ಸಂಕಷ್ಟದ ನಡುವೆ ಹಿಪ್ಪರಿಯ ರತ್ನವ್ವಜ್ಜಿ!

ಈ ಕುಟುಂಬದಲ್ಲಿ ಎಸ್‍ಎಸ್‍ಎಲ್‍ಸಿ ವರೆಗೆ ಓದಿರುವುದು ಮೂರನೇ ಮಗ ಮಲ್ಲಪ್ಪ ಒಬ್ಬನೇ. ಮಿಕ್ಕವರೆಲ್ಲ ಹೆಚ್ಚು ವಿದ್ಯಾವಂತರಲ್ಲ. ಎರಡನೇ ಮಗನ ಜೊತೆಯಲ್ಲಿರುವ ವೃದ್ಧ ದಂಪತಿಗೆ ಆದಾಯಕ್ಕಿಂತ ಆರೋಗ್ಯ ಸಂಬಂಧಿತ ವೆಚ್ಚಗಳೇ ಅಧಿಕವಾಗಿವೆ. ಇದು ಸಮಾಜಮುಖಿ ಮಾರ್ಚ್ ಸಂಚಿಕೆ ಮುಖಪುಟದಲ್ಲಿ ಕಂಗೊಳಿಸಿದ ರತ್ನವ್ವಜ್ಜಿ ವೃತ್ತಾಂತ!

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿನ ರತ್ನವ್ವ ಗುರುಲಿಂಗಪ್ಪ ಹೊಸಮನಿ ತನ್ನ 74ನೇ ವಯಸ್ಸಿನಲ್ಲೂ ದುಡಿಯಲು ತ್ರಾಣವಿಲ್ಲವಾದರೂ ಮನೆಯ ಮುಂದಿನ ಕಿರು ಜಾಗೆಯಲ್ಲಿ ಮಕ್ಕಳ ಮಿಠಾಯಿ ಮಾರುತ್ತ ಉದರ ಪೋಷಣೆಗೆ ಹೆಣಗುತ್ತಿದ್ದಾಳೆ. ನಿರಕ್ಷರಿಯಾಗಿರುವ ರತ್ನವ್ವಜ್ಜಿ ಮತ್ತು ಮೂರನೇ ತರಗತಿಗೆ ಓದಿಗೆ ತಿಲಾಂಜಲಿ ಇಟ್ಟ ಗುರುಲಿಂಗಪ್ಪ ದಂಪತಿಗೆ ಮೂವರು ಪುತ್ರರು. ಇವರು ಹಿಂದೂ ಲಿಂಗಾಯತರು. ಗಂಡ-ಹೆಂಡತಿ ಇಬ್ಬರೂ ಕೃಷಿ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದರು. 1 ಎಕರೆ ಜಮೀನಿನಲ್ಲಿ ಗೋವಿನ ಜೋಳ ಬೆಳೆಯಲಾಗುತ್ತಿತ್ತು. ವಯಸ್ಸಾದ ಬಳಿಕ ಎರಡನೇ ಮಗನೇ ಜಮೀನು ನೋಡಿಕೊಳ್ಳುತ್ತಾನೆ.

54 ವಯಸ್ಸಿನ ಹಿರಿಯ ಮಗ ಭೀಮಪ್ಪ ಹೊಸಮನಿ ಶೇತ್ಕಿ ಕೂಲಿ-ನಾಲಿ ಮಾಡುತ್ತ ಭಜನಾ ಮಂಡಳಿಗಳಲ್ಲಿ ಮತ್ತು ಪಾರಿಜಾತ ಆಟಗಳಲ್ಲಿ ಪಾತ್ರದಾರಿಯಾಗಿ ಅಭಿನಯಿಸುತ್ತ ಹಿಪ್ಪರಗಿ ಗ್ರಾಮಪಂಚಾಯತ್‍ನವರು ನೀಡಿರುವ ಆಶ್ರಯ ಮನೆಯಲ್ಲಿ ಪತ್ನಿ ಚಂದ್ರವ್ವ ಮತ್ತು ಇಬ್ಬರು ಪುತ್ರರು, ಓರ್ವ ಅವಿವಾಹಿತ ಪುತ್ರಿಯೊಡನೆ ವಾಸವಿದ್ದಾನೆ. ಈತನಿಗೆ ರಾಜ್ಯ ಸರ್ಕಾರದಿಂದ ರೂ.1500 ಕಲಾವಿದರ ಮಾಸಾಶನ ದೊರೆಯುತ್ತಿದೆ. 50 ವರ್ಷದ ಎರಡನೇ ಪುತ್ರ ಗುರುಪಾದಪ್ಪ ಪತ್ನಿ ಲಿಂಬೆವ್ವಳೊಡನೆ ಕೃಷಿ ಕೂಲಿ-ನಾಲಿ ಮಾಡುತ್ತಾರೆ. ಜೊತೆಗೆ ಧಾರ್ಮಿಕ ಪ್ರವಚನಗಳನ್ನು ನೀಡುತ್ತಾರೆ. ಈ ದಂಪತಿಗೆ ವಿವಾಹಿತೆ ಪುತ್ರಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ವಾಹನ ಚಾಲಕನಾಗಿರುವ ಮಗ ಇದ್ದಾರೆ. 48 ವರ್ಷದ ಮೂರನೇ ಪುತ್ರ ಮಲ್ಲಪ್ಪ ಪತ್ನಿ ಸುನೀತಾಳೊಡನೆ ಪಂಜಾಬ್ ರಾಜ್ಯದ ಚಂಡೀಗಡ್‍ದಲ್ಲಿ ಪೊಲೀಸ್ ಪೇದೆಯಾಗಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದು, ಹಿರಿಯ ಮಗ ಇಂಜಿನಿಯರಿಂಗ್ ವ್ಯಾಸಂಗದಲ್ಲಿದ್ದರೆ, ಕಿರಿಯ ಪುತ್ರ 10ನೇ ತರಗತಿಯಲ್ಲಿದ್ದಾನೆ.

ಈ ಕುಟುಂಬದ ಮೂಲ ಸ್ಥಾನ ಹಿಪ್ಪರಗಿ ಗ್ರಾಮವೇ ಆಗಿದೆ. ಪಿತ್ರಾರ್ಜಿತವಾಗಿದ್ದ 1 ಎಕರೆ ಜಮೀನು ಹಿಪ್ಪರಗಿ ಜಲಾಶಯ ನಿರ್ಮಾಣವಾದ ಬಳಿಕ ಸಂಪೂರ್ಣ ಜೌಗು ಹಿಡಿದು ಮುಷ್ಠಿ ಬೆಳೆಯೂ ಬಾರದ ದುಸ್ಥಿತಿಯಲ್ಲಿದೆ. ರತ್ನವ್ವಜ್ಜಿ ಕುಟುಂಬಕ್ಕೆ ವಾಸಿಸಲು ಮನೆ ಇರದ ಕಾರಣಕ್ಕೆ ಈಕೆಯ ಅಣ್ಣ ರಾಮನಗೌಡ ಪಾಟೀಲ ತನ್ನ ಮನೆಯ ಅರ್ಧ ಭಾಗವನ್ನು ಈ ಕುಟುಂಬಕ್ಕೆ ನೀಡಿದ್ದಲ್ಲದೇ 1 ಎಕರೆ ಜಮೀನು ಕೂಡ ಸಹೋದರಿಗೆ ಕಾಣಿಕೆಯಾಗಿ ನೀಡಿದ್ದಾರೆ. ಸಹೋದರ ನೀಡಿದ ಜಮೀನಿನಿಂದ ವಾರ್ಷಿಕ ರೂ.15000 ಆದಾಯವಿದೆ.

ರತ್ನವ್ವಜ್ಜಿ ಮತ್ತು ಗುರುಲಿಂಗಪ್ಪ ದಂಪತಿ ಜನಪದ ಗಾಯಕರು; ಇಬ್ಬರಿಗೂ ಸೇರಿ ರೂ.3000 ಸರ್ಕಾರದ ಮಾಸಾಶನ ಜಮೆಯಾಗುತ್ತಿದೆ ಅಂಗಡಿಯಿಂದ ದಿನಕ್ಕೆ ರೂ.50-60 ದೊರಕುತ್ತಿದೆ. ತಮ್ಮ ಕುಟುಂಬಗಳ ನಿರ್ವಹಣೆಯಲ್ಲೇ ಹೈರಾಣಾಗುತ್ತಿರುವ ಮಕ್ಕಳಿಂದ ಹೆಚ್ಚಿನ ನೆರವು ಸಿಗುವಂತಿಲ್ಲ. ಇನ್ನು ಉಳಿತಾಯ ಮತ್ತು ಹೂಡಿಕೆ ಎಂಬ ಪ್ರಶ್ನೆಯೇ ಅಪ್ರಸ್ತುತ. ಆದರೆ ಪಾಶ್ರ್ವವಾಯು ಪೀಡಿತ ಪತಿಗೆ ಚಿಕಿತ್ಸೆ, ದಿನನಿತ್ಯದ ಔಷಧೋಪಚಾರದ ಖರ್ಚು ತಪ್ಪದು. ಮಂಡಿ ಚಿಪ್ಪುಗಳ ಸವಕಳಿಯಿಂದಾಗಿ ನಡೆದಾಡಲೂ ಬಾರದ ರತ್ನವ್ವಜ್ಜಿ ವಾಕರ್ ಸಹಾಯದಿಂದ ಅಂಗಡಿಗೆ ತೆರಳುವ ಮತ್ತು ತನ್ನ ಯಾತನಾಮಯ ನೋವಿನ ನಡುವೆಯೂ ಚಿಣ್ಣರ ಪ್ರೀತಿಯ ರತ್ನವ್ವಜ್ಜಿಯಾಗಿ ವ್ಯಾಪಾರದತ್ತ ತೊಡಗಿಸಿಕೊಂಡಿರುವುದು ಅವಳ ದಿಟ್ಟತನದ ಪ್ರತೀಕ.

ಈ ಕುಟುಂಬದಲ್ಲಿ ಎಸ್‍ಎಸ್‍ಎಲ್‍ಸಿ ವರೆಗೆ ಓದಿರುವುದು ಮೂರನೇ ಮಗ ಮಲ್ಲಪ್ಪ ಒಬ್ಬನೇ. ಮಿಕ್ಕವರೆಲ್ಲ ಹೆಚ್ಚು ವಿದ್ಯಾವಂತರಲ್ಲ. ಎರಡನೇ ಮಗನ ಜೊತೆಯಲ್ಲಿರುವ ವೃದ್ಧ ದಂಪತಿಗೆ ಆದಾಯಕ್ಕಿಂತ ಆರೋಗ್ಯ ಸಂಬಂಧಿತ ವೆಚ್ಚಗಳೇ ಅಧಿಕವಾಗಿವೆ. ಜೌಗು ಹಿಡಿದ ಜಮೀನಿನ ಮೇಲಿರುವ ರೂ.50000 ಸಾಲ ಮನ್ನಾ ಆಗಿಲ್ಲ. ಸ್ಥಳೀಯ ಪಿಕೆಪಿಎಸ್‍ನಲ್ಲಿ ರತ್ನವ್ವಜ್ಜಿ ಹೆಸರಿನ ಜಮೀನಿನ ರೂ.43000 ಸಾಲ ಮನ್ನಾ ಆಗುವ ಸರದಿಯಲ್ಲಿದೆ. ಕೈಸಾಲ ಮಾಡುವುದಕ್ಕಿಂತ ಹೊಟ್ಟೆಗಿಲ್ಲದೆ ಸಾಯುವುದೇ ಲೇಸೆನ್ನುವುದು ರತ್ನವ್ವಜ್ಜಿ ನಂಬಿಕೆ.

ಮನೆಗೆ ಪತ್ರಿಕೆ ಹಾಕಿಸುತ್ತಿಲ್ಲ. ವಿರಾಮದಲ್ಲಿ ದೂರದರ್ಶನ ವೀಕ್ಷಿಸುತ್ತಾರೆ. ಶುದ್ಧ ಶಾಕಾಹಾರಿ ಕುಟುಂಬ. ಇದೂವರೆಗೆ ಹೆಲ್ತ್‍ಕಾರ್ಡ್ ವಿತರಣೆಯಾಗಿಲ್ಲ. ಕಲಾವಿದ ಗುರುಲಿಂಗಪ್ಪಗೆ ಬರುತ್ತಿದ್ದ ಕೇಂದ್ರ ಸರ್ಕಾರದ ರೂ.4000 ಮಾಸಾಶನ 2015ರಿಂದ ನಿಂತುಹೋಗಿದೆ. ‘ಯಾರನ್ನು ಸಂಪರ್ಕಿಸಬೇಕು ಎಂಬುದೇ ತೋಚುತ್ತಿಲ್ಲ’ ಎಂದು ಗುರುಲಿಂಗಪ್ಪ ಅಲವತ್ತುಕೊಳ್ಳುತ್ತಾರೆ.

Leave a Reply

Your email address will not be published.