ಸಂಸ್ಕೃತಿಕ ಪರಂಪರೆಯ ಊರು

ಊರ ಮುಂದೆ ಒಂದು ಬಾವಿ, ಬದಿಯಲ್ಲೇ ನೂರಾರು ವರ್ಷಗಳ ಹಳೆಯ ದೊಡ್ಡ ಅರಳಿಮರ. ಇದರ ಕೆಳಗೆ ಯಾರಿಗಾದರೂ ಜ್ಞಾನೋದಯ ಆಗಿದ್ದನ್ನು ಯಾರೂ ಕಂಡಿಲ್ಲ. ಆದರೆ ಮರದ ಕೆಳಗಿನ ಬಾವಿಯಲ್ಲಿ ಹಲವಾರು ಜನರ ಬದುಕು ಅಂತ್ಯವಾಗಿದ್ದು ಗೊತ್ತು.

ಜಾತ್ರೆಗೆಂದು ನಮ್ಮೂರಿಗೆ ಹೋಗಿದ್ದೆ. ಊರು ಹೊಕ್ಕೊಡನೆ ನಮ್ಮೂರು ಹೌದೋ, ಅಲ್ಲವೋ ಎಂದೆನಿಸಿತು; ರಸ್ತೆ ಅಗಲೀಕರಣಕ್ಕಾಗಿ ಮನೆ-ಮಠ-ಮರಗಳನ್ನು ಒಡೆದು ಹಾಕಿದ್ದರು. ಅಳಿದುಳಿದ ಮನೆಗಳ ಅವಶೇಷಗಳನ್ನು ನೋಡಿದಾಗ, ನಮ್ಮೂರಿನ ಸಾಂಸ್ಕೃತಿಕ ಹೊಟ್ಟೆಯನ್ನೇ ಸೀಳಿದಂತೆ ಭಾಸವಾಯಿತು. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಿರೇಹಡಗಲಿ ನನ್ನೂರು. ಈ ಊರು ಚಾರಿತ್ರಿಕ, ಸಾಂಸ್ಕೃತಿಕ, ಜಾನಪದ, ಧಾರ್ಮಿಕ ಪರಂಪರೆಯನ್ನು ಹೊತ್ತು ನಿಂತಿದೆ.

ಸಂಸಾರಿಕ ಬಂಧನಗಳ ಆಚೆಯು ಮಠದ ಪರಂಪರೆಯನ್ನು ಹೊಂದಿರುವ ಶ್ರೀ ಹಾಲಸ್ವಾಮಿಗಳ ಮಠವಿದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಎಲ್ಲ ಜಾತಿ, ಜನಾಂಗಗಳನ್ನು ಒಳಗೊಂಡು ಸಾಮರಸ್ಯದಿಂದ ಕೂಡಿರುತ್ತದೆ. ಹಿಂದುಳಿದವರು, ದಲಿತರು, ಮುಸ್ಲಿಂರು ಸಹ ಜಾತ್ರೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಹಿಂದಿನಿಂದ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

ಹಾಲಸ್ವಾಮಿಗಳ ಜಾತ್ರೆ ಸಂದರ್ಭದಲ್ಲಿ ಮನೆಮನೆಗಳಲ್ಲಿ ಬೀಗರುಬಿಜ್ಜರು ತುಂಬಿರುತ್ತಿದ್ದರು. ಮಧ್ಯರಾತ್ರಿ ನಡೆಯುವ ಮುಳ್ಳುಗದ್ದಿಗೆಯನ್ನು ಅಪ್ಪಂದಿರ ಹೆಗಲ ಮೇಲೆ ಕುಳಿತು ನೋಡಿದ್ದು ಒಂದು ಅದ್ಭುತ ಅನುಭವ. ಜಾತ್ರೆಗೆ ಬರುತ್ತಿದ್ದ ಇಮಾಮ್ ಸಾಬಿಯ ಗರ್ದಿಗಮ್ಮತ್ತು ಪ್ರಮುಖ ಆಕರ್ಷಣೆ.

ತಂಪು ಪಾನೀಯ ಎಂದು ಬೀಗರಿಗೆ ಉಪ್ಪು ನೀರನ್ನು ಕೂಡಿಸಿ, ತಮಾಷೆ ನೋಡುವುದು ಒಂದು ರೀತಿಯ ಮದುವೆಯ ಸಂಭ್ರಮ ಹೆಚ್ಚಿಸುತ್ತಿತ್ತು. ಆದರೆ ಈಗ ಮದುವೆಗಳು ಊರ ಓಣಿಗಳಿಂದ ಕಲ್ಯಾಣ ಮಂಟಪಗಳಿಗೆ ಸ್ಥಳಾಂತರಗೊಂಡಿವೆ.

ಓಣಿ ಒಳಗೆ ಬಂದ ಸಾಬಿಗೆ ರೊಟ್ಟಿ ಕೊಟ್ಟು ಮನೆಮಂದಿಯಲ್ಲ ನೋಡಿ ಸಂತೋಷ ಪಡುತ್ತಿದ್ದರು. ಗರ್ದಿಗಮತ್ತಿನ ಪೆಟ್ಟಿಗೆ ಮಕ್ಕಳಿಗೆ ಏಕೆ ದೊಡ್ಡವರಿಗೂ ಜಾದು ಪೆಟ್ಟಿಗೆಯಾಗಿತ್ತು. ಜಾತ್ರೆಯ ವ್ಯಾಪಾರ, ಮನರಂಜನೆ ಈಗ ಬದಲಾಗಿದೆ. ಆದರೆ ಜಾತ್ರೆಯ ಮಾದ್ಲಿ ಊಟ ಮಾತ್ರ ಹಾಗೆಯೇ ಉಳಿದುಕೊಂಡು ಬಂದಿದೆ. ಹಾಲು-ತುಪ್ಪ, ಬದನೆಕಾಯಿಪಲ್ಯ ಜೊತೆಗೆ ಗೋಧಿ ಮಾದ್ಲಿ ಊಟ ಮಾಡುವುದೇ ಒಂದು ಖುಷಿ.

ನಮ್ಮೂರಿನ ಮದುವೆ ಎಂದರೆ ಐದು ದಿನಗಳ ಕಾರ್ಯಕ್ರಮ; ಓಣಿಗೆ ಓಣಿಯೇ ಸಡಗರದಲ್ಲಿ ಪಾಲ್ಗೊಳ್ಳುತ್ತಿತ್ತು. ಮದುವೆಗೆ ಬರುವ ಬೀಗರನ್ನು ಸ್ವಾಗತಿಸುವುದು ಒಂದು ದೊಡ್ಡ ಕಾರ್ಯ. ಹುಡುಗರು ಹೆಣ್ಣು ವೇಷ ಹಾಕಿಕೊಂಡು, ಛತ್ರಿ ಹಿಡಿದು ಒಂದು ರೀತಿ ಬಹುರೂಪಿಗಳಂತೆ ತಮಾಷೆಯ ಸ್ವಾಗತದೊಂದಿಗೆ ಊರ ತುಂಬ ಮೆರವಣಿಗೆ ಮಾಡಲಾಗುತ್ತಿತ್ತು. ತಂಪುಪಾನೀಯ ಎಂದು ಬೀಗರಿಗೆ ಉಪ್ಪು ನೀರನ್ನು ಕೂಡಿಸಿ, ತಮಾಷೆ ನೋಡುವುದು ಒಂದು ರೀತಿಯ ಮದುವೆಯ ಸಂಭ್ರಮ ಹೆಚ್ಚಿಸುತ್ತಿತ್ತು. ಆದರೆ ಈಗ ಮದುವೆಗಳು ಊರ ಓಣಿಗಳಿಂದ ಕಲ್ಯಾಣ ಮಂಟಪಗಳಿಗೆ ಸ್ಥಳಾಂತರಗೊಂಡಿವೆ.

ಸಂತ ಶಿಶುನಾಳ ಶರೀಫರು ನಮ್ಮೂರಿನ ಕಲ್ಮಠಕ್ಕೆ ಬಂದಿದ್ದವರು ಎಂಬುದು ಚಾರಿತ್ರಿಕ ಘಟನೆ. ಏಕಾಏಕಿ ನಮ್ಮೂರಿನ ಕಲ್ಮಠಕ್ಕೆ ಆಗಮಿಸಿದಾಗ, ಅಲ್ಲಿದ್ದವರಿಗೆ ನಂಬಲು ಆಗದ ಸಂದರ್ಭ. ಮಠದಲ್ಲಿದ್ದ ಚಂದ್ರಮ್ಮಳಿಗೆ ಭಯ, ಭಕ್ತಿಗಳು ಏಕಕಾಲಕ್ಕೆ ಉಂಟಾಗಿ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಕಲ್ಮಠಕ್ಕೆ ಸಾಕ್ಷತ್ ದೇವರೇ ಬಂದಂತೆ ಅನಿಸಿ, ನೆಲ ಸಾರಿಸಿ, ಮಡಿಯಿಂದ ಅಡಿಗೆ ಮಾಡಿ ಶರೀಫರಿಗೆ ಉಣಬಡಿಸುತ್ತಾಳೆ. ಸಂತೋಷದಲ್ಲಿ ಕರಿದಿಟ್ಟ ಹಪ್ಪಳ ಶೆಂಡಿಗೆಯನ್ನು ಅವರಿಗೆ ಬಡಿಸದೆ ಮರೆತು ನಿಲ್ಲುತ್ತಾಳೆ. ಭಕ್ತಿಯಿಂದ ನಿಂತಿರುವುದನ್ನು ನೋಡಿ ಶರೀಫರು ಈ ರೀತಿ ಹಾಡಿದ್ದಾರೆ:

ಉಣಾಕ ನೀಡಿದಿ ನಮ್ಮವ್ವಾ

ನಿನ್ನ ಹೊಟ್ಟ್ಯಾಗ ಏಳ್ಳಷ್ಟು ವಿಷವಿಲ್ಲೇಳವ್ವಾ

ಹೋಳಗಿ ತುಪ್ಪ ನೀಡಿದೆವ್ವಾ

ಹಪ್ಪಳ ಶೆಂಡೀಗೆ ಉಪ್ಪಿನಕಾಯಿ ಮರೆತು ನಿಂತೆವ್ವಾ

ಅನ್ನ ಅಂಬ್ರಾ ನೀಡಿದೆವ್ವಾ

ತಿನ್ನಲು ಪಲ್ಲೇ ಪಚಡಿ ಮರೆತು ನಿಂತೆವ್ವಾ

ಶಿಶುನಾಳಧೀಶನವ್ವಾ

ಹಿರೇಹಡಗಲಿ ಕಲ್ಮಠದ ಚಂದ್ರವ್ವಾ

ಎಂದು ಊಟಕ್ಕೆ ಕುಳಿತಲ್ಲೇ ಶರೀಫರು ಪದಕಟ್ಟಿ ಹಾಡಿದ ಚರಿತ್ರೆ

ನಮ್ಮೂರಿಗಿದೆ; ಅನುಭಾವಿಗಳು ಓಡಾಡಿದ ನೆಲ, ಬಡವ-ಶ್ರೀಮಂತ, ಮೇಲು-ಕೀಳು ಎಂಬ ಭೇದಭಾವವಿಲ್ಲದೆ ಪರಸ್ಪರ ವಿಶ್ವಾಸ-ಸಹಕಾರದಿಂದ ಬದುಕು ಕಟ್ಟಿಕೊಂಡಿರುವ ಊರು. ಊರಲ್ಲಿ ಜಾತಿ, ಧರ್ಮಗಳಿದ್ದರೂ ಅವು ಯಾರಿಗೂ ಅವಮಾನಿಸುವಂತಿರಲಿಲ್ಲ. ಊರಿನ `ಜಂಗಮ’ ಹಬ್ಬ-ಹರಿದಿನದಲ್ಲಿ ಭಕ್ತರ ಮನೆಯಲ್ಲಿ ಪೂಜೆ ಬಿನ್ನಹ ತೀರಿಸಿದರೆ, ಅದೇ ಜಂಗಮ ಸುಗ್ಗಿಯ ಕಾಲದಲ್ಲಿ ಹೊಲಕ್ಕೆ ತಿಪ್ಪೆಯ ಸಗಣಿಗೊಬ್ಬರವನ್ನು ತಲೆಯ ಮೇಲೆ ಹೊತ್ತು ಎತ್ತಿನ ಬಂಡಿಗೆ ತುಂಬುತ್ತಿದ್ದರು. ಇದನ್ನು `ಕಾಯಕ’ ಎಂದು ನಿರ್ವಹಿಸುತ್ತಿದ್ದರು.

ಹುಚ್ಚಸಾಹೇಬ್ ಎಂಬ ವ್ಯಕ್ತಿ ಊರಿನಲ್ಲಿ ಅನುಭಾವಿಯಾಗಿ ಬದುಕಿದ್ದ. ಆತ ಮಸೀದಿಗೆ ಹೋಗಿ ನಮಾಜು ಮಾಡಿದ್ದನ್ನು ಯಾರೂ ನೋಡಿರಲಿಲ್ಲ. ಆದರೆ ತಪ್ಪದೇ ದೇವಸ್ಥಾನಗಳಿಗೆ ಹೋಗುತ್ತಿದ್ದ. ಊರಿನ ಎಲ್ಲಾ ಜಾತಿಯ ಜನರ ಆಕಳು, ಎತ್ತು, ಆಡು-ಕುರಿ ಮೊದಲಾದ ಸಾಕು ಪ್ರಾಣಿಗಳಿಗೆ ಉಚಿತವಾದ ಚಿಕಿತ್ಸೆಯನ್ನು ನೀಡುತ್ತಿದ್ದ. ಊರಿನ ಪಶುವೈದ್ಯನೇ ಆಗಿದ್ದ ಈತ ನಾಟಿ ಔಷಧಿಯನ್ನು ನೀಡುತ್ತಿದ್ದ. ಹೀಗಾಗಿ ಜನರ ಅಚ್ಚುಮೆಚ್ಚಿನ ಡಾಕ್ಟರ್ ಡಂಬಳದ ಹುಚ್ಚಪ್ಪ ಆಗಿದ್ದ. ತಾನು ನೀಡಿದ ಚಿಕಿತ್ಸೆಗೆ ಯಾವುದೇ ಶುಲ್ಕ ಪಡೆಯುತ್ತಿರಲಿಲ್ಲ. ಮನೆಯವರು ಪ್ರೀತಿಯಿಂದ ಕೊಟ್ಟ ಊಟ ತಿಂಡಿಯನ್ನು ಮಾತ್ರ ಸ್ವೀಕರಿಸುತ್ತಿದ್ದ. ವರ್ಷಕ್ಕೊಮ್ಮೆ ಧರ್ಮಸ್ಥಳಕ್ಕೆ ಬಾಬಾ ಬುಡನಗಿರಿಗೆ ಹೋಗಿಬಂದು ಊರಿನವರಿಗೆ ಪ್ರಸಾದ ಹಂಚುತ್ತಿದ್ದ. ಈತ ಧರ್ಮಸ್ಥಳ ಮಂಜುನಾಥನ ಕಟ್ಟಾ ಭಕ್ತನಾಗಿದ್ದ.

ನಮ್ಮೂರ ಮೊಹರಂ ಹಬ್ಬದಲ್ಲಿ ಮೊದಲು ಸಕ್ಕರೆ ಓದಿಸುವವರು, ಆಲೆ ದೇವರುಗಳನ್ನು ಹಿಡಿದು ಮೆರವಣಿಗೆ ಹೋಗುವವರು ಹಿಂದೂಗಳೇ. ಕೋಮು ಸಾಮರಸ್ಯದ ಬದುಕು ಇಂದಿಗೂ ಬದಲಾಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ.

ಒಂದು ಕಾಲದಲ್ಲಿ ನಾಟಕ ಕಂಪನಿಗಳಿಗೆ ಆಶ್ರಯ ಕೊಟ್ಟಿದ್ದ ಊರಿದು. ಬೇಸಿಗೆ ಬಂತೆಂದರೆ ರಾತ್ರಿಯಿಡಿ ಬಯಲಾಟ, ಗೊಂಬೆಯಾಟ, ಗೊಂದಲಿಗರ ಆಟ, ಮೋಡಿ-ಎದುರು ನೋಡಿ ಆಟ ಹೀಗೆ ಒಂದೇ ಎರಡೇ… ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿದ್ದವು.

ಊರಲ್ಲಿ ಸಿಹಿನೀರಿನ ಬಾವಿ, ಉಪ್ಪು ನೀರಿನ ಬಾವಿಗಳಿದ್ದವು. ಕಲ್ಲಬಾವಿ, ಮಂಡಾಳಕ್ಕಿಯರ ಬಾವಿ, ಹೊಸ ಮನೆಯರ ಬಾವಿ. ಹೀಗೆ ನೂರಾರು ಬಾವಿಗಳು ಜನರ ಜೀವಸೆಲೆಯಾಗಿದ್ದವು. ಆದರೆ ಇಂದು ಯಾವ ಬಾವಿಯು ಜೀವಂತವಾಗಿ ಉಳಿದಿಲ್ಲ.

ಹೊಲದಲ್ಲಿ ‘ಮುಯ್ಯ ಗಳೇವು’ ಎಂದು ರೈತರು ಒಬ್ಬರಿಗೊಬ್ಬರು ಕೂಡಿಕೊಂಡು ಬೇಸಾಯ ಮಾಡುತ್ತಿದ್ದರು. ಒಬ್ಬ ರೈತ ತನ್ನ ಹೊಲದಲ್ಲಿ ಕೆಲಸ ಕಾರ್ಯಗಳು ಇಲ್ಲದ ಸಮಯದಲ್ಲಿ ಮತ್ತೊಬ್ಬ ರೈತನ ಬೇಸಾಯಕ್ಕೆ ಸಹಾಯ ಮಾಡುತ್ತಿದ್ದ. ಹೀಗೆ ಪರಸ್ಪರ ಸಹಕಾರದಿಂದ ಹಣಕಾಸಿನ ವ್ಯವಹಾರವೇ ಇಲ್ಲದೆ ಬೇಸಾಯವನ್ನು ನಿರ್ವಹಿಸುತ್ತಿದ್ದರು. ಪ್ರತಿ ಗದ್ದೆ-ಹೊಲಗಳಲ್ಲಿ ತೆರೆದ ಬಾವಿಗಳು ಇದ್ದವು. ಊರಲ್ಲಿ ಸಿಹಿನೀರಿನ ಬಾವಿ, ಉಪ್ಪು ನೀರಿನ ಬಾವಿಗಳಿದ್ದವು. ಕಲ್ಲಬಾವಿ, ಮಂಡಾಳಕ್ಕಿಯರ ಬಾವಿ, ಹೊಸ ಮನೆಯರ ಬಾವಿ. ಹೀಗೆ ನೂರಾರು ಬಾವಿಗಳು ಜನರ ಜೀವಸೆಲೆಯಾಗಿದ್ದವು. ಆದರೆ ಇಂದು ಯಾವ ಬಾವಿಯು ಜೀವಂತವಾಗಿ ಉಳಿದಿಲ್ಲ.

ನಮ್ಮೂರಿನ ರೈತರದ್ದು ಮಳೆ ನಂಬಿಯೆ ಬದುಕು. ರೋಹಿಣಿ ಮಳೆ ಬಂದರೆ ಓಣಿಯಲ್ಲಿ ಕಾಳು ಎಂಬಂತೆ ರೋಹಿಣಿ ತಿಥಿಗೆ ಬಿತ್ತಿದರೆ, ಯಾವ ನೀರಾವರಿ ರೈತರಿಗಿಂತ ಹೆಚ್ಚು ಬೆಳೆಯುತ್ತಿದ್ದರು. ಬಹುತೇಕ ಜನರದ್ದು ಕೂಲಿಯೇ ಬದುಕು. ದುಡಿದು ಉಂಡು ಜನರು ಸಂತೋಷವಾಗಿದ್ದರು. ಮನರಂಜನೆಗೆ ಟೂರಿಂಗ್ ಟಾಕೀಸ್ ಇತ್ತು. ರಾತ್ರಿಯ ಮೊದಲ ಷೋ ಒಂಬತ್ತು ಗಂಟೆಗೆ ಬಿಟ್ಟೊಡನೆ ಹಾಕುತ್ತಿದ್ದ `ಗಜಮುಖನೆ ಗಣಪತಿಯೇ…’ ಹಾಡು ಕೇಳುತ್ತಿದ್ದಂತೆಯೇ ಹೆಣ್ಣುಮಕ್ಕಳು ಓಡೋಡಿ ಥೇಟರಿಗೆ ಹೋಗುತ್ತಿದ್ದರು. ರೂಪಾಯಿ ಟಿಕೇಟ್‍ಗೆ ಸಿಗುತ್ತಿದ್ದ ಮನರಂಜನೆಯಿಂದ ಹಗಲಿಡಿ ದುಡಿದ ದಣಿವು ಮಾಯವಾಗುತ್ತಿತ್ತು. ಇಷ್ಟೇ ಅಲ್ಲ ಮತ್ತೊಂದು ಸಿನಿಮಾ ನೋಡುವವರಿಗೂ ಈ ಸಿನಿಮಾದ ವರ್ಣನೆ ಹೊಲ-ಗದ್ದೆಗಳ ಕೆಲಸಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಈಗ ಟೂರಿಂಗ್ ಟಾಕೀಸ್ ಮುಚ್ಚಿಹೋಗಿದೆ.

ಧಾರವಾಡ ಆಕಾಶವಾಣಿ ಕೇಂದ್ರದ ಬಾನುಲಿ ಪ್ರಸಾರವನ್ನು ಗ್ರಾಮ ಪಂಚಾಯ್ತಿಯ ಲೌಡ್ ಸ್ವೀಕರ್‍ನಲ್ಲಿ ಪ್ರಸಾರ ಮಾಡುತ್ತಿದ್ದರು. ಊರಿನ ಹಿರಿಯರು, ಮೇಷ್ಟ್ರುಗಳು ಒಂದು ಪಂಚಾಯ್ತಿ ಕಟ್ಟೆಯಲ್ಲಿ ಕುಳಿತು ನಾಡಿನ-ದೇಶದ ಸುದ್ದಿಯನ್ನು ಆಲಿಸುತ್ತಿದ್ದರು. ಏಕೆಂದರೆ ಆಗ ದಿನಪತ್ರಿಕೆಗಳು ಮಧ್ಯಾಹ್ನದ ನಂತರ ಸಾರ್ವಜನಿಕ ಗ್ರಂಥಾಲಯಕ್ಕೆ ಬರುತ್ತಿದ್ದವು; ಓದಲು ಸಂಜೆ ಸಿಗುತ್ತಿದ್ದವು.

ನಮ್ಮೂರಿನ ಯುವಕರ ವಿಶೇಷವೆಂದರೆ, ಬೆಳಿಗ್ಗೆ ಬಸ್ಸಿನಲ್ಲಿ ತಾಲೂಕು ಕೇಂದ್ರ ಹಡಗಲಿ ಕಾಲೇಜಿಗೆ ಹೋಗಿ ಬಂದರೆ, ಸಂಜೆ ಅಂಗಿ-ಲುಂಗಿ ಹಾಕಿಕೊಂಡು ಕೆರೆ ಏರಿಯ ಮೇಲೆ ವಾಕ್ ಮಾಡಿ ಈರಣ್ಣನ ಬಿಸಿಬಿಸಿ ಮಿರ್ಚಿ-ಮಂಡಕ್ಕಿ ತಿಂದು ರಾಜಕೀಯ ಚರ್ಚೆ ಮಾಡಿ ಮನೆಗೆ ಹೋಗುವುದು. ಉದ್ಯೋಗ ಇಲ್ಲದಿದ್ದರೂ ಯಾರೂ ತಲೆಕೆಡಿಸಿಕೊಂಡವರಲ್ಲ.

ಹಾಲಿ ಮತ್ತು ನಿವೃತ್ತ ಮೇಷ್ಟ್ರುಗಳ ವಿಶ್ರಾಂತಿ ಕಟ್ಟೆ. ಅವರೆಲ್ಲ ಇಲ್ಲಿ ಕುಳಿತು ಮುಸ್ಸಂಜೆ ಕಳೆಯುತ್ತಿದ್ದರು. ವಿದ್ಯಾರ್ಥಿಗಳಷ್ಟೇ ಅಲ್ಲ, ಊರಿನ ಯಾರೊಬ್ಬರು ಈ ಕಟ್ಟೆಯಲ್ಲಿ ಕೂಡದೆ ಮೇಷ್ಟ್ರುಗಳಿಗೆ ಗೌರವ ಸೂಚಿಸುತ್ತಿದ್ದರು. ಆದರೆ ರಸ್ತೆಯ ಅಗಲೀಕರಣದಲ್ಲಿ ಈ ಮೇಷ್ಟ್ರಕಟ್ಟೆ ಒಡೆದು ಹೋಗಿದೆ.

ಹೋಳಿ ಹುಣ್ಣಿಮೆ ಬರುತ್ತಿದ್ದಂತೆ ಒಂದು ರೀತಿ ಓಣಿಗಳಲ್ಲಿ ಹಬ್ಬದ ಸಂಭ್ರಮ. ಒಂದು ಓಣಿಯವರು ರತಿಯ ಕಡೆ, ಮತ್ತೊಂದು ಓಣಿಯವರು ಮನ್ಮಥನ ಕಡೆಗೆ ಇರುತ್ತಿದ್ದರು. ಒಂದು ರೀತಿಯಲ್ಲಿ ರತಿ-ಮನ್ಮಥ ಗೊಂಬೆಗಳನ್ನು ಇಟ್ಟುಕೊಂಡು ಜೀವಂತ ಮದುವೆಯ ಪರಿಸರ ಸಂಭ್ರಮವನ್ನು ಉಂಟು ಮಾಡುತ್ತಿದ್ದರು. ರಾತ್ರಿಯೆಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು. ಬೆಳಿಗ್ಗೆ ಊರ ತುಂಬ ಬಣ್ಣದ ಓಕಳಿ. ಹಿಂದೂ-ಮುಸ್ಲಿಂ ಎಲ್ಲರೂ ಸೇರಿ ಬಣ್ಣಗಳ ರಂಗಿನಾಟ ಆಡುತ್ತಿದ್ದರು.

ಊರ ಮುಂದೆ ಒಂದು ಬಾವಿ, ಬದಿಯಲ್ಲೇ ನೂರಾರು ವರ್ಷಗಳ ಹಳೆಯ ದೊಡ್ಡ ಅರಳಿಮರ. ಇದರ ಕೆಳಗೆ ಯಾರಿಗಾದರೂ ಜ್ಞಾನೋದಯ ಆಗಿದ್ದನ್ನು ಯಾರೂ ಕಂಡಿಲ್ಲ. ಆದರೆ ಮರದ ಕೆಳಗಿನ ಬಾವಿಯಲ್ಲಿ ಹಲವಾರು ಜನರ ಬದುಕು ಅಂತ್ಯವಾಗಿದ್ದು ಗೊತ್ತು. ಈಗ ಅರಳಿ ಮರವು ಇಲ್ಲ, ಜೀವ ಕಬಳಿಸಿದ ಬಾವಿಯು ಇಲ್ಲ. ಇಲ್ಲಿ ಸಮುದಾಯ ಭವನ ತಲೆಎತ್ತಿದೆ.

ಪೊಲೀಸ್ ಠಾಣೆಯ ಹತ್ತಿರ ಬೇವಿನ ಮರದ ಕಟ್ಟೆ ಇತ್ತು. ಇದು ಹಾಲಿ ಮತ್ತು ನಿವೃತ್ತ ಮೇಷ್ಟ್ರುಗಳ ವಿಶ್ರಾಂತಿ ಕಟ್ಟೆ. ಅವರೆಲ್ಲ ಇಲ್ಲಿ ಕುಳಿತು ಮುಸ್ಸಂಜೆ ಕಳೆಯುತ್ತಿದ್ದರು. ವಿದ್ಯಾರ್ಥಿಗಳಷ್ಟೇ ಅಲ್ಲ, ಊರಿನ ಯಾರೊಬ್ಬರು ಈ ಕಟ್ಟೆಯಲ್ಲಿ ಕೂಡದೆ ಮೇಷ್ಟ್ರುಗಳಿಗೆ ಗೌರವ ಸೂಚಿಸುತ್ತಿದ್ದರು. ಆದರೆ ರಸ್ತೆಯ ಅಗಲೀಕರಣದಲ್ಲಿ ಈ ಮೇಷ್ಟ್ರಕಟ್ಟೆ ಒಡೆದು ಹೋಗಿದೆ.

ನಮ್ಮೂರು ಸುತ್ತಲಿನ ಹತ್ತಾರು ಹಳ್ಳಿಗಳಿಗೆ ದೊಡ್ಡಣ್ಣನಂತೆ, ಒಂದು ದೊಡ್ಡ ಕುಟುಂಬದಂತೆ ಇತ್ತು. ಊರಿನ ಯಾವುದೋ ಮೂಲೆಯಲ್ಲಿ ದುಃಖ ಉಂಟಾದರೆ ಇಡೀ ಊರಿನ ಜನ ಸ್ಪಂದಿಸುತ್ತಿದ್ದರು, ರೋಧಿಸುತ್ತಿದ್ದರು. ಪರಸ್ಪರ ಕಷ್ಟ-ನಷ್ಟದಲ್ಲಿ ಭಾಗಿಯಾಗುತ್ತಿದ್ದರು.

ನನ್ನೂರಿನ ಸುಗ್ಗಿಯ ಆಟ-ಬಯಲಾಟಗಳು ಕಣ್ಮರೆಯಾಗುತ್ತಿವೆ. ರಾಜಕಾರಣದ ಗಾಳಿ ಬೀಸುತ್ತಿರುವುದರಿಂದ ಜಾತಿ ಉಪಜಾತಿಗಳಲ್ಲಿದ್ದ ಸಂಬಂಧ ಈಗ ಅಷ್ಟಕಷ್ಟೇ. ಊರಿನ ನ್ಯಾಯ ಬಗೆಹರಿಸುತ್ತಿದ್ದ ಹಿರಿಯರಿಗೆ ಈಗ ಸ್ಥಾನ ಇಲ್ಲ; ಎಲ್ಲರೂ ರಾಜಕೀಯ ನಾಯಕರೇ. ಸಾಮಾಜಿಕವಾಗಿ, ಆರ್ಥಿಕವಾಗಿ ಎಲ್ಲರೂ ಸಮಾನರಾಗುತ್ತಿರುವುದು ಸಂತೋಷದ ಸಂಗತಿಯೇ. ಆದರೆ ಆಧುನಿಕತೆಯ ಗಾಳಿ ಗ್ರಾಮೀಣ ಸಂಸ್ಕೃತಿಯ ಮೇಲೆ ದಾಳಿ ಮಾಡುವುದನ್ನು ಸಹಿಸುವುದು ಹೇಗೆ?

*ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರು; 12 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ವರ್ಷದ ಲೇಖಕ ಪ್ರಶಸ್ತಿ ಪುರಸ್ಕೃತರು.

Leave a Reply

Your email address will not be published.