ಸಂಪಾದಕೀಯ

ನಾಯಕರು ಹೀಗೆಯೇ ಕೊನೆಗಾಣಬೇಕೇ?

 

ಈ ಸಂಚಿಕೆಯ ಮುಖ್ಯಚರ್ಚೆಗಾಗಿ ಯಡಿಯೂರಪ್ಪ ಸರ್ಕಾರದ ಕಾರ್ಯನಿರ್ವಹಣೆಯನ್ನು ಪರಾಮರ್ಶಿಸಲು ತೊಡಗಿದ ಸಂದರ್ಭದಲ್ಲೇ ಕಾಕತಾಳೀಯ ಎನ್ನುವಂತೆ ಈ ಸರ್ಕಾರ ರಚನೆಗೆ ಕಾರಣರಾದ ಕೆಲವು ಸಚಿವರು ಸಾರ್ವಜನಿಕರ ನಾಲಗೆಗೆ ಆಹಾರವಾಗಿದ್ದಾರೆ. ಒಬ್ಬರ ಅನೈತಿಕ ಚಟುವಟಿಕೆಯ ಅಶ್ಲೀಲ ವಿಡಿಯೋ ಬಹಿರಂಗಗೊಂಡಿದೆ; ಇನ್ನೂ ಆರು ಮಂತ್ರಿಗಳು ತಮ್ಮ ವಿಡಿಯೋ ಪ್ರಸಾರದ ಭಯದಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದು ಈ ರಾಜ್ಯ ಹಿಂದೆಂದೂ ಕಾಣದ ಬೆಳೆವಣಿಗೆಗೆ ಸಾಕ್ಷಿಯಾಗಿದೆ. ಒಂದೇ ಬಯಲು ರಂಗಮಂದಿರ; ಏಕಕಾಲಕ್ಕೆ ಹಲವು ನಾಟಕಗಳ ಪ್ರದರ್ಶನ. ನಾಟಕದ ಪಾತ್ರಗಳಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ, ಪ್ರಸಾರದ ಹೊಣೆ ಹೊತ್ತಿರುವ ವಾಹಿನಿಗಳಿಗೆ ದಣಿವೇ ಇಲ್ಲ.

ಇದೊಂದು ದುರಂತ ನಾಟಕ ಎಂಬುದು ಮಾತ್ರ ಖಾತರಿ. ಇದರಲ್ಲಿ ದುರಂತ ನಾಯಕ ಅಥವಾ ನಾಯಕಿಯನ್ನು ಹುಡುಕುವ ಪ್ರಯತ್ನ, ಕುತೂಹಲ ಬೇಕಿಲ್ಲ. ಒಂದು ರೀತಿಯಲ್ಲಿ ಪಾತ್ರಧಾರಿಗಳೇ ಆಗಿರುವ ಪ್ರೇಕ್ಷಕಗಣಕ್ಕೆ ಈ ಸರಣಿ ನಾಟಕಗಳ ದುರಂತ ನಾಯಕತ್ವ ದಕ್ಕುತ್ತದೆ. ಜನಪ್ರತಿನಿಧಿಗಳ ಅಭಿನಯ ಚತುರತೆಗೆ ಮರುಳಾಗಿರುವ ಮತದಾರ ಅರ್ಥಾತ್ ನೋಡುಗ ತನ್ನ ಗುಡುಗುವ ಗುಣವನ್ನೇ ಅಡವಿಟ್ಟು ‘ಒನ್ಸ್‍ಮೋರ್’ ಬಯಸುತ್ತಾ ರಂಗಸ್ಥಳ ಏರಿ ಪೋಷಕ ಪಾತ್ರ ನಿರ್ವಹಿಸುತ್ತಿದ್ದಾನೆ.

ಈ ಮಧ್ಯೆ ಕೊರೊನಾ ಮತ್ತೆ ತಲೆಯೆತ್ತುತ್ತಿದೆ. ಬಹುಶಃ ಅದು ಕೂಡಾ ಪ್ರದರ್ಶನಗೊಳ್ಳುತ್ತಿರುವ ದುರಂತ ನಾಟಕದಲ್ಲಿ ಒಂದು ಪಾತ್ರ ಗಿಟ್ಟಿಸಲು ಹವಣಿಸುತ್ತಿದೆ. ಇಷ್ಟೊಂದು ಪಳಗಿದ ನಟಭಯಂಕರರ ಜೊತೆಗೆ ಸ್ಪರ್ಧೆಗಿಳಿಯಲು ಈ ನವ ವೈರಾಣುವಿಗೆ ತುಸು ಕಷ್ಟದಾಯಕ!

ಸರಿಸುಮಾರು ಒಂದು ವರ್ಷದ ಹಿಂದೆ ಕೋವಿಡ್ ಸಾಂಕ್ರಾಮಿಕ ನಮ್ಮೆಲ್ಲರ ಜೀವನಶೈಲಿ ಮತ್ತು ಜೀವನದೃಷ್ಟಿಯನ್ನು ಶಾಶ್ವತವಾಗಿ ಬದಲಿಸಬಹುದೇ ಎಂಬ ಆಶಾಭಾವ ಅಂಕುರಿಸಿತ್ತು; ಅದರಲ್ಲಿ ಅನುಮಾನವೂ ಬೆರೆತಿತ್ತು. ಈ ಅವಧಿಯಲ್ಲಿ ಇಂತಹ ಆಸೆಯೆಲ್ಲಾ ಕಮರಿ ಅನುಮಾನವೇ ನಿಜವಾಗಿದೆ. ಸುಳ್ಳು, ಸ್ವಾರ್ಥ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ತಾರಾತಿಗಡಿ, ಕುಟುಂಬ ವ್ಯಾಮೋಹ, ನಡೆ-ನುಡಿ ವ್ಯತ್ಯಾಸ… ಯಾವುದರಲ್ಲೂ ಜನ ಮತ್ತು ಜನಪ್ರತಿನಿಧಿಗಳು ಹಿಂದೆಬಿದ್ದಿಲ್ಲ; ಪರಸ್ಪರ ಸ್ಪರ್ಧೆಗಿಳಿದ ವಾತಾವರಣ.

ತಮ್ಮ ರಾಜಕೀಯ ಜೀವನದ ಔನ್ನತ್ಯ ಕಂಡಿರುವ ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮುಂತಾದವರು ತಮಗಾಗಿ ಇನ್ನೇನೂ ಒಟ್ಟುಗೂಡಿಸುವುದು ಬಾಕಿ ಉಳಿದಿಲ್ಲ. ಅವರು ಅಧಿಕಾರದ ದರ್ಪ, ಜಾತಿಯ ಅಮಲು, ಹಣದ ಪ್ರಭಾವವನ್ನು ಯಥೇಚ್ಛ ಅನುಭವಿಸಿದ್ದಾರೆ. ಎಲ್ಲಾ ದೃಷ್ಟಿಯಲ್ಲೂ ಸದೃಢರಾಗಿರುವ, ಸಬಲರಾಗಿರುವ ಈ ಮಹಾನಾಯಕರು ಒಂದೇ ಒಂದು ಕ್ಷಣ ತಮ್ಮ ಅಂತರಾಳ ಹೊಕ್ಕುಬಂದರೆ ಅವರ ವ್ಯಕ್ತಿತ್ವ ಮತ್ತು ಆ ಮೂಲಕ ಸಾರ್ವಜನಿಕ ಜೀವನಕ್ಕೆ ಮಹತ್ವದ ತಿರುವು, ಮಾದರಿ ದೊರೆಯಲು ಸಾಧ್ಯ. 

ಈಗ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪ ಅವರ ನಿದರ್ಶನವನ್ನೇ ತೆಗೆದುಕೊಳ್ಳೋಣ. ಅಧಿಕಾರ ಉಳಿಸಿಕೊಳ್ಳಲು ಮತ್ತು ಮಕ್ಕಳ ರಾಜಕೀಯ ಭವಿಷ್ಯ ರೂಪಿಸಲು ಹೆಣಗುವುದರಲ್ಲಿಯೇ ಯಡಿಯೂರಪ್ಪನವರ ಹೋರಾಟದ ಹಿನ್ನೆಲೆಯ ಬದುಕು ಕೊನೆಗಾಣಬೇಕೇ? ಅವರು ಇಂತಹ ಸಂಕುಚಿತತೆ ತೊರೆದು ಜನಪರ ಕಾರ್ಯಗಳಲ್ಲಿ ತೊಡಗಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ. ಆದರೆ ಅವರು ತಮ್ಮ ಸುತ್ತಲಿನ ದುಷ್ಟಶಕ್ತಿಗಳಿಂದ ಬಿಡುಗಡೆ ಹೊಂದಿ ತಮ್ಮ ಮನದ ಮಾತು ಕೇಳಬೇಕಷ್ಟೇ.

ಈ ಸಂಚಿಕೆಯನ್ನು ಮುದ್ರಣಕ್ಕೆ ಕಳುಹಿಸುವ ಅಂತಿಮ ಕ್ಷಣದಲ್ಲಿ ಆತ್ಮೀಯ ಗೆಳೆಯನ ಮಡದಿಯ ಸಾವಿನ ಸುದ್ದಿ ನನ್ನನ್ನು ಕಂಗೆಡಿಸಿತು. ಇನ್ನೇನು ಹೊರಡಲಿರುವ ಅಂಬುಲೆನ್ಸ್‍ನಲ್ಲಿ ತಾಯಿಯ ದೇಹದ ಬಳಿ ಅಳುವನ್ನೇ ಉಸಿರಾಡುತ್ತ ಕುಳಿತ ಮಗ ಹೊರಗೆ ಕಾಣುತ್ತಿದ್ದ ಖಾಸಗಿ ಆಸ್ಪತ್ರೆಯ ಬೃಹತ್ ಕಟ್ಟಡ ದಿಟ್ಟಿಸುತ್ತಿದ್ದ. ಕೊನೆಗೆ ಅವನ ಪಸೆ ಆರಿದ ಬಾಯಿಯಿಂದ ಮಾತು: ಒಂದು ಜೀವ ಉಳಿಸಲಾಗದ ಈ ಅಂತಸ್ತುಗಳು ಏಕೆ ಇರಬೇಕು? ಇದು ತಾಯಿ ಕಳೆದುಕೊಂಡ ಹುಡುಗ ಯಾರಿಂದಲೋ ಉತ್ತರ ಬಯಸಿ ಕೇಳಿದ ಪ್ರಶ್ನೆಯಲ್ಲ. ಆದಾಗ್ಯೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದಕ್ಷಗೊಳಿಸದ ಸರ್ಕಾರ ಇಂತಹ ದನಿ ಆಲಿಸಬೇಕು.

ಸಂಪಾದಕ

Leave a Reply

Your email address will not be published.