ಸಂಶೋಧನೆಯ ‘ಮಾರ್ಗಾನ್ವೇಷಣೆ’ಯಲ್ಲಿ ನಿತ್ಯಾನಂದ ಶೆಟ್ಟರ ತಾತ್ವಿಕ ಬಿಕ್ಕಟ್ಟುಗಳು!

ರಂಗನಾಥ ಕಂಟನಕುಂಟೆ

ಇದು ಹಲವು ದೃಶ್ಟಿಯಿಂದ ಕನ್ನಡದ ಪಾಂಡಿತ್ಯಪೂರ್ಣವಾದ ಮಹತ್ವದ ಕೃತಿ. ಹಲವು ಪರಸ್ಪರ ವೈರುದ್ಯದ, ಅಸಂಬದ್ಧವಾದ ಸಮಸ್ಯಾತ್ಮಕ ವಿಚಾರಗಳನ್ನು ಲೇಖಕರು ಕೃತಿಯಲ್ಲಿ ಮಂಡಿಸಿದ್ದಾರೆ. ಇಂತಹ ವೈರುಧ್ಯವನ್ನು ಸೃಶ್ಟಿಸುವುದು ಉದ್ದೇಶಪೂರ್ವಕ ಪ್ರಯತ್ನದಂತೆಯೂ ಕಾಣಿಸುತ್ತಿದೆ. ವಿಚಾರಗಳಲ್ಲಿ ಕೆಲವು ಪ್ರಶ್ನಾರ್ಹವಾಗಿವೆ!

ಮಾರ್ಗಾನ್ವೇಷಣೆ

ಸಾಹಿತ್ಯ ಸಂಶೋಧನೆಯ ರೀತಿನೀತಿ

ನಿತ್ಯಾನಂದ ಬಿ. ಶೆಟ್ಟಿ

ವರ್ಷ: 2021

ಪುಟ: 304 ಬೆಲೆ: ರೂ.350

ಪ್ರಕಟಣೆ: ಬೆಸುಗೆ ಪಬ್ಲಿಕೇಷನ್ಸ್, ತುಮಕೂರು.

ಸಂಪರ್ಕ: 89701 62207

ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿಸಂಶೋಧನೆಯು ಪ್ರಮುಖ ಜ್ಞಾನದ ಭೂಮಿಯಾಗಿ ಬೆಳೆದಿದೆ. ಕ್ಶೇತ್ರದ ನಡೆಗೆ, ಏಳುಬೀಳುಗಳಿಗೆ ಒಂದು ಶತಮಾನದ ಚರಿತ್ರೆಯಿದೆ. ಒಂದು ಶತಮಾನದಲ್ಲಿ ನಮ್ಮ ಪೂರ್ವಸೂರಿಗಳು ಸಂಶೋಧನೆಯ ಕ್ಶ್ರೇತ್ರಕ್ಕೆ ಸಾಕಶ್ಟು ಕೊಡುಗೆ ನೀಡಿದ್ದಾರೆ. ಕನ್ನಡ ನಾಡು ನುಡಿಯನ್ನು ಆಧುನಿಕ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ವಿಶೇಶವಾಗಿ ಕನ್ನಡ ನುಡಿಯನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವ ಉದ್ದೇಶದಿಂದ ಕೆಲಸ ಮಾಡಿದ್ದಾರೆ. ‘ತನ್ನತನ ಹುಡುಕಾಟದ ಹಾದಿಯಲ್ಲಿ ಜನಸಮುದಾಯಗಳÀ ‘ಲೋಕದೃಶ್ಟಿಯನ್ನೂ ರೂಪಿಸುವ ಕೆಲಸ ಮಾಡಿದ್ದಾರೆ. ವಸಾಹತುಶಾಹಿ ಸೃಶ್ಟಿಸಿದ ಅವಕಾಶಗಳು ಮತ್ತು ಒತ್ತಡಗಳ ಬಲದಿಂದ ಕೆಲಸ ನಡೆದಿದೆ.

ಕನ್ನಡ ಕಟ್ಟುವ ಕಾಯಕದಲ್ಲಿ ನಮ್ಮ ಪೂರ್ವಸೂರಿಗಳು ಸ್ವಂತ ಆಸಕ್ತಿಯಿಂದ ತೊಡಗಿದ್ದರು. ಕೆಲಸದಲ್ಲಿ ತೊಡಗಿದವರೆಲ್ಲ ತಮ್ಮದೇ ಆದ ಸಂಶೋಧನೆಯ ಪಥವನ್ನು ರೂಢಿಸಿಕೊಂಡಿದ್ದರು. ಉದಾಹರಣೆಗೆ ಗೋವಿಂದ ಪೈ, ಎಂ.ಎಚ್.ಕೃಶ್ಣ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಶ್ಣಭಟ್ಟ, ಆಲೂರು ವೆಂಕಟರಾವ್ ಮುಂತಾದವರನ್ನು ಇಲ್ಲಿ ಗಮನಿಸಬಹುದು. ಆನಂತರದಲ್ಲಿ ನಮ್ಮ ನೆಲದಲ್ಲಿ ವಿಶ್ವವಿದ್ಯಾಲಯಗಳು ಆರಂಭವಾದ ನಂತರ ಸಂಶೋಧನೆಗೆ ಒಂದು ಅಧಿಕೃತವಾದ ಶೈಕ್ಶಣಿಕ ರೂಪ ದೊರೆಯತೊಡಗಿತು. ಮುಖ್ಯವಾಗಿ ಪಿಎಚ್.ಡಿ. ಸಂಶೋಧನೆಗಳ ರೂಪದಲ್ಲಿ ಇದು ಮುಂದುವರೆಯಿತು. ಡಾ.ಪ್ರಭುಶಂಕರ, ಡಾ.ಜಿ.ಎಸ್.ಶಿವರುದ್ರಪ್ಪ, ಡಾ.ಬಿ.ಎಸ್.ಗದಗೀಮಠ ಹೀಗೆ ಅಸಂಖ್ಯರು ಪರಂಪರೆಯಲ್ಲಿ ಬರುತ್ತಾರೆ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಒಂದು ಪ್ರಮುಖ ಚಟುವಟಿಕೆಯೆಂದು ನಿರ್ಧಾರವಾಗಿದೆ. ಇದು ಆರಂಭವಾಗಿ ಸುಮಾರು ಮುಕ್ಕಾಲು ಶತಮಾನ ಕಳೆದರೂ ಕೂಡ ಕನ್ನಡ ಸಂಶೋಧನೆಯ ಅಧ್ಯಯನ ವಿಧಾನಗಳಿಗೆ ಒಂದುಪ್ರಮಾಣರೂಪಬಂದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ. ರೂಪದಲ್ಲಿ ಆರಂಭಗೊಂಡಸಂಶೋಧನೆಕಾರ್ಯವು ವೈಯಕ್ತಿಕ ನೆಲೆಗಳಲ್ಲಿ ತನ್ನದೇ ಆದ ಗುಣಮಟ್ಟದೊಂದಿಗೆ ಮುಂದುವರಿದಿದೆ. ಆದರೆ ಎಲ್ಲ ಸಂಶೋಧನೆಗಳಿಗೆ ಮಾತನ್ನು ಹೇಳಲಾಗುವುದಿಲ್ಲ. ಅದರಲ್ಲಿಯೂ ಹೊಸದಾಗಿ ಪಿಎಚ್.ಡಿ ಮಾಡಲು ವಿಶ್ವವಿದ್ಯಾಲಯಗಳಿಗೆ ಬರುವವರಿಗೆ ಹಲವು ಬಗೆಯ ಗೊಂದಲಗಳು ಇವೆ. ಕೇವಲ ಗೊಂದಲಗಳು ಮಾತ್ರವಲ್ಲದೆ ಸಂಶೋಧನೆಯ ಮೂಲಭೂತ ಸಂಗತಿಗಳೇ ಪರಿಚಯವಿಲ್ಲದಿರುವುದೂ ಇದೆ.

ಇತ್ತೀಚಿನ ವರುಶಗಳಲ್ಲಿಯಂತೂ ಇದು ಇನ್ನಶ್ಟು ಬೃಹದಾಕಾರವಾಗಿ ಬೆಳೆದು ಪಿಎಚ್.ಡಿ. ಸಂಶೋಧನೆ ಎಂಬುದೇ ನಗೆಪಾಟಲಿನ ಸಂಗತಿಯಾಗಿದೆ. ಇಂತಹ ಬಿಕಟ್ಟನ್ನು ಬಗೆಹರಿಸುವ, ಸಂಶೋಧಕರಿಗೆ ಮಾರ್ಗದರ್ಶನ ಮಾಡುವಕೈಪಿಡಿರೂಪದ ಹೊತ್ತಗೆಗಳು ಸಾಕಶ್ಟು ಇರಲಿಲ್ಲ. ಬಿ.ವಿ.ಶಿರೂರ, ಚಿದಾನಂದಮೂರ್ತಿ ಮುಂತಾದವರು ಸಂಶೋಧಕರಿಗೆ ನೆರವಾಗುವಂತಹ ಕೆಲವು ಕೃತಿಗಳನ್ನು ಹೊರತಂದರು. ಇವು ಸಂಶೋಧನೆಯ ತಾಂತ್ರಿಕ ಸಂಗತಿಗಳ ಮೇಲೆ ಗಮನಹರಿಸಿದ್ದವು. ಅವು ಕಾಲದ ಸಂಶೋಧನೆಯ ಆಶಯಕ್ಕೆ ಪೂರಕವಾಗಿರಲಿಲ್ಲ.

ನಂತರ ಕನ್ನಡ ವಿಶ್ವವಿದ್ಯಾಲಯ ಆರಂಭವಾಗಿ ಕನ್ನಡ ಸಂಶೋಧನೆಯನ್ನೇ ಪ್ರಮುಖ ಕೆಲಸವಾಗಿಸಿಕೊಂಡ ನಂತರ ಸಾಹಿತ್ಯ ಮತ್ತು ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ನೆರವಾಗುವಕೈಪಿಡಿಗಳನ್ನು ರೂಪಿಸುವ ಕೆಲಸ ಮಾಡಲಾಯಿತು. ಚಂದ್ರ ಪೂಜಾರಿ, ಅಮರೇಶ ನುಗಡೋಣಿ, ಬಿ.ಎಂ.ಪುಟ್ಟಯ್ಯ ಮತ್ತು ರಹಮತ್ ತರೀಕೆರೆ ಮುಂತಾದವರು ಕೃತಿಗಳನ್ನು ಹೊರತಂದರು. ಆದರೂ ಸಂಶೋಧನೆಯ ಶಿಸ್ತನ್ನು ಪ್ರಮಾಣೀಕರಿಸುವ, ಅಧಿಕೃತಗೊಳಿಸುವ ಕೆಲಸ ಇನ್ನೂ ಮುಗಿದಿಲ್ಲ. ಕೆಲಸ ಮುಂದುವರಿದೇ ಇದೆ. ದಾರಿಯಲ್ಲಿ ಬಂದಿರುವ ಮಹತ್ವದ ಕೃತಿ ಡಾ.ನಿತ್ಯಾನಂದ ಬಿ.ಶೆಟ್ಟಿಯವರಮಾರ್ಗಾನ್ವೇಶಣೆ.

ಕೃತಿಯ ಆಶಯವೇ ಕನ್ನಡ ಸಾಹಿತ್ಯ ಸಂಶೋಧನಾ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವುದು. ಸಂಶೋಧಕರಲ್ಲಿ ಗೊಂದಲಗಳನ್ನು ನಿವಾರಿಸುವುದು. ಅವರಿಗೆ ಕನ್ನಡ ಸಂಶೋಧನೆ ಪರಂಪರೆಯನ್ನು ಪರಿಚಯಿಸುವುದಾಗಿದೆ. ಮೂಲಕ ಇನ್ನೂ ಒಂದು ನಿರ್ದಿಶ್ಟಪ್ರಮಾಣರೂಪವನ್ನು ಪಡೆದುಕೊಳ್ಳದ ಕನ್ನಡ ಸಾಹಿತ್ಯ ಸಂಶೋಧನೆಗೆ ಒಂದು ಬುನಾದಿ ರೂಪಿಸುವುದು ಕೃತಿಯ ಉದ್ದೇಶ. ದೃಶ್ಟಿಯಿಂದ ನೋಡಿದರೆ ಇದು ಕನ್ನಡದ ಮಹತ್ವದ ಕೃತಿ.

ಕನ್ನಡ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳುಸಂಶೋಧನೆಯಲ್ಲಿ ತೊಡಗಿಕೊಳ್ಳುವ ಮೊದಲು ತಪ್ಪದೆ ಕೃತಿಯನ್ನು ಒಮ್ಮೆ ಓದಲೇಬೇಕಿದೆ. ಯಾಕೆಂದರೆ ಕನ್ನಡ ಸಂಶೋಧನೆಗೆ ಶತಮಾನದ ಚರಿತ್ರೆಯಿದ್ದರೂ ಕೆಲವು ಮೂಲಭೂತ ವಿಚಾರಗಳ ಬಗೆಗೆ ಸಂಶೋಧಕರಲ್ಲಿ ಇಂದಿಗೂ ಗೊಂದಲಗಳಿವೆ. ಅಂತಹ ಗೊಂದಲಗಳನ್ನು ನಿವಾರಿಸುವ ಕೆಲಸವನ್ನು ಕೃತಿ ಮಾಡುತ್ತದೆ. ಮುಖ್ಯವಾಗಿ ತತ್ವಸಿದ್ದಾಂತಐಡಿಯಾಲಜಿ, ವಿಧಾನವಿಧಾನಕ್ರಮ, ಫಿಲಾಸಫಿ, ಮುಂತಾದ ಪರಿಕಲ್ಪನೆಗಳ ನಡುವಿನ ಗೊಂದಲವನ್ನು ಪರಿಹರಿಸುವ ಕೆಲಸ ಮಾಡಿದ್ದಾರೆ. ಹಾಗೆಯೇ ಕನ್ನಡ ಸಾಹಿತ್ಯ ಚರಿತ್ರೆ, ಗ್ರಂಥ ಸಂಪಾದನೆ, ಶಾಸನ, ಹಸ್ತಪ್ರತಿ, ಭಾಶೆ, ವ್ಯಾಕರಣ ಮುಂತಾದ ಕ್ಶೇತ್ರಗಳಲ್ಲಿ ಕಳೆದ ನೂರು ವರುಶಗಳಲ್ಲಿ ನಡೆದಿರುವ ಚರಿತ್ರೆಯ ಪರಿಶೀಲಿಸುವ ಕೆಲಸವನ್ನು ಮಾಡಲಾಗಿದೆ.

ಇದು ಹೊಸದಾಗಿ ಸಂಶೋಧನೆಯಲ್ಲಿ ತೊಡಗುವವರಿಗೆ ಕನ್ನಡ ಸಂಶೋಧನೆಯ ಕ್ಶ್ರೇತ್ರದ ಒಂದು ಸ್ಥೂಲ ಪರಿಚಯ ಮಾಡಿಕೊಡುತ್ತದೆ. ವಸಾಹತುಶಾಹಿ ಶಿಕ್ಶಣ ವ್ಯವಸ್ಥೆಯಿಂದ ನಮ್ಮ ಸಂದರ್ಭದಲ್ಲಿ ರೂಪುಗೊಂಡ ಆರಂಭ ಕಾಲದ ಸಂಶೋಧಯ ಚಾರಿತ್ರಿಕ ಹಿನ್ನೆಲೆಯನ್ನೂ ಕಟ್ಟಿಕೊಟ್ಟಿದೆ. ಎಲ್ಲ ದೃಶ್ಟಿಯಿಂದ ನೋಡಿದರೆ ಇದು ಬಹಳ ಪಾಂಡಿತ್ಯಪೂರ್ಣವಾದ ಮಹತ್ವದ ಕೃತಿ.

ಕೃತಿಯ ಇನ್ನೊಂದು ಮಹತ್ವದ ಗುಣವೆಂದರೆ ಇದರ ನಿರೂಪಣೆಯ ಕ್ರಮ. ಗಾಂಧೀಜಿ ತಮ್ಮ ಹಿಂದ್ ಸ್ವರಾಜ್ ಕೃತಿಯನ್ನು ನಿರೂಪಿಸಿರುವಮಾತುಕತೆ ಶೈಲಿಯಲ್ಲಿ ನಿರೂಪಿಸಲಾಗಿದೆ. ಹಾಗೆ ನಿರೂಪಿಸುವ ಹೊತ್ತಿನಲ್ಲಿ ಖಚಿತವಾದ ಅಸಂಖ್ಯ ಪ್ರಶ್ನೆಗಳನ್ನು ಕೇಳಿಕೊಂಡಿದ್ದಾರೆ. ಹಾಗೆ ಪ್ರಶ್ನೆ ಮತ್ತು ಉತ್ತರದ ಮಾತುಕತೆಯ ರೂಪದಲ್ಲಿ ಇರುವುದರಿಂದ ಕೃತಿಗೆ ಒಂದು ಫೋಕಸ್ ಇದೆ. ಖಚಿತತೆಯ ಗುಣವಿದೆ. ಮೂಲಕ ಕನ್ನಡ ಸಂಶೋಧನೆ ಎದುರಿಸುತ್ತಿರುವುದರ ಬಗೆಗೆ ಖಚಿತ ಪ್ರಶ್ನೆಗಳನ್ನು ಕೇಳಿಕೊಂಡು ಅವುಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸಿರುವುದರಿಂದ ಕನ್ನಡ ಸಂಶೋಧನೆ ಎದುರಿಸುತ್ತಿರುವ ಸಮಸ್ಯೆಗಳ ಪರಿಚಯವಾಗಿ ಅದರಿಂದ ಹೊರಬರುವ ದಾರಿಗಳ ಬಗೆಗೆ ಯೋಚಿಸುವಂತೆ ಮಾಡುತ್ತದೆ. ಅಂದರೆ ಕನ್ನಡ ಸಂಶೋಧನೆ ಎದುರಿಸುತ್ತಿರುವ ಸವಾಲುಗಳು ಮತ್ತು ಅದರಿಂದ ಬಿಡುಗಡೆ ಪಡೆಯಲು ಇರುವ ಹೊರದಾರಿಗಳ ಬಗೆಗೆ ಆದ್ಯತೆಯ ಮೇರೆಗೆ ಚರ್ಚಿಸಲಾಗಿದೆ.

ಹೀಗೆ ಸಾಹಿತ್ಯ ಸಂಶೋಧನೆಯ ಬಿಕ್ಕಟ್ಟುಗಳ ಬಗೆಗೆ ಚರ್ಚಿಸುವ ಹೊತ್ತಿನಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ವಿಚಾರಗಳು ಹಲವು ಪ್ರಶ್ನಾರ್ಹವಾಗಿವೆ. ಅವನ್ನು ಬಹಳ ಉದ್ದವಾಗಿ ಚರ್ಚಿಸಬಹುದು. ಆದರೆ ಇಲ್ಲಿ ಅದಕ್ಕೆ ಅವಕಾಶವಿಲ್ಲದ ಕಾರಣ ಕೆಲವನ್ನು ಮಾತ್ರ ಇಲ್ಲಿ ವಿವರಿಸಲು ಬಯಸುತ್ತೇನೆ.

ಒಂದು:

ಸಾಹಿತ್ಯವನ್ನು ಒಂದು ಸ್ವಾಯತ್ತ ಸಂಸ್ಥೆ ಎನ್ನುವಂತೆ ಮಂಡಿಸಲಾಗಿದೆ. ಹಾಗೆ ಬಿಂಬಿಸುತ್ತ ಸಾಹಿತ್ಯವನ್ನು ಹೊರಗಿನ ಸಿದ್ದಾಂತಗಳಿಂದ ವಿಮರ್ಶೆ ಮಾಡಬಾರದು ಎಂಬಂತೆ ಧೋರಣೆ ತಳೆಯಲಾಗಿದೆ. ಮೊದಲಿಗೆಸಾಹಿತ್ಯಎಂಬ ಕಲಾಕೃತಿ ಎಂದಾದರೂ ಒಂದುಸ್ವಾಯತ್ತ ಸಂಸ್ಥೆಯಾಗಿರಲು ಸಾಧ್ಯವೇ? ಎಂಬ ಎದುರು ಪ್ರಶ್ನೆ ಇಲ್ಲಿನದು. ಯಾಕೆಂದರೆ ಬರೆಹಗಾರರು ಮತ್ತು ಅವರ ಸಾಹಿತ್ಯ ಕೃತಿಗಳು ಕಾಲದೇಶಾತೀತವಾಗಿರಲು ಸಾಧ್ಯವಿಲ್ಲ. ಹಾಗಾಗಿ ಸಾಹಿತ್ಯ ಕೃತಿಗಳನ್ನು ಹೊರಗಿನ ಚಿಂತನೆಗಳಿಂದ ಎದುರುಗೊಳ್ಳಲೇಬಾರದು ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಸಾಹಿತ್ಯ ಕೃತಿಗಳನ್ನು ಅದರ ಆಂತರಿಕ ಸಂಗತಿಗಳು ಮತ್ತು ಹೊರಗಿನ ತತ್ವಗಳ ನೆರವಿನಿಂದ ವಿಮರ್ಶೆ ಮಾಡುವುದನ್ನು ನಿರಾಕರಿಸಲಾಗದು. ಯಾವುದೇ ಸಾಹಿತ್ಯ ಕೃತಿಗೆ ಒಂದೇ ಬಗೆಯ ಓದುಗಳಲ್ಲದೆ ಯುಗಧರ್ಮಕ್ಕೆ ತಕ್ಕಂತೆ ಸಾಹಿತ್ಯವನ್ನು ಓದಲಾಗುತ್ತದೆ. ಅಂದರೆ ಸಾಹಿತ್ಯವನ್ನು ಓದುವ ಮಾದರಿಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ.

ಹಾಗಾಗಿ ಇಲ್ಲಿನ ಮುಖ್ಯಪ್ರಶ್ನೆಯೆಂದರೆಸಾಹಿತ್ಯವನ್ನು ಒಳಗಿನ ಮತ್ತು ಹೊರಗಿನ ಮಾನದಂಡಗಳನ್ನು ಬಳಸಿ ಓದುವುದು ಒಂದು ಬಗೆಯಾದರೆ ಅವುಗಳಿಂದ ನಾವು ಕಟ್ಟಿಕೊಳ್ಳುವವಿಚಾರಧಾರೆಇಲ್ಲವೇಚಿಂತನೆಯ ಮಾದರಿಯಾವುದು ಎಂಬುದು ಪ್ರಮುಖವಾಗುತ್ತದೆ. ಯಾವುದೇ ಸಂಶೋಧನೆಯ ಕಾರ್ಯವು ಜ್ಞಾನಕ್ಕಾಗಿ ಜ್ಞಾನ ಎಂಬಂತೆ ಅಲ್ಲ. ಸಂಶೋಧನೆಯಿಂದ ಕಟ್ಟಿಕೊಳ್ಳುವ ಅರಿವು ಬದುಕನ್ನು ಮತ್ತು ನಮ್ಮ ಇದುವರೆಗಿನ ಆಲೋಚನೆಯ ಕ್ರಮವನ್ನು ಬದಲಿಸುವಂತಿರಬೇಕು. ಸದ್ಯದ ನಮ್ಮ ಸಮಾಜದ ಆಲೋಚನೆಯ ಕ್ರಮ ಅಸಮಾನತೆಯ ತಳಹದಿಯ ಮೇಲೆ ರೂಪುಗೊಂಡಿದೆ. ಅದೇ ಅಸಮಾನತೆಯ ಅಂಶಗಳೇ ನಮ್ಮ ಸಾಹಿತ್ಯ ಸಂಸ್ಕøತಿ, ಮನರಂಜನೆ ಮತ್ತು ಜೀವನ ಕ್ರಮ ಎಲ್ಲವನ್ನೂ ನಿರ್ಧರಿಸುತ್ತವೆ. ಇಂತಹ ಅಸಮಾನತೆಯ ಸಂಗತಿಗಳನ್ನು ಬಗೆಹರಿಸಿಕೊಂಡೇ ಸಾಹಿತ್ಯ ಮೀಮಾಂಸೆಯನ್ನು ರೂಪಿಸಬೇಕಿದೆ. ಮೂಲಕ ಜೀವನಮೀಮಾಂಸೆಯನ್ನು ರೂಪಿಸಬೇಕಿದೆ.

ಇದರಲ್ಲಿ ಮೂಲಭೂತ ಬದಲಾವಣೆಯಾಗದೆ ನಮ್ಮ ಸಮಾಜದಲ್ಲಿನ ಯಾವುದೇ ಚಿಂತನೆಗಳು ನೈಜ ಮತ್ತು ಮಾನವೀಯ ಚಿಂತನೆಗಳಾಗಿರಲು ಸಾಧ್ಯವಿಲ್ಲ. ಅವು ಪರೋಕ್ಶವಾಗಿ ಅಸಮಾನತೆಯನ್ನು ಪೋಶಿಸುತ್ತಿರುತ್ತವೆ. ಸಂಶೋಧನೆ ಪ್ರಮುಖ ಉದ್ದೇಶವೇ ಇಂತಹ ಅಸಮಾನತೆಯ ಬೇರುಗಳನ್ನು ಕದಲಿಸಿ ಸಮಾನತೆಯ ಕನಸಿಗಾಗಿ ಮತ್ತೆ ಮತ್ತೆ ತುಡಿಯುವುದಾಗಿರುತ್ತದೆ. ಆದರೆ ಪ್ರಸ್ತುತ ಕೃತಿ ವಿಚಾರವನ್ನು ಉದ್ದೇಶಪೂರಕವಾಗಿ ಬಚ್ಚಿಟ್ಟಿದೆ ಎನ್ನಿಸುತ್ತದೆ. ಬಹಳ ಪಾಂಡಿತ್ಯಪೂರ್ಣವಾಗಿ ನಿರೂಪಿತವಾಗಿರುವ ಕೃತಿಯಲ್ಲಿ ಸಂಶೋಧನೆ ಸೃಶ್ಟಿಯಾಗುವಜ್ಞಾನಯಾರಿಗೆ ಬೇಕಾಗಿದೆ? ಅದನ್ನು ಯಾರ ಒಳಿತಿಗಾಗಿ ಬಳಸಬೇಕಾಗಿದೆ? ಎಂಬ ಪ್ರಶ್ನೆಗಳನ್ನೇ ಕೇಳಿಕೊಂಡಿಲ್ಲ. ಇಲ್ಲಿನ ಅಸಂಖ್ಯ ಪ್ರಶ್ನೆಗಳಲ್ಲಿ ಪ್ರಶ್ನೆಗಳೇ ಸೇರಿಲ್ಲದಿರುವುದು ಅಚ್ಚರಿಯ ಸಂಗತಿ.

ಅಂದರೆ ಯಾರೇ ಸಂಶೋಧಕರು ಹೊಸದಾಗಿ ಸಂಶೋಧನೆ ಕ್ಶೇತ್ರಕ್ಕೆ ಪ್ರವೇಶಿಸಿದವರಿಗೆ ನೀಡಬೇಕಾದ ಮೊದಲ ಅರಿವು ಇದೇ ಆಗಿರುತ್ತದೆ. ಸಂಶೋಧನೆಗಳಿಂದ ಹುಟ್ಟುವ ಜ್ಞಾನವನ್ನು ಯಾರ ಒಳಿತಿಗೆ ಬಳಸಬೇಕು ಎಂಬುದರ ಸೂಕ್ತ ಅರಿವು ನೀಡಬೇಕು. ಅಂತಹ ಅರಿವಿನ ಅದರ ತಳಹದಿಯ ಮೇಲೆ ಯಾವುದೇ ವಿಶಯವನ್ನು ಅಧ್ಯಯನ ಮಾಡಲು ಬೇಕಾದ ವಿಧಾನ ಕ್ರಮಗಳನ್ನು ಹೇಳಿಕೊಡಬೇಕಾಗುತ್ತದೆ. ಕೇವಲ ವಿಧಾನಕ್ರಮಗಳನ್ನು ಮಾತ್ರ ಹೇಳಿಕೊಟ್ಟು ಸಂಶೋಧನೆಯ ಪ್ರಮುಖ ಉದ್ದೇಶವನ್ನೇ ಹೇಳಿಕೊಡದಿದ್ದರೆ ಇಂತಹ ಕೃತಿಗಳ ಆಶಯವು ಪ್ರಶ್ನಾರ್ಹವಾಗುತ್ತದೆ. ಮತ್ತು ಜ್ಞಾನವೆನ್ನುವುದು ವ್ಯಕ್ತಿಯ ಅಹಂಕಾರ ಪ್ರದರ್ಶನದ ಇಲ್ಲವೇ ಬೌದ್ಧಿಕ ವ್ಯಸನದ ಸಂಗತಿಯಾಗಿಬಿಡುವ ಅಪಾಯವಿರುತ್ತದೆ. ಎಚ್ಚರ ಅತ್ಯಂತ ಅಗತ್ಯ.

ಎರಡು:

ಕೃತಿಯಲ್ಲಿ ಮತ್ತೊಂದು ಸಂಗತಿ ಪ್ರಶ್ನಾರ್ಹವಾಗಿದೆ. ಅದೇನೆಂದರೆ ಯಾವುದೇ ನಿರ್ದಿಶ್ಟ ಜ್ಞಾನಶಾಖೆಗೆ ಸೇರಿದ ಅರಿವನ್ನು ಮಂಡಿಸುವಾಗ ಕ್ಲಿಶ್ಟವಾದ ಪರಿಭಾಶೆ ಪರಿಕಲ್ಪನೆಗಳನ್ನು ಬಳಸಲೇಬೇಕು. ಅದನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವನ್ನು ಓದುಗರು ತಿಳಿದಿರಲೇಬೇಕಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲಾಗದಿದ್ದರೆ ಅದು ಓದುಗರ ಅಸಾಮಥ್ರ್ಯವಾಗಿರುತ್ತದೆ ಎಂಬಂತೆ ನಿರೂಪಿಸಲಾಗಿದೆ. ಅಲ್ಲದೆ ವಿಶಯವನ್ನು ಸರಳವಾಗಿ ಬರೆಯುವ ಬದಲು ಅದನ್ನು ಸಂಕೀರ್ಣವಾಗಿಯೇ ಮಂಡಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ವಿಚಾರವೂ ಪ್ರಶ್ನಾರ್ಹ. ಯಾಕೆಂದರೆ, ಸರಳವಾಗಿ ಬರೆಯುವುದು ಬರೆಹದ ದೋಶವಲ್ಲ. ಸರಳವಾಗಿ ಬರೆಯಲು ಅತಿ ಹೆಚ್ಚು ಕಶ್ಟಪಡಬೇಕಾಗುತ್ತದೆ.

ರವೀಂದ್ರನಾಥ ಟಾಗೋರ್ಗೀತಾಂಜಲಿಯಲ್ಲಿ ಸರಳವಾಗಿ ಬರೆಯುವುದಕ್ಕಿಂತ ಕಶ್ಟವಾದುದು ಯಾವುದೂ ಇಲ್ಲ ಎಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದೇ ಕೇವಲ ಬೌದ್ಧಿಕ ವ್ಯಸನ, ಸಂಶೋಧಕರಿಗೇ ಅರ್ಥವಾಗದಿರುವ ಪದಗಳನ್ನು ಅರ್ಥವಾಗಿರುವಂತೆ ಫೋಸು ಕೊಡಲು ಬಳಸುವುದು ಸರಿಯಲ್ಲ. ಇದು ಸಂಶೋಧಕರ ಅಪ್ರಾಮಾಣಿಕತೆಯ ಸಂಗತಿ ಮತ್ತು ತಾವು ಮಂಡಿಸಲು ಹೊರಟಿರುವ ವಿಚಾರದ ಬಗೆಗೆ ಕಾಳಜಿ ಇಲ್ಲದಂತೆ ಕಾಣುತ್ತದೆ. ಯಾವುದೇ ಜ್ಞಾನವಲಯದಲ್ಲಿ ಆಳವಾಗಿ ಅಧ್ಯಯನ ನಡೆಸಿ ಅದರ ಮೇಲೆ ಹಿಡಿತ ಸಾಧಿಸಿದವರು ಸಾಧ್ಯವಾದಶ್ಟು ಸರಳವಾಗಿ ಬರೆಯಲು ಪ್ರಯತ್ನಿಸುತ್ತಾರೆ. ಅಂದರೆ ಜ್ಞಾನದ ಅತ್ಯುನ್ನತ ಸಾಧನೆಯೆಂದರೆ ತಮಗೆ ತಿಳಿದ ವಿಚಾರಗಳನ್ನು ಅತ್ಯಂತ ಸ್ಪಶ್ಟ ಮತ್ತು ಸರಳವಾಗಿ ನಿರೂಪಿಸುವುದೇ ಆಗಿದೆ.

ಕನ್ನಡದ ಬಹುತೇಕ ಸಂಶೋಧನೆಯ ಬರೆಹಗಳು ಸ್ಪಶ್ಟತೆಯಿಲ್ಲದ ಪೆಡಸು ಪೆಡಸಾದ ವಾಕ್ಯಗಳು ಪರಿಭಾಶೆಗಳಿಂದ ಕೂಡಿದ್ದು ಅವು ಯಾರಿಗೂ ಅರ್ಥವಾಗದಂತಿವೆ. ಇಂತಹ ಬರೆಹಗಳಿಂದ ಏನು ಪ್ರಯೋಜನ? ಯಾವುದೇ ಗದ್ಯ ಬರೆಹವಾಗಲಿ ಇಲ್ಲವೇ ಸಂಶೋಧನೆಯ ಬರೆಹವಾಗಲಿ; ಅವು ಸರಳ, ಸ್ಪಶ್ಟ ಮತ್ತು ಪರಿಭಾಶೆಗಳ ಭಾರವಿಲ್ಲದ ಹಾಗೆ ನಿರೂಪಿಸಬೇಕಾಗುತ್ತದೆ. ಅದಿಲ್ಲದೆ ಅನಗತ್ಯವಾಗಿ ಪರಿಭಾಶೆಪರಿಕಲ್ಪನೆಗಳನ್ನು ವಾಕ್ಯಗಳಲ್ಲಿ ತುರುಕಿದರೆ ಅಂತಹ ಬರೆಹಗಳನ್ನು ಜ್ಞಾನಾಸಕ್ತರನ್ನು ಸೆಳೆಯುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದೆ ಸಂಕೀರ್ಣವಾಗಿ ಬರೆಯುವದೇ ದೊಡ್ಡಸ್ತಿಕೆ ಎಂದು ಭಾವಿಸಿದರೆ ಅದಕ್ಕಿಂತ ದೊಡ್ಡದುರಂತ ಮತ್ತೊಂದಿಲ್ಲ.

ಮೂರು:

ಕೃತಿಯಲ್ಲಿ ಇನ್ನೊಂದು ಸಂಗತಿ ಇದೆ. ಅದೇನೆಂದರೆ ಗಾಂಧಿ ಮತ್ತು ಸಾವರ್ಕರ್ಗೋಡ್ಸೆ ಸಮಾನರು! ಗಾಂಧಿ ಮತ್ತು ಗೋಡ್ಸೆ ಇಬ್ಬರನ್ನೂ ಸಮಪಾತಳಿಯಲ್ಲಿಟ್ಟು ನೋಡುವ ಚರ್ಚಿಸುವ ಉದ್ದೇಶವೇ ಅರ್ಥವಾಗುವುದಿಲ್ಲ. ಇಲ್ಲಿ ಲೇಖಕರ ಮಾತನ್ನೇ ಉಲ್ಲೇಖಿಸುತ್ತೇನೆ. “ ಎಲ್ಲ ಸಂವಾದವನ್ನು ಸೂತ್ರರೂಪದಲ್ಲಿ ಮಾನವೀಕರಣಗೊಳಿಸಿ ಹೇಳುವುದಾದರೆ, ಮಹಾತ್ಮಾ ಗಾಂಧಿಯವರು ತತ್ವಜ್ಞಾನಿ, ವಿನಾಯಕ ದಾಮೋದರ ಸಾವರ್ಕರ್ ಓರ್ವ ಸಿದ್ದಾಂತಿ, ನಾಥೂರಾಮ ಗೋಡ್ಸೆ ಒಬ್ಬ ಕಾರ್ಯಕರ್ತ(ಪು.59) ಎಂದಿದ್ದಾರೆ. ಇಲ್ಲಿ ಯಾರನ್ನುಮಾನವೀಕರಣಗೊಳಿಸಲಾಗುತ್ತಿದೆ ಎಂಬುದನ್ನು ಓದುಗರೇ ತೀರ್ಮಾನಿಸಬೇಕು. ಸಾವರ್ಕರ್ ಮತ್ತು ಗೋಡ್ಸೆ ಅವರನ್ನು ಗಾಂಧಿ ಅವರಿಗೆ ಸಮಾನವೆಂದು ಭಾವಿಸಿ ಚರ್ಚೆ ಮಾಡುವುದರ ನಿಡುಗಾಲದ ಪರಿಣಾಮಗಳ ಬಗೆಗೆ ಇಂತಹ ಕೃತಿಯನ್ನು ರಚಿಸುವವರಿಗೆ ಅರಿವಿರಬೇಕು. ಅದಿಲ್ಲದೇ ಹೋದರೆ ಸಂಶೋಧಕರು ಮತ್ತೆ ಮತ್ತೆ ದಾರಿ ತಪ್ಪುವ ಅಪಾಯಗಳೇ ಹೆಚ್ಚು. ಇಲ್ಲವೇ ಉದ್ದೇಶಪೂರಕವಾಗಿ ಹಾದಿ ತಪ್ಪಿಸಲಾಗುವುದೇ?

ನಾಲ್ಕು:

ಕೃತಿಯಲ್ಲಿ ಎಡಪಂಥ ಮತ್ತು ಬಲಪಂಥಗಳ ಚಿಂತನೆಗಳನ್ನುಸಮನ್ವಯಗೊಳಿಸುವ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಒಂದು ಉದಾಹರಣೆಯಾಗಿ ಕೃತಿಯಲ್ಲಿ ವಿವರಗಳನ್ನು ಪರಿಗಣಿಸಬಹುದು. “ಎಸ್.ಎಲ್.ಭೈರಪ್ಪನವರು ಪರ್ವ ಮತ್ತು ಉತ್ತರಕಾಂಡವನ್ನು ರಿಯಲಿಸ್ಟಿಕ್ಗೊಳಿಸಿದ್ದಾರೆ. ರಾಮಾಯಣ ಮಹಾಭಾರತಗಳನ್ನು ನಿನ್ನೆ ಮೊನ್ನೆ ನಡೆದಐತಿಹಾಸಿಕ ಸತ್ಯವಾಗಿಸಿದ್ದಾರೆ. ‘ಕಾವ್ಯಸತ್ಯ ಮೇಲೆ ನಂಬಿಕೆಯಿಲ್ಲದೆ, ‘ಐತಿಹಾಸಿಕ ಸತ್ಯಕಟ್ಟುವುದರ ಬಗ್ಗೆಯೇ ಆಸಕ್ತಿ ಹೊಂದಿರುವುದರಿಂದ ಭೈರಪ್ಪನವರು ನಮ್ಮ ಬಲಪಂಥೀಯರಿಗೆ ಹತ್ತಿರವಾಗುತ್ತಾರೆ. ವಿಚಿತ್ರ ಎಂದರೆ ನಮ್ಮ ಕೆಲ ಎಡಪಂಥೀಯರಿಗೂ ಕಾವ್ಯಸತ್ಯ ಬಗ್ಗೆ ನಂಬಿಕೆಯಿಲ್ಲಎನ್ನುತ್ತಾರೆ (ಪು.64).

ಇಲ್ಲಿ ಕುತೂಹಲ ಮೂಡಿಸಿದ ಸಂಗತಿಯೆಂದರೆನಮ್ಮ ಬಲಪಂಥೀಯರು ಮತ್ತು ನಮ್ಮ ಎಡಪಂಥೀಯರುಎಂಬ ಭಾಶಾ ಬಳಕೆ. ಎಡಬಲಗಳೆರಡೂ ಏಕಕಾಲಕ್ಕೆನಮ್ಮದಾಗಲು ಸಾಧ್ಯವೇ? ಕಾಲದಲ್ಲಿ ಒಂದೋ ನೀವು ಎಡಪಂಥೀಯರಾಗಿರಬೇಕು; ಇಲ್ಲವೇ ಬಲಪಂಥೀಯರಾಗಿರಬೇಕು. ಏಕಕಾಲದಲ್ಲಿ ಎರಡೂ ಆಗಿರಲು ಸಾಧ್ಯವೇ ಇಲ್ಲ. ಅದು ಹೇಗೆ ಎರಡರ ಮೇಲೂ ಮೋಹಗೊಳ್ಳಲು ಕಾಲದಲ್ಲಿ ಸಾಧ್ಯ ಎಂಬ ಸಂಶಯ ಕೃತಿಯನ್ನು ಓದಿದ ನಂತರ ಮತ್ತಶ್ಟು ಕಾಡುತ್ತಿದೆ. ಇಲ್ಲವೇ ಸುಪ್ತವಾದ ಬಯಕೆಗಳು ಹೇಗೆ ಭಾಶೆಯ ಮೂಲಕ ಹೇಗೆಲ್ಲ ಬಹಿರಂಗಗೊಳ್ಳುತ್ತವೆಯಲ್ಲವೇ? ಎಂದು ಅನ್ನಿಸತೊಡಗಿದೆ.

ಹೀಗೆ ಹಲವು ಪರಸ್ಪರ ವೈರುದ್ಯದ, ಅಸಂಬದ್ಧವಾದ ಸಮಸ್ಯಾತ್ಮಕ ವಿಚಾರಗಳನ್ನು ಕೃತಿಯಲ್ಲಿ ಮಂಡಿಸಿದ್ದಾರೆ. ಇಂತಹ ವೈರುಧ್ಯವನ್ನು ಸೃಶ್ಟಿಸುವುದು ಉದ್ದೇಶಪೂರ್ವಕ ಪ್ರಯತ್ನದಂತೆಯೂ ಕಾಣಿಸುತ್ತಿದೆ. ಹಾಗಾಗಿ ಇಂತಹ ಪರಸ್ಪರ ವೈರುದ್ಯದ ವಿಚಾರಗಳ ಬಗೆಗೆ ಎಚ್ಚರಿದ್ದು ಅದರಿಂದ ಕಲಿಯುತ್ತ ತಮ್ಮದೇ ಸ್ವಂತ ವಿಚಾರಗಳನ್ನು ಸಂಶೋಧನೆಯ ವಿಧಾನಕ್ರಮಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ವಿಶೇಶವಾಗಿ ಕನ್ನಡದ ಸಂಶೋಧನಾ ವಿದ್ಯಾರ್ಥಿಗಳು ಕೃತಿಯನ್ನು ಓದುತ್ತ ಕಲಿಯುತ್ತ ಅನಗತ್ಯವಾದುದನ್ನು ವಿಸರ್ಜಿಸುತ್ತ ಮುಂದೆ ಸಾಗಬೇಕಾದ ಅಗತ್ಯವಿದೆ. ನಿಜವಾದ ಸಂಶೋಧಕರು ಅದನ್ನು ಮಾಡಿಯೇ ಮಾಡುತ್ತಾರೆ ಎಂಬ ನಂಬಿಕೆ ಇಲ್ಲಿನದು. ಇಂತಹ ಚರ್ಚೆಯನ್ನು ಹುಟ್ಟಿಹಾಕುವ ಕೃತಿಯನ್ನು ರಚಿಸಿದ ಲೇಖಕರಿಗೆ ಅಭಿನಂದನೆಗಳು.

*ಲೇಖಕರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುಂಟೆಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.., ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಮೈಸೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.