ಶ್ರೇಷ್ಠ ಭಾರತಕ್ಕೆ ಬೇಕು ವೈಜ್ಞಾನಿಕ ದೃಷ್ಟಿಕೋನ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಓದಿನ ಬೇರುಗಳಿಗೆ ಹುಳು ಹತ್ತಿವೆ. ವೈಜ್ಞಾನಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಶಾಲೆ-ಕಾಲೇಜುಗಳಲ್ಲಿ ಜಾಗವಿಲ್ಲ. ಅಲ್ಲೇನಿದ್ದರೂ ಪರೀಕ್ಷೆಗೆ ತಯಾರಾಗುವುದು. ಹೆಚ್ಚಿನ ಅಂಕಗಳನ್ನು ಹೇಗೆ ಪಡೆಯುವುದು ಎಂದು ಧ್ಯೇನಿಸುವುದು.

– ಪಿ.ಬಿ.ಕೋಟೂರ

21ನೇ ಶತಮಾನ ಮತ್ತು ಮುಂಬರುವ ಸಹಸ್ರಮಾನದಲ್ಲಿ, ಯಾವುದೇ ದೇಶವು ಪ್ರಭಾವಿಯಾಗಿ, ಪ್ರಭುವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಪಂಚದಲ್ಲಿ ಮಿನುಗಬೇಕೆಂದರೆ, ಆ ದೇಶದಲ್ಲಿ ವೈಜ್ಞಾನಿಕ ಮನೋಭಾವ, ವೈಜ್ಞಾನಿಕ ಪ್ರಜ್ಞೆ, ನಿಶಿತ ಮತ್ತು ನಿರಂತರ ವಿಜ್ಞಾನ ವಿಷಯದ ಅಧ್ಯಯನ ಹಾಗೂ ಪ್ರೀತಿಯನ್ನು ಮೂಡಿಸಿಕೊಳ್ಳುವುದಷ್ಟೇ ಅಲ್ಲ ರೂಢಿಸಿಕೊಂಡು ಬೆಳೆಯಬೇಕಾಗುತ್ತದೆ.

ಭಾರತವು ಪ್ರಪಂಚದಲ್ಲಿ ಒಂದು ದೊಡ್ಡ ಪ್ರಜಾಪ್ರಭುತ್ವದ ದೇಶ. 1.3 ಶತಕೋಟಿ ಜನರು ‘ವಿವಿಧತೆಯಲ್ಲಿ ಏಕತೆ’ಯನ್ನ ನಂಬಿ ನೆಚ್ಚಿ ಬದುಕುತ್ತಿರುವ ದೇಶ. ವಿಶ್ವದಲ್ಲಿ ಅತ್ಯಧಿಕ ಸಾಫ್ಟ್ ವೇರ್ ತಂತ್ರಜ್ಞರನ್ನು ಹುಟ್ಟುಹಾಕಿದ ದೇಶ. ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತೇ ನಿಬ್ಬೆರಗಾಗುವಂತೆ ಹೊಸ ಸವಾಲುಗಳನ್ನೆದುರಿಸಿ, ಹೊಸ ಮೈಲುಗಲ್ಲುಗಳನ್ನು ದಾಟಿ, ವಿನೂತನ ದಾಖಲೆಗಳನ್ನು ಬರೆದು ಬಿಸಾಕಿದ ದೇಶ. ಒಂದೇ ಸಲಕ್ಕೆ 104 ಉಪಗ್ರಹಗಳನ್ನು ನಭಕ್ಕೆ ಚಿಮ್ಮಿ, ಯಶಸ್ವಿಯಾಗಿ ಒಯ್ದು, ಬಿಡಬೇಕಾದ ಕಕ್ಷೆಯಲ್ಲಿ ಅವುಗಳನ್ನು ಬಿಟ್ಟು, ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯಸಿದ್ಧಿ ಮಾಡಿ ತೋರಿದ ಇಸ್ರೋ ವಿಜ್ಞಾನಿಗಳ ದೇಶ, ನಮ್ಮ ಭಾರತ.

ಈ ಮಹತ್ಸಾಧನೆಯ ಜೊತೆಗೆ, ಗ್ರಾಮೀಣ ಭಾಗದಲ್ಲಿ ನಡೆದ ಕ್ರಾಂತಿಯನ್ನೊಮ್ಮೆ ಅವಲೋಕಿಸೋಣ. ಅದು ಕ್ಷೀರ ಕ್ರಾಂತಿಯ ವಿಷಯ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ ನಮ್ಮ ದೇಶ. ಗ್ರಾಮೀಣ ಭಾರತದ 80 ಲಕ್ಷಕ್ಕೂ ಅಧಿಕ ಕುಟುಂಬಗಳು ಹೈನುಗಾರಿಕೆಯನ್ನು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ಮಾರ್ಗೋಪಾಯವಾಗಿ ಉಳಿಸಿಕೊಂಡು, ಬೆಳೆಸಿಕೊಂಡು ಮುನ್ನಡೆದಿವೆ. ಸಾಮಾನ್ಯ ಜನರ ಬದುಕು ಹಿತವಾಗಿಸಲು ಹೈನುಗಾರಿಕೆಯು ಮಹತ್ವದ ಪಾತ್ರವಹಿಸುತ್ತಿದೆ. ಗುಜರಾತ್ ಮತ್ತು ಕರ್ನಾಟಕದ ಕ್ಷೀರ ಕ್ರಾಂತಿಯ ಹಿಂದೆ ಹೈನುಗಾರಿಕೆ ವಿಜ್ಞಾನದ ನಿಪುಣ ತಜ್ಞರ ಶ್ರಮವಿದೆಯೆಂಬುದನ್ನು ಅಲ್ಲಗಳೆಯಲಾಗದು.

ಗತವೈಭವ

“ಇಡೀ ಜಗತ್ತಿನ ಇತರ ದೇಶಗಳು ತಮ್ಮ ಬದುಕಿಗಾಗಿ ಕನಸೊಂದನ್ನು ಕಾಣುವ ಪೂರ್ವದಲ್ಲೇ ಭೂಮಿಯ ಮೇಲೆ ತಮ್ಮ ಕನಸಿನ ಮನೆಯನ್ನು ಕಟ್ಟಿಕೊಂಡಿರುವವರು ಯಾರಾದರೂ ಇದ್ದರೆ, ಅದು ಭಾರತೀಯರು” ಎಂದು ಫ್ರೆಂಚ್ ತತ್ತ್ವಜ್ಞಾನಿ ರೋಮೇನ್ ರೋಲಂಡ್ (1886-1946) ಹೇಳಿದ್ದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಹಾಗೆಯೇ, ಭಾರತದ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದ ಬ್ರಿಟಿಷ್ ಇತಿಹಾಸಕಾರ ಗ್ರ್ಯಾಂಟ್ ಡಫ್ ಹೇಳಿದ ಮಾತು ಬಹು ಮುಖ್ಯವೆನಿಸುತ್ತದೆ. ಅವರು “ಯುರೋಪಿನಲ್ಲಿ ಜರುಗಿವೆ ಎಂದು ನಂಬಲಾದ ಬಹುತೇಕ ವೈಜ್ಞಾನಿಕ ಆವಿಷ್ಕಾರಗಳು, ಅದೆಷ್ಟೊ ಶತಮಾನಗಳ ಮುಂಚೆನೇ ಭಾರತದಲ್ಲಿ ನಡೆದುಹೋಗಿವೆ” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, 20ನೇ ಶತಮಾನದ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ಅಲ್ಬರ್ಟ್ ಐನ್‍ಸ್ಟೀನ್ ಅವರು ಸಾವಿರಾರು ವರ್ಷಗಳ ಹಿಂದೆ ಭಾರತೀಯ ವಿಜ್ಞಾನಿಗಳ ಸಂಶೋಧನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ನಮಗೆಲ್ಲಾ ಸಂಖ್ಯೆಗಳನ್ನು ಹೇಗೆ ಎಣಿಸಬೇಕೆಂಬುದನ್ನು ಕಲಿಸಿದ ಭಾರತೀಯರಿಗೆ ನಾವು ಕೃತಜ್ಞರಾಗಿದ್ದೇವೆ. ಇದೆಲ್ಲ ನಮಗೆ ತಿಳಿಯದೆ ಹೋಗಿದ್ದರೆ ಅಮೋಘವಾದ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ” ಎಂದಿದ್ದಾರೆ.

20ನೇ ಶತಮಾನ ಮತ್ತು ಅದಕ್ಕೂ ಮುಂಚೆ ಜಗತ್ತಿನ ಬೇರೆ ಬೇರೆ ಭಾಗದಲ್ಲಿ, ಅದರಲ್ಲೂ ಯುರೋಪಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಆಗಿರಲಿ ಅಥವಾ ಆವಿಷ್ಕಾರಗಳೇ ಆಗಿರಲಿ, ಅವುಗಳಿಗೆ ಭಾರತದಲ್ಲಾದ ಅನೇಕ ಆವಿಷ್ಕಾರಗಳು ಮಾದರಿ ಮತ್ತು ಸ್ಫೂರ್ತಿದಾಯಕ ಆಗಿದ್ದವು.

ಪ್ರಖ್ಯಾತ ಖಗೋಲ ಪಂಡಿತರಾದ ಆರ್ಯಭಟರು ಕ್ರಿ.ಶ.ಪೂ 499ರಲ್ಲಿ, ಗಣಿತ ಮತ್ತು ಖಗೋಲ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪರಿಕಲ್ಪನೆಗಳನ್ನು ಈ ಜಗತ್ತಿಗೆ ಪರಿಚಯಿಸಿದರು. ಭೂಮಿಯ ವ್ಯಾಸವನ್ನು ಅಂದಾಜಿಸಿದರು. ಭೂಮಿ ಮತ್ತು ಸೂರ್ಯನ ನಡುವಿನ ಅಂತರವನ್ನು ಕಂಡುಹಿಡಿದರು.

12ನೇ ಶತಮಾನದ ಮೇರು ದಾರ್ಶನಿಕ ಮತ್ತು ಆಧ್ಯಾತ್ಮಿಕ ವಿಜ್ಞಾನಿ ಅಲ್ಲಮಪ್ರಭುಗಳ ‘ಶೂನ್ಯ ಸಂಪಾದನೆ’ ಅರಿತವರು ನಾವು. ಸೂರ್ಯ ಸಿದ್ಧಾಂತವನ್ನು ಕೇಳಿಸಿಕೊಂಡವರು ನಾವು. ವಿಶ್ವದ ಎಲ್ಲ ಲೆಕ್ಕಾಚಾರಕ್ಕೂ ಮತ್ತು ಮಾಪನಕ್ಕೂ ಬೀಜಮಂತ್ರವಾಗಿರುವ ‘ಶೂನ್ಯ’ವನ್ನು ಹುಡುಕಿಕೊಟ್ಟವರು ನಾವು. ಪ್ರಖ್ಯಾತ ಖಗೋಲ ಪಂಡಿತರಾದ ಆರ್ಯಭಟರು ಕ್ರಿ.ಶ.ಪೂ 499ರಲ್ಲಿ, ಗಣಿತ ಮತ್ತು ಖಗೋಲ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪರಿಕಲ್ಪನೆಗಳನ್ನು ಈ ಜಗತ್ತಿಗೆ ಪರಿಚಯಿಸಿದರು. ಭೂಮಿಯ ವ್ಯಾಸವನ್ನು ಅಂದಾಜಿಸಿದರು. ಭೂಮಿ ಮತ್ತು ಸೂರ್ಯನ ನಡುವಿನ ಅಂತರವನ್ನು ಕಂಡುಹಿಡಿದರು.

ಇದೇ ರೀತಿ ಭಾಸ್ಕರಾಚಾರ್ಯರು, ಕ್ರಿ.ಶ. 1185ರಲ್ಲಿ, ಭೂಮಿಯು ಸೂರ್ಯನ ಸುತ್ತ ಅಂಡಾಕಾರದಲ್ಲಿ ಸುತ್ತುವ ಪರಿಭ್ರಮಣಾವಧಿಯನ್ನು 365.25875784 ದಿನಗಳು ಎಂದು ಕರಾರುವಾಕ್ಕಾಗಿ ತಿಳಿಸಿದ್ದಾರೆ. ಇನ್ನೊಬ್ಬ ಗಣಿತ ವಿಜ್ಞಾನಿ, ಶ್ರೀಧರಾಚಾರ್ಯರು ಕ್ರಿ.ಶ.ಪೂ 1100 ರಲ್ಲಿ, ‘ವರ್ಗಸಮೀಕರಣ’ ಅಥವಾ ‘ವರ್ಗೀಯ ಸಮೀಕರಣ’ (Quadratic Equation) ವನ್ನು ಕಂಡುಹಿಡಿದಿದ್ದಾರೆ. ವಿಚಿತ್ರವೆಂದರೆ, ಇಂದಿನ ಎಲ್ಲ ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳು ಪ್ರಪ್ರಥಮವಾಗಿ ಬರೆದು, ಸಂಸ್ಕರಿಸುವ ಪ್ರೊಗ್ರ್ಯಾಮ್ ಅಂದರೆ ಈ ವರ್ಗಸಮೀಕರಣ. ಇದನ್ನು ಯಾರು ಕಂಡುಹಿಡಿದಿದ್ದಾರೆಂಬುದು ವಿದ್ಯಾರ್ಥಿಗಳಿಗಾಗಲಿ ಅಥವಾ ಕಲಿಸುವವರಿಗಾಗಲಿ ಗೊತ್ತಿಲ್ಲದೆ ಹೋಗಿದ್ದು ದುರಾದೃಷ್ಟದ ಸಂಗತಿ.

ವೈದ್ಯ ವಿಜ್ಞಾನದಲ್ಲೂ, ಭಾರತದ ಸಾಧನೆ ಅಪೂರ್ವವಾದುದು. “ಆಯುರ್ವೇದ ಮತ್ತು ಸಿದ್ಧ” ಔಷಧಗಳನ್ನು ತಯಾರಿಸಿ, ರೋಗರುಜಿನಗಳನ್ನು ನಿರೋಧಿಸಿದ ಕೀರ್ತಿ ನಮ್ಮದು. ವಿಶ್ವದ ಪ್ರಪ್ರಥಮ ಶಸ್ತ್ರಚಿಕಿತ್ಸೆಯನ್ನು ವೈದ್ಯವಿಜ್ಞಾನಿ ಸುಶ್ರುತರು ಮಾಡಿದ್ದು “ಸುಶ್ರುತ ಚರಿತ”ದಲ್ಲಿ ಪ್ರಕಟವಾಗಿದೆ.

ಭಾರತೀಯರ ಪಾಂಡಿತ್ಯವು, ಕೇವಲ ಖಗೋಲ ವಿಜ್ಞಾನ ಮತ್ತು ವೈದ್ಯ ವಿಜ್ಞಾನಕ್ಕೆ ಸೀಮಿತವಾಗದೆ -ಅಣುವಿಜ್ಞಾನ, ಶಿಕ್ಷಣ, ನಗರಯೋಜನೆ, ಶಿಲ್ಪಶಾಸ್ತ್ರ, ವಾಯು ಮತ್ತು ಜಲ ವಿಜ್ಞಾನ ಹಾಗು ಸಾಮಾಜಿಕ ವಿಜ್ಞಾನದಲ್ಲಿ ಭಾರತೀಯರದು ಎತ್ತಿದ ಕೈ.

ನವಭಾರತ

ಇಂದು ನಮ್ಮ ದೇಶದಲ್ಲಿ 10,000ಕ್ಕೂ ಹೆಚ್ಚು ವೃತ್ತಿಪರ ತಾಂತ್ರಿಕ ವಿದ್ಯಾಸಂಸ್ಥೆಗಳಿವೆ. ಅಲ್ಲಿ 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 3,100 ರಷ್ಟಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂದಾಜು 8,00,000 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.

ಅತ್ಯಂತ ಖೇದದ ಸಂಗತಿ ಏನೆಂದರೆ, ಬಹುತೇಕ ವಿದ್ಯಾರ್ಥಿಗಳಿಗೆ ತಾವು ಇಂಜಿನಿಯರಿಂಗ್ ಕೋರ್ಸ್ ಯಾಕೆ ಸೇರಿದ್ದೇವೆಂಬುದೇ ತಿಳಿದಿಲ್ಲ. ಯಾವುದೋ ಕಾರಣಕ್ಕೆ ಜೋತುಬಿದ್ದು, ಹೇಗೋ ಒಂದು ಪದವಿ ಪಡೆದರಾಯ್ತು ಎಂದುಕೊಡಿದ್ದಾರೆ. ಪದವಿ ಬಳಿಕ ಒಂದು ನೌಕರಿ. ನೌಕರಿ ಸಿಕ್ಕ ನಂತರ ಸಂಬಳ. ಮುಂದೆ ಆ ಸಂಬಳವನ್ನು ಹೆಚ್ಚಿಸಿಕೊಳ್ಳುವದರತ್ತ ಸಂಪೂರ್ಣ ಧ್ಯಾನ. ಮನೆ, ಕಾರು, ಮದುವೆ (ಆದರೆ), ಮಕ್ಕಳು (ಯಾರದೋ ಒತ್ತಾಯಕ್ಕೆ) ಮತ್ತು ಒಂದಿಷ್ಟು ವಿದ್ಯುನ್ಮಾನ ಸಲಕರಣೆಗಳು ಬದುಕಿನ ಶ್ರೇಷ್ಠ ಸಾಧನೆಗಳಾಗಿ ಬಿಡುತ್ತವೆ. ಇದೇನೂ ತಪ್ಪಲ್ಲ ಬಿಡಿ. ಇದೆಲ್ಲವನ್ನೂ ಮೀರಿದ ಒಂದು ಸಾಮಾಜಿಕ ಹೊಣೆಗಾರಿಕೆಯಿದೆ. ನಾಡಿನ ಪ್ರಗತಿಗೆ ನೀಡುವ ಸೇವೆಯಿದೆ.

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಗತಿಗಳನ್ನು ಮೀರಿ ಬೆಳೆಯುವ ದಿವ್ಯ ಅವಕಾಶವಿದೆ. ನಾವೆಲ್ಲರೂ ಇದನ್ನು ಮರೆತಿದ್ದೇವೆ ಎಂದೆನಿಸುವುದಿಲ್ಲವೆ?

ಶೈಕ್ಷಣಿಕ ವ್ಯವಸ್ಥೆಯಲ್ಲಿ ಓದಿನ ಬೇರುಗಳಿಗೆ ಹುಳು ಹತ್ತಿವೆ. ವೈಜ್ಞಾನಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಶಾಲೆ-ಕಾಲೇಜುಗಳಲ್ಲಿ ಜಾಗವಿಲ್ಲ. ಅಲ್ಲೇನಿದ್ದರೂ ಪರೀಕ್ಷೆಗೆ ತಯಾರಾಗುವುದು.

ಹೆಚ್ಚಿನ ಅಂಕಗಳನ್ನು ಹೇಗೆ ಪಡೆಯುವುದು ಎಂದು ಧ್ಯೇನಿಸುವುದು. ಅದಕ್ಕಾಗಿ ಹರಸಾಹಸ ಪಡುವುದು. ಇವು ಶಿಕ್ಷಣದ ಅವಿಭಾಜ್ಯ ಅಂಗವಾಗಿಹೋಗಿವೆ.

ಕಲಿಯುವ ಪ್ರವೃತ್ತಿ ಕುಸಿಯುತ್ತಿದೆ. ಕಲಿಸುವ ವೃತ್ತಿ ಹಾಸ್ಯಕ್ಕೊಳಗಾಗುತ್ತಿದೆ. ಜ್ಞಾನ ಪೂರೈಕೆಯ ಸರಪಳಿಯಲ್ಲಿ ಕೊಂಡಿಗಳು ಸರಿಯಾಗಿ ಬೆಸೆದುಕೊಂಡಿಲ್ಲ ಎಂಬ ಭಾವ ಒಡಮೂಡಿದೆ. ಮೂಲಭೂತ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ, ಆಧುನಿಕವೆನ್ನುವ ಸಕಲ ಕಲೆಗಳ ಆಸ್ವಾದನೆಗೆ ಜನ ಹಾತೊರೆದು ಮುಗಿಬಿದ್ದಿದ್ದಾರೆ.

ನಮ್ಮತನ ಮರೆತದ್ದು, ನಮ್ಮ ಒಕ್ಕಟ್ಟನ್ನು ಬದಿಗಿರಿಸಿದ್ದು, ನಮ್ಮ ಸಂಸ್ಕೃತಿಯನ್ನು ಮರೆತದ್ದು ಹಾಗೂ ಅಂದಿನ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ -ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಧೇನಿಸುವುದನ್ನು ಬಿಟ್ಟಿದ್ದು.

“ಓದು ಒಕ್ಕಾಲು, ಬುದ್ಧಿ ಮುಕ್ಕಾಲು” ಎಂಬುದು ಬಲ್ಲವರ ನುಡಿ. ಈಗಂತೂ ಇಂಟರನೆಟ್ನಲ್ಲಿ ತಿಳಿದುಕೊಳ್ಳಲು ಏನೇನು ಬೇಕೋ ಅದೆಲ್ಲವೂ ಕ್ಷಣಾರ್ಧದಲ್ಲಿ ಸಿಗುತ್ತಿದೆ. ಆದರೆ, ನಮಗೆಲ್ಲ ಬೇಕಿರುವುದು ಬರಿ ಮಾಹಿತಿಯೇ? ಅಥವಾ ಅದನ್ನು ಓದಿ, ಅರ್ಥೈಸಿಕೊಂಡು, ವಿಶ್ಲೇಷಣೆ ಮಾಡಿ, ವಿನ್ಯಾಸಕ್ಕಾಗಿ ಬಳಸಿಕೊಂಡು ಹಾಗೂ ನಿರ್ಧಾರ ತಗೆದುಕೊಳ್ಳುವ ಪರಿಪಾಠಕ್ಕೊ?  ಇದನ್ನು ತುಂಬಾ ಆಲೋಚಿಸಬೇಕಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಅನೇಕ ಪರಕೀಯರು ನಮ್ಮ ದೇಶದ ಮೇಲೆ ದಂಡೆತ್ತಿ ಬಂದು, ಇಲ್ಲಿನ ಜ್ಞಾನ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಹಾಳುಗೆಡುವಿದ್ದು ಅನೇಕ ಪಲ್ಲಟಗಳಿಗೆ ಕಾರಣವಾಯಿತು. ನಮ್ಮತನ ಮರೆತದ್ದು, ನಮ್ಮ ಒಕ್ಕಟ್ಟನ್ನು ಬದಿಗಿರಿಸಿದ್ದು, ನಮ್ಮ ಸಂಸ್ಕೃತಿಯನ್ನು ಮರೆತದ್ದು ಹಾಗೂ ಅಂದಿನ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ -ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಧೇನಿಸುವುದನ್ನು ಬಿಟ್ಟಿದ್ದು. ಇವೆಲ್ಲ ಇಂದಿನ ಪರಿಸ್ಥಿತಿಗೆ, ಮನಸ್ಥಿತಿಗೆ ಕಾರಣವೆನ್ನಬಹುದು.

ಆಳರಸರ ‘ದಾಸ್ಯ’ಕ್ಕೆ ನಲುಗಿದ ಭಾರತೀಯರ ಭಾವಾಂತರಂಗವು ಭವಾಂತರಂಗಕ್ಕೆ ಒಗ್ಗಿಕೊಳ್ಳದೇ ಅದೇ ಮೂರ್ನಾಲ್ಕು ಶತಮಾನದ ಹಿಂದಿನ ಡಿ.ಎನ್.ಎ.ಗಳನ್ನು ಉಳಿಸಿಕೊಂಡು ಬಿಟ್ಟಿದೆ. ತೊಡಲು ಜೀನ್ಸ್ ಬಂದವೇ ಹೊರತು, ವೈಜ್ಞಾನಿಕ ಚಿಂತನೆಗೆ ಬೇಕಾದ Jene Mutation ಆಗಲಿಲ್ಲ ಎಂಬ ಕೊರಗೂ ಕಾಡುತ್ತಿದೆ.

ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದದ ರಾಷ್ಟ್ರಗಳ ನಡುವೆ ಇರುವ ವ್ಯತ್ಯಾಸವನ್ನು ಅವುಗಳ ಸಿರಿತನ ಮತ್ತು ಬಡತನ ರೇಖೆಗಳಿಂದ ಮಾಪನ ಮಾಡುವುದಲ್ಲ. ಆಯಾಯ ರಾಷ್ಟ್ರಗಳ ಪ್ರಜೆಗಳು ಹೇಗಿದ್ದಾರೆ? ಅವರ ದೈನಂದಿನ ಬದುಕಿನ ಆದರ್ಶಗಳೇನು? ಅವರ ನಡವಳಿಕೆಗಳು, ನಂಬಿಕೆಗಳು, ಪ್ರಾಮಾಣಿಕತೆ, ಕಾಯಕ ಪ್ರವೃತ್ತಿ, ನ್ಯಾಯ ಪಾಲನೆ, ಸಾಮಾಜಿಕ ಉತ್ತರದಾಯಿತ್ವ, ಸಂಸ್ಕೃತಿ, ಪರಂಪರೆಯ ಬಗ್ಗೆ ಗೌರವ, ಕಾಯಕದಿಂದ ಬಂದ ವರಮಾನದಲ್ಲೊಂದಷ್ಟನ್ನು ಉಳಿಸುವುದು ಮತ್ತು ವಿನಿಯೋಗಿಸುವುದು, ಪೌರ-ಪ್ರಜ್ಞೆಯನ್ನು ನಿತ್ಯವೂ ತೋರಿ ಬದುಕುವುದು, ಸಮಯಪಾಲನೆ, ಶುಚಿತ್ವ, ಉತ್ಪನ್ನ ಮನೋಭಾವದಂತಹ ಅಂಶಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ.

ಒಂದು ‘ಇ-ಮೇಲ್’ನ್ನು ಕಂಡುಹಿಡಿದದ್ದು, ‘ಪ್ಯಾಡ್ ಮ್ಯಾನ್’ ಸಂಶೋಧಿಸಿದ್ದು, ಕ್ಷಿಪಣಿಗಳನ್ನು ತಯಾರಿಸಿ, ನಭಕ್ಕೆ ಜಿಗಿಸಿದ್ದು,

ಮಂಗಳ ಮತ್ತು ಚಂದ್ರನಂಗಳದ ವಾತಾವರಣಕ್ಕೆ ಕಾಲಿಟ್ಟಿದ್ದು, ಭಾರತೀಯರು ಪ್ರಪಂಚದ ಬೇರೆ ಬೇರೆ ದೇಶಗಳ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದನ್ನು, ಗತವೈಭವದ ಅನನ್ಯ ಅದಮ್ಯ ಆವಿಷ್ಕಾರಗಳ ಮುಂದೆ ಮಾದರಿಯಾಗಿ ನಿಲ್ಲಿಸ ಹೊರಟರೆ ‘ಭೂತ’ವೂ ನಕ್ಕೀತು!

ಉರು ಹೊಡೆಯುವದನ್ನು ಪ್ರಭಾವಿಸಿ, ಪ್ರೋತ್ಸಾಹಿಸುವ ಶಾಲೆಗಳು ಮಕ್ಕಳನ್ನು ‘ಹಿತ ಚಿಂತಕ’ ರನ್ನಾಗಿ ತಯಾರು ಮಾಡಬೇಕಾಗಿದೆ. ಪರೀಕ್ಷೆಯೆಂಬ ಭೂತಕ್ಕೆ ಬೆದರಿ ‘ಚಿಂತಾಕ್ರಾಂತ’ರಾಗಿ ಬದುಕುವ ಮಕ್ಕಳನ್ನು ‘ಸಮಾಜಮುಖಿ’ಯಾಗಿ ಬೆಳೆಸುವುದು ಆದ್ಯ ಕರ್ತವ್ಯವಾಗಬೇಕಾಗಿದೆ. ಪ್ರಕೃತಿ, ಪರಿಸರ ಮತ್ತು ಪ್ರಪಂಚದ ಕುರಿತು ಆಳವಾಗಿ ಯೋಚಿಸುವಂತಹ ಹಾಗು ಆ ದೆಸೆಯಲ್ಲಿ ಸೇವಾಭಾವವನ್ನು ಬೆಳೆಸಿಕೊಳ್ಳುವ ಪಠ್ಯಕ್ರಮವನ್ನು ಮತ್ತು ಕಲಿಕಾ ವಿಧಾನವನ್ನು ಶಾಲೆಗಳಲ್ಲಿ ಜಾರಿಗೆ ತರಬೇಕಾಗಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವ್ಯವಸ್ಥಾಪಕರು ತಮ್ಮ ‘ಹಣಮಟ್ಟ’ ವನ್ನು ಹೆಚ್ಚಿಸಿಕೊಳ್ಳುವ ಗುರಿಯ ಬದಲು ಶಿಕ್ಷಣದ ‘ಗುಣಮಟ್ಟ’ವನ್ನು ವೃದ್ಧಿಸುವತ್ತ ಹಾಗೂ ವೈಜ್ಞಾನಿಕ ಮನೋಭಾವವನ್ನು ಕಲಿಕೆಯಲ್ಲಿ ಉತ್ಸಾಹಿಸಿ, ಪ್ರೋತ್ಸಾಹಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಹೃದಯ ವೈಶಾಲ್ಯ ಮೆರೆಯಬೇಕೆಂದು ಆಶಿಸೋಣ.

*ಲೇಖಕರು ಐಟಿ ಉದ್ಯಮದಲ್ಲಿ ಉನ್ನತ ಅಧಿಕಾರಿ; ಸಾಹಿತಿ, ಶಿಕ್ಷಣ ತಜ್ಞ, ತರಬೇತಿದಾರರಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published.