ಸಂಗೀತವೂ ಈಗ ಸರಕಾಗಿಬಿಟ್ಟಿದೆ!

ಇದು ಕಾರ್ಪೋರೇಟ್ ಯುಗ. ಟಿ.ವಿ.ಚಾನಲ್‍ಗಳು, ಎಫ್.ಎಂಗಳು, ಐಪ್ಯಾಡ್, ಯೂಟ್ಯೂಬ್ ಎಲ್ಲೆಡೆ ಸಂಗೀತದ ಹೊನಲೇ ಹರಿಯುತ್ತಿದೆ. ಆದರೆ ಸ್ವಂತಿಕೆಯಿಂದ ಅಲ್ಲ. ಸರಕಾಗಿ.. ಹೀಗೆ ಸರಕಾಗಿರುವ ಕಡೆ ಬೆಲೆ ನಿರ್ಧಾರವಾಗುತ್ತದೆಯೇ ಹೊರತು ಮೌಲ್ಯವಲ್ಲ!

-ಎನ್.ಎಸ್.ಶ್ರೀಧರ ಮೂರ್ತಿ

ಕರ್ನಾಟಕದಲ್ಲಿ ಸಂಗೀತಕ್ಕೆ ಮಹತ್ವ ಮತ್ತು ಪ್ರೋತ್ಸಾಹ ಕಡಿಮೆ ಆಗುತ್ತಿದೆಯೇ ಎಂಬ ಪ್ರಶ್ನೆ ಬಂದಾಗ ಇಲ್ಲಿ  ಸಂಗೀತಕ್ಕೆ ಪರಂಪರಾನುಗತವಾಗಿ ಪ್ರಮುಖ ಸ್ಥಾನವಿತ್ತೆ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರ ಇಲ್ಲ ಎಂಬುದೇ ಆಗಿದೆ. ಕರ್ನಾಟಕದಲ್ಲಿಯೇ ಸಂಗೀತ ಕಲಿಯುವುದು ಅದನ್ನೇ ವೃತ್ತಿಯನ್ನಾಗಿ ಮಾಡಿ ಕೊಳ್ಳುವುದು ಮರ್ಯಾದಸ್ಥರ ಕೆಲಸವಲ್ಲ ಎಂಬ ಭಾವವಿದ್ದ ಕಾಲ ಕೂಡ ಇತ್ತು. ಮುಂದೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೆಂಗಸರು ಸಂಗೀತ ಕಲಿಯಲು ಕಾರಣವಾಗಿದ್ದು ವರಪರೀಕ್ಷೆಯಲ್ಲಿ ಪಾಸ್ ಎನ್ನಿಸಿಕೊಳ್ಳಬೇಕಾದ ಅತಿ ಸಣ್ಣ ಕಾರಣ.

ಸಾಹಿತ್ಯದಂತೆ ಸಂಗೀತ ಸಾಂಸ್ಕøತಿಕ ಕ್ಷೇತ್ರದ ಪ್ರಧಾನ ನೆಲೆಗೆ ಬರಲೇ ಇಲ್ಲ ಎನ್ನುವುದು ವಾಸ್ತವ. ಮುಂದೆ ಈ ನೆಲೆದಲ್ಲಿಯೇ ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್ ಅವರಂತಹ ಮೇರು ಗಾಯಕರು ಹುಟ್ಟಿ ಬಂದರು. ಆಗ ಸಂಗೀತದ ಶ್ರೀಮಂತಿಕೆಯ ಕಾಲ ರೂಪುಗೊಂಡಿತ್ತು. ಅದು ಈಗ ಮರೆಯಾಗಿದೆಯೇ? ಎಂದು ಪ್ರಶ್ನಿಸಿದರೆ ‘ಇಲ್ಲ’ ಎನ್ನದಿರುವದು ಕಷ್ಟ. ಆದರೆ ಅದಕ್ಕೆ ಹಲವಾರು ಕಾರಣಗಳಿವೆ.

ಸಂಗೀತವನ್ನು ತಪಸ್ಸಿನಂತೆ ಕಲಿತು ಸ್ವತಂತ್ರ ಸಂಗೀತ ಕಛೇರಿ ಮಾಡಲು ಕನಿಷ್ಠ ಹತ್ತು ವರ್ಷಗಳಾದರೂ ಬೇಕು ಎನ್ನುವುದು ಒಂದು ನಂಬಿಕೆ. ರಾಗಗಳು ಮತ್ತು ಅದರ ಹಿಂದಿನ ಸಂರಚನೆ ತಿಳಿಯುವುದು ಕಷ್ಟವಲ್ಲ. ಅದರ ಮೇಲೆ ಹಿಡಿತ ಸಾಧಿಸುವುದು ಮತ್ತು ಅದರಲ್ಲಿಯೇ ಅನನ್ಯತೆ ಪಡೆಯುವುದು ಸವಾಲಿನ ಸಂಗತಿ ಎನ್ನಿಸಿ ಕೊಂಡಿತ್ತು. ಆದರೆ ಎಲ್ಲಾ ಕ್ಷೇತ್ರದಂತೆ ಇಲ್ಲಿ ಕೂಡ ಇಂತಹ ತಪಸ್ಸಿನ ಮನೋಭಾವ ಹೊರಟು ಹೋಗಿದೆ.

ಇಲ್ಲಿ ಇನ್ನೊಂದು ಕುತೂಹಲಕರ ಸಂಗತಿ ಇದೆ. ಮೇರು ಸಂಗೀತಗಾರರೂ ಕೂಡ ಮೂರೋ ನಾಲ್ಕೂ ರಾಗಗಳನ್ನೇ ಪ್ರಧಾನವಾಗಿ ತಮ್ಮ ಕಛೇರಿಗಳಲ್ಲಿ ಬಳಸುತ್ತಿದ್ದರು. ಅದರ ವಿವಿಧ ಮುಖಗಳನ್ನು ತೋರಿಸುತ್ತಿದ್ದರು. ಈಗ ಹಲವು ರಾಗಗಳನ್ನು ಕಛೇರಿಯಲ್ಲಿ ಬಳಸಬಲ್ಲವರಿದ್ದಾರೆ. ಆದರೆ ಯಾವುದರಲ್ಲಿಯೂ ಪರಿಣತಿ ಮಾತ್ರ ಕಾಣಿಸುವುದಿಲ್ಲ. ಇಂತಹ ಸಮಸ್ಯೆ ಏಕೆ ಉಂಟಾಯಿತು? ಇದು ಕರ್ನಾಟಕದಲ್ಲಿ ಮಾತ್ರ ಇರುವ ಸಮಸ್ಯೆಯೇ ಎಂಬ ಪ್ರಶ್ನೆಯನ್ನು ಕೇಳಿ ಕೊಂಡರೆ ಉತ್ತರಿಸುವುದು ಕಷ್ಟ. ಇಲ್ಲಿ ಸಂಗೀತಗಾರರಿಗೆ ಸಾಕಷ್ಟು ಅವಕಾಶಗಳಿವೆ, ವೇದಿಕೆಗಳಿವೆ. ಸಂಗೀತಕ್ಕೇ ಎಂದು ಪ್ರತ್ಯೇಕ ವಿಶ್ವವಿದ್ಯಾಲಯ ಕೂಡ ಇದೆ. ಆದರೆ ಬೇರೆ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಂಗೀತ ಹಿಂದೆ ಬಿದ್ದಿರುವುದಂತೂ ಸತ್ಯ!

ಪ್ರಧಾನವಾಗಿ ಗುರುತಿಸಿದರೆ ಇಲ್ಲಿನ ಮುಖ್ಯ ಸಮಸ್ಯೆ ಎಂದರೆ ಹಿಂದೂಸ್ತಾನಿ ಮತ್ತು ಕರ್ನಾಟಕಿ ಪದ್ಧತಿಗಳ ನಡುವಿನ ಜಗಳ. ಇದು ಇತ್ತೀಚಿನ ದಿನಗಳಲ್ಲಿ ತೀರಾ ಹೆಚ್ಚಾಗುತ್ತಿದೆ. ಇದು ಎರಡೂ ಮಾದರಿಗೂ ಕೂಡ ಹಾನಿಯನ್ನೇ ಉಂಟು ಮಾಡಿದೆ ಎನ್ನುವುದು ನನ್ನ ಅನಿಸಿಕೆ. ಇಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕಿ ಈ ಎರಡೂ ಪದ್ಧತಿಗಳ ನಡುವೆ ತೀರಾ ಭಿನ್ನವಾದದ್ದು ಅನ್ನೋ ಆಗ್ರ್ಯೂಮೆಂಟ್ ಇರೋ ಹಾಗೆ, ನಮ್ಮದೇ ಒರಿಜಿನಲ್ ಮ್ಯೂಸಿಕ್ ಅನ್ನೋ ಅಹಂಕಾರದ ಮಾತುಗಳೂ ಇದೆ. ನನ್ನ ಪ್ರಕಾರ ಎರಡರ ನಡುವೆ ದೊಡ್ಡ ವ್ಯತ್ಯಾಸ ಇಲ್ಲ, ಇವೆರಡಕ್ಕೂ ಭರತನ ನಾಟ್ಯಶಾಸ್ತ್ರ, ಸಂಗೀತ ರತ್ನಾಕರ ಮೊದಲಾದ ಶಾಸ್ತ್ರಗ್ರಂಥಗಳೇ ಆಧಾರ. ಸ್ವರ ಸ್ಥಾನದ ಸ್ವರೂಪ ಕೂಡ ಒಂದೇ, ಕರ್ನಾಟಕಿಯ ಹಿಂದೋಳವನ್ನು ಹಿಂದೂಸ್ತಾನಿಯಲ್ಲಿ ಮಾಲ್‍ಕೌಂಸ್ ಎನ್ನುತ್ತಾರೆ. ಎರಡೂ ಪದ್ದತಿಯಲ್ಲೂ ಇದು ಔಢವ ರಾಗವೇ, ವ್ಯತ್ಯಾಸವಿರುವುದು ನಿರ್ವಹಣೆಯಲ್ಲಿ ಮಾತ್ರ.

ಹಿಂದೂಸ್ತಾನಿ ಪದ್ಧತಿಯಲ್ಲಿ ಶ್ರುತಿಗೆ ಮಹತ್ವ, ಅಲ್ಲಿ ಹನ್ನೆರಡೂ ಸ್ವರಗಳನ್ನು ಆಧಾರ ಷಡ್ಜಕ್ಕೆ ಸಂವಾದಿಯಾಗಿ ನಿಲ್ಲಿಸಲಾಗುತ್ತದೆ. ಕರ್ನಾಟಕಿಯಲ್ಲಿ ಶ್ರುತಿ ಕಡೆ ಅಷ್ಟು ಗಮನವಿಲ್ಲ. ಇಲ್ಲಿ ‘ಕಂಪಿತ’ ಎನ್ನುವ ಗಮಕವಿದೆ. ಇದರಿಂದ ಪ್ರತಿಸ್ವರವೂ ಬಿಗಿಯಾಗುತ್ತದೆ, ಖಚಿತವಾಗುತ್ತದೆ, ಸೂಕ್ಷ್ಮ ಸ್ವರಗಳ ಹುಡುಕಾಟ ಸಾಧ್ಯವಾಗುತ್ತದೆ. ಕರ್ನಾಟಕಿ ಸಂಗೀತದಲ್ಲಿ ತಾಳಕ್ಕೆ ಪ್ರಾಮುಖ್ಯತೆ ಇರುತ್ತದೆ. ಕರ್ನಾಟಕ ಸಂಗೀತದಲ್ಲಿ ತಾಳಕ್ಕೆ ಬೇಕಾದ ಸಮಯ ನಿಗದಿಯಾಗುವುದರಿಂದ ಸ್ಪಷ್ಟವಾಗಿ ನಿರ್ಣಯಿಕವಾಗಿ ಎಲ್ಲರಿಗೂ ಅನುಭವಕ್ಕೆ ಬರುವಂತೆ ಹಾಡುತ್ತಾರೆ. ಹಿಂದೂಸ್ತಾನಿಯಲ್ಲಿ ಕಾಲ ಪ್ರಮಾಣವನ್ನು ಮಾತ್ರ ನಿಷ್ಕರ್ಷೆ ಮಾಡಿ ಅದನ್ನು ಬಿಡಿ ಭಾಗ ಮಾಡದೆ ಯಥಾನುಕೂಲ ಸ್ವರಗಳನ್ನು ಎಳೆದು ವಿಸ್ತರಿಸುತ್ತಾರೆ. ಇವೆರಡೂ ನಿರ್ವಹಣೆಯ ದೃಷ್ಟಿಯ ವ್ಯತ್ಯಾಸಗಳೇ ಹೊರತು; ಮೂಲ ನೆಲೆಯದಲ್ಲ. ಸಂಗೀತವನ್ನು ಆಳವಾಗಿ ಬಲ್ಲವರು ಯಾರೂ ಇದನ್ನು ಒಪ್ಪುವುದೂ ಇಲ್ಲ. ಆದರೆ ಇತ್ತೀಚಿನ ಅಲ್ಪಕಲಿಕೆಯ ಪಂಡಿತರಿಂದ ಈ ಅಂತರ ತೀರಾ ಹೆಚ್ಚಾಗುತ್ತಿದೆ.

ಆಧುನಿಕತೆ ಅದರಲ್ಲಿಯೂ ತಾಂತ್ರಿಕತೆ ಕರ್ನಾಟಕದಲ್ಲಿ ಸಂಗೀತಕ್ಕೆ ಹಾನಿ ಉಂಟು ಮಾಡಿದೆಯೇ ಎನ್ನುವುದು ಗಮನಿಸಬೇಕಾದ ಮುಂದಿನ ಪ್ರಶ್ನೆ. ಇತ್ತೀಚಿನ ವರ್ಷಗಳಲ್ಲಿ ಸಂಗೀತದಲ್ಲಿ ಪ್ರವೇಶವಾದ ತಂತ್ರಜ್ಞಾನ ಹೊಸ ಹೊಸ ರೂಪವನ್ನು ಪಡೆಯುತ್ತಲೇ ಹೋಗಿದೆ. ಇವತ್ತಂತೂ ಸಿಂಥೈಜರ್ಸ್, ಸೀಕ್ವೆನ್ಯರ್ಸ್, ಸ್ಯಾಂಪ್ಲರ್ ಎಲ್ಲವೂ ಬಂದಿದೆ. ಇವತ್ತು ಹತ್ತು ವರ್ಷದ ಮಕ್ಕಳಿಗೂ ಕ್ಯಾಸಿಯೋ ಬೇಕು, ಇಲೆಕ್ಟ್ರಿಕ್  ಕೀಬೋರ್ಡ್ ಬೇಕು, ಯಾವು ಯಾವುದು ಲಭ್ಯ ಇದೆಯೋ ಅದೆಲ್ಲವೂ ಬೇಕು. ಎಲ್ಲಾ ಕಡೆ ಕಂನ್ಸೂಮರ್ ಮಾರ್ಕೆಟ್ ಕೆಲಸ ಮಾಡುವುದೇ ಹೀಗೆ. ಅದು ಕೇವಲ ಸಂಗೀತದ ಸಮಸ್ಯೆ ಅಲ್ಲ.

ನಾವು ಮೊದಲು ಹಾರ್ಮೊನಿಯಂ ಮೂಲಕ ಟ್ಯೂನ್ ಮಾಡ್ತಾ ಇದ್ದೆವು, ಮುಂದೆ ಕೀಬೋರ್ಡ್ ಬಂತು,  ಅದನ್ನೂ ಒಪ್ಪಿ ಕೊಂಡೆವು. ಸಿತಾರ್, ವಯೋಲಿನ್, ಸ್ಯಾಕ್ಸಪೋನ್, ಮ್ಯಾಂಡಲಿನ್ ಹೀಗೆ ಬೇರೆ ದೇಶದಿಂದ ಬಂದ ಎಲ್ಲವನ್ನೂ ಒಪ್ಪಿಕೊಂಡೆವು, ಆದರೆ ಅದರಲ್ಲಿ ಕೂಡ ಸೊಗಸಾದ ಕ್ಲಾಸಿಕಲ್ ಮ್ಯೂಸಿಕ್ ನುಡಿಸಿದವರು ಇದ್ದಾರೆ. ಒಂದು ಸಂಗೀತ ಇನ್ನೊಂದನ್ನ ಹೊಸಕಿ ಹಾಕುತ್ತೆ ಅನ್ನೋದೇ ತಪ್ಪು, ವೆರೈಟಿ ಅನ್ನೋದೇ ಮ್ಯೂಸಿಕ್‍ನ ಗುಣ.

ಇನ್ನೊಂದು ಚಿತ್ರಗೀತೆ ಸಂಗೀತಕ್ಕೆ ಹಾನಿ ಉಂಟು ಮಾಡುತ್ತದೆ ಎನ್ನುವ ಪ್ರಶ್ನೆ. ಚಿತ್ರಗೀತೆ ಕುರಿತು ಇರುವ ಆತಂಕಕ್ಕೆ ಎರಡು ಕಾರಣ ಇದೆ. ಒಂದು ಅದಕ್ಕಿರುವ ರೀಚ್ ಇನ್ನೊಂದು ಪಾಪ್ಯೂಲ್ಯಾರಿಟಿ. ಇದರಿಂದ ಏನಾಗಿದೆ ಅಂದರೆ ಅದರ ಶಕ್ತಿಯನ್ನು ಗುರುತಿಸುವ ಬದಲು ದ್ವೇಷಿಸುವವರು ಹೆಚ್ಚಾಗಿದ್ದಾರೆ. ಆದರೆ ನಿಜವಾದ ಸಂಗೀತಗಾರರು ಹೀಗೆ ಮಾಡಲ್ಲ. ಬಾಲಮುರುಳಿ ಕೃಷ್ಣ ನಿಜವಾದ ಸಂಗೀತ ಹುಟ್ಟುವುದೇ ಚಿತ್ರಗೀತೆಯಲ್ಲಿ ಅಂತ ಹೇಳಿ ಬಹಳ ಜನರ ದ್ವೇಷಕ್ಕೆ ಗುರಿಯಾದರು. ಚಿತ್ರಗೀತೆಗಳ ಕುರಿತು ಶಾಸ್ತ್ರೀಯ ಸಂಗೀತಗಾರರಿಗೆ ಇರುವ ದೊಡ್ಡ ಆಕ್ಷೇಪ ಅದು ಸಂಗೀತದ ಸ್ವರೂಪವನ್ನು ಹಾಳು ಮಾಡುತ್ತದೆ ಎನ್ನುವುದು.

ನಿಜವಾದ ಸಮಸ್ಯೆ ಎಂದರೆ ರಾಗವಿದ್ದರೆ ಮಾತ್ರ ಸಂಗೀತ ಎನ್ನುವ ನಂಬಿಕೆಯದು. ರಾಗ ಆಗೋದಕ್ಕೆ ಕನಿಷ್ಠ ಐದು ಸ್ವರಗಳು ಬೇಕೇ ಬೇಕು, ಆದರೆ ಚಿತ್ರಗೀತೆಗೆ ಹಾಗಲ್ಲ ಮೂರು-ನಾಲ್ಕು ಸ್ವರದಲ್ಲಿ ಕೂಡ ಕಾರ್ಡ್ ಆಗಿ ಬಿಡುತ್ತೆ. ಹೀಗಾಗಿ ಸ್ಟ್ರಾಂಗ್ ಕ್ಲಾಸಿಕಲ್ ಬೇಸ್ ಇದ್ದವರಿಗೆ ಚಿತ್ರಗೀತೆಗಳನ್ನ ಒಪ್ಪಿಕೊಳ್ಳುವುದು ಕಷ್ಟ. ಜಿ.ಕೆ.ವೆಂಕಟೇಶ್ ಹೇಳ್ತಾ ಇದ್ದರು, “ಸ್ವರಗಳನ್ನು ಜೋಡಿಸಿಟ್ಟರೆ ಕ್ಲಾಸಿಕಲ್ ಮ್ಯೂಸಿಕ್ ಆಗುತ್ತೆ, ಆದರೆ ಚಿತ್ರಗೀತೆ ಸ್ವರಗಳ ನಡುವೆ ಹುಟ್ಟುತ್ತೆ” ಅಂತ. ನನಗೆ ಬಹಳ ಪ್ರಿಯವಾದ ಮಾತು ಅದು, ಇದನ್ನು ಅರ್ಥ ಮಾಡಿಕೊಳ್ಳಲು ಸಂಗೀತವನ್ನು ವಿಶಾಲ ಅರ್ಥದಲ್ಲಿ ನೋಡಲು ಸಾಧ್ಯವಾಗ ಬೇಕು. ಕನ್ನಡದಲ್ಲಿ ಟಿ.ಜಿ.ಲಿಂಗಪ್ಪ, ಜಿ.ಕೆ.ವೆಂಕಟೇಶ್, ವಿಜಯಭಾಸ್ಕರ್, ಉಪೇಂದ್ರ ಕುಮಾರ್ ಎಲ್ಲರೂ ಸಂಗೀತವನ್ನು ಆಳವಾಗಿ ಅರಿತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಲ್ಲಿ ಹುಟ್ಟುತ್ತಿರುವ ಟ್ಯೂನ್ ಈ ನೆಲದ ಸ್ವಂತಿಕೆ ಕಳೆದು ಕೊಂಡು ಅನುಕರಣೆಯಲ್ಲಿ ಸಿಕ್ಕಿ ಬಿದ್ದಿದೆ.

ಕಟ್ ಅಂಡ್ ಪೇಸ್ಟ್ ಸುಲಭವಾಗಿರುವ ಈ ಕಾಲದಲ್ಲಿ ಕಳ್ಳತನ ಕೂಡ ಸುಲಭವಾಗುತ್ತಿದೆ. ಇದರಿಂದ ಚಿತ್ರಗೀತೆಗಳು ಸಂಗೀತದ ಜೊತೆ ಇಟ್ಟು ಕೊಂಡಿದ್ದ ಸಾವಯವ ಸಂಬಂಧ ಕುಸಿಯುತ್ತಾ ಹೋಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಚಿತ್ರಗೀತೆಗಳ ಕ್ಷೇತ್ರದಲ್ಲಿ ಹೊಸತನ ಕ್ರಮೇಣ ಕಣ್ಮರೆಯಾಗುತ್ತಾ ಬಂದಿದೆ. ಇಂದು ಗೆಲ್ಲುವ ಹಾಡು ಎರಡೇ ತಿಂಗಳಿಗೆ ಜನಮಾನಸದಿಂದಲೇ ಮರೆಯಾಗುತ್ತಿದೆ. ಇದು ದೇಶದ ಬೇರೆ ಭಾಗಕ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ಕಾಣಿಸಿಕೊಂಡಿರುವ ಸಮಸ್ಯೆ. ಇದಕ್ಕೆ ಮುಖ್ಯ ಕಾರಣ. ಹಂಸಲೇಖ ಅವರ ನಂತರ ಸ್ವಂತಿಕೆಯನ್ನು ಸಾಧಿಸಬಲ್ಲ ಸಂಗೀತಗಾರರು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿಲ್ಲ. ಲೆಜೆಂಡ್ ಇಲ್ಲ ಎನ್ನುವ ಸಮಸ್ಯೆ ಸಂಗೀತದ ಪ್ರಧಾನ ಕ್ಷೇತ್ರದಲ್ಲಿಯೂ ಇದೆ. ಇನ್ನೊಂದು ನೆಲೆಯಲ್ಲಿ ನೋಡಿದರೆ ಈ ಸಮಸ್ಯೆ ಸಾಹಿತ್ಯವೂ ಸೇರಿದಂತೆ ಉಳಿದ ಸಾಂಸ್ಕøತಿಕ ಕ್ಷೇತ್ರದಲ್ಲಿಯೂ ಇದೆ. ಪ್ರಜ್ಞೆ ಮತ್ತು ಪರಿಸರದ ಸಮೀಕರಣದಂತೆ ಪರಿಸರದ ಆಯ್ಕೆಗಳನ್ನು ಸರಿದೂಗಿಸಬಲ್ಲ ಪ್ರಜ್ಞೆ ರೂಪುಗೊಳ್ಳುವವರೆಗೂ ಈ ಸಮಸ್ಯೆಗೆ ಪರಿಹಾರ ಸಿಕ್ಕುವುದು ಕಷ್ಟ.

ರಿಯಾಲಿಟಿ ಶೋಗಳು ದೇಶದ ಬೇರೆ ಭಾಗದಲ್ಲಿ ಪ್ರತಿಭಾವಂತ ಗಾಯಕರನ್ನು ಕೊಟ್ಟ ಉದಾಹರಣೆಗಳಿವೆ. ಸೋನು ನಿಗಮ್, ಶ್ರೇಯಾ ಘೋಷಲ್ ಸೇರಿದಂತೆ ಹಲವು ಸಾಧಕರು ರಿಯಾಲಿಟಿ ಶೋಗಳಿಂದಲೇ ಬಂದವರು. ಕನ್ನಡದಲ್ಲಿ ಮಾತ್ರ ರಿಯಾಲಿಟಿ ಶೋಗಳ ವಿಜೇತರು ಉತ್ತಮ ಗಾಯಕರಾಗಿ ಮುಂದೆ ಹೆಸರು ಮಾಡಿದ ಉದಾಹರಣೆ ಇಲ್ಲವೆಂದೇ ಹೇಳಬೇಕು. ಇದಕ್ಕೆ ಕಾರಣ ಇಲ್ಲಿ ರಿಯಾಲಿಟಿ ಶೋಗಳು ನಡೆಯುವ ಕ್ರಮವೇ ಆಗಿದೆ. ಇವು ಬಹುಮಟ್ಟಿಗೆ ಚಿತ್ರಗೀತೆಗಳನ್ನೇ ಆಧರಿಸಿರುತ್ತವೆ. ಮೂಲ ಗಾಯಕರ ಸ್ವರವನ್ನು ಅನುಸರಿಸುವವರಿಗೆ ಮೆಚ್ಚಿಗೆ ಬಹುಮಾನಗಳು ಇಲ್ಲಿ ಸಿಕ್ಕುತ್ತವೆ. ಇದರಿಂದ ಗಾಯಕರು ತಮ್ಮ ಸ್ವಂತ ಧ್ವನಿಯನ್ನು ಮೆರೆತು ಕಳ್ಳಧ್ವನಿಗೆ ಮೊರೆ ಹೋಗುತ್ತಾರೆ. ಪಿ.ಸುಶೀಲಾ, ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಣ್ಯಂ ಸೋನು ನಿಗಮ್, ಶ್ರೇಯಾ ಘೋಷಾಲ್ ಅವರಂತಹ ಗಾಯಕರನ್ನು ಅನುಕರಣೆ ಮಾಡಲು ಹೋಗುತ್ತಾರೆ. ಇದರಿಂದ ತಮ್ಮ ವಿಶಿಷ್ಟ ಗುರುತನ್ನು ಕಳೆದುಕೊಳ್ಳುತ್ತಾರೆ. ಸ್ವಂತಿಕೆಯನ್ನು ಕಳೆದುಕೊಂಡಂತಹ ಇಂತಹ ಗಾಯಕರೂ ಎಲ್ಲಿಯೂ ಗೆಲ್ಲಲಾರರು.

ಪುರುಷ ಮತ್ತು ಸ್ತ್ರೀಯರ ಸ್ವಾಭಾವಿಕ ಧ್ವನಿಯಲ್ಲಿ ಸಹಜವಾಗಿಯೇ ಕೆಲವು ಮಿತಿಗಳು ಇರುತ್ತವೆ. ಕೆಲವರಿಗೆ ಸಪ್ತಕಕ್ಕೆ ಹೋಗುವುದು ಕಷ್ಟವಾಗಬಹುದು, ಇನ್ನು ಕೆಲವರಿಗೆ ಎಲ್ಲಾ ಎತ್ತರದಲ್ಲಿಯೂ ಸಲೀಸಾಗಿ ಹೋಗಬಲ್ಲ ಧ್ವನಿ ಇರಬಹುದು. ಇಂತಹವರು ತಮ್ಮ ಧ್ವನಿಯ ಸಾಧ್ಯತೆಯನ್ನು ಮರೆತು ಅನುಕರಣಗೆ ಹೋಗುವುದರಿಂದ ಅವರ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮಗಳಾಗುತ್ತವೆ. ಕೇಳುಗರಿಗೂ ಎಷ್ಟೇ ಉತ್ತಮ ಅನುಕರಣೆ ಮೂಲದಂತೆ ಕೇಳಿಸದೆ ನಿರಾಸೆ ಕಾಣಿಸುತ್ತದೆ. ಇದರ ಬದಲು ತಮ್ಮ ಆಯ್ಕೆಯ ಸ್ವತಂತ್ರ ಗೀತೆಗಳನ್ನು ಹಾಡಲು ಅವಕಾಶವಿದ್ದರೆ ಅವರ ಸ್ವಂತಿಕೆ ಹೊರ ಬರುತ್ತದೆ. ಆದರೆ ಇಂತಹ ಕೆಲವು ಸುತ್ತಗಳು ಇದ್ದರೂ ಅಷ್ಟು ಹೊತ್ತಿಗೆ ಅವರ ಸ್ವಂತಿಕೆ ಹೊರಟು ಹೋಗಿರುತ್ತದೆ.

ಇದನ್ನು ಒಂದು ರೂಪಕದಂತೆ ನೋಡಿದರೆ ಸಂಗೀತದ ವಿವಿಧ ಕ್ಷೇತ್ರಗಳ ಮೇಲೆ ಕೂಡ ಇದೇ ಮಾದರಿಯ ಪರಿಣಾಮಗಳು ಆಗಿರುವುದನ್ನು ನೋಡಬಹುದು. ಸಿ.ಅಶ್ವತ್ಥ್ ಅವರ ಸಂಯೋಜನೆಗಳಲ್ಲಿ ಭಾವದ ಆಳಕ್ಕೆ ಇಳಿಯುವ ಪ್ರಯೋಗಗಳು ಇರುತ್ತಿದ್ದವು. ಈಗ ಅಲ್ಲಿ ಕೂಡ ಅಶ್ವತ್ಥ್ ಅವರನ್ನು ಅನುಕರಿಸುವವರು ಹೆಚ್ಚಾಗಿದ್ದಾರೆ. ಇದರಿಂದಾಗಿ ಭಾವಗೀತೆಗಳ ಕ್ಷೇತ್ರದಲ್ಲಿ ಕೂಡ ಹೊಸ ಆವಿಷ್ಕಾರ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಕುವೆಂಪು, ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಎಸ್. ಇವರೆಲ್ಲರೂ ಭಾವಗೀತೆಗಳು ಎಂದು ಪ್ರತ್ಯೇಕವಾಗಿ ಬರೆಯಲಿಲ್ಲ. ಅವರ ಕವಿತೆಗಳಿಗೇ ಸಂಗೀತ ಸಂಯೋಜಕರು ಜೀವ ಕೊಟ್ಟರು. ಆದರೆ ಈ ಕ್ಷೇತ್ರಕ್ಕೆ ಜನಪ್ರಿಯತೆ ಬಂದ ಮೇಲೆ ಭಾವಗೀತೆ ಬರೆಯುವ ಕವಿಗಳೇ ಹುಟ್ಟಿ ಕೊಂಡಿದ್ದಾರೆ. ಅದರಲ್ಲಿಯೂ ಜನಪ್ರಿಯತೆಗಾಗಿಯೇ ಬರೆದರೆ ಗುಣಮಟ್ಟ ಇರುವುದಾದರೂ ಹೇಗೆ ಸಾಧ್ಯ? ಇನ್ನೊಂದು ವಿಚಿತ್ರವೂ ಇದೆ. ಇಂತಹ ಕವಿತೆಗಳು ಹೀಗೆ ಬರೆದ ಭಾವಗೀತೆಗಳನ್ನು ತಮ್ಮ ಕವನ ಸಂಕಲನದಲ್ಲಿ ಸೇರಿಸುವುದಿಲ್ಲ. ಅದನ್ನೇ ಪ್ರತ್ಯೇಕ ಸಂಕಲನವಾಗಿಸುತ್ತಾರೆ. ಇದರ ಅರ್ಥ ಇಷ್ಟೇ ಅವರಿಗೇ ಅದರ ಗುಣಮಟ್ಟದ ಕುರಿತು ನಂಬಿಕೆ ಇರುವುದಿಲ್ಲ.

ಇದು ಚಾಮರಾಜ ಒಡೆಯರ್ ಅವರಿಗೆ ಸಂಬಂಧಿಸಿದಂತಹ ಕಥೆ. ಅವರು ಒಮ್ಮೆ ವಾಯುವಿಹಾರದಲ್ಲಿ ಇರುವಾಗ ಒಬ್ಬ ಭಿಕ್ಷುಕ ಒಂದು ಹಾಡು ಹಾಡುತ್ತಾ ಹೊರಟಿದ್ದನಂತೆ. ಆ ಧಾಟಿ ಅರಸರಿಗೆ ಇಷ್ಟವಾಯಿತು. ಪಕ್ಕದಲ್ಲಿಯೇ ಇದ್ದ ವಾಸುದೇವಾಚಾರ್ಯರಿಗೆ ಕೂಡಲೇ ಹೋಗಿ ‘ಈ ಹಾಡಿನ ಸ್ವರ ಪ್ರಸ್ತಾರ ಬರೆದುಕೊಂಡು ಬನ್ನಿ’ ಎಂದರು. ವಾಸುದೇವಾಚಾರ್ಯರು ಆ ಭಿಕ್ಷುಕನನ್ನು ಹಿಂಬಾಲಿಸಿ ಸ್ವರ ಎಂದರೆ ಏನು ಎಂದೇ ಗೊತ್ತಿಲ್ಲದ ಅವನ ಬಳಿ ಮತ್ತೆ ಮತ್ತೆ ಹಾಡಿಸಿ ಸ್ವರ ಪ್ರಸ್ತಾರ ಸಿದ್ಧಗೊಳಿಸಿದರು. ಹಾಗೆಯೇ ಆ ಭಿಕ್ಷಕನ ಕಷ್ಟವನ್ನು ನೋಡಿ ತಮ್ಮ ಮೈ ಮೇಲೆ ಇದ್ದ ಶಾಲು ಮತ್ತು ಕೊರಳಲ್ಲಿ ಇದ್ದ ಸರ ಎರಡನ್ನೂ ಅವನಿಗೆ ನೀಡಿದರು.

ಅರಮನೆಗೆ ಹಿಂದಿರುಗಿ ಬಂದು ಸ್ವರ ಪ್ರಸ್ತಾರವನ್ನು ಅರಸರಿಗೆ ಒಪ್ಪಿಸಿದರು. ಅರಸರೂ ತಮ್ಮ ಗೂಢಾಚಾರರ ಮೂಲಕ ವಾಸುದೇವಾಚಾರ್ಯರು ನೀಡಿದ್ದ ಕೊಡುಗೆಯನ್ನು ತಿಳಿದಿದ್ದರು. ಅವರಿಗೆ ವಿಶೇಷ ಶಾಲು ಮತ್ತು ಹಾರಗಳಿಂದ ಗೌರವ ಸಲ್ಲಿಸಿದರು. ‘ಭಕ್ತ ರಾಮದಾಸ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದ ಸಂದರ್ಭದಲ್ಲಿ ಪಿ.ಕಾಳಿಂಗರಾಯರು ಸ್ಟುಡಿಯೋ ಬಳಿ ಭಿಕ್ಷೆ ಬೇಡಲು ಬಂದಿದ್ದ ಭಿಕ್ಷುಕಿಯೊಬ್ಬಳ ಕಂಠಸಿರಿಗೆ ಮನಸೋತು ಅವಳಿಂದ ಒಂದು ಚಿತ್ರಗೀತೆಯನ್ನು ಹಾಡಿಸಿದ್ದರು. ಪ್ರತಿಭೆ ಹೀಗೆ ಹುಡುಕಿದರೆ ಸಿಕ್ಕುತ್ತದೆಯೇ ಹೊರತು ಸ್ಪರ್ಧೆಯಿಂದ ಬರುವುದಿಲ್ಲ. ಆದರೆ ಹೇಳಿ ಕೇಳಿ ಇದು ಕಾರ್ಪೋರೇಟ್ ಯುಗ. ಟಿ.ವಿ.ಚಾನಲ್‍ಗಳು, ಎಫ್.ಎಂಗಳು, ಐಪ್ಯಾಡ್, ಯೂಟ್ಯೂಬ್ ಎಲ್ಲೆಡೆ ಸಂಗೀತದ ಹೊನಲೇ ಹರಿಯುತ್ತಿದೆ. ಆದರೆ ಸ್ವಂತಿಕೆಯಿಂದ ಅಲ್ಲ. ಸರಕಾಗಿ.. ಹೀಗೆ ಸರಕಾಗಿರುವ ಕಡೆ ಬೆಲೆ ನಿರ್ಧಾರವಾಗುತ್ತದೆಯೇ ಹೊರತು ಮೌಲ್ಯವಲ್ಲ. ಇವತ್ತು ನನ್ನ ಮಟ್ಟಿಗೆ ನಾವು ಎದುರಿಸುತ್ತಿರುವ ಮುಖ್ಯ ಸಮಸ್ಯೆ ಇದೇ..

‘ನನ್ನ ಮಗಳಿಗೆ ಆರು ತಿಂಗಳಲ್ಲಿ ಸಂಗೀತ ಕಲಿಸಿ ಅವಳನ್ನು ರಿಯಾಲಿಟಿ ಶೋನಲ್ಲಿ ಗೆಲ್ಲುವಂತೆ ಮಾಡಿ’ ಎಂದು ಕೇಳುವವರ ಸಂಖ್ಯೆಯೇ ಹೆಚ್ಚಾಗಿರುವಾಗ ಸಮಸ್ಯೆಯ ಮೂಲ ಎಲ್ಲಿದೆ ಎಂದು ಹೇಳುವುದು?

*ಲೇಖಕರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಲವು ಕಾರ್ಪೋರೇಟ್ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ನಿರ್ವಹಿಸಿದ್ದಾರೆ. ‘ಮಲ್ಲಿಗೆ, ‘ಮಂಗಳ ಪತ್ರಿಕೆ ಮತ್ತು ವಿಜಯವಾಣಿ ಪುರವಣಿ ಸಂಪಾದಕರಾಗಿದ್ದರು. ಪ್ರಸ್ತುತ ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತಿಯ ನಿರ್ದೇಶಕರು.

Leave a Reply

Your email address will not be published.