‘ಸಂಗಂ’ ಸಾಹಿತ್ಯ ಪರಂಪರೆ ಕಸಿಗೊಂಡ ‘ಜೇನುಮಲೆಯ ಹೆಣ್ಣು’

‘ಜೇನುಮಲೆಯ ಹೆಣ್ಣಿ’ಗೂ ‘ಎರುಮೈನಾಡಿನ ಎಮ್ಮೆ ಕುಲದ ಹೊಳೆ ಮಿತ್ರ’ ಗಂಡಿಗೂ ನಿತ್ಯ ರತ್ಯೋತ್ಸವ ಜರುಗಿದಂತೆ ಭಾಸವಾಗುತ್ತದೆ. ನಡುವಯಸ್ಸು ದಾಟಿದ ಕವಿಯತ್ರಿ ಹದಿಹರೆಯದ ಭಾವಸ್ಥರದಲ್ಲಿ ನಿಂತು ಹಾಡುಕಟ್ಟುತ್ತಾರೆ. ಸಂಗಂ ಸಾಹಿತ್ಯದಲ್ಲಿ ಎದ್ದು ಕಾಣುವ ‘ಪುರಂ’ ಪದ್ಯಜಾತಿಯ ವೀರಯುಗದ ಸಲ್ಲಕ್ಷಣಗಳಾದ ವೀರ, ಧೈರ್ಯ, ಸಾಹಸ, ದಾನಾದಿ ಗುಣಗಳನ್ನು ಇಲ್ಲಿಯೂ ಚಿತ್ರಿಸಲು ಹೋಗಿ ಕಾವ್ಯ ಸೋಲುತ್ತದೆ; ಜಾಳು ಜಾಳಾಗುತ್ತದೆ.

ಪ್ರೊ. ಶಿವರಾಮಯ್ಯ

ಜೇನುಮಲೆಯ ಹೆಣ್ಣು
ಕಾವ್ಯ ಗುಚ್ಛ

ಹೆಚ್.ಆರ್.ಸುಜಾತಾ
ಪುಟ: 108 ಬೆಲೆ: ರೂ.100

ಪ್ರಥಮ ಮುದ್ರಣ: 2020
ಪ್ರಕಾಶನ: ನಗುವನ ಕ್ರಿಯೇಷನ್ಸ್,
ನಂ. 170, 11ನೇ ಕ್ರಾಸ್, 3ನೇ ಮುಖ್ಯರಸ್ತೆ,
ರಾಜಾಮಹಲ್ ವಿಲಾಸ್ 2ನೇ ಹಂತ,
ಬೆಂಗಳೂರು-560094

ಕ್ರಿ.ಪೂ. ಸು.2ನೇ ಶತಮಾನದಿಂದ ಕ್ರಿ.ಶ. ಸು.3ನೇ ಶತಮಾನಕ್ಕೆ ಸೇರಿದ ‘ಸಂಗಂ’ ಕಾಲದ ಕವನಗಳು ತಮ್ಮ ಪ್ರಾಚೀನತೆಯಿಂದಲೂ, ಭಾವಗೀತಾತ್ಮಕ ಹಾಗೂ ಸೆಕ್ಯೂಲರ್ ಗುಣಗಳಿಂದಲೂ ನಮಗೆ ಬೆರಗು ಹುಟ್ಟಿಸುವಂತಿವೆ ಎಂಬುದಾಗಿ ಪ್ರೊ. ಷ.ಶೆಟ್ಟರ್ ಅವರ ‘ಶಂಗಂ ತಮಿಳಗಂ ಮತ್ತು ಕನ್ನಡನಾಡು-ನುಡಿ’ ಹಾಗೂ ಕುವೆಂಪು ಭಾಷಾಭಾರತಿ ಪ್ರಕಟಿಸಿರುವ ‘ನಿಚ್ಚಪೊಸತು’ ಎಂಬ ಕೃತಿಗಳಿಂದ ತಿಳಿದು ಬರುತ್ತದೆ.

ತಮಿಳುನಾಡಿನಲ್ಲಿ ಆಳಿದ ಪ್ರಾಚೀನ ಪಾಂಡ್ಯ, ಚೋಳ, ಚೇರ ಇವರ ಕಾಲದ ಸಾಹಿತ್ಯವನ್ನು ‘ಸಂಗ’ ಸಾಹಿತ್ಯವೆಂದು ಕರೆಯಲಾಗುತ್ತದೆ. ಸಂಗಂ ಕಾಲದ ಕವಿಗಳು ಇಂದಿನ ಕೇವಲ ‘ತಮಿಳುನಾಡು’ ಮಾತ್ರವಲ್ಲದೆ ದಕ್ಷಿಣಾಪಥದಲ್ಲೆಲ್ಲಾ ತಿರುಗಾಡುತ್ತಾ ಕಾವ್ಯ ರಚನೆ ಮಾಡಿರುವಂತೆ ಕಂಡು ಬರುತ್ತದೆ. ತಮಿಳು ಭಾಷಾ ಪ್ರದೇಶದ ಹೊರಗಿದ್ದವರಾದರೂ ಕೂಡ ಕೆಲವು ತಮಗೆ ಅನ್ನ ಆಶ್ರಯ ನೀಡಿದ ಸಣ್ಣಪುಟ್ಟ ಪಾಳೇಗಾರರ ಶೌರ್ಯ, ಸಾಹಸ, ಧೈರ್ಯ, ದಾನಾದಿ ಗುಣಗಳನ್ನು ಕುರಿತು ತಮಿಳಿನಲ್ಲಿ ಲಾವಣಿ ರೂಪ(ಬ್ಯಾಲೆಡ್ಸ್)ದ ಹಾಡುಕಟ್ಟಿ ಹಾಡುತ್ತ ತಿರುಗಾಡಿದ ಚಾರಣ ಕವಿಗಳಿವರು.

ಸಂಗಂ ಸಾಹಿತ್ಯದ ಹಿರಿಮೆ ಗರಿಮೆ ಕೇವಲ ಅದರ ಪ್ರಾಚೀನತೆಯಿಂದ ಮಾತ್ರ ಬಂದದ್ದಲ್ಲ. ಅದರ ಸತ್ವ ಅಂತಿದೆ. ಇದೊಂದು ಸಮೂಹ ರಚನೆಯಾಗಿದೆ ಎಂಬುದನ್ನು ತಮಿಳಿನ ಪ್ರಾಚೀನ ಶಾಸ್ತ್ರ ಗ್ರಂಥ ‘ತೊಲ್ಗಾಪ್ಪಿಯಂ’ದಿಂದ ತಿಳಿದು ಬರುತ್ತದೆ. ಅದರಲ್ಲಿ ಮನುಷ್ಯರ ವಯಕ್ತಿಕ ಬದುಕಿನ ಭಾವನೆಗಳನ್ನು ಅಭಿವ್ಯಕ್ತಿಸುವ ಸಾಹಿತ್ಯವನ್ನು ‘ಅಂಗಂ’ ಎಂದೂ, ಮನುಷ್ಯರ ಸಾಮಾಜಿಕ ಬದುಕನ್ನು ಅಭಿವ್ಯಕ್ತಿಸುವ ಸಾಹಿತ್ಯವನ್ನು ‘ಪುರಂ’ ಎಂದೂ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ‘ಅಗಂ’ ಎಂಬುದು ‘ಒಳ’ಎಂದೂ ‘ಮನಸ್ಸು’ ಎಂದೂ ಅರ್ಥಕೊಟ್ಟರೆ, ‘ಪುರಂ’ ಎಂಬುದು ‘ಅಗಂ’ ಬದುಕಿಗೆ ಹೊರತಾದ ಸಾರ್ವಜನಿಕ ಬದುಕಾಗಿರುತ್ತದೆ ಎಂದೂ ವಿವರಿಸಲಾಗಿದೆ. ‘ಪುರಂ’ ಎಂಬುದು (ಹೊರ) ಜೀವನದಲ್ಲಿ ನಡೆಯುವ ಯುದ್ಧ, ವೀರ, ದಾನ ಮೊದಲಾದ ಸಾರ್ವಜನಿಕ ವಿಷಯಗಳ ಅಡಿಪಾಯದಲ್ಲಿ ರಚಿತವಾದ ಹಾಡುಗಳು.

ನಮ್ಮ ಪ್ರಾಚೀನ ಕನ್ನಡ ಸಾಹಿತ್ಯವನ್ನು ಕುರಿತು ಹೇಳುವುದಾದರೆ ‘ಸಂಗಂ’ ಸಾಹಿತ್ಯ ಮಾದರಿಯ ಹಾಡುಗಬ್ಬ ನಮ್ಮಲ್ಲಿ ಲಭ್ಯವಿಲ್ಲ. ಕವಿರಾಜ ಮಾರ್ಗಕಾರ ಹೇಳುವ ‘ಚತ್ತಾಣ’ ಮತ್ತು ‘ಬೆದಂಡೆ’ ಎಂಬ ಕಾವ್ಯ ಜಾತಿ ‘ಸಂಗಂ’ ಸಾಹಿತ್ಯದಂತ ಹಾಡುಗಬ್ಬವೇ ಆಗಿರಬಹುದೆಂದು ಊಹಿಸಬಹುದು. ಆದರೆ, ಪಂಪಾದಿ ಪೂರ್ವ ಕವಿ ಕಾವ್ಯಗಳಲ್ಲಿ ‘ಸಂಗಂ’ ಸಾಹಿತ್ಯದ ರೇಖಾ ವಿನ್ಯಾಸವಿರುವ ಕೆಲವು ಪದ್ಯಗಳು ಕಂಡುಬರುತ್ತಿವೆ. ಈ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರ 2018ರಲ್ಲಿ ಪ್ರಕಟಿಸಿರುವ ನನ್ನ “ಪಂಪ ಭಾರತ: ಒಂದು ವಿಶೇಷ ಅಧ್ಯಯನ” ಗ್ರಂಥದ ಪೂರ್ವ ಪೀಠಿಕೆಯಲ್ಲಿ “ಪಂಪಭಾರತ ಹಾಗೂ ಸಂಗ ಸಾಹಿತ್ಯ-ಒಂದು ಕಿರು ಪರಿಚಯ” ಎಂಬ ಲೇಖನವನ್ನು ನೋಡಬಹುದು.

ಇದಿಷ್ಟು ಹಿನ್ನೆಲೆಯಿಂದ ಹೆಚ್.ಆರ್.ಸುಜಾತಾ ಅವರ ‘ಜೇನುಮಲೆಯ ಹೆಣ್ಣು’ ಎಂಬೀ ಹಾಡುಗಬ್ಬವನ್ನು ನಾವು ಪ್ರವೇಶಿಸಬಹುದು. ‘ಜೇನುಮಲೆ’ ಎಂಬ ಹೆಸರೇ ನಮಗೆ ದಕ್ಷಿಣ ಕರ್ನಾಟಕದ ಮಲೆಯ ಮಹದೇಶ್ವರನ ಆಡುಂಬೊಲವಾದ ‘ಏಳು ಮಲೆ ಎಪ್ಪತ್ತು ಮಲೆ ಮೊದಲುಗೊಂಡು ಪಶ್ಚಿಮದ ಸಹ್ಯಾದ್ರಿ ಶ್ರೇಣಿವರೆಗಿನ ಪೂರ್ವ ಪಶ್ಚಿಮ ಘಟ್ಟದ ಭೂ ವಿವರಣೆ ನೆನಪಿಗೆ ಬರುತ್ತದೆ. ಆ ಭೂರಮೆಯ ದಿವ್ಯಸನ್ನಿಧಿಯಲ್ಲಿ ಬದುಕುವ ‘ಮಾನವ ಜೀವಿಗಳು ಅವರ ಆರ್ಥಿಕ ಸಾಮಾಜಿಕ ಬದುಕು ಬಾಳುಗಳು ಕೆಲಸ ನಡಾವಳಿಗಳು ಕಾಣಸಿಗುತ್ತವೆ. ಆ ಜಾಗದಲ್ಲಿರುವ ಗಿಡಮರಬಳ್ಳಿಗಳು; ಕಾಜಾಣ, ಕಾಮಳ್ಳಿ, ಕೋಗಿಲೆ, ಪಿಕಳಾರ, ಮಿಂಚುಳ್ಳಿಗಳು, ನೆತ್ತರ ಹೀರುವ ಇಂಬಳಗಳು, ಜೇನುಮಲೆಯ ಹೆಣ್ಣಿಗೂ ಬಯಲು ಸೀಮೆಯ ಗಂಡಿಗೂ ಅಂಟಿದ ನಂಟಿನ ಆಶಯಕ್ಕೆ ತಕ್ಕಹಾಗೆ ಹಾಡುಗಳಲ್ಲಿ ತೆರೆದುಕೊಳ್ಳುತ್ತವೆ; ಜೊತೆಗೆ ಋತುಮಾನ ಬದಲಾವಣೆಗೆ ತಕ್ಕಂತೆ ನಿಸರ್ಗ ಚಟುವಟಿಕೆಗಳು ಜರುಗುತ್ತವೆ. ಮಲೆನಾಡಿನ ಬೆಟ್ಟಗಟ್ಟಕ್ಕೆ ಕಾವೇರಿಯ ನೀರತಟಕ್ಕೆ ಮುಳುಗಿ ಮೀನು ಹಿಡಿವ ಮಿಂಚುಳ್ಳಿಯ ಪ್ರೇಮಗಾನ ನೆಲಮುಗಿಲು ತುಂಬುತ್ತದೆ.

ಇಂಥ ಒಂದು ಸುರ ಸುಂದರ ಸುಮಧುರ ಕಲ್ಯಾಣ ಮಂಟಪದಲ್ಲಿ ‘ಜೇನುಮಲೆಯ ಹೆಣ್ಣಿ’ಗೂ ‘ಎರುಮೈನಾಡಿನ ಎಮ್ಮೆ ಕುಲದ ಹೊಳೆ ಮಿತ್ರ’ ಗಂಡಿಗೂ ನಿತ್ಯ ರತ್ಯೋತ್ಸವ ಜರುಗಿದಂತೆ ಭಾಸವಾಗುತ್ತದೆ. ನಡುವಯಸ್ಸು ದಾಟಿದ ನಮ್ಮ ಕವಿಯತ್ರಿ ಸುಜಾತಾ ಹದಿಹರೆಯದ ಭಾವಸ್ಥರದಲ್ಲಿ ನಿಂತು ಹಾಡುಕಟ್ಟುತ್ತಾರೆ. ಶರೀರಕ್ಕೆ ಕಾಲನಗೆರೆ ಬೀಳುತ್ತದೆ. ಆದರೆ ಹಾಡಿಗಲ್ಲ. ಗಟ್ಟಿ ಕಾವ್ಯ ಕಾಲನಗೆರೆ ದಾಟುತ್ತದೆ.

ಏಳುತೆನೆ ಮುಡಿದ ಈ ‘ಜೇನುಮಲೆಯ ಹೆಣ್ಣಿ’ನ ಕಾವ್ಯ ಮೊಗದಲ್ಲಿ ಮೊದಲೆರಡು ತೆನೆಗಳಲ್ಲಿ ವರಕವಿ ಬೇಂದ್ರೆ ಅಂದಂತೆ “ಕೊಡುವುದೇನು? ಕೊಂಬುದೇನು? ಒಲವು, ಸ್ನೇಹ, ಪ್ರೇಮ, ಹೊರಗೆ ಬರಿದು, ಒಳಗೆ ಬಲಿದು, ಇದ್ದವರಿಗೆ ನೇಮ” ಎಂಬ ಹಾಡಿಗೆ ಇಂಬು ದೊರೆಯುತ್ತದೆ. ಬಯಲುಸೀಮೆಯ ಗುಡ್ಡಗಾಡಿನ ಹುಡುಗನ ಮೇಲಿನ ಮೋಹ ಜೇನುಮಲೆಯ ಹುಡುಗಿಯ ನಡೆನುಡಿಯಲ್ಲಿ ತುಡಿಯುತ್ತದೆ. ಎರಡನೆಯ ತೆನೆಯಲ್ಲಿ, ಪ್ರೇಮ ರಾಯಭಾರ ವಹಿಸುವ ಮಲೆನಾಡ ಮಿಂಚುಳ್ಳಿ, ಕಾವೇರಿ ತೀರದಲ್ಲಿ ಬಂದು ಮೊಟ್ಟೆ ಇಟ್ಟು ಮರಿ ಮಾಡಿ ಕರೆದೊಯ್ಯುವ ವಿಹಂಗಮ ಚಿತ್ರ ಹೃದಯಂಗಮ. ಈ ಗಂಡಿಗೂ ಆ ಹೆಣ್ಣಿಗೂ ಮದುವೆಯಾಗುವವರೆಗೆ ವಿರಹ ನೂರು ತರಹ ತಪ್ಪಿದ್ದಲ್ಲ ಎಂಬ ಸಂದೇಶ ರವಾನಿಸುತ್ತದೆ ಮಿಂಚುಳ್ಳಿ. ತೆನೆ ಮೂರರಲ್ಲಿ ಜೇನುಮಲೆಯ ಕಡುಬಡವ ಮುನಿಯನ ಮಗಳು ಬಯಲ ಹುಡುಗನ ಕೈಹಿಡಿದು ಕೆಂಪು ಹೊಳೆ ಕಾವೇರಿಗೆ ಕೂಡಿದಂತೆ ಗಂಡ ಹೆಂಡಿರಾದರು. ಇಲ್ಲಿಗೆ ಅವರ ಕತೆ ನಿಂತಿತು.

ನಾಲ್ಕನೆಯ ತೆನೆಯಲ್ಲಿ ಅವರು ಬೇರೊಂದು ಜೋಡಿ ಎಂಬಂತೆ ಪಾತ್ರವಹಿಸಿ ಜೀವನರಂಗಕ್ಕೆ ಇಳಿಯುತ್ತಾರೆ. ಆ ಇಬ್ಬರೂ ಜೇನುಮಲೆಯ ಮದುಮಕ್ಕಳೆ; ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ಬಂಧಿಸಿತೊ ಕಾಣೆ!’ ಎಂಬಂತೆ, ಮಹಾಶ್ವೇತೆ, ಪುಂಡರೀಕರ ಅಮರ ಪ್ರೇಮಕ್ಕೆ ಸಹಿ ಬೀಳುತ್ತದೆ. ಆದರೆ ಆಗಾಗ ವ್ಯವಹಾರ ನಿಮಿತ್ತ ಕುದುರೆ ಏರಿ ಹೋಗುವ ಆ ವೀರ ಸರದಾರ ಎಂದು ಬರುವನೊ ಏನೊ! ಹಗಲೆಲ್ಲಾ ಅವನ ಧ್ಯಾನ, ಇರುಳೆಲ್ಲಾ ಅವನ ಸಪುನ, ಬಂದಾನೊ ಬಾರನೊ ಹೇಳೆ ಮಿಂಚುಳ್ಳಿ? ಕಾಯುವಳು ಹುಡುಗಿ. ಮತ್ತು ಇದೇ ತೆನೆಯಲ್ಲಿ ಅದೇ ಗಂಡು ಅದೇ ಹೆಣ್ಣು. ಎತ್ತಿನ ಮೇಲೆ ಉಪ್ಪು ಏರಿ ಘಟ್ಟ ಹತ್ತಿ ಬೆಟ್ಟ ಇಳಿದು ಉಪ್ಪು ಮಾರುವ ಜೇನುಮಲೆಯ ಉಪ್ಪಾರ ಹುಡುಗನ ಪಾತ್ರ ಅವನದು. ಕಡಲತೀರದ ಮೀನು ಮಾರುವ ಬೆಸ್ತರ ಹುಡುಗಿ ‘ಯೋಜನಗಂಧಿ’ ಪಾತ್ರ ಇವಳದು. ಪ್ರೇಮಾಂಕುರ ಮೊಳಕೆಯೊಡೆಯುತ್ತದೆ. ಬೆಟ್ಟದ ನಲ್ಲೀಕಾಯಿ ಸಮುದ್ರದ ಉಪ್ಪು. ನಾಲಿಗೆಯಲ್ಲಿ ನೀರೂರುತ್ತದೆ. ಕವಿತೆ ಕರತಳ ರಂಗಭೂಮಿ ತಾನೆ? ಐದನೆಯ ತೆನೆಯಲ್ಲಿ ಪ್ರೇಮವನ್ನು ಅಪ್ಪನಂದು ಹಂಬಲಿಸಿ ನಂಬುವ ಹುಡುಗಿ. ಗೆಳತಿ ಅವಳ ಕುರುಡು ಪ್ರೇಮವ ಎಚ್ಚರಿಸಿ ಪೊರೆಯುತ್ತಾಳೆ.

ಆರನೆಯ ತೆನೆಯಲ್ಲಿ ಜೇನುಮಲೆಯ ಒಂದು ಮನೆ, ಅಲ್ಲಿ ತಾಯಿ ಇಲ್ಲದ ತಬ್ಬಲಿ ಹುಡುಗಿ. ಆ ತಂದೆ ಮಗಳ ವಾತ್ಸಲ್ಯ ಅರಳುಗಟ್ಟುತ್ತದೆ. ಇಂಥ ಮನೆಗೆ ತನ್ನ ಗಬ್ಬದ ಹಸು ಕಳೆದುಕೊಂಡ ಗೃಹಸ್ಥನೊಬ್ಬ ಹುಡುಕುತ್ತಾ ದಾರಿತಪ್ಪಿ ಬಂದು ತಂಗುತ್ತಾನೆ ಎಂಬಲ್ಲಿಗೆ ಈ ತೆನೆಯೆ ಮೊಟಕು.

ಏಳನೆಯ ತೆನೆಯಲ್ಲಿ ಈ ಜನಮದ ಜೋಡಿ ಹುಡುಗ  ಹುಡುಗಿಯರು ಎಲ್ಲಿ ಹೋದರು? ಎಂತಾದರು? ಪ್ರಸ್ತಾಪ ಇಲ್ಲ. ಆದರೆ ಜೇನುಮಲೆಯ ಹೆಣ್ಣುಗಳು ಮಾತ್ರ ದಂಡೆತ್ತಿ ಹೋದ ತಮ್ಮ ಗಂಡಂದಿರ ಕ್ಷೇಮ ಕಾತರಗಾಗಿ ದಾರಿ ಕಾಯುತ್ತಿದ್ದಾರೆ ಎಂಬಲ್ಲಿಗೆ ‘ಜೇನುಮಲೆಯ ಹೆಣ್ಣಿ’ ನ ಏಳು ತೆನೆಗಳು ಮುಕ್ತಾಯ.

ಈ ಕೊನೆಯ ತೆನೆಯ ಬಗ್ಗೆ ಸಹೃದಯಿ ಕವಿಯತ್ರಿ ಲಲಿತಾ ಸಿದ್ಧಬಸವಯ್ಯನವರು ಈಗಾಗಲೇ ಗುರ್ತಿಸಿರುವಂತೆ ‘ಸುಜಾತಾ ತಮ್ಮ ಅನುಭವಕ್ಕೆ ದೂರವಾದ ವರ್ಣನೆಗಳನ್ನು ಹೆಣೆಯುವ ಗೋಜಲನ್ನು ತಾನೇ ಮೈಮೇಲೆ ಎಳೆದು ಕೊಂಡಂತಾಗಿದೆ!’. ಆದ್ದರಿಂದ ಈ ತೆನೆ ಹಾಲುತುಂಬಿ ಕಾಳುಕಟ್ಟುವ ಮೊದಲೇ ‘ಕಾಡಿಗೆ ತುಂಬಿ’ ಜಳ್ಳೊಡೆದಿದೆ. ಇದಕ್ಕೆ ಕಾರಣ ಇಲ್ಲದೆ ಇಲ್ಲ. ಸಂಗಂ ಸಾಹಿತ್ಯದಲ್ಲಿ ಎದ್ದು ಕಾಣುವ ‘ಪುರಂ’ ಪದ್ಯಜಾತಿಯ ವೀರಯುಗದ ಸಲ್ಲಕ್ಷಣಗಳಾದ

ವೀರ, ಧೈರ್ಯ, ಸಾಹಸ, ದಾನಾದಿ ಗುಣಗಳನ್ನು ಇಲ್ಲಿಯೂ
ಚಿತ್ರಿಸಲು ಹೋಗಿ ಕಾವ್ಯ ಸೋಲುತ್ತದೆ; ಜಾಳು ಜಾಳಾಗುತ್ತದೆ.
ಇವತ್ತಿನ ರಾಕೆಟ್ ಯುದ್ಧ ತಂತ್ರವೆಲ್ಲಿ? ‘ಸಂಗಂ’ ಕಾಲದ
ಅಶ್ವಯುದ್ಧವೆಲ್ಲ? ಕುದುರೆ ಏರಿ ದಂಡೆತ್ತಿ ಹೋದರು ಎಂಬುದು ಇಂದಿಗೆ ಅಸಂಗತ.

‘ಜೇನುಮಲೆ ಹೆಣ್ಣು’ ನಲ್ಲಿ ‘ಸಂಗಂ’ ಸಾಹಿತ್ಯದ ಪ್ರಮುಖ ಲಕ್ಷಣಗಳಾದ ‘ಅಗಂ’ ಮತ್ತು ‘ಪುರಂ’ ನ ಛಾಯೆ ಏನೋ ಇದೆ. ಆದರೆ ಅಲ್ಲಿನ ಹರಳುಗಟ್ಟುವ ಅನುಭವೈಕ್ಯ ಭಾವತೀವ್ರತೆಯಾಗಲೀ, ಕಲೆಗಾರಿಕೆಯಾಗಲೀ ಇಲ್ಲಿ ಗೈರುಹಾಜರು. ಅಂದಿನ ಚಾರಣ ಕವಿಗಳಾದರೊ ತಮ್ಮ ತಿರುಗಾಟದಲ್ಲಿ ಕಂಡುಂಡ ಲೋಕಘಟನೆಗಳಿಗೆ ಅಲ್ಲಲ್ಲೇ ಪದಕಟ್ಟಿ ರೂಪು ಕೊಟ್ಟು ತಂಬೂರಿ ಹಿಡಿದು ಹಾಡಿಕೊಳ್ಳುತ್ತಾ ದೇಶ ಸಂಚಾರ ಮಾಡಿರುವಂತೆ ಕಂಡು ಬರುತ್ತದೆ. ಆ ಪದ್ಯಗಳು ವೀರಶೃಂಗಾರ ಚಿಮ್ಮುವ ರಸದೂಟಿಗಳು.

ಇಂಥ ಸಾಹಿತ್ಯದಿಂದ ಸ್ಫೂರ್ತಿ ಪಡೆದ ಸುಜಾತಾ ಅವರ ಹಾಡುಗಬ್ಬವು ಮಧುಗಿಡಿಯುವುದಕ್ಕಿಂತ ಜೇನುಹುಟ್ಟುಗಟ್ಟುವ ಸಂಭ್ರಮದಲ್ಲೇ ತಲ್ಲೀನವಾದಂತೆ ತೋರಿಬರುತ್ತಿದೆ.

ಆದರೂ ಕೊರೊನಾ ಲಾಕ್‌ಡೌನ್ ಕಾಲಾವಧಿಯಲ್ಲಿ ವಿಶ್ವವೇ ವಿಸ್ಮೃತಿಗೆ ಸರಿದಂತೆ ‘ಎಲ್ಲ ಮಲಗಿರುವಾಗ’ ಸುಜಾತಾ ಅವರು ‘ಸಂಗಂ’ ಸಾಹಿತ್ಯದ ಅನುವಾದ ಸಂಗ್ರಹ ‘ನಿಚ್ಚಂ ಪೊಸತು’ ಎಂಬ ಕೃತಿಯ ಅಧ್ಯಯನ, ಮನನ ಹಾಗೂ ನಿಧಿದ್ಯಾಸದಲ್ಲಿ ತೊಡಗಿಕೊಂಡಿದ್ದು, ಆ ಅಂತಃಪ್ರೇರಣೆಯಿಂದ “ಜೇನುಮಲೆಯ ಹೆಣ್ಣು” ಎಂಬೀ ತ್ರಿಪದಿ ಛಂದದ ಸದಭಿರುಚಿಯ ಹಾಡುಗಬ್ಬವನ್ನು ಕನ್ನಡ ಕಾವ್ಯ ಕ್ಷೇತ್ರಕ್ಕೆ ನೀಡಿರುವುದು ಅಭಿನಂದನಾರ್ಹ. ಇದರ ಮುಖಪುಟ ವಿನ್ಯಾಸಗೊಳಿಸಿರುವ ಕೆ. ಮಕಾಳಿಯವರ ‘ಜೇನುಮಲೆ ಹುಡುಗಿ’ ಚಿತ್ರವಂತೂ ಮತ್ತೆ ಮತ್ತೆ ನೋಡುವಂತಿದೆ.

ಇಷ್ಟಾಗಿಯೂ ಒಂದು ಮಾತು ಹೇಳಲೇಬೇಕಾಗಿದೆ. ಅದೆಂದರೆ, ಆಧುನಿಕ ಮನುಷ್ಯ ಅಭಿವೃದ್ಧಿ ವ್ಯಸನದಲ್ಲಿ ಜೇನುಮಲೆಯಂತ ಎಷ್ಟೋ ಗುಡ್ಡಗಾಡುಗಳನ್ನು ಸವರಿ, ಕಡಿದು, ಕೊಚ್ಚಿ, ಗಣಿಗಾರಿಕೆ, ಅಣೆಕಟ್ಟು, ರಸ್ತೆ, ರೆಸಾರ್ಟ್ ಮುಂತಾಗಿ ಐಷಾರಾಮಿ ವಾಸ್ತವ್ಯಗಳಿಗೆ ಅನುಕೂಲ ಮಾಡಲು ಹೋಗಿ ಕಾಡಿಗೆ ಕೊಡಲಿ ಬೀಸಿ ಆ ಪರಿಸರವನ್ನು ಹಾಳು ಮಾಡುತ್ತಲೇ ಇದ್ದಾನೆ. ರಕ್ಷಿತಾರಣ್ಯ, ಹುಲಿಧಾಮ, ಆನೆಕಾಡು ಎಂದು ಬೇಲಿ ಹಾಕಿ ಅಲ್ಲಿ ವಾಸಿಸುತ್ತಿದ್ದ ಆದಿಮ ವನವಾಸಿ ಜನರನ್ನು ಎತ್ತಂಗಡಿ ಮಾಡಿ ತಗಡು ಶಿಬಿರಗಳಲ್ಲಿ ಕೂಡಿ ಹಾಕುತ್ತಿದ್ದಾನೆ. ಉದಾಹರಣೆಗೆ ಇಂಥ ಒಂದು ಆದಿಮ ಸಮೂಹ ವಿರಾಜಪೇಟೆ ಹತ್ತಿರದ ಒಂದು ಜಾಗದಲ್ಲಿ ತೇವದ ಮರಳ ಮೇಲೆ ಟೆಂಟ್‌ಹೌಸ್‌ಗಳಲ್ಲಿ ಇದ್ದಾರೆಂದರೆ ಯಾರಾದರೂ ನಂಬುತ್ತಾರಾ?

ಆದರೆ ಕಾಡಿನಿಂದ ಹೊರಹಾಕಿದ ಆ ಜೇನು ಕುರುಬರ ಕುಟುಂಬಗಳು ವಾಸವಿರುವುದನ್ನು ನಾನೇ ಒಂದು ವರ್ಷದ ಹಿಂದೆ ಕಣ್ಣಾರೆ ನೋಡಿದ್ದೇನೆ. ಇದು ಖಂಡಾಂತರ ದುರಂತ ಕಾಲ. ಕಳೆದ ವರ್ಷ ಪುನಃ ಕೊಡಗಿನಲ್ಲಿ ಸುರಿದ ಮಾರಿ ಮಳೆಯಲ್ಲಿ ಆ ಟೆಂಟ್‌ಮನೆಗಳೂ ಕೊಚ್ಚಿಹೋಗಿ ಬೇರೊಂದು ಕಡೆ ಶಿಬಿರಗಳಲ್ಲಿದ್ದಾರಂತೆ. ಒಂದು ಕಾಲಕ್ಕೆ ಕಾಡಿನ ರಾಜರಂತೆ ಬದುಕಿ ಬಾಳಿದ ಈ ಜನ ‘ತಾವು ಮಾಡದ ತಪ್ಪಿಗೆ’ ಇಂಥ ಯಾತನಾ ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ವಾಸ್ತವ ಚಿತ್ರ ಇಂತಿರುವಾಗ ಸುಜಾತಾ ಅವರ ‘ಜೇನುಮಲೆ ಹೆಣ್ಣು’ ಎಂಬೀ ಕಾವ್ಯ ಓದಿ ಆಸ್ವಾದಿಸುವುದಾದರೂ ಹೇಗೆ? ಇದು ಜನತೆಯ ನೋವಿಗೆ ಬೆನ್ನು ತಿರುಗಿಸಿದ ಕಾವ್ಯ ಎಂದು ಹೇಳದೆ ಇರಲು ನನಗೆ ಸಾಧ್ಯವಾಗದು. ಯಾರಾದರೂ ಕಾವ್ಯವೇ ಬೇರೆ ಬದುಕೇ ಬೇರೆ ಎಂದರೆ ನನ್ನ ತಕರಾರಿಲ್ಲ.

Leave a Reply

Your email address will not be published.