ಸಂಪಾದಕೀಯ

ತರವಲ್ಲ ತಾರತಮ್ಯ!

‘ಹೋ…ಹೋ… ನೀವು ಆ ಕಡೆಯವರಾ…?! ಅಲ್ಲಿ ತುಂಬಾ ಬಿಸಿಲು, ದೂಳು ಅಲ್ವಾ? ಜನಾನೂ ಒರಟು. ಅಲ್ಲಿ ಹೇಗಿರ್ತೀರಪ್ಪಾ…’ -ಇದು ಉತ್ತರ ಕರ್ನಾಟಕದವರನ್ನು ಕುರಿತು ಹಳೆಯ ಮೈಸೂರು ಪ್ರಾಂತ್ಯದ ಜನ ಹೊರಡಿಸುವ ಸಾಮಾನ್ಯ ಉದ್ಗಾರ. ಹೀಗೆ ಮೂದಲಿಸುವುದರಲ್ಲಿ ಉತ್ತರಭಾಗದವರೇನೂ ಕಡಿಮೆಯಿಲ್ಲ; ‘ನೀವು ತುಂಗಭದ್ರಾ ನದಿ ಆಕಡೆಯವರಲ್ಲವೇ… ತುಂಬಾ ನಾಜೂಕು. ನಯವಾದ ಮಾತಿನಲ್ಲೇ ಮರುಳು ಮಾಡಿಬಿಡುತ್ತೀರಿ!’ ಎಂದು ಚುಚ್ಚುತ್ತಾರೆ. ಒಂದು ಪ್ರದೇಶದ ಪ್ರಾಕೃತಿಕ ವಾತಾವರಣ, ಮಾತಿನ ಶೈಲಿ, ಸಾಮೂಹಿಕ ಸ್ವಭಾವ ಅತ್ಯಂತ ಸಹಜವಾಗಿ ಕಾಲಾನುಕ್ರಮೇಣ ರೂಪುಗೊಂಡಿರುವಂತಹದು. ಅಲ್ಲಿ ವಾಸಿಸುವವರು ಅದೇ ಕಾರಣಕ್ಕೆ ಹೊಗಳಿಕೆಗೋ, ತೆಗಳಿಕೆಗೋ ಒಳಗಾಗುವುದು ತರವಲ್ಲ.

ಬಳ್ಳಾರಿಯ ಶ್ರೀರಾಮುಲು ಬಾಯಲ್ಲಿ ಸಹಜವಾಗಿ ಬರುವ ‘ಅಂದ್ರಗಿನ’ ಪದ ಅದೆಷ್ಟು ಅಪಹಾಸ್ಯಕ್ಕೆ ಗುರಿಯಾಗಿದೆ ನೋಡಿ. ಸಾಹಿತ್ಯ, ಇತಿಹಾಸ, ಸಮಾಜವಾದ ಎಲ್ಲವನ್ನು ಹದವಾಗಿ ಬೆರೆಸಿ ನಿರರ್ಗಳವಾಗಿ ಮಾತನಾಡುತ್ತಿದ್ದ ಎಂ.ಪಿ.ಪ್ರಕಾಶ ಅವರೂ ಇದೇ ನೆಲದವರು. ಹಾಗೆಯೇ ‘…ಬಂದೆ ಬಂದೆ ಅಲ್ಲಿಗೇ ಬಂದೆ, ಸ್ವಲ್ಪ ಕೇಳ್ರೀ…’ ಎನ್ನುತ್ತ ಪ್ರಶ್ನಿಸುವವರನ್ನು ತಡೆದು ತಾವು ಹೇಳಬೇಕಾದ್ದನ್ನೇ ಹೇಳಿಮುಗಿಸುವ ದೇವೇಗೌಡರು, ‘…ಎಂದು ನಾನಾದ್ರೂ ಭಾವಿಸಿದ್ದೇನೆ’ ಎನ್ನತ್ತ ತೇಲಿಸುವ ಎಸ್.ಎಂ.ಕೃಷ್ಣ, ಗಿಳಿಪಾಠದಂತೆ ಭಾಷಣ ಒಪ್ಪಿಸುವ ಯಡ್ಯೂರಪ್ಪ, ದೇಹಭಾಷೆಯಲ್ಲೇ ಹೆಚ್ಚು ಸಂಕೇತ-ಸಂದೇಶ ಹೊರಡಿಸುವ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ… ಹೀಗೆ ಒಬ್ಬೊಬ್ಬರದು ಒಂದೊಂದು ರೀತಿ. ಇದಕ್ಕೆಲ್ಲಾ ಪ್ರಾದೇಶಿಕತೆಯ ಹಣೆಪಟ್ಟಿ ಹಚ್ಚಲಾದೀತೇ? ಬಹಳವೆಂದರೆ ಇವರೆಲ್ಲ ಗಂಗಾವತಿಯ ಪ್ರಾಣೇಶ, ಮೈಸೂರಿನ ಕೃಷ್ಣೇಗೌಡರ ಹಾಸ್ಯಲಹರಿಯ ನಾಲಗೆಯಲ್ಲಿ ನಲಿದಾಡಬಹುದಷ್ಟೇ.

ಮಲೆನಾಡಿನ ಜೋರು ಮಳೆ, ಮಡಿಕೇರಿಯಲ್ಲಿ ಕವಿಯುವ ಮಂಜು ಆಸ್ವಾದಿಸಿದಂತೆ ಬೇಸಿಗೆಯ ಮಟಮಟ ಮಧ್ಯಾಹ್ನ ರಾಯಚೂರಿನ ಕಿಲ್ಲಾದಲ್ಲಿ ನಿಂತು, ‘ಹಾ…ಹಾ…! ಬಿರುಬಿಸಿಲು ಎಷ್ಟೊಂದು ಅಹ್ಲಾದಕರವಾಗಿದೆ’ ಎಂದು ಉದ್ಗರಿಸುವ ಮಾನಸಿಕ ಸಿದ್ಧತೆ ಏಕೆ ಸಾಧ್ಯವಿಲ್ಲ? ಪ್ರವಾಸಿಗರು ತಂಪುತಾಣ, ಗುಡ್ಡಗಾಡುಗಳನ್ನೇ ಏಕೆ ಅರಸಿ ಹೋಗಬೇಕು? ಸೊಂಪು ಬಿಸಿಲು, ಬಟಾ ಬಯಲು ಪ್ರದೇಶವನ್ನು ಕೂಡಾ ಅನುಭವಿಸಲು, ಆನಂದಿಸಲು ಆರಿಸಿಕೊಳ್ಳಬಾರದೇಕೆ?

ಬಹುಶಃ ತಂಪು-ಬಿಳುಪು ಕುರಿತು ನಮ್ಮೊಳಗೆ ಮೂಡಿರುವ ವಿಪರೀತ ಒಲವು ಇಂತಹ ಪಕ್ಷಪಾತಕ್ಕೆ ಮೂಲ. ಮನದೊಳಗಿನ ಈ ಬರವಣಿಗೆಯನ್ನು ತಿದ್ದುಪಡಿಗೆ ಒಳಪಡಿಸುವ ಅಗತ್ಯವಿದೆ. ಇಂತಹದೊಂದು ಆಲೋಚನೆಗೆ ಮಾರುಕಟ್ಟೆ ತಜ್ಞರು, ಹೂಡಿಕೆದಾರರು ರೆಕ್ಕೆಪುಕ್ಕ ಕಟ್ಟಿದರೆ ಉತ್ತರ ಕರ್ನಾಟಕದ ಬಿಸಿಲು, ಒರಟು ನುಡಿ, ಖಾರದ ಊಟ ಕೂಡಾ ಪ್ರವಾಸಿ ಆಕರ್ಷಣೆಗಳಾಗಿ ಬದಲಾಗಲು ಸಾಧ್ಯ. …

ಇದು ಬಿಸಿಲುಗಾಲದ ಬೆವರಿನಲ್ಲಿ ಹರಿದುಬಂದ ಲಘು ಲಹರಿ ಮಾತ್ರ; ಯಾರಾರೂ ಅಭಿವೃದ್ಧಿ ಅಧ್ಯಯನ ತಜ್ಞರು ಇದನ್ನೇ ಪ್ರಾದೇಶಿಕ ಅಸಮತೋಲನ ನಿವಾರಣೆಯ ಸೂತ್ರವೆಂದು, ಪ್ರವಾಸೋದ್ಯಮಿಗಳು ವಿಸ್ತರಣೆಯ ನವೀನ ಅವಕಾಶವೆಂದು ಭಾವಿಸಿದರೆ ನಾನಾದರೂ ಏಕೆ ಆಕ್ಷೇಪಿಸಲಿ?!

ಇನ್ನು, ಈ ಸಂಚಿಕೆಯಲ್ಲಿ ಮಾಧ್ಯಮರಂಗದ ಭ್ರಷ್ಟಾಚಾರ ವಿರೋಧಿ ಅಭಿಯಾನ ಮುಂದುವರಿಸಿದ್ದೇವೆ, ಕರ್ನಾಟಕದ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಸಮತೂಕದ ನೋಟ ಬೀರಿದ್ದೇವೆ; ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಕಲಬುರ್ಗಿಯಲ್ಲಿ ನಡೆದಿರುವ ಪ್ರಯೋಗದ ವರದಿ, ಐಎಎಸ್ ಸಾಧಕರ ಸಂದರ್ಶನ, ಬದುಕುವುದು ಹೇಗೆ? …ಇತ್ಯಾದಿ ಸ್ವಾದಿಷ್ಟ ಬೌದ್ಧಿಕ ಆಹಾರ ಉಣಬಡಿಸಲು ಪ್ರಯತ್ನಿದ್ದೇವೆ. ಓದಿ, ಚರ್ಚಿಸಿ, ಹಂಚಿಕೊಳ್ಳಿ.

Leave a Reply

Your email address will not be published.