ಸಂಧಾನವೆಂದರೆ ಶರಣಾಗತಿಯಲ್ಲ!

ಚೀನಾ ಜೊತೆಯಲ್ಲಿ 1960ರಲ್ಲಿ ಗಡಿ ಸಮಸ್ಯೆ ಬಗೆಹರಿಸಲು ಒಪ್ಪಂದವಾಗಿದ್ದರೆ 1962ರಲ್ಲಿ ಯುದ್ಧವಾಗುತ್ತಿರಲಿಲ್ಲ ಹಾಗೂ 2020ರಲ್ಲಿ ಲಡಾಕ್‌ನಲ್ಲಿ ಕಲಹದ ಪ್ರಸಂಗ ಬರುತ್ತಿರಲಿಲ್ಲ. ಈಗ ಪ್ರಶ್ನೆ ಇರುವುದು: ಭಾರತ-ಚೀನಾ ಗಡಿ ಸಮಸ್ಯೆಗೆ ಪೂರ್ಣವಿರಾಮ ಕೊಡದೆಯೇ ನರೇಂದ್ರ ಮೋದಿಯವರು ತಮ್ಮ ಪ್ರಧಾನಮಂತ್ರಿ ಕಾಲವನ್ನು ಮುಗಿಸುವವರಿದ್ದಾರೆಯೇ?

ಭಾರತ ಮತ್ತು ಚೀನಾ ದೇಶಗಳ ಸೈನಿಕರ ನಡುವೆ ಜೂನ್ 15 ರಂದು ನಡೆದ ಲಡಾಕ್‌ನ ಗಾಲವಾನ್ ಕಣಿವೆಯ ಬಳಿ ನಡೆದ ಹೊಡೆದಾಟ-ಬಡೆದಾಟ 1962ರ ಯುದ್ಧದ ನಂತರದ ಮಹಾಭಯಂಕರ ಕಲಹವೇ ಹೌದು. ಈ ತಿಕ್ಕಾಟದಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರು. ಚೀನಾದ ಎಷ್ಟು ಸೈನಿಕರು ಪ್ರಾಣ ಕಳೆದುಕೊಂಡರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೂ ಕೂಡ ಎರಡೂ ದೇಶಗಳ ಸೈನಿಕರ ಪ್ರಾಣಹಾನಿ ಆಗಿದೆ ಎಂಬುದರಲ್ಲಿ ಸಂದೇಹವಿಲ್ಲ. ನಮ್ಮ ದೇಶದ ಸೈನಿಕರು ಈ ರೀತಿ ಹುತಾತ್ಮರಾದರೆ ದೇಶದಲ್ಲಿ ಆಕ್ರೋಶ ನಿರ್ಮಾಣವಾಗುವುದು ಸಹಜವೇ. ಜೂನ್ 15ರ ಘಟನೆಯ ನಂತರ ಭಾರತದಾದ್ಯಂತ ಚೀನಾ ವಿರೋಧಿ ವಾತಾವರಣ ಹಬ್ಬಿದೆ. ಇದೂ ಕೂಡ ಒಂದು ತರಹ ಸ್ವಾಭಾವಿಕವೇ.

ಆದರೆ ದೀರ್ಘ ಸಮಯದಿಂದ ನಡೆದು ಬಂದಿರುವ ಒಂದು ಸಮಸ್ಯೆಯನ್ನು ತಿಳಿದುಕೊಳ್ಳಬೇಕಾದರೆ ನಾವು ಕೇವಲ ನಿನ್ನೆ ಮೊನ್ನೆ ನಡೆದ ಘಟನೆಗಳ ಕಡೆ ಮಾತ್ರ ನೋಡಿದರೆ ಸಾಲದು. ಅದರ ಐತಿಹಾಸಿಕ ಹಿನ್ನೆಲೆಯನ್ನು ಸತ್ಯನಿಷ್ಟವಾಗಿ ಅಧ್ಯಯಿಸಬೇಕು.

ಯಾವ ಸ್ಥಳದಲ್ಲಿ ಜೂನ್ 15ರ ತಿಕ್ಕಾಟ ನಡೆಯತೋ, ಅದಕ್ಕೆ ಲಾಯಿನ್ ಆಫ್ ಆಕ್ಟುವಲ್ ಕಂಟ್ರೋಲ್ (ಎಲ್‌ಎಸಿ)ಎಂದು ನಾವೆಲ್ಲ ಕರೆಯುತ್ತೇವೆ. ಆದರೆ ನಿಜವಾಗಿ ಈ ನಾಮಾವಳಿಗೆ ಯಾವ ಅರ್ಥವೂ ಇಲ್ಲ. ಏಕೆಂದರೆ ಭಾರತ–ಚೀನಾ ದೇಶಗಳು ತಮ್ಮ ಭೂಪಟಗಳ ಮೇಲೆ ಪರಸ್ಪರರು ಒಪ್ಪಿದ ರೀತಿಯಲ್ಲಿ     ಎಲ್‌ಎಸಿ ನಿರ್ಧರಿಸಿಯೇ ಇಲ್ಲ. ಅದೇ ರೀತಿ ಲಡಾಕ್‌ನಲ್ಲಿ ಕೂಡ ಜಮೀನಿನ ಮೇಲೆ ಯಾವ ಭಾಗ ಭಾರತದ್ದು, ಯಾವುದು ಚೀನಾದ್ದು ಎಂಬುದರ ಬಗ್ಗೆ ಪೂರ್ಣ ಸಹಮತಿ ಇಲ್ಲ. ಆದ್ದರಿಂದ ಎರಡೂ ದೇಶಗಳ ಮಧ್ಯೆ ಎಲ್‌ಎಸಿ ಖಚಿತತೆಯ ಕುರಿತು ಭಿನ್ನಮತಗಳಿವೆ. ಇದರಿಂದಾಗಿ ಆಕ್ಟುವಲ್ ಕಂಟ್ರೋಲ್ ಅಲ್ಲಲ್ಲಿ ಬದಲಾಗುತ್ತಲೇ ಇರುತ್ತದೆ. ಇದರಿಂದ ತಂಟೆ ಹುಟ್ಟುತ್ತ ಇರುತ್ತದೆ.

ಜೂನ್ 15ರ ದುರ್ಭಾಗ್ಯಪೂರ್ಣ ಘಟನೆಯ ಬಳಿಕ ಭಾರತ ಚೀನಾಗಳ ನಡುವೆ ಮತ್ತೊಮ್ಮೆ ಯುದ್ಧ ಶುರುವಾಗುತ್ತದೆಯೋ ಎಂಬ ಪರಿಸ್ಥಿತಿ ಕಂಡುಬರುತ್ತಿತ್ತು. ಆದರೆ ಕಳೆದ ವಾರಗಳಲ್ಲಿ ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕ (Diplomatic)  ಮಾತುಕತೆಗಳಿಂದಾಗಿ ಯುದ್ಧದ ಕಾರ್ಮೋಡಗಳು ಕಣ್ಮರೆಯಾಗಿವೆ. ಆದರೂ 3,400 ಕಿ.ಮಿ. ಉದ್ದದ ಗಡಿ ಅನಿರ್ಣಿತವಾಗಿಯೇ ಉಳಿದರೆ, ಮುಂದೆ ಕೂಡ ಇದೇ ರೀತಿಯ ಕಲಹಗಳು ತಲೆಯೆತ್ತಬಹುದು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಎಲ್‌ಎಸಿಯನ್ನು ಖಚಿತವಾಗಿ ನಿರ್ಧರಿಸಿದರೂ ಗಡಿ ಪ್ರಶ್ನೆಯ ಕುರಿತು ವಿವಾದ ಕಾಯಂ ಆಗಿಯೇ ಇರುತ್ತದೆ. ಆದ್ದರಿಂದ ಭಾರತ ಚೀನಾ ಸಂಬಂಧ ಶಾಂತಿಪೂರ್ಣ ಹಾಗೂ ಮೈತ್ರಿಪೂರ್ಣವಾಗಬೇಕಾದರೆ ಕಳೆದ ಏಳು ದಶಕಗಳಿಂದ ನಡೆದು ಬಂದಿರುವ ಗಡಿ ವಿವಾದಕ್ಕೆ ಶಾಶ್ವತ ಪರಿಹಾರ ಅತ್ಯಾವಶ್ಯಕ. ಒಂದು ಭಯಂಕರ ರೋಗವನ್ನು ಸಮೂಲವಾಗಿ ನಿರ್ಮೂಲಿಸಿದರೆ ಒಳ್ಳೆಯದೋ, ಅಥವಾ ಅದಕ್ಕೆ ತಾತ್ಕಾಲಿಕ ಉಪಾಯ ಹುಡುಕಿ ಸ್ವಲ್ಪ ಮಟ್ಟಿಗೆ ನೆಮ್ಮದಿ ಪಡೆಯುವುದು ಒಳ್ಳೆಯದೋ? ಎರಡೂ ದೇಶಗಳು ಅಣ್ವಸ್ತ್ರ ಸಜ್ಜಿತವಾಗಿರುವುದರಿಂದ ಮತ್ತೆ ಮತ್ತೆ ಯುದ್ಧಪೂರಕ ಸನ್ನಿವೇಶ ಹುಟ್ಟಿಸಿಕೊಳ್ಳುವುದರಲ್ಲಿ ಯಾವ ಜಾಣತನವಿದೆ?

ಈ ಪ್ರಶ್ನೆ ಅರ್ಥಪೂರ್ಣವಾಗಿದ್ದರೆ, ನಾವು ಮತ್ತೊಂದು ಪ್ರಶ್ನೆಯ ಉತ್ತರ ಹುಡುಕಬೇಕಾಗುತ್ತದೆ. ಅದೆಂದರೆ- ಗಡಿ ಸಮಸ್ಯೆಯನ್ನು ಸದ್ಬುದ್ಧಿಯಿಂದ ಶಾಶ್ವತವಾಗಿ ಬಗೆಹರಿಸಲು ಇತಿಹಾಸದಲ್ಲಿ ಸದವಕಾಶಗಳು ಕಂಡು ಬಂದಿದ್ದವೇ? ಬಂದಿದ್ದರೆ ಈ ಸುಸಂಧಿಗಳು ಕೈ ಬಿಟ್ಟು ಹೋಗಿದ್ದು ಏಕೆ?

ಭಾರತ 1947ರಲ್ಲಿ ಸ್ವತಂತ್ರವಾದ ಬಳಿಕ, ಹಾಗೂ 1949ರಲ್ಲಿ ಕಮ್ಯುನಿಸ್ಟ್ ಕ್ರಾಂತಿಯ ನಂತರ ಹೊಸ ಚೀನಾ (Peaple’s Republic Of China) ಉದಯವಾದ ಬಳಿಕ ಎರಡೂ ನೆರೆಹೊರೆಯ ದೇಶಗಳ ನಡುವೆ ಪಶ್ಚಿಮಕ್ಕೆ ಲಡಾಕ್‌ನಿಂದ ಪೂರ್ವಕ್ಕೆ ಅರುಣಾಚಲ್ ಪ್ರದೇಶದ ವರೆಗಿನ ಸೀಮೆ ನಿರ್ಧರಿತವಾಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಉಭಯ ದೇಶಗಳ ನಡುವಿನ ಮತಭೇದಗಳು ಬೆಳೆಯುತ್ತ ಹೋದವು.

ಭಿನ್ನಾಭಿಪ್ರಾಯಗಳು ಪ್ರಮುಖವಾಗಿ ಎರಡು ವಲಯಗಳಲ್ಲಿ ಮೂಡಿ ಬಂದಿದ್ದವು. ಪೂರ್ವದಲ್ಲಿ ಅರುಣಾಚಲ ಪ್ರದೇಶದ ಮೇಲೆ ಚೀನಾ ತನ್ನ ಹಕ್ಕು ಪ್ರತಿಪಾದಿಸುತ್ತಿತ್ತು. (ಆಗ ಅರುಣಾಚಲ ಪ್ರದೇಶದ ಹೆಸರು ನಾರ್ಥ ಈಸ್ಟರ್ನ ಫ್ರಂಟಿಯರ ಏಜನ್ಸಿ ಅಥವಾ ನೇಫಾ ಎಂದಿತ್ತು.) ಪಶ್ಚಿಮದ ಲಡಾಕ್ ಕ್ಷೇತ್ರದಲ್ಲಿ ಅಕ್ಷಾಯಿ ಚಿನ್ ಚೀನಾದಲ್ಲ ನಮ್ಮದು ಎಂದು ಭಾರತ ತನ್ನ ಹಕ್ಕು ಪ್ರತಿಪಾದಿಸುತ್ತಿತ್ತು. ಈ ವಿವಾದದ ಸೂಕ್ಷಾಂಶವನ್ನು ನಾವು ತಿಳಿದುಕೊಳ್ಳಬೇಕು. ಪೂರ್ವದಲ್ಲಿ ಬ್ರಿಟಿಷ್ ಕಾಲದ ಭಾರತ ಮತ್ತು ತಿಬೆಟ್ ಆಡಳಿತಗಳ ನಡುವೆ 1914 ರಲ್ಲಿ ಸಿಮ್ಲಾನಲ್ಲಿ ಒಂದು ಒಪ್ಪಂದವಾಗಿ ‘ಮೆಕ್ ಮಹೋನ್ ಲೈನ್’ ಎಂದು ಕರೆಯಲ್ಪಡುವ ರೇಖೆಯೇ ಅಲ್ಲಿಯ ಗಡಿ ಎಂದು ತೀರ್ಮಾನ ಮಾಡಲಾಯಿತು. ಆದರೆ 1950 ರಲ್ಲಿ ಹೊಸ ಚೀನಾ ತಿಬೆಟ್ ಪ್ರಾಂತವನ್ನು ವಶಪಡಿಸಿಕೊಂಡ ನಂತರ ‘ಮೆಕ್ ಮಹೋನ್ ಲೈನ್’ ವಸಾಹತು ಕಾಲದಲ್ಲಿ ಹಾಕಲಾದ ರೇಖೆ, ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಮಾವೋ ತ್ಸೆ ತುಂಗ್ ಸರಕಾರ ತೀರ್ಮಾನಿಸಿತು.

ಪಶ್ಚಿಮ ವಲಯದಲ್ಲಿ ಅದೇ ರೀತಿ 1950ರ ದಶಕದಲ್ಲಿ ಅಕ್ಷಾಯಿ ಚಿನ್ ಕ್ಷೇತ್ರದ ಮೂಲಕ ತಿಬೆಟ್ ಮತ್ತು ಶಿನ್‌ಜಿಯಾಂಗ್ ಪ್ರಾಂತಗಳನ್ನು ಜೋಡಿಸುವ ಒಂದು ಹೆದ್ದಾರಿಯನ್ನು ಚೀನಾ ಸರಕಾರ ನಿರ್ಮಿಸಿತು. ಹೀಗಾಗಿ ಸುಮಾರು 38000 ಚದರ ಕಿ.ಮಿ. ಕ್ಷೇತ್ರದ ಅಕ್ಷಾಯಿ ಚಿನ್ ಚೀನಾ ವಶದಲ್ಲಿ ಬಂದಿತು. ಇಲ್ಲಿ ಗಮನಾರ್ಹ ಸಂಗತಿ ಎಂದರೆ 1954ರ ವರೆಗೆ ಭಾರತದ ಅಧಿಕೃತ ಭೂಪಟದಲ್ಲಿ ಅಕ್ಷಾಯಿ ಚಿನ್ ಭಾಗವನ್ನು ‘ಅನಿರ್ಣಿತ’ (Undefined) ಎಂದು ತೋರಿಸಲಾಗಿತ್ತು. ಅಂದರೆ 1954 ರ ವರೆಗೆ ಭಾರತ ಅಕ್ಷಾಯಿ ಚಿನ್ ತನ್ನದೆಂದು ದೃಢವಾಗಿ ಹೇಳಿರಲಿಲ್ಲ.

ಹೀಗಿದ್ದರೂ ಗಡಿ ಪ್ರಶ್ನೆಯ ಪರಿಹಾರಕ್ಕಾಗಿ 1960ರಲ್ಲಿ ಒಂದು ಒಳ್ಳೆಯ ಅವಕಾಶ ಬಂದಿತ್ತು. ಕೊಡುಕೊಳ್ಳುವಿಕೆಯ ಆಧಾರದ ಮೇಲೆ (Mutual Compromise Based) ಸಂಧಾನವಾಗಿದ್ದರೆ ಈ ಸಮಸ್ಯೆ ಆಗಲೇ ಮುಗಿದು ಹೋಗಬಹುದಾಗಿತ್ತು. ಆದ್ದರಿಂದ ಆ ಐತಿಹಾಸಿಕ ಮೈಲುಗಲ್ಲಿನ ಕಡೆಗೆ ನಾವು ತಿರುಗಿ ನೋಡಬೇಕು. ಆದರೆ ಆ ಪ್ರಸಂಗವನ್ನು ಸರಿಯಾಗಿ ಅರಿತುಕೊಳ್ಳಬೇಕಾದರೆ ಸದ್ಯ ಭಾರತದ ರಾಜಕಾರಣದಲ್ಲಿ ನಡೆದಿರುವ ಒಂದು ಚಿಂತಾಜನಕ ವಿಷಯವನ್ನು ನಮೂದಿಸಬೇಕಾಗುತ್ತದೆ.

ಇಂದು ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ, ಸಂಘಪರಿವಾರದ ಇತರ ಘಟಕಗಳಾಗಲಿ ಅಥವಾ ಇತರ ಯಾರೇ ಆಗಲಿ ಮೂಲ ಗಡಿ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬುದರ ಬಗ್ಗೆ ಮಾತನಾಡುತ್ತಲೇ ಇಲ್ಲ. ಈಗ ಹೆಚ್ಚಾಗಿ ಕೇಳಿಬರುತ್ತಿರುವ ಮಾತೆಂದರೆ “ಚೀನಾಗೆ ನಾವು ಒಂದು ಇಂಚು ಜಮೀನನ್ನು ಕೂಡ ಕೊಡಕೂಡದು.” ಈ ವಿಷಯದಲ್ಲಿ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ಮೋದಿಯವರ ‘ಶರಣಾಗತಿ’ಯ ಆಪಾದನೆ ಮಾಡುತ್ತಿದ್ದಾಗಲೇ, ಭಾಜಪ ಸಮರ್ಥಕರೂ ಚೀನಾ ಜೊತೆಯಲ್ಲಿ ಜಮೀನಿನ ಸಂದರ್ಭದಲ್ಲಿ ಯಾವುದೇ ಸಂಧಾನ ಬೇಡ ಎಂಬ ತಮ್ಮ ಪ್ರಖರ ರಾಷ್ಟ್ರವಾದದ ದನಿಯನ್ನು ಎತ್ತಿದ್ದಾರೆ. ಈ ತರಹದ ಯಾವುದೇ ಕೊಡುಕೊಳ್ಳುವಿಕೆ (Give And Take) ಬೇಡ ಎಂಬ ಅನಮ್ಯ (Inflexible) ಧೋರಣೆಯನ್ನು ಭಾರತ ಅನುಸರಿಸಿದರೆ ಭವಿಷ್ಯದಲ್ಲಿ ಗಡಿ ಸಮಸ್ಯೆಗೆ ಯಾವ ಪರಿಹಾರವು ಇಲ್ಲ ಎಂಬುದು ಸ್ಪಷ್ಟ. 1960ರ ಪ್ರಸಂಗದಿಂದ ನಾವು ಕಲಿಯಬೇಕಾದ ಮಹತ್ವದ ಪಾಠ ಇದೆ. ಆದ್ದರಿಂದ ಆ ಪ್ರಸಂಗವನ್ನು ನಾವು ತಿಳಿದುಕೊಳ್ಳೋಣ.

1960ರ ಎಪ್ರಿಲ್ ತಿಂಗಳಿನಲ್ಲಿ ಚೀನಾದ ಆಗಿನ ಪ್ರಧಾನಿ ಚೈ ಎನ್‌ಲಾಯಿ ಗಡಿಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ನಮ್ಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಜೊತೆಗೆ ಮಾತುಕತೆಗಾಗಿ ಭಾರತಕ್ಕೆ ಆಗಮಿಸಿದರು. ಹೊಸ ದೆಹಲಿಯಲ್ಲಿ ತಮ್ಮ ಒಂದು ವಾರದ ವಾಸ್ತವ್ಯದಲ್ಲಿ ಅವರು ನೆಹರೂ ಜೊತೆಗೆ ಒಟ್ಟು 22 ಗಂಟೆ ಮಾತುಕತೆ ನಡೆಸಿದರು. ನೆಹರೂ ಮಂತ್ರಿ ಮಂಡಳದ ಹಿರಿಯ ಮಂತ್ರಿಗಳ ಜೊತೆ ಕೂಡ ಚರ್ಚೆ ನಡೆಸಿದರು. ಆಗ ಅವರು ಗಡಿ ಸಮಸ್ಯೆಯ ಅಂತಿಮ ಪರಿಹಾರಕ್ಕಾಗಿ ನೆಹರೂ ಅವರ ಮುಂದೆ ಒಂದು ‘ಪ್ಯಾಕೇಜ್ ಡೀಲ್’ನ ಪ್ರಸ್ತಾಪ ಇಟ್ಟರು. ಇದರ ಪ್ರಕಾರ ಅವರು ಹೇಳಿದ್ದೇನೆಂದರೆ ಪೂರ್ವ ವಲಯದಲ್ಲಿ ನೇಫಾ ಪ್ರಾಂತದ ಮೇಲೆ ಚೀನಾ ತನ್ನ ಹಕ್ಕನ್ನು ಬಿಟ್ಟುಕೊಡುತ್ತದೆ. ಅದೇ ರೀತಿ ಪಶ್ಚಿಮ ವಲಯದಲ್ಲಿ ಭಾರತ ಅಕ್ಸಾಯಿ ಚಿನ್ ಮೇಲೆ ತನ್ನ ಹಕ್ಕನ್ನು ಬಿಟ್ಟುಕೊಡಬೇಕು.

‘ಮೆಕ್ ಮಹೋನ್ ಲೈನ್’ ಇದು ಸಾಮ್ರಾಜ್ಯವಾದಿಗಳು ನಿರೂಪಿಸಿದ ರೇಖೆ ಎಂಬ ತಮ್ಮ ಸೈದ್ಧಾಂತಿಕ ನಿಲುವನ್ನು ಬದಲಿಸದಿದ್ದರೂ ಭಾರತದ ಜೊತೆ ಗಡಿಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಪೂರ್ವ ವಲಯದಲ್ಲಿ ಈ ರೇಖೆಯೇ ಭಾರತ ಚೀನಾಗಳ ನಡುವಿನ ಸೀಮೆ ಎಂದು ನಾವು ಒಪ್ಪಿಕೊಳ್ಳಲು ಸಿದ್ಧ ಎಂದು ಚೈ ಎನ್‌ಲಾಯ್ ಹೇಳಿದರು. ಅಂದರೆ ಈ ರೇಖೆಯ ಕೆಳಗಿರುವ ನೇಫಾ ಪ್ರಾಂತ ಭಾರತದ್ದು ಎಂದು ಹೇಳಲು ಚೀನಾ ತಯಾರಾಯಿತು.

ಭಾರತಕ್ಕೆ ಬರುವುದಕ್ಕೆ ಮುಂಚೆ ಚೈ ಎನ್‌ಲಾಯ್ ಮತ್ತು ನೆಹರೂ ಅವರ ನಡುವೆ ಸುದೀರ್ಘವಾದ ಹಾಗೂ ವಿರಸಪೂರ್ಣವಾದ ಪತ್ರ ವ್ಯವಹಾರ ನಡೆದಿತ್ತು. ಆದರೆ ಭಾರತಕ್ಕೆ ಆಗಮಿಸಿದ ನಂತರ ಚೀನಾ ಪ್ರಧಾನಿ ಹೇಳಿದರು: “ನಾನು ಸಮಸ್ಯೆಯ ಪರಿಹಾರ ಹುಡುಕಲು ಬಂದಿದ್ದೇನೆ; ಹಿಂದಿನ ವಾದ ವಿವಾದಗಳನ್ನು ಪುನರುಚ್ಚರಿಸುವುದಕ್ಕಾಗಿ ಅಲ್ಲ.” ಪೇಕಿಂಗನಲ್ಲಿ ಭಾರತದ ಮಾಜಿ ರಾಯಭಾರಿ ಆರ್.ಕೆ.ನೆಹರೂ ಅವರ ಜೊತೆ ನಡೆಸಿದ ಚರ್ಚೆಯಲ್ಲಿ ಅವರು ಹೇಳಿದರು: “ಚೀನಾ ಭಾರತ ಮೈತ್ರಿಯೇ ನನಗೆ ಎಲ್ಲಕ್ಕಿಂತ ಮಹತ್ವದ್ದು. ಏಕೆಂದರೆ ನಮ್ಮ ನಡುವಿನ ಗಡಿ ಪ್ರಶ್ನೆಗೆ ನಾವು ಉಪಾಯ ಕಾಣದೇ ಹೋದರೆ ಅದು ನಮ್ಮ ಎರಡೂ ದೇಶಗಳಿಗೆ ಹಾನಿಕಾರಕ.”

ಉಭಯ ಪ್ರಧಾನಿಗಳ ನಡುವೆ ಸುದೀರ್ಘ ಮಾತುಕತೆಗಳ ನಂತರವೂ ಕೂಡ ಒಪ್ಪಂದವಾಗಲಿಲ್ಲ. ಆದ್ದರಿಂದ ಬರಿಗೈಯಿಂದಲೇ ಚೈ ಎನ್‌ಲಾಯ್ ತಮ್ಮ ದೇಶಕ್ಕೆ ಮರಳಿ ಹೋದರು.

ಒಪ್ಪಂದವಾಗದೇ ಇರುವುದಕ್ಕೆ ಪ್ರಮುಖ ಕಾರಣವೆಂದರೆ ಚೈ ಎನ್‌ಲಾಯ್ ಪ್ರಸ್ತಾಪಿಸಿದ ‘ಪ್ಯಾಕೇಜ್ ಡೀಲ್’ ಬಗ್ಗೆ ಭಾರತದಲ್ಲಿ ತೀವ್ರ ವಿರೋಧ ಹುಟ್ಟಿಕೊಂಡಿತ್ತು. ಅಲ್ಪ ಪ್ರಮಾಣದಲ್ಲಿ ಪ್ರಧಾನಿ ನೆಹರೂ ಸಂಧಾನಕ್ಕಾಗಿ ತಯಾರಾಗಿದ್ದರೂ ಮಂತ್ರಿಮಂಡಲದಲ್ಲಿಯ ಅವರ ಪ್ರಮುಖ ಸಂಗಾತಿಗಳು ಅವರನ್ನು ಸಮರ್ಥಿಸಲಿಲ್ಲ. ವಿರೋಧಿ ಪಕ್ಷಗಳ ನಾಯಕರಂತೂ ‘ಚೀನಾಗೆ ಒಂದು ಇಂಚು ಜಮೀನನ್ನು ಕೊಡಕೂಡದು’ ಎಂದು ಆಗ್ರಹಪಡಿಸಿದರಲ್ಲದೇ ನೆಹರೂ ಚೀನಾ ಮುಂದೆ ಶರಣಾಗತರಾಗುತ್ತಿದ್ದಾರೆ ಎಂದು ಆರೋಪಿಸತೊಡಗಿದರು.

ತಮ್ಮ ವಿರೋಧಿಗಳ ವಿರೋಧವನ್ನು ಕಡೆಗಣಿಸಿ ಪ್ರಧಾನಿ ನೆಹರೂ ಅವರು ದೃಢನಿಶ್ಚಯದಿಂದ ಚೀನಾದ ‘ಪ್ಯಾಕೇಜ್ ಡೀಲ್’ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರೆ ಇತಿಹಾಸವೇ ಬದಲಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ಪ್ರಸಿದ್ಧ ಇತಿಹಾಸಕಾರ ಶ್ರೀನಾಥ ರಾಘವನ್ ಅವರು ‘1960ರಲ್ಲಿ ನಡೆದ ನೆಹರೂ-ಚೈ ಶಿಖರ ವಾರ್ತೆ: ಒಂದು ಕೈಬಿಟ್ಟುಹೋದ ಸದವಕಾಶ’ ಎಂಬ ತಮ್ಮ ನಿಬಂಧದಲ್ಲಿ ಬರೆದಿದ್ದಾರೆ- “ನೆಹರೂ ಅವರ ಮೇಲೆ ಅವರ ವಿರೋಧಿಗಳಿಂದ ನಡೆದ ವಾಗ್ದಾಳಿಯಿಂದಾಗಿ ಚೀನಾ ಜೊತೆ ಮಾತುಕತೆಯಲ್ಲಿ ಅವರ ಶಕ್ತಿ ಕ್ಷೀಣಗೊಂಡಿತು. ಆನಂತರ ರಾಜಕೀಯ ಮಾರುಕಟ್ಟೆಯಲ್ಲಿ ಯಾವ ವಿಚಾರಕ್ಕೆ ಚಾಲನೆ ಸಿಕ್ಕೀತು, ಸಿಗಲಿಕ್ಕಿಲ್ಲ; ಜನತೆಗೆ ಯಾವ ಪ್ರಸ್ತಾಪವನ್ನು ಮಾರಬಹುದು, ಮಾರಲಾಗದು ಎಂಬ ಚಿಂತೆ ನೆಹರೂ ಅವರಿಗೆ ಹತ್ತಿತು.” ಆ ಕಾಲಕ್ಕೆ ನೆಹರೂ ಅವರೇ ತಮ್ಮ ಭೀತಿಯನ್ನು ಈ ಶಬ್ದಗಳಲ್ಲಿ ಹೇಳಿ ತೋರಿಸಿದ್ದರು: “ನಾನು ಅಕ್ಷಾಯಿ ಚಿನ್ ಚೀನಾಕ್ಕೆ ಕೊಟ್ಟುಬಿಟ್ಟರೆ ನಾನು ಪ್ರಧಾನಮಂತ್ರಿಯಾಗಿ ಉಳಿಯಲಾರೆ. ಹಾಗೆ ನಾನು ಮಾಡಲಾರೆ.”

1960ರ ಮಾತುಕತೆಗಳು ವಿಫಲಗೊಂಡ ನಂತರ ಭಾರತ ಚೀನಾ ಸಂಬಂಧ ಹದಗೆಡುತ್ತ ಹೋಯಿತು. ಎರಡೂ ದೇಶಗಳ ನಡುವೆ ಅವಿಶ್ವಾಸ ಸಂಶಯ ಬೆಳೆಯುತ್ತ ಹೋದವು. ಇದರ ಪರಿಣಾಮವಾಗಿ 1962 ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿ ಯುದ್ಧ ಪುಕಾರಿಸಿತು. ಸುಮಾರು ಒಂದು ತಿಂಗಳು ಕಾಲ ನಡೆದ ಈ ಯುದ್ಧದಲ್ಲಿ ಭಾರತ ಪರಾಭವ ಅನುಭವಿಸಬೇಕಾಯಿತು. ಈ ಯುದ್ಧದ ನಂತರ ಅಕ್ಷಾಯಿ ಚಿನ್ ಕ್ಷೇತ್ರದ ಮೇಲೆ ಚೀನಾದ ನಿಯಂತ್ರಣ ಮತ್ತಿಷ್ಟು ಗಟ್ಟಿಯಾಯಿತು. ಗಮನಾರ್ಹವೆಂದರೆ ಪೂರ್ವದ ನೇಫಾ ಪ್ರಾಂತದಲ್ಲಿ ಬಹುದೊಡ್ಡ ಭಾಗವನ್ನು ಚೀನಾ ಸೈನ್ಯ ವಶಪಡಿಸಿಕೊಂಡರೂ ಯುದ್ಧ ಕೊನೆಗೊಂಡ ನಂತರ ಈ ಎಲ್ಲ ಭಾಗವನ್ನು ಭಾರತಕ್ಕೆ ಮರಳಿ ಕೊಟ್ಟು ಚೀನಾ ‘ಮೆಕ ಮಹೋನ್ ಲೈನ್’ ನ ಆಚೆಗೆ ವಾಪಸ್ ಹೋಯಿತು.

1962ರ ಯುದ್ಧದ ಪರಾಭವದಿಂದಾಗಿ ನೆಹರೂ ಕುಗ್ಗಿಹೋದರು. ಅದು ಅವರ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಿತು. 1964 ಮೇ ತಿಂಗಳಿನಲ್ಲಿ ಅವರು ತೀರಿಕೊಂಡರು. ಆದರೆ ಆ ಪರಾಭವವೇ ಅವರ ಐತಿಹಾಸಿಕ ಸಾಧನೆ ಕೂಡ ಆಗಬಹುದಿತ್ತು. 1960ರಲ್ಲಿ ಚೀನಾ ಜೊತೆ ಹೊಂದಾಣಿಕೆ ಮಾಡಿದ್ದರೆ ಗಡಿ ಸಮಸ್ಯೆ ಮುಗಿದು ಹೋಗಬಹುದಾಗಿತ್ತು. ಸ್ವಾತಂತ್ರ್ಯ ಚಳವಳಿಯ ಒಬ್ಬ ಎತ್ತರದ ನಾಯಕ ಹಾಗೂ ದೇಶದ ಪ್ರಥಮ ಪ್ರಧಾನಿಯಾಗಿ ಭಾರತೀಯ ಜನತೆಯಲ್ಲಿ ಅವರಿಗೆ ಪ್ರತಿಷ್ಟೆಯ ಸ್ಥಾನವಿತ್ತು. ದೂರದೃಷ್ಟಿಯಿಂದ ನೋಡಲಾಗಿ ಚೀನಾ ಜೊತೆಯಲ್ಲಿ ಜಮೀನಿನ ವಿಷಯದಲ್ಲಿ ಸಂಧಾನ ಮಾಡಿದ್ದರೆ ಭಾರತಕ್ಕೆ ಹಿತಕರವೇ ಎಂಬ ಮಾತನ್ನು ಜನತೆಗೆ ಮನದಟ್ಟುಮಾಡಿಕೊಡುವ ಹಾಗೂ ಜನತೆಯ ಸಮರ್ಥನೆ ಸಂಪಾದಿಸುವ ರಾಜಕೀಯ ಶಕ್ತಿ ನೆಹರೂ ಅವರಿಗೆ ಇತ್ತು. ಆದರೆ ಗಡಿಸಮಸ್ಯೆಯ ಪರಿಹಾರದ ಬಗ್ಗೆ ಅವರ ನಿಲುವಿನಲ್ಲಿ ಗಟ್ಟಿತನದ ಅಭಾವದಿಂದಾಗಿ ಅವರು 1960ರ ಸದವಕಾಶವನ್ನು ಕಳೆದುಕೊಂಡರು.

1962ರ ಯುದ್ಧದ ನಂತರ ಭಾರತ ಚೀನಾ ಸಂಬಂಧ ಕಡಿದುಹೋಗಿ ಮುಂದಿನ 17 ವರ್ಷಗಳವರೆಗೆ ಶೀತಾಗಾರದಲ್ಲಿ ಮುಚ್ಚಿಹೋಯಿತು. ಫೆಬ್ರುವರಿ 1979ರಲ್ಲಿ ಜನತಾ ಪಕ್ಷದ ಸರಕಾರದಲ್ಲಿ ವಿದೇಶ ಮಂತ್ರಿಯಾಗಿದ್ದ ಅಟಲ ಬಿಹಾರಿ ವಾಜಪೇಯಿಯವರು ಪೇಕಿಂಗಿಗೆ ಹೋದಾಗಲೇ ಉಭಯ ದೇಶಗಳ ಮಾತುಕತೆಗೆ ಮತ್ತೊಮ್ಮೆ ಚಾಲನೆ ಸಿಕ್ಕಿತು. ಆಗ ಚೀನಾ ದೇಶದ ಸರ್ವಶೇಷ್ಠ ನಾಯಕ (Paramount leader) ಆಗಿದ್ದ ಡೆಂಗ ಶಿಯಾವೂಪಿಂಗ ಅವರ ಜೊತೆಯಲ್ಲಿ ವಾಜಪೇಯಿಯವರು ಗಡಿಪ್ರಶ್ನೆಯ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿದಾಗ ಡೆಂಗ ಅವರು ಚೈ ಎನ್‌ಲಾಯ್ ಅವರು 1960 ರಲ್ಲಿ ಕೊಟ್ಟ ‘ಪೈಕೇಜ ಡೀಲ್’ ಪ್ರಸ್ತಾಪವನ್ನೇ ಪುನರುಚ್ಚರಿಸಿದರು. ಅಷ್ಟೇ ಅಲ್ಲ, ಡೆಂಗ ಅವರು ಮತ್ತೊಂದು ಮಾತನ್ನು ಹೇಳಿದರು: “ಚೀನಾ ಮತ್ತು ಭಾರತ ನೆರೆಯ ದೇಶಗಳು. ಇನ್ನೂ ಎಷ್ಟು ವರ್ಷಗಳ ವರೆಗೆ ನಾವು ಜಗಳವನ್ನು ಮುಂದುವರೆಸುತ್ತ ಇರಬೇಕು? ಈ ಸಮಸ್ಯೆಯನ್ನು ಬಗೆಹರಿಸಿ ನಾವು ಪರಸ್ಪರ ಸಹಕಾರದ ಹೊಸ ಅಧ್ಯಾಯವನ್ನು ಶುರುಮಾಡಬೇಕು. ಅಲ್ಲದೇ, ಈ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ ಮಾಡುತ್ತಿರುವಾಗಲೇ, ಉಭಯ ದೇಶಗಳ ನಡುವೆ ಇತರೆಲ್ಲ ಕ್ಷೇತ್ರಗಳಲ್ಲಿ ಸಹಕಾರ ಬೆಳೆಸುವ ನಿರ್ಧಾರ ಮಾಡಬೇಕು.”

ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಜನತಾ ಸರಕಾರ ಅತ್ಯಂತ ಅಸ್ಥಿರವಾಗಿದ್ದರಿಂದ, ಹಾಗೂ ಜುಲೈ 1979 ರಲ್ಲಿಯೇ ಕುಸಿದು ಹೋಗಿದ್ದರಿಂದ, ಗಡಿ ಸಮಸ್ಯೆಯ ಪರಿಹಾರಕ್ಕೆ ಅವರಿಂದ ಯಾವ ಪ್ರಯತ್ನವೂ ಸಾಧ್ಯವಿರಲಿಲ್ಲ. ಅನಂತರ 1980ರಲ್ಲಿ ಇಂದಿರಾ ಗಾಂಧಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು. ಆಗ 1982 ಮತ್ತು 1983 ರಲ್ಲಿ ಡೆಂಗ ಶಿಯಾವೋಪೆಂಗ ಅವರು ತಮ್ಮ ಮೊದಲಿನ ಪ್ರಸ್ತಾಪವನ್ನೇ ಪೇಕಿಂಗನಲ್ಲಿಯ ನಮ್ಮ ರಾಯಭಾರಿಗಳ ಮುಖಾಂತರ ಪುನಃ ಭಾರತ ಸರಕಾರಕ್ಕೆ ತಿಳಿಸಿದರು.

1983ರಲ್ಲಂತೂ ಚೀನಾ ತನ್ನ ಪ್ರಸ್ತಾಪದಲ್ಲಿ ಮತ್ತೊಂದು ಆಕರ್ಷಕ ಅಂಶವನ್ನು ಜೋಡಿಸುವ ತಯಾರಿಯನ್ನು ದರ್ಶಿಸಿತು. ಪ್ರಧಾನಿ ಇಂದಿರಾ ಗಾಂಧಿ ಅವರು (ಆಗ ಅವರು Non Aligned Movement ಅಧ್ಯಕ್ಷರೂ ಆಗಿದ್ದರು ಎಂಬುದು ಮಹತ್ವದ್ದು) ಪೇಕಿಂಗಿಗೆ ಭೇಟಿ ಕೊಟ್ಟರೆ 1960ರ ‘ಪೈಕೇಜ ಡೀಲ್’ ಜೊತೆಯಲ್ಲಿಯೇ ಅಕ್ಷಾಯಿ ಚಿನ್‌ನ ಕೆಲವು ಭಾಗವನ್ನೂ ಕೂಡ ಭಾರತಕ್ಕೆ ಬಿಟ್ಟು ಕೊಡಲು ನಾವು ಸಿದ್ಧ ಎಂಬ ಮಾತನ್ನು ಚೀನಾದ ಆಗಿನ ಪ್ರಧಾನಿ ಝಾವೋ ಝಿಯಾಂಗ ಬಾರತಕ್ಕೆ ತಿಳಿಸಿದರು. ಆಗ ಇಂದಿರಾ ಗಾಂಧಿ ಮುಂಬರುವ 1984ರ ಸಾರ್ವಜನಿಕ ಚುನಾವಣೆಯ ನಂತರ 1985ರಲ್ಲಿ ಚೀನಾಕ್ಕೆ ಭೇಟಿಕೊಡುವ ಇಚ್ಛೆಯನ್ನು ಪೇಕಿಂಗಿಗೆ ರಾಯಭಾರಿಯ ಮೂಲಕ ತಿಳಿಸಿದರು. ಆದರೆ ದುರ್ಭಾಗ್ಯದಿಂದ 1984ರ ಅಕ್ಟೋಬರನಲ್ಲಿ ಇಂದಿರಾ ಗಾಂಧಿಯವರ ಹತ್ಯೆ ಆಯಿತು.

ಅನಂತರ 1988ರಲ್ಲಿ ರಾಜೀವ ಗಾಂಧಿಯವರು ಚೀನಾಕ್ಕೆ ಹೋದಾಗ ಡೆಂಗ ಶಿಯಾವೋಪಿಂಗ ಅವರು ಭಾರತದ ತರುಣ ಪ್ರಧಾನ ಮಂತ್ರಿಯವರಿಗೆ ಹೇಳಿದರು: “ಚೀನಾ ಮತ್ತು ಭಾರತದ ನಡುವೆ ಸಹಕಾರವಿಲ್ಲದೇ ಏಶಿಯಾದ ಶತಮಾನ ಉದಯಕ್ಕೆ ಬರಲು ಸಾಧ್ಯವಿಲ್ಲ.”

ಈ ಐತಿಹಾಸಿಕ ಹಿನ್ನೆಲೆಯನ್ನು ನೋಡಿದಾಗ ಒಂದು ಮಾತು ಸ್ಪಷ್ಟವಾಗುತ್ತದೆ. ಗಡಿ ಪ್ರಶ್ನೆಯ ಪರಿಹಾರಕ್ಕಾಗಿ ಚೀನಾ 1980ರ ದಶಕದ ಕೊನೆಯವರೆಗೂ ಸತತವಾಗಿ ಒಂದು ಸಂಧಾನದ ಸೂತ್ರ (Formula) ವನ್ನು ಭಾರತದ ಮುಂದೆ ಇಡುತ್ತ ಬಂದಿದೆ. ಭಾರತವು ಈ ಸೂತ್ರವನ್ನು ನಿರಾಕರಿಸಿದ್ದಷ್ಟೇ ಅಲ್ಲ, ತನ್ನದೇ ಆದ ಯಾವುದೇ ನಿಶ್ಚಿತವಾದ ಪ್ರಸ್ತಾಪವನ್ನು ಚೀನಾದ ಮುಂದೆ ಇಟ್ಟಿಲ್ಲ. ಬದಲಾಗಿ ಭಾರತದ ಗೃಹಮಂತ್ರಿ ಅಮಿತ್ ಶಾ ಅವರು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೇಳಿದ ಮಾತು ಏನು ಎಂಬುದನ್ನು ನಾವು ಸ್ಮರಿಸಿಕೊಳ್ಳಬೇಕು.

ಆಗಸ್ಟ್ 5, 2019ರಂದು ಜಮ್ಮು ಕಾಶ್ಮೀರಿನ ಸಂವಿಧಾನಾತ್ಮಕ ಮಾನ್ಯತೆಯನ್ನು ಬದಲಿಸಿ 370 ಕಲಮನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಶಾಸಿತ ಪ್ರದೇಶಗಳಲ್ಲಿ ವಿಭಜಿಸಿದ ನಂತರ ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸುತ್ತಾ ಅಮಿತ್ ಶಾ ಹೇಳಿದರು: “ನಾವು ಜಮ್ಮು ಕಾಶ್ಮೀರ ಬಗ್ಗೆ ಮಾತನಾಡುವಾಗ ನಮ್ಮ ಕಲ್ಪನೆ ಸ್ಪಷ್ಟವಿದೆ. ನಮ್ಮ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗ (Pakistan Occupied Kashmir) ಮತ್ತು ಗಿಲಗಿತ್ ಬಾಲಿಸ್ತಾನ್ ಕೂಡ ಇದೆ. ಅದರಂತೆಯೇ ಚೀನಾ ವಶಪಡಿಸಿಕೊಂಡಿರುವ ಲಡಾಕ್‌ನ ಅಕ್ಷಾಯಿಚಿನ್ ಕ್ಷೇತ್ರವೂ ಇದೆ. ಹಾಗೂ ಪಾಕಿಸ್ತಾನ ಮತ್ತು ಚೀನಾ ನಿಯಂತ್ರಣೆಯಲ್ಲಿರುವ ಈ ಪ್ರದೇಶಗಳನ್ನು ಮರಳಿ ಪಡೆಯುವುದಕ್ಕಾಗಿ ನಾವು ಪ್ರಾಣ ಕೊಡಲು ಸಿದ್ಧ.”

ಅಮಿತ ಶಾ ಅವರು ಮಾಡಿದ ಘೋಷಣೆಯಿಂದ ನಾಲ್ಕು ಮಹತ್ವದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಒಂದು: ಮೋದಿ ಸರಕಾರ ಯಾವ ಆಧಾರದ ಮೇಲೆ ಪಾಕಿಸ್ತಾನ ನಿಯಂತ್ರಿತ ಮತ್ತು ಚೀನಾ ನಿಯಂತ್ರಿತ ಭೂಭಾಗ ಭಾರತದ್ದೇ ಎಂದು ಪ್ರತಿಪಾದಿಸುತ್ತಿದೆ? ಜಮ್ಮು, ಕಾಶ್ಮೀರ, ಲಡಾಕ್ ಮತ್ತು ಗಿಲ್ಗಿತ್ ಬಾಲಿಸ್ತಾನಗಳ ಇತಿಹಾಸವನ್ನು ನೋಡಲಾಗಿ, ಹಾಗೂ ಯಾವ ರೀತಿ ಜಮ್ಮು ಮಹಾರಾಜ ಹರಿಸಿಂಗ ಅಕ್ಟೋಬರ್ 1947ರಲ್ಲಿ ತನ್ನ ರಾಜ್ಯವನ್ನು ಭಾರತದ ಅಂಗವಾಗಿ ಮಾಡಿದ ಘಟನಾವಳಿಯನ್ನು ನೋಡಲಾಗಿ ಇಡೀ ಜಮ್ಮು ಕಾಶ್ಮೀರ ನಮ್ಮದೇ ಎಂದು ಹಕ್ಕು ಸಾರಿದರೆ ಅದು ವಿವಾದಾಸ್ಪದವಾಗುತ್ತದೆ. ಅದು ಈಗಾಗಲೇ ವಿವಾದಾಸ್ಪದವಾಗಿದೆ. ಅಷ್ಟೇ ಅಲ್ಲ, ಸ್ವಾತಂತ್ರö್ಯದ ನಂತರ 73 ವರ್ಷಗಳು ಕಳೆದರೂ ಪಾಕಿಸ್ತಾನ ಮತ್ತು ಚೀನಾ ಜೊತೆಗಿನ ಈ ಜಮೀನಿನ ವಿವಾದವನ್ನು ತನ್ನ ಪರವಾಗಿ ಪರಿಹಾರಗೊಳಿಸುವುದರಲ್ಲಿ ಭಾರತ ವಿಫಲವಾಗಿದೆ. ಅಂದರೆ ವಸಾಹತುವಾದದ ಕಾಲದಲ್ಲಿ ಪರಕೀಯ ಶಕ್ತಿಯೊಂದು ಹುಟ್ಟಿಸಿದ ಸಮಸ್ಯೆಗಳನ್ನು ಅದು ಹಾಕಿಕೊಟ್ಟ ಚೌಕಟ್ಟಿಗೆ ಅಂಟಿಕೊಂಡು ಭಾರತ ಪಾಕಿಸ್ತಾನ ಮತ್ತು ಚೀನಾ ಬಗೆಹರಿಸಲು ಸಾಧ್ಯವೇ?

ಎರಡು: ಅಕ್ಸಾಯಿ ಚಿನ್ ಅನ್ನು ಮರಳಿ ಪಡೆಯುವುದಕ್ಕಾಗಿ ಪ್ರಾಣ ಕೊಡಲು ನಾವು ಸಿದ್ಧ ಎಂದು ಹೇಳಿದ ಮೋದಿ ಸರಕಾರ ಚೀನಾ ವಿರುದ್ಧ ಯುದ್ಧ ಮಾಡಿ, ಆ ಯುದ್ಧದಲ್ಲಿ ವಿಜಯ ಗಳಿಸಿ ಅಕ್ಷಾಯಿ ಚಿನ್‌ವನ್ನು ಭಾರತದ್ದಾಗಿ ಮಾಡಲು ಸಾಧ್ಯವೇ? ಸದ್ಯಕ್ಕೆ ಲಡಾಕ್ ನಲ್ಲಿ ಎಲ್‌ಎಸಿ ಮೇಲೆ ಕೆಲವೇ ಕೆಲವು ಚದರ ಕಿ.ಮಿ. ಕ್ಷೇತ್ರವನ್ನು -ಗಾಲವಾನ್ ಕಣಿವೆಯಲ್ಲಾಗಲೀ ಪ್ಯಾನಗಾಂಗ ಸರೋವರದಲ್ಲಾಗಲೀ- ಸಶಸ್ತ್ರ ರೀತಿಯಿಂದ ಚೀನಾದ ವಶದಿಂದ ತೆಗೆದುಕೊಳ್ಳಲು ಮೋದಿ ಸರಕಾರ ಹಿಂದು ಮುಂದೆ ನೋಡುತ್ತಿರುವಾಗ 38000 ಚದರ ಕಿ.ಮಿ. ಗಳ ಇಡೀ ಅಕ್ಸಾಯಿ ಚಿನ್‌ವನ್ನು ಭಾರತದ ಪ್ರದೇಶವಾಗಿ ಮಾಡಲು ಸಾಧ್ಯವೇ? ಈ ರೀತಿಯ ಪೊಳ್ಳು ಘೋಷಣೆಗಳಿಂದ ಗಡಿ ಸಮಸ್ಯೆ ಪರಿಹಾರವಾದೀತೇ ಹಾಗೂ ಭಾರತ ಚೀನಾ ಸಂಬಂಧ ಸುಧಾರಿಸೀತೇ?

ಮೂರು: ಮೋದಿ ಸರಕಾರ ತನ್ನ ಕಳೆದ ಆರು ವರ್ಷಗಳ ಕಾಲದಲ್ಲಿ ಪಾಕಿಸ್ತಾನ ನಿಯಂತ್ರಿತ ಪ್ರದೇಶದಲ್ಲಿಯ ಒಂದು ಚದರ ಕಿ.ಮಿ. ಜಮೀನನ್ನು ಕೂಡ ಮರಳಿ ಪಡೆಯುವ ಸಾಹಸ ಮಾಡಿಲ್ಲ. ‘ಸರ್ಜಿಕಲ್ ಸ್ಟ್ರೈಕ್’ ಮತ್ತು ‘ಬಾಲಾಕೋಟ್ ಸ್ಟ್ರೈಕ್’ ನಡೆಸಿ ಮೋದಿ 2019ರಲ್ಲಿ ಚುನಾವಣೆ ಗೆದ್ದಿರಬಹುದು. ಆದರೆ ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ದಾಟಿಹೋಗಿ ಆಚೆಯ ಸ್ವಲ್ಪ ಭೂಭಾಗವನ್ನು ಕೂಡ ಪಾಕಿಸ್ತಾನದ ನಿಯಂತ್ರಣೆಯಿAದ ತೆಗೆದುಕೊಂಡಿಲ್ಲ. ಹೀಗಿರುವಾಗ ಎಲ್‌ಎಸಿ ದಾಟಿಹೋಗಿ ಸಂಪೂರ್ಣ ಅಕ್ಷಾಯಿ ಚಿನ್‌ವನ್ನು ಚೀನಾದ ನಿಯಂತ್ರಣೆಯಿAದ ತೆಗೆದುಕೊಳ್ಳುವ ದುಸ್ಸಾಹಸ ಮೋದಿ ಸರಕಾರ ಮಾಡೀತೇ?

ನಾಲ್ಕು: ಪಾಕಿಸ್ತಾನ ನಿಯಂತ್ರಿತ ಪಿಒಕೆ ಮತ್ತು ಗಿಲ್ಗಿತ್-ಬಾಲ್ತಿಸ್ತಾನಗಳನ್ನು ತೆಗೆದುಕೊಳ್ಳುವ ಪ್ರಯತ್ನ ಮೋದಿ ಸರಕಾರ ಮಾಡಿದ್ದಾದರೆ ಭಾರತ ಏಕಕಾಲಕ್ಕೆ ಪಾಕಿಸ್ತಾನ ಮತ್ತು ಚೀನಾ ವಿರುದ್ಧ (Two Front War) ಹೋರಾಡಬೇಕಾಗುತ್ತದೆ ಎಂಬುದನ್ನು ನಾವು ಮರೆಯಕೂಡದು. ಏಕೆಂದರೆ ಚೀನಾ ಪಾಕಿಸ್ತಾನ ಇಕಾನಾಮಿಕ್ ಕಾರಿಡಾರ್ (CPEC) ಇದು ಗಿಲ್ಗಿತ್ ಬಾಲ್ತಿಸ್ತಾನ ಕ್ಷೇತ್ರದಿಂದ ಹಾಯ್ದು ಹೋಗುತ್ತದೆ. ಚೀನಾದ ಆರ್ಥಿಕ ಹಿತರಕ್ಷಣೆಗಾಗಿ CPEC ಅತ್ಯಂತ ಮಹತ್ವದ ಯೋಜನೆ. ಆದ್ದರಿಂದ ಭಾರತ ಗಿಲ್ಗಿತ್ ಬಾಲ್ತಿಸ್ತಾನ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಚೀನಾ ವಿರುದ್ಧ ಕೂಡ ಯುದ್ಧ ಮಾಡಬೇಕಾಗುತ್ತದೆ. ಇದರಲ್ಲಿ ಸಂಶಯವೇ ಇಲ್ಲ.

ಈ ಎಲ್ಲ ಹಿನ್ನೆಲೆಗಳನ್ನು ಪರೀಕ್ಷಿಸಿದಾಗ ಒಂದು ಸತ್ಯ ಖಚಿತವಾಗಿ ಮುಂಬರುತ್ತದೆ. ಪರಸ್ಪರ ಕೊಡುಕೊಳ್ಳುವಿಕೆಯ ಸಂಧಾನವಿಲ್ಲದೇ ಭಾರತ ಚೀನಾ ಗಡಿ ಸಮಸ್ಯೆಗೆ ಪರಿಹಾರವಿಲ್ಲ. ಹಾಗೂ ಇಂಥ ಸಂಧಾನ ಮಾಡಿ ಸಮಸ್ಯೆಗೆ ಪೂರ್ಣವಿರಾಮ ಕೊಟ್ಟರೆ ಅದು ಶರಣಾಗತಿಯಲ್ಲ.

ಈ ಸಂದರ್ಭದಲ್ಲಿ ನಾವು ಯೋಚಿಸಲೇಬೇಕಾದ ಮಹತ್ವದ ಪ್ರಶ್ನೆಯೊಂದಿದೆ. ಭವಿಷ್ಯದಲ್ಲಿ ಯಾವಾಗಲಾದರೂ ಭಾರತ ಚೀನಾ ಗಡಿ ಸಮಸ್ಯೆ ಬಗೆಹರಿದರೆ ಆ ಪರಿಹಾರದ ಸ್ವರೂಪ ಹೇಗಿದ್ದೀತು? 1960 ರಲ್ಲಿ ಚೈ ಎನ್‌ಲಾಯಿ ಭಾರತದ ಮುಂದಿಟ್ಟ ‘ಪೈಕೇಜ ಡೀಲ್’ ಪ್ರಸ್ತಾಪಕ್ಕಿಂತ ತೀರ ಭಿನ್ನವಾದ ಪರಿಹಾರ ಅದು ಆಗಿರಲು ಸಾಧ್ಯವೇ? ಚೀನಾ ಯುದ್ಧ ಮಾಡಿ ಅರುಣಾಚಲ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಾಧ್ಯವೇ? ಅದೇ ರೀತಿ ಭಾರತ ಯುದ್ಧ ಮಾಡಿ ಅಕ್ಷಾಯಿ ಚಿನ್ ವಶಪಡಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗಳ ಉತ್ತರ ಸುಸ್ಪಷ್ಟವಾಗಿರುವಾಗ ಈಗಲೇ ಸಂಧಾನದ ಮಾರ್ಗವನ್ನು ನಾವು ಏಕೆ ಹಿಡಿಯಬಾರದು?

ಆದರೆ ಇಂದು ರಾಷ್ಟ್ರವಾದದ ಉನ್ಮಾದದಿಂದಾಗಿ “ಚೀನಾಗೆ ಒಂದು ಇಂಚು ಜಮೀನು ಕೂಡ ಕೊಡುವುದು ಬೇಡ” ಎಂಬ ದನಿ ಮತ್ತೆ ಕೇಳಿಬರುತ್ತಿದೆ. ಇದರಿಂದ “ರೋಗ” ಮತ್ತಿಷ್ಟು ದೀರ್ಘಾಯುಷ್ಯ ಪಡೆದು ಉಲ್ಬಣವಾಗುತ್ತದೆಯೇ ಹೊರತು ನಿವಾರಣೆಯಾಗುವುದಿಲ್ಲ.

ಮತ್ತೊಂದು ಚಿಂತಾಜನಕ ಸಂಗತಿಯೆಂದರೆ ಚೀನಾಗೆ ಪಾಠ ಕಲಿಸಬೇಕಾದರೆ ಭಾರತ ಅಮೆರಿಕೆಯ ಸಹಾಯ ಪಡೆಯಬೇಕು ಎಂಬ ಕೂಗು ಬಲವತ್ತರವಾಗುತ್ತಿದೆ. ಇದಕ್ಕೆ ಅಮೆರಿಕೆಯಿಂದ ಕೂಡ ಪ್ರಚೋದನೆ ಸಿಗುತ್ತಿದೆ. ಏಕೆಂದರೆ ಚೀನಾದ ಪ್ರಭಾವವನ್ನು ಕ್ಷೀಣಗೊಳಿಸುವುದಕ್ಕಾಗಿ ಇಂದು ಟ್ರಂಪ್ ಸರಕಾರ ಎಲ್ಲ ರೀತಿಯಿಂದ ಹೆಣಗುತ್ತಿದೆ. ಆದ್ದರಿಂದ ಅಮೆರಿಕದ ನೇತೃತ್ವದಲ್ಲಿ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯ ಚೀನಾ ವಿರೋಧಿ Quadrilateral Security Alliances ನಲ್ಲಿ ಸಕ್ರಿಯಗೊಳ್ಳಬೇಕು. ಈ ದಿಕ್ಕಿನಲ್ಲಿ ಗಂಭೀರ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳಿಂದ ಭಾರತ ಹೆಚ್ಚು ಸಂರಕ್ಷಿತವಾಗುತ್ತದೆಯೋ ಅಥವಾ ನಮ್ಮ ರಾಷ್ಟ್ರೀಯ ಸುರಕ್ಷೆಗೆ ಹೊಸ ಸಂಕಟಗಳು ಹುಟ್ಟಿಕೊಳ್ಳುತ್ತವೆಯೋ ಎನ್ನುವುದರ ಬಗ್ಗೆ ವ್ಯಾಪಕ ಚಿಂತನೆ ಅವಶ್ಯ. ಮುಖ್ಯವಾಗಿ, ಚೀನಾ ಭಾರತದ ಅತಿದೊಡ್ಡ ನೆರೆಯ ರಾಷ್ಟ್ರ. ಈ ಭೂಗೋಳದ ಸತ್ಯ ಬದಲಾಗಲಾರದು. ನೆರೆಯ ರಾಷ್ಟ್ರಗಳ ಜೊತೆಗೆ ಶಾಂತಿಯುತ ಮತ್ತು ಸೌಹಾರ್ದಪೂರ್ಣ ಸಂಬಂಧಗಳಿಲ್ಲದೇ ಭಾರತದ ಪೂರ್ಣ ಉತ್ಥಾನ ಅಸಾಧ್ಯ. ಆದ್ದರಿಂದ ಚೀನಾದ ಜೊತೆಗಿನ ಅನಿರ್ಣಿತ ಗಡಿಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವುದು ನಮ್ಮ ರಾಷ್ಟ್ರೀಯ ಆದ್ಯತೆಯಾಗಬೇಕು.

ಆದರೆ ಗಡಿಸಮಸ್ಯೆಯ ಪರಿಹಾರಕ್ಕೆ ಚೀನಾ ಕೂಡ 1980 ರ ದಶಕಗಳ ವರೆಗೆ ತೋರಿಸಿದ ತನ್ನ ಇಚ್ಛೆಗೆ, ನಿಲುವಿಗೆ ಇಂದು ಕೂಡಾ ಬದ್ಧ ಎಂದು ಭಾರತಕ್ಕೆ ತಿಳಿಸುವುದು ಅತ್ಯಗತ್ಯ. ಇತ್ತೀಚೆಗಿನ ಮೂರು ದಶಕಗಳಲ್ಲಿ ಚೀನಾ ಆರ್ಥಿಕವಾಗಿ ಹಾಗೂ ಮಿಲಿಟರಿ ಶಕ್ತಿಯಾಗಿ ರಭಸದಿಂದ ಮುಂದೆ ಬಂದಿದೆ. ಮಹಾಶಕ್ತಿ ಅಮೆರಿಕೆಗೆ ಕೂಡ ಎದುರೇಟು ಹಾಕುವ ಸಾಮರ್ಥ್ಯ ಗಳಿಸುತ್ತಿದೆ. ಇದರಿಂದಾಗಿ ಚೀನಾದ ಸಮಾಜದಲ್ಲಿ ಹಾಗೂ ಶಾಸಕವರ್ಗದಲ್ಲಿ ಒಂದು ತೆರನಾದ ದರ್ಪ ಬೆಳೆದಿದೆ. ಇದು ಭಾರತ ಚೀನಾ ಸಂಬಂಧಗಳ ಸುಧಾರಣೆಗೆ ಹಾಗೂ ಗಡಿ ಸಮಸ್ಯೆಯ ಪರಿಹಾರಕ್ಕೆ ಮಾರಕ. ಇದು ಚೀನಾದ ಭವಿಷ್ಯಕ್ಕಾಗಿಯೂ ಮಾರಕ.

ಆದ್ದರಿಂದ ಇಂದಿನ ಐತಿಹಾಸಿಕ ಅಗತ್ಯವೆಂದರೆ- ಚೀನಾ ಭಾರತದ ಮೂಲ ರಾಷ್ಟ್ರೀಯ ಹಿತಗಳನ್ನು ಗೌರವಿಸಬೇಕು ಹಾಗೂ ಭಾರತ ಚೀನಾದ ರಾಷ್ಟ್ರೀಯ ಹಿತಗಳನ್ನು (Core National Interests)  ಗೌರವಿಸಬೇಕು ಹಾಗೂ ಪರಸ್ಪರರ ಪ್ರಾಚೀನ ಹಾಗೂ ಪ್ರಗಲ್ಭ ನಾಗರಿಕತೆಗಳ ವಿವೇಕದಿಂದ (Civilisational Wisdom) ಮಾರ್ಗದರ್ಶನ ಪಡೆದು ಸಮಸ್ತ ಮಾನವಕುಲದ ಏಳಿಗೆಗಾಗಿ ಎರಡು ದೇಶಗಳು ಕೂಡಿ ಶ್ರಮಿಸಬೇಕು.

ಈ ಲೇಖನದ ಕೊನೆಯಲ್ಲಿ ಮಹಾತ್ಮಾ ಗಾಂಧಿಯವರು 1942ರಲ್ಲಿ ಬರೆದ ಒಂದು ಸೂಕ್ತಿಯನ್ನು ಉದ್ಧರಿಸಬೇಕು ಎಂದೆನಿಸುತ್ತದೆ.

“As a friend of China, I long for the day when a free India and a free China will cooperate together in friendship and brotherhood for their own good and for the good of Asia and the world.”

 

*ಲೇಖಕರು ಪಾಕಿಸ್ತಾನ ಮತ್ತು ಚೀನಾದೊಂದಿಗೆ ಭಾರತದ ಶಾಂತಿ-ಮೈತ್ರಿ ಬೆಳೆಸುವುದಕ್ಕಾಗಿ ಕಾರ್ಯನಿರತರಾಗಿದ್ದಾರೆ. ಇದಕ್ಕಾಗಿ Forum For A New South Asia ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಕಟವರ್ತಿಯಾಗಿ ಸೇವೆ ಸಲ್ಲಿಸಿದ್ದರು. ‘Music of the spinning wheel- Mahatma Gandhi’s Manifesto for the Internet Age’ ಎಂಬ ಪುಸ್ತಕದ ಲೇಖಕರಾಗಿ ಗಾಂಧಿ ವಿಚಾರದ ಪ್ರಸಾರಕ್ಕೆ ಬದ್ಧರು. ಸಂಪರ್ಕ:  sudheenkulkarni@gmail.com

Leave a Reply

Your email address will not be published.