‘ಸಂಚಾರ ದಟ್ಟಣೆಗೆ ಸಾರ್ವಜನಿಕ ಸಾರಿಗೆಯೇ ಪರಿಹಾರ’

ಡಾ.ಎಂ.ಎ.ಸಲೀಂ ಅವರು ಸಂಚಾರ ನಿರ್ವಹಣೆ ಕುರಿತು ವಿಶೇಷ ಪರಿಶ್ರಮ, ಪರಿಣತಿ ಹೊಂದಿದ ವಿರಳ ಐಪಿಎಸ್ ಅಧಿಕಾರಿ. 19 ದೇಶಗಳನ್ನು ಸುತ್ತಿ ಅಲ್ಲಿನ ಸಂಚಾರ ದಟ್ಟಣೆಯ ಕಾರಣ, ನಿಯಂತ್ರಣ, ತಂತ್ರಜ್ಞಾನದ ಬಳಕೆ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಅನೇಕ ಲೇಖನ, ಪುಸ್ತಕ ಹೊರತಂದಿದ್ದಾರೆ. ಪ್ರಸ್ತುತ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಎಡಿಜಿಪಿ ಆಗಿರುವ ಸಲೀಂ ಅವರ ವಿಶೇಷ ಸಂದರ್ಶನ ಇಲ್ಲಿದೆ.

ಸಂಚಾರ ದಟ್ಟಣೆಗೆ ಕಾರಣಗಳೇನು? ನಿಯಂತ್ರಿಸುವ ಪರ್ಯಾಯ ಮಾರ್ಗಗಳು ಯಾವುವು?

ಸಂಚಾರ ದಟ್ಟಣೆಗೆ ಪ್ರಮುಖ ಕಾರಣ ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡದಿರುವುದು. ನಾಗರಿಕರು ತಮ್ಮ ವಾಹನಗಳ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಂಚರಿಸಬೇಕು. ಇದುವೇ ದಟ್ಟಣೆ ಕಡಿಮೆ ಮಾಡಲು ಇರುವ ಪರಿಣಾಮಕಾರಿ ಪರ್ಯಾಯ ಮಾರ್ಗ.

ಇದಕ್ಕೆ ಜನರು ಸ್ಪಂದಿಸಬೇಕು. ಬಿಎಂಟಿಸಿ ಬಸ್‍ಗಳ ಸಂಖ್ಯೆ ಹೆಚ್ಚಾಗಬೇಕು. ಮೆಟ್ರೋ ರೈಲು ಮಾರ್ಗಗಳು ಬೆಂಗಳೂರಿನಲ್ಲಿ ಸಂಪೂರ್ಣವಾದ ನಂತರ ಒಂದಿಷ್ಟು ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ. ಮುಂಬೈನಲ್ಲಿ ಶೇ.82 ರಷ್ಟು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಈ ಸಂಖ್ಯೆ ಶೇ.45 ರಷ್ಟು ಮಾತ್ರ. ಹೀಗಾಗಿ ಬೆಂಗಳೂರು ನಗರದಲ್ಲಿ ಸಂಚಾರದಟ್ಟಣೆ ಹೆಚ್ಚಾಗಿದೆ. ಇನ್ನು, ಬಿಎಂಟಿಸಿ ಬಸ್ ದರ ಕಡಿಮೆಗೊಳಿಸಿ ಸಾರ್ವಜನಿಕರನ್ನು ಬಸ್ ಬಳಯೆಡೆ ಆಕರ್ಷಿಸಬೇಕು.

ಈಗ 4 ಲಕ್ಷ ಜನ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ. ಮೆಟ್ರೋ ರೈಲು ಯೋಜನೆ ಪೂರ್ಣಗೊಂಡರೆ 35 ಲಕ್ಷ ಜನ ಬಳಕೆ ಮಾಡುತ್ತಾರೆ. ಆಗ ಸಂಚಾರ ದಟ್ಟಣೆ ಕಡಿಮೆಯಾಗಲು ಸಾಧ್ಯ. ಅದೇ ರೀತಿ ನಗರದಲ್ಲಿ ಕಮ್ಯೂಟ್ ರೈಲು ಬರಬೇಕು. ಈ ಕುರಿತು ಸರ್ಕಾರ ಈಗಾಗಲೇ ಗಮನ ಹರಿಸಿದೆ. ಕೆಂಗೇರಿ-ಮೆಜೆಸ್ಟಿಕ್, ಕೆಂಗೇರಿ-ವೈಟ್ ಫೀಲ್ಡ್, ಕೆಆರ್‍ಪುರ್-ಬಾಣಾವರ ಮಾರ್ಗಗಳು ಜಾರಿಯಾದರೆ ದಟ್ಟಣೆ ಕಡಿಮೆ ಯಾಗುತ್ತದೆ.

ಸಂಚಾರ ನಿರ್ವಹಣೆ ತಜ್ಞ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ

ಸಾರಿಗೆ, ಸಂಚಾರದ ಕ್ಷೇತ್ರದಲ್ಲಿ ಡಾ.ಎಂ.ಎ.ಸಲೀಂ ಚಿರಪರಿಚಿತ ಹೆಸರು. 1993ರಲ್ಲಿ ಭಾರತೀಯ ಫೊಲೀಸ್ ಸೇವೆಗೆ ಸೇರಿದ ಈ ಆಧಿಕಾರಿ ‘ಸಂಚಾರ ದಟ್ಟಣೆ ನಿರ್ವಹಣೆ’ ವಿಷಯದಲ್ಲಿಯೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ಕೆಎಸ್‍ಆರ್‍ಟಿಸಿ ನಿರ್ದೇಶಕರಾಗಿ, ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ, ಎಸಿಪಿ ಹಾಗೂ ಬೆಂಗಳೂರು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಆಯುಕ್ತರಾಗಿ ಸಂಚಾರ ಮತ್ತು ಸಾರಿಗೆ ನಿರ್ವಹಣೆ ಕುರಿತು ವಿಶೇಷ ಒಲವು ತೋರಿದವರು.

ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ಸಂಚಾರ ಕ್ರಮ ಮತ್ತು ನಿಯಮಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ವಹಿಸಿರುವ ಡಾ.ಸಲೀಂ, ಬೆಂಗಳೂರಿನಲ್ಲಿ ಶೇ.50ರಷ್ಟು ಅಪಘಾತ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಚಾರ ಹರಿವಿನ ವೈಜ್ಞಾನಿಕ ಅಧ್ಯಯನದ ಅಡಿಯಲ್ಲಿ ಬೆಂಗಳೂರಿನ 128 ರಸ್ತೆಗಳಿಗೆ ಏಕಮುಖ ಸಂಚಾರ ಅಳವಡಿಕೆಗೆ ಕಾರಣರಾಗಿದ್ದಲ್ಲದೆ, ಶಾಲೆಯೆಡೆಗೆ ಸುರಕ್ಷಿತ ದಾರಿ (ಸೇಫ್ ರೂಟ್ ಟು ಸ್ಕೂಲ್) ಎಂಬ ಯೋಜನೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ‘ಪಬ್ಲಿಕ್ ಐ’ ಎಂಬ ಸಾರ್ವಜನಿಕರ ಒಳಗೊಳ್ಳುವಿಕೆಯ ವಿಶೇಷ ಕಾರ್ಯಕ್ರಮ ಸಲೀಂ ಅವರ ಕೂಸು. ಪ್ರಸ್ತುತ ಬೆಂಗಳೂರಿನಲ್ಲಿ ಹೆಚ್ಚುವರಿ ಫೊಲೀಸ್ ಮಹಾನಿರ್ದೇಶಕ (ಆಡಳಿತ) ಹುದ್ದೆ ನಿರ್ವಹಿಸುತ್ತಿದ್ದಾರೆ.

ಮೆಲ್ಬರ್ನ್ ನಗರದಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಸಂಪೂರ್ಣ ಉಚಿತ. ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಉಚಿತವಾಗಿ ಸಂಚಾರ ಮಾಡಬಹುದು. ಇದರಿಂದ ಅಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಅದೇ ರೀತಿ ಇಲ್ಲಿಯೂ ಉಚಿತವಲ್ಲದಿದ್ದರೂ, ಬಿಎಂಟಿಸಿ ಬಸ್ ದರ ಕಡಿಮೆ ಮಾಡಿದರೆ ಜನ ಸಾರ್ವಜನಿಕ ಸಾರಿಗೆ ಬಳಕೆಗೆ ಮುಂದಾಗುತ್ತಾರೆ.

ವಾಹನಗಳ ನೋಂದಣಿ ಕಡಿಮೆ ಮಾಡಬಹುದಾ? ಇದರಿಂದ ದಟ್ಟಣೆ ಕಡಿಮೆ ಆಗುತ್ತದೆಯೇ?

ಯಾವುದೇ ಕಾರಣಕ್ಕೂ ಈ ಉಪಾಯ ಒಳ್ಳೆಯದಲ್ಲ. ವ್ಯಕ್ತಿಗೆ ತಮ್ಮ ಸ್ವಂತ ವಾಹನ ಹೊಂದುವ ಆಸೆ ಇರುತ್ತದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಲು ಸಾಧ್ಯವಿಲ್ಲ. ವ್ಯಾಪಾರಿಗಳು, ನೌಕರರು ಮತ್ತು ಸಾರ್ವಜನಿಕರು ತಮ್ಮದೇ ಆದ ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಖಾಸಗಿ ವಾಹನಗಳ ನೋಂದಣಿಯಿಂದ ತೊಂದರೆ ಇಲ್ಲ. ಆದರೆ ನಾಗರಿಕರು ತಮ್ಮ ವಾಹನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಅಗತ್ಯವಿದ್ದಾಗ ಮಾತ್ರ ತಮ್ಮ ವಾಹನಗಳನ್ನು ಬಳಕೆ ಮಾಡಲು ಅಭ್ಯಂತರವಿಲ್ಲ.

ಫ್ಲೈ ಓವರ್‍ಗಳಿಂದ ಏನಾದರೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾಧ್ಯವೆ?

ಫ್ಲೈಓವರ್‍ಗಳನ್ನು ಹೆಚ್ಚು ನಿರ್ಮಾಣ ಮಾಡುವುದು ಪರಿಹಾರ ಮಾರ್ಗವಲ್ಲ. ತೀರಾ ಅಗತ್ಯವಿದ್ದ ಕಡೆ ಮಾತ್ರ ಫ್ಲೈ ಓವರ್ ನಿರ್ಮಾಣ ಮಾಡಬೇಕೇ ವಿನಾ ಹೆಚ್ಚು ಫ್ಲೈ ಓವರ್ ಮಾಡುವ ಅಗತ್ಯವಿಲ್ಲ. ಇದರ ಬದಲು ಮೆಟ್ರೋ ಲೈನ್‍ಗಳನ್ನು ಹೆಚ್ಚು ಮಾಡಬೇಕು. ಬಸ್‍ಗಳ ಸಂಖ್ಯೆ ಹೆಚ್ಚಿಸುವ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು. ಆದಷ್ಟು ಬೇಗ ಮೆಟ್ರೋ ರೈಲು ನಿರ್ಮಾಣ ಮುಕ್ತಾಯವಾದರೆ ಸಹಜವಾಗಿಯೇ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.

ಪೀಕ್ ಅವರ್ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳೇನಾದರು ಇವೆಯೇ?

ಪೀಕ್ ಅವರ್ ಅವೈಡ್ ಮಾಡಲು ಹಲವಾರು ಮಾರ್ಗಗಳನ್ನು ಈ ಹಿಂದೆಯೇ ಜಾರಿಗೆ ತರಲಾಗಿದೆ. ಸಾರ್ವಜನಿಕ ವಾಹನ ಹಾಗೂ ಶಾಲಾ ವಾಹನಗಳು ಏಕ ಕಾಲದಲ್ಲಿ ಸಂಚರಿಸುತ್ತಿದ್ದದ್ದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿತ್ತು. ಈ ಕಾರಣಕ್ಕಾಗಿಯೇ ಶಾಲೆಗಳ ವೇಳೆಯನ್ನು ಬದಲಾವಣೆ ಮಾಡಲಾಗಿದ್ದು ಬೆಳಿಗ್ಗೆಯೇ ಶಾಲಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಆನಂತರ ಸಾರ್ವಜನಿಕರ ವಾಹನಗಳು ಸಂಚರಿಸಲು ಅನುಕೂಲ ಮಾಡಿಕೊಡಲಾಗಿದೆ. ಹೀಗಾಗಿ ಪೀಕ್ ಅವರ್‍ನಲ್ಲಿ ಸಂಚಾರ ದಟ್ಟಣೆ ಒಂದಿಷ್ಟು ಕಡಿಮೆ ಆಗಿದೆ. ಆದರೆ ಅದು ಸಂಪೂರ್ಣ ಹತೋಟಿಗೆ ಬಂದಿಲ್ಲ. ಕಚೇರಿ ಮತ್ತು ಇತರೆ ಅಗತ್ಯ ಕೆಲಸಗಳಿಗೆ ಒಂದೇ ಸಮಯದಲ್ಲಿ ಸಾರ್ವಜನಿಕರು ರಸ್ತೆಗಿಳಿಯುವುದರಿಂದ ದಟ್ಟಣೆ ಕಡಿಮೆಗೊಳಿಸುವುದು ಕಷ್ಟವೇ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಪ್ರಮುಖ ರಸ್ತೆಗಳ, ಬಡಾವಣೆ ರಸ್ತೆಗಳ ಅಗೆತವೂ ಕಾರಣ ಇರಬಹುದೇ?

ಹೌದು, ನಗರದ ಹಲವಾರು ರಸ್ತೆಗಳಲ್ಲಿ ರಸ್ತೆ ಅಗಲೀಕರಣ, ಕೇಬಲ್‍ಗಾಗಿ, ಓಎಫ್‍ಸಿಗಾಗಿ, ಜಲಮಂಡಳಿ ಕಾರ್ಯಕ್ಕೆ ರಸ್ತೆಗಳನ್ನು ಅಗೆಯುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿರುವುದು ಬಹುತೇಕ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವೂ ಆಗಿದೆ. ಕಾನೂನು ಬಾಹಿರವಾಗಿ ಇಂತಹ ಕಾರ್ಯಗಳನ್ನು ಮಾಡುವವರಿಗೆ ಬಿಬಿಎಂಪಿ ದಂಡ ಹಾಕಬೇಕು. ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು.

ಇನ್ನು, ಸಾರ್ವಜನಿಕ ರಸ್ತೆಗಳನ್ನು ಕೆಲ ಕಂಪನಿಗಳು, ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು ಇದರಿಂದಲೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಲ್ಲದೆ ಫುಟ್‍ಪಾತ್‍ಗಳಲ್ಲಿ ಅಂಗಡಿ ಇಟ್ಟುಕೊಂಡಿರುವುದು ಕೂಡ ಸಂಚಾರ ದಟ್ಟಣೆಗೆ ಕಾರಣವಾಗಿದೆ. ದಿಟ್ಟ ನಿರ್ಧಾರ ಕೈಗೊಂಡು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿದಾಗ ಮಾತ್ರ ಈ ಸಮಸ್ಯೆ ಪರಿಹಾರ ಕಾಣಲು ಸಾಧ್ಯ. ಈ ಎಲ್ಲದರ ಬಗ್ಗೆ ಬಿಬಿಎಂಪಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.

ದೇಶದ ಇತರ ನಗರಗಳ ಹೋಲಿಕೆಯಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಹೇಗೆ ವಿಶ್ಲೇಷಿಸಬಹುದು?

ಬೆಂಗಳೂರು ಅತೀ ವೇಗವಾಗಿ ಬೆಳೆಯುವ ನಗರ. ಇತರೆ ರಾಜ್ಯಗಳ ಪ್ರಮುಖ ನಗರಗಳಿಗಿಂತಲೂ ಈ ನಗರ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಚೆನ್ನೈ, ಕೊಲ್ಕತ್ತಾ, ಮುಂಬೈ ಮತ್ತು ನವದೆಹಲಿಗಳನ್ನು ಹೋಲಿಕೆ ಮಾಡಿದಾಗ ಕೂಡ ಬೆಂಗಳೂರು ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಈ ನಗರಕ್ಕೆ ಬೇರೆ ದೇಶಗಳಿಂದ, ಬೇರೆ ರಾಜ್ಯಗಳಿಂದ ಜನ ಬರುತ್ತಿದ್ದಾರೆ. ಹೀಗಾಗಿ ಇಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇದರಿಂದ ವಾಹನಗಳು ಹೆಚ್ಚಾಗುತ್ತಿವೆ. ಪರಿಣಾಮವಾಗಿ ಸಂಚಾರ ದಟ್ಟಣೆ ಅನಿವಾರ್ಯವಾಗಿದೆ. ಹಿಂದೆ ಚೆನ್ನೈನಲ್ಲಿ ಹೆಚ್ಚು ಸಂಚಾರ ದಟ್ಟಣೆ ಇತ್ತು. ಆದರೆ ಈಗ ಬೆಂಗಳೂರು ಅದನ್ನು ಮೀರಿ ಬೆಳದಿದೆ.

ಇಲ್ಲಿ ಐಟಿ ಕಂಪನಿಗಳು ಸೇರಿದಂತೆ ಇತರೆ ವ್ಯಾಪಾರವಹಿವಾಟು ಹೆಚ್ಚಾಗಿರುವುದರಿಂದ ಒಂದು ರೀತಿಯಲ್ಲಿ ಬೆಂಗಳೂರು ಎಲ್ಲರ ಆಕರ್ಷಣೆಯ ನಗರವಾಗಿದೆ. ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಹಜವಾಗಿಯೇ ವಾಹನಗಳ ಸಂಖ್ಯೆಯೂ ಬೆಳೆಯುತ್ತಿದೆ.

ಸಂಚಾರ ದಟ್ಟಣೆಗೆ ಸಂಚಾರಿ ಪೊಲೀಸರ ಕೊರತೆಯಿದೆಯೇ? ಪೊಲೀಸರಿಂದ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವೆ?

ಕಳೆದ 12 ವರ್ಷಗಳಿಂದ ಪೊಲೀಸರ ಸಂಖ್ಯೆ ಜಾಸ್ತಿ ಆಗಿದೆ. ಸರ್ಕಾರ ಪೊಲೀಸರನ್ನು ನೇಮಕ ಮಾಡಿದೆ. ಆದರೆ ಬಿಪಿಆರ್ ನಾಮ್ರ್ಸ್ ಪ್ರಕಾರ ಎಷ್ಟು ಪೊಲೀಸರು ಇರಬೇಕು ಅಂತ ಇದೆಯೋ ಅಷ್ಟು ಇಲ್ಲ. ಪೊಲೀಸರ ಸಂಖ್ಯೆ ಹೆಚ್ಚಳದಿಂದಲೂ ಸಂಚಾರ ದಟ್ಟಣೆ ನಿಯಂತ್ರಿಸಲು ಸಾಧ್ಯ. ಈ ಬಗ್ಗೆ ನಾನು ನನ್ನ ಪುಸ್ತಕದಲ್ಲಿ ಅಗತ್ಯ ಪೊಲೀಸರ ಸಂಖ್ಯೆ ಕುರಿತು ಸಲಹೆ ನೀಡಿದ್ದೇನೆ. ಎ.ಬಿ.ಸಿ. ಮೂಲಕ, ಸಂಚಾರಿ ಪೊಲೀಸರ ನೇಮಕ ಮೂಲಕ ಸಹಜವಾಗಿ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಸಾಧ್ಯ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಿ-ಟ್ರ್ಯಾಕ್ ಯೋಜನೆ ಉಪಯೋಗವಾಗಿದೆಯೇ?

ಇಲ್ಲ, ಬಿ-ಟ್ರ್ಯಾಕ್ ಯೋಜನೆ ಸಂಚಾರ ನಿಯೋಜನೆ ಕುರಿತು ಇರುವ ಒಂದು ಮಾರ್ಗ. ಇದು ಸಂಚಾರಿ ಪೊಲೀಸರ ನಿಯೋಜನೆ, ಕ್ಯಾಮರಾ ಅಳವಡಿಕೆ, ಸಂಚಾರಿ ನಿಯಮ ಪಾಲನೆ ಕುರಿತ ಒಂದು ಯೋಜನೆ. ಇದರಿಂದ ಸಂಚಾರ ಉಲ್ಲಂಘನೆಗಳನ್ನು ಕಲೆ ಹಾಕಲು, ಉಲ್ಲಂಘನೆ ಮಾಡಿದವರನ್ನು ಗುರುತಿಸಲು ಸಾಧ್ಯವಾಗುತ್ತದೆ. ಇಂದು ನಗರದ ಬಹುತೇಕ ಕೂಡು ರಸ್ತೆಗಳಲ್ಲಿ, ಸಿಗ್ನಲ್‍ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳಿಂದ ಅನುಹಾತ ಘಟನೆ, ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ಗುರುತಿಸಲು ಸಾಧ್ಯವಾಗಿದೆ. ಹೀಗಾಗಿ ಸಂಚಾರಿ ನಿಯಮ ಪಾಲನೆಗೆ ಇದು ಅನುಕೂಲಕರವಾಗಿದೆ.

ಇದರಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿವೆ. 2003ರಲ್ಲಿ 10 ಸಾವಿರ ಅಪಘಾತಗಳಾಗಿದ್ದವು. ನಂತರದ ದಿನಗಳಲ್ಲಿ ಅದರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಇಂದು ಅಪಘಾತ ಸಂಖ್ಯೆ 4500ಕ್ಕೆ ಇಳಿದಿದೆ.

ಸಂದರ್ಶನ: ಮಂಜುನಾಥ ತುರುವನೂರು

Leave a Reply

Your email address will not be published.