ಸಂಚಾರದಟ್ಟಣೆ ನಿರ್ವಹಣೆ ಐಪಿಎಸ್ ಆಧಿಕಾರಿಯ ನಿರೂಪಣೆ

ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿ ಅಲ್ಪಾವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ ಮಾಡಬಹುದಾದ ಯೋಜನೆಗಳ ಕುರಿತು ದೂರದೃಷ್ಟಿಯಿಂದ ಕೂಡಿದ ಸಲಹೆಗಳು ಡಾ.ಎಂ.ಎ.ಸಲೀಂ ಅವರ ಈ ಕೃತಿಯಲ್ಲಿವೆ. ಈ ಕ್ರಮಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳುವುದರಿಂದ ಉತ್ತಮ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಬಹುದಾಗಿದೆ.

ಸಂಚಾರ ದಟ್ಟಣೆಯ ಕುರಿತಂತೆ ಸಮಗ್ರ ಮಾಹಿತಿಯ ಕೃತಿಗಳು ವಿರಳವಾಗಿರುವ ಹೊತ್ತಿನಲ್ಲಿ ಹೊಸದೊಂದು ಪುಸ್ತಕ ನಮ್ಮ ಮುಂದಿದೆ. ಹಲವು ವರ್ಷಗಳಿಂದ ಸಂಚಾರ ದಟ್ಟಣೆ ನಿರ್ವಹಣೆ ಕುರಿತು ಆಸಕ್ತಿಯಿಂದ ಅಧ್ಯಯನ ನಡೆಸುತ್ತಲೇ ಇರುವ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರ ಹೊಸ ಕೃತಿ ‘ಟ್ರಾಫಿಕ್ ಮ್ಯಾನೇಜ್‍ಮೆಂಟ್ ಇನ್ ಮೆಟ್ರಾಪಾಲಿಟನ್ ಸಿಟೀಸ್’ (ಮೆಟ್ರೊಪಾಲಿಟನ್ ನಗರಗಳಲ್ಲಿ ಸಂಚಾರದಟ್ಟಣೆ ನಿರ್ವಹಣೆ). 266 ಪುಟಗಳ ಈ ಕೃತಿ, ಸಂಚಾರದಟ್ಟಣೆಯ ನಿರ್ವಹಣೆಯ ಕುರಿತು, ಸಂಚಾರ ನಿರ್ವಹಣೆಗೆ ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಕುರಿತು ಬೆಳಕು ಚೆಲ್ಲಿದೆ.

ದೇಶದಾದ್ಯಂತ ಕಳೆದ ಇಪ್ಪತ್ತು ವರ್ಷಗಳಲ್ಲಿ ಬಹುತೇಕ ನಗರಗಳ ರಸ್ತೆಗಳಲ್ಲಿ ಓಡಾಡುವ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಸದ್ಯ ಲಭ್ಯವಿರುವ ರಸ್ತೆ ಜಾಲಗಳು, ಹೆಚ್ಚುತ್ತಿರುವ ವಾಹನಗಳ ಓಡಾಟಕ್ಕೆ ಸಾಲದೆ, ಸಂಚಾರ ದಟ್ಟಣೆ, ಮಾಲಿನ್ಯ, ಪ್ರಯಾಣದಲ್ಲಿ ಸಮಯ ವ್ಯರ್ಥ ಹಾಗೂ ಅಪಘಾತಗಳ ಪ್ರಮಾಣ ಹೆಚ್ಚಿದೆ. ನಗರೀಕರಣ, ಕೈಗಾರಿಕೀಕರಣ ಹಾಗೂ ನಗರ ಪ್ರದೇಶಗಳಲ್ಲಿ ವಾಣಿಜ್ಯೋದ್ಯಮಗಳ ಸ್ಥಾಪನೆ ಈ ಪರಿಸ್ಥಿತಿಗೆ ಕಾರಣ ಎಂದರೆ ತಪ್ಪಲ್ಲ. ರಸ್ತೆಗೆ ಸಂಬಂಧಿಸಿದ ಮೂಲಸೌಕರ್ಯಗಳ ಅಭಿವೃದ್ಧಿ ಗಣನೀಯವಾಗಿ ನಡೆಯಬೇಕಿದೆ ಎಂಬ ಅಭಿಪ್ರಾಯ ಕೃತಿಯಲ್ಲಿ ವ್ಯಕ್ತವಾಗಿದೆ.

ಸಂಚಾರ ನಿರ್ವಹಣೆಯ ಹೊಣೆಯನ್ನು ನಿರ್ವಹಿಸಬೇಕಾದ ಪೌರಾಡಳಿತ ಸಂಸ್ಥೆಗಳಲ್ಲಿ ಭೌತಿಕ ಹಾಗೂ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಸಮಸ್ಯೆ ಪರಿಹರಿಸಲು ಹರಸಾಹಸ ಪಡುವಂತಾಗಿರುವುದನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.

ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ನಮ್ಮ ಬೆಂಗಳೂರಿನಲ್ಲಿ ಸುಮಾರು 25 ಮಿಲಿಯನ್ ವಾಹನಗಳಿವೆ. ವಾಹನಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ತಕ್ಕಂತೆ ರಸ್ತೆ ಮೂಲಸೌಕರ್ಯದ ಅಭಿವೃದ್ಧಿ ಆಗದಿರುವ ಕಾರಣ ಮಾಲಿನ್ಯ, ಸಂಚಾರ ದಟ್ಟಣೆ, ಅಪಘಾತಗಳು, ರಸ್ತೆ ಒತ್ತುವರಿಗಳು, ಸಂಚಾರ ಸ್ಥಗಿತಗಳಂತಹ ತೊಡಕುಗಳು ಎದುರಾಗಿವೆ. ಸಂಚಾರ ನಿರ್ವಹಣೆಯ ಹೊಣೆಯನ್ನು ನಿರ್ವಹಿಸಬೇಕಾದ ಪೌರಾಡಳಿತ ಸಂಸ್ಥೆಗಳಲ್ಲಿ ಭೌತಿಕ ಹಾಗೂ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಸಮಸ್ಯೆ ಪರಿಹರಿಸಲು ಹರಸಾಹಸ ಪಡುವಂತಾಗಿರುವುದನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.

ಸಂಚಾರದ ತೊಡಕುಗಳಿಗೆ ಮೂಲ ಕಾರಣಗಳನ್ನು ಹುಡುಕುವ ಈ ಕೃತಿಯು, ‘ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿನ ಕೊರತೆಯು ವೈಯಕ್ತಿಕ ವಾಹನಗಳನ್ನು ಖರೀದಿಸುವ ವ್ಯವಸ್ಥೆಗೆ ನಾಂದಿ ಹಾಡಿದೆ. ಇದು ಸಂಚಾರದಲ್ಲಿ ಹಲವು ತೊಡಕುಗಳು ಹೆಚ್ಚಲು ಕಾರಣವಾಗಿದ್ದು, ವಾಹನ ನಿಲುಗಡೆ ಪ್ರದೇಶಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರು ನಗರದಂತಹ ವೃತ್ತಾಕಾರದ ರಸ್ತೆ ವ್ಯೂಹವಿರುವ ಸಂಚಾರ ವ್ಯವಸ್ಥೆಯು ಕೇಂದ್ರ ಪ್ರದೇಶದಲ್ಲಿ ಅತಿ ಹೆಚ್ಚು ಸಂಚಾರ ಒತ್ತಡವನ್ನು ಹೇರುವಂತಾಗಿಸಿದೆ’ ಎಂಬ ಸಂಗತಿಯನ್ನು ಮುಂದಿಡುತ್ತದೆ. ಮಿಶ್ರ ಭೂ ಉಪಯೋಗ ಪದ್ಧತಿ ಮತ್ತು ಸಂಚಾರ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗದಿರುವ ಕಾರಣದಿಂದ ಸಂಚಾರ ಒತ್ತಡವನ್ನು ಹೆಚ್ಚಿಸಿದೆ ಎನ್ನುವುದನ್ನೂ ಲೇಖಕರು ಗುರುತಿಸಿದ್ದಾರೆ.

ಮೆಟ್ರೊಪಾಲಿಟನ್ ನಗರಗಳಲ್ಲಿ ಸಂಚಾರದಟ್ಟಣೆ ನಿರ್ವಹಣೆ
-ಡಾ.ಎಂ.ಎ.ಸಲೀಂ
ಪುಟ: 266, ಬೆಲೆ: ರೂ.695
ಪ್ರಕಾಶನ: ಪುಲಿಯಾನಿ ಆಂಡ್ ಪುಲಿಯಾನಿ,
ನೆಲಮಹಡಿ, ಸುಜಾತಾ ಕಾಂಪ್ಲೆಕ್ಸ್, 1ನೇ ಕ್ರಾಸ್,
ಗಾಂಧಿನಗರ, ಬೆಂಗಳೂರು. 560009

ಈ ಪುಸ್ತಕಕ್ಕೆ ಸಂಬಂಧಿಸಿ ಲೇಖಕರು ಹಲವಾರು ಸಮೀಕ್ಷೆಗಳನ್ನೂ ನಡೆಸಿದ್ದಾರೆ. ಸಮೀಕ್ಷೆಯ ಮೂಲಕ ತಿಳಿದು ಬಂದ ಸಂಗತಿಗಳನ್ನು ಇಲ್ಲಿ ದಾಖಲಿಸಿದ್ದಾರೆ- ನಗರ ಪ್ರದೇಶದ ಸಾರ್ವಜನಿಕ ಸಾರಿಗೆ ವಲಯದಲ್ಲಿ ಮಾಡುವ ಹೂಡಿಕೆಯು ಖಾಸಗಿ ವಾಹನಗಳನ್ನು ಕೊಂಡುಕೊಳ್ಳುವ ಅಗತ್ಯತೆಗಳನ್ನು ಕಡಿಮೆ ಮಾಡುತ್ತದೆ. ಹಾಗೂ ಈ ಮೂಲಕ ದಟ್ಟಣೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಸಾರ್ವಜನಿಕ ಸಾರಿಗೆಯು ರಸ್ತೆಯ ಸಾಂದ್ರತೆಯ ಕಡಿಮೆ ಸ್ಥಳಾವಕಾಶವನ್ನು ಬಳಸಿಕೊಳ್ಳುತ್ತದೆ ಹಾಗೂ ಮಾಲಿನ್ಯವೂ ಕಡಿಮೆಯಾಗುತ್ತದೆ, ಎಂಬುದು ಎಲ್ಲರಿಗೂ ತಿಳಿದ ವಿಷಯ. ಮುಖ್ಯವಾಗಿ ಸಾರ್ವಜನಿಕ ಸಾರಿಗೆಯು ಸುಸ್ಥಿರ ವಿಧದ ಸಾರಿಗೆ ವ್ಯವಸ್ಥೆಯಾಗಿದೆ. ವಿವಿಧ ರೀತಿಯ ಸಾರಿಗೆ ವ್ಯವಸ್ಥೆಗಳನ್ನು ಸಂಪರ್ಕಿಸಿ ನಿರ್ಮಿಸಿದ ಸಂಘಟಿತ ಸಾರಿಗೆ ವ್ಯವಸ್ಥೆ ಹಾಗೂ ಎಲ್ಲಾ ರೀತಿಯ ಸಾರಿಗೆ ದರದಲ್ಲಿ ಏಕರೂಪತೆ ಹಾಗೂ ಸಮಾನ ದರ ವ್ಯವಸ್ಥೆಯ ಜನರನ್ನು ಸಾರ್ವಜನಿಕ ಸಾರಿಗೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಉತ್ತೇಜನ ನೀಡುತ್ತದೆ. ಈ ಮೂಲಕ ರಸ್ತೆಯ ಮೇಲಿನ ಖಾಸಗಿ ವಾಹನಗಳ ಒತ್ತಡ ಕಡಿಮೆಯಾಗುತ್ತದೆ.

ಲಕ್ಷಾಂತರ ಜನರು ಗಾಯದ ಮೂಲಕ ಶಾಶ್ವತ ಅಂಗವೈಕಲ್ಯಕ್ಕೀಡಾಗುತ್ತಾರೆ. ಈ ಸಂಖ್ಯೆಯು ಯಾವುದೇ ನೈಸರ್ಗಿಕ ವಿಪತ್ತು ಅಥವಾ ಇತರೆ ಸಾಂಕ್ರಾಮಿಕ ರೋಗಗಳಿಂದಾಗಿ ಉಂಟಾಗುವ ಸಾವಿನ ಸಂಖ್ಯೆಗಿಂತ ಹೆಚ್ಚು ಎಂಬುದು ಗಮನಾರ್ಹ ಸಂಗತಿ.

ಸಾರಿಗೆ ಯೋಜನೆಯೊಂದಿಗೆ ಭೂ ಬಳಕೆಯನ್ನು ಏಕೀಕರಣ ಮಾಡುವುದರಿಂದ ನಗರದ ಕೇಂದ್ರ ಪ್ರದೇಶದಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ. ವಸತಿ ಮತ್ತು ವಾಣಿಜ್ಯ ಪ್ರದೇಶಗಳನ್ನು ಬೇರ್ಪಡಿಸುವುದು. ಉಪನಗರ ಹಾಗೂ ಸ್ವಾವಲಂಬಿ ಪಟ್ಟಣಗಳ ಅಭಿವೃದ್ಧಿಯಿಂದಾಗಿ ವಿವಿಧ ಪ್ರದೇಶಗಳಲ್ಲಿ ಸಂಚಾರದ ಹರಿವು ಸಮನಾಗಿ ಹರಡಲು ಸಹಕಾರಿಯಾಗುತ್ತದೆ.

ವಿಶ್ವದಲ್ಲಿ ಸಂಭವಿಸುವ ಮರಣ ಹಾಗೂ ಗಂಭೀರ ಪ್ರಮಾಣದ ಗಾಯಗಳಲ್ಲಿ ಅತೀ ಹೆಚ್ಚು ಪ್ರಮಾಣವು ರಸ್ತೆ ಅಪಘಾತಗಳಿಂದ ಸಂಭವಿಸುವಂಥದ್ದು. ಪ್ರತಿ ವರ್ಷ ಸುಮಾರು 1.2 ಮಿಲಿಯನ್ ಜನರು ರಸ್ತೆ ಅಪಘಾತಗಳಲ್ಲಿ ಮರಣ ಹೊಂದುತ್ತಾರೆ. ಲಕ್ಷಾಂತರ ಜನರು ಗಾಯದ ಮೂಲಕ ಶಾಶ್ವತ ಅಂಗವೈಕಲ್ಯಕ್ಕೀಡಾಗುತ್ತಾರೆ. ಈ ಸಂಖ್ಯೆಯು ಯಾವುದೇ ನೈಸರ್ಗಿಕ ವಿಪತ್ತು ಅಥವಾ ಇತರೆ ಸಾಂಕ್ರಾಮಿಕ ರೋಗಗಳಿಂದಾಗಿ ಉಂಟಾಗುವ ಸಾವಿನ ಸಂಖ್ಯೆಗಿಂತ ಹೆಚ್ಚು ಎಂಬುದು ಗಮನಾರ್ಹ ಸಂಗತಿ. ಪಾದಚಾರಿಗಳು, ಸೈಕಲ್ ಸವಾರರು ಹಾಗೂ ದ್ವಿಚಕ್ರ ವಾಹನ ಸವಾರರುಗಳಂತಹ ದುರ್ಬಲ ರಸ್ತೆ ಬಳಕೆದಾರರೇ ರಸ್ತೆ ಅಪಘಾತಗಳಲ್ಲಿ ಬಲಿಯಾಗುತ್ತಾರೆ. ರಸ್ತೆ ಅಪಘಾತದಲ್ಲಿ ಬಲಿಯಾಗುವ ಬಹುತೇಕರು, ಆರ್ಥಿಕತೆಯ ಉತ್ಪಾದಕ ವಯಸ್ಸು ಎಂದು ಕರೆಯಲ್ಪಡುವ 15ರಿಂದ 45 ವರ್ಷದೊಳಗಿನ ಜನರು. ಇಂತಹ ಅಪಘಾತ ಮರಣದಿಂದ ಅಮೂಲ್ಯ ಮಾನವ ಸಂಪನ್ಮೂಲವನ್ನು ಕಳೆದುಕೊಳ್ಳುವುದರ ಜತೆಗೆ ಸಂತ್ರಸ್ತರ ಕುಟುಂಬದ ಇತರೆ ಸದಸ್ಯರ ಬದುಕನ್ನು ಕತ್ತಲೆಗೆ ತಳ್ಳುತ್ತದೆ.

ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳು ಈ ಕೃತಿಯಲ್ಲಿವೆ.

ರಸ್ತೆಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಲು ಕೆಲವು ತಂತ್ರಗಳು:

ಅ) ಭವಿಷ್ಯದಲ್ಲಿ ಸಂಭವಿಸಬಹುದಾದ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಗುರಿ ಹೊಂದಿರುವ ನಗರ ವ್ಯವಸ್ಥೆಯ ಉತ್ತಮ ರಚನಾತ್ಮಕ ಕ್ರಮಗಳು ಅಥವಾ ಸಂಯೋಜಿತ ವಿಧಾನವು ನವೀನ ಪಟ್ಟಣ ಅಥವಾ ನೂತನ ನಗರ ಅಭಿವೃದ್ಧಿಗಳಿಗೆ ಸ್ವಷ್ಟವಾಗಿ ಅನ್ವಯಿಸತಕ್ಕದ್ದು. ಹಾಗೂ ಸಂಚಾರ ಮತ್ತು ಸಾರಿಗೆ ಯೋಜನೆಗಳು ಪ್ರಸಕ್ತ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ಬಳಕೆಯನ್ನು ಮರುಸಂಘಟಿಸುವ ಗುರಿ ಹೊಂದಿರಬೇಕಾಗುತ್ತದೆ.

ಆ) ಪ್ರಸಕ್ತ ನಗರ ವ್ಯವಸ್ಥೆ ಅಥವಾ ರಸ್ತೆ ಜಾಲದಲ್ಲಿರುವ ಅಸಮರ್ಪಕತೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಪರಿಹಾರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಈಗಾಗಲೇ ರಸ್ತೆ ಅಪಘಾತಕ್ಕೆ ಕಾರಣವಾದ ನಗರ ವ್ಯವಸ್ಥೆ ಹಾಗೂ ರಸ್ತೆ ಜಾಲ ಹಾಗೂ ಅದರ ಬಳಕೆಯ ಸರಿಪಡಿಸುವಿಕೆ.

ರಚನಾತ್ಮಕ ಹಾಗೂ ಪರಿಹಾರ ಕ್ರಮಗಳನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ:
ಅ. ಸಂಚಾರ ಮತ್ತು ರಸ್ತೆ ಇಂಜಿನಿಯರಿಂಗ್ ಕ್ರಮಗಳು
ಆ. ಸಂಚಾರ ನಿಯಮಗಳ ಜಾರಿ ಕ್ರಮಗಳು
ಇ. ಸಂಚಾರ ಶಿಕ್ಷಣ ಮತ್ತು ಜಾಗೃತಿ ಕ್ರಮಗಳು
ಈ. ಅಪಘಾತದ ಗಾಯಾಳುವಿನ ಆರೈಕೆ ಮತ್ತು ತುರ್ತು ಸೇವೆಗಳು

ಭಾರತದ ನಗರಗಳಲ್ಲಿನ ಅಪಘಾತಗಳ ಸಂಖ್ಯೆಯನ್ನು ಇಳಿಸಲು ಕೈಗೊಳ್ಳಬೇಕಾದ ರಚನಾತ್ಮಕ ಮತ್ತು ಪರಿಹಾರ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.

ವಾಹನಗಳ ಅಗಾಧ ಹೆಚ್ಚಳದ ಹೊರತಾಗಿ, ರಸ್ತೆಗಳಲ್ಲಿ ಸಂಚಾರ ದಟ್ಟಣೆಗೆ, ಕಳಪೆ ಸಂಚಾರ ನಿಯಮಗಳ ಜಾರಿ ಹಾಗೂ ಶಿಸ್ತುರಹಿತ ಚಾಲನೆಗಳೇ ಪ್ರಮುಖ ಕಾರಣಗಳಾಗಿವೆ. ಸಂಚಾರ ನಿಯಮ ಉಲ್ಲಂಘನೆ ಸಾಮಾನ್ಯವಾಗಿರುವುದರಿಂದ ಬಹುತೇಕ ಚಾಲಕರು, ಸವಾರರು ಸಂಚಾರ ನಿಯಮಗಳನ್ನು ಅನುಸರಿಸುವುದಿಲ್ಲ. ಹೆಚ್ಚಿನ ನಗರಗಳಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಹಳೆಯ ನಿಯಮ ಚಲನಿಂಗ್ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿಲ್ಲ. ಏಕೆಂದರೆ, ಈ ವ್ಯವಸ್ಥೆಯಲ್ಲಿ ಉಲ್ಲಂಘನೆಯ ತಡೆಗಟ್ಟುವಿಕೆ ಕಡಿಮೆ. ಹಳೆಯ ಚಲನಿಂಗ್ ವ್ಯವಸ್ಥೆಯಲ್ಲಿ ಪುನರಾವರ್ತಿತ ಅಪರಾಧಿಗಳಿಗೆ ಶಿಕ್ಷಿಸಲು ಯಾವುದೇ ಕಾರ್ಯವಿಧಾನವಿಲ್ಲ. ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಮತ್ತು ಸಾರ್ವಜನಿಕರಿಗೆ ಕಿರುಕುಳ ಹೆಚ್ಚಾಗುವುದರಿಂದ ಇದು ಪಾರದರ್ಶಕವಾಗಿಲ್ಲ. ಈ ಚಲನಿಂಗ್ ವ್ಯವಸ್ಥೆಯ ನ್ಯೂನತೆಗಳನ್ನು ನಿವಾರಿಸಲು ಮತ್ತು ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸ್ವಯಂಚಾಲಿತ ಟ್ರಾಫಿಕ್ ಚಲನಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಸಲಹೆ ನೀಡಲಾಗಿದೆ.

ಬೆಂಗಳೂರು ನಗರ ಸಂಚಾರ ಪೋಲೀಸ್ ಯಶಸ್ವಿ ಪರಿಕಲ್ಪನೆಯಾಗಿರುವ ಸಂಚಾರ ಸುಧಾರಣಾ ಯೋಜನೆ (ಬಿ- ಟ್ರಾಕ್), ಶಾಲೆಗೆ ಸುರಕ್ಷಿತ ಮಾರ್ಗಗಳು ಮತ್ತು ಬೆಂಗಳೂರು ನಗರದಲ್ಲಿ ಸ್ಥಳೀಯ ಪ್ರದೇಶ ಸಂಚಾರ ನಿರ್ವಹಣಾ ಯೋಜನೆ ಮುಂತಾದ ಯೋಜನೆಗಳನ್ನು ಇತರೆ ಮಹಾನಗರಗಳಲ್ಲಿಯೂ ಕಾರ್ಯಗತಗೊಳಿಸಬಹುದು. ಇಂತಹ ಯೋಜನೆಗಳು ಸಂಚಾರ ಸಮಸ್ಯೆಗೆ ಸಂಬಂಧಿತ ವಿವಿಧ ಇಲಾಖೆಗಳ ನಡುವಿನ ಸಮನ್ವಯತೆಗೆ ಉತ್ತಮ ಉದಾಹರಣೆ. ಇಂತಹ ಯೋಜನೆಯ ಜಾರಿಯಿಂದಾಗಿ ಸಂಚಾರ ದಟ್ಟಣೆಯನ್ನು ಇಳಿಸಬಹುದು. ಅಲ್ಲದೆ ಸಾರ್ವಜನಿಕರ ಸುರಕ್ಷತೆಯ ಕಾಳಜಿ ವಹಿಸಲು ಸುಲಭವಾಗಬಹುದು. ಇಂತಹ ಸಲಹೆಗಳು ಇಡೀ ಕೃತಿಯ ಅಲ್ಲಲ್ಲಿ ಕಾಣಸಿಗುತ್ತವೆ. ಪರಿಣಾಮಕಾರಿಯಾಗಿ ಅಳವಡಿಸಬಹುದಾದ ಸಂಚಾರ ಸಂಬಂಧಿತ ಸಲಹೆಗಳನ್ನೂ ಲೇಖಕರು ನೀಡಿದ್ದಾರೆ.

ಸಂಚಾರ ಪೋಲೀಸರ ಸಂಖ್ಯೆಯ ಹೆಚ್ಚಳ ಹಾಗೂ ಇತರೆ ಸಂಪನ್ಮೂಲಗಳ ಅಭಿವೃದ್ಧಿ ಮೂಲಕ ಮತ್ತು ಅತ್ಯಾಧುನಿಕ ಸಲಕರಣೆಗಳನ್ನು, ಉಪಕರಣಗಳನ್ನು ಒದಗಿಸುವ ಮೂಲಕ ತುರ್ತಾಗಿ ಸಂಚಾರ ಪೋಲೀಸ್ ಘಟಕವನ್ನು ಆಧುನೀಕರಣಗೊಳಿಸುವ ಅನಿವಾರ್ಯತೆ ಇದೆ.

ಸಂಚಾರ ಪೋಲೀಸ್ ಗೋಚರತೆ (visiblity)ಯು ಉತ್ತಮ ಶಸ್ತ್ರ್ತವಾಗಿದ್ದು, ಈ ಗೋಚರತೆಯು ದೈನಂದಿನ ಕಾರ್ಯಕಲಾಪಗಳಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. ಸಂಚಾರ ನಿರ್ವಹಣೆಯು ಜನಸಾಮಾನ್ಯರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ರಸ್ತೆ ಮೂಲಸೌಕರ್ಯದಲ್ಲಿ ಪೂರ್ಣಪ್ರಮಾಣದ ಅಭಿವೃದ್ದಿಯಿಲ್ಲದೇ ಸಂಚಾರ ದಟ್ಟಣೆಯನ್ನು ಇಳಿಸಬೇಕಾದ ಸವಾಲು ಪೋಲೀಸರ ಸಾಮಥ್ರ್ಯದ ಮೇಲೆ ಅತಿ ಹೆಚ್ಚು ಒತ್ತಡವನ್ನು ಸೃಷ್ಟಿಸಿದೆ. ಆದ್ದರಿಂದ ಸಂಚಾರ ಪೋಲೀಸರ ಸಂಖ್ಯೆಯ ಹೆಚ್ಚಳ ಹಾಗೂ ಇತರೆ ಸಂಪನ್ಮೂಲಗಳ ಅಭಿವೃದ್ಧಿ ಮೂಲಕ ಮತ್ತು ಅತ್ಯಾಧುನಿಕ ಸಲಕರಣೆಗಳನ್ನು, ಉಪಕರಣಗಳನ್ನು ಒದಗಿಸುವ ಮೂಲಕ ತುರ್ತಾಗಿ ಸಂಚಾರ ಪೋಲೀಸ್ ಘಟಕವನ್ನು ಆಧುನೀಕರಣಗೊಳಿಸುವ ಅನಿವಾರ್ಯತೆ ಇದೆ. ಪೊಲೀಸರು ಹಾಗೂ ಸಾರ್ವಜನಿಕರ ಸಮಸ್ಯೆಗಳು ಹಾಗೂ ಸೂಕ್ತ ಪರಿಹಾರಗಳನ್ನು ಸಮತೋಲಿತ ನೆಲೆಯಲ್ಲಿ ವಿವರಿಸಿದ್ದಾರೆ.

ಒಟ್ಟಿನಲ್ಲಿ ಈ ಕೃತಿಯು, ಮಹಾನಗರಗಳಲ್ಲಿ ಸಂಚಾರ ನಿರ್ವಹಣೆಗೆ ಇರುವ ಹಲವು ಆಯ್ಕೆಗಳ ದಕ್ಷತೆ ಹಾಗೂ ಅನ್ವಯಿಸುವಿಕೆಯನ್ನು ಪರೀಕ್ಷೆಗೊಳಪಡಿಸುತ್ತದೆ. ಅವುಗಳಲ್ಲಿ ಕೆಲವನ್ನು ಸಂಚಾರ ನಿರ್ವಹಣಾ ಸಂಸ್ಥೆಗಳು ಅಳವಡಿಸಿಕೊಳ್ಳಬಹುದಾಗಿದ್ದರೆ, ಇನ್ನೂ ಕೆಲವುಗಳಿಗೆ ಶಾಸನಬದ್ಧ ಬದಲಾವಣೆಯ ಅವಶ್ಯಕತೆ ಇದೆ ಎನ್ನುತ್ತದೆ. ಅಲ್ಪಾವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ ಮಾಡಬಹುದಾದ ದೂರದೃಷ್ಟಿಯಿಂದ ಕೂಡಿದ ಸಲಹೆಗಳೂ ಇಲ್ಲಿವೆ. ಈ ಕ್ರಮಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳುವುದರಿಂದ ಉತ್ತಮ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಬಹುದಾಗಿದೆ. ಈ ಸುಸ್ಥಿರ ಕ್ರಮಗಳನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಿದರೆ, ನಮ್ಮ ಮಹಾನಗರಗಳನ್ನು ಇನ್ನೂ ಹೆಚ್ಚು ವಾಸಯೋಗ್ಯಗೊಳಿಸುವುದು ಸಾಧ್ಯ ಎನ್ನಬಹುದು.

Leave a Reply

Your email address will not be published.