ಸಂವಿಧಾನದ ಅರ್ಥಿಕ ಸ್ವಾತಂತ್ರ್ಯದ ಆಶಯಗಳು

ಡಾ.ವೆಂಕಟಾಚಲ ಹೆಗಡೆ

ಸಂವಿಧಾನದ ಒಡಲಲ್ಲಿ ಸಾಕಷ್ಟು ಜನಪರ ಆಶಯಗಳು ಅಡಕವಾಗಿವೆ. ಆದರೆ, ಅವುಗಳನ್ನು ಗಂಭೀರವಾಗಿ, ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಪ್ರಯತ್ನಗಳು ಆಗಬೇಕಾಗಿದೆ. ಸಂವಿಧಾನ ನೀಡಬಯಸುವ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಅರ್ಥಪೂರ್ಣತೆ ಇರುವುದು ಅವುಗಳ ಸಾರ್ಥಕವಾದ ಅನುಷ್ಠಾನದಲ್ಲಿ.

ನಮ್ಮ ದೇಶ ತನ್ನ ಎಪ್ಪತ್ತೈದನೆಯ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂಭ್ರಮದಲ್ಲಿದೆ. ನಮ್ಮ ಹಿರಿಯರು ಏಳು ದಶಕಗಳ ಹಿಂದೆ ಸಮಾನತೆಯ ಮತ್ತು ಆರ್ಥಿಕ ಬೆಳವಣಿಗೆಯ ಆಶಯಗಳ ನೆಲೆಯಲ್ಲಿ ತಮ್ಮ ಸ್ವತಂತ್ರವಾದ ಬದುಕನ್ನು ಕಟ್ಟಿಕೊಳ್ಳಲು ಅಣಿಯಾಗಿ ನಿಂತ ಕಾಲವದು. ಅದಕ್ಕಾಗಿ ತಮ್ಮ ಎಲ್ಲ ವೈಯಕ್ತಿಕ ಆಸೆಆಕಾಂಕ್ಷೆಗಳನ್ನು ಬದಿಗಿಟ್ಟು ದೇಶವನ್ನು ಜನಪರವಾಗಿ ಕಟ್ಟುವ ಕಾರ್ಯದಲ್ಲಿ ಅವರೆಲ್ಲರೂ ತಮ್ಮದೆ ಆದ ಬಗೆಗಳಲ್ಲಿ ತೊಡಗಿಸಿಕೊಂಡ ಕಾಲವದು. ಆಗಿನ ನಿಸ್ಪø ಸ್ವಾತಂತ್ರ್ಯ ಹೋರಾಟಗಾರರೆಲ್ಲ ನಮ್ಮಿಂದ ಕಣ್ಮರೆಯಾಗುತ್ತಿದ್ದಾರೆ. ಅವರ ಕಾಳಜಿಗಳು ಮತ್ತು ಬದುಕಿದ ರೀತಿ ಈಗ ಮರೀಚಿಕೆಯಂತೆ ತೋರುತ್ತಿದೆ. ಅವೆಲ್ಲವೂ ಈಗ ನಿಧಾನವಾಗಿ ಕಾಲದ ಗರ್ಭದಲ್ಲಿ ಸೇರಿಹೋಗುತ್ತಿವೆ. ಮುಂಬರುವ ದಿನಗಳಲ್ಲಿ ಅವರೆಲ್ಲರ ನೆನಪುಗಳನ್ನು ಮುಂದಿನ ಪೀಳಿಗೆಗಳಿಗೆ ವಸ್ತುನಿಷ್ಠವಾಗಿ ಪರಿಚಯಿಸುವ ಕೆಲಸವನ್ನು ಸರಕಾರದ ಜೊತೆಗೆ ಸೇರಿ ನಾವೆಲ್ಲರೂ ಮಾಡಬೇಕಾಗಿದೆ.

ಸ್ವಾತಂತ್ರ್ಯ ಬಂದ ಮರುದಿನದಿಂದ ನಮ್ಮ ಎಲ್ಲ ಸ್ತರಗಳ ಜನಸಮುದಾಯಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸಬಲ್ಲಂತಹ ಸಂವಿಧಾನವನ್ನು ರೂಪಿಸಲು ನಮ್ಮ ದೇಶದ ಉದ್ದಗಲಗಳಿಂದ ಆಯ್ದ ನೂರಾರು ಅತ್ಯಂತ ಸಂವೇದನಾಶೀಲ ಮತ್ತು ಉದಾತ್ತ ಮನಗಳು ನಮ್ಮ ಸಂವಿಧಾನ ರಚನಾ ಕಾರ್ಯದಲ್ಲಿ ತೊಡಗಿಕೊಂಡರು. ನಾಲ್ಕಾರು ವರ್ಷಗಳ ಕಾಲ ಸತತ ವಿಚಾರವಿನಿಮಯಗಳ ಮೂಲಕ, ಇದ್ದ ತಮ್ಮ ಮತಭೇದಗಳನ್ನು ಸೃಜನಾತ್ಮಕವಾಗಿ ಸಂವಿಧಾನದ ಬೇರುಗಳಲ್ಲಿ ಸೃಜಿಸುವ ಮೂಲಕ ಅವರೆಲ್ಲರೂ ಕಾರ್ಯ ನಿರ್ವಹಿಸಿದ ಪರಿಯನ್ನು ನಮ್ಮ ಸಂವಿಧಾನ ರಚನಾ ಸಭೆಯ ಸಾವಿರಾರು ಪುಟಗಳ ಚರ್ಚೆಗಳ ಪ್ರಣಾಳಿಕೆಗಳಲ್ಲಿ ಇಂದಿಗೂ ಕಾಣಬಹುದು. ನಮ್ಮ ಸಂವಿಧಾನದ ವಿವಿಧ ಅನುಚ್ಛೇದಗಳನ್ನು ಅರ್ಥಪೂರ್ಣವಾಗಿ ಮತ್ತು ಸಾಂದರ್ಭಿಕವಾಗಿ ಅರ್ಥೈಸಿಕೊಳ್ಳಲು ಚರ್ಚೆಯ ವಿವರಗಳು ಇಂದಿಗೂ ನಮಗೆಲ್ಲರಿಗೂ ತುಂಬಾ ಪ್ರಸ್ತುತವಾಗಿವೆ.

ಸಂವಿಧಾನ ಕಟ್ಟುವಾಗಿನ ಚರ್ಚೆಗಳ ವಾಖ್ಯಾನಗಳನ್ನು ನಮ್ಮ ಎಲ್ಲ ನ್ಯಾಯಾಲಯಗಳು, ಅದರಲ್ಲೂ ಪ್ರಮುಖವಾಗಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು, ಸದಾ ತಮ್ಮ ತೀರ್ಪುಗಳ ಪುಟಗಳಲ್ಲಿ ಈಗಲೂ ಉಲ್ಲೇಖಿಸುವುದನ್ನು ನಾವು ಕಾಣಬಹುದು. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ಚರ್ಚೆಗಳ ಕಾಲದಲ್ಲಿ ನೀಡಿದ ವಿವರಣೆಗಳು ಮತ್ತು ಒಕ್ಕಣಿಕೆಗಳು ಇಂದಿಗೂ ನಮ್ಮ ದೇಶದ ಕಾಲಮಾನದ ಸಮಸ್ಯೆಗಳನ್ನು ಮತ್ತು ಸಂಕೀರ್ಣತೆಗಳನ್ನು ಅರಿತುಕೊಳ್ಳಲು ಸಾಧನವಾಗಿವೆ. ಅಂಬೇಡ್ಕರ್ರವರು ಸಂವಿಧಾನ ಮತ್ತು ಕಾನೂನಿನ ತಜ್ಞರಾಗಿರುವುದರ ಜೊತೆಗೆ, ಅರ್ಥಿಕ ವಿಚಾರಗಳಲ್ಲೂ ಆಳವಾದ ಅಭ್ಯಾಸವನ್ನು ಮಾಡಿದವರಾದ್ದರಿಂದ ಇವೆರಡರ ಹದವಾದ ಸಮೀಕರಣವನ್ನು ನಾವು ಸಂವಿಧಾನದ ರಚನಾಕ್ರಮದಲ್ಲಿ ಕಾಣಬಹುದು.

ಸಂವಿಧಾನದ ಮೂಲಭೂತ ತತ್ವಗಳು ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಜೊತೆಗೆ, ಅರ್ಥಿಕ ಮತ್ತು ಸಾಮಾಜಿಕ ಸಮಾನತೆಗಳನ್ನು ದೇಶದ ಸಂಪೂರ್ಣ ಬೆಳವಣಿಗೆಯ ಮೇಲೆ ಒತ್ತು ಕೊಟ್ಟಿರುವುದನ್ನು ನಾವು ಅದರ ರಚನಾ ಕ್ರಮದಲ್ಲೆ ಕಾಣಬಹುದು. ಆಶಯಗಳ ಸೆಲೆಗಳನ್ನು ನಾವು ಸಂವಿಧಾನದ ಮುನ್ನುಡಿಯಲ್ಲೆ ಕಾಣಬಹುದು. ಮುನ್ನುಡಿಯಲ್ಲಿ ಸಂವಿಧಾನವು ಸಾಮಾಜಿಕ, ಅರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೇಶದ ಪ್ರಜೆಗಳಿಗೆ ನಿಲುಕುವಂತಹ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ಬದ್ಧವಾಗಿದ್ದರ ಜೊತೆಗೆ ಎಲ್ಲರಿಗೂ ಸಮಾನ ಅವಕಾಶಗಳ ಹಕ್ಕುಗಳನ್ನು ದೊರೆಯುವಂತೆ ಮಾಡುವುದಕ್ಕೆ ಕಟಿಬದ್ಧವಾಗಿದೆ.

ಇವೆಲ್ಲವನ್ನೂ ಹದವಾಗಿ ನಮ್ಮ ಕಾನೂನಿನ ಪ್ರಕ್ರಿಯೆಗಳಲ್ಲಿ ಮತ್ತು ರಾಜಕೀಯ ಸಾಂಸ್ಥಿಕ ಬೆಳವಣಿಗೆಗಳಲ್ಲಿ ರೂಪಿಸಿ ಸಾಕಾರಗೊಳಿಸಲು ಸಾಧ್ಯವಾಗುವಂತಹ ಆಸ್ಥೆಗಳೊಂದಿಗೆ ಸಂವಿಧಾನದ ವಿವಿಧ ಭಾಗಗಳನ್ನು ರೂಪಿಸಲಾಗಿದೆ. ಆದರೆ, ಸತ್ತೆಯ ವಿಶಿಷ್ಟ ವಿರೂಪ ಸ್ವರೂಪಗಳು ಪ್ರಜಾಸತ್ತೆಯ ನೆರಳಿನಲ್ಲಿ ಒಮ್ಮೊಮ್ಮೆ ತನ್ನ ಕಬಂಧ ಬಾಹುಗಳನ್ನು ಹರಡಿ ಎಲ್ಲ ಆಶಯಗಳಿಗೆ ಧಕ್ಕೆ ತರುವಂತಹ ವಾದಗಳನ್ನು ಮತ್ತು ವ್ಯವಸ್ಥೆಗಳನ್ನು ಪುಷ್ಟೀಕರಿಸುವ ಸಾಧ್ಯತೆಗಳ ಬಗ್ಗೆ ಅಂಬೇಡಕರವರೆ ತಮ್ಮ ಸಂವಿಧಾನದ ರಚನೆಯ ಕಾಲದ ಚರ್ಚೆಗಳ ಚಿಂತನೆಯಲ್ಲಿ ಹಂಚಿಕೊಂಡದ್ದನ್ನು ನಾವು ನೆನಪಿಸಿಕೊಳ್ಳಬೇಕು. ತಾವೆಲ್ಲ ಸೇರಿ ಕಟ್ಟಿದ ಸಂವಿಧಾನದ ಉಪಯುಕ್ತತೆ ಮತ್ತು ಪ್ರಸ್ತುತತೆಗಳು ಅದನ್ನು ಸಂವೇದನಾಶೀಲವಾಗಿ ಊರ್ಜಿತಗೊಳಿಸಬಲ್ಲ, ಸಾಂಸ್ಥಿಕವಾಗಿ ಬಲಪಡಿಸಬಲ್ಲ ಜಾಗೃತ ಮತ್ತು ಜವಾಬ್ದಾರಿಯುತವಾದ ರಾಜಕೀಯ ಸತ್ತೆಯ ಕೈಯಲ್ಲಿದೆ ಎಂಬುದನ್ನು ಅಂಬೇಡ್ಕರ್ರವರು ತಮ್ಮ ಅಂದಿನ ಚಿಂತನೆಗಳಲ್ಲಿ ಮತ್ತು ಸಂವಿಧಾನ ರಚನಾ ಸಭೆಯಲ್ಲಿ ನೀಡಿದ ಭಾಷಣಗಳಲ್ಲಿ ಮಂಡಿಸಿದ್ದರು.

ಅವರು ಅಂದು ಹೇಳಿದ ಮಾತುಗಳಂತೆ ಕಳೆದ ಏಳು ದಶಕಗಳಲ್ಲಿ ಎಷ್ಟೊ ಬಾರಿ ನಮ್ಮ ದೇಶದ ಮೂಲಭೂತ ಆಶಯಗಳಿಗೆ ಧಕ್ಕೆ ತರುವ ಸನ್ನಿವೇಶಗಳನ್ನು ಸತ್ತೆಯ ಸ್ವರೂಪಗಳು ಸೃಷ್ಟಿಸಿವೆ ಮತ್ತು ಸೃಷ್ಟಿಸುತ್ತಿವೆಯೆಂಬುದನ್ನು ನಾವು ಗಮನಿಸಬೇಕು. ಅದರಲ್ಲೂ ಮುಖ್ಯವಾಗಿ ನಮ್ಮ ಬಹುತರ ಜನಸಮುದಾಯಗಳ ಆರ್ಥಿಕ ಸಂಕಷ್ಟಗಳು ಎಪ್ಪತ್ತೈದು ವರ್ಷಗಳ ದೇಶದ ಸ್ವಾತಂತ್ರ್ಯದ ನಡಿಗೆಯಲ್ಲಿ ಇನ್ನೂ ಕೊನೆ ಕಾಣದಿರುವುದಕ್ಕೆ ಕಾರಣಗಳನ್ನು ನಾವು ಕಂಡುಕೊಳ್ಳಬೇಕಾಗಿದೆ. ಇದು ಸತ್ತೆಯೊಳಕ್ಕೆ ಕಾಲಾಂತರದಲ್ಲಿ ಸೇರಿಹೋದ ಅತಿಯಾದ ಭ್ರಷ್ಟಾಚಾರದ ವಿದ್ಯಮಾನಗಳಿಂದಲೊ ಅಥವಾ ಸಂವಿಧಾನದ ಮತ್ತು ನಮ್ಮ ಸಾಂಸ್ಥಿಕ ತಳಪಾಯದ ವೈಫಲ್ಯದಿಂದಾಗಿಯೊ ಎಂಬುದನ್ನು ನಾವು ವಿಶ್ಲೇಷಿಸಿಕೊಳ್ಳುವುದು ಸಂದರ್ಭದಲ್ಲಿ ಅಗತ್ಯವಾಗಿದೆ.

ಇಂದಿಗೂ ಅರ್ಥಿಕ ಸ್ವಾತಂತ್ರ್ಯವೆಂಬುದು ನಮ್ಮ ದೇಶದ ಸುಮಾರು ನಲವತ್ತು ಕೋಟಿಗಳಿಗೂ ಮೀರಿದ ಪ್ರಜೆಗಳಿಗೆ ಮರೀಚಿಕೆಯಾಗಿದೆ. ಬಗೆಯ ಸಾಮಾಜಿಕ ಮತ್ತು ಅರ್ಥಿಕ ಅಸ್ಥಿರ ಸಂದರ್ಭ ಮತ್ತು ಸನ್ನಿವೇಶಗಳು ನಮ್ಮ ದೇಶದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿವೆಯೆಂಬುದನ್ನು ನಾವು ಮೊದಲು ಮನಗಾಣಬೇಕು. ಸ್ವಾತಂತ್ರ್ಯಾನಂತರದ ಎಲ್ಲ ದಶಕಗಳಲ್ಲಿ, ಅದರಲ್ಲೂ ಪ್ರಮುಖವಾಗಿ 1991 ರಲ್ಲಿ, ನಮ್ಮ ಅರ್ಥಿಕ ನೀತಿಗಳು ಹುಟ್ಟುಹಾಕಿ ಬೆಳೆಸಿದ ಬಹುಶಃ ವಿಶ್ವದ ಅತಿ ದೊಡ್ಡ ಮಧ್ಯಮವರ್ಗ ತನ್ನದೆ ಆದ ಪ್ರಪಂಚದಲ್ಲಿ ಮತ್ತು ಹೊಸ ಆರ್ಥಿಕ ನೀತಿಯ ಎಲ್ಲ ಅವಕಾಶಗಳನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದೆ. 1990 ದಶಕದಲ್ಲಿ ನಮ್ಮನ್ನೆಲ್ಲ ಆವರಿಸಿದ ಜಾಗತೀಕರಣವೆಂಬುದು ಬಡವರಿಗೆ ಸವಾಲಾಗಿದ್ದರೆ, ಅದರ ಎಲ್ಲ ಲಾಭಗಳನ್ನು ಮಧ್ಯಮವರ್ಗ ಸಹಜವಾಗಿ ಪಡೆಯುತ್ತಿದೆ.

ತಂತ್ರಜ್ಞಾನದ, ಅದರಲ್ಲೂ ಜಾಲತಾಣದ ವಿವಿಧ ರೂಪಗಳು ನಮ್ಮನ್ನು ಕಳೆದ ಎರಡು ದಶಕಗಳಿಂದ ಆವರಿಸಿವೆ ಮತ್ತು ಇದು ಇನ್ನೂ ತೀವ್ರಗತಿಯಲ್ಲಿ ಹೊಸರೂಪಗಳನ್ನು ತಳೆಯುತ್ತಿದೆ. ಕೈಗಾರಿಕಾ ಮತ್ತು ಅರ್ಥಿಕ ವಲಯಗಳಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನದ ಅಳವಡಿಕೆ ನಮ್ಮ ದೇಶದಲ್ಲಿ ನಿರುದ್ಯೋಗದ ಭೂತವನ್ನು ಸೃಷ್ಟಿಸುತ್ತಿದೆ. ಗಾಂಧೀಜಿಯ ಗ್ರಾಮಸ್ವರಾಜ್ಯ ಮತ್ತು ತಂತ್ರಜ್ಞಾನಗಳ ಕುರಿತಾಗಿ ಅವರಿಗಿದ್ದ ಅನುಮಾನಗಳನ್ನು ನಾವು ನಮ್ಮ ದೇಶದ ವಿಶಿಷ್ಟ ಬೆಳವಣಿಗೆಯ ಸೂತ್ರದ ಪರಿಯಲ್ಲಿ ಹಿಡಿದಿಡಬೇಕಾದ ಅನಿವಾರ್ಯತೆ ಎಂದಿಗಿಂತ ಇಂದು ಹೆಚ್ಚಾಗಿದೆ. ಇದರಿಂದ ಅರ್ಥಿಕ ಸ್ವಾವಲಂಬನೆ ಮತ್ತು ಉಳ್ಳವರ ಮತ್ತು ಇಲ್ಲದಿರುವವರ ನಡುವಿನ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ಇದು ನಮ್ಮ ಮುಂದಿರಿಸುತ್ತದೆ.

ಇಂದಿನ ಸಂದರ್ಭದಲ್ಲಿ ಜಾಗತೀಕರಣದ ಮತ್ತು ತಂತ್ರಜ್ಞಾನದ ಎಲ್ಲ ಸ್ವರೂಪಗಳನ್ನು ಅರಿತುಕೊಂಡು ಅದರ ಮೇಲೆ ಸವಾರಿ ಮಾಡುವ ಜಾಣ್ಮೆಯಿರುವ ದೊಡ್ಡ ಮಧ್ಯಮ ವರ್ಗ ಇವೆಲ್ಲವನ್ನು ಅರಗಿಸಿಕೊಂಡು ತನ್ನ ಬದುಕನ್ನು ಹಸನಾಗಿಸಿಕೊಂಡಿದೆ. ಆದರೆ, ಬಡವರ್ಗದ ಬದುಕು, ಜಾಗತೀಕರಣವಿರಲಿ, ಹೊಸ ತಂತ್ರಜ್ಞಾನದ ಆವಿಷ್ಕಾರಗಳಿರಲಿ, ಇನ್ನೂ ಅರ್ಥಿಕವಾಗಿ ತಳಸ್ತರದಲ್ಲಿಯೇ ಇದೆ. ಒಂದು ಅಂದಾಜಿನ ಪ್ರಕಾರ ದೇಶದ ತೊಂಬತ್ತರಷ್ಟು ಎಲ್ಲ ಸವಲತ್ತುಗಳು ಮತ್ತು ಆರ್ಥಿಕ ಬೆಳವಣಿಗೆಯ ಲಾಭಗಳು ಮಧ್ಯಮವರ್ಗಕ್ಕೆ ಅನೂಚೂನವಾಗಿ ದೊರೆಯುತ್ತಿವೆ. ಇನ್ನೂ ಮುಖ್ಯವಾಗಿ ಸತ್ತೆ ಮಧ್ಯಮವರ್ಗವನ್ನು ತನ್ನ ಕರಮಂಡಲದಲ್ಲಿ ಭದ್ರವಾಗಿ ಇರಿಸಿಕೊಳ್ಳಲು ಅವರಿಗೆ ಅನುಕೂಲವಾದ ಆರ್ಥಿಕ ನೀತಿಯನ್ನು ಕಾಲಕಾಲಕ್ಕೂ ರೂಪಿಸಿಕೊಂಡು ಬರುತ್ತಿದೆ. ಬಡತನದ ರೇಖೆಯ ಕೆಳಗಿರುವ ಅಥವಾ ಅದಕ್ಕೆ ಸಮಾನಾಂತರವಾಗಿರುವವರಿಗೆ ಸತ್ತೆಯನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಳ್ಳುವ ಮತ್ತು ಅದನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವ ಸಾಧ್ಯತೆಗಳಿಲ್ಲ. ಯಾಕೆಂದರೆ, ನಮ್ಮ ದೇಶದ ಪ್ರತಿಶತ ಎಂಬತ್ತರಷ್ಟು ರೈತ ಮತ್ತು ಕಾರ್ಮಿಕ ವರ್ಗ ಇನ್ನೂ ಅಸಂಘಟಿತ ವಲಯದಲ್ಲಿದೆ.

ಸರಕಾರದ ವ್ಯವಸ್ಥಿತವಾದ ಎಲ್ಲ ಯೋಜನೆಗಳ ಲಾಭ ಅವರಿಗೆ ಕಾನೂನು ರೀತ್ಯಾ ದೊರಕುವಂತಿಲ್ಲ. ಆದರೆ ಅಸಂಘಟಿತ ವರ್ಗ ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ತುಂಬಾ ಗುರುತರವಾದ ಪಾತ್ರವನ್ನು ವಹಿಸುತ್ತದೆಯೆಂಬುದನ್ನು ಎಲ್ಲ ಅರ್ಥಿಕ ತಜ್ಞರು ಒಪ್ಪಿಕೊಳ್ಳುತ್ತಾರೆ. ಅವರಿಗೆ ಬೇಕಾದ ಕಾನೂನಿನ ಎಲ್ಲ ಪರಿಕರಗಳನ್ನು ಸರಕಾರಗಳು ಇಲ್ಲಿಯ ತನಕ ನೀಡಲು ಅಸಮರ್ಥವಾಗಿರುವುದಕ್ಕೆ ಕಾರಣಗಳನ್ನು ಹುಡುಕುವುದರತ್ತ ಅರ್ಥಪೂರ್ಣವಾದ ಕೆಲಸಗಳು ಇನ್ನೂ ಆಗದಿರುವುದು ವಿಪರ್ಯಾಸ. ಆದರೆ, ಸಂವಿಧಾನದಲ್ಲಿ ಇವರಿಗಾಗಿ ಹಲವಾರು ಆಶಯಪೂರ್ಣವಾದ ನಿಬಂಧನೆಗಳನ್ನು ರಚಿಸಿಲಾಗಿದೆ ಮತ್ತು ಇದನ್ನು ಕಾರ್ಯರೂಪಕ್ಕೆ ತರಲು ಸರಕಾರಗಳ ಮೇಲೆ ಒತ್ತಡಗಳನ್ನು ಹೇರಬಹುದಷ್ಟೆ. ಆದರೆ, ಅವುಗಳನ್ನು ಕಾನೂನಿನ ಉಲ್ಲಂಘನೆಯೆಂದು ಪರಿಗಣಿಸುವಂತಿಲ್ಲ.

ಸಂವಿಧಾನದ ನಾಲ್ಕನೆಯ ಭಾಗದಲ್ಲಿರುವ ರಾಜ್ಯ ನೀತಿಯ ನಿರ್ದೇಶನ ತತ್ವಗಳ ಅನುಚ್ಛೇದ 39 ರಲ್ಲಿ ದೇಶವನ್ನು ಆಳುವ ಸರಕಾರಗಳು ಕುರಿತಾಗಿ ಅನುಸರಿಸಬೇಕಾದ ನೀತಿಗಳ ಬಗ್ಗೆ ಸ್ಪಷ್ಟವಾದ ವಿಚಾರಗಳನ್ನು ಇಡಲಾಗಿದೆ. ಅರ್ಥಿಕ ಬೆಳವಣಿಗೆ ಮತ್ತು ಅದಕ್ಕೆ ಬೇಕಾದ ಪೂರಕವಾದ ಕಾನೂನುಗಳನ್ನು ರೂಪಿಸುವಾಗ ನೀತಿಗಳನ್ನು ಗಮನದಲ್ಲಿಟ್ಟುಕೊಳ್ಳವುದರ ಬಗ್ಗೆ ಸಂವಿಧಾನದಲ್ಲಿ ಒತ್ತಾಸೆಯಿದೆ. ಸಂವಿಧಾನದ ನಾಲ್ಕನೇ ಭಾಗದಲ್ಲಿರುವ ನೀತಿಗಳಿಗೆ ಮೂಲಭೂತ ಹಕ್ಕುಗಳಿಗಿರುವ ನ್ಯಾಯಾಂಗದ ಬೆಂಬಲವಿಲ್ಲ. ಸಂವಿಧಾನದ ಮೂರನೆಯ ಭಾಗದಲ್ಲಿರುವ ಮೂಲಭೂತ ಹಕ್ಕುಗಳನ್ನು ಹೊಂದುವ ಮತ್ತು ಯಾವುದೆ ಬಂಧನಗಳಿಲ್ಲದೆ ಅನುಭವಿಸುವ ಆದೇಶವನ್ನು ಸಂವಿಧಾನವೆ ಎಲ್ಲ ದೇಶದ ಪ್ರಜೆಗಳ ಮೇಲೆ ಇರಿಸಿದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸತ್ತೆಯ ಅತಿರಿಕ್ತ ಬಂಧನಗಳಿಲ್ಲದೆ ಸಹಜವಾಗಿ ಬದುಕಲು ಬೇಕಾದ ಎಲ್ಲ ಬಗೆಯ ಮಾನವೀಯ ರೀತಿರಿವಾಜುಗಳು ನಮ್ಮ ಮೂಲಭೂತ ಹಕ್ಕುಗಳಲ್ಲಿ ಅಡಕವಾಗಿವೆಯೆಂಬುದನ್ನು ನಮ್ಮ ಸರ್ವೊಚ್ಚ ನ್ಯಾಯಾಲಯವೇ ತನ್ನ ಹಲವಾರು ಐತಿಹಾಸಿಕ ತೀರ್ಪುಗಳಲ್ಲಿ ಹೇಳಿಕೊಂಡಿದೆ.

ಇದರ ಜೊತೆಗೆ ಸಂವಿಧಾನದ ಮೂರನೇ ಭಾಗದಲ್ಲಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ಸರಕಾರವನ್ನು ನ್ಯಾಯಾಲಯದ ಕಟೆಕಟೆಯೊಳಕ್ಕೆ ನಿಲ್ಲಿಸಬಹುದು. ಆದರೆ ಮೂಲಭೂತ ಹಕ್ಕುಗಳ ಉಲ್ಲಂಘನೆಗಳನ್ನು ಪ್ರಶ್ನಿಸಿ ನ್ಯಾಯಾಂಗದ ಬಾಗಿಲನ್ನು ತಟ್ಟಲು ನಮ್ಮ ದೇಶದ ಕೋಟಿಕೋಟಿ ಪ್ರಜೆಗಳಿಗೆ ಸಾಧ್ಯವೆ? ಅವರ ಎಲ್ಲ ಸಂವಿಧಾನದ ಕೊಟ್ಟ ಸ್ವಾತಂತ್ರ್ಯಗಳು ಗಾಳಿಯಲ್ಲಿ ತೂರಿಹೋದರೂ ಅವುಗಳನ್ನು ನ್ಯಾಯಾಂಗವಿರಲಿ, ಹತ್ತಿರದ ಸತ್ತೆಯ ಬಲವನ್ನು ಹೊಂದಿರುವ ಅಧಿಕಾರಿಗಳಿರಬಹುದು, ರಾಜಕಾರಣಿಗಳಿರಬಹುದು ಅಥವಾ ಇನ್ನಾರೊ ಊರಿನ ದೊಡ್ಡಪ್ಪನಿರಬಹುದು, ಇವರಾರ ಬಳಿಯೂ ಬಡ ಅಸಂಘಟಿತ ಜನಸಮುದಾಯ ಹೋಗಿ ನಿಲ್ಲಬಲ್ಲ ವಾತಾವರಣ ಇಂದಿಗೂ ಎಪ್ಪತ್ತೈದು ವರ್ಷಗಳ ಸ್ವಾತಂತ್ರ್ಯದ ಉತಾವಳಿಗಳ ನಂತರವೂ ದೇಶದಲ್ಲಿ ಮೂಡಿಬಂದಿಲ್ಲ. ಕುರಿತಾದ ಘಟನೆಗಳ ಬಗ್ಗೆ ಬರೆಯುವ ಅಗತ್ಯವೆ ಇಲ್ಲ. ಯಾಕೆಂದರೆ ಬಗೆಯ ಬಡ ಸಮುದಾಯದ ಸ್ವಾತಂತ್ರ್ಯ ಹರಣದ ಆಕ್ರೋಶದ ಘಟನೆಗಳ ಸರಮಾಲೆಯನ್ನು ನಾವು ದಿನನಿತ್ಯ ಹಲವು ಬಗೆಗಳಲ್ಲಿ ನೋಡುತ್ತಿದ್ದೇವೆ. ಸಂವಿಧಾನ ನೀಡಬಯಸುವ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಅರ್ಥಪೂರ್ಣತೆ ಇರುವುದು ಅವುಗಳ ಸಾರ್ಥಕವಾದ ಅನುಷ್ಠಾನದಲ್ಲಿ ಎಂಬುದನ್ನು ನಾವು ಮರೆಯಬಾರದು.

ಮೇಲೆ ಹೇಳಿದಂತೆ, ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತವಾಗಿ, ಸಂವಿಧಾನದ ನಾಲ್ಕನೇ ಭಾಗದಲ್ಲಿರುವ ವಿಚಾರಗಳನ್ನು ನ್ಯಾಯಾಲಯದ ಅಡಿಯಲ್ಲಿ ಪ್ರಶ್ನಿಸುವಂತಿಲ್ಲ. ಇದು ಸಂವಿಧಾನ ಸರಕಾರಕ್ಕೆ ನೀಡುವ ನೀತಿ ಪಾಠಗಳು. ಅದನ್ನು ಸರಕಾರ ತನ್ನ ಇತಿಮಿತಿಗಳಲ್ಲಿ ಕಾರ್ಯಗತಗೊಳಿಸುವ ಕೆಲಸವನ್ನು ಮಾಡಬಹುದು. ಒಂದು ವೇಳೆ ಸರಕಾರ ನೀತಿಗಳನ್ನು ತನ್ನ ಆಡಳಿತ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಕಾರ್ಯಗತಗೊಳಿಸದಿದ್ದರೆ ಅದರ ವಿರುದ್ಧ ಪ್ರಜೆಗಳು ನ್ಯಾಯಪಾಲಿಕೆಯ ಕದವನ್ನು ತಟ್ಟುವಂತಿಲ್ಲ. ಆದರೆ, 1970 ಮತ್ತು 1980 ದಶಕಗಳಲ್ಲಿ ಸಂವಿಧಾನದ ನಾಲ್ಕನೆಯ ಭಾಗದಲ್ಲಿರುವ ನೀತಿ ಪಾಠಗಳನ್ನು ಮೂಲಭೂತ ಹಕ್ಕುಗಳ ಜೊತೆಗೆ ಜೋಡಿಸಿ ಸರ್ವೋಚ್ಚ ನ್ಯಾಯಾಲಯ ನೀಡಿದ ಹಲವಾರು ಮಹತ್ವದ ತೀರ್ಪುಗಳನ್ನು ನಾವು ಗಮನಿಸಬಹುದು.

ಸಂವಿಧಾನದ ಇವೆರಡು ಭಾಗಗಳನ್ನು ಒಟ್ಟಾರೆಯಾಗಿ ನೋಡಿದಾಗ ಅವು ನಮ್ಮ ದೇಶದ `ಅಂತಸತ್ವವನ್ನು ಪ್ರತಿನಿಧಿಸುತ್ತವೆಯೆಂಬ ಮಾತನ್ನು ನಮ್ಮ ಸರ್ವೋಚ್ಚ ನ್ಯಾಯಾಲಯ ಅಂದಿದ್ದು ಇಂದಿಗೂ ಮಹತ್ವಪೂರ್ಣ. ಆದರೆ, ಇವೆಲ್ಲವೂ ಮಾತುಗಳಲ್ಲಿ ಉಳಿದಿವೆಯೆಂಬ ಭಾವವಿದೆ. ಕಳೆದ ಕೆಲ ವರ್ಷಗಳ ಬೆಳವಣಿಗೆಗಳನ್ನು ಕಂಡಾಗ, ಅದರಲ್ಲೂ ಕೊರೊನಾದ ಕರಾಳ ನರ್ತನದ ತುಳಿತದಲ್ಲಿ ಸಾಮಾನ್ಯ ಪ್ರಜೆ ತತ್ತರಿಸುವುದನ್ನು ಕಂಡಾಗ, ತನ್ನ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದರತ್ತ ಹೋರಾಟ ಮಾಡಲು ಎಲ್ಲ ವರ್ಗಗಳ ಜನ ಸನ್ನದ್ಧವಾಗುವ ಪರಿಯನ್ನು ಕಂಡಾಗ, ನಮ್ಮ ದೇಶದ ಒಟ್ಟಾರೆ ಇತಿಮಿತಿಗಳು ನಮಗೆ ಅರ್ಥವಾಗುತ್ತವೆ. ಸಂವಿಧಾನದ ಒಡಲಲ್ಲಿ ಎಲ್ಲ ಆಶಯಗಳು ಜನರಿಗಾಗಿ ಅಡಕವಾಗಿವೆ. ಆದರೆ, ಅವುಗಳನ್ನು ಗಂಭೀರವಾಗಿ, ಪ್ರಾಮಾಣಿಕವಾಗಿ, ಜನಪರವಾಗಿ ಅನುಷ್ಠಾನಗೊಳಿಸುವ ಪ್ರಯತ್ನಗಳು ಆಗಬೇಕಾಗಿದೆ.

ನಮ್ಮ ಸಂವಿಧಾನದ ನಾಲ್ಕನೆಯ ಭಾಗದ ನೀತಿಗಳನ್ನು ನಾವು ಪಟ್ಟಿ ಮಾಡಿದರೆ ನಮ್ಮ ಎಲ್ಲ ಅರ್ಥಿಕ ಸಂಕಷ್ಟಗಳ ಸಾಂದರ್ಭಿಕತೆಯ ಅರಿವಾಗುತ್ತದೆ. ಮೊದಲನೆಯದಾಗಿ, ಎಲ್ಲ ಪುರುಷರಿಗೆ ಮತ್ತು ಮಹಿಳೆಯರಿಗೆ ಅವರವರ ಬದುಕನ್ನು ಕಟ್ಟಿಕೊಳ್ಳುವ ಹಕ್ಕಿದೆ; ಎರಡನೆಯದಾಗಿ, ಸಮುದಾಯದ ಎಲ್ಲ ಸಂಪತ್ತನ್ನು ಎಲ್ಲರ ಒಳಿತಿಗಾಗಿ ಉಪಯೋಗಿಸತಕ್ಕದ್ದು; ಮೂರನೆಯದಾಗಿ, ದೇಶದ ಆರ್ಥಿಕ ವ್ಯವಸ್ಥೆಯ ಕಾರ್ಯಾಚರಣೆಯ ಪರಿಣಾಮದಿಂದಾಗಿ ಸಂಪತ್ತು ಮತ್ತು ಅದನ್ನು ಬೆಳೆಸುವ ಸಕಲ ಪರಿಕರಗಳು ಜನಸಮುದಾಯದ ಒಟ್ಟಾರೆ ಹಿತವನ್ನು ಕಡೆಗಣಿಸಿ ಕೆಲವರ ಕೈ ಸೊತ್ತಾಗಬಾರದು; ನಾಲ್ಕನೆಯದಾಗಿ, ಪುರುಷರು ಮತ್ತು ಮಹಿಳೆಯರು ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಕೆಲಸ ಮತ್ತು ಸಮಾನ ವೇತನವಿರಬೇಕು; ಐದನೆಯದಾಗಿ, ಎಲ್ಲ ಕಾರ್ಮಿಕರ, ಲಿಂಗಭೇದವಿಲ್ಲದೆ, ಮಕ್ಕಳಾದಿಯಾಗಿ ಅವರ ಆರೋಗ್ಯ ಮತ್ತು ಶಕ್ತಿಗಳನ್ನು ಆರ್ಥಿಕ ಅವಶ್ಯಕತೆಯ ಅನಿವಾರ್ಯತೆಯ ನೆಪದಲ್ಲಿ ದುರುಪಯೋಗ ಪಡಿಸಿಕೊಳ್ಳಬಾರದು ಮತ್ತು ದೇಶದ ಎಲ್ಲ ಪ್ರಜೆಗಳಿಗೆ, ಪುಟ್ಟ ಮಕ್ಕಳು ಸೇರಿದಂತೆ ಅವರವರ ವಯಸ್ಸು ಮತ್ತು ಶಕ್ತಿಗನುಸಾರವಾಗಿ ಆರ್ಥಿಕ ಅವಶ್ಯಕತೆಯ ಕಾರಣದಿಂದಾಗಿ ತಮಗೆ ಹೊಂದದ ಕೆಲಸಗಳಲ್ಲಿ ಬಲವಂತವಾಗಿ ತೊಡಗಿಕೊಳ್ಳಲು ಬಿಡಬಾರದು.

ಕೊನೆಯದಾಗಿ, ಮಕ್ಕಳಿಗೆ ಅವರ ಬೆಳವಣಿಗೆಗೆ ಬೇಕಾದ ಎಲ್ಲ ಅವಕಾಶ ಮತ್ತು ಸವಲತ್ತುಗಳನ್ನು ಅವರ ಸ್ವಾತಂತ್ರ್ಯ ಮತ್ತು ಘನತೆಯನ್ನು ಕಾಪಡುವಂತಹ ಅರೋಗ್ಯಕರ ವಾತಾವರಣದಲ್ಲಿ ರೂಪಿಸುವದು; ಮತ್ತು ಅವರಾರೂ ನೈತಿಕ ಮತ್ತು ಇತರ ಬಗೆಯ ಶೋಷಣೆಗೆ ಒಳಗಾದಂತೆ ನೋಡಿಕೊಳ್ಳುವುದು. ಕೆಲಸದ ಮತ್ತು ಶಿಕ್ಷಣದ ಹಕ್ಕನ್ನು ಸಂವಿಧಾನದ ಅನುಚ್ಛೇದ 41 ರಲ್ಲಿ ನಮೂದಿಸಲಾಗಿದೆ. ಉತ್ತಮ ಮತ್ತು ಸಾಮರಸ್ಯದ ಜೀವನಕ್ಕಾಗಿ ಹಳ್ಳಿಗಳಲ್ಲಿ ಪಂಚಾಯಿತಿ ವ್ಯವಸ್ಥೆಯನ್ನು ಕಾನೂನುರೀತ್ಯಾ ಊರ್ಜಿತಗೊಳಿಸುವುದು. ಇದರಿಂದಾಗಿ ಹಳ್ಳಿಗಳಲ್ಲಿನ ಜನಸಮುದಾಯಗಳು ತಮಗೆ ಬೇಕಾದ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು.

ಒಟ್ಟಾರೆ, ಅರ್ಥಿಕ ಅಸಮಾನತೆಯನ್ನು ಅಳಿಸಿ ಹಾಕುವುದು ಸಂವಿಧಾನದ ಮೂಲಭೂತ ಉದ್ದೇಶಗಳಲ್ಲಿ ಒಂದಾಗಿದೆ. ಆದರೆ, ಅದನ್ನು ಕಾರ್ಯರೂಪದಲ್ಲಿ ತರುವುದರಲ್ಲಿ ಸರಕಾರಗಳು ವಿಫಲವಾಗುತ್ತಿವೆ. ಸಂವಿಧಾನವಾಗಲಿ, ನಂತರದಲ್ಲಿ ಬಂದ ಹಲವಾರು ಆರ್ಥಿಕ ಮತ್ತು ಹಣಕಾಸುಗಳ ವಿಚಾರ ಕುರಿತ ಕಾನೂನುಗಳಾಗಲಿ ಅಸಮಾನತೆಯನ್ನು ಕಡಿಮೆ ಮಾಡಲು ಸಮರ್ಥವಾಗಲಿಲ್ಲ. ದೇಶದ ಮೊದಲು ಐವತ್ತು ವರ್ಷಗಳಲ್ಲಿ, ಅದರಲ್ಲೂ ಪ್ರಮುಖವಾಗಿ ನೆಹರುರವರ ಕಾಲದಲ್ಲಿ, ಹಲವಾರು ಸರಕಾರದ ಸ್ವಾಮಿತ್ವದ ಕಂಪನಿಗಳನ್ನು ಹುಟ್ಟು ಹಾಕಲಾಯಿತು. ಕಂಪನಿಗಳಿಗೆ ದೇಶದ ಎಲ್ಲ ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯಿತ್ತು. ಅವು ಖಾಸಗಿ ಕಂಪನಿಗಳೊಂದಿಗೆ ಸೇರಿಕೊಂಡು ತಮ್ಮ ಕಾರ್ಯವನ್ನು ನಿರ್ವಹಿಸಬಹುದಾಗಿತ್ತು. ಒಂದು ರೀತಿಯ ಸರಕಾರಿ ಮತ್ತು ಖಾಸಗಿ ವ್ಯವಸ್ಥೆಯ ಸಮತೋಲನದ ಸಮೀಕರಣ ಆಗಿನ ಅರ್ಥಿಕ ನೀತಿಯಲ್ಲಿತ್ತು.

ಆದರೆ, ಕಾಲಾಂತರದಲ್ಲಿ ಹಲವಾರು ಸರಕಾರಿ ಕಂಪನಿಗಳು ತಮ್ಮ ಕಾರ್ಯವೈಖರಿಯ ಪರಿಣಾಮದಿಂದಾಗಿ ನೆನೆಗುದಿಗೆ ಬೀಳತೊಡಗಿದವು. ಇಂದು ಖಾಸಗಿ ಸ್ವಾಮಿತ್ವದ ಕಂಪನಿಗಳಿಗೆ ಅರ್ಥಿಕ ರಂಗದಲ್ಲಿ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತಿದೆ. ಲಾಭದ ಬೆನ್ನು ಹತ್ತಿ ಹೊರಡುವ ಖಾಸಗಿಯವರ ದೃಷ್ಟಿ ದೇಶದ ಮೂಲೆಮೂಲೆಗಳಲ್ಲಿರುವ ಬಡವರ ಮೇಲಿರುವುದು ಕಷ್ಟಸಾಧ್ಯ. ಎಲ್ಲರನ್ನೊಳಗೊಂಡ ಬೆಳವಣಿಗೆಯ ಮಂತ್ರವೆ ನಮ್ಮ ದೇಶಕ್ಕೆ ಸೂಕ್ತ ಎಂಬುದನ್ನು ನಮ್ಮ ಸಂವಿಧಾನ ಸಾರಿಸಾರಿ ಹೇಳುತ್ತಿದೆಯೆಂಬುದನ್ನು ನಾವು ನಮ್ಮ ಸ್ವಾತಂತ್ರ್ಯದ ಎಪ್ಪತ್ತೈದನೆಯ ವಸಂತದಲ್ಲಿ ಮರೆಯಬಾರದು.

*ಲೇಖಕರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾನೂನು ವಿಷಯದ ಪ್ರಾಧ್ಯಾಪಕರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು.

Leave a Reply

Your email address will not be published.