ಸಂಪಾದಕೀಯ

ಕನ್ನಡದ ಹುಡುಕಾಟ

ಕನ್ನಡ ಪರಂಪರೆಯ ಗರ್ವ ನಮ್ಮ ಎದೆ ಉಬ್ಬಿಸುವುದು ಸಹಜ. ಹಾಗೆಯೇ, ಇಲ್ಲಿಯ ತನಕ ಕರೆತಂದ ದಾರಿ ನಮ್ಮನ್ನು ತಂತಾನೇ ಮುನ್ನಡೆಸುತ್ತದೆ ಎಂದು ನಂಬುತ್ತೇವೆ. ಇದು ಹೃದಯದ ಗ್ರಹಿಕೆ ಅಥವಾ ಬಯಕೆ. ಆದರೆ ಬುದ್ಧಿಯ ವಸ್ತುನಿಷ್ಠ ಕಾಣ್ಕೆ ಇಂತಹ ಅಭಿಮಾನಕ್ಕೆ
ಪೂರಕವಾಗಿಲ್ಲ. ಎಲ್ಲೆಡೆ ಅಗ್ಗದ ಸರಕು, ಅವಸರದ ಕಸರತ್ತು. ಭೌತಿಕ ವಸ್ತುಗಳಿಂದ ತುಂಬಿತುಳುಕುವ ಮನೆಗಳಲ್ಲಿ, ಬೌದ್ಧಿಕ ನಿರ್ವಾತ. ಪ್ರಸಕ್ತ ಸನ್ನಿವೇಶದಲ್ಲಿ ಸರಿತಪ್ಪುಗಳ ನಡುವಿನ ಗೆರೆ ತೀರಾ ತೆಳು; ಅಳಿಸಿಯೇಹೋಗಿದೆ ಎಂದರೂ ಒಪ್ಪಬಹುದು.

ಪ್ರಭಾವಶಾಲಿ ಮಾಧ್ಯಮಗಳಿವೆ, ಶಕ್ತಿಶಾಲಿ ತಂತ್ರಜ್ಞಾನವಿದೆ, ತುದಿಗಾಲಮೇಲೆ ನಿಂತ ಯುವಪಡೆಯಿದೆ, ಜಗತ್ತಿನೊಂದಿಗೆ ದೈನಂದಿನ ನಂಟಿದೆ, ಪರಂಪರೆಯ ಬೆಳಕಿದೆ, ಪ್ರಜಾಪ್ರಭುತ್ವ ಬೆನ್ನಿಗಿದೆ. ಹೀಗೆ ಆಧುನಿಕ ಕನ್ನಡ ಸಂದರ್ಭದಲ್ಲಿ ಎಲ್ಲವೂ ಇವೆ. ಆದರೆ ಇರಲೇಬೇಕಾದ ಯಾವುದೋ ಒಂದು ನುಣುಚಿಕೊಂಡುಬಿಟ್ಟಿದೆ. ಅದನ್ನು ಭೇಟಿಯಾಗಿಯೋ, ಬೇಟೆಯಾಡಿಯೋ ಹಿಡಿದು ತರುವ ಶತಪ್ರಯತ್ನ ನಮ್ಮದು. ಯಾಂತ್ರಿಕ ಬದುಕಿನ ವೇಗ, ತಲ್ಲಣ, ಪಲ್ಲಟಗಳ ನಡುವೆ ಚದುರಿಹೋಗಿರುವ ಸಂವೇದನಾಶೀಲ ಮನಸ್ಸುಗಳನ್ನು ಒಂದೆಡೆ ಸೇರಿಸುವುದು ಈ ನಿಟ್ಟಿನ ಮೊದಲ ಹೆಜ್ಜೆ. ಕನ್ನಡವನ್ನು ವಿಶ್ವದ ಮುಖ್ಯ ಭಾಷೆಗಳಲ್ಲಿ ಒಂದಾಗಿ ಕಂಡು ಕನ್ನಡದ ಓದುಗರಿಗೆ ಜಾಗತಿಕ ಆಗುಹೋಗುಗಳ ಪರಿಚಯ, ವೈಚಾರಿಕ ಸಂವಾದಗಳ ಸಾರಾಂಶ ಒದಗಿಸುವುದು ಬಹುಮುಖ್ಯ. ಈ ನೆಲದ ಬೇರುಗಳು ಜಾಗತಿಕ ಟಿಸಿಲುಗಳಾಗಿ ಕವಲೊಡೆಯಬೇಕು.

ಈ ಹಿನ್ನೆಲೆಯಲ್ಲಿ, ಸಮಾನ ಮನಸ್ಕರ ಸೇರುವಿಕೆ ಮತ್ತು ಅರ್ಥಪೂರ್ಣ ಅಭಿವ್ಯಕ್ತಿಯ ವೇದಿಕೆಯನ್ನಾಗಿಸುವ ಪರಿಕಲ್ಪನೆಯನ್ನು ಸಮಾಜಮುಖಿ ಮಾಸಪತ್ರಿಕೆ ಹೊಂದಿದೆ. ಸಾಮಾಜಿಕ ಕಳಕಳಿ, ಬದ್ಧತೆ ಹೊತ್ತ ವಿವಿಧ ವೃತ್ತಿ ಅನುಭವದ ಸುಸಜ್ಜಿತ ತಂಡ ಈ ಸಾಹಸದಲ್ಲಿ ಗಂಭೀರವಾಗಿ, ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ. ಅತಿ ಬೌದ್ಧಿಕತೆಯ ಭಾರವಿಲ್ಲದೇ, ಗುಣಮಟ್ಟದಲ್ಲಿ ರಾಜಿಯಾಗದೇ, ಓದುಗರ ಘನತೆ ತಗ್ಗಿಸದೇ, ಜಾಗತಿಕ ನೆಲೆಯಲ್ಲಿ ಕನ್ನಡದ ಕಂಪು ವಿಸ್ತರಿಸುವ ಕಾಯಕದ ಭಾಗವಾಗಿ ಸಮಾಜಮುಖಿ ರೂಪುಗೊಳ್ಳಬೇಕೆಂಬ ಉದಾತ್ತ ಆಶಯ ನಮ್ಮದು.

ಕನ್ನಡವನ್ನು ಅನ್ನದ ಭಾಷೆಯಾಗಿಸುವ ನಿಟ್ಟಿನಲ್ಲಿ ಕನ್ನಡ ಯುವಕ ಯುವತಿಯರಿಗೆ ತಮ್ಮ ಜೀವನ ಹಾಗೂ ಉದ್ಯೋಗ ಕಟ್ಟಿಕೊಳ್ಳಲು ಬೇಕಿರುವ ಸಾಧನಗಳೆಲ್ಲವನ್ನೂ ಒದಗಿಸುವ ಮಹದಾಶೆ ಹೊತ್ತಿದ್ದೇವೆ. ಆಪಾದನೆ, ಘೋಷಣೆ, ತೀರ್ಮಾನಗಳ ಹೇರಿಕೆಗೆ ಇಲ್ಲಿ ಜಾಗೆಯಿಲ್ಲ. ಅಂಕಿಅಂಶಗಳು ಸಹಿತ ಸಮಸ್ಯೆಗಳನ್ನು ವಿಶ್ಲೇಷಿಸುವ ಮತ್ತು ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಕ್ರಿಯೆಗಳ ಅಂತಃಸತ್ವವನ್ನು ಓದುಗರ ಮುಂದೆ ಅನಾವರಣಗೊಳಿಸುವ ಉದ್ದೇಶವಿದೆ.

ಸಮಾಜಮುಖಿ ಆಶಯಗಳನ್ನು ಕಾರ್ಯರೂಪಕ್ಕಿಳಿಸುವ ಪ್ರಕ್ರಿಯೆಯಲ್ಲಿ ನೀವು ಓದುಗರಾಗಿ, ಬರಹಗಾರರಾಗಿ, ಚಿಂತಕರಾಗಿ ಕಟುವಿಮರ್ಶಕರಾಗಿ, ಬೆತ್ತ ಹಿಡಿದ ಗುರುವಾಗಿ ಜತೆಗಿರಬೇಕೆಂಬ ಹಂಬಲ ನಮ್ಮದು. ಎಲ್ಲರೂ ಸೇರಿ ಕನ್ನಡದ ಮನಸ್ಸನ್ನು ತೆರೆಸುವ ಬೀಗದ ಕೈ ಹುಡುಕೋಣ.

ಚಂದ್ರಕಾಂತ ವಡ್ಡು