ಸಂಪಾದಕೀಯ

ಏಕಮುಖೀ ಓಟ ಮತ್ತು ನೋಟ

ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಮಾಜದ ನೆಮ್ಮದಿಯನ್ನು ಕಲಕುತ್ತಿರುವುದಷ್ಟೇ ಅಲ್ಲ; ಇಲ್ಲಿ ಏನು ನಡೆಯುತ್ತಿದೆ, ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದು ಕಲ್ಪನೆಗೂ ನಿಲುಕುತ್ತಿಲ್ಲ.  ಅರಾಜಕತೆಯ ಅಪಾಯ ಅರಿವಿಲ್ಲದಂತೆಯೇ ಅಮರಿಕೊಳ್ಳುತ್ತಿರುವ ಸಂದರ್ಭ. ಓದುವ ಕವಿತೆ, ಕೂಗುವ ಘೋಷಣೆ, ತರುವ ಕಾನೂನು, ಮಾಡುವ ಭಾಷಣ, ನೀಡುವ ಹೇಳಿಕೆ, ಕೈಗೊಳ್ಳುವ ಕ್ರಮ… ಎಲ್ಲವೂ ಪರಸ್ಪರರ ಅಸ್ತ್ರಗಳು. ಯಾವುದರ ಸತ್ಯಾಸತ್ಯತೆಯನ್ನೂ ಪರಿಶೀಲಿಸುವ ವ್ಯವಧಾನವಾಗಲೀ, ಮುಕ್ತ ಮನಸ್ಸಾಗಲೀ ಯಾರಲ್ಲೂ ಇಲ್ಲ; ಎಲ್ಲರಿಗೂ ಯಾವ ಅಸ್ತ್ರ ಝಳಪಿಸಿ ಎದುರಾಳಿಯನ್ನು ಎಷ್ಟು ಹೆದರಿಸಲು, ಗೊಂದಲಗೊಳಿಸಲು, ಲಾಭ ಗಳಿಸಲು ಸಾಧ್ಯ ಎಂಬ ಲೆಕ್ಕಾಚಾರವಷ್ಟೇ ಮುಖ್ಯ.

ಎರಚಾಟಕ್ಕೆ ಸಿಲುಕಿದ ಮಾತುಗಳೆಲ್ಲ ಮೊನಚು ಕಳೆದುಕೊಂಡು ಪರಿತಪಿಸುವಂತಾಗಿದೆ. ಅಪಮೌಲ್ಯ ಹೊಂದಿದ ಕೆಲವು ಪದಗಳಂತೂ ಅರ್ಥ, ವ್ಯಾಪ್ತಿ, ಪ್ರಭಾವ ಕಳೆದುಕೊಂಡು ತೊಳಲಾಡುತ್ತಿವೆ. ಆದರೆ ಮಾತುಗಳನ್ನು ಬಾಯಿಗೆ ಬಂದAತೆ, ಸಂದರ್ಭಕ್ಕೆ ತಕ್ಕಂತೆ ತೂರಿಬಿಡುವ ಎರಡೂ ತಂಡಗಳಿಗೆ ದಣಿವೇ ಇಲ್ಲ. ಎರಡು ಪಂಗಡಗಳಾಗಿ ವಿಂಗಡಣೆಯಾದ ಮೇಲೆ ಒಬ್ಬರಮೇಲೊಬ್ಬರು ಎರಗುವುದೇ ಪರಮ ಕರ್ತವ್ಯವೆಂದು ಬಗೆದವರ ಹತ್ತಿರ ಮೌನ, ಸತ್ಯ ಸುಳಿದೀತಾದರೂ ಹೇಗೆ?

ಊಟ, ನಿದ್ದೆ, ಹೋರಾಟ, ಸಿದ್ಧಾಂತ, ಮೈಥುನ, ಅಭಿಮಾನ, ನಂಬಿಕೆ, ಧರ್ಮ, ದ್ವೇಷ… ಯಾವುದಾದರೂ ಸರಿ, ವ್ಯಸನದ ಹಂತ ತಲುಪಿಬಿಟ್ಟರೆ ಯಾರಿಂದಲೂ ಕಾಪಾಡಲು, ಪಾರಾಗಲು ಸಾಧ್ಯವಾಗದು. ಸಾಮಾಜಿಕ ಮಾಧ್ಯಮಗಳಲ್ಲಿ ಹುಚ್ಚುಹೊಳೆಯಂತೆ ಹರಿಯುತ್ತಿರುವ ಸಂದೇಶ, ಸಂಭಾಷಣೆ ಗಮನಿಸಿದರೆ ವ್ಯಸನದ ಸಮೂಹಸನ್ನಿ ರೂಪ ರಾಚುತ್ತದೆ. ನಂಬಿಕೆ ಮತ್ತು ನಿರಾಕರಣೆ ಎರಡರಲ್ಲೂ ಪ್ರಾಮಾಣಿಕತೆಯ, ಸ್ವಾವಲೋಕನದ ಅನುಪಸ್ಥಿತಿ. ಬಹುತ್ವದ ಪ್ರತಿಪಾದಕರು ಮತ್ತು ಪ್ರಭುತ್ವದ ಪರವಾದಿಗಳು ಇಬ್ಬರದೂ ಏಕಮುಖೀ ಓಟ ಮತ್ತು ನೋಟ. `ಇವರನ್ನು’ ವಿಮರ್ಶೆಗೆ ಒಡ್ಡಿದರೆ ‘ಆ’ ಗುಂಪಿಗೆ ಸೇರಿಸಲ್ಪಡಲು ಅಥವಾ `ಅವರನ್ನು’ ಪ್ರಶ್ನಿಸಿದರೆ ‘ಈ’ ಗುಂಪಿನತ್ತ ದೂಡಿಸಿಕೊಳ್ಳಲು ಸಿದ್ಧರಿರಬೇಕು.

ಈ ಬೆಳವಣಿಗೆಯ ಅತ್ಯಂತ ಅಪಾಯ, ಆತಂಕ ಮತ್ತು ಕಳವಳಕಾರಿ ಸಂಗತಿಯೆಂದರೆ ಪ್ರಸಕ್ತ ವಿವೇಚನಾರಹಿತ ಒಮ್ಮುಖ ಚಲನೆಯಲ್ಲಿ ಪರ-ವಿರೋಧಿ ಬಣಗಳ ಜೊತೆಗೆ ಜನಸಾಮಾನ್ಯರೂ ಸೇರಿಕೊಂಡಿರುವುದು.

ಸಮಾಜಮುಖಿಯ ಕಳೆದ ಸಂಚಿಕೆಯಲ್ಲಿ ‘ರಾಷ್ಟ್ರೀಯತೆ ಮತ್ತು ಪೌರತ್ವ’ ವಿಷಯವನ್ನು ಬಹುಮಗ್ಗಲ ಪರಾಮರ್ಶೆಗೆ ಒಳಪಡಿಸಿದ್ದನ್ನು ಗಮನಿಸಿದ್ದೀರಿ. ಆ ಸಂದರ್ಭದಲ್ಲಿ ಪತ್ರಿಕೆ ಹೊರಬರುವ ಮೊದಲೇ ಮುಖಪುಟವನ್ನು ವಾಟ್ಸಾಪ್ ಗುಂಪೊಂದರಲ್ಲಿ ಹಂಚಿಕೊಳ್ಳಲಾಗಿತ್ತು. ಅಲ್ಲಿ ಎರಡೂ ಪಂಗಡದವರು ಪರಸ್ಪರ ಮುಗಿಬಿದ್ದು ಚಿಂತನೆಗಳಿಗಿಂತ ಹೆಚ್ಚಾಗಿ ನಿಂದನೆಗಳನ್ನು ಒಂದೇ ಸಮನೆ ಹಂಚಿಕೊಂಡರು. ಈ ಕಿತ್ತಾಟದಲ್ಲಿ ವೈದ್ಯರು, ಪ್ರಾಧ್ಯಾಪಕರು, ವಕೀಲರು, ಸಾಹಿತಿಗಳು… ಸಕ್ರಿಯರಾಗಿದ್ದರು. ವಿಕೋಪ ಘಟ್ಟದಲ್ಲಿ ಮಧ್ಯೆ ಪ್ರವೇಶಿಸಿದ ನಾನು, ‘ಇಲ್ಲಿ ವಾದ ಸಾಕು, ಪತ್ರಿಕೆ ಓದಿದ ನಂತರ ನಿಮ್ಮ ಗಂಭೀರ ವಿಚಾರಗಳನ್ನು ಬರೆದು ಕಳಿಸಿ, ಪ್ರತಿಬಿಂಬ ಅಂಕಣದಲ್ಲಿ ಪ್ರಕಟಿಸೋಣ’ ಎಂದು ಆಹ್ವಾನಿಸಿದೆ; ಒಬ್ಬರೂ ಬರೆಯಲಿಲ್ಲ! 

ಸಮಾಜಮುಖಿ ಮೊಟ್ಟಮೊದಲ ಬಾರಿಗೆ ವ್ಯಕ್ತಿಯೊಬ್ಬರ ಹೇಳಿಕೆಯನ್ನೇ ಮುಖ್ಯ ವಿಷಯವಾಗಿ ಪರಿಗಣಿಸಿ ಚರ್ಚೆಗೆ ಚಾಲನೆ ನೀಡಿದೆ. ಈ ಹೇಳಿಕೆ ನೀಡಿದವರು ಯಶಸ್ವೀ ಉದ್ಯಮಿ ಎನ್.ಆರ್.ನಾರಾಯಣಮೂರ್ತಿ. ಅವರ ಹೆಸರಿನ ಕಾರಣಕ್ಕಾಗಿಯೇ ಮೂಗು ಮುರಿಯುವವರು ಇರುವಂತೆ, ಇನ್ನೊಂದು ಬದಿಯಲ್ಲಿ ಅವರ ಹೇಳಿಕೆಯನ್ನು ಅಭಿಮಾನದಿಂದ ಸ್ವೀಕರಿಸುವವರಿಗೂ ಕೊರತೆಯಿಲ್ಲ. 

ಒಕ್ಕೊರಳಿನ ಘೋಷಣೆಗಿಂತ ವಿಭಿನ್ನ ದೃಷ್ಟಿಕೋನದ ಸಂವಾದ ನಮ್ಮ ಸಮಾಜದ ಸ್ವಾಸ್ಥ್ಯಕ್ಕೆ ಅಗತ್ಯವೆಂದು ನಂಬಿರುವ ಸಮಾಜಮುಖಿ ಈ ಚರ್ಚೆಯನ್ನು ಹುಟ್ಟುಹಾಕಿದೆ. ಇಲ್ಲಿ ಮಂಡನೆಯಾಗಿರುವ ಚಿಂತನೆಗಳು ಓದುಗರ ಮನದೊಳಗೆ ಬೆಳಕು ಬೀರಿ, ಮರುಮಂಥನಕ್ಕೆ ಒಳಗಾಗಲಿ ಎಂಬ ಕನಸು ನಮ್ಮದು.

– ಸಂಪಾದಕ

Leave a Reply

Your email address will not be published.