ಸಂಶೋಧನೆಯ ಪ್ರತಿಷ್ಠೆ ಹಾಗೂ ಪರಂಪರೆ

-ಹರೀಶ್ ರಾಮಸ್ವಾಮಿ

ಇಂದಿನ ವಿಶ್ವವಿದ್ಯಾಲಯಗಳು ಸಮಾಜದ ಬೆಳವಣಿಗೆಯ ಅವಶ್ಯಕತೆಗೆ ಹಾಗೂ ರಚನೆಗೆ ಬೇಕಾದ ಜ್ಞಾನದಿಂದ ‘ಡಿ-ಅಂಕ್’ ಆಗಿವೆ ಮತ್ತು ‘ಉದ್ಯಮ ಕೇಂದ್ರಿತ’ ಚಿಂತನೆಯ ಕ್ರಮದಿಂದ ಪ್ರೇರೇಪಿತವಾಗಿವೆ.

ಪ್ರಸ್ತುತ ಸಮಾಜದಲ್ಲಿ ವಿಶ್ವವಿದ್ಯಾಲಯಗಳು ಸಾಮಾಜಿಕ ಜೀವನದ ವಾಸ್ತವಿಕತೆಯಿಂದ ಹೊರಗಿದ್ದು ‘ಪರಕೀಯ’ ಪ್ರಪಂಚದಲ್ಲಿ ಇದ್ದಂತೆ ಇವೆ. ಇದಕ್ಕೆ ಕಾರಣ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಾಗೂ ಬಂಡವಾಳಶಾಹಿ ನಿರ್ದೇಶಿತ, ಮಾರುಕಟ್ಟೆ ಆಧಾರಿತ ವ್ಯವಸ್ಥೆಗಳು. ಕೆಲವೊಬ್ಬರು ಈ ಚರ್ಚೆಯನ್ನು ಅಲ್ಲಗಳೆದು ನವ ಉದಾರವಾದದ ನಂತರ ವಿಶ್ವವಿದ್ಯಾಲಯಗಳು ವಾಸ್ತವಿಕತೆಯೆಡೆಗೆ ನಡೆಯುತ್ತಿವೆ. ಹಾಗಾಗಿ ಈ ಬಂಡವಾಳಶಾಹಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಸರಿಯಾದ ಮಾರ್ಗ ಎಂದೂ ಹೇಳಬಹುದು. ಈ ಚರ್ಚೆಗಳು ಸಹಜ.

ಆದರೆ ಆ ರೀತಿಯ ಬದಲಾವಣೆಗಳು ವಿಶ್ವವಿದ್ಯಾಲಯಗಳ ಮೇಲೆ ಬೀರುತ್ತಿರುವ ಪರಿಣಾಮವು ‘ಕೈಗಾರಿಕಾ ಮನೋಪ್ರವೃತ್ತಿಯಿಂ’ ಕೂಡಿದ್ದು ವಿಶ್ವವಿದ್ಯಾಲಯಗಳನ್ನು ಸ್ಪರ್ಧಾತ್ಮಕವಾಗಿ ಅಳೆಯುವ ಮನಃಸ್ಥಿತಿಯೇ ಆಗಿದೆ. ಹಾಗಾಗಿ ಇಂದಿನ ವಿಶ್ವವಿದ್ಯಾಲಯಗಳು ಸಾಮಾಜಿಕ ಮೌಲ್ಯ, ಚಿಂತನೆ, ಹೊಸ ಆಲೋಚನೆ, ಸೈದ್ಧಾಂತಿಕತೆ ಬೆಳೆಸುವ ಬದಲು ಸ್ಪರ್ಧೆ, ಮಧ್ಯಸ್ಥಗಾರರ ಬೇಡಿಕೆ, ಫಲಿತಾಂಶಗಳನ್ನು ನೀಡಬೇಕೆಂಬ ಮಾರ್ಕೆಟ್ ಪ್ರಪಂಚದ ಹಿಡಿತದಲ್ಲಿದೆ. ಆ ಕಾರಣದಿಂದ ಇಂದಿನ ಸಂಶೋಧನೆಗಳು ರಾಜಕೀಯ ಪಕ್ಷಗಳ ಚುನಾವಣೆ, ಪ್ರಣಾಳಿಕೆ, ಅಧಿಕಾರಸ್ತರ ಕಾರ್ಯಕ್ರಮವಾಗಿ ಪರಿಣಾಮಕಾರಿಯಾಗಿ ಹೊರಬರುತ್ತಿಲ್ಲ. ಬದಲಾಗಿ ಇಲ್ಲಿ ಸ್ಪರ್ಧೆಗೆ ಅವಶ್ಯವಿರುವ ನಿಯತಾಂಶಗಳನ್ನು ಅವಲಂಬಿಸಿ ಸಂಶೋಧನೆಗಳನ್ನು ನಡೆಸಲಾಗುತ್ತಿದೆ ಹಾಗೂ ಪ್ರಕಾಶಿತವನ್ನೂ ಯು.ಜಿ.ಸಿ. ನಿಯಮಿತ ಅಳತೆಗೋಲುಗಳಿಗೆ ಹೊಂದಾಣಿಕೆಯಾಗುವಂತೆ ಪರಿಶ್ರಮಿಸಲಾಗುತ್ತಿದೆ.

ಇದರಲ್ಲಿ ಹೆಚ್ಚಾಗಿ ಆಂಗ್ಲಭಾಷೆಯ ಪ್ರಕಟಣೆಗಳು ಇರುತ್ತವೆ. ಆಂಗ್ಲ ಭಾಷೆ ಬಾರದವರೂ ತಮ್ಮ ಮಾತೃಭಾಷೆಯಲ್ಲಿ ಪ್ರಕಾಶಿತಗೊಳಿಸಿದರೆ ಅದಕ್ಕೆ ಯಾವುದೇ ಅಳತೆಗೋಲುಗಳಿಲ್ಲ ಎಂಬ ಕಾರಣಕ್ಕೆ ಆಂಗ್ಲ ಭಾಷೆಯಲ್ಲಿಯೇ ಬಾಡಿಗೆ ಬರಹಗಳ (ಉhosಣ Wಡಿiಣiಟಿg) ಮೂಲಕ ಪ್ರಕಟಣೆ ಮಾಡುತ್ತಾರೆ. ಇವು ವಿಶ್ವವಿದ್ಯಾಲಯಗಳಲ್ಲಿ ಉತ್ಪಾದನೆಯಾಗುತ್ತಿರುವ ‘ಅನುತ್ವಾದಿತ’ ಬರಹಗಳು ಎಂದರೆ ತಪ್ಪಾಗಲಾರದು. ಇದಕ್ಕೆ ಮೂಲತಃ ವಿಶ್ವವಿದ್ಯಾಲಯ ಕಾರಣವಲ್ಲವೆಂಬುದು ಇಲ್ಲಿ ಸ್ಪಷ್ಟಪಡಿಸಬೇಕಿದೆ. ಇದಕ್ಕೆ ಇಂದಿನ ರಾಜಕಾರಣಿ, ರಾಜಕಾರಣ ಹಾಗೂ ರಾಜಕೀಯ ಕಾರಣ.

‘ರಾಜಕಾರಣ’ ಎಂಬುದು ರಾಜ್ಯ ಮಾಡುವ ಕೆಲಸಕ್ಕೆ ‘ತರ್ಕಬದ್ಧ ಕಾರಣ’ ಹುಡುಕುವ ಕೆಲಸವಾಗಿತ್ತು. ಹಾಗಾಗಿ ರಾಜಕಾರಣ ಮಾಡುವವರಿಗೆ ವಿಶ್ವವಿದ್ಯಾಲಯದಂತಹ ಜ್ಞಾನ ಕೇಂದ್ರದ ಅವಶ್ಯಕತೆ ಇತ್ತು. ‘ರಾಜಕಾರಣ’ ಕಂಡುಕೊಂಡ ಅಂತಹ ರಾಜಕಾರಣಿಗಳು ಸಂಸತ್ತಿನಲ್ಲಿ ಹಾಗೂ ವಿಧಾನಸಭೆಗಳಲ್ಲಿ ಹಾಗೂ ರಾಜ್ಯದ ಆಡಳಿತದ ಪ್ರಕ್ರಿಯೆಯಲ್ಲಿ ‘ರಾಜಕ್ರಿಯಾ’ ಶೀಲರಾಗಿರುತ್ತಿದ್ದರು. ಹೀಗಾಗಿ ರಾಜ್ಯದ ಹಾಗೂ ಸಮಾಜದ ಒಳಿತಿಗಾಗಿ ಅವರು ‘ರಾಜಕ್ರಿಯ’ ಮಾಡುತ್ತಾ, ಉತ್ತಮ ನೀತಿರಚನೆಗೆ ಶ್ರಮಿಸಿ ರಾಜ್ಯದಿಂದ ಹೊರಬೀಳುವ ನೀತಿ-ನಿರ್ಧಾರದಲ್ಲಿ ಸಾಮಾಜಿಕ ಒಳಿತನ್ನು ಕಂಡುಕೊಳ್ಳುತ್ತಿದ್ದರು.

ಆದರೆ ಇಂದಿನ ದಿನಗಳಲ್ಲಿ ಈ ರೀತಿಯ ‘ರಾಜಕಾರಣ’ವಾಗಲೀ, ‘ರಾಜಕ್ರಿಯೆ’ (ರಾಜಕೀಯ) ಎರಡೂ ಇಲ್ಲದೇ ವಿಶ್ವವಿದ್ಯಾಲಯದ ಸಂಶೋಧನೆಗಳು ಎಷ್ಟೇ ಉತ್ತಮ ಗುಣಮಟ್ಟದ್ದೇ ಆಗಿದ್ದರೂ ಅದಕ್ಕೆ ಸರಿಯಾದ ‘ಅಂಗೀಕಾರ’ ದೊರಕುತ್ತಿಲ್ಲ. ಈ ಬಗ್ಗೆ ಭಿನಾಭಿಪ್ರಾಯವಿರುವುದು ಸಹಜ. ಉದಾಹರಣೆಗೆ ಡೇವಿಡ್ ಆಸ್‍ಬೋರ್ನ್ ಹಾಗೂ ಟಿಡ್‍ಗೇಬ್ಲರ್ ಬರೆದ ‘ರೀ ಇನ್ವೆಂಟಿಂಗ್ ಗವರ್ನಮೆಂಟ್’ ಗ್ರಂಥವನ್ನು 1992ರಲ್ಲಿ ಪ್ರಕಟಿಸಿದಾಗ ಅಂದಿನ ಅಮೆರಿಕೆಯ ಅಧ್ಯಕ್ಷರಾಗಿದ್ದವರು ಈ ಗ್ರಂಥದಿಂದ ಪ್ರಭಾವಿತರಾಗಿ ‘ರಿ ಇನ್ವೆಂಟಿಗ್ ಗೌರ್ನಮೆಂಟ್’ನ ಹೊಸ ಆಲೋಚನೆಗೆ ನಿಜವಾಗಿ ಸ್ಪಂದಿಸಬೇಕೆಂದಿದ್ದಾಗ ಒಬ್ಬ ಮಾಧ್ಯಮ ಮಿತ್ರ, ‘ಈ ಗ್ರಂಥವನ್ನು ವಿಶ್ವವಿದ್ಯಾಲಯಗಳು ವಿಮರ್ಶಿಸಿ-ಶಿಫಾರಸ್ಸು ಮಾಡಿದ್ದಾರೆಯೇ?’ ಎಂದು ಕೇಳಿದಕ್ಕೆ, ಅಧ್ಯಕ್ಷರು ಕೂಡಲೇ ಕ್ಷಮಿಸಿ ಈಗಲೇ ಈ ಬಗ್ಗೆ ವಿಶ್ವವಿದ್ಯಾಲಯಗಳಿಂದ ಈ ಗ್ರಂಥ ಕುರಿತಾದ ವಿಮರ್ಶೆ ಹಾಗೂ ಅಭಿಪ್ರಾಯ ಪಡೆದುಕೊಳ್ಳುತ್ತೇನೆ ಹಾಗೂ ‘ಅದರ ನಂತರವೇ ಸರ್ಕಾರದ ಮಟ್ಟದಲ್ಲಿ ಇದರ ಅಳವಡಿಕೆ ಬಗ್ಗೆ ಚಿಂತಿಸುತ್ತೇನೆಂದರಂತೆ’.

ಇದೇ ಸಂದರ್ಭವನ್ನು ನಾವು ಬಹುಶಃ 1950ರ ದಶಕದಿಂದ 1980ರ ದಶಕದವರೆಗೆ ಹೆಚ್ಚುಕಡಿಮೆ ಭಾರತದಲ್ಲಿ ಕಾಣಬಹುದಿತ್ತು ಎಂಬುದು ನನ್ನ ಅನಿಸಿಕೆ. ಆದರೆ ಜ್ಞಾನದ ಉತ್ಪಾದನಾ ಮೂಲಗಳನ್ನು ಸಹ ‘ಮಾರ್ಕೆಟ್’ ದೃಷ್ಟಿಕೋನದಿಂದ ನೋಡುತ್ತಾ ‘ನಾಲೇಜ್ ಇಸ್ ಪವರ್’ ಎಂಬ ಚರ್ಚೆಗೆ ದಂಬಾಲು ಬಿದ್ದಿರುವ ಈ ಸಮಾಜದಲ್ಲಿ ವಿಶ್ವವಿದ್ಯಾಲಯಗಳು, ಜ್ಞಾನದೇಗುಲವಾಗುವ ಬದಲು ಕೈಗಾರಿಕೆಯ ವ್ಯವಸ್ಥೆಗೆ ‘ಜ್ಞಾನಹೊಂದಿದ ಗುಲಾಮರನ್ನು’ ತಯಾರಿಸುವ ಕಾರ್ಖಾನೆ ಆಗುತ್ತಿವೆ. ಈ ಬಗ್ಗೆ ಸಹ ಭಿನ್ನಾಭಿಪ್ರಾಯಗಳು ಸಹಜ.

ವಿಶ್ವವಿದ್ಯಾಲಯಗಳಲ್ಲಿನ ಪರಂಪರೆ -ಚರ್ಚೆ, ಜ್ಞಾನದ ಸ್ವರೂಪ ರಚನೆ, ಚಿಂತನೆ, ಆಲೋಚನೆ ಹುಟ್ಟು ಹಾಕುವುದು, ದೇಶ, ರಾಜ್ಯ, ಸ್ಥಳೀಯ, ಅಂತರ ರಾಷ್ಟ್ರೀಯ ಮಟ್ಟದ ಆಗುಹೋಗುಗಳಿಗೆ ತಾರ್ಕಿಕ ಹಾಗೂ ಜ್ಞಾನದ ಸೈದ್ಧಾಂತಿಕ ಚೌಕಟ್ಟುಗಳನ್ನು ಒದಗಿಸಿ ಆಯಾ ಸಂದರ್ಭದಲ್ಲಿನ ಪ್ರಮುಖ ಘಟನೆಗಳನ್ನು ವಿಶ್ಲೇಷಿಸಿ ಪರಂಪರೆಗಳನ್ನು, ಸಂಪ್ರದಾಯಗಳನ್ನು ಸ್ಥಿರೀಕರಿಸುವುದಾಗಿತ್ತು. ವಿಜ್ಞಾನ, ಸಮಾಜ ವಿಜ್ಞಾನ, ಕಲೆ, ವಾಣಿಜ್ಯವೆಂಬ ಭೇದಗಳಿಲ್ಲದೇ, ಸಮಾಜದ ಒಳಿತಿಗಾಗಿ ಮೌಲ್ಯಗಳನ್ನು ಸೃಷ್ಟಿಸಿ ರಚಿಸುವುದು ವಿಶ್ವವಿದ್ಯಾಲಯಗಳ ಚಿಂತನಾಶೀಲತೆ ಆಗಿತ್ತು.

‘ನಾಲೆಜ್ ಫಾರ್ ಮೋರ್ ನಾಲೇಜ್’ ಎಂಬಂತೆ ವಿಶ್ವವಿದ್ಯಾಲಯದಲ್ಲಿನ ಪರ-ವಿರೋಧಿ ಚರ್ಚೆಗಳು ಸಮಾಜದಲ್ಲಿನ ‘ಸಾಮಾಜಿಕ ಉದ್ಯಮೀ ವರ್ಗಕ್ಕೆ’ (Soಛಿiಚಿಟ ಇಟಿಣಡಿeಠಿಡಿeಟಿeuಡಿs) ಹೊಸ ಜ್ಞಾನ ಹಾಗೂ ಜ್ಞಾನದ ಆಯಾಮಗಳನ್ನು ಒದಗಿಸಿ, ಚಿಂತನೆ ಹಾಗೂ ಆಲೋಚನೆಗಳು ಪ್ರಾಯೋಗಿಕವಾಗಿ ಸಮಾಜದ ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಉಪಯೋಗವಾಗುವಂತೆ ಪ್ರತಿಬಿಂಬಿಸುತ್ತಿತ್ತು. ಆ ಕಾರಣದಿಂದ ಈ ‘ಸಾಮಾಜಿಕ-ಉದ್ಯಮಿ’ -‘ತತ್ವಜ್ಞಾನಿ’ ಅಥವಾ ‘ಸಿದ್ಧಾಂತವಾದಿಗಳಾಗಿ’ ಪ್ರಜೆಗಳ ಹಾಗೂ ಜನರ ಪ್ರೀತಿಗೆ ಪಾತ್ರರಾಗಿ ಅವರ ಕಾರ್ಯಗಳು ಸಮಾಜೋ-ಆರ್ಥಿಕ ಬೆಳವಣಿಗೆಗೆ ಪೂರಕವೆನಿಸುತ್ತಿದ್ದವು.

ಆದರೆ ಇಂದು ವಿಶ್ವವಿದ್ಯಾಲಯಗಳನ್ನು ನಾವು ‘ಪ್ರತಿಷ್ಠೆ’ಯ ಅಂಗಳವಾಗಿಸಿ ಯೋಗ್ಯತೆ, ಅರ್ಹತೆಗಳನ್ನು ‘ಅಳತೆಗೋಲುಗಳಿಗೆ’ ಒಳಪಡಿಸುತ್ತಾ, ‘ವಿಶ್ವವಿದ್ಯಾಲಯ’ಗಳನ್ನು ‘ವಿಶ್ವವಿದ್ಯಾ-ನಿಲಯಗಳಾಗಿ’ ವಿಶ್ವವಿದ್ಯಾಲಯಗಳ ನಡುವೆ ಸ್ಪರ್ಧೆ ಏರ್ಪಡಿಸಿ ಕೈಗಾರಿಕೆಗೆ ಬೇಕಾಗುವ ‘ಜನ’ ಸಾಮಾಗ್ರಿಯನ್ನು ಉತ್ಪಾದಿಸುವ ಕೇಂದ್ರಗಳಾಗಿ ಪರಿವರ್ತಿಸಿದ್ದೇವೆ. ಹೀಗಾಗಿ ಇಂದಿನ ವಿಶ್ವವಿದ್ಯಾಲಯಗಳು ಸಮಾಜದ ಬೆಳವಣಿಗೆಯ ಅವಶ್ಯಕತೆಗೆ ಹಾಗೂ ರಚನೆಗೆ ಬೇಕಾದ ಜ್ಞಾನದಿಂದ ‘ಡಿ-ಅಂಕ್’ ಆಗಿವೆ ಮತ್ತು ‘ಉದ್ಯಮ ಕೇಂದ್ರಿತ’ ಚಿಂತನೆಯ ಕ್ರಮದಿಂದ ಪ್ರೇರೇಪಿತವಾಗಿವೆ. ಇದರ ಬದಲು ಮೋದಿಜಿ ಅವರ ನಾಯಕತ್ವದಲ್ಲಿ ಸರ್ಕಾರವೇ ವಿಶ್ವವಿದ್ಯಾಲಯಗಳನ್ನು ಚಿಂತನೆಗೆ ಓರೆ ಹಚ್ಚುವಂತಹ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’, ‘ಆತ್ಮ ನಿರ್ಭರ್ ಭಾರತ್’ ಎಂಬ ಪರಿಕಲ್ಪನೆ ಕೊಡುವುದರ ಮೂಲಕ ಇವುಗಳನ್ನು ಸಾಧಿಸುವ ಸಂಶೋಧನಾ ಮಾರ್ಗವನ್ನು ವಿಶ್ವವಿದ್ಯಾಲಯಗಳು ಹುಡುಕುವ ಹಾದಿಗೆ ಹಾಕಿದ್ದಾರೆ.

ಆದರೂ, ಈ ರೀತಿ ‘ಪರಿಕೀಯ’ ವಾಗಿರುವ ವಿಶ್ವವಿದ್ಯಾಲಯದಲ್ಲಿ ‘ಜ್ಞಾನದ ಚಿಲುಮೆ’ ಇಲ್ಲ, ‘ಬೆಳಕು ಚೆಲ್ಲುವ ತಜ್ಞತೆ’ ಇಲ್ಲವೆಂಬುದು ಸತ್ಯಕ್ಕೆ ದೂರವಾದದ್ದು. ಪರಿಶ್ರಮದಿಂದ ತಯಾರಾಗುತ್ತಿದ್ದ ವಸ್ತುವೊಂದು ತಾಂತ್ರಿಕತೆಯ ಬೆಳವಣಿಗೆಯಿಂದ ತನ್ನ ಮೌಲ್ಯ ಕಳೆದುಕೊಂಡಂತೆ, ಮೊಂಬತ್ತಿ ಈ ಕಾಲದಲ್ಲಿ ತನ್ನ ಕಾರ್ಯದಲ್ಲಿ ಸೀಮಿತಗೊಂಡಂತೆ, ಬೆಳಕಿನ ಬುಡ್ಡಿಗಳು, ಟಾಂಗಾ ಗಾಡಿಗಳು ತಮ್ಮ ಅಸ್ತಿತ್ವವನ್ನು ಕಾಲಾನುಸಾರವಾಗಿ ಕಳೆದುಕೊಂಡಂತೆ- ಬೇಡಿಕೆಗಳು ಬದಲಾದ ಈ ಸಮಾಜದಲ್ಲಿ ವಿಶ್ವವಿದ್ಯಾಲಯದ ಸಂಶೋಧನೆಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿವೆ. ಈ ಕಾರಣಕ್ಕಾಗಿ ವಿಶ್ವವಿದ್ಯಾಲಯಗಳು ತಮ್ಮನ್ನು ತಾವೇ ಪುನರ್ ಅನ್ವೇಶಿಸಿಕೊಳ್ಳಬೇಕಾಗಿದೆ.

ಎಂದಿನಿಂದ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ‘ರಾಜಕಾರಣ’ವನ್ನು ಬಿಟ್ಟು ಧ್ರುವೀಕರಣ, ಅಸ್ಮಿತೆ, ಜಾತಿ ಹಾಗೂ ಪಂಥೀಯ ಚಿಂತನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವೋ, ಅಂದೇ ನಿಜವಾದ ‘ರಾಜ-ಕಾರಣದಲ್ಲಿ’ ಕಾರಣವೇ ಮಾಯವಾಗಿ ಅಂತಹ ನಿರ್ಧರಿತ ಉದ್ದೇಶಗಳು ಸರ್ವಪಕ್ಷಗಳಲ್ಲಿಯೂ ತಮ್ಮ ಕಾರ್ಯವನ್ನು ಏಕಮುಖವಾಗಿ ಮಾಡತೊಡಗಿಸಿದವು. ಇದರ ಫಲವಾಗಿ ‘ಚಿಂತನೆ’, ‘ಚಿಂತನಾಶೀಲತೆ’ಯ ಬದಲು ‘ಬದ್ಧತೆ’ ‘ಪೂರ್ವಪೀಡಿತ ಆಲೋಚನೆ’, ‘ನಿರ್ಧರಿತ ಹಾಗೂ ಸೀಮಿತ ಆಲೋಚನಾಕ್ರಮ’, ‘ಪೂರ್ವಗ್ರಹಪೀಡೆ’ ‘ಪಕ್ಷಾತೀತ ವರ್ತನೆ’ಯ ನಡವಳಿಕೆಗಳು ಬೆಳೆದವು. ಹಾಗಾಗಿ ಉದಾರವಾದಿ ಆಲೋಚನೆಯ ಪರಿಕ್ರಮ ಹೊಂದಿದ್ದ ‘ವಿಶ್ವವಿದ್ಯಾಲಯಗಳು’ ಹಾಗೂ ಅಲ್ಲಿನ ಸಂಶೋಧನೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ.

ಉದಾಹರಣೆಗಾಗಿ, ‘ಗ್ರಾಮಾಭಿವೃದ್ಧಿಗೆ’ ವಿಕೇಂದ್ರೀಕರಣ ಪೂರಕವೆಂಬ ಚರ್ಚೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಈ ಬಗ್ಗೆ ನಡೆದ ಸಂಶೋಧನೆ- ಗ್ರಾಮಮಟ್ಟದ ‘ರಾಜಕಾರಣಕ್ಕೆ’ ಪೂರಕವಲ್ಲ. ಅದು ವಾಸ್ತವದಲ್ಲಿ ಅಪ್ರಯೋಜಕ. ಏಕೆಂದರೆ ಯಾವ ರಾಜಕಾರಣಿಯೂ ಈ ಸಿದ್ಧಾಂತಗಳನ್ನು ಪಸರಿಸುತ್ತಾ ಪ್ರಜಾಪ್ರಭುತ್ವದಲ್ಲಿ ಚುಣಾವಣೆಗೆ ಜನರನ್ನು ಸಜ್ಜುಗೊಳಿಸಲು ಸಹಾಯಕಾರಿಯಾಗಿಲ್ಲ. ಕಾರಣ ‘ಸತ್ಯವಾಗಿ’ ಪ್ರಸ್ತುತದಲ್ಲಿ ಎಷ್ಟೇ ವಿಕೇಂದ್ರಿಕೃತ ಸಂಸ್ಥೆಗಳಿದ್ದರೂ, ಅವುಗಳ ಅಭಿವೃದ್ಧಿಗೆ ಈ ಮೇಲಿನ ಸಿದ್ಧಾಂತ ಸಹಾಯಕಾರಿಯಾಗಿದ್ದರೂ ರಾಜಕಾರಣಿಗಳು ಚುನಾವಣೆಗಳಲ್ಲಿ ಜನರನ್ನು ಜಾತಿ, ಧರ್ಮ, ಪಕ್ಷಗಳ ಮೇಲೆ ಧ್ರುವೀಕರಣಗೊಳಿಸಿ ಭ್ರಷ್ಟಗೊಳಿಸುವುದರಲ್ಲಿ ತಮ್ಮ ಗೆಲುವಿನ ಸಾಧನೆ ತೋರಿದ್ದಾರೆ. ಹಾಗಾಗಿ ಈ ಸಿದ್ಧಾಂತಗಳು ಯಾರಿಗೂ ಬೇಡವಾಗಿದೆ.

ಮೂಲತಃ ರಾಜಕಾರಣದಲ್ಲಿಯೇ, ‘ನೀತಿ ರಚನೆಯ’ ಧೋರಣೆಗಳು ಅಪರೂಪವಾಗಿದ್ದು -ಹೆಚ್ಚಾಗಿ ತತ್‍ಕ್ಷಣದಲ್ಲಿ ಫಲಿತಾಂಶ ಕಾಣಬಯಸುವ ‘ಕಾರ್ಯಕ್ರಮಗಳಿಗೆ’ ದಂಬಾಲು ಬೀಳುವ ಪ್ರವೃತ್ತಿ ಈಗಿನದಾಗಿದೆ. ‘ಭೂ ಸುಧಾರಣೆ’, ‘ರೈಟ್ ಟು ಫುಡ್’, ‘ರಿಮೂವಲ್ ಆಫ್ ಅನ್‍ಟಚಬಲಿಟಿ’, ‘ಮಾನವ ಹಕ್ಕಿನಂತಹ’, ನೀತಿ ಚಿಂತನೆಗಳು ವಿಶ್ವವಿದ್ಯಾಲಯದಿಂದ ಹೊರಬಿದ್ದ ಚಿಂತನೆಗಳೇ ಆದರೂ ಅದರ ಚಲಾವಣೆ ಈಗಿನ ರಾಜಕಾರಣದಲ್ಲಿ ಹೆಚ್ಚಾಗಿಲ್ಲಾ ಎಂಬುದು ಇಲ್ಲಿ ಗಮನಾರ್ಹ.

ಇದಲ್ಲದೇ, 1951ರಲ್ಲಿ ರಾಜ್ಯಶಾಸ್ತ್ರದ ‘ದಿ ಜರ್ನಲ್ ಆಫ್ ಪಾಲಿಟಿಕ್ಸ್’ 13(1)ರಲ್ಲಿ ಡೇವಿಡ್ ಈಸ್ಟನ್ ಹೇಳಿದ ಹಾಗೆ ವಿಶ್ವವಿದ್ಯಾಲಯದ ಸಂಶೋಧನೆಗಳೂ ಕೆಲವೊಮ್ಮೆ ಅತಿರೇಕದ ಮೌಲ್ಯ ಹಾಗೂ ‘ವಾಸ್ತವ’ಗಳನ್ನು ಮೀರಿ ಚಿಂತಿಸಿದಾಗ ಅವು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ ಎಂಬುದೂ ಸತ್ಯವೇ. ನಮ್ಮ ಸಂಶೋಧನೆಗಳು, ಜನಸಾಮಾನ್ಯರ ಸಾಮಾನ್ಯ ಜ್ಞಾನದ ಅಂಗವಾಗದೇ ಆದರ್ಶಮಯವಾದ ಸಂದರ್ಭದಲ್ಲಿನ ಆ ಸಂಶೋಧನೆಗಳು ಕೇವಲ ‘ಕಾಲ್ಪನಿಕ’ವೆನಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಕೆಲವೊಮ್ಮೆ ಈ ಸಂಶೋಧನೆಗಳು ಟೀಕೆಗೆ ಗುರಿಯಾಗುವುದೂ ಉಂಟು.

ಈ ಎಲ್ಲ ಕಾರಣದಿಂದ ಇಂದಿನ ದಿನದಲ್ಲಿ ವಿಶ್ವವಿದ್ಯಾಲಯದ ಸಂಶೋಧನೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವುದು ಸಹಜವೇ. ಆದಾಗ್ಯೂ ಕೆಲವೊಂದು ಸಂದರ್ಭದಲ್ಲಿ ಆಶ್ಚರ್ಯಚಕಿತವಾಗಿ ವಿಶ್ವವಿದ್ಯಾಲಯದ ಸಂಶೋಧನೆಗಳು ರಾಜಕೀಯ ಪಕ್ಷಗಳ ಚುನಾವಣಾ ವಿಷಯವಾಗಿ, ಪ್ರಣಾಳಿಕೆಯಾಗಿ ರೂಪುಗೊಂಡರೂ ಅದು ಅಧಿಕಾರಸ್ಥರ ಕಾರ್ಯಕ್ರಮವಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅಧಿಕಾರಸ್ಥರ ಮನಃಸ್ಥಿತಿ ಕಾರಣವೆಂಬುದನ್ನು ಚರ್ಚಿಸುವ ಅವಶ್ಯಕತೆ ಇಲ್ಲ. ಈ ದುರದೃಷ್ಟಕರ ಪರಿಸ್ಥಿತಿಗೆ ಹೆಚ್ಚಿನ ಕಾರಣ ಇಂದಿನ ‘ರಾಜಕಾರಣಿ’ಗಳೆನಿಸಿದರೂ ವಿಶ್ವವಿದ್ಯಾಲಯಗಳೂ ಸಹ ತಮ್ಮ ‘ಆದರ್ಶಗೋಪುರ’ಗಳಿಂದ ಹೊರಬಿದ್ದು, ವಾಸ್ತವಿಕತೆಗೆ ಸ್ಪಂದಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆಗಲೇ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೂ ಹಾಗೂ ಅಲ್ಲಿನ ಚಿಂತನಾಶೀಲತೆಗೂ ಗೌರವ ದೊರಕುತ್ತದೆ.

‘ಕಾಲ್ಪನಿಕತೆಯಲ್ಲಿ’ ಆದರ್ಶ ಸೃಷ್ಟಿಸಿ ಸುಖ ಪಡುವುದಕ್ಕಿಂತ ವಾಸ್ತವದಲ್ಲಿ ಸತ್ಯಾದರ್ಶಗಳನ್ನು ದರ್ಶಿಸಿ ಪ್ರಜಾಪ್ರಭುತ್ವದ ಬುನಾದಿಯನ್ನು ‘ಪ್ರಕ್ರಿಯಾತ್ಮಕ’ ಪ್ರಜಾಪ್ರಭುತ್ವದೆಡೆಯಿಂದ ‘ಮೂಲಭೂತವಾದ’ ಪ್ರಜಾ ಪ್ರಭುತ್ವದೆಡೆಗೆ ಒಯ್ಯುವುದೇ ಸರಿಯೆಂಬುದು ನನ್ನ ವಾದ. ಆದಾಗ್ಯೂ, ವೈಯಕ್ತಿಕವಾಗಿ ನನಗೆ ಆದರ್ಶ ಹಾಗೂ ವಾಸ್ತವಿಕತೆಗಳ ‘ಸಮ್ಮಿಳಿತ ಸಂಶೋಧನೆ’ ವಿಶ್ವವಿದ್ಯಾಲಯದ ತಳಹದಿಯಾಗಬೇಕೆಂಬುದು ಆಶಯ.

ಈ ಬಗ್ಗೆ ಪರ ವಿರೋಧ ಚರ್ಚೆಗಳು ಅವಶ್ಯಕ ಹಾಗೂ ಅನಿವಾರ್ಯ. ಅದೇನೇ ಇದ್ದರೂ ವಿಶ್ವವಿದ್ಯಾಲಯಗಳು ತಮ್ಮ ಪ್ರತಿಷ್ಠೆ ಹಾಗೂ ಪರಂಪರೆ ಕಾಪಾಡಿಕೊಳ್ಳಬೇಕಾದರೆ, ಅವು ಪ್ರಚಲಿತ ಬರಹಗಾರರಾದ ಡೇವಿಡ್ ಡಿ. ಬನ್ರ್ಸಸ್ಟ್ರೇಯಿನ್ ಹೇಳುವಂತಹ ‘ಪ್ರಾಗ್ಮಟಿಕ್ ಐಡಿಯಲಿಸಂ’ನ (Pಡಿಚಿgmಚಿಣiಛಿ Iಜeಚಿಟism) ಚೌಕಟ್ಟಿನಲ್ಲಿ (ವಿಶ್ವವಿದ್ಯಾಲಯದ) ಸಂಶೋಧನೆಗಳು ಆಗಬೇಕಾ ಗಿದ್ದು ಇಂದಿನ ಅವಶ್ಯಕತೆ. ಇವು ಬದಲಾವಣೆಯನ್ನು ಉತ್ತಮತೆಯೆಡೆಗೆ ಒಯ್ಯುತ್ತವೆ.

*ಲೇಖಕರು ರಾಜಕೀಯ ವಿಜ್ಞಾನ ಬೋಧಕರಾಗಿ 32 ವರ್ಷಗಳ ಅನುಭವ ಹೊಂದಿದ್ದು, ಪ್ರಸ್ತುತ ಕರ್ನಾಟಕ ವಿವಿಯಲ್ಲಿ ಪ್ರಾಧ್ಯಾಪಕರು. ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ, ಸುದ್ದಿವಾಹಿನಿಗಳಲ್ಲಿ ರಾಜಕೀಯ ವಿಶ್ಲೇಷಕರಾಗಿ ಗುರುತಿಸಿಕೊಂಡಿದ್ದಾರೆ.

 

Leave a Reply

Your email address will not be published.