿಕ್ಷಣವೇ. ಶಿಕ್ಷಣ ಮತ್ತು ವಿಶಿಷ್ಟ ತರಬೇತಿಯನ್ನು ಪಡೆದಿರುವ ಶಿಕ್ಷಕರಿಂದಲೇ ತರಗತಿಗಳಲ್ಲಿ ಸಜೀವ ಪಾಠ ಮಾಡಿ, ದಿನಕ್ಕೆ ಐದಾರು ಗಂಟೆಗಳ ಕಾಲ ಮಕ್ಕಳು ಶಾಲೆಗಳಲ್ಲಿ ಕಳೆದ ನಂತರವೂ ಕಷ್ಟಸಾಧ್ಯವಾಗುತ್ತಿರುವ ‘ಶಿಕ್ಷಣ’ವನ್ನು ‘ಆನ್ ಲೈನ್’ ನೀಡಲು ನಿಜವಾಗಿಯೂ ಸಾಧ್ಯವೇ? ಆನ್ ಲೈನ್ ಶಿಕ್ಷಣ, ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ ತರಗತಿಗಳಲ್ಲಿ ಬೇಕೇ ಬೇಡವೇ ಎನ್ನುವುದನ್ನು ವಿಮರ್ಶಿಸುವದರಲ್ಲಿ ಮೂರು ಮುಖಗಳಿವೆ. ಒಂದು ತಾಂತ್ರಿಕ, ಶೈಕ್ಷಣಿಕ ಮತ್ತು ತಾತ್ತ್ವಿಕ.

ತಾಂತ್ರಿಕ

ಆನ್ ಲೈನ್ ಶಿಕ್ಷಣವನ್ನು ಜಾರಿಗೆ ತಂದಿದ್ದೇ ಆದರೆ ಎಲ್ಲವೂ ತಂತ್ರಜ್ಞಾನಮಯ ಆಗಿಬಿಡುತ್ತದೆ. ಇದನ್ನು ಸಾಧಿಸಲು ಶಿಕ್ಷಕರು, ಶಿಕ್ಷಣ ಸಂಸ್ಥೆಗಳಿAದ ಹಿಡಿದು ಅದನ್ನು ಗ್ರಹಿಸಬೇಕಾದ ವಿದ್ಯಾರ್ಥಿಯ ವರೆಗೆ ತಂತ್ರಜ್ಞಾನ/ಮಾರುಕಟ್ಟೆ ಆವರಿಸಿಬಿಡುತ್ತದೆ. ಮಕ್ಕಳು ಇದನ್ನು ಪಡೆಯಬೇಕು ಎಂದರೆ ಕನಿಷ್ಠ ಹತ್ತು ಸಾವಿರ ರೂಪಾಯಿಯ ಸ್ಮಾರ್ಟ್ ಫೋನ್ ಬೇಕು, ಇಂಟರ್‌ನೆಟ್ ಸಂಪರ್ಕ, ಮಗು ಇರುವ ಸ್ಥಳದಲ್ಲಿ ಅದು ಸಮರ್ಥವಾಗಿ ಕೆಲಸ ಮಾಡಬೇಕು ಇತ್ಯಾದಿ ಎಲ್ಲವೂ ದುಬಾರಿ, ಅನಿಶ್ಚಿತ.

ಈಗಲೂ ಭಾರತದಲ್ಲಿ ಪ್ರತಿದಿನ 7000 (ವರ್ಷಕ್ಕೆ 25,55,000) ಜನ ಹಸಿವೆಯಿಂದ ಸಾಯುತ್ತಾರೆ. ಕರ್ನಾಟಕದಲ್ಲಿ ಈಗಲೂ 12 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವು ಏನನ್ನು ಹೇಳುತ್ತವೆ? ಜನರ ಆರ್ಥಿಕ, ಸಾಮಾಜಿಕ ಸ್ಥಿತಿಯನ್ನು ಈ ಮಟ್ಟದಲ್ಲಿ ಇಟ್ಟುಕೊಂಡೇ ನಾವು ಸಾರ್ವತ್ರಿಕ ಶಿಕ್ಷಣವನ್ನು ಇಷ್ಟೊಂದು ತಂತ್ರಜ್ಞಾನಿಕ, ದುಬಾರಿ, ಸಂಕೀರ್ಣ ಮಾಡಿದರೆ, ಮಕ್ಕಳು ತಮ್ಮ ಮೂಲಭೂತ ಹಕ್ಕನ್ನು ಪಡೆಯುವಲ್ಲಿ ಎಷ್ಟೊಂದು ಅಡ್ಡಿಆತಂಕಗಳನ್ನು ಸೃಷ್ಟಿಸಿದ ಹಾಗೆ ಆಗುತ್ತದೆ ಎಂಬುದನ್ನು ಆಲೋಚಿಸಿ. ಆನ್ ಲೈನ್ ಎಂಬ ಹೆಸರಿನಲ್ಲಿ ಶಿಕ್ಷಣವನ್ನು ಜಾರಿಗೊಳಿಸಿದರೆ ನಾವು ಈಗಾಗಲೇ ಇರುವ ಬಡವ ಬಲ್ಲಿದರ ನಡುವಿನ ಅಂತರವನ್ನು ಡಿಜಿಟಲ್ ಎಂಬ ಇನ್ನೊಂದು ಶತ್ರುವನ್ನು ಸೇರಿಕೊಂಡು ಇನ್ನಷ್ಟು ಅಧಿಕಗೊಳಿಸಿದಂತಾಗುತ್ತದೆ.

ಮುಖ್ಯವಾಗಿ ಎಳೆಯ ಮಕ್ಕಳು ಹತ್ತಿರದಿಂದ ಗಂಟೆಗಟ್ಟಲೆ ಮೊಬೈಲ್ ತೆರೆಗಳನ್ನು ದಿಟ್ಟಿಸುವುದು ಕಣ್ಣಿಗೂ ಅಪಾಯ, ಮಾನಸಿಕವಾಗಿಯೂ ಹಾನಿಕರ ಎಂದು ಸ್ವತಃ ನಿಮ್ಹಾನ್ಸ್ ಸರಕಾರಕ್ಕೆ ವರದಿಯನ್ನು ಕೊಟ್ಟಿದೆ. ಇಂಥ ಅಭ್ಯಾಸದಿಂದ ಮಕ್ಕಳು ಅಂತರ್ಮುಖಿಗಳಾಗುತ್ತಾರೆ, ದೈಹಿಕವಾಗಿ ನಿಷ್ಕಿçಯರಾಗುತ್ತಾರೆ, ಕುಟುಂಬ ಸಂಬAಧಗಳು ದುರ್ಬಲಗೊಳ್ಳುತ್ತವೆ, ಭಾಷೆಯ ಬೆಳವಣಿಗೆ ಕುಂಠಿತವಾಗುತ್ತದೆ, ಭಾವನೆಗಳ ಅಭಿವ್ಯಕ್ತಿ ದುರ್ಬಲಗುತ್ತದೆ. ಮೊಬೈಲ್‌ನ ನಿರಂತರ ಬಳಕೆಯಿಂದ ಆಗುವ ಈ ಶಾಶ್ವತ ಹಾನಿಯನ್ನು ಜಗತ್ತಿನ ಅದೆಷ್ಟು ಅಧ್ಯಯನಗಳು ಸಾಬೀತುಪಡಿಸಿಲ್ಲ!

ನಿಜವಾಗಿಯೂ ಕುಟುಂಬ, ಸಮುದಾಯ, ಸರಕಾರ ಎಲ್ಲರೂ ಸೇರಿ ಮಕ್ಕಳನ್ನು ಮೊಬೈಲ್ ದುರಭ್ಯಾಸದ ದಾಸ್ಯದಿಂದ ವಿಮೋಚನೆಗೊಳಿಸಿ ಸಹಜ, ಸಜೀವ ಬಾಲ್ಯವನ್ನು ಮಕ್ಕಳಿಗೆ ಹಿಂದಿರುಗಿಸಲು ನೀತಿ, ಕ್ರಿಯೆಯನ್ನು ಕೈಗೊಳ್ಳಬೇಕಾಗಿತ್ತು. ಆದರೆ, ಪುಟ್ಟ ಮಕ್ಕಳನ್ನು ಅಳದಂತೆ ಮಾಡಲೂ ನಮ್ಮ ಬುದ್ಧಿವಂತ ಪೋಷಕರು ಮೊಬೈಲನ್ನು ಅವರ ಕೈಯಲ್ಲಿ ಹಿಡಿಸಿಬಿಡುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಹೆಚ್ಚಿನ ಸಮಯ ಈ ಮೊಬೈಲ್ ಮೋಹಜಾಲದಲ್ಲಿಯೇ ಮುಳುಗಿಬಿಡುತ್ತಾರೆ. ಇಂದು ಮೊಬೈಲಿನಲ್ಲಿ ಏನೆಲ್ಲಾ ನೋಡಲು ಸಿಗುತ್ತದೆ ಎಂದು ನಮಗೆ ಗೊತ್ತಿಲ್ಲ ಎನ್ನುವ ನಾಟಕವಾಡುವುದು ಬೇಡ. ಎರಡೇ ಎರಡು ಕ್ಲಿಕ್ಕಿನಲ್ಲಿ ಮಕ್ಕಳು ಅಶ್ಲೀಲ, ಲೈಂಗಿಕ ಚಿತ್ರ, ದೃಶ್ಯಗಳನ್ನು ತಲುಪಿಬಿಡಬಹುದು.

ನಾವು ಮೊಬೈಲ್ ಮೂಲಕ ಆನ್ ಲೈನ್ ಶಿಕ್ಷಣ ನೀಡುತ್ತೇವೆ ಎಂದಾಗ ಮಕ್ಕಳು ಮೊಬೈಲನ್ನು ಬಳಸುವುದು ಅವರ ಹಕ್ಕಾಗಿಬಿಡುತ್ತದೆ. ಮೊಬೈಲ್‌ನ ಅಭ್ಯಾಸದಿಂದಾಗಿ ಈಗಾಗಲೇ ಮಕ್ಕಳಲ್ಲಿ ಅವಧಾನದ ಅವಧಿ ತೀವ್ರವಾಗಿ ಕಡಿಮೆಯಾಗಿದೆ. ಮಕ್ಕಳು ಸಜೀವ ತರಗತಿಯಲ್ಲಿಯೂ ಐದು ನಿಮಿಷಕ್ಕಿಂತ ಹೆಚ್ಚು ಹೊತ್ತು ಪಾಠದ ಮೇಲೆ ಏಕಾಗ್ರತೆಯನ್ನು ಸಾಧಿಸಲು ಸೋಲುತ್ತಿದ್ದಾರೆ. ಅಂಥದರಲ್ಲಿ ಶಿಕ್ಷಣವೇ ಮೊಬೈಲ್ ಮೇಲೆ ಎಂದಾದರೆ ಗತಿ ಏನು?

ಶೈಕ್ಷಣಿಕ

ಎರಡನೆಯ ಸಮಸ್ಯೆ ಶೈಕ್ಷಣಿಕವಾದದ್ದು. ನಮ್ಮಲ್ಲಿನ ಅತ್ಯಂತ ಸಮರ್ಥ ಶಿಕ್ಷಕರೂ ಸಜೀವ ತರಗತಿಯಲ್ಲಿ ಮಕ್ಕಳ ಜೊತೆಯಲ್ಲಿ ಕಲಿಕೆಯನ್ನು ಸುಗಮಗೊಳಿಸುವುದು ಹೇಗೆ ಎಂಬ ತರಬೇತಿ, ಅನುಭವವನ್ನು ಹೊಂದಿರುತ್ತಾರೆ. ಅವರಿಗೆ ಲ್ಯಾಪ್ ಟಾಪ್ ನೋಡಿಕೊಂಡೋ, ಮೊಬೈಲ್ ಕ್ಯಾಮರಾ ನೋಡಿಕೊಂಡೋ ಪಾಠವನ್ನು ಮಾಡಿ ಎಂದು ಹೇಳಿದರೆ, ಒಂದು ರೀತಿ ಶಸ್ತಾçಸ್ತçಗಳನ್ನೇ ಕಳಚಿಟ್ಟು ಯುದ್ಧಕ್ಕೆ ಹೋಗಿ ಎಂದAದಾಗುತ್ತದೆ. ಬಹಳಷ್ಟು ಉತ್ತಮ ಶಿಕ್ಷಕರೂ ಈ ಕುರಿತು ಆಕ್ಷೇಪಿಸಿದ್ದಾರೆ.

ತರಗತಿಯಲ್ಲಿ 30 ಜನ ಮಕ್ಕಳಿದ್ದರೆ ಶಿಕ್ಷಕರಿಗೆ ಪ್ರತಿಯೊಂದು ಮಗುವಿನ ಸ್ವಭಾವ, ಅವರ ಕೌಟುಂಬಿಕ ಹಿನ್ನೆಲೆ, ಅವರ ಕಲಿಯುವ, ಸ್ಪಂದಿಸುವ ಸಾಮರ್ಥ್ಯದಲ್ಲಿನ ವ್ಯತ್ಯಾಸ ಇವೆಲ್ಲ ಗೊತ್ತಿರುತ್ತದೆ. ಅವರು ಹೇಗೋ ಒಂದು ಅದಕ್ಕೆ ತಕ್ಕ ಹಾಗೆ ಹೊಂದಿಕೊಂಡು ಪಾಠ ಮಾಡುತ್ತಾರೆ. ಆದರೆ ಇಲ್ಲಿ, ನಿರ್ಜೀವ ಕ್ಯಾಮರಾವನ್ನು ನೋಡಿಕೊಂಡು ಮಾತಾಡಬೇಕು. ಮಕ್ಕಳು ವೀಕ್ಷಿಸುತ್ತಿದ್ದಾರೆಯೇ ಎನ್ನುವುದೂ ಖಾತ್ರಿಯಿಲ್ಲ. ಇಂಥ ಹಿಂಮಾಹಿತಿ ಇಲ್ಲದ ಸಂವಹನ ಅಪೂರ್ಣ, ನಿರರ್ಥಕ.

ಅಲ್ಲದೆ, ಸಂವಹನದಲ್ಲಿ ಹಲವು ಬಗೆಯ ಭೌತಿಕ, ಮಾನಸಿಕ ‘ನಾಯ್ಸ್’ (ಅಡ್ಡಿಆತಂಕಗಳು) ಇರುತ್ತವೆ. ಅವುಗಳನ್ನು ನಿವಾರಿಸಿ ಸಂವಹನವನ್ನು ಸುಗಮಗೊಳಿಸುವುದೂ ಸಂವಹನಕಾರರ ಜವಾಬ್ದಾರಿಯಾಗಿರುತ್ತದೆ. ಆದರೆ ಈ ಸೋಕಾಲ್ಡ್ ಆನ್ ಲೈನಿನಲ್ಲಿ ಇದರ ಅರಿವೂ ಅವರಿಗೆ ಇರುವುದಿಲ್ಲ. ಅಗೋಚರ ವಿದ್ಯಾರ್ಥಿಗಳು ಕೈಯಲ್ಲಿ ಮೊಬೈಲ್ ಹಿಡಿದು ಆಕಳಿಸುತ್ತಿದ್ದರೂ ಆಯಿತು, ಕಣ್ಣು ಮುಚ್ಚಿ ನಿದ್ದೆ  ಹೋದರೂ ಆಯಿತು. ಈ ಶಂಕೆ ಮೂಡಿದ ಕೂಡಲೇ ಶಿಕ್ಷಕರು ನಿರುತ್ತೇಜಿತರಾಗಿ ಅವರ ಪಾಠ ಕೃತ್ರಿಮವಾಗುತ್ತದೆ. ಜೊತೆಗೆ ಅವರು ಪಾಠ ಮಾಡುವಾಗ, ನಿಂತ ಜಾಗದಿಂದ ಬಹಳ ಕದಲುವ ಹಾಗಿಲ್ಲ. ಲಕ್ಷö್ಮಣರೇಖೆ ದಾಟಿದರೆ ಆನ್ ಲೈನ್ ಶಿಕ್ಷಕರು ಔಟ್ ಆಫ್ ಫ್ರೇಮ್ ಆಗುತ್ತಾರೆ; ಔಟ್ ಆಫ್ ಫ್ರೇಮ್ ಆದವರು ಔಟ್ ಆಫ್ ಲೈನ್ ಆಗುತ್ತಾರೆ.

ಇನ್ನು ಕೆಲವರು ಎದುರುಗಡೆ ಕೆಲವು ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ತರಗತಿಯಲ್ಲಿ ಮಾಡುವ ಹಾಗೆಯೇ ಅವರನ್ನು ಉದ್ದೇಶಿಸಿಯೇ ಪಾಠ ಮಾಡುತ್ತಾರೆ. ಇದ್ದುದ್ದರಲ್ಲಿಯೇ ಸ್ವಲ್ಪ ಸ್ವಾರಸ್ಯಕರವಾಗಿರುತ್ತದೆ. ಆದರೆ ಇದನ್ನು ಸಾಧಿಸಲು ಕನಿಷ್ಟ ಮೂರು-ನಾಲ್ಕು ಕ್ಯಾಮರಾಗಳು, ಆಡಿಯೋ ವ್ಯವಸ್ಥೆ, ಆಡಿಯೋ ವಿಡಿಯೋ ಮಿಕ್ಸರ್ ಇತ್ಯಾದಿ ಉನ್ನತ ತಂತ್ರಜ್ಞಾನ ವ್ಯವಸ್ಥೆ ಬೇಕಾಗುತ್ತದೆ.

ಇದೆಲ್ಲದರ ನಡುವೆ ಸ್ವಲ್ಪ ಸಮಯ ಪರಿಸ್ಥಿತಿ ಹೀಗೇ ಮುಂದುರಿದರೆ ಒಂದು ಶೈಕ್ಷಣಿಕ ‘ಪರಿಣತ’ ಸಂಸ್ಥೆ ಒಂದು ಸಮೀಕ್ಷೆ ಮಾಡುತ್ತದೆ; ಈಗಿರುವ ಶಿಕ್ಷಕರು ಆನ್ ಲೈನ್ ಶಿಕ್ಷಣ ಕೊಡುವುದರಲ್ಲಿ ಅಸಮರ್ಥರಾಗಿದ್ದಾರೆ ಎಂಬ ಅಧ್ಯಯನ ವರದಿಯನ್ನು ಕೊಡುತ್ತದೆ. ಆಗ ಹೊಸ ರೀತಿಯ ಶಿಕ್ಷಕರ ದಂಡೇ ಕ್ಷೇತ್ರವನ್ನು ಆಕ್ರಮಣ ಮಾಡುತ್ತದೆ, ಸಾಂಪ್ರದಾಯಿಕ ಶಿಕ್ಷಕರು ಮೂಲೆಗುಂಪಾಗುತ್ತಾರೆ. ಇಲ್ಲವೇ, ಮತ್ತೆ ಇವರನ್ನೇ ಹೊಸ ತಂತ್ರಜ್ಞಾನಕ್ಕಾಗಿ ಸಿದ್ಧ ಮಾಡಬೇಕಾಗುತ್ತದೆ.

ತಾತ್ತ್ವಿಕ

ಬದುಕಿನ ಮೊದಲ ಐದು ವರ್ಷಗಳಲ್ಲಿ ಮಕ್ಕಳು ತಮ್ಮ ಮನೆಯ ಭಾಷೆ, ಜಾತಿ, ಸಂಸ್ಕೃತಿ, ಮೌಲ್ಯಗಳನ್ನು ಅಳವಡಿಸಿಕೊಂಡು ಸಜ್ಜಾಗಿರುತ್ತದೆ. ಅಲ್ಲಿವರೆಗೆ ಕುಟುಂಬದ ಸದಸ್ಯರಾಗಿದ್ದ ಮಕ್ಕಳನ್ನು ಈಗ ಈ ದೇಶದ ನಾಗರಿಕರನ್ನಾಗಿ ಬೆಳೆಸಬೇಕಾಗುತ್ತದೆ. ಈ ಕೆಲಸವನ್ನು ಶಾಲೆಗಳು ಮಾಡುತ್ತವೆ. ವಿದ್ಯೆ, ಜೀವನ ಕೌಶಲ, ವೃತ್ತಿ ಕೌಶಲಗಳನ್ನು ಕಲಿಸುವ ಜೊತೆ ಬಹುತ್ವದ ಮೂಲಭೂತ ಮೌಲ್ಯಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ ಶಾಲೆ. ಶಾಲೆಯ ಆವರಣದ ಹೊರಗೆ ಬೇರೆ ಬೇರೆ ಜಾತಿ, ಧರ್ಮ, ವರ್ಗದ ಜನ ಬೇರೆ ಬೇರೆ ಇರುತ್ತಾರೆ. ಆದರೆ ಶಾಲೆಯ ಆವರಣ, ಸಮಾಜವಾದಿ, ಧರ್ಮನಿರಪೇಕ್ಷ, ಜನಸತ್ತಾತ್ಮಕ ಮನೋವೃತ್ತಿ ಮತ್ತು ವರ್ತನೆಗಳನ್ನು ಅಭ್ಯಾಸ ಮಾಡಿಕೊಳ್ಳುವ ಗರಡಿಮನೆಯಾಗಿರುತ್ತದೆ. ಇದಿಲ್ಲದಿದ್ದರೆ ಶಿಕ್ಷಣದ ಮೂಲ ಉದ್ದೇಶವೇ ವಿಫಲವಾಗುತ್ತದೆ.

ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸೈದ್ಧಾಂತಿಕ ಕಲಿಕೆಯ ಜೊತೆ ಪ್ರಯೋಗಶಾಲೆಯಲ್ಲಿ, ಕಾರ್ಯಶಾಲೆಗಳಲ್ಲಿ ಕೈಯಾರೆ ಪ್ರಯೋಗ, ಕೆಲಸ ಮಾಡಿ ಕಲಿಯಬೇಕಾಗುತ್ತದೆ. ಭೌತ/ರಾಸಾಯನಿಕ/ಜೀವ ವಿಜ್ಞಾನದ ವಿಷಯಗಳಲ್ಲಿಯೂ ಪ್ರೌಢಶಾಲೆಗಳಲ್ಲಿಯೂ ಎಷ್ಟೊಂದು ಪ್ರಯೋಗಗಳನ್ನು ಕೈಯಾರೆ ಮಾಡುತ್ತೇವೆ ಎಂಬುದನ್ನು ನೆನೆಸಿಕೊಳ್ಳಿ.

ಇನ್ನು ಮುಂದುವರಿದು ಇಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ/ತರಬೇತಿಗಳಲ್ಲಂತೂ ಅಧ್ಯಾಪಕರ ಮಾರ್ಗದರ್ಶನದಲ್ಲಿ ಕೈಯಾರೆ ಮಾಡಿ ಅಭ್ಯಾಸ ಮಾಡಿಕೊಳ್ಳುವುದೇ ಹೆಚ್ಚು ಮುಖ್ಯವಾಗುತ್ತದೆ. ಇಂಥ ಪ್ರಾಯೋಗಿಕ ಕಲಿಕೆಯೇ ಮುಂದೆ ಅವರಿಗೆ ಮತ್ತು ಅವರಿಂದ ಸೇವೆಗಳನ್ನು ಪಡೆಯುವ ನಮಗೆಲ್ಲರಿಗೂ ಪ್ರಯೋಜನವಾಗುವುದು. ಆನ್ ಲೈನ್ ಪಾಠಗಳಲ್ಲಿ ಇಂಥ ಯಾವುದೇ ಸಾಧ್ಯತೆ ಇಲ್ಲವಾಗುತ್ತದೆ. ಚಟುವಟಿಕೆಗಳಿಗೆ ಸಲಹೆ ನೀಡಬಹುದು, ತೆರೆಯ ಮೇಲೆ ಮಾಡಿ ತೋರಿಸಬಹುದು. ಅದನ್ನು ನೋಡಿಕೊಂಡು ಆ ಪ್ರಯೋಗದ ಉಪಕರಣಗಳು, ವಸ್ತುಗಳು, ಯಂತ್ರಗಳು, ದೇಹಗಳು ಇಲ್ಲದೇ ಕಾರ್ಯಾನುಭವ ಪಡೆಯಲು ಸಾಧ್ಯವೇ?

ಇನ್ನು ಶಾಲೆಗಳಲ್ಲಿ ಪಠ್ಯ ಬೋಧನೆಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳೂ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ವಿವಿಧ ರೀತಿಯ ಕ್ರೀಡೆಗಳು ದೈಹಿಕ ಬೆಳವಣಿಗೆಯ ಜೊತೆ ಸ್ಪರ್ಧಾತ್ಮಕ ಮನೋಭಾವ, ಗುರಿ ಸಾಧನೆಯ ತುಡಿತ, ಜೊತೆಗೆ ಸಂಗೀತ, ನಾಟಕ, ಸಾಹಿತ್ಯ ಇತ್ಯಾದಿ ಕಲೆಗಳಲ್ಲಿ ಆಸಕ್ತಿಯನ್ನು ಮೂಡಿಸಿಕೊಳ್ಳಲೂ ಶಾಲೆಗಳು ಸಹಾಯಕ. ವ್ಯಕ್ತಿಯ ಈ ಮಾದರಿಯ ಸಮಗ್ರ ಬೆಳವಣಿಗೆಗೆ ಪೂರಕವಾಗುವಂತೆಯೇ ಶಾಲೆಯ ಸೌಕರ್ಯ, ಕಾರ್ಯವಿಧಾನಗಳನ್ನು ರೂಪಿಸಿರುವುದಲ್ಲವೇ? ಆನ್ ಲೈನ್ ಪಾಠಗಳಲ್ಲಿ, ಅದೆಷ್ಟು ಕಾಲ ನಡೆಯುತ್ತದೆಯೋ ಅಷ್ಟು ಕಾಲ, ಶಾಲೆಯ ಈ ಬಹುಮುಖ ವ್ಯಕ್ತಿ ವಿಕಸನದ ಅವಕಾಶಗಳು ತಪ್ಪಿಹೋಗುತ್ತವೆ ಎಂಬುದನ್ನು ಮರೆಯಬಾರದು.  

“ಶಿಕ್ಷಣ ಎಂದರೆ, ಶಾಲೆಗಳಲ್ಲಿ ಕಲಿತಿದ್ದನ್ನು ಮರೆತ ನಂತರ ನಮ್ಮೊಂದಿಗೆ ಉಳಿಯುವಂಥಾದ್ದು” ಎನ್ನುತ್ತಾರೆ ಅಲ್ಬರ್ಟ್ ಐನ್‌ಸ್ಟೈನ್. ಸಜೀವ ಶಿಕ್ಷಣದಿಂದ ಮಾತ್ರ ಇದು ಸಾಧ್ಯ.

 

*ಲೇಖಕರು ಮೂಲತಃ ಹೂವಿನ ಹಡಗಲಿಯವರು; ಆಕಾಶವಾಣಿಯ ನಿವೃತ್ತ ನೌಕರರು, ಕನ್ನಡದ ಬಹುಮುಖ್ಯ ವಿಜ್ಞಾನ ಲೇಖಕರು. ಸಿನಿಮಾ, ಮಾಧ್ಯಮ, ಶಿಕ್ಷಣ ವಿಷಯಗಳಲ್ಲಿ ಪರಿಣತರು. ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ, ಪ್ರಶಸ್ತಿ ಸಂದಿವೆ.

Leave a Reply

Your email address will not be published.