ಸಂಘಕ್ಕೆ ಆತ್ಮಾವಲೋಕನದ ಅಗತ್ಯವಿದೆ!

-ಸೌಮ್ಯಾ ಕೋಡೂರು

ಕ್ರೈಸ್ತರು ಮತ್ತು ಕಮ್ಯುನಿಸ್ಟರಿಗಿಂತ ಸಂಘದ ನೇರ ದ್ವೇಷಕ್ಕೆ ಗುರಿಯಾಗಿರುವವರು ನೆರೆಹೊರೆಯ ಮುಸಲ್ಮಾನರು. ಇಸ್ಲಾಂ ಕುರಿತಾದ ಸಂಘದ ಈ ಬಗೆಯ ದ್ವೇಷ ಪರೋಕ್ಷವಾಗಿ ಮುಸಲ್ಮಾನರ ಒಗ್ಗಟ್ಟನ್ನು ಬಲಪಡಿಸುತ್ತಿದೆಯೇ ಹೊರತು, ಹಿಂದೂಗಳನ್ನು ಒಂದಾಗಿಸುತ್ತಿಲ್ಲ ಎಂಬುದು ಗಮನಾರ್ಹ. ಮುಸಲ್ಮಾನರ ಈ ಬಗೆಯ ಒಗ್ಗಟ್ಟು ಇನ್ನೊಂದು ಬಗೆಯ ಅತಿರೇಕಕ್ಕೆ ಎಡೆಮಾಡಿಕೊಟ್ಟಿದೆ!

`ರಾಷ್ಟ್ರೀಯ ಸ್ವಯಂಸೇವಕ ಸಂಘ’ದ ಹೆಸರೇ ಹೇಳುವಂತೆ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುವ ಕಾರ್ಯಕರ್ತರೆ ಈ ಸಂಘ ಇಲ್ಲಿಯವರೆಗೆ ಸಾಗಿಬರಲು ಕಾರಣಕರ್ತರು. ಆದರೆ ಅವರ ಧ್ಯೇಯ ಕೇವಲ ಬಲಿಷ್ಠ ರಾಷ್ಟ್ರವನ್ನು ಕಟ್ಟುವುದಲ್ಲ, ಬದಲಾಗಿ ಬಲಿಷ್ಠ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿದ್ದು, ಈ ಧೋರಣೆ ಜಾತ್ಯತೀತ ಬಹುತ್ವವನ್ನು ಪ್ರತಿಪಾದಿಸುವ ಭಾರತದ ಭವಿಷ್ಯದ ಹಿತದೃಷ್ಟಿಯಿಂದ ಆಘಾತಕಾರಿಯಾದದ್ದು. ಕಾರಣ ಆರ್.ಎಸ್.ಎಸ್. ಕಟ್ಟಿಕೊಂಡಿರುವ ಹಿಂದೂ ರಾಷ್ಟ್ರವಾದದ ಕಲ್ಪನೆ, ಇಲ್ಲಿಯೇ ನೆಲೆಸಿರುವ ಅಲ್ಪಸಂಖ್ಯಾತರನ್ನು ಹಾಗೂ ತನ್ನದೇ ಹಿಂದೂಧರ್ಮದ ಪರಿಧಿಯೊಳಗಿರುವ ಆದರೆ ಮುಖ್ಯವಾಹಿನಿಗೆ ಬಾರದ ಬಹುಸಂಖ್ಯಾತ ಹಿಂದುಳಿದವರ, ದಲಿತರ ಹಾಗೂ ಮಹಿಳೆಯರನ್ನು ಒಳಗೊಳ್ಳದ ಧಾರ್ಮಿಕ ಮೂಲಭೂತವಾದದ ಸ್ವರೂಪದ್ದು ಎನ್ನುವುದು.

ಹೀಗೆ ಆರ್.ಎಸ್.ಎಸ್. ಅನ್ನು ಮೆಚ್ಚಿಕೊಳ್ಳುವ ಒಂದು ವರ್ಗಕ್ಕೆ ತನ್ನದೇ ಆದ ಕಾರಣಗಳಿದ್ದರೆ, ಅದನ್ನು ದೈತ್ಯರೂಪಿ, ವಿನಾಶಕಾರಿ ಎಂದು ಆರೋಪಿಸುವವರಿಗೂ ಅವರದ್ದೇ ಆದ ಕಾರಣಗಳಿವೆ. ಇನ್ನೊಂದು ಬಗೆಯ ವರ್ಗವು ಯಾವುದು ಸತ್ಯ, ಯಾವುದು ಅಸತ್ಯ ಎಂದು ಸಹ ತಿಳಿಯದೆ, ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡದೆ ಮೂಕಪ್ರೇಕ್ಷಕನಾಗಿದೆ. 

ಆರ್.ಎಸ್.ಎಸ್. ತಾನು ಘೋಷಿಸಿಕೊಂಡಿರುವ ಬಲಿಷ್ಠ ಹಿಂದೂರಾಷ್ಟ್ರ ನಿರ್ಮಾಣದ ಉದ್ದೇಶವನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿರುವ ದಾರಿಯನ್ನು ಇಂದು ಪುನರ್ವಿಮರ್ಶಿಸಿಕೊಳ್ಳಬೇಕಿದೆ. ಜೊತೆಗೆ ಅದರ ತತ್ವ ಸಿದ್ಧಾಂತಗಳನ್ನು ವಿರೋಧಿಸುತ್ತಿರುವ ಬಹುಸಂಖ್ಯಾತ ವರ್ಗದ ಮಾತುಗಳನ್ನು ಸಹ ಆಲಿಸಬೇಕಿದೆ.

ಭಾರತಕ್ಕಾಗಿ ಭಾರತೀಯರನ್ನು ತೀವ್ರವಾಗಿ ತುಡಿಯುವಂತೆ ಮಾಡುವ ಹಂಬಲ ಹೊಂದಿದೆ ಎನ್ನಲಾಗುವ ಈ ಸಂಘಟನೆಯು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ, ಭಾರತೀಯ ಜನತಾ ಪಾರ್ಟಿ, ವನವಾಸಿ ಕಲ್ಯಾಣ ಆಶ್ರಮ, ಇತಿಹಾಸ ಸಂಕಲನ ಸಮಿತಿ, ರಾಷ್ಟ್ರೀಯ ಸೇವಾ ಭಾರತಿ, ಸಂಸ್ಕಾರ ಭಾರತಿ, ಸಂಸ್ಕøತ ಭಾರತಿ, ವಿದ್ಯಾಭಾರತಿ, ಭಾರತ್ ವಿಕಾಸ ಪರಿಷತ್, ಕರ್ನಾಟಕದಲ್ಲಿ – ರಾಷ್ಟ್ರೋತ್ಥಾನ ಪರಿಷತ್, ಹಿಂದೂ ಸೇವಾ ಪ್ರತಿಷ್ಠಾನ, ವೇದ ವಿಜ್ಞಾನ ಗುರುಕುಲಗಳು, ಜಾಗರಣಾ ಪ್ರಕಾಶನಗಳು ಸೇರಿದಂತೆ ತನ್ನದೇ ಆದ ಹಲವು ಪರಿವಾರ ಸಂಸ್ಥೆಗಳ ಮೂಲಕ ಸ್ವದೇಶಿ, ಸ್ವಾಭಿಮಾನ, ಜಾತಿಮೀರಿದ ಧಾರ್ಮಿಕ ಐಕ್ಯತೆಗಳೆಂಬ ತನ್ನ ಮೂಲಮಂತ್ರಗಳನ್ನು ವ್ಯವಸ್ಥಿತವಾಗಿ ಬಿತ್ತಿ ನಿರೀಕ್ಷಿತ ಫಲ ಪಡೆಯುವಲ್ಲಿ ಆರ್.ಎಸ್.ಎಸ್. ಯಶಸ್ಸು ಕಾಣುತ್ತ ಬಂದಿದೆ.

ಇಲ್ಲಿ ಹೆಸರಿಸಿರುವ ಅನೇಕ ಸಂಸ್ಥೆಗಳ ಮೂಲಕ ತನ್ನ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ತರಬೇತಿಯನ್ನು ಸಂಘವು ನೀಡುವುದರ ಜೊತೆಗೆ ಈ ನಾಡಿನ ಒಳಗಿನ ಅಪಾಯಗಳೆಂದು ತಾನು ಗುರುತಿಸಿರುವ ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಕಮ್ಯುನಿಸ್ಟರ ಕುರಿತಾಗಿ ಪೂರ್ವಗ್ರಹದ ಬೀಜಗಳನ್ನು ಊರಿ ನೀರೆರೆದ ಪರಿಣಾಮ ಕಳೆದ ಒಂದು ದಶಕದಲ್ಲಿ ಸಿಕ್ಕಿರುವ ಫಲಿತಾಂಶಕ್ಕೆ ಸ್ವತಃ ಸಂಘವೇ ಸೋಜಿಗಪಟ್ಟರೂ ಆಶ್ಚರ್ಯವಿಲ್ಲ. ಧರ್ಮದ ಹೆಸರಲ್ಲಿ ಅದು ಎಸೆದ ಅಸ್ತ್ರ ಪರಿಣಾಮಕಾರಿಯಾಗಿ ತನ್ನ ಕಾರ್ಯ ಸಾಧಿಸಿದೆ.

ಸನಾತನ ಹಿಂದೂ ಸಾಮಾಜಿಕ ವ್ಯವಸ್ಥೆಯ ಯಥಾಸ್ಥಿತಿವಾದವನ್ನೇ ತನ್ನ ಆದರ್ಶವಾಗಿಸಿಕೊಂಡಿರುವ ಆರ್.ಎಸ್.ಎಸ್. ಹಿಂದೂ ಧರ್ಮದ ಆಚಾರ-ವಿಚಾರಗಳಲ್ಲಿ ಆಗಬೇಕಾದ ಸುಧಾರಣೆಯ ಬಗ್ಗೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಾ ಬಂದಿದೆ. ಮತ್ತು ಇದನ್ನು ಮರೆಮಾಚಲು ಪರಧರ್ಮ, ಪರಭಾಷೆಗಳಿಂದ ಭವ್ಯ ಹಿಂದೂ ಸಂಸ್ಕೃತಿಗೆ ಕಂಟಕವಿದೆಯೆಂದು ತಾನು ತೆಕ್ಕೆಗೆ ತೆಗೆದುಕೊಳ್ಳುವವರಲ್ಲಿ ಬಿಂಬಿಸಿ ತರಬೇತು ಮಾಡುತ್ತಿದೆ.

ಇನ್ನು ಇದರ ಉದ್ದೇಶಸಾಧನೆಯ ಪ್ರಬಲ ಅಸ್ತ್ರ ಸ್ವಯಂಸೇವಕರು. ಇವರು ಪೂರ್ವಗ್ರಹಗಳಿಂದ ಮುಕ್ತರಾಗಿ, ಸ್ವತಂತ್ರವಾಗಿ ಆಲೋಚಿಸುವುದನ್ನೇ ತೊರೆದು, ಅಕ್ಷರಶಃ ಸಂಘದ ತತ್ವ ಸಿದ್ಧಾಂತಗಳ ವಶೀಕರಣಕ್ಕೊಳಗಾಗಿದ್ದಾರೆ. ಅಥವಾ ತನ್ನ ತತ್ವ ಸಿದ್ಧಾಂತಗಳಿಗೆ ಅವರು ಸಮ್ಮೋಹನಗೊಳ್ಳುವಂತೆ ತಯಾರು ಮಾಡುತ್ತಿದೆ ಎಂದರೆ ಹೆಚ್ಚು ಸತ್ಯವಾದೀತು. ಇದು ಈಗಾಗಲೇ ಆರ್.ಎಸ್.ಎಸ್. ತೊರೆದು ಬಂದ ಅನೇಕರು ಬಿಚ್ಚಿಟ್ಟ ಸತ್ಯ ಕೂಡ. ಸಂಘದೊಳಗೆ ನಡೆಯುವ ಆಟ ಪಾಠಗಳೆಲ್ಲವೂ ಧಾರ್ಮಿಕ ಅಸಹಿಷ್ಣುತೆಯನ್ನು ಉತ್ತೇಜಿಸುವಂತವೇ ಅನ್ನುವುದು ಅಲ್ಲಿಂದ ಹೊರನಡೆದವರು ಹೇಳುವ ಮಾತು. ಇನ್ನೂ ಸ್ಪಷ್ಟವಾಗಿ ಅವರದೇ ಶಬ್ದಗಳಲ್ಲಿ ಹೇಳುವುದಾದರೆ, ಆರ್.ಎಸ್.ಎಸ್. ಕಾರ್ಯಕರ್ತರು ಒಂದು ಬಗೆಯ ಬೌದ್ಧಿಕ ಗುಲಾಮತನವನ್ನು ಆವಾಹನೆ ಮಾಡಿಕೊಂಡಿದ್ದಾರೆ.

ಹಳ್ಳಿಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ರಾಷ್ಟ್ರಪ್ರೇಮದ ಸೋಗಿನಲ್ಲಿ ಜನರನ್ನು ವಶಪಡಿಸಿಕೊಂಡ ಕಾಲವೊಂದಾದರೆ, ಕಳೆದ ಒಂದು ದಶಕದಲ್ಲಿ ಆರ್.ಎಸ್.ಎಸ್. ಹಾಗೂ ಬಿಜೆಪಿಯ ಐಟಿ ಸೆಲ್ ಕಾರ್ಯಕರ್ತರು ಜನಪ್ರಿಯ ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷವಾಗಿ ಯುವಸಮುದಾಯವನ್ನು ವ್ಯವಸ್ಥಿತವಾಗಿ ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಸ್ವದೇಶಿ, ದೇಶಪ್ರೇಮಗಳೆಂಬ ದಾಳಗಳನ್ನೆಸೆಯುತ್ತಾ ರಾಷ್ಟ್ರೀಯತೆಯ ಹೆಸರಲ್ಲಿ ಜಾತೀಯತೆಯನ್ನು, ಮತಾಂಧತೆಯನ್ನು ಪೋಷಿಸಿ, ಸಮಾಜದಲ್ಲಿ ಪರಸ್ಪರ ಅಪನಂಬಿಕೆಯ, ಭಯದ ವಾತಾವರಣವನ್ನು ಸೃಷ್ಟಿಸುತ್ತಿರುವುದು ಈಗಾಗಲೇ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ.

ಆರ್.ಎಸ್.ಎಸ್. ತತ್ವ ಸಿದ್ಧಾಂತಗಳ ದಾಳಿಗೆ ತುತ್ತಾಗುತ್ತಿರುವ ಯುವ ಸಮುದಾಯವಾದರೂ ಇಸ್ಲಾಂ, ಕ್ರೈಸ್ತ ಹಾಗೂ ಕಮ್ಯುನಿಸ್ಟರ ವಿರುದ್ಧದ ವಿಚಾರಧಾರೆಗಳನ್ನು ಹೊರತುಪಡಿಸಿ ಅದು ಪ್ರತಿಪಾದಿಸುತ್ತಿರುವ ಹಿಂದೂ ರಾಷ್ಟ್ರವಾದದ ಪರಿಕಲ್ಪನೆಯ ಒಳಹೊಕ್ಕು ನೋಡುವ ಗೋಜಿಗೂ ಹೋಗಿಲ್ಲ. ಕ್ರೈಸ್ತ ಹಾಗೂ ಕಮ್ಯುನಿಸ್ಟರಿಗಿಂತಲೂ ಅವರ ನೇರ ದ್ವೇಷಕ್ಕೆ ಗುರಿಯಾಗಿರುವವರು ಈ ನೆಲದ, ನಮ್ಮದೇ ನೆರೆಹೊರೆಯ ಮುಸಲ್ಮಾನರು. ಇಸ್ಲಾಂ ಕುರಿತಾದ ಸಂಘದ ಈ ಬಗೆಯ ದ್ವೇಷ ಪರೋಕ್ಷವಾಗಿ ಹಿಂದುಗಳ ವಿರುದ್ಧ, ಮುಸಲ್ಮಾನರ ಒಗ್ಗಟ್ಟನ್ನು ಬಲಪಡಿಸುತ್ತಿದೆಯೇ ಹೊರತು, ಹಿಂದೂಗಳನ್ನು ಒಂದಾಗಿಸುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ. ಮುಸಲ್ಮಾನರ ಈ ಬಗೆಯ ಒಗ್ಗಟ್ಟು ಇನ್ನೊಂದು ಬಗೆಯ ಅತಿರೇಕಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಅವರ ಹಿಂದೂ ದ್ವೇಷಕ್ಕೆ, ಕೋಮುಗಲಭೆಗಳ ಸೃಷ್ಟಿಯ ಧೋರಣೆಗೆ ಆರ್.ಎಸ್.ಎಸ್. ನೇರ ಹೊಣೆ ಹೊರಬೇಕಾಗುತ್ತದೆ. ಮತ್ತಿದನ್ನು ಸಂಘವು ಸ್ವತಃ ಮನಗಾಣಬೇಕಾಗಿದೆ.

ರಾಷ್ಟ್ರೀಯತೆಯ ಹೆಸರಿನಲ್ಲಿ ಆರ್.ಎಸ್.ಎಸ್. ಪೋಷಿಸುತ್ತಿರುವ ಜಾತೀಯತೆಯನ್ನು ಗುರುತಿಸುವಲ್ಲಿ ಯುವಸಮುದಾಯ ಸೋತಿದೆ. ಸನಾತನ ಹಿಂದೂ ಧರ್ಮದ ವೈಭವಗಳು ಮರುಕಳಿಸಬೇಕು, ಅದಕ್ಕೆ ನೀವೆಲ್ಲಾ ಕಂಕಣಬದ್ಧರಾಗಬೇಕು ಎಂದು ಆರ್.ಎಸ್.ಎಸ್. ಬೋಧಿಸುತ್ತದೆ. ಅವರ ಪ್ರತಿಪಾದನೆಯ ಸನಾತನ ಪಾರಂಪರಿಕ ಹಿಂದೂ ಸಮಾಜದಲ್ಲಿದ್ದ ಮನುವಾದಿ ಫ್ಯೂಡಲ್ ಮನಃಸ್ಥಿತಿಯನ್ನು ಅರಿಯುವ ಪ್ರಯತ್ನವನ್ನೇ ಮಾಡಲಾಗದ ಅರೆಪ್ರಜ್ಞಾವಸ್ಥೆಗೆ ಈ ಯುವವರ್ಗ ಜಾರಿರುವುದು ದುರಂತ. ಇಂದು ಆರ್.ಎಸ್.ಎಸ್. ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಿರುವ ಹಿಂದೂಧರ್ಮದ ಭಾಗವಾಗದ ಬಹುಸಂಖ್ಯಾತ ವರ್ಗಗಳು ಈ ಅರವಳಿಕೆಯ ಸ್ಥಿತಿಯಿಂದ ಮೊದಲು ಜಾಗೃತರಾಗಬೇಕಿದೆ.

ಏಕದೇಶ – ಏಕಸಂಸ್ಕೃತಿ, ಏಕದೇಶ – ಏಕಪರಂಪರೆ, ಏಕದೇಶ – ಏಕಧರ್ಮಗಳೆಂಬ ಆಕರ್ಷಕ ಅಲಂಕಾರಿಕ ಮಾತುಗಳಿಂದ ಅಸ್ತಿತ್ವದಲ್ಲಿರುವ ಅನೇಕ ವೈವಿಧ್ಯಮಯ ಸಹಬಾಳ್ವೆಯ ಬದುಕಿನ ಬೇರುಗಳನ್ನು ಕಿತ್ತೆಸೆಯುವ ಸಂಘದ ಗೋಮುಖ ವ್ಯಾಘ್ರತನವನ್ನು ಹಾಗೂ ಏಕತೆ ಮತ್ತು ಐಕ್ಯತೆಗಳ ಅರ್ಥವ್ಯತ್ಯಾಸಗಳನ್ನು ಇವು ಕಾಣಬೇಕಿದೆ.

ಶತಮಾನಗಳಿಂದ ಶೋಷಣೆಗೊಳಗಾದ ಹಿಂದುಳಿದ, ದಲಿತ, ಮಹಿಳಾ ವರ್ಗಗಳನ್ನು ಒಳಗೊಳ್ಳದ ವ್ಯವಸ್ಥೆಯನ್ನು ಪುನರ್‍ಸ್ಥಾಪಿಸುವ, ಹಿಂದೂರಾಷ್ಟ್ರದ ಕಲ್ಪನೆಯನ್ನು ಈ ವರ್ಗಗಳು ಜಾಗರೂಕತೆಯಿಂದ ಗುರುತಿಸಿಕೊಳ್ಳಬೇಕಿದೆ.  “ಹಿಂದೂ ಧರ್ಮದಲ್ಲಿ ದೇವರು, ಆತ್ಮ ಇವುಗಳಿಗೆ ಸ್ಥಾನವಿದೆ. ಆದರೆ ಮನುಷ್ಯನ ಜೀವನಕ್ಕೆ ಎಲ್ಲಿದೆ? ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಮಾತ್ರ ಸಾಯಲಾರೆ” ಎಂದು ಸಾರ್ವಜನಿಕವಾಗಿ ಘೋಷಿಸಿದ ಬಾಬಾಸಾಹೇಬರ ಚಿಂತನೆಗಳಿಗೆ |

ಮತ್ತೊಮ್ಮೆ ಈ ವರ್ಗಗಳು ತಮ್ಮ ಬುದ್ಧಿ – ಭಾವಗಳನ್ನು ತೆರೆದುಬೇಕಿರುವುದು ಇಂದಿನ ಅಗತ್ಯ.

“ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ” ಎಂಬ ಕವಿವಾಣಿಯಂತೆ ಮನುಸ್ಮೃತಿ ಕೇಂದ್ರಿತ ಸಮಾಜ ವ್ಯವಸ್ಥೆ ಮನುವಿನ ಕಾಲಕ್ಕೆ ಮಾತ್ರ ಸೂಕ್ತವಾದದ್ದು ಎನ್ನುವ ಸರಳ ವಿಚಾರವನ್ನು ಅರಿತು ಊಧ್ರ್ವಮುಖಿ ಬದಲಾವಣೆಯನ್ನು ಬಯಸುವ ಬೌದ್ಧಿಕ ವೈಶಾಲ್ಯವನ್ನು ಆರ್.ಎಸ್.ಎಸ್. ಬೆಳೆಸಿಕೊಳ್ಳುವುದು ಉತ್ತಮ. ಜಾಗತಿಕವಾಗಿ ಅಪಾರವಾದದ್ದನ್ನು ಸಾಧಿಸಲು ಹೊರಟ ಭಾರತವು ಸಾಧಿಸಿಕೊಳ್ಳಬೇಕಿರುವ ಮೊದಲ ಅಂಶ ಸಹಜೀವಿಗಳೊಂದಿಗಿನ ಸಹಬಾಳ್ವೆ ಹಾಗೂ ಐಕ್ಯತೆ. ಅಖಂಡ ಭಾರತೀಯರನ್ನು ಖಂಡ ಖಂಡವಾಗಿ ಛಿದ್ರಗೊಳಿಸುವ ಮನಃಸ್ಥಿತಿಯನ್ನು ಪರಿವರ್ತಿಸಿಕೊಂಡು ಸಮಷ್ಟಿಕೇಂದ್ರಿತ ನಡೆಯಲ್ಲಿ ಭಾರತದ ಅಭಿವೃದ್ಧಿ ಅಡಗಿದೆಯೇ ಹೊರತು ವ್ಯಷ್ಟಿಕೇಂದ್ರಿತ ನೆಲೆಯಲ್ಲಲ್ಲ ಎಂಬುದನ್ನು ಸಂಘವು ಅರ್ಥಮಾಡಿಕೊಳ್ಳಬೇಕಿದೆ.

ಆರ್.ಎಸ್.ಎಸ್. ಸಿದ್ಧಾಂತ ಪ್ರೇರಿತ ಬಿಜೆಪಿ ತನ್ನನ್ನು ಪ್ರಾಮಾಣಿಕ, ಪಾರದರ್ಶಕ ಎಂದೇ ಬಿಂಬಿಸಿಕೊಳ್ಳುತ್ತಾ ಕಳೆದ ಚುನಾವಣೆಗಳನ್ನು ಜಯಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೊಂದೇ ವ್ಯಯಿಸಿರುವ ಹಣದ ಪ್ರಮಾಣ, ಎಲ್ಲಾ ಪಕ್ಷಗಳು ವ್ಯಯಿಸಿರುವ ಹಣದ ಪ್ರಮಾಣದ ಶೇ.45 ಎನ್ನುವುದಕ್ಕೆ ನಿಖರ ದಾಖಲೆಗಳಿವೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆದ ಆಪರೇಷನ್ ಕಮಲ ಹೆಸರಿನ ರಾಜಕೀಯ ಚಟುವಟಿಕೆಗಳು ತಾನು ಹೇಳುವ ಪ್ರಾಮಾಣಿಕತೆಗೆ, ಪಾರದರ್ಶಕತೆಗೆ ವ್ಯತಿರಿಕ್ತವಾದವು. ಹೀಗಿರುವಾಗ ಇಂತಹ ಮೌಲ್ಯಗಳೊಂದಿಗೆ ಬಿಂಬಿಸಿಕೊಳ್ಳುವ ಮೊದಲು ತನ್ನನ್ನು ಪ್ರಶ್ನಿಸಿಕೊಳ್ಳುವುದು ಅದರ ನೈತಿಕ ಜವಾಬ್ದಾರಿಯಲ್ಲವೇ? ಭ್ರಷ್ಟಾಚಾರ ಮುಕ್ತ ಹಾಗೂ ಎಲ್ಲಾ ಜಾತಿಗಳನ್ನು ಒಳಗೊಂಡ ಧಾರ್ಮಿಕ ಐಕ್ಯತೆಯನ್ನು ಸಾಧಿಸಿ ಅಖಂಡ ಹಿಂದೂ ಸಮಾಜವನ್ನು ಕಟ್ಟಬೇಕೆನ್ನುವ ಗುರಿ ಹೊಂದಿರುವ ಸಂಘವು ಅದೇ ಜಾತಿ ಆಧಾರಿತ, ಹಣ ಆಧಾರಿತ ಕಾರ್ಯಾಚರಣೆಗಳತ್ತ ಮುಖಮಾಡಿರುವುದು ಎಷ್ಟು ಸರಿ?

ಪ್ರಸ್ತುತ ಲೋಕಸಭೆಯಲ್ಲಿ ಹಿಂದುಳಿದವರು, ದಲಿತರು, ಮಹಿಳೆಯರು ಏನಾದರೂ ಅವಕಾಶಗಳನ್ನು ಪಡೆದುಕೊಂಡಿದ್ದರೆ, ಅಧಿಕಾರ ಪಡೆದವರ ಮೇಲಿರುವ ಒತ್ತಡ ಹಾಗೂ ನಿಯಂತ್ರಣ ಶಕ್ತಿಗಳನ್ನು ಈ ಸಮುದಾಯಗಳು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಮಹಿಳಾವರ್ಗಕ್ಕೆ ಕೊಡಮಾಡಿರುವ ಪ್ರಮುಖ ಹುದ್ದೆಗಳು ಸ್ಥಾನಮಾನಗಳು ಕೇವಲ ಕಣ್ಣೊರೆಸುವ ತಂತ್ರಗಳಾಗಿದ್ದು ಅವರ ಹಿಂದಿನ ಚಾಲಕ ಶಕ್ತಿಗಳು ಮತ್ತದೇ ಮೇಲ್ವರ್ಗದ ಪುರುಷ ಮನಃಸ್ಥಿತಿಗಳೇ ಎನ್ನುವುದನ್ನು ಗುರುತಿಸುವುದರಲ್ಲಿ ಈ ವರ್ಗ ವಿಫಲವಾಗಿದೆ.

ದೇಶದ ಪ್ರಥಮ ಪ್ರಜೆಯ ಸ್ಥಾನವನ್ನು ದಲಿತರೊಬ್ಬರು ಅಲಂಕರಿಸಿದಾಕ್ಷಣ ಇಡೀ ಅಸ್ಪೃಶ್ಯ ಲೋಕವೇ ಧನ್ಯತೆಯ ಭಾವಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಎಲ್ಲಾ ಅವಕಾಶಗಳನ್ನು ಕೊಡಮಾಡಿದ್ದು ಸಮಾನತೆಯ, ಜಾತ್ಯತೀತ ತತ್ವಗಳನ್ನು ಒಳಗೊಂಡ ಭಾರತದ ಸಂವಿಧಾನವೇ ಹೊರತು, ಯಾವ ಪಕ್ಷ ಅಥವಾ ಸಂಘಗಳು ರೂಪಿಸಿದ ಧೋರಣೆಗಳಿಂದಲ್ಲ. ರಾಷ್ಟ್ರಪ್ರೇಮದ ಹೆಸರಲ್ಲಿ, ಹಿಂದೂಧರ್ಮದ ಹೆಸರಲ್ಲಿ ಆರ್.ಎಸ್.ಎಸ್. ಸ್ಥಾಪಿಸಲು ಹೊರಟಿರುವ ಏಕಸಂಸ್ಕೃತಿ, ಏಕಪರಂಪರೆಗಳ ಪ್ರತಿಪಾದನೆಯ ಹಿಂದಿರುವ ಯಜಮಾನಿಕೆಯನ್ನು ಅರಿಯಲೇಬೇಕಾಗಿದೆ.

ಮನುಸ್ಮೃತಿಯಲ್ಲಿ ಹೇಳಲಾದ ಸಾಮಾಜಿಕ ವ್ಯವಸ್ಥೆಯ ಯಥಾಸ್ಥಿತಿ ವಾದವನ್ನೇ ಪುನರ್ ಸ್ಥಾಪಿಸಲು ಬಯಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದೇ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟು ಅಲಕ್ಷಿತ, ಅಲ್ಪಸಂಖ್ಯಾತ ಸಮುದಾಯಗಳ ಬದುಕಿಗೆ ಸಮಾನತೆ, ಗೌರವಗಳನ್ನು ತಂದುಕೊಟ್ಟು, ಅದೇ ನೆಲದಲ್ಲಿ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ -ಈ ಇಬ್ಬರಿಗೂ ಮಹಾರಾಷ್ಟ್ರದ ನಾಗಪುರ ಸಾಕ್ಷಿಯಾಗಿರುವುದು ವಿಪರ್ಯಾಸ.

*ಲೇಖಕಿ ಬೆಂಗಳೂರಿನ ಜಯನಗರದ ಆರ್.ವಿ. ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು; ಬೆಂಗಳೂರು ವಿವಿಯಲ್ಲಿ ಸಂಶೋಧಕರಾಗಿ ದಾಖಲಾಗಿದ್ದಾರೆ.

Leave a Reply

Your email address will not be published.