ಸಂಚಾರ ಎಂಬ ಸಂಕಟಯಾತ್ರೆ

ನಾನು ಮೊದಲಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ್ದು 6 ದಶಕಗಳಿಗೂ ಹಿಂದೆ. ವೈದ್ಯಕೀಯ ಕಾಲೇಜಿನಲ್ಲಿ ಇಂಟವ್ರ್ಯೂಗೆ ಹಾಜರಾಗಬೇಕಿತ್ತು. ರೈಲು ನಿಲ್ದಾಣದಲ್ಲಿ ಇಳಿದು ಅಂದಿನ ಸುಭಾಷ್‍ನಗರ ಎಂಬ ಖಾಲಿ ಕೆರೆಯನ್ನು ಜಟಕಾದಲ್ಲಿ ದಾಟಿ, ಗಾಂಧಿನಗರದ ಲಾಡ್ಜ್‍ನಲ್ಲಿ ವಾಸ್ತವ್ಯ ಹೂಡಿದೆ.

ಮಾರನೆಯ ದಿನ ಅಲ್ಲಲ್ಲಿ ವಿಚಾರಿಸುತ್ತಾ ಅವೆನ್ಯೂ ರಸ್ತೆಯಲ್ಲಿ ನಡೆಯುತ್ತಲೇ ನಗರದರ್ಶನ ಮಾಡುತ್ತಾ ವೈದ್ಯಕೀಯ ಕಾಲೇಜನ್ನು ತಲುಪಿ, ಕಾರ್ಯ ಮುಗಿದ ಬಳಿಕ ಹೋದ ರಸ್ತೆಯಲ್ಲೇ ವಾಪಸಾಗಿ ಮೈಸೂರು ಸೇರಿದೆ. ಆಗ ಆಟೋಗಳು ಇರಲಿಲ್ಲ. ಸಿಟಿಬಸ್ ಇದ್ದದ್ದು ಯಾರಿಗೂ ತಿಳಿಯುವಂತಿರಲಿಲ್ಲ.

ಹನ್ನೊಂದು ವರ್ಷಗಳ ಬಳಿಕ ಚಾಮರಾಜಪೇಟೆಯ ಹಾಸ್ಟೆಲಿನಲ್ಲಿ, ಬಳಿಕ ಜಯನಗರದ ಬಾಡಿಗೆ ಮನೆಯಲ್ಲಿ 5 ವರ್ಷಕ್ಕೂ ಹೆಚ್ಚು ಸಮಯ ಇರಬೇಕಾಯಿತು. ಆಟೋ, ಸಿಟಿಬಸ್‍ಗಳು ಸಾಕಷ್ಟಿದ್ದರೂ ಅಲ್ಪಸ್ವಲ್ಪ ದೂರವನ್ನು ನಡೆದೇ ಕ್ರಮಿಸಬಹುದಿತ್ತು ಮಹಾತ್ಮಾಗಾಂಧಿ ರಸ್ತೆಯನ್ನೂ ದಾಟಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಿಟಿಬಸ್‍ನಲ್ಲಿ ಸಲೀಸಾಗಿ ಹೋಗಬಹುದಿತ್ತು.

ಬೆಂಗಳೂರು ಮಹಾನಗರವಾಗಿದ್ದರೆ ಹತ್ತಿರದ ಕೆಂಗೇರಿ, ಬಿಡದಿ, ರಾಮನಗರ, ನೆಲಮಂಗಲ ಹಾಗೂ ಹೊಸಕೋಟೆಗಳು ಜನನಿಬಿಡ ನಗರಗಳಾಗಿವೆ. ನಗರದ ತುಂಬೆಲ್ಲ ಜನ, ವಾಹನ, ಸಿಟಿಬಸ್, ಸಾರಿಗೆ ಬಸ್‍ಗಳು, ಮೇಲ್ಸೇತುವೆ ಹಾಗೂ ಮೆಟ್ರೊಗಳು ವಿಜೃಂಭಿಸುತ್ತಿವೆ.

ದಿನಕಳೆದರೆ ನಗರದ ಜನಸಂಖ್ಯೆಯಲ್ಲಿ ಏರಿಕೆಯಾಗುವುದು ಕಣ್ಣಿಗೆ ರಾಚುವಂತಿತ್ತು. ಕಲಾಸಿಪಾಳ್ಯ ಬಸ್‍ನಿಲ್ದಾಣದಲ್ಲಿ ದಿನವೂ ನೂರಾರು ತಮಿಳುನಾಡಿನ ಹೊಸಮುಖಗಳು ಕಾಣುತ್ತಿದ್ದವು.

ಬಸ್‍ಗಳಲ್ಲಿ ಸಂಚರಿಸುವುದು ಕಷ್ಟವಾಗುತ್ತಿತ್ತು. ಆಸ್ಪತ್ರೆಗೆ ತಲುಪುವಾಗ ನಿಂತಿದ್ದ ಪ್ರಯಾಣಿಕರ ಕಾಲನ್ನು ತುಳಿದೋ, ತುಳಿಸಿಕೊಂಡೋ ಜಗಳಕ್ಕೆ ನಿಲ್ಲಬೇಕಿತ್ತು. ಅದಕ್ಕಿಂತ ಮುಖ್ಯವಾಗಿ ಕರ್ತವ್ಯಕ್ಕೆ ಹಾಜರಾಗುವುದು ಕೆಲವೊಮ್ಮೆ ತಡವಾಗಿ ಪ್ರಾಧ್ಯಾಪಕರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು.

ಇದರಿಂದ ರೋಸಿಹೋದ ನಾನು ಇಲಾಖೆಯ ಮುಖ್ಯಸ್ಥರನ್ನು ಕಂಡು ಹತ್ತಿರದ ಹೊಸಕೋಟೆಗೆ ವರ್ಗಾವಣೆ ಮಾಡಿಸಿಕೊಂಡೆ. ತಿಂಗಳಿಗೆ ಒಂದೆರಡು ಸಲ ಬೆಂಗಳೂರಿಗೆ ಬರಬೇಕಾದರೂ ಊರಿಗೆ ಯಾವಾಗ ತಲುಪುತ್ತೇವೋ ಎಂಬ ಆತಂಕ ಅಂದಿನ ದಿನಗಳಲ್ಲಿತ್ತು.

ಅದಾದ ಬಳಿಕ ಅದೆಷ್ಟೋ ಕಾವೇರಿಯ ನೀರು ರಾಜ್ಯದ ರಾಜಧಾನಿಗೆ ಹರಿದುಹೋಗಿದೆ. ಬೆಂಗಳೂರು ಮಹಾನಗರವಾಗಿದ್ದರೆ ಹತ್ತಿರದ ಕೆಂಗೇರಿ, ಬಿಡದಿ, ರಾಮನಗರ, ನೆಲಮಂಗಲ ಹಾಗೂ ಹೊಸಕೋಟೆಗಳು ಜನನಿಬಿಡ ನಗರಗಳಾಗಿವೆ. ನಗರದ ತುಂಬೆಲ್ಲ ಜನ, ವಾಹನ, ಸಿಟಿಬಸ್, ಸಾರಿಗೆ ಬಸ್‍ಗಳು, ಮೇಲ್ಸೇತುವೆ ಹಾಗೂ ಮೆಟ್ರೊಗಳು ವಿಜೃಂಭಿಸುತ್ತಿವೆ. ಜನ ಉಸಿರುಬಿಗಿದು ಹೆಜ್ಜೆಹಾಕುವ ಪರಿಸ್ಥಿತಿಯಿದೆ. ಎಲ್ಲೆಡೆ ಏಕಮುಖ ಸಂಚಾರ ಇದ್ದು ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.

ಜನಸಂಖ್ಯೆ ತ್ವರಿತಗತಿಯಲ್ಲಿ ಹೆಚ್ಚುತ್ತಿರುವುದರಿಂದ ಹಾಗೂ ಸರ್ಕಾರದ ಯೋಜನೆಗಳು ಅದೇ ರೀತಿ ಹೆಚ್ಚಲು ಸಾಧ್ಯವಿಲ್ಲದ ಕಾರಣ ನಗರ ಸಂಚಾರದ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುವುದು ಭ್ರಮೆ, ಮರೀಚಿಕೆ, ಹಗಲುಕನಸು!

-ಡಾ.ಕೆ.ಕೆ.ಜಯಚಂದ್ರಗುಪ್ತ, ಹಾಸನ.


ಪರಿಹಾರವಿದೆ, ಇಚ್ಛಾಶಕ್ತಿ ಕಾಣೆಯಾಗಿದೆ!

ವಿಜ್ಞಾನ ನಗರ, ಐಟಿ ಕೇಂದ್ರ ಎಂದು ಹೆಸರು ಗಳಿಸಿರುವ ಬೆಂಗಳೂರು ನಗರದ ಮುಖಂಡರಿಗೆ ಸಂಚಾರದ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿಲ್ಲ ಮತ್ತು ಅದಕ್ಕೆ ಪ್ರಾಮುಖ್ಯವನ್ನೂ ಕೊಟ್ಟಿಲ್ಲ.

ಹಲವಾರು ದೇಶಗಳಲ್ಲಿ ವಿಮಾನ ನಿಲ್ದಾಣಕ್ಕೆ ನಗರದ ಎಲ್ಲಾ ಕಡೆಗಳಿಂದ ರೈಲು ಮುಖಾಂತರ ತಲುಪುವ ಏರ್ಪಾಡುಗಳಿವೆ. ಆದರೆ ಬೆಂಗಳೂರಿನ ಬುದ್ಧಿಜೀವಿಗಳು ಕಾರು, ಇತರ ವಾಹನಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ವಾಹನಗಳು ಜಾಸ್ತಿಯಾದಂತೆ ಫ್ಲೈಓವರ್‍ಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೂ ಜಾಸ್ತಿಯಾದಾಗ ‘ಸ್ಟೀಲ್ ಫ್ಲೈಓವರ್’ನ ಪ್ರಯತ್ನವೂ ನಡೆಯಿತು. ಬೆಂಗಳೂರಿನ ನಾಗರಿಕರು ವಿರೋಧಿಸಿದರು. ಪರಿಸರ ನಾಶವಾಗುವ ಭಯದಿಂದ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (ಎನ್‍ಜಿಟಿ) ಇದಕ್ಕೆ ತಡೆ ಹಾಕಿತ್ತು.

ಭಾರತದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸಮೂಹಸಾರಿಗೆ ವ್ಯವಸ್ಥೆಗೆ ಪ್ರಾಮುಖ್ಯ ಕೊಟ್ಟರೆ ಸಂಚಾರದ ಸಮಸ್ಯೆ ಕಡಿಮೆಯಾಗುವುದು. ಉದಾಹರಣೆಗೆ, ಒಂದು ರೈಲು ಹೆಬ್ಬಾಳದಿಂದ ಹೊರಟರೆ, ಸಾಧಾರಣ 1000 ಜನರನ್ನು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ 15ನಿಮಿಷಗಳಲ್ಲಿ ತಲುಪಿಸಬಹುದು. ಇದೇ ಸಾವಿರ ಜನರನ್ನು ಕಾರು, ಬಸ್‍ಗಳಲ್ಲಿ ಕೊಂಡುಹೋದರೆ ಸಮಸ್ಯೆ ಬಹಳ. ಇದರಿಂದ ಸಮಯವೂ ವ್ಯರ್ಥವಾಗುತ್ತದೆ. ಇಂತಹ ರೈಲು ಪ್ರತಿ 10ನಿಮಿಷಗಳಿಗೊಮ್ಮೆ ಹೊರಟರೆ 75% ಸಂಚಾರದಟ್ಟಣೆ ಕಡಿಮೆಯಾಗಬಹುದು.

ಸರ್ಕಾರ ಯಾವತ್ತೂ ಇದಕ್ಕೆ ಪ್ರಾಮುಖ್ಯ ಕೊಟ್ಟಿಲ್ಲ. ಲಕ್ಷಗಟ್ಟಲೆ ವಾಹನಗಳಿಂದ, ಅತಿಯಾದ ಕಾರ್ಬನ್-ಡೈ-ಆಕ್ಸೈಡ್ ಮತ್ತು ದೂಳಿನ ಪರಿಣಾಮ ಪರಿಸರಕ್ಕೆ ಸಾಕಷ್ಟು ಹಾನಿಯಾಗಿದೆ.

ಇದೇ ರೀತಿ ಐಟಿ ಹಬ್‍ಗಳಾದ ವೈಟ್‍ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿಗಳಿಗೆ ಜನರು ರೈಲಿನಲ್ಲಿ ಸಂಚರಿಸಿದರೆ ಮಾರ್ಗಗಳಲ್ಲಿ ವಾಹನಗಳು ಕಡಿಮೆಯಾಗಬಹುದು. ಸರ್ಕಾರ ಯಾವತ್ತೂ ಇದಕ್ಕೆ ಪ್ರಾಮುಖ್ಯ ಕೊಟ್ಟಿಲ್ಲ. ಲಕ್ಷಗಟ್ಟಲೆ ವಾಹನಗಳಿಂದ, ಅತಿಯಾದ ಕಾರ್ಬನ್-ಡೈ-ಆಕ್ಸೈಡ್ ಮತ್ತು ದೂಳಿನ ಪರಿಣಾಮ ಪರಿಸರಕ್ಕೆ ಸಾಕಷ್ಟು ಹಾನಿಯಾಗಿದೆ.

ವಾಹನಗಳು ಕಡಿಮೆಯಾಗಿ ರೈಲು ಸಂಚಾರ ಹೆಚ್ಚಿದರೆ ಅವಘಡಗಳು ಕಡಿಮೆಯಾಗುವುದು. ಪಾರ್ಕಿಂಗ್ ದರ ಹೆಚ್ಚಿಸಿದರೆ ನಗರದೊಳಗೆ ಬರುವ ವಾಹನಗಳ ಸಂಖ್ಯೆ ಕಡಿಮೆಯಾಗಬಹುದು. ವ್ಯಾಪಾರ-ವ್ಯವಹಾರ ನಡೆಯುವ ರಸ್ತೆಗಳಲ್ಲಿ ವಾಹನಗಳನ್ನು ತಡೆಗಟ್ಟಲು ಶಟರ್ ಸರ್ವಿಸ್ ಶುರು ಮಾಡಬೇಕು.

ರೈಲು ನಿಲ್ದಾಣಗಳಲ್ಲಿ ಕಾರು, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದರೆ ನಾಗರಿಕರಿಗೆ ರೈಲು ಪ್ರಯಾಣ ಮಾಡಲು ಅನುಕೂಲವಾಗುತ್ತದೆ. ಬಸ್-ಲೇನ್ ಮಾಡಿ ಬಸ್‍ಗೆ ಪ್ರಾಮುಖ್ಯ ಕೊಟ್ಟು, ಕಾರು, ದ್ವಿಚಕ್ರ ವಾಹನಗಳಿಗೆ ಆದ್ಯತೆ ನೀಡಬಾರದು.

ಕೊನೆಯದಾಗಿ ಸ್ಯಾಟ್‍ಲೈಟ್ ಟೌನ್‍ಶಿಪ್‍ಗೆ ಬೇಕಾದ ಮೂಲ ಸೌಕರ್ಯಗಳನ್ನು ತಯಾರಿಸಿ, ಸರ್ಕಾರಿ ಕಚೇರಿಗಳನ್ನು, ಮಾಲ್‍ಗಳನ್ನು ಮತ್ತು ಇನ್ನಿತರ ವ್ಯಾಪಾರ, ವ್ಯವಹಾರಗಳ ಸಂಸ್ಥೆಗಳನ್ನು ನಗರದಲ್ಲಿ ಕಡಿಮೆಗೊಳಿಸಬೇಕು. ಸಮಸ್ಯೆಗಳಿಗೆ ಪರಿಹಾರವಿದೆ. ಆದರೆ ಇಚ್ಛಾಶಕ್ತಿ ಕಾಣೆಯಾಗಿದೆ.

-ಟಿ.ವಿದ್ಯಾಧರ, ಬೆಂಗಳೂರು.


ಒಂದು ಮನೆಗೆ ಒಂದು ವಾಹನ

ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆ ಎನ್ನುವುದು ಕೇವಲ ಭ್ರಮೆ. ಇದಕ್ಕೆ ಬೇಕಾಗಿರುವುದು ದೃಢ ಇಚ್ಚಾಶಕ್ತಿ ಮತ್ತು ಸಮಸ್ಯೆಯ ಉದ್ದ-ಅಗಲ ಮತ್ತು ಆಳ ಗ್ರಹಿಕೆಯ, ವಿಶ್ಲೇಷಣೆಯ ಬೌದ್ಧಿಕ ಆಯಾಮ. ಬೆಂಗಳೂರಿನ ಸಂಚಾರದಟ್ಟಣೆಗೆ ‘ನಾಳೆ ಮತ್ತು ಅದರಾಚೆ’ ಬಗೆಗೆ ಚಿಂತಿಸದ ಬೆಂಗಳೂರಿಗರು ಮತ್ತು ತನ್ನದೇ ಕಾಯಿದೆ–ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸದ ಸರ್ಕಾರಗಳೇ ಕಾರಣ.

ಬೆಂಗಳೂರಿನ ಇಂದಿನ ಸಂಚಾರದಟ್ಟಣೆಗೆ ಮುಖ್ಯಕಾರಣ ದೂರಗಾಮಿ ಚಿಂತನೆರಹಿತ, ‘ಸದ್ಯದ ಸಂಕಷ್ಟದಿಂದ’ ತಪ್ಪಿಸಿಕೊಳ್ಳಲು ನಿರೂಪಿಸಿದ ರಸ್ತೆ ಯೋಜನೆಗಳು. ನಗರದ ಬೆಳವಣಿಗೆ ಸ್ವಾಭಾವಿಕ. ಆದರೆ, ನಗರದ ಧಾರಣ ಸಾಮಥ್ರ್ಯವನ್ನು ಸರಿಯಾಗಿ ಗ್ರಹಿಸದೇ ಲಂಗುಲಗಾಮಿಲ್ಲದೇ ಮುಂದಿನ ನಗರ-ಪಟ್ಟಣಗಳನ್ನು ಸೇರಿವೆ.

ಬೆಂಗಳೂರನ್ನು ಪಿಂಚಣಿಗರ ನಗರ, ಬೆಳೆಯಬಿಟ್ಟದ್ದು, ನಗರ, ಕೆಂಪೇಗೌಡರ ಮಿತಿಯನ್ನು ದಾಟಿ ದಶಕಗಳೇ ಆಗಿದ್ದು ಅಷ್ಟದಿಕ್ಕುಗಳಲ್ಲಿ ಬಹುತೇಕ ಉದ್ಯಾವನಗಳ, ಕಾಸ್ಮೋಪೊಲಿಟನ್ ನಗರ, ಹವಾನಿಯಂತ್ರಿತ ನಗರ ಎಂದೆಲ್ಲಾ ಮಾರ್ಕೆಟಿಂಗ್ ಮಾಡಿ ವಲಸಿಗರಿಗೆ ಮಣೆ ಹಾಕಿದ್ದರ ಫಲವಿದು. ಹೊರರಾಜ್ಯಗಳಿಂದ ರೈಲಿನಲ್ಲಿ ವಲಸಿಗರು ಬೆಂಗಳೂರಿಗೆ ಬಂದಿಳಿದರು. ಈ ನಿಟ್ಟಿನಲ್ಲಿ ಕೊನೆಯ ಮೊಳೆ ಬಿದ್ದದ್ದು ಎಲ್ಲರೂ ಹಾಡಿಹೊಗಳುವ ಐಟಿಕ್ರಾಂತಿ. ರಾಜ್ಯ ಸರ್ಕಾರದ ಕಾರ್ಮಿಕ ಕಾಯ್ದೆಯಲ್ಲಿನ ವಿನಾಯಿತಿಯನ್ನು ಪಡೆದುಕೊಂಡು ಬಹುತೇಕ ಐಟಿ ಕಂಪನಿಗಳು ಬೆಂಗಳೂರಿಗೆ ಲಾಗ್‍ಇನ್ ಮಾಡಿದ್ದು, ನಗರದ ಜನಸಂಖ್ಯೆ ದಿನಬೆಳಗಾಗುವುದರೊಳಗಾಗಿ 20ಲಕ್ಷ ಏರಿತು. ಆದರೆ, ಇದೇ ಮಟ್ಟದಲ್ಲಿ ಹೊಸ ರಸ್ತೆಗಳಾಗಲಿಲ್ಲ. ಇದ್ದ ರಸ್ತೆಗಳು ಅಗಲವಾಗಲಿಲ್ಲ. ಬಳಸುದಾರಿಗಳು ನೇರವಾಗಲಿಲ್ಲ. ಮೆಟ್ರೋ ಅಮೆವೇಗದಲ್ಲಿದೆ. ಮೋನೊ ರೈಲು, ರಿಂಗ್‍ರಸ್ತೆಗಳು, ಪೆರಿಫೆರಲ್ ರಸ್ತೆಗಳು, ಸ್ಟೀಲ್ ಸೇತುವೆಗಳು, ಅಗಲೀಕರಣ, ಮೇಲುಸೇತುವೆಗಳು-ಕೆಳಸೇತುವೆಗಳು ಹಲರೀತಿಯ ವಿರೋಧ, ಪ್ರತಿಭಟನೆ, ತಡೆಯಾಜ್ಞೆಗಳು ಎನ್ನುವ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿವೆ. ರಸ್ತೆ ಅಗಲೀಕರಣವನ್ನು ಸುಗಮಗೊಳಿಸುವ TDR Rights ಕೂಡಾ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದೆ.

ಹುಬ್ಬಳ್ಳಿ-ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ಉಚ್ಚನ್ಯಾಯಾಲಯದ ಪೀಠ ಮತ್ತು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲು ವಲಯ ಕಚೇರಿ ಸ್ಥಾಪನೆಯ ಹಿಂದಿನ ಸುದೀರ್ಘ ಹೋರಾಟವನ್ನು ನೆನೆಸಿಕೊಂಡರೆ ಇದು ಆರ್ಥವಾಗುತ್ತದೆ.

ಪ್ರತಿಯೊಬ್ಬರಿಗೂ ಬೆಂಗಳೂರು ಬೇಕು, ಪ್ರತಿ ಇಲಾಖೆಯ ಕಚೇರಿಯೂ ಬೆಂಗಳೂರಿನಲ್ಲಿಯೇ ಇರಬೇಕು ಎನ್ನುವ ಕ್ರೇಜ್ ಬೆಂಗಳೂರನ್ನು ಸಂಚಾರದಟ್ಟಣೆಯ ನಗರವನ್ನಾಗಿಸಿದೆ. ಹುಬ್ಬಳ್ಳಿ-ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ಉಚ್ಚನ್ಯಾಯಾಲಯದ ಪೀಠ ಮತ್ತು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲು ವಲಯ ಕಚೇರಿ ಸ್ಥಾಪನೆಯ ಹಿಂದಿನ ಸುದೀರ್ಘ ಹೋರಾಟವನ್ನು ನೆನೆಸಿಕೊಂಡರೆ ಇದು ಆರ್ಥವಾಗುತ್ತದೆ. ಅಡಳಿತದ ವಿಕೇಂದ್ರೀಕರಣದ ಸಲುವಾಗಿ ಬೆಳಗಾವಿಯ ಸುವರ್ಣಸೌಧಕ್ಕೆ ಸಾವಿರಾರು ಕೋಟಿ ವ್ಯಯಿಸಿರುವುದು ಇದಕ್ಕೆ ಇನ್ನೊಂದು ಉದಾಹರಣೆ.

ಇತ್ತೀಚೆಗೆ ಪ್ರತಿಯೊಂದು ರಾಜ್ಯವೂ ಅಳವಡಿಸಿಕೊಳ್ಳಲು ಹೊರಟಿರುವ ಉದ್ಯೋಗದಲ್ಲಿ ‘ಮಣ್ಣಿನ ಮಕ್ಕಳು’ ನಿಯಮಾವಳಿಯನ್ನು ನಮ್ಮ ರಾಜ್ಯದಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಯುದ್ಧೋಪಾದಿಯಲ್ಲಿ ಜಾರಿಗೊಳಿಸಿ ವಲಸಿಗರನ್ನು ತಡೆಯುವುದು ಉತ್ತಮ. ಅಡಳಿತವನ್ನು ವಿಕೇಂದ್ರೀಕರಣಗೊಳಿಸಿ ಬೆಂಗಳೂರಿನಲ್ಲಿ ತಳವೂರಿದ ಕಚೇರಿಗಳನ್ನು ಇತರೆಡೆ ವಿಸ್ತರಿಸುವುದು. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಗಳಿಗೆ ಬೆಂಗಳೂರಿನಲ್ಲೇನು ಕೆಲಸ? ಇಂದಿನ ಶೀಘ್ರಗತಿ ಸಂವಹನ ವ್ಯವಸ್ಥೆಯಲ್ಲಿ ಎಲ್ಲವೂ ಮುಖ್ಯಸ್ಥಳದಲ್ಲಿಯೇ ಇರಬೇಕೆನ್ನುವುದು ಅನಾವಶ್ಯಕ. ಬೆಂಗಳೂರಿನ ಸಂಚಾರದಟ್ಟಣೆ ಐಟಿ ವಲಯದಲ್ಲಿ, ವಿಮಾನನಿಲ್ದಾಣ ಮಾರ್ಗದಲ್ಲಿ ಹೆಚ್ಚಾಗಿರುವುದರಿಂದ ಬೆಂಗಳೂರಿನಲ್ಲಿ ಹೊಸದಾಗಿ ಐಟಿ ಕಂಪನಿಗಳು ಲಾಗ್‍ಇನ್ ಅಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ಕನಿಷ್ಟ, ದಕ್ಷಿಣ ಭಾರತದ ಪ್ರಯಾಣಕ್ಕೆ ಎಚ್.ಎ.ಎಲ್. ವಿಮಾನ ನಿಲ್ದಾಣವನ್ನು ಮುಕ್ತವಾಗಿಸಿದರೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ದಟಣೆಯನ್ನು ಇಳಿಸಬಹುದು. ಅವಶ್ಯಕತೆಗಿಂತ ಇದರಲ್ಲಿ `ಸ್ಟೇಟಸ್’ ಹೆಚ್ಚಿಗೆ ಕಾಣುತ್ತಿದೆ. ಜನರು ಹೆಚ್ಚಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ ಮತ್ತು ಕಾರ್ ಪೂಲಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, ದಟ್ಟಣೆಯನ್ನು ನಿಯಂತ್ರಿಸಬಹುದು. ಬೆಂಗಳೂರಿನಲ್ಲಿ ರಸ್ತೆಗಳ ಧಾರಣಾಶಕ್ತಿ ಕೊನೆಯ ಹಂತವನ್ನೂ ಮೀರಿದೆ. ವಾಹನ ಖರೀದಿಯ ಮೇಲೆ ನಿಯಂತ್ರಣ ಹೇರುವ ಕಾಲ ಸನ್ನಿಹಿತವಾಗಿದೆ. ಕಾನೂನಾತ್ಮಕವಾಗಿ ತೊಡಕಿನದಾದರೂ, ಸಂಚಾರದಟ್ಟಣೆÉಯನ್ನು ಪರಿಹರಿಸಲು ಒಂದು ಮನೆಗೆ ಒಂದು ವಾಹನ ಎನ್ನವ ಚಿಂತನೆ ಮೊಳಕೆಯೊಡೆಯಬೇಕು. ಹಾಗೆಯೇ ದೆಹಲಿಯಲ್ಲಿ ಆಗಾಗ ಅವತರಿಸುವ `ಸಮ-ಬೆಸ’ ವ್ಯವಸ್ಥೆಯನ್ನು ಬೆಂಗಳೂರಿನಲ್ಲೂ ಪ್ರಯತ್ನಿಸಬಹುದು.

-ರಮಾನಂದ ಶರ್ಮಾ, ಬೆಂಗಳೂರು.


ಟ್ರಾಫಿಕ್ ಜಂಜಡದಲ್ಲಿ ಬೆಂಗಳೂರು

ಸಿಲಿಕಾನ್ ಸಿಟಿ, ಉದ್ಯಾನನಗರಿ, ಎಂದೆಲ್ಲ ಕರೆಸಿಕೊಂಡು ವಿಶ್ವ ಮನ್ನಣೆ ಗಳಿಸಿರುವ ಬೆಂಗಳೂರು, ಜೊತೆಗೆ ‘ಟ್ರಾಫಿಕ್ ನಗರಿ’ ಎಂಬ ಹಣೆಪಟ್ಟಿಯನ್ನೂ ತೊಟ್ಟುಕೊಂಡಿದೆ. 1.20 ಕೋಟಿಯಷ್ಟು ಜನಸಂಖ್ಯೆ, 80 ಲಕ್ಷಕ್ಕೂ ಮಿಗಿಲಾದ ವಾಹನಗಳನ್ನು ಹೊಂದಿದ್ದು ಏಶಿಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಿದು.

ಹಿಂದೆ ನಿರ್ಮಿಸಿದ ಕಿರಿದಾದ ರಸ್ತೆಗಳು ಇಂದು ಹೆಚ್ಚುವರಿ ವಾಹನಗಳ ಸಾಮಥ್ರ್ಯವನ್ನು ತಡೆದುಕೊಳ್ಳಲಾಗುತ್ತಿಲ್ಲ. ನಂತರದ ವರ್ಷಗಳಲ್ಲಿ ಕೆಲವು ರಸ್ತೆಗಳು ವಿಸ್ತರಣೆಗೊಂಡರೂ ಅಗತ್ಯಕ್ಕೆ ತಕ್ಕಂತೆ ವಿಸ್ತರಣೆಯಾಗಲಿಲ್ಲ. ಅವೆಲ್ಲವೂ ತಾತ್ಕಾಲಿಕ ಸಮಸ್ಯೆಗಳ ನಿವಾರಣೆಗೆ ಮಾತ್ರ ಸೀಮಿತವಾಗಿದ್ದವು. ಶಾಶ್ವತ ಪರಿಹಾರಕ್ಕೆ ಸರಿಯಾದ ಮಾರ್ಗವನ್ನು ಹುಡುಕಲಿಲ್ಲ. ಇಂದು ರಸ್ತೆಗಳ ವಿಸ್ತರಣಾ ಕಾರ್ಯಗಳಿಗೆ ಆರ್ಥಿಕ ಸಮಸ್ಯೆಗಳಿಲ್ಲದಿದ್ದರೂ ಬಿ.ಡಿ.ಎ. ಹಾಗ ಬಿ.ಬಿ.ಎಂ.ಪಿ. ನಾನಾ ಕಾನೂನು ತೊಡಕುಗಳನ್ನು ಎದುರಿಸುತ್ತಿವೆ. ನ್ಯಾಯಾಲಯದಿಂದ ಜಾರಿಗೊಂಡ ತಡೆಯಾಜ್ಞೆಗಳು ವಿಸ್ತರಣಾಕಾರ್ಯಗಳನ್ನು ಸ್ತಗಿತಗೊಳಿಸಿವೆ. ದಟ್ಟಣೆ ಹೆಚ್ಚಾಗಿರುವ ಸ್ಥಳಗಳಲ್ಲಿ ಪ್ಲೈಓವರ್‍ಗಳನ್ನು ನಿರ್ಮಿಸಿದರೆ, ಪ್ಲೈಓವರ್‍ಗಳ ಮೇಲೂ ಸಂಚಾರದಟ್ಟಣೆಯೇ. ಬಹುನಿರೀಕ್ಷೆಯಿಂದ ಪ್ರಾರಂಭಗೊಂಡ ಮೆಟ್ರೋ ರೈಲುಗಳಿಂದಲೂ ಬೆಂಗಳೂರಿನ ವಾಹನದಟ್ಟಣೆ ಸಮಸ್ಯೆಗಳು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಬಗೆಹರಿದಿಲ್ಲ.

ನಗರದಲ್ಲಿ ಸಂಚಾರದಟ್ಟಣೆ ಕುರಿತು ಇತ್ತೀಚೆಗೆ ಬಸ್ ಪ್ರಯಾಣಿಕರ ವೇದಿಕೆ ಸಲ್ಲಿಸಿದ ಬೇಡಿಕೆಗಳು ಹೀಗಿವೆ: ಬಸ್ ಪ್ರಯಾಣದರ, ಅವಧಿ ಇಳಿಕೆಯಾಗಬೇಕು, ಕಿರುರಸ್ತೆ ಕಡಿಮೆ ಅಂತರದ ಮಾರ್ಗಗಳಲ್ಲಿ ಮಿನಿಬಸ್‍ಗಳನ್ನು ಓಡಿಸಬೇಕು, ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು. ಈ ಬೇಡಿಕೆಗಳು ತಾತ್ಕಾಲಿಕ ಪರಿಹಾರ ಒದಗಿಸಬಲ್ಲವೇ ಹೊರತು, ಶಾಶ್ವತವಲ್ಲ.

ದಟ್ಟಣೆ ಪರಿಹಾರಕ್ಕೆ ಕೆಲವು ಸಲಹೆಗಳು

1. ವಾಹನ ದಟ್ಟಣೆಯಿರುವ ರಸ್ತೆಗಳ ಅಗಲೀಕರಣಕ್ಕೆ ಆದ್ಯತೆ ನೀಡುವುದು. ಅಗತ್ಯವಿದ್ದೆಡೆ ಹೊಸ ರಸ್ತೆಗಳನ್ನು ನಿರ್ಮಿಸುವುದು. ಸಂಚಾರದಟ್ಟಣೆ ಇರುವೆಡೆ ಪರ್ಯಾಯ ರಸ್ತೆ/ಪ್ಲೈಓವರ್‍ಗಳನ್ನು ನಿರ್ಮಿಸುವುದು.

2. ಇಲ್ಲಿನ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ಕೊಟ್ಟು ಅವರನ್ನೇ ಹೆಚ್ಚಾಗಿ ನೇಮಿಸಿಕೊಳ್ಳುವುದು (ಇದು ವಲಸಿಗರ ಕಡಿವಾಣ ಹಾಕಲು).

3. ಹೊಸ ಬಡಾವಾಣೆಯ ರಸ್ತೆಗಳು ವಿಶಾಲವಾಗಿರಬೇಕು.

4. ನಗರದ ನಾಲ್ಕು ದಿಕ್ಕುಗಳ ಹೊರವಲಯಕ್ಕೂ ಮೆಟ್ರೋ ರೈಲುಗಳ ವಿಸ್ತರಣೆ.

-ಎಲ್.ಚಿನ್ನಪ್ಪ, ಬೆಂಗಳೂರು.

Leave a Reply

Your email address will not be published.