ಶಿವಮೊಗ್ಗ ಜಿಲ್ಲೆಯ ಮೂರು ಕರಾಳ ಯೋಜನೆಗಳು

ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜಗತ್ಪ್ರಸಿದ್ಧ ಜೋಗದ ಆಸುಪಾಸಿನಲ್ಲಿ ಒಟ್ಟು ಮೂರು ಕರಾಳ ಯೋಜನೆಗಳು ಅನುಮತಿಗಾಗಿ ಹೊಂಚುಹಾಕಿ ಕುಳಿತಿವೆ! ಸ್ಥಳೀಕರು ವಿರೋಧಿಸುತ್ತಿದ್ದಾರೆ.

ಇಪ್ಪತ್ತೊಂದನೇ ಶತಮಾನವನ್ನು ವೈರುಧ್ಯಗಳ ಶತಮಾನ ಎಂದೇ ಕರೆಯಬಹುದು. ಇತ್ತ ವೈಜ್ಞಾನಿಕ ಸಂಶೋಧನೆಗಳು, ತಂತ್ರಜ್ಞಾನಗಳು ಆಳುವ ಹೊತ್ತಿನಲ್ಲೇ, ಅತ್ತ ಪರಿಸರ, ಜೀವಿವೈವಿಧ್ಯ ನಾಶ, ಹವಾಗುಣ ಬದಲಾವಣೆ, ಬರಗಾಲ ಇತ್ಯಾದಿಗಳು ವಿಜೃಂಭಿಸುತ್ತಿವೆ. ಮಂಗಳನ ಅಂಗಳಕ್ಕೆ ಕೈಚಾಚುವ ಪ್ರಯತ್ನವನ್ನು ವಿಜ್ಞಾನದ ಮೇರುಕೃತಿ ಎಂದು ಬಣ್ಣಿಸುವ ತನ್ಮೂಲಕ ಪ್ರಕೃತಿಯನ್ನು ಬಗ್ಗಿಸಲು ಹೊರಟಿರುವ ವಾಮನ ಸ್ವರೂಪಿ ಮಾನವನ ಶ್ರೇಷ್ಠತೆಯನ್ನು ಮೆರೆಯುವ ಹೊತ್ತಿನಲ್ಲೇ, ಮಾನವ ನಿರ್ಮಿತವೇ ಆದ ಎಲ್ಲಾ ಮಾಲಿನ್ಯಗಳು ವಿಜೃಂಭಿಸುತ್ತಿವೆ.

ಶುದ್ಧಗಾಳಿ-ನೀರು-ಆಹಾರ ಮರಿಚೀಕೆಯಾಗುತ್ತಿವೆ. ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಹಳ್ಳಿಗಳನ್ನು ನುಂಗುತ್ತಾ ಸಾಗುತ್ತಿರುವ ಮಹಾನಗರಗಳ ಹಸಿವಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಆಳುವವರಿಗೆ ಸವಾಲಾಗಿ ಪರಿಣಮಿಸುತ್ತಿದೆ. ಇಡೀ ದಕ್ಷಿಣ ಭಾರತಕ್ಕೆ ನೀರುಣಿಸುವ ಪಶ್ಚಿಮಘಟ್ಟಗಳ ಶ್ರೇಣಿಯನ್ನು ಶಿಥಿಲಗೊಳಿಸುವ ಹಾಗೂ ಅಲ್ಲಿನ ಜೀವಿವೈವಿಧ್ಯವನ್ನು ಹೊಸಕಿಹಾಕುವ ಹೊಸ ಹೊಸ ಯೋಜನೆಗಳು ಧಾಂಗುಡಿಯುತ್ತಾ ಬರುತ್ತಿವೆ. ತಾತ್ಕಾಲಿಕ ಶಮನಕ್ಕಾಗಿ ಶಾಶ್ವತ ವಿನಾಶವನ್ನು ಮಾಡಲು ಹೊರಟಿರುವ ನವಯುಗದ ಅಭಿಯಂತರರ ತಾಳಕ್ಕೆ ಬುದ್ಧಿಗೇಡಿ ರಾಜಕಾರಣಿಗಳು ತಾಳ ಹಾಕುವ ಕೆಲಸ ಮಾಡುತ್ತಿರುವುದು ಅಕ್ಷಮ್ಯವಾಗಿದೆ. ಮುಂದಿನ ಪೀಳಿಗೆಯ ಹಿತದೃಷ್ಠಿಯನ್ನು ಬಲಿಗೊಟ್ಟು ಇಂದಿನ ಐಷಾರಾ ಮಿತನಕ್ಕೆ ಮಣೆ ಹಾಕುವ ಮನಃಸ್ಥಿತಿ ಖಂಡಿತಾ ಶ್ರೇಯೋಭಿಲಾಷಿ ನಡೆಯಲ್ಲ.

ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜಗತ್ಪ್ರಸಿದ್ಧ ಜೋಗದ ಆಸುಪಾಸಿನಲ್ಲಿ ಒಟ್ಟು ಮೂರು ಕರಾಳ ಯೋಜನೆಗಳು ಅನುಮತಿಗಾಗಿ ಹೊಂಚುಹಾಕಿ ಕುಳಿತಿವೆ.

ಮೊದಲನೆಯದಾಗಿ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ 2000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಯೋಜನೆ. ಒಂದು ಬಾರಿ ವಿದ್ಯುತ್ ಉತ್ಪಾದನೆಯಾದನಂತರ ಗೇರುಸೊಪ್ಪ ಅಣೆಕಟ್ಟಿನಲ್ಲಿ ಶೇಖರಣೆಯಾಗಿ ಅಲ್ಲಿ 200 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಿ ನಂತರ ಶರಾವತಿಗುಂಟ ಹರಿದು ಸಮುದ್ರ ಸೇರುತ್ತದೆ. ಕರ್ನಾಟಕ ವಿದ್ಯುತ್ ಪರಿಣತ ಧುರೀಣರ ಪ್ರಕಾರ ಹೀಗೆ ನೀರು ಸಮುದ್ರ ಸೇರುವುದು ವೇಸ್ಟ್!!

ಆದ್ದರಿಂದ, ಗೇರುಸೊಪ್ಪ ಅಣೆಕಟ್ಟಿನಿಂದ ಆ ನೀರನ್ನು ಎತ್ತಿ ತಲಕಳಲೆ ಅಣೆಕಟ್ಟಿಗೆ ತುಂಬಿಸುವುದು, ಮತ್ತು ವಿದ್ಯುತ್ ಬೇಡಿಕೆ ಇದ್ದಾಗ ತಲಕಳಲೆಯ ಅಣೆಕಟ್ಟಿನ ನೀರನ್ನು ಮತ್ತೆ ವಾಪಾಸು ಪೈಪುಗಳ ಮೂಲಕ ಧುಮ್ಮಿಕ್ಕಿಸಿ 2000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವುದು. ಇದಕ್ಕಾಗಿ ದಟ್ಟಾರಣ್ಯದಿಂದ ಕೂಡಿದ, ಅಪಾರ ಜೀವಿವೈವಿಧ್ಯ ಹೊಂದಿದ ಹಾಗೂ ಇದುವರೆಗೂ ಮನುಷ್ಯ ಪ್ರವೇಶವಾಗದ ಶರಾವತಿ ಕಣಿವೆಯ ಪ್ರದೇಶವನ್ನು ಬಳಸಿಕೊಳ್ಳುವುದು. ಅವರ ಯೋಜನಾ ವರದಿಯ ಪ್ರಕಾರ, ಈ ಯೋಜನೆಗೆ ಅವರು ಯಾವುದೇ ಕಾಡು ಹಾಳು ಮಾಡುವುದಿಲ್ಲವಂತೆ, ಕಣಿವೆಯನ್ನು ಮುನ್ನೂರು ಅಡಿಯಷ್ಟು ಕೊರೆದು ಅಲ್ಲಿ ವಿದ್ಯುದಾಗಾರವನ್ನು ಸ್ಥಾಪಿಸುವರಂತೆ.

ಮುನ್ನೂರು ಅಡಿ ಆಳ ಕೊರೆಯಲು ದೈತ್ಯ ಯಂತ್ರಗಳ ಬಳಕೆಯಾಗುತ್ತದೆ. ಕೆಲಸಗಾರರಿಗೆ, ತಾತ್ಕಾಲಿಕ ವಸತಿ ಸೌಕರ್ಯ ಮಾಡಬೇಕಾಗುತ್ತದೆ, ತಿರುಗಾಡಲು ರಸ್ತೆ ನಿರ್ಮಿಸಬೇಕಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಬೇಕಾಗುವ ಟರ್ಬೈನ್‍ಗಳನ್ನು ನೆಲದಾಳಕ್ಕೆ ಇಳಿಸಲು ಬೃಹತ್ ಕ್ರೇನ್‍ಗಳು ಬೇಕಾಗುತ್ತವೆ. ಇಷ್ಟೆಲ್ಲಾ ಮಾಡುವ ಹೊತ್ತಿಗೆ ಅಲ್ಲಿನ ಪರಿಶುದ್ಧ ಪರಿಸರ ನಾಶವಾಗದಿರುತ್ತದೆಯೇ? ಹೀಗೆ ನಾಶವಾಗುವ ಪ್ರದೇಶವನ್ನು ಮರುಸೃಷ್ಟಿ ಮಾಡಬಹುದು. ಒಂದು ಬಾರಿ ನೆಲದಾಳದಲ್ಲಿ ವಿದ್ಯುದಾಗಾರವನ್ನು ಸ್ಥಾಪಿಸಿದ ನಂತರದಲ್ಲಿ ಮತ್ತೆ ಮರು ಅರಣ್ಯೀಕರಣ ಮಾಡುತ್ತೇವೆ ಎಂಬುದು ಅವರ ವಾದ. ಅಮೇಜಾನ್ ಕಾಡಿಗಿಂತ ಹೆಚ್ಚು ದಟ್ಟವಾಗಿರುವ, ಸೂರ್ಯನ ನೆರಳನ್ನೇ ಕಾಣದ ನೆಲದಲ್ಲಿ ಇವರು ಹಸಿರನ್ನು ಮರುಸೃಷ್ಟಿ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ ಸಂಗತಿ.

3000 ಸಂಖ್ಯೆಯಲ್ಲಿ ಸುಮಾರು 600 ಸಿಂಗಳೀಕಗಳು ಈ ಪ್ರದೇಶದಲ್ಲೇ ವಾಸಿಸುತ್ತವೆ. ಬದುಕಿನ ಬಹುಪಾಲು ಮರದ ತುದಿಯಲ್ಲೇ ಕಳೆಯುವ ಸಿಂಹಬಾಲದ ಸಿಂಗಳೀಕಗಳು ಇರುವ ಪ್ರದೇಶವನ್ನು ಅತ್ಯಂತ ಪರಿಶುದ್ಧ ಹಾಗೂ ದಟ್ಟವಾದ ಅರಣ್ಯಪ್ರದೇಶವೆಂದು ಪರಿಗಣಿಸಲಾಗುತ್ತದೆ. ನೂರಾರು ಬಗೆಯ ಸಸ್ಯವೈವಿಧ್ಯಗಳು ಇರುವ ಪ್ರದೇಶದಲ್ಲಿ ಮಾತ್ರ ಇವುಗಳ ವಾಸ.

ಪಶ್ಚಿಮಘಟ್ಟಗಳ ಹೊರತಾಗಿ ಬೇರೆಲ್ಲೂ ಕಾಣಸಿಗದ ಅತ್ಯಪರೂಪದ ಸಿಂಹಬಾಲದ ಸಿಂಗಳೀಕಗಳ ತವರಿದು. ಇಡೀ ಪ್ರಪಂಚದಲ್ಲಿ ಇವುಗಳ ಸಂಖ್ಯೆ ಬರೀ ಮೂರು ಸಾವಿರವಿದೆ ಎಂಬುದನ್ನು ತಜ್ಞರು ಲೆಕ್ಕ ಮಾಡಿದ್ದಾರೆ. 3000 ಸಂಖ್ಯೆಯಲ್ಲಿ ಸುಮಾರು 600 ಸಿಂಗಳೀಕಗಳು ಈ ಪ್ರದೇಶದಲ್ಲೇ ವಾಸಿಸುತ್ತವೆ. ಬದುಕಿನ ಬಹುಪಾಲು ಮರದ ತುದಿಯಲ್ಲೇ ಕಳೆಯುವ ಸಿಂಹಬಾಲದ ಸಿಂಗಳೀಕಗಳು ಇರುವ ಪ್ರದೇಶವನ್ನು ಅತ್ಯಂತ ಪರಿಶುದ್ಧ ಹಾಗೂ ದಟ್ಟವಾದ ಅರಣ್ಯಪ್ರದೇಶವೆಂದು ಪರಿಗಣಿಸಲಾಗುತ್ತದೆ. ನೂರಾರು ಬಗೆಯ ಸಸ್ಯವೈವಿಧ್ಯಗಳು ಇರುವ ಪ್ರದೇಶದಲ್ಲಿ ಮಾತ್ರ ಇವುಗಳ ವಾಸ. ಇಂತಹ ಪ್ರದೇಶವನ್ನು ನುಂಗಿ ನೊಣೆಯುವ ಕರ್ನಾಟಕ ವಿದ್ಯುತ್ ನಿಗಮದ ಧೋರಣೆಯನ್ನು ಸ್ಥಳೀಯರು ಬಲವಾಗಿಯೇ ಖಂಡಿಸಿದ್ದಾರೆ.

ಎರಡನೆಯದಾಗಿ, ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಇತ್ತೀಚೆಗಿನ ಪ್ರಸ್ತಾವನೆ. ಇದನ್ನಂತೂ 21ನೇ ಶತಮಾನದ ಅತ್ಯಂತ ಮೂರ್ಖ ಯೋಜನೆ ಎಂದು ಘಂಟಾಘೋಷವಾಗಿ ಸಾರಲು ಅಡ್ಡಿಯಿಲ್ಲ. ಶರಾವತಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸಿರುವುದು ರಾಜ್ಯದ ವಿದ್ಯುತ್ ಬೇಡಿಕೆಗಾಗಿ. ಆಗಿನ ಕಾಲದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು, ಅದಕ್ಕಾಗಿ ವಿದ್ಯುತ್ ಬೇಕು ಎಂಬ ಯೋಚನೆಯಿಂದಾಗಿ ಒಟ್ಟು 326 ಚ.ಕಿ.ಮಿ. ದಟ್ಟಾರಣ್ಯ ಪ್ರದೇಶವು ಹಿನ್ನೀರಿನಲ್ಲಿ ಮುಚ್ಚಿಹೋಯಿತು. ಅಲ್ಲಿ ವಾಸಿಸುತ್ತಿದ್ದ ಸುಮಾರು 12 ಸಾವಿರ ಜನರ ಬದುಕೂ ಕೊಚ್ಚಿಹೋಯಿತು. ಅಪಾರ ಪ್ರಮಾಣದ ಜೀವಿವೈವಿಧ್ಯ ನಾಶವಾಯಿತು. ಆನೆ, ಕಾಡೆಮ್ಮೆಗಳಂತಹ ಪ್ರಾಣಿಗಳು ಬದುಕಿಕೊಂಡರೂ, ಇತರೆ ಚಿಕ್ಕ ನೆಲವಾಸಿಗಳು, ಬಿಲವಾಸಿಗಳು, ಮರವಾಸಿಗಳು ಶಾಶ್ವತವಾಗಿ ಜಲಸಮಾಧಿಯಾದವು. ಲಿಂಗನಮಕ್ಕಿಯ ಒಟ್ಟೂ ನೀರು ಸಂಗ್ರಹಣೆ ಪ್ರಮಾಣ 151 ಟಿ.ಎಂ.ಸಿ. ಇದರಲ್ಲಿ 6 ಟಿ.ಎಂ.ಸಿಯಷ್ಟು ಡೆಡ್ ಸ್ಟೋರೇಜ್ ಲೆಕ್ಕದಲ್ಲಿ ಇರಬೇಕು. 1819 ಅಡಿ ತುಂಬಿದಾಗ ಮಾತ್ರ 151 ಟಿ.ಎಂ.ಸಿ. ನೀರು ಸಂಗ್ರಹವಾಗುತ್ತದೆ ಎನ್ನುವುದನ್ನು ನೆನಪಿಡಬೇಕು. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಮತ್ತು ಸರ್ಕಾರದ ನಡುವೆ ಇರುವ ಒಪ್ಪಂದದ ಪ್ರಕಾರ ಲಿಂಗನಮಕ್ಕಿ ನೀರನ್ನು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸಬೇಕಾಗುತ್ತದೆ. ಇರಲಿ, ಇದನ್ನು ಬದಲಾವಣೆ ಮಾಡುವ ಅಧಿಕಾರವನ್ನು ನಮ್ಮ ವಿಧಾನಸಭೆ ಹೊಂದಿದೆ ಎಂದು ಇಟ್ಟುಕೊಳ್ಳೋಣ. ಆದಾಗ್ಯೂ ಈ ಯೋಜನೆ ಫಲಪ್ರದವಾಗುವ ಯಾವುದೇ ಲಕ್ಷಣಗಳಿಲ್ಲ.

ಲಿಂಗನಮಕ್ಕಿ ಜಲಾಶಯಕ್ಕೂ ಮತ್ತು ಬೆಂಗಳೂರಿಗೂ ಇರುವ ಎತ್ತರದ ಅಂತರ 2600 ಅಡಿಗಳು ಹಾಗೂ ದೂರ 430 ಕಿ.ಮಿ. ಸರ್ಕಾರದ ಪ್ರಕಾರ 30 ಟಿ.ಎಂ.ಸಿ. ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು, ಬೆಂಗಳೂರಿನ ಬಾಯಾರಿಕೆ ತೀರಿಸಿದ ನಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೂ ನೀರು ನೀಡುವುದು. ಇಲ್ಲೊಂದು ಉದಾಹರಣೆಯನ್ನು ನೀಡದಿದ್ದರೆ ಅಪಚಾರವಾದೀತು! ಹಾಲಿ ಸಾಗರ ನಗರದ 60 ಸಾವಿರ ಜನರಿಗೆ ನೀರು ಸರಬರಾಜು ಆಗುತ್ತಿರುವುದು ಲಿಂಗನಮಕ್ಕಿ ಜಲಾಶಯದಿಂದ. ಚೈನಾ ಗೇಟ್ ಎಂಬ ಪ್ರದೇಶದಲ್ಲಿ ಸಾಗರಕ್ಕೆ ನೀರು ಸಾಗಿಸಲು 400 ಹೆಚ್.ಪಿ.ಯ ಎರೆಡು ಪಂಪ್‍ಗಳು ದಿನ ಹದಿನಾಲ್ಕು ತಾಸು ಕೆಲಸ ಮಾಡುತ್ತಾ 81 ಲಕ್ಷ ಲೀ. ನೀರನ್ನು ತಳ್ಳುತ್ತವೆ. ಇದಕ್ಕೆ ಪ್ರತಿಯಾಗಿ ಸಾಗರ ನಗರಸಭೆ ಪ್ರತಿ ತಿಂಗಳೂ ಸಲ್ಲಿಸಬೇಕಾದ ವಿದ್ಯುತ್ ಮೊತ್ತ 9 ಲಕ್ಷ ರೂಪಾಯಿಗಳು. 430 ಕಿ.ಮಿ. ದೂರ ನೀರನ್ನು ಎತ್ತಿ ಸಾಗಿಸುವುದಕ್ಕೆ ವೆಚ್ಚವಾಗುವ ಹಣದ ಪ್ರಮಾಣ ಎಷ್ಟಿರಬಹುದು (ಎತ್ತಿನಹೊಳೆ ಯೋಜನೆಯು ವಿಫಲಗೊಂಡು ಸಾರ್ವಜನಿಕರ 18 ಸಾವಿರ ಕೋಟಿ ನೀರಲ್ಲಿ ಹೋಮವಾಗಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು). ಜೊತೆಗೆ 30 ಟಿ.ಎಂ.ಸಿ. ನೀರನ್ನು ಬೆಂಗಳೂರಿಗೆ ತಳ್ಳಲು ಲಿಂಗನಮಕ್ಕಿಯಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ತಿನ ಶೇ.30 ಪ್ರಮಾಣದ ಅಗತ್ಯವಿದೆ. ಜೊತೆಗೆ ಹೆದ್ದಾರಿಯ ಪಕ್ಕದಲ್ಲೇ ಪೈಪುಗಳನ್ನು ಅಳವಡಿಸುತ್ತಾರೆ ಎಂದರೂ ಹನನವಾಗುವ ಮರಗಳ ಸಂಖ್ಯೆ ಅಗಣಿತ. ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯೊಂದು ಬೆಂಗಳೂರಿನ ನೀರಿನ ಲೆಕ್ಕಾಚಾರದ ಅಂಕಿ-ಅಂಶ ಒದಗಿಸಿದೆ. ಬೆಂಗಳೂರಿನಲ್ಲಿ ವಾರ್ಷಿಕವಾಗಿ ಬೀಳುವ ಮಳೆಯ ಪ್ರಮಾಣ 15 ಟಿ.ಎಂಸಿ. ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ವರದಿಯ ಪ್ರಕಾರ ಬೆಂಗಳೂರಿ ನಲ್ಲಿ ನೀರು ವಿತರಣೆ ಸಮಯದಲ್ಲಿ ಸೋರಿಕೆಯಾಗುವ ಪ್ರಮಾಣ 45%. ಅಂದರೆ ನಿಜವಾಗಲೂ ಬೆಂಗಳೂರಿನಲ್ಲಿ ಬೀಳುವ ಮಳೆನೀರನ್ನು ಹಿಡಿದಿಟ್ಟುಕೊಂಡು, ಸೋರಿಕೆಯಾಗದಂತೆ ವಿತರಣೆ ಮಾಡಿದಲ್ಲಿ, ಬೆಂಗಳೂರಿನವರೇ ಕೋಲಾರಕ್ಕೆ ನೀರನ್ನು ಕೊಡುವ ಸಾಮಥ್ರ್ಯವಿದೆ. ಇಂತಹ ಸರಳ ಯೋಜನೆಯನ್ನು ಜಾರಿ ಮಾಡುವ ಬದಲು, 430 ಕಿ.ಮಿ. ದೂರದಿಂದ ನೀರೆತ್ತಿ ಒಯ್ಯುವ ಹುನ್ನಾರದ ಹಿಂದಿನ ಲೆಕ್ಕಾಚಾರವೇನು ಎಂಬುದನ್ನು ಸಾಮಾನ್ಯರೂ ಗ್ರಹಿಸಬಹುದಾಗಿದೆ.

ಮೂರನೆಯದಾಗಿ, ಜೋಗದ ಸರ್ವಋತು ಜಲಪಾತ ಯೋಜನೆ. ಇದು ಮತ್ತೊಂದು ಅತಿದೊಡ್ಡ ಮೂರ್ಖ ಯೋಜನೆ. ಈ ಹಿಂದೆ ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ಮಲೆನಾಡಿನಲ್ಲಿ ಮಳೆಗಾಲ ಎಂಬುದಿತ್ತು. ಆಗ ವಿಶ್ವವಿಖ್ಯಾತ ಜೋಗದ ಜಲಪಾತ ಅಪಾರ ಪ್ರಮಾಣದ ಪ್ರವಾಸಿಗರನ್ನು ಸೆಳೆಯುತ್ತಿತ್ತು. ಜೋಗ ಜಲಪಾತವನ್ನು ವರ್ಷವಿಡೀ ಬೀಳುವ ಹಾಗೆ ಮಾಡಿದಲ್ಲಿ ಪ್ರವಾಸೋದ್ಯಮಕ್ಕೆ ಲಾಟರಿ ಹೊಡೆದಂತೆ, ವರ್ಷಂಪೂರ್ತಿ ಪ್ರವಾಸಿಗರು ಜೋಗಕ್ಕೆ ಲಗ್ಗೆ ಹಾಕುತ್ತಾರೆ, ಇದ ರಿಂದ ರಾಜ್ಯ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ಬರುತ್ತದೆ ಎಂಬುದು ಪ್ರಾಥ ಮಿಕ ಲೆಕ್ಕಾಚಾರ. ಪ್ರಪಂಚದಲ್ಲಿ ಯಾವುದೇ ಜಲಪಾತಗಳೂ ನೈಸರ್ಗಿಕವಾಗಿ 365 ದಿನ ಧುಮ್ಮಿಕ್ಕುವುದಿಲ್ಲ. ಮಳೆಗಾಲದ ವಾತಾವರಣ ಕ್ಕೆ ಪೂರಕವಾಗಿ ಎಲ್ಲಾ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇದು ನಿಸರ್ಗ ಸಹಜವಾಗಿದ್ದರೆ ಮಾತ್ರ ನೋಡುಗರಿಗೂ ನೈಸರ್ಗಿಕ ಅನುಭೂತಿಯುಂಟಾಗಿ ಸಾರ್ಥಕತೆ ಬರುತ್ತದೆ. ಅದನ್ನು ಬಿಟ್ಟು ಬಲವಂತವಾಗಿ ವರ್ಷಂಪೂರ್ತಿ ಜಲಪಾತವನ್ನು ಹರಿಸುತ್ತೇವೆ ಎಂಬುದೇ ಅನೈಸರ್ಗಿಕ.

ಈ ಪ್ರಕ್ರಿಯೆಗೆ ಸೀತಾಕಟ್ಟೆ ಎಂಬ ಪ್ರದೇಶದಲ್ಲಿ ಅಣೆಕಟ್ಟನ್ನು ನಿರ್ಮಿಸಬೇಕಾಗುತ್ತದೆ. ಸೀತಾಕಟ್ಟೆಯ ಸುತ್ತಲಿನ 12 ಹಳ್ಳಿಗಳಲ್ಲಿ ಈಗಾಗಲೇ ಮೂರು ಬಾರಿ ಮುಳುಗಡೆಯಾದ ಕುಟುಂಬಗಳಿವೆ, ಅವರ ಕೃಷಿ ಜಮೀನು ಇದೆ. ಇವರನ್ನು ಮತ್ತೆ ನಾಲ್ಕನೇ ಬಾರಿ ಎತ್ತಂಗಡಿ ಮಾಡಬೇಕಾಗುತ್ತದೆ. ಜೊತೆಗೆ ಜಲಪಾತದ ಬುಡದಲ್ಲಿ ಬೀಳುವ ನೀರನ್ನು ಮತ್ತೆ ಎತ್ತಿ ಅಣೆಕಟ್ಟಿಗೆ ಸಾಗಿಸಲು ಕಾಮಗಾರಿ ಹಮ್ಮಿಕೊಳ್ಳಬೇಕಾಗುತ್ತದೆ. ಬುಡದಲ್ಲಿನ ಕಲ್ಲಿನ ವಿನ್ಯಾಸವನ್ನು ಒಡೆಯಲು ಡೈನಮೇಟ್ ಬಳಸಬೇಕಾಗುತ್ತದೆ (ಹಾಗಂತ ಯೋಜನಾ ವರದಿಯಲ್ಲಿ ಹೇಳಿಕೊಳ್ಳಲಾಗಿದೆ). ಇದರಿಂದ ಲಂಬವಾಗಿ ವಿನ್ಯಾಸ ಹೊಂದಿರುವ ಜೋಗ ಜಲಪಾತದ ಬಂಡೆಗಳು ಸೀಳಾಗಿ ಕೆಳಗೆ ಬೀಳುವ ಅಪಾಯವಿದೆ. ಈ ಹಿಂದೆಯೂ ಒಂದು ಬಾರಿ ಅಗಾಧ ಪ್ರಮಾಣದ ಬಂಡೆಯೊಂದು ಬಿದ್ದ ಉದಾಹರಣೆಯನ್ನು ಡಾ.ನಾ. ಡಿಸೋಜ ನೆನಪಿಸಿಕೊಳ್ಳುತ್ತಾರೆ. ಆದ್ದರಿಂದ ಅನೈಸರ್ಗಿಕವಾದ ಮತ್ತು ಜೋಗ ಜಲಪಾತದ ಅಸ್ತಿತ್ವಕ್ಕೆ ಧಕ್ಕೆ ತರಬಹುದಾದ ಯೋಜನೆಯನ್ನು ಸ್ಥಳೀಕರು ವಿರೋಧಿಸುತ್ತಿದ್ದಾರೆ. ಸೀತಾಕಟ್ಟು ಅಣೆಕಟ್ಟು ವಿರೋಧಿ ಸಮಿತಿ ಈ ಕುರಿತು ಹೋರಾಟ ನಡೆಸುತ್ತಿದೆ.

*ಲೇಖಕರು ಸಾಗರ ಬಳಿಯ ಚಿಪ್ಪಳಿ ಗ್ರಾಮದವರು. ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ಪರಿಸರ ರಕ್ಷಣೆಯಲ್ಲಿ ನಿರತ ಸ್ವ್ಯಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ. ಚಾರ್ವಾಕ ವಾರಪತ್ರಿಕೆಯಲ್ಲಿ ಉಪಸಂಪಾದಕರು.

Leave a Reply

Your email address will not be published.