ಸಂಘರ್ಷದ ಜೊತೆಗೆ ಸಂಧಾನವೂ ಸಾಧ್ಯ!

ಧೀ

ಜಗತ್ತಿನಾದ್ಯಂತ ನಡೆದಿರುವ ಸಮಾಜಶಾಸ್ತ್ರೀಯ ಅಧ್ಯಯನಗಳು ಮಾನವ ಮತ್ತು ವನ್ಯಜೀವಿಗಳು ಒಂದೇ ಭೌಗೋಳಿಕ ಸ್ಥಳ ಮತ್ತು ಸಂಪನ್ಮೂಲಗಳನ್ನು ಹಂಚಿಕೊಂಡು ಬಂದಿರುವುದನ್ನೂ, ಪರಸ್ಪರರ ಇರುವಿಕೆಯನ್ನು ಒಪ್ಪಿಕೊಳ್ಳುತ್ತಲೇ ಪರಸ್ಪರ ಸಂಧಾನ ನಡೆಸುತ್ತಿರುವುದನ್ನೂ ಗುರುತಿಸುತ್ತಾ ಬಂದಿವೆ.

ವನ್ಯಜೀವಿ-ಮಾನವರ ನಡುವಿನ ಸಂಬಂಧ ಪ್ರಾಚೀನವಾದದ್ದು. ಪ್ರತಿಯೊಂದು ಜೀವಿಯ ಜೊತೆಗೂ ಮನುಷ್ಯ ಅನಾದಿಕಾಲದಿಂದಲೂ ವಿಭಿನ್ನ ರೀತಿಯ ಸಂಬಂಧಗಳನ್ನು ಕಟ್ಟಿಕೊಳ್ಳುತ್ತಾ ಬಂದಿದ್ದಾನೆ. ಈ ಸಂಬಂಧದ ಕೊಂಡಿಗಳನ್ನು ಕಡೆಗಣಿಸಿ ಅದರ ಒಂದು ಆಯಾಮವಾದ ‘ಸಂಘರ್ಷ’ ಎಂಬ ನಕಾರಾತ್ಮಕವಾದ ಅಂಶವನ್ನು ಮುಂದಿಟ್ಟುಕೊಂಡು ಚರ್ಚೆಗೆ ತೊಡಗುವುದು ಏಕಮುಖಿಯಾದ ವಿಧಾನವಾಗಿರುತ್ತದೆ. ಆದ್ದರಿಂದ ಇದನ್ನು ಬೇರೆಯೇ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದೆ.

ಕಾಡು-ನಾಡುಗಳ ನಡುವಿನ ಸರಹದ್ದುಗಳು ಮಾನವ ನಿರ್ಮಿತವಾದದ್ದು. ಅವು ವನ್ಯಜೀವಿಗಳ ಆಲೋಚನೆಗೆ ನಿಲುಕುವಂತಹದ್ದಲ್ಲ. ಅಲ್ಲದೆ ಈ ಗಡಿರೇಖೆಗಳು ನಿರಂತರವಾಗಿ ಬದಲಾಗುತ್ತಾ ಬಂದಿದ್ದು ಈ ವಿಷಯದಲ್ಲಿ ಮಾನವ-ವನ್ಯಜೀವಿಗಳ ನಡುವೆ ನಿರಂತರವಾದ ಸಂಧಾನ ನಡೆಯುತ್ತಲೇ ಇದೆ. ಜಗತ್ತಿನಾದ್ಯಂತ ನಡೆದಿರುವ ಸಮಾಜಶಾಸ್ತ್ರೀಯ ಅಧ್ಯಯನಗಳು ಮಾನವ ಮತ್ತು ವನ್ಯಜೀವಿಗಳು ಒಂದೇ ಭೌಗೋಳಿಕ ಸ್ಥಳ ಮತ್ತು ಸಂಪನ್ಮೂಲಗಳನ್ನು ಹಂಚಿಕೊಂಡು ಬಂದಿರುವುದನ್ನೂ, ಪರಸ್ಪರರ ಇರುವಿಕೆಯನ್ನು ಒಪ್ಪಿಕೊಳ್ಳುತ್ತಲೇ ಇವುಗಳ ಬಗ್ಗೆ ಪರಸ್ಪರ ಸಂಧಾನ ನಡೆಸುತ್ತಿರುವುದನ್ನೂ ಗುರುತಿಸುತ್ತಾ ಬಂದಿವೆ. ಒಬ್ಬರಿಗೊಬ್ಬರು ಮಾರಕವಾಗುವ ಆತಂಕದ ನೆರಳಿನಲ್ಲೂ, ಇಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗೆ ಕಂಡುಕೊಂಡಿರುವುದನ್ನು ಗುರುತಿಸಲಾಗಿದೆ.

ಇನ್ನು ಮಾನವ ಸಮಾಜದ ವಿಷಯಕ್ಕೆ ಬಂದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳ ಕಾರಣದಿಂದಾಗಿ ತಾವು ಯಾವ ಪ್ರಾಣಿಯ ಬಗ್ಗೆ ಹೆದರಿದ್ದಾರೋ ಅದನ್ನೇ ಆರಾಧಿಸುವ, ಗೌರವಿಸುವ ಅದನ್ನು ಕೊಲ್ಲದೆ ಉಳಿಸುವ ಸಂಪ್ರದಾಯಗಳೂ ಅಸ್ತಿತ್ವದಲ್ಲಿವೆ. ಈ ನಂಬಿಕೆಗಳೇ ಹಲವೊಮ್ಮೆ ವನ್ಯಜೀವಿ-ಮಾನವರ ನಡುವಿನ ಸಹಬಾಳ್ವೆಗೂ ಕಾರಣವಾಗಿವೆ ಎಂಬುದನ್ನು ಹಲವಾರು ಸಮಾಜೋ-ಸಾಂಸ್ಕೃತಿಕ ಅಧ್ಯಯನಗಳು ಖಚಿತಪಡಿಸಿವೆ. ಇವುಗಳಿಂದ ನಾವು ಕಲಿಯಬಹುದಾದ ಅಂಶಗಳೂ ಹಲವಾರಿವೆ. ಆದ್ದರಿಂದ ವನ್ಯಜೀವಿ-ಮಾನವ ಸಂಬಂಧವನ್ನು ಸಂಘರ್ಷದ ನೆಲೆಯಿಂದ ಬೇರ್ಪಡಿಸಿ ನೋಡಬೇಕಾಗಿದೆ.

ಸಂಘರ್ಷ ನಿವಾರಿಸುವುದರತ್ತ ನಮ್ಮ ಗಮನವಿರಬೇಕೇ ಹೊರತು ಶಿಕ್ಷೆಗೆ ಗುರಿಪಡಿಸುವುದರ ಕಡೆಗಲ್ಲ. ಪ್ರಸ್ತುತ ಸಂದರ್ಭದಲ್ಲೂ ಪರಸ್ಪರರ ಇರುವಿಕೆಯನ್ನು ಒಪ್ಪಿಕೊಳ್ಳುವ/ಗುರುತಿಸುವ ಮತ್ತು ಒಬ್ಬರಿಂದೊಬ್ಬರಿಗೆ ಆಗಬಹುದಾದ ಹಾನಿ ಅಥವ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಇದನ್ನು ಮಾಡದೆ ವನ್ಯಜೀವಿಗಳ ಹಾವಳಿ, ಉಪಟಳ, ದಾಂದಲೆ ಇತ್ಯಾದಿಯಾಗಿ, ಜನರ ಭಾವನೆಗಳನ್ನು ಪ್ರಚೋದಿಸುವ ಭಾಷೆಯನ್ನು ಉಪಯೋಗಿಸುವುದು ವನ್ಯಜೀವಿ-ಮಾನವರ ನಡುವಿನ ಕಂದಕವನ್ನು ಹೆಚ್ಚಿಸುವುದೇ ಹೊರತು ಸಂಬಂಧವನ್ನು ಬೆಸೆಯುವುದಿಲ್ಲ.

ವನ್ಯಜೀವಿಗಳಿಂದಾಗಿ ಜನರು ಅನುಭವಿಸುವ ನಷ್ಟವನ್ನು ತಡೆಯುವುದಕ್ಕಾಗಿ ಮತ್ತು ಪರಿಹರಿಸುವುದಕ್ಕಾಗಿ ಸರ್ಕಾರ, ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಅರಣ್ಯದ ಸುತ್ತಲೂ ಗೋಡೆ, ಬೇಲಿ, ಕಂದಕ ಇತ್ಯಾದಿಗಳನ್ನು ನಿರ್ಮಿಸುವುದು, ರಾತ್ರಿಪಹರೆ ಮತ್ತು ಗಸ್ತು ಏರ್ಪಡಿಸುವುದು, ವನ್ಯಜೀವಿಗಳು ತಿನ್ನದೆ ಇರುವ ಬೆಳೆಗಳನ್ನು ಬೆಳೆಯಲು ಉತ್ತೇಜಿಸುವುದು, ಹುಲಿ ಚಿರತೆಗಳು ಪ್ರವೇಶಿಸಲಾಗದಂತಹ ಕೊಟ್ಟಿಗೆಗಳನ್ನು ನಿರ್ಮಿಸಲು ಸಹಾಯ ಮಾಡುವುದು ಮೊದಲಾದ ಹಲವಾರು ಕ್ರಮಗಳನ್ನು ಕೈಗೊಂಡಿವೆ. ಆದರೆ ಇವು ಯಾವುವೂ ಶಾಶ್ವತ ಪರಿಹಾರಗಳಾಗದೆ ಇರಬಹುದು. ಏಕೆಂದರೆ ಹುಲಿ, ಚಿರತೆ, ಕರಡಿ, ಆನೆ ಇತ್ಯಾದಿಗಳು ಅತ್ಯಂತ ಬುದ್ಧಿಶಾಲಿ ಪ್ರಾಣಿಗಳಾಗಿದ್ದು ಮನುಷ್ಯರ ನಡುವೆ ಬದುಕುವ ಕಲೆಯನ್ನು ಕರಗತಗೊಳಿಸಿಕೊಂಡಿರುತ್ತವೆ.

ಆನೆಗಳು ಹೇಗೆ ವಿದ್ಯುತ್ವಾಹಕಗಳಲ್ಲದ ಮರದ ಕೊಂಬೆಗಳಿಂದಾಗಲೀ, ತಮ್ಮದೇ ದಂತಗಳಿಂದಾಗಲೀ, ವಿದ್ಯುತ್ ಬೇಲಿಗಳನ್ನು ಬಗ್ಗಿಸಿ ಹಿಡಿದು ಅವುಗಳನ್ನು ದಾಟಿ ತಮಗಿಷ್ಟವಾದ ಬೆಳೆಗಳನ್ನು ತಲುಪುತ್ತವೆ ಎಂಬುದನ್ನು ಕಾಡನಂಚಿನಲ್ಲಿ ವಾಸಿಸುವ ಜನಗಳು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಪ್ರಾಣಿಗಳಿಗೂ ತಮಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ. ಪ್ರಾಣಿಗಳ ಅರಿವನ್ನು ಕುರಿತಂತೆ ನಡೆಯುತ್ತಿರುವ ಅಧ್ಯಯನಗಳು ಯಾವ ಯಾವ ಪ್ರಾಣಿಗಳು ಎಷ್ಟು ಕ್ಲಿಷ್ಟಕರವಾದ ಅಡೆತಡೆಗಳನ್ನು ನಿವಾರಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ತೋರಿಸಿಕೊಟ್ಟಿವೆ. ಆದ್ದರಿಂದ ನಾವು ನಿರ್ಮಿಸುವ ಯಾವುದೇ ಪ್ರತಿಬಂಧಕಗಳನ್ನು ಕಾಲಕ್ರಮದಲ್ಲಿ ಪರಿಹರಿಸಿಕೊಳ್ಳಬಲ್ಲ ಇವುಗಳ ಸಾಮರ್ಥ್ಯವನ್ನು ಪ್ರಾಯಶಃ ಕಡಿಮೆ ಅಂದಾಜು ಮಾಡುವಂತಿಲ್ಲ. ಆದ್ದರಿಂದ ಈ ವಿಷಯದಲ್ಲಿ ನಿರಂತರವಾದ ಸಂಧಾನಗಳು ಮಾತ್ರ ಶಾಶ್ವತ.

ರೈತರು ಅನುಭವಿಸುವ ಬೆಳೆ ಹಾಗೂ ಇತರ ನಷ್ಟಗಳನ್ನು ತುಂಬಿಕೊಡಲು ಪರಿಹಾರ ಧನವನ್ನು ನಿಗದಿಪಡಿಸಿದೆ. ಇವುಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸರ್ಕಾರೇತರ ಸಂಸ್ಥೆಗಳೂ ಸಹಾಯ ಮಾಡಿವೆ. ಈ ಎಲ್ಲ ಪ್ರಯತ್ನಗಳು ಎಷ್ಟು ಪರಿಣಾಮಕಾರಿಯಾಗಿವೆ ಮತ್ತು ಸಫಲವಾಗಿವೆ ಎಂಬುದು ಚರ್ಚಾಸ್ಪದವಾದರೂ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಇಂತಹ ಕ್ರಮಗಳನ್ನು ವಹಿಸಿರುವುದು ಜವಾಬ್ದಾರಿ ಚಿಹ್ನೆಯಲ್ಲವೇ?

ವನ್ಯಜೀವಿ-ಮಾನವರ ನಡುವಿನ ಸಂಘರ್ಷ ಎಂಬುದಾಗಿ ಯಾವುದನ್ನು ಗುರುತಿಸಲಾಗುತ್ತದೆಯೋ ಅದೂ ಸಹ ನೇರವಾಗಿ ಇವರಿಬ್ಬರ ನಡುವಿನ ಸಂಘರ್ಷವಲ್ಲ. ಬದಲಾಗಿ ಇದರ ಪಾಲುದಾರರ ನಡುವಿನ ಸಂಬಂಧದ ಪರಿಣಾಮವಾಗಿರಬಹುದು ಎಂದು ಹಲವು ಸಮಕಾಲೀನ ಸಂಶೋಧಕರು ಗುರುತಿಸಿದ್ದಾರೆ. ಉದಾಹರಣೆಗೆ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಪರಿಹಾರ ದೊರಕದೆ ಇರುವುದು ಸಹ ಜನರ ಮತ್ತು ಸರಕಾರದ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗುವುದಕ್ಕೆ ಕಾರಣವಾಗಿ ಇದರ ಪರಿಣಾಮ ವನ್ಯಜೀವಿಗಳ ಕಡೆಗೆ ತಿರುಗಬಹುದು.

ಯಾವುದೇ ಒಂದು ಭೂಪ್ರದೇಶದಲ್ಲೂ ಪ್ರಾಣಿಗಳ ಮೇಲೆ ಪ್ರಭಾವಬೀರುವ ಅಥವ ಪ್ರಾಣಿಗಳಿಂದ ಪ್ರಭಾವಕ್ಕೊಳಗಾಗುವ ಹಲವಾರು ಪಾಲುದಾರರು ಇರುತ್ತಾರೆ. ಇದು ಕಾಡಿನ ಸುತ್ತಲಿನ ಜನಸಮುದಾಯವಿರಬಹುದು, ಅರಣ್ಯ ಇಲಾಖೆ ಇರಬಹುದು, ಸರ್ಕಾರೇತರ ಸಂಸ್ಥೆಗಳಿರಬಹುದು. ಮಾಧ್ಯಮ, ಪ್ರವಾಸೋದ್ಯಮ, ರೈತ ಸಂಘ, ರಾಜಕಾರಣಿಗಳು -ಹೀಗೆ ಕೆಲವರನ್ನು ಹೆಸರಿಸಬಹುದಷ್ಟೇ. ಈ ಸಂಸ್ಥೆಗಳು ಪರಸ್ಪರರೊಂದಿಗೆ ದೀರ್ಘಕಾಲದ ಹಾಗೂ ಬಹಳ ಸಂಕೀರ್ಣವಾದ ಸಂಬಂಧ/ಸಂಘರ್ಷಗಳ ಇತಿಹಾಸವನ್ನು ಹೊಂದಿರಬಹುದು. ರಾಜಕೀಯ-ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಅಧ್ಯಯನಗಳು ಮೇಲಿನ ಸಂಘ-ಸಂಸ್ಥೆಗಳ ನಡುವಿನ ಸಂಬಂಧಗಳು ಹೇಗೆ ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಮನುಷ್ಯ ಸಂಬಂಧಗಳ ನಡುವೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ತೋರಿಸುತ್ತವೆ.

ಆದ್ದರಿಂದ ವನ್ಯಜೀವಿ ಮಾನವರ ನಡುವಿನ ಸಂಬಂಧವನ್ನು ಸುಧಾರಿಸಬೇಕಾದರೆ ಈ ಸಂಸ್ಥೆಗಳ ನಡುವಿನ ಸಂಘರ್ಷಗಳನ್ನು ಬಗೆಹರಿಸುವುದು ಬಹಳ ಮುಖ್ಯವಾಗುತ್ತದೆ. ಇದು ಪ್ರಾಯಶಃ ಬಹಳ ದೊಡ್ಡ ಸವಾಲು. ಏಕೆಂದರೆ ಹಲವಾರು ಚರ್ಚೆಗಳು ಮತ್ತು ಲೇಖನಗಳು ಇವುಗಳನ್ನು ದೃಢೀಕರಿಸುತ್ತವೆ ಮತ್ತು ಕೇವಲ ಭಾವೋದ್ರೇಕಗೊಳಿಸುವುದಕ್ಕಾಗಿ ಈ ಸಂಘರ್ಷಗಳನ್ನು ಉತ್ಪ್ರೇಕ್ಷಗೊಳಿಸಲಾಗುತ್ತದೆ.

ಹಲವಾರು ಪಾಶ್ಚಾತ್ಯ ದೇಶಗಳು ವನ್ಯಜೀವಿಗಳಿಂದಾಗಿ ತಾವು ಎದುರಿಸುತ್ತಿರುವ ಆತಂಕ ಮತ್ತು ನಷ್ಟಗಳಿಂದಾಗಿ ಅವುಗಳ ಬಗ್ಗೆ ತೀವ್ರವಾದ ಅಸಹನೆ ಮತ್ತು ದ್ವೇಷವನ್ನು ಬೆಳೆಸಿಕೊಂಡಿದ್ದು, ವನ್ಯಜೀವಿಗಳ ಸಂತತಿಯನ್ನೆ ನಿರ್ಮೂಲನಗೊಳಿಸುತ್ತಾ ಬಂದಿದ್ದಾರೆ. ಆದರೆ, ಕರ್ನಾಟಕದಂತಹ ಪರಿಸರದಲ್ಲಿ ಅವುಗಳಿಂದಾಗಬಹುದಾದ ನಷ್ಟದ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲದೆ ಹೋದರೂ, ಇವರಿಬ್ಬರ ನಡುವೆ ಅಂತಹ ದ್ವೇಷ, ಅಸಹನೆಗಳು ಇಲ್ಲದಿರುವುದು ನಿಜಕ್ಕೂ ಅಭಿನಂದನೀಯ. ಆದ್ದರಿಂದ ನಷ್ಟಗಳನ್ನು ತುಂಬಿಕೊಡಲು ಅವಶ್ಯಕವಾದ ಸಹಾಯಕ ವ್ಯವಸ್ಥೆಗಳನ್ನು ಬಲಪಡಿಸಿ, ವನ್ಯಜೀವಿಗಳೊಂದಿಗೆ ಸ್ಥಳವನ್ನು ಹಂಚಿಕೊಳ್ಳುತ್ತಾ ಹೋಗುವ ಸಹಬಾಳ್ವೆಯ ಆಶಯವನ್ನು ಇಟ್ಟುಕೊಳ್ಳಬಹುದೇನೋ.

ಅನು: ಡಾ.ಆರ್.ಶೋಭಾ

*ಲೇಖಕಿ ಕೆಂಟ್ ವಿವಿಯಿಂದ ಸಂರಕ್ಷಣಾ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ; ವನ್ಯಜೀವಿ ಸಂರಕ್ಷಣೆಯಲ್ಲಿನ ಮಾನವ ಆಯಾಮದ ಬಗ್ಗೆ ಆಸಕ್ತಿ ಇರುವ ಸ್ವತಂತ್ರ ಸಂಶೋಧಕಿ. ಮಾನವ-ವನ್ಯಜೀವಿ ಸಂವಹನ ರೂಪಿಸುವ ಮನಃಶಾಸ್ತ್ರೀಯ ಮತ್ತು ಸಮಾಜೋ-ಸಂಸ್ಕೃತಿ ವಿಷಯಗಳತ್ತ ಅವರ ವಿಶೇಷ ಗಮನ.

Leave a Reply

Your email address will not be published.