ಸಂಪಾದಕೀಯ

ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳೀಮನೆಯ ಬಾಗಿಲಿಗೆ ‘ನಾಳೆ ಬಾ’ ಎಂದು ಸುಣ್ಣದ ಕಲ್ಲಿನಲ್ಲೋ, ಕರಕಲು ಇದ್ದಿಲಿನಿಂದಲೋ ಗೀಚುತ್ತಿದ್ದೆವು. ನಡುರಾತ್ರಿ ಬಂದು ಕದ ತಟ್ಟುವ ದೆವ್ವ ಈ ಸಂದೇಶವನ್ನು ಓದಿ ಹಿಂದಿರುಗಿ ಹೋಗಲಿ, ಹೋಗುತ್ತದೆ ಎಂಬ ನಂಬಿಕೆ ಈ ಕ್ರಿಯೆಯ ಹಿಂದಿತ್ತು. ಕೇಡುಗಳಿಂದ ತಪ್ಪಿಸಿಕೊಳ್ಳಲು ಹಳ್ಳಿಗರು ತಮ್ಮದೇ ಆದ ರೀತಿಯಲ್ಲಿ ಅತಿಯಾದ ಮುಗ್ಧತೆ, ತುಸು ಬುದ್ಧಿ ಬೆರೆಸಿ ಹೂಡುವ ಸರಳ ತಂತ್ರಗಳಿಗೆ ಇದೊಂದು ನಿದರ್ಶನ. ದೆವ್ವ ಇದೆಯೇ, ಅದು ಅಕ್ಷರಜ್ಞಾನ ಹೊಂದಿದೆಯೇ, ಅದಕ್ಕೆ ಕನ್ನಡ ಬರುತ್ತದೆಯೇ ಎಂಬ ಪ್ರಶ್ನೆಗಳಿಗೆ ಇಲ್ಲಿ ಆಸ್ಪದವಿಲ್ಲ.

ಕಾಲ್ಪನಿಕ ದೇವರು, ದೆವ್ವಗಳ ಜೊತೆಜೊತೆಗೆ ವಾಸ್ತವಿಕ ಬದುಕನ್ನು ಬೆಸೆದುಕೊಳ್ಳುವ, ಆ ಮೂಲಕ ಬದುಕಿನ ಕಾಠೀಣ್ಯ ಹಗುರಗೊಳಿಸಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಇದರೊಂದಿಗೆ ಮುಸ್ಸಂಜೆ ಹೊತ್ತು ಮನೆಯ ಮುಂಬಾಗಿಲು ಮುಚ್ಚಬಾರದು, ಅದು ಲಕ್ಷ್ಮಿ ಒಳಬರುವ ಸಮಯ ಎಂಬ ನಂಬಿಕೆಯೂ ಇದೆ. ಒಳ್ಳೆಯವರನ್ನು ಒಳಗೆ ಬಿಟ್ಟುಕೊಳ್ಳುವ, ಕೆಟ್ಟವರನ್ನು ಮನೆಯ ಕದದಾಚೆ ನಿಲ್ಲಿಸುವ ಹಳ್ಳಿಗರ ಸಹಜ ನಡೆಯನ್ನು ಕಂದಾಚಾರವೆಂದು ತಳ್ಳಿಹಾಕಲಾದೀತೇ?

ದೆವ್ವಕ್ಕೆ ‘ನಾಳೆ ಬಾ’ ಸೂಚನೆ ಸರಿ; ದೇವರಿಗೆ ‘ತೆರೆದ ಬಾಗಿಲ’ನ್ನು ಒಪ್ಪೋಣ. ಆದರೆ ದೆವ್ವ ಮತ್ತು ದೇವರ ನಡುವೆ ಒಪ್ಪಂದವೋ ಗೊಂದಲವೋ ಉಂಟಾಗಿ ಸರಿರಾತ್ರಿ ದೇವರು, ಮುಸ್ಸಂಜೆ ದೆವ್ವ ಬಾಗಿಲಿಗೆ ಬಂದುಬಿಟ್ಟರೇ…! ಇದು ದೇವರು ಹಿಂದಿರುಗಿ, ದೆವ್ವ ಮನೆ ಹೊಕ್ಕುವ ಸನ್ನಿವೇಶ; ಕೆಲವೇ ಗಂಟೆಗಳ ವ್ಯತ್ಯಾಸ ಸೃಷ್ಟಿಸಬಹುದಾದ ಅನಾಹುತ.

ಇಂದು ಮತ್ತು ನಾಳೆ ನಡುವೆ ಇರುವುದು ಕೇವಲ ಇಪ್ಪತ್ನಾಲ್ಕು ಗಂಟೆಗಳ ಅಂತರವಲ್ಲ; ಅದರಲ್ಲಿ ಗಂಟೆಗಳ ಗಣಿತ ಮೀರಿದ ಪರಿಸ್ಥಿತಿಯ ಪಲ್ಲಟ ಅಡಗಿರುತ್ತದೆ. ಮೇಲ್ನೋಟಕ್ಕೆ ಕ್ಷುಲ್ಲಕವಾಗಿ ಕಾಣುವ ಈ ಪುಟ್ಟ ಕಾಲಾವಧಿ ಕೆಲವೊಮ್ಮೆ ಉಂಟುಮಾಡುವ ಪರಿಣಾಮ, ಪ್ರಭಾವ, ಫಲಿತಾಶ, ಸ್ಥಿತ್ಯಂತರ ಬಹುದೊಡ್ಡದು. ‘ನಾಳೆ’ ಖಂಡಿತಾ ಬರುತ್ತದೆ; ಆದರೆ ಅದು ‘ಇಂದು’ ಆಗಿರುವುದಿಲ್ಲ!

ಹಾಗಾಗಿ ವ್ಯಕ್ತಿಯಾಗಿ, ಸಂಸ್ಥೆಯಾಗಿ, ನಾಯಕರಾಗಿ, ಸರ್ಕಾರವಾಗಿ ತೆಗೆದುಕೊಳ್ಳುವ ನಿರ್ಧಾರ ಅಥವಾ ಕಾರ್ಯಕ್ರಮ ‘ಇಂದು’ ಮತ್ತು ‘ನಾಳೆ’ ನಡುವಿನ ವ್ಯತ್ಯಾಸದ ಫಲಿತಾಂಶಕ್ಕೆ ಒಳಪಡುತ್ತದೆ ಎಂಬುದು ಗಮನಾರ್ಹ. ಈ ಅರಿವನ್ನು ನಮ್ಮೊಳಗೆ ಸದಾಕಾಲ ಜಾಗೃತವಾಗಿಟ್ಟುಕೊಂಡು ನಿರ್ಧರಿಸಿದರೆ ‘ಅವಕಾಶ’ ಕದತಟ್ಟಿದಾಗ ನಾಳೆ ಬಾ ಎನ್ನುವುದು, ‘ಸಂಕಷ್ಟ’ ಬಳಿಬಂದಾಗ ಬಾಗಿಲು ತೆರೆಯುವುದು ತಪ್ಪುತ್ತದೆ.

ನಾಳೆಗೆ ತಳ್ಳಿದ ಕಾರಣದಿಂದ ಇತ್ತೀಚೆಗೆ ನಾನು ಅನುಭವಿಸಿದ ತುಂಬಲಾರದ ನಷ್ಟ, ಸಂಕಟದ ಹಿನ್ನೆಲೆಯಲ್ಲಿ ಈ ಚಿಂತನೆಯನ್ನು ನಿಮ್ಮೆದುರು ಮಂಡಿಸಿದೆ. ಕಳೆದವಾರ ಹಿರಿಯರಾದ ಕೋ.ಚೆನ್ನಬಸಪ್ಪನವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ತಿಳಿಯಿತು. ಈ ಸಂಚಿಕೆ ಸಿದ್ಧಪಡಿಸುವ ಅತೀವ ಒತ್ತಡದಲ್ಲಿದ್ದ ನಾನು ಅಂದೇ ದೌಡಾಯಿಸುವ ಬದಲು ‘ನಾಳೆ’ ಹೋಗಿ ಭೇಟಿಯಾಗಲು ನಿರ್ಧರಿಸಿದೆ. ಎಂದಿನಂತೆ ಆ ನಾಳೆ ಬಂತು; ಕೋಚೆ ಇರಲಿಲ್ಲ!

ಇನ್ನು, ಬಹುಪಾಲು ಪತ್ರಿಕೆಗಳಲ್ಲಿ ಸೆಲೆಬ್ರಿಟಿಗಳ, ರಾಜಕಾರಣಿಗಳ ಮುಖಹೊತ್ತ ಮುಖಪುಟಗಳು ರಾರಾಜಿಸುವ ಸಂದರ್ಭದಲ್ಲಿ ‘ಸಾಮಾನ್ಯ ಕನ್ನಡಿಗರ ಚಿತ್ರಣ’ ಹೊತ್ತುತಂದ ಸಮಾಜಮುಖಿಯ ಬದ್ಧತೆಯನ್ನು ನೀವು ಮೆಚ್ಚುತ್ತೀರೆಂದು ಭಾವಿಸುವೆ. ಉಳಿದಂತೆ ಸಂಚಿಕೆಯ ಎಲ್ಲಾ ವಿಭಾಗಗಳನ್ನು ಸಮೃದ್ಧಗೊಳಿಸಲು ಶ್ರದ್ಧೆಯಿಂದ ಪ್ರಯತ್ನಿಸಿದ್ದೇವೆ; ನೀವದನ್ನು ಖಂಡಿತಾ ಗುರುತಿಸುತ್ತೀರಿ.

-ಸಂಪಾದಕ

Leave a Reply

Your email address will not be published.