ಸಂಪಾದಕೀಯ ಜುಲೈ 2019

ಈ ಕಾಲದ ಕಳವಳ!

ಈ ಸಂಚಿಕೆಯ ಮುಖ್ಯಚರ್ಚೆಯ ವಿಷಯ ಕುರಿತು ಲೇಖನಗಳನ್ನು ಬರೆಯಿಸಲು ನಾನು ಸಹಜವಾಗಿಯೇ ದಲಿತ ಚಳವಳಿಗೆ ಸಂಬಂಧಪಟ್ಟ ಹಲವಾರು ಮಿತ್ರರನ್ನು ಸಂಪರ್ಕಿಸಿದೆ. ಬಹುಪಾಲು ಹೋರಾಟಗಾರರು, ಸಾಹಿತಿಗಳು, ಚಿಂತಕರು ಚರ್ಚೆಯ ಪ್ರಸ್ತುತತೆಯನ್ನು ಗುರುತಿಸಿದರು; ಕೆಲವರು ಪತ್ರಿಕೆಯ ಕಾರ್ಯವನ್ನು ಮೆಚ್ಚಿ ಮಾತನಾಡಿದರು, ಅನೇಕರು ‘ಇದೇಕೆ ಈಗ?’ ಎಂಬ ಅಪಸ್ವರ ತೆಗೆದರೆ ಒಂದಷ್ಟು ಜನ ಚಳವಳಿಯ ಕಾಲ ಮುಗಿದೇಹೋಗಿದೆ ಎಂಬಂತೆ ಸಿನಿಕತನ ತೋರ್ಪಡಿಸಿದರು. ಸಂಭಾಷಣೆಯಲ್ಲಿ ಸಂಘಟನೆಗೆ ಮತ್ತು ವಿಘಟನೆಗೆ ಕಾರಣವಾದ ತಾತ್ವಿಕ ವಿಚಾರಗಳು, ವ್ಯಕ್ತಿಗತ ಸ್ವಾರ್ಥಗಳು, ಸಾಂದರ್ಭಿಕ ತಪ್ಪುಗಳು, ಚಾರಿತ್ರಿಕ ಒತ್ತಡಗಳು, ಅಧಿಕಾರ ದಾಹ ಇತ್ಯಾದಿ ಎಲ್ಲಾ ಹರಿದಾಡಿದವು; ಹೊರಮಾತುಗಳಲ್ಲಿ ಕಾಣಿಸಿದ ಪದಗಳು ಏನೇ ಇರಲಿ, ಎಲ್ಲರ ಒಳದನಿಯಲ್ಲಿ ಮಡುಗಟ್ಟಿದ್ದು ದಟ್ಟ ವಿಷಾದ.

ದಲಿತ ಚಳವಳಿಯಲ್ಲಿ ಆರಂಭದ ಘಟ್ಟದಿಂದ ತೊಡಗಿಸಿಕೊಂಡಿದ್ದ ಗೆಳೆಯರೊಬ್ಬರಿಗೆ ಲೇಖನ ಬರೆದುಕೊಡಲು ಕೇಳಿದೆ. ಸ್ವತಃ ಕವಿಯೂ ಆದ ಆ ಗೆಳೆಯರ ಚುಟುಕು ಪ್ರತಿಕ್ರಿಯೆ ನಿಜಕ್ಕೂ ಚುರುಕು ಮುಟ್ಟಿಸುವಂತಿತ್ತು; ‘ಸತ್ಯ ಹೇಳಿದರೆ ಅನೇಕ ವ್ಯಕ್ತಿಗಳು ನೇಣು ಹಾಕಿಕೊಳ್ಳಬೇಕು, ಸತ್ಯ ಹೇಳದಿದ್ದರೆ ಸಂಘಟನೆಯನ್ನು ನೇಣಿಗೇರಿಸಿದಂತೆ ಆಗುತ್ತದೆ!’. ಅವರು ಮಾತುಕತೆಯ ಕೊನೆಗೆ ತಮ್ಮ ಲೇಖನದ ಮೂಲಕ ವ್ಯಕ್ತಿಗಳನ್ನು ನೇಣಿಗೇರಿಸಲು ಸಮ್ಮತಿಸಿದರು. ಆದಾಗ್ಯೂ ಕವಿಮಿತ್ರರು ಅಂತಿಮವಾಗಿ ಲೇಖನ ಬರೆಯಲಿಲ್ಲ ಅರ್ಥಾತ್ ಸತ್ಯ ಹೇಳಲಿಲ್ಲ!

ಲೇಖನ ಬರೆಯದಿರುವ, ಸತ್ಯ ನುಡಿಯದಿರುವ ಗೆಳೆಯರ ನಿರ್ಧಾರವನ್ನು ನಾನು ವ್ಯಕ್ತಿಗತ ನೆಲೆಗೆ ಸೀಮಿತಗೊಳಿಸಲಾರೆ. ನಾವು ಬದುಕುತ್ತಿರುವ ಕಾಲಘಟ್ಟವೇ ಹಾಗಿದೆ; ಅರವಿಂದ ಮಾಲಗತ್ತಿಯವರು ನಮ್ಮ ಪತ್ರಿಕೆ ಬಿಡುಗಡೆ ವೇದಿಕೆಯಲ್ಲಿ ಹೇಳಿದಂತೆ, ‘ಇದು ಸಮಾಜಮುಖಿಗಳನ್ನು ಬೇಟೆಯಾಡುವ ಕಾಲ!’. ಅವರ ಮಾತನ್ನು ವಿಸ್ತರಿಸಿ ಹೇಳುವುದಾದರೆ, ‘ಇದು ನಿಜ ನುಡಿದು ನಿಷ್ಟುರ ಕಟ್ಟಿಕೊಳ್ಳದ, ಯಾರನ್ನೂ ಯಾವುದನ್ನೂ ವಿಮರ್ಶೆಗೆ ಒಳಪಡಿಸದ, ಪರಸ್ಪರ ಬೆನ್ನು ಕೆರೆದುಕೊಳ್ಳುವ, ಆದರ್ಶ ಹೇಳುತ್ತಲೇ ಅಪ್ರಾಮಾಣಿಕವಾಗಿ ಬದುಕುವ, ಸ್ವಹಿತಕ್ಕಾಗಿ ವಾಸ್ತವ ಮರೆಮಾಚುವ, ನಿನ್ನೆ-ನಾಳೆ ಎರಡನ್ನೂ ಮರೆತು ಬಾಚುವ ಕಾಲ’.

ಇಂತಹ ಕಳವಳಕಾರಿ ಕಾಲದಲ್ಲೂ ಸಮಾಜಮುಖಿಗಳು ಬೇಟೆಗಾರರಿಗೆ ಸುಲಭದ ತುತ್ತಾಗಬೇಕಿಲ್ಲ, ಶರಣಾಗಬೇಕಿಲ್ಲ; ಇನ್ನಷ್ಟು ತೀವ್ರವಾಗಿ ಬದುಕಬೇಕು, ಬರೆಯಬೇಕು, ಬೆರೆಯಬೇಕು, ನಿಜ ನುಡಿಯಬೇಕು, ನಿಷ್ಟುರವಾಗಿ ನಡೆಯಬೇಕು, ಕಟು ನಿರ್ಧಾರ ತೆಗೆದುಕೊಳ್ಳಬೇಕು. ಇದು ಸಮಾಜಮುಖಿ ಪತ್ರಿಕೆಯ ನಂಬಿಕೆ ಮತ್ತು ನೀತಿ. ನಮ್ಮ ಓದುಗರು, ಬರಹಗಾರರು, ಸಹಪಯಣಿಗರಿಂದ ಬಯಸುವುದೂ ಇದನ್ನೇ.

ನೆಪ ಹೇಳಿ ನುಣುಚಿಕೊಂಡವರು, ಸುರಕ್ಷಿತ ಅಂತರ ಕಾಯ್ದುಕೊಂಡವರು, ಕರೆ ಸ್ವೀಕರಿಸದವರು, ಒಪ್ಪಿ ಕೈಕೊಟ್ಟವರು, ಅರ್ಧ ಬರೆದವರು, ಮುಂದಿನ ಸಂಚಿಕೆಗೆ ಬರೆಯುವವರು… -ಇವರೆಲ್ಲರನ್ನು ಹೊರತುಪಡಿಸಿಯೂ ಅನೇಕ ಚಿಂತಕರು, ಸಾಹಿತಿಗಳು, ಹೋರಾಟಗಾರರು ಈ ಸಂಚಿಕೆಯ ಮುಖ್ಯಚರ್ಚೆಗೆ ಗಾಂಭೀರ್ಯ ತುಂಬಿದ್ದಾರೆ. ಒಟ್ಟು ಚರ್ಚೆಯ ಗರ್ಭದಿಂದ ದಲಿತ ಚಳವಳಿ ಮರುಹುಟ್ಟು ಪಡೆಯಲಿ, ಸಂಘಟನೆಗೆ ಚೈತನ್ಯದ ಮರುಪೂರಣ ದೊರೆಯಲಿ ಎಂಬ ಕಳಕಳಿ ನಮ್ಮದು.

ಈವರೆಗೆ ಎಲ್ಲೂ ಪ್ರಕಟವಾಗದ ಗಿರೀಶ ಕಾರ್ನಾಡರ ಗುಣಸ್ವಭಾವದ ಚಿತ್ರಣ, ರಾಷ್ಟ್ರೀಯ ಶಿಕ್ಷಣ ನೀತಿಯ ವಿಶ್ಲೇಷಣೆ, ಇನ್ನುಳಿದ ವಿಭಾಗಗಳ ಸಮೃದ್ಧ ಹೂರಣ ನಿಮ್ಮ ಓದಿಗಾಗಿ ಒಳಪುಟಗಳಲ್ಲಿ ಕಾದಿವೆ.

Leave a Reply

Your email address will not be published.