ಸಂಚಾರ ದಟ್ಟಣೆಯ ‘ಬೆಂಗಳೂರು’ ಕಾರಣರಾರು?

…ಹೀಗಾದರೆ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಆಗೇ ಆಗುತ್ತದೆ, ಮೆಟ್ರೋಗಳಲ್ಲಿ ಕೂಡಲು ಜಾಗ ಸಿಗುತ್ತದೆ, ಮನೆಗಳ ಬಾಡಿಗೆಯೂ ಕಮ್ಮಿಯಾಗುತ್ತದೆ; ರೈತರನ್ನು ಅವರ ಊರಿನಲ್ಲೇ ಉಳಿಸಿದರೆ ಈರುಳ್ಳಿಯ ಬೆಲೆಯೂ ಇಳಿಯುತ್ತದೆ!

ಗುರುಪ್ರಸಾದ ಕುರ್ತಕೋಟಿ

ಬೆಂಗಳೂರಿನ ಈ ಗೋಳಿಗೆ ಕಾರಣ ಯಾರು ಅಂತ ಹುಡುಕುತ್ತ ಹೊರಟರೆ ಮೊಟ್ಟಮೊದಲನೆಯದಾಗಿ ಸಿಗೋದು `ಎಲ್ಲಾ ಈ ಸಾಫ್ಟ್ವೇರ್ ನವರಿಂದಲೇ ಆಗಿದ್ದು’ ಅನ್ನುವ ಮೂದಲಿಕೆ. ಈ ಸಾಫ್ಟ್ವೇರ್ ನವರನ್ನು ಯಾವುದೋ ಅನ್ಯಗ್ರಹದ ಜೀವಿಗಳನ್ನು ನೋಡುವ ಹಾಗೆ ಜನ ನೋಡುತ್ತಾರೆ. ಅವರಿಂದಲೇ ಎಲ್ಲ ಸಮಸ್ಯೆಗಳು ಅನ್ನೋದು ತುಂಬಾ ಜನರ ಅಂಬೋಣ. ಹಾಗೆ ಅನ್ನೋರಲ್ಲಿ ಎಷ್ತೋ ಜನರ ಬಿಸಿನೆಸ್ ಹೆಚ್ಚಾಗಿದ್ದೂ ಕೂಡ ಈ ಸಾಫ್ಟ್ವೇರ್ ಜನರಿಂದಲೇ!

ಬೇರೆ ಎಷ್ತೋ ರೀತಿಗಳಲ್ಲಿ ವರವಾಗಿದ್ದರೂ ಟ್ರಾಫಿಕ್ ಅಥವಾ ಜನದಟ್ಟಣೆ ಸಮಸ್ಯೆಯನ್ನು ಈ ಉದ್ಯಮ ಸಂಕೀರ್ಣಗೊಳಿಸಿದ್ದನ್ನು ಅಲ್ಲಗಳೆಯಲಾಗದು. ಈ ಉದ್ಯಮದ ಸವಲತ್ತುಗಳು ಬೇರೆ ಎಲ್ಲ ಕಡೆಯಿಂದ ಜನರನ್ನು ಸೆಳೆಯುತ್ತಿದೆ. ಆದರೆ ಎಲ್ಲಾ ಸಮಸ್ಯೆಗಳಿಗೂ ಇದೊಂದೇ ಕಾರಣ ಖಂಡಿತ ಅಲ್ಲ!

ನಾನು ಆ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಓಡಿಸ್ಸಾದಿಂದ ಇಲ್ಲಿ ಬಂದು ತಳ ಊರಿದ್ದ ಸಹೋದ್ಯೋಗಿಯೊಬ್ಬ ನಿಮ್ಮ ಬೆಂಗಳೂರಿನ ರಸ್ತೆಗಳೇ ಸರಿ ಇಲ್ಲ ಅಂದಿದ್ದು ನನ್ನನ್ನು ತುಂಬಾ ಉರಿಸಿತ್ತು. ‘ಅಲ್ಲಯ್ಯಾ ಇಲ್ಲಿ ರಸ್ತೆಗಳಾದರೂ ಇವೆ. ನಿಮ್ಮ ರಾಜ್ಯದಲ್ಲಿ ಅದೂ ಇಲ್ಲವಲ್ಲ?’ ಅಂತ ಅವನಿಗೆ ಹೇಳಿ, ‘ನೀವೆಲ್ಲ ಇಲ್ಲಿಗೆ ಬಂದಿದ್ದಕ್ಕೆ ಬೆಂಗಳೂರಿನ ಗತಿ ಹೀಗಾಗಿದ್ದು, ಎಷ್ಟು ಸವಲತ್ತು ಕೊಟ್ಟರೂ ಸಾಕಾಗುತ್ತಿಲ್ಲ’ ಅಂತ ಬೈದಿದ್ದೆ. ಆದರೆ ಹಾಗಂತ ಯಾರೂ ನಮ್ಮ ಬೆಂಗಳೂರಿಗೆ ಬರಲೇಕೂಡದು ಅನ್ನುವ ಧೋರಣೆಯೂ ಸರಿ ಅಲ್ಲ.

ಬೇರೆ ರಾಜ್ಯದವರು, ಹಾಗೂ ನಮ್ಮದೇ ರಾಜ್ಯದ ಬೇರೆ ಊರಿನಿಂದ ಜನರು ಬೆಂಗಳೂರಿಗೆ ಯಾಕೆ ಗುಳೇ ಬರುತ್ತಾರೆ? ಯಾಕೆಂದರೆ ಬೆಂಗಳೂರು ಸಿಕ್ಕಾಪಟ್ಟೆ ಅವಕಾಶಗಳ ಸಾಗರ! ಯಾವ ರೀತಿಯ ಅವಕಾಶಗಳು ಇಲ್ಲಿವೆ ಅಂತ ಹುಡುಕುತ್ತ ಹೋದರೆ ಆ ಪಟ್ಟಿ ಹನುಮಂತನ ಬಾಲ ಆಗುವುದರಲ್ಲಿ ಸಂಶಯವೇ ಇಲ್ಲ. ಅದರ ಜೊತೆಗೆ ಇಲ್ಲಿನ ಸಮಸ್ಯೆಗಳ ಪಟ್ಟಿಯದು ಇನ್ನೊಂದು ಬಾಲ!

ಅವರ ವೇಷ ಭೂಷಣ ನೋಡಿಯೇ ಅವರೊಬ್ಬ ಉತ್ತರ ಕರ್ನಾಟಕದ ರೈತ ಅಂತ ನಾನು ಊಹಿಸಿದೆ. ಅವರಿಗೆ ನಮಸ್ಕಾರ ಮಾಡಿ ಎಲ್ಲಿಯವರು, ಏನು ಅಂತ ವಿಚಾರಿಸಿದಾಗ ನನ್ನ ಊಹೆ ನಿಜ ಅಂತ ಗೊತ್ತಾಯ್ತು.

ಅವತ್ತೊಂದು ಮುಂಜಾನೆ ನಮ್ಮ ಮನೆಯ ಹತ್ತಿರದಲ್ಲೇ ಇರುವ ಕೃಷಿ ವಿದ್ಯಾಲಯದ ಅವರಣದೊಳಗೆ ವಾಕಿಂಗ್ ಮಾಡುತ್ತಿದ್ದೆ. ಅಲ್ಲೊಬ್ಬರು ಧೋತ್ರ, ಟೋಪಿ ಹಾಕಿಕೊಂಡು ನನ್ನ ಪಕ್ಕದಲ್ಲಿಯೇ ಬರುತ್ತಿದ್ದರು. ಅವರ ವೇಷ ಭೂಷಣ ನೋಡಿಯೇ ಅವರೊಬ್ಬ ಉತ್ತರ ಕರ್ನಾಟಕದ ರೈತ ಅಂತ ನಾನು ಊಹಿಸಿದೆ. ಅವರಿಗೆ ನಮಸ್ಕಾರ ಮಾಡಿ ಎಲ್ಲಿಯವರು, ಏನು ಅಂತ ವಿಚಾರಿಸಿದಾಗ ನನ್ನ ಊಹೆ ನಿಜ ಅಂತ ಗೊತ್ತಾಯ್ತು.

‘ಇಲ್ಲಿ ಏನ್ ಕೆಲಸ ಮಾಡ್ಕೊಂಡದೀರಿ’ ಅಂತ ಸಹಜ ಕುತೂಹಲದಿಂದ ಕೇಳಿದೆ.

‘ಕ್ಯಾಂಪಸ್ ನ್ಯಾಗ ಬಾತ್ ರೂಂ ತೊಳಿತೀನಿ. 4 ಸಾವಿರ ರುಪಾಯಿ ಕೊಡ್ತಾರ್ರಿ’ ಅಂದರು. ನನಗೆ ಬೇಜಾರಾಯ್ತು. ತನ್ನದೇ ಹೊಲದಲ್ಲಿ ಬೆಳೆ ಬೆಳೆದುಕೊಂಡು ರಾಜನ ಹಾಗೆ ತಲೆ ಎತ್ತಿಕೊಂಡು ಬದುಕಬೇಕಾಗಿದ್ದ ರೈತರಿಗೆ ಈ ಸ್ಥಿತಿ ಬಂತೆ ಅಂತ ಹಳಹಳಿ ಆಯ್ತು. ಬೆಂಗಳೂರಿನಲ್ಲಿ ನಾಲ್ಕು ಸಾವಿರ ರೂಪಾಯಿ ಜೀವನ ಮಾಡುವುದಕ್ಕೆ ಸಾಕೆ? ಕೂಡಲೇ ಅವರಿಗೊಂದು ಅವಕಾಶ ಕೊಡುವ ನಿರ್ಧಾರ ಮಾಡಿದೆ. ಬೆಂಗಳೂರಿನಿಂದ 400 ಕಿಲೋಮೀಟರು ದೂರದಲ್ಲಿರುವ ನನ್ನ ಹೊಲದ ಕೆಲಸ ನೋಡಿಕೊಂಡು ಹೋಗಲು ಒಬ್ಬರನ್ನು ನಾನೂ ಹುಡುಕುತ್ತಿದ್ದೆ. ಅದೂ ಅಲ್ಲದೆ ಇವರು ನಮ್ಮ ಊರಿನ ಕಡೆಯವರು ಅನ್ನುವ ಅಭಿಮಾನವೂ ಇತ್ತು.

‘ನನ್ನ ಹೊಲದಾಗ ಮನಿ ಕೊಡ್ತೀನಿ. ತಿಂಗಳಿಗೆ ಹತ್ತು ಸಾವಿರ ರುಪಾಯಿ ಪಗಾರ ಕೊಡ್ತೀನಿ. ಅಲ್ಲೇ ನಿಮಗ ಏನು ಬೇಕೋ ಅದನ್ನ ಬೆಳಕೊಂಡು ಇರ್ರಿ. ಬರ್ತೀರೇನು?’ ಅಂದೆ. ಇಲ್ಲಿ ಇಂತಹ ಕೆಲಸ ಮಾಡುವ ಬದಲು ಹೆಚ್ಚು ಕಡಿಮೆ ಮೂರು ಪಟ್ಟು ಹೆಚ್ಚಿನ ಪಗಾರಕ್ಕೆ ನನ್ನ ಹೊಲದ ಕೆಲಸ ಮಾಡಲು ಖಂಡಿತ ಒಪ್ಪುತ್ತಾರೆ ಅಂತ ನಾನಂದುಕೊಂಡಿದ್ದು ತಪ್ಪಾಗಿತ್ತು! ಅವರು ಸ್ವಲ್ಪವೂ ಯೋಚಿಸದೆ ಹೇಳಿದರು `ಇಲ್ರಿ… ನಾ ಬರಂಗಿಲ್ಲ’. ಮತ್ತೆ ಮುಂದುವರಿದು `25000 ಕೊಟ್ರ ಬರ್ತೀನಿ ನೋಡ್ರಿ’ ಅಂದರು. ಅವರು ಕೇಳಿದ್ದು ಹೇಗಿತ್ತು ಅಂದರೆ 25000ಕ್ಕೆ ಇವನು ಒಪ್ಪಲು ಸಾಧ್ಯವೇ ಇಲ್ಲ, ಒಪ್ಪಿದರೆ ಲಾಟರಿ ಅನ್ನುವಂತೆ! ಬಾತ್ರೂಮ್ ಕ್ಲೀನಿಂಗ್ ಮಾಡಿದರೆ 4000 ಕೊಡುತ್ತಾರೆ ಅದು ಅವರಿಗೆ ಪರವಾಗಿಲ್ಲ. ನಾನು ಕೊಡುವ ಹತ್ತು ಸಾವಿರ, ವಾಸಿಸಲು ಮನೆ… ಅವರಿಗೆ ಬೇಡ! ನಾನು ಹೇಳಿದೆ, `ನೀವು ಬರೋದು ಬೇಡ ಇಲ್ಲೇ ಇರ್ರಿ’.

ಅಂತೆಲ್ಲ ಆದರ್ಶ ಕುಟ್ಟುತ್ತಿದ್ದ ನಾನೂ ಕೂಡ ಹೀಗೆ ಒಂದು ದಿನ ಬೆಂಗಳೂರಿಗೆ ಬಂದೆನಲ್ಲವೇ? ಹಾಗೆ ಬಂದದ್ದಕ್ಕೆ ಹುಬ್ಬಳ್ಳಿಯಲ್ಲಿ ನಾನು ಪಡೆದ ಶಿಕ್ಷಣಕ್ಕೆ ಹಾಗೂ ಅನುಭವಕ್ಕೆ ತಕ್ಕನಾದ ಯಾವುದೇ ಕೆಲಸಗಳು ಇಲ್ಲ ಅನ್ನುವುದು ನನ್ನ ಧೋರಣೆ ಆಗಿರಲಿಲ್ಲವೇ?

ಅವರು ಹಾಗೆ ಹೇಳಿದ್ದರಲ್ಲಿ ಕೃಷಿಯ ಸಂಬಂಧಿ ಕೆಲಸದ ಬಗ್ಗೆಯೇ ಅಸಡ್ಡೆ ಅಥವಾ ತಿರಸ್ಕಾರವಿತ್ತೆ? ಅಥವಾ ಕ್ಲೀನಿಂಗ್ ಮಾಡಿಕೊಂಡು ಇರೋದು ಅದಕ್ಕಿಂತ ಸರಳ ಕೆಲಸ ಅನ್ನುವ ಭಾವನೆ ಇತ್ತೇ? ಇಲ್ಲವೇ ಹಳ್ಳಿಯ ಸಹವಾಸವೇ ಬೇಡ ಇಲ್ಲಿ ಏನೋ ಒಂದು ಮಾಡಿಕೊಂಡಿರಬಹುದು ಎನ್ನುವ ನಗರದ ಕಡೆಗಿನ ಆಕರ್ಷಣೆಯಿತ್ತೆ? ಒಂದಾನೊಂದು ಕಾಲದಲ್ಲಿ, ‘ದೇವರಾಣೆಗೂ ನಾನು ಬೆಂಗಳೂರಿಗೆ ಮಾತ್ರ ಹೋಗೋಲ್ಲ, ಹುಬ್ಬಳ್ಳಿಯಲ್ಲೇ ಇದ್ದು ಇಲ್ಲಿಯವರಿಗೆ ಸಹಾಯ ಮಾಡುವೆ, ಎಲ್ಲರೂ ಅಲ್ಲಿಯೇ ಹೋದರೆ ನಮ್ಮೂರು ಉದ್ಧಾರ ಮಾಡೋರು ಯಾರು…?’ ಅಂತೆಲ್ಲ ಆದರ್ಶ ಕುಟ್ಟುತ್ತಿದ್ದ ನಾನೂ ಕೂಡ ಹೀಗೆ ಒಂದು ದಿನ ಬೆಂಗಳೂರಿಗೆ ಬಂದೆನಲ್ಲವೇ? ಹಾಗೆ ಬಂದದ್ದಕ್ಕೆ ಹುಬ್ಬಳ್ಳಿಯಲ್ಲಿ ನಾನು ಪಡೆದ ಶಿಕ್ಷಣಕ್ಕೆ ಹಾಗೂ ಅನುಭವಕ್ಕೆ ತಕ್ಕನಾದ ಯಾವುದೇ ಕೆಲಸಗಳು ಇಲ್ಲ ಅನ್ನುವುದು ನನ್ನ ಧೋರಣೆ ಆಗಿರಲಿಲ್ಲವೇ? ಇಲ್ಲಿಗೆ ಬಂದು ಎಷ್ತೋ ವರ್ಷ ಕೆಲಸ ಮಾಡಿದ ಮೇಲೆ, ಇಲ್ಲಿನ ಜನದಟ್ಟಣೆಯ ಮೇಲೆ ನಾನು ಕೋಪಗೊಂಡು, ನಾನೂ ಕೂಡ ಆ ಸಮಸ್ಯೆಗೆ ಒಂದು ಕಾರಣ ಅನ್ನುವುದ ಮರೆತು ಬೇರೆ ರಾಜ್ಯದವರಿಗೆ ದೂಷಿಸುವುದು ಸರಿಯೇ? ನನಗೂ ಆ ರೈತರಿಗೂ ಯಾವುದೇ ವ್ಯತ್ಯಾಸವಿಲ್ಲ ಅನಿಸಿತು.

ಕರ್ನಾಟಕದ ಎಲ್ಲ ಕಡೆಯಿಂದ ಎಷ್ತೋ ಜನ ನನ್ನ ಹಾಗೆಯೇ ಇಲ್ಲಿಗೆ ಬಂದು ಯಾವುದೋ ಒಂದು ಕೆಲಸ ಮಾಡಿಕೊಂಡಿದ್ದಾರೆ. ಜನ ಹೆಚ್ಚಾದಂತೆ ಇಲ್ಲಿನ ಅವಕಾಶಗಳೂ ಹೆಚ್ಚಿವೆ. ಜನರಿಗೆ ಮನೆ ಡಿಸೈನ್ ಮಾಡಲು ಇಂಜಿನಿಯರುಗಳು, ಕಟ್ಟಲು ಕಾರ್ಮಿಕರು, ಸಲಕರಣೆಗಳು ಅವುಗಳನ್ನು ನಿರ್ಮಿಸಲು ಉದ್ಯಮಗಳು, ಆ ಉದ್ಯಮಗಳಿಗೆ ಮತ್ತೊಂದಿಷ್ಟು ಕಾರ್ಮಿಕರು… ಈ ವರ್ತುಲ ಬೆಳೆಯುತ್ತಲೇ ಹೋಗುತ್ತದೆ. ಎಲ್ಲರಿಗೂ ಅಡ್ಡಾಡಲು ರಸ್ತೆಗಳು, ಅವುಗಳ ಮೇಲೆ ಫ್ಲೈ ಓವರ್, ಮೆಟ್ರೋ, ಕೆಳಸೇತುವೆ, ಕಡೆಗೆ ಏನೂ ಸಾಲದೇ ಪಾತಾಳದಲ್ಲಿ ರಸ್ತೆಗಳು… ಇವೆಲ್ಲವುಗಳನ್ನೂ ಮೂಲ ಸೌಕರ್ಯಗಳ ಜೊತೆಗೆ ಕೊಡುವುದು ಸರ್ಕಾರಕ್ಕೆ ದೊಡ್ಡ ಸವಾಲು. ಅದರ ಜೊತೆಗೆ ಇಂತಹ ಬೇಕುಗಳು ಸರ್ಕಾರದ ಹಣ ಕಬಳಿಸುವ ತಿಮಿಂಗಿಲುಗಳಿಗೂ ಒಳ್ಳೆಯ ಅವಕಾಶಗಳನ್ನು ನೀಡುತ್ತವೆ. ಒಂದಕ್ಕೊಂದು ಸಂಬಂಧ ಹೊಂದಿರುವ ಇವುಗಳನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲ ಎನ್ನುವಷ್ಟು ಇವು ಬೃಹದಾಕಾರದ ಸಮಸ್ಯೆಯಾಗಿ ಬೆಳೆದು ಗುಡ್ಡವಾಗುತ್ತವೆ.

ಎಷ್ತೋ ಜನರು ಹೊಸ ಕಾರ್ ಕೊಳ್ಳುವುದೇ ಬೇಡ ಎಂಬ ನಿರ್ಧಾರ ಮಾಡಿದ್ದು ಒಳ್ಳೆಯ ಬೆಳವಣಿಗೆಯೇ ಸರಿ. ಮೆಟ್ರೋ ಕೂಡ ಊರಿನ ಎಷ್ತೋ ಕಡೆಗೆ ತನ್ನ ಜಾಲ ಹರಡಿಕೊಳ್ಳುತ್ತ ಅದನ್ನು ಉಪಯೋಗಿಸುವವರೂ ಹೆಚ್ಚಾಗುತ್ತಾರೆ.

ಇದನ್ನು ಬೈಯುತ್ತ ಕುಳಿತುಕೊಳ್ಳುವುದು ತುಂಬಾ ಸರಳವಾದ ಕೆಲಸ. ಬರಿ ಸರ್ಕಾರವೇ ಹೊಣೆ ಎನ್ನುತ್ತಾ ಕೂಡುವುದು ಎಷ್ಟು ಸರಿ? ನಾವು ಆ ಸಮಸ್ಯೆಗೆ ಏನು ಪರಿಹಾರ ಕಂಡುಕೊಂಡಿದ್ದೇವೆ? ಎಷ್ತೋ ಐಟಿ ಕಂಪನಿಗಳು ತುಂಬಾ ಜನ ಕೆಲಸಗಾರರಿಗೆ ಮನೆಯಿಂದಲೇ ಕೆಲಸ ಮಾಡಲು ಉತ್ತೇಜಿಸುತ್ತಿದ್ದಾರೆ. ನಾಲ್ಕೈದು ಜನ ಸೇರಿ ಒಂದೇ ಕಾರಿನಲ್ಲಿ ಹೋಗುವ ಪೂಲಿಂಗ್ ವ್ಯವಸ್ಥೆ ನಿಧಾನವಾಗಿ ಜನರ ಮನ ಗೆಲ್ಲುತ್ತಿದೆ. ಅದಕ್ಕೆ ಅಂತ ಒಂದಿಷ್ಟು ಆ್ಯಪ್ ಬಂದಿವೆ. ಅದನ್ನು ಮಾಡಿದವರೂ ಈ ಸಾಫ್ಟ್ವೇರ್ ಜನರೇ ಅನ್ನುವುದು ನೆನಪಿರಲಿ! ಓಲಾ, ಊಬರ್ ನಂತಹ ಟ್ಯಾಕ್ಸಿ ಸರ್ವಿಸುಗಳನ್ನು ಹೆಚ್ಚು ಹೆಚ್ಚು ಜನರು ಬಳಸುತ್ತಿದ್ದಾರೆ. ಎಷ್ತೋ ಜನರು ಹೊಸ ಕಾರ್ ಕೊಳ್ಳುವುದೇ ಬೇಡ ಎಂಬ ನಿರ್ಧಾರ ಮಾಡಿದ್ದು ಒಳ್ಳೆಯ ಬೆಳವಣಿಗೆಯೇ ಸರಿ. ಮೆಟ್ರೋ ಕೂಡ ಊರಿನ ಎಷ್ತೋ ಕಡೆಗೆ ತನ್ನ ಜಾಲ ಹರಡಿಕೊಳ್ಳುತ್ತ ಅದನ್ನು ಉಪಯೋಗಿಸುವವರೂ ಹೆಚ್ಚಾಗುತ್ತಾರೆ. ಹೀಗೆ ಸಮಸ್ಯೆಗಳು ಹೆಚ್ಚಾದಂತೆ ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುವುದು ಸಹಜ ಬೆಳವಣಿಗೆ.

ಆದರೆ ಇವೆಲ್ಲದರ ಹೊರತಾಗಿಯೂ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತ ಹೋದರೆ ಈ ಪರಿಹಾರಗಳು ಯಾವುದಕ್ಕೂ ಸಾಕಾಗುವುದಿಲ್ಲ. ಅಲ್ಲದೆ ಇಲ್ಲಿನ ಬದುಕು ಇನ್ನೂ ಸಂಕೀರ್ಣ ಹಾಗೂ ದುಬಾರಿ ಆಗುತ್ತಾ ಹೋಗುತ್ತದೆ. ಇದರಿಂದ ಆರ್ಥಿಕವಾಗಿ ಕಷ್ಟ ಪಡುವವರು ಕೆಳ ಮಧ್ಯಮ ವರ್ಗವೇ ಹೊರತು ಬೇರೆ ಯಾರೂ ಅಲ್ಲ. ಹಾಗಾದರೆ ಇದಕ್ಕೆ ಪರಿಹಾರ ಏನು? ಯಾರೂ ಇಲ್ಲಿಗೆ ಬರದಂತೆ ತಡೆಯುವುದು ಅಸಾಧ್ಯ. ಅದು ಅಸಾಂವಿಧಾನಾತ್ಮಕ ಹಾಗೂ ಕಾನೂನು ಬಾಹಿರವೂ ಹೌದು. ಆದರೆ ಅದನ್ನು ಇನ್ನೊಂದು ರೀತಿಯಲ್ಲಿ ಸಾಧ್ಯ ಮಾಡಬೇಕು. ಸರ್ಕಾರಗಳು ಹುಬ್ಬಳ್ಳಿ, ತುಮಕೂರು, ದಾವಣಗೇರಿಯಂತಹ ಪಟ್ಟಣಗಳಲ್ಲಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬೇಕು. ಅದರ ಬಗ್ಗೆ ಹಿಂದೆ ಎಷ್ತೋ ಪ್ರಯತ್ನಗಳು ಆಗಿವೆ, ಆಗುತ್ತಿವೆ. ಆದರೂ ಅವು ಅಷ್ತೊಂದು ವೇಗದಿಂದ ಆಗುತ್ತಿಲ್ಲ.

ನಾನು ಕೂಡ ನನ್ನ ಮೊಟ್ಟಮೊದಲ ಸಾಫ್ಟ್ವೇರ್ ಕೆಲಸಕ್ಕೆ ಹುಬ್ಬಳ್ಳಿಯ ಕಂಪನಿ ಒಂದರಲ್ಲೇ ಸೇರಿದ್ದೆ. ಸರಿಯಾದ ಸಹಾಯ, ಸರ್ಕಾರದ ಸೌಲಭ್ಯಗಳಿಲ್ಲದೆ ಕುಂಟುತ್ತ ಸಾಗಿದ್ದ ಅದು ಆಗ ಉಂಟಾದ ಜಾಗತಿಕ ಅರ್ಥಿಕ ಮುಗ್ಗಟ್ಟಿಗೆ ಸೊರಗಿ ನಿಂತೇ ಹೋಯ್ತು. ಈಗ ಪರಿಸ್ಥಿತಿ ಬದಲಾಗುತ್ತಿದೆ ನಿಜ. ಹುಬ್ಬಳ್ಳಿಯಂತಹ ಊರುಗಳಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಆಗುತ್ತಿವೆ. ಇಂತಹ ಬೆಳವಣಿಗೆಯ ಪರ್ವದಲ್ಲಿ ಸ್ಥಳೀಯ ನಾಯಕರು ಒಳ್ಳೆಯ ಉದ್ಯಮಶೀಲ ಯುವಕರನ್ನು ಗುರುತಿಸಿ ಅವರಿಗೆ ಅಲ್ಲಿ ಉದ್ಯಮ ಸ್ಥಾಪಿಸುವುದಕ್ಕೆ ಎಲ್ಲ ಸಹಾಯ ಸೌಕರ್ಯಗಳನ್ನು ನೀಡಿ ಉತ್ತೇಜಿಸಬೇಕು. ಆಗಲೇ ಅಲ್ಲಿನ ಜನರು ಅಲ್ಲೇ ಉಳಿಯುತ್ತಾರೆ. ಬೆಂಗಳೂರಿನಲ್ಲಿ ಕೊರಗುತ್ತ ಕೂತಿರುವ ಎಷ್ತೋ ಯುವಕರು ತಮ್ಮ ಊರಿಗೆ ಮರಳಿ ಗುಳೇ ಬರುತ್ತಾರೆ.

ರೈತರಿಗೆ ಸಾಲ ಮನ್ನಾ ಮಾತ್ರ ಮಾಡಿ ಕೈ ತೊಳೆದುಕೊಳ್ಳುವ ಬದಲು ಲಾಭ ಬರುವ ಹಾಗೆ ಬೆಳೆಯುವ ತಂತ್ರಗಳನ್ನು ಹೇಳಿಕೊಡುವತ್ತ, ಮಾರಾಟಕ್ಕೆ ವೇದಿಕೆ ಕಲ್ಪಿಸುವತ್ತ ಸರ್ಕಾರಗಳು ಹಾಗೂ ಕೃಷಿ ವಿದ್ಯಾಲಯಗಳು ಗಮನ ಹರಿಸಬೇಕು. ಅದರ ಜೊತೆಗೆ ಆ ದಿಕ್ಕಿನಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಉದ್ಯಮಗಳಿಗೆ ಸಹಾಯ ಹಸ್ತ ನೀಡಬೇಕು. ಹೀಗಾದರೆ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಆಗೇ ಆಗುತ್ತದೆ; ಇಲ್ಲಿನ ಮೆಟ್ರೋಗಳಲ್ಲಿ ಕೂಡಲು ಜಾಗ ಸಿಗುತ್ತದೆ; ರಸ್ತೆಗಳಲ್ಲಿ ಸೈಕಲ್ಲು ಹೊಡೆಯುವ ಪಥದ ಕನಸು ನನಸಾಗುತ್ತದೆ; ಮನೆಗಳ ಬಾಡಿಗೆಯೂ ಕಮ್ಮಿಯಾಗುತ್ತದೆ; ರೈತರನ್ನು ಅವರ ಊರಿನಲ್ಲೇ ಉಳಿಸಿ ಅವರು ಬೆಳೆಯುವಂತೆ ಮಾಡಿದರೆ ಈರುಳ್ಳಿಯ ಬೆಲೆಯೂ ಇಳಿಯುತ್ತದೆ!

* ಲೇಖಕರು ಮೂಲತಃ ಸಾಫ್ಟ್‍ವೇರ್ ಪರಿಣತರು; ಪ್ರಸ್ತುತ ‘ಬೆಳೆಸಿರಿ’ ಸಂಸ್ಥೆಯ ಸಂಸ್ಥಾಪಕರು, ಜಲಕೃಷಿ (ಹೈಡ್ರೋಪೋನಿಕ್ಸ್) ತಂತ್ರಜ್ಞರು ಹಾಗೂ ತರಬೇತುದಾರರು. ಹಲವಾರು ಹಾಸ್ಯಬರಹಗಳು ಹಾಗೂ ಕತೆಗಳು ಪ್ರಕಟವಾಗಿವೆ. 

Leave a Reply

Your email address will not be published.