ಸಚಿವರೊಂದಿಗೆ ಚೂಟಿ ಅನುಭವಗಳು

ಚೂಟಿ ಚಿದಾನಂದ

ಕಳೆದ ಮೂವತ್ತೇಳು ವರ್ಷಗಳಿಂದ ಸಚಿವರ ಆಪ್ತ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿರುವ ಚೂಟಿ ಚಿದಾನಂದ ಅವರು ಈಗ 24ನೇ ಸಚಿವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯವಾಗಿ ಸಚಿವರು ತಮ್ಮ ಆಪ್ತ ಶಾಖೆಗೆ ಅತ್ಯಂತ ನಂಬಿಗಸ್ಥರು ಮತ್ತು ದಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಿಶಿಷ್ಟ ಹೊಣೆಗಾರಿಕೆಯ ಕಾರ್ಯನಿರ್ವಹಣೆಯಲ್ಲಿ ಪಳಗಿರುವ ಕಾರಣದಿಂದಾಗಿಯೇ ಚಿದಾನಂದ ಅವರು ಎಲ್ಲಾ ಸರ್ಕಾರಗಳಲ್ಲಿಯೂ ಸಚಿವರ ಬಹು ಬೇಡಿಕೆಯ ಆಪ್ತ ಸಹಾಯಕರು. ತೀಕ್ಷ್ಣ ಹಾಸ್ಯಪ್ರಜ್ಞೆ ಮತ್ತು ಸೂಕ್ಷ್ಮ ಗ್ರಹಿಕೆ ಹೊಂದಿರುವ ಅವರು ತಮ್ಮೆದುರು ನಡೆದ ಪ್ರಸಂಗಗಳನ್ನು ‘ಸಚಿವರೊಂದಿಗೆ ಚೂಟಿ ಅನುಭವಗಳು’ ಕೃತಿಯಲ್ಲಿ ದಾಖಲಿಸಿದ್ದಾರೆ. ಸಚಿವರೊಂದಿಗಿನ ಸೇವೆಯ ಭಾಗವಾಗಿ ಲೇಖಕರಿಗೆ ಎದುರಾಗುವ ಪೇಚು, ಸಂದಿಗ್ಧ, ಸಂಕಟ ಇತ್ಯಾದಿ ಎಲ್ಲವೂ ಈ ಪುಸ್ತಕದಲ್ಲಿ ವಿನೋದದ ಉಡುಪು ತೊಟ್ಟುಕೊಂಡು ಹೊರಬಂದಿವೆ. ಲಘು ಧಾಟಿಯ ಈ ಕೃತಿಯ ನವಿರಾದ ನಿರೂಪಣಾ ಶೈಲಿಯೊಳಗೆ ಗಂಭೀರ ಹೊಳಹುಗಳನ್ನೂ ಕಾಣಬಹುದು. ಈ ಕೃತಿಯ ಆಯ್ದ ಕೆಲವು ಲೇಖನಗಳು ನಿಮ್ಮ ಓದಿಗಾಗಿ…

ಸಚಿವರೊಂದಿಗೆ

ಚೂಟಿ ಅನುಭವಗಳು

ಚೂಟಿ ಚಿದಾನಂದ

ಪುಟ: 205 ಬೆಲೆ: ರೂ.175

ನಂ.48, 5ನೇ ಮುಖ್ಯ ರಸ್ತೆ, 6ನೇ ಅಡ್ಡ ರಸ್ತೆ

ಕೆಇಬಿ ಬಡಾವಣೆ, ಸಂಜಯನಗರ, ಬೆಂಗಳೂರು-560094

ದೂ: 9448510344

 

ಮಿನಿಷ್ಟ್ರ ನಾಯಿ ಆತ್ಮಹತ್ಯೆ

ಬಹಳಷ್ಟು ರಾಜಕಾರಣಿಗಳು ಸಚಿವರಾದಾಕ್ಷಣ ತಮ್ಮೂರಿನಲ್ಲಿ ತೋಟ ಮಾಡಿ ಅದರಲ್ಲೊಂದು ಫಾರಂ ಹೌಸ್ ಕಟ್ಟಿಸುತ್ತಾರೆ ಮತ್ತು ನಾಯಿಯನ್ನೂ ಸಾಕುತ್ತಾರೆ. ಇದೇರೀತಿ ಒಬ್ಬ ಕ್ಯಾಬಿನೆಟ್ ದರ್ಜೆ ಸಚಿವರು ಬೆಂಗಳೂರಿನಲ್ಲಿ ತಮ್ಮ ಸರ್ಕಾರಿ ನಿವಾಸದಲ್ಲಿ ಒಂದು ನಾಯಿಯನ್ನು ಸಾಕಿದರು. ಸಚಿವರುಗಳ ಮನೆಗೆಲಸಕ್ಕೆ ಸರ್ಕಾರದಿಂದಲೇ ಆಳುಗಳನ್ನು ಕೊಡುತ್ತಾರೆ, ಅವರು ಈ ನಾಯಿ ಸಾಕುವ ಚಾಕರಿ ಮೊದಲಾದವುಗಳನ್ನು ಮಾಡುತ್ತಾರೆ, ಪಾಪ ಅವರಿಗೂ ಹೊಟ್ಟೆಪಾಡು ಇರುತ್ತದಲ್ಲ.

ನಮ್ಮ ಸಚಿವರು ಸಮಯ ಸಿಕ್ಕಾಗಲೆಲ್ಲಾ ಆ ನಾಯಿಮರಿ ಜೊತೆ ಆಟವಾಡುತ್ತಿದ್ದರು. ಸಚಿವರಾದವರು ನಾಯಿಮರಿ ಜೊತೆ ಆಟವಾಡುತ್ತಿದ್ದಾರೆಂದರೆ ಅವರ ಹಿಂಬಾಲಕರಿಗೆ ಸಚಿವರನ್ನು ಮತ್ತು ಅವರ ನಾಯಿಯನ್ನು ಹೊಗಳಲು ಅದೇ ಒಂದು ಸದಾವಕಾಶ. ಸಚಿವರು ನಾಯಿ ಜೊತೆ ಆಟವಾಡಿದಂತೆಲ್ಲಾ ಹಿಂಬಾಲಕರು ಆ ನಾಯಿಮರಿಯ ಬಾಲ, ಮುಖ, ಕಿವಿ, ಬಣ್ಣ, ಕಾಲು ಮೊದಲಾದವುಗಳ ಬಗ್ಗೆ ಗುಣಗಾನ ಮಾಡುತ್ತಾ ಅದಕ್ಕೆ ತರಬೇತಿ ಕೊಡಿಸುವ ಬಗ್ಗೆ ಮತ್ತು ಅದರ ಆಹಾರದ ಬಗ್ಗೆ ಸಚಿವರಿಗೆ ಉಚಿತ ಸಲಹೆಗಳನ್ನು ಕೊಡುತ್ತಿದ್ದರು. ಈ ಪ್ರಹಸನ ಆಗಾಗ ನಡೆಯುತ್ತಿತ್ತು. ಸಚಿವರು ಸಸ್ಯಾಹಾರಿಗಳಾಗಿದ್ದು ನಾಯಿಗೂ ಸಹ ಸಸ್ಯಾಹಾರ ಊಟವನ್ನು ಕೊಡುತ್ತಿದ್ದರು ಮತ್ತು ಆಗಾಗ ಅದಕ್ಕೆ ಮೊಟ್ಟೆಯನ್ನು ಹಾಕುವಂತೆ ಅದರ ಉಸ್ತುವಾರಿಯ ವ್ಯಕ್ತಿಗೆ ಹೇಳಿದ್ದರು. ವಾರದಲ್ಲಿ ಎರಡು ಬಾರಿ ಆ ನಾಯಿಗೆ ಮೊಟ್ಟೆಯನ್ನು ಹಾಕುತ್ತಿದ್ದರು, ಅದನ್ನು ತಿಂದ ನಾಯಿಯು ಬೇಗನೆ ಸಚಿವರಷ್ಟು ಕೊಬ್ಬಾಗಿ ಬೆಳೆಯಲಿಲ್ಲ.

ಈ ಸಚಿವರ ಮನೆಯ ಪಕ್ಕದ ಸರ್ಕಾರಿ ನಿವಾಸದಲ್ಲಿ ವಿರೋಧ ಪಕ್ಷದ ನಾಯಕರೊಬ್ಬರು ವಾಸವಾಗಿದ್ದರು. ಅವರಿಗೂ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಇರುತ್ತದೆ, ಅವರೂ ಸಹ ನಾಯಿಯನ್ನು ಸಾಕಿದ್ದರು. ಅವರು ಮಾಂಸಾಹಾರಿಗಳಾಗಿದ್ದುದರಿಂದ ಅವರ ನಾಯಿಗೆ ದಿನವೂ ಮಾಂಸಾಹಾರ ಸಿಗುತ್ತಿತ್ತು, ಅದುದರಿಂದ ಅದು ಚೆನ್ನಾಗಿ ಕೊಬ್ಬಿ ಬೆಳೆದಿತ್ತು. ಪ್ರತಿದಿನ ಸಾಯಂಕಾಲ ಅವರ ಮನೆಯ ನಾಯಿಯನ್ನು ಮತ್ತು ಸಚಿವರ ಮನೆಯ ನಾಯಿಯನ್ನು ಅಡ್ಡಾಡಲು ಬಿಡುತ್ತಿದ್ದರು. ಎರಡೂ ಗಂಡು ನಾಯಿಗಳಾಗಿದ್ದವು. ನಾಯಿಗಳೆಂದರೆ ಸಾಕು ಅವು ಕಚ್ಚಾಡುವ ಜಾತಿಗೆ ಸೇರಿದವು ಎಂಬುದು ಸರ್ವೆಸಾಮಾನ್ಯವಾಗಿ ಜನರ ನಂಬಿಕೆ.

ಆದರೆ ಅದಕ್ಕೆ ವ್ಯತಿರಿಕ್ತವೆನ್ನುವಂತೆ ಈ ಎರಡೂ ನಾಯಿಗಳು ಮತ್ತು ಇವುಗಳ ಯಜಮಾನರಾದ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಬಹಳ ಅನ್ಯೋನ್ಯವಾಗಿದ್ದರು, ಎಂದೂ ಕಚ್ಚಾಡುತ್ತಿರಲಿಲ್ಲ. ಆಗಾಗ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಲಾನಿನಲ್ಲಿ ಕುಳಿತು ಉಭಯ ಕುಶಲೋಪರಿ ಮಾತನಾಡುತ್ತಿದ್ದರು. ಇವರ ನಾಯಿಗಳು ಸಹ ದಿನವೂ ಸಾಯಂಕಾಲ ಆಡಲು ಬಿಟ್ಟಾಗ ಅನ್ಯೋನ್ಯವಾಗಿ ಆಟವಾಡುತ್ತಿದ್ದವು. ವಿರೋಧ ಪಕ್ಷದ ನಾಯಕರ ಮನೆಯ ಪಕ್ಕದಲ್ಲೆ ರೈಲ್ವೇ ಲೈನು ಇತ್ತು. ಈ ಎರಡೂ ನಾಯಿಗಳು ಆಗಾಗ ಆ ರೈಲ್ವೇ ಲೈನಿನ ಮೇಲೆ ಆಟವಾಡಲು ಹೋಗುತ್ತಿದ್ದವು. ಒಂದುದಿನ ಸಚಿವರ ನಾಯಿಯು ರೈಲಿಗೆ ಸಿಕ್ಕು ಸತ್ತುಹೋಯಿತು. ಸಚಿವರ ನಾಯಿ ಸತ್ತ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಜನರು (ಹಿಂಬಾಲಕರು) ಸಚಿವರನ್ನು ಕಂಡು ನಾಯಿ ಸತ್ತದಕ್ಕೆ ಸಂತಾಪ ಸೂಚಿಸುತ್ತಾ ಅದರ ಗುಣಗಾನ ಮಾಡುತ್ತಿದ್ದರು, ಕೆಲವರು ಮೊಸಳೆ ಕಣ್ಣೀರನ್ನೂ ಸುರಿಸಿದರು. ಇನ್ನೂ ಕೆಲವರು ನಾಟಕೀಯವಾಗಿ ಅದಕ್ಕೆ ಸ್ವರ್ಗ ಪ್ರಾಪ್ತಿಯಾಗಲಿ ಎಂದೂ ದೇವರಲ್ಲಿ ಬೇಡಿಕೊಂಡರು. ಇಂತಹವರು ಬಹಳಮಟ್ಟಿಗೆ ತಮ್ಮ ತಂದೆ ತಾಯಿ ಸತ್ತಾಗಲೂ ಗ್ಯಾರೆಂಟಿಯಾಗಿ ಅತ್ತಿರುವುದಿಲ್ಲ. ಆದರೆ ಸಚಿವರ ನಾಯಿ ಎಂದಮೇಲೆ ಸಾಮಾನ್ಯವೇ, ಅದಕ್ಕಾಗಿ ಎಲ್ಲರೂ ಸಂತಾಪ ಹೇಳುವವರೆ. ಒಟ್ಟಾರೆ ಆ ನಾಯಿ ಸಚಿವರ ನಾಯಿಯಾಗಿ ಸತ್ತದ್ದು ಪುಣ್ಯ.

ನಾಯಿ ಸತ್ತ ಎರಡು ವಾರದ ನಂತರ ಸಚಿವರನ್ನು ಕಾಣಲು ಅವರ ಹಿಂಬಾಲಕರೊಬ್ಬರು ಬಂದರು. ಸಚಿವರು ರೆಡಿಯಾಗಿಬರಲು ಇನ್ನೂ ಒಂದು ಗಂಟೆ ತಡವಾಗುತ್ತದೆ ಎಂದು ಗನ್‍ಮ್ಯಾನ್ ಅವರಿಗೆ ಹೇಳಿದ. ಅವರು ಅಲ್ಲಿಯೇ ಅಡ್ಡಾಡುತ್ತಾ ಎಲ್ಲಿ ನಾಯಿ ಕಾಣುತ್ತಿಲ್ಲವಲ್ಲ ಎಂದು ಆ ಗನ್‍ಮ್ಯಾನ್‍ನನ್ನು ಕೇಳಿದರು. ಅದು ರೈಲಿಗೆ ಸಿಕ್ಕು ಸತ್ತುಹೋಯಿತು ಸಾರ್ ಎಂದ. ಅವರು ಗಾಬರಿಯಾದವರಂತೆ ನಟಿಸುತ್ತಾ ಅಯ್ಯೋ ಪಾಪ ರೈಲಿಗೆ ಸಿಕ್ಕು ಸತ್ತುಹೋಯಿತೆ ಎನ್ನುತ್ತಾ ನನ್ನಹತ್ತಿರ ಬಂದು ಹೌದೇನ್ರಿ ನಾಯಿ ರೈಲಿಗೆ ಸಿಕ್ಕು ಸತ್ತಿತಂತೆ ಎಂದರು.

ನಾನು ಭಾರಿ ದುಃಖ ಬಂದವನಂತೆ ನಟಿಸುತ್ತಾ, ಪಾಪ ಅದರ ಮನಸ್ಸಿನಲ್ಲಿ ಎಷ್ಟು ನೋವಿತ್ತೊ ಯಾರಿಗೆ ಗೊತ್ತು ಸಾರ್, ಅದು ಆಕಸ್ಮಿಕವಾಗಿ ರೈಲಿಗೆ ಸಿಕ್ಕು ಸಾಯಲಿಲ್ಲ, ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿತು ಎಂದೆ. ಅವರು ಮತ್ತಷ್ಟು ಗಾಬರಿಯಾಗಿ ಆತ್ಮಹತ್ಯೆ ಮಾಡಿಕೊಂಡಿತೆ ಎಂದರು. ಹೌದು ಸಾರ್, ಇದರಲ್ಲಿ ಪಕ್ಕದ ಮನೆಯ ವಿರೋಧ ಪಕ್ಷದ ನಾಯಕರ ಕೈವಾಡವಿದೆ ಎಂದೆ. ಅವರಿಗೆ ಮತ್ತಷ್ಟೂ ಕುತೂಹಲ ಮೂಡಿತು. ಏನೂ ವಿರೋಧ ಪಕ್ಷದ ನಾಯಕರ ಕೈವಾಡವೆ, ಅವರೆಂತಹ ಜನರೀ ಪಾಪ ಬಡಪಾಯಿ ನಾಯಿ ಮೇಲೆ ತಮ್ಮ ರಾಜಕೀಯ ಸೇಡನ್ನು ತೀರಿಸಿಕೊಳ್ಳಬೇಕಿತ್ತೆ ಎಂದರು. ಹೌದು ಸಾರ್, ನೇರವಾಗಿ ಅವರು ಕಾರಣರಲ್ಲದಿದ್ದರೂ ಅವರ ಅನುನಾಯಿಯು ಕಾರಣ ಎಂದೆ. ಏನು ಅನುಯಾಯಿಯೇ ಅಥವಾ ಅನುನಾಯಿಯೇ, ಎಂದು ಕೇಳುತ್ತಾ ಎರಡೂ ಒಂದೇ ಬಿಡಿ ಎಂದು ನಕ್ಕರು. ದಯವಿಟ್ಟು ಹಾಗೆ ನಾಯಿಗೆ ಅಪಮಾನ ಮಾಡಬೇಡಿ ಸಾರ್, ಅದು ಭಾರಿ ನಿಷ್ಠಾವಂತ ಪ್ರಾಣಿ, ಅದು ಜೀವನದಲ್ಲಿ ತನ್ನ ನಿಷ್ಠೆಯನ್ನು ಎಂದಿಗೂ ಬದಲಾಯಿಸುವುದಿಲ್ಲ. ಆದರೆ ಅನುಯಾಯಿಗೆ (ಮನುಷ್ಯನಿಗೆ) ಆ ಗುಣವಿರುವುದಿಲ್ಲ ಎಂದೆ. ಅದಕೆ.್ಕ ಅವರು ಹೌದು ಹೌದು ನಾಯಿ ನಿಷ್ಠಾವಂತ ಪ್ರಾಣಿ ಎನ್ನುತ್ತಾ, ಹೇಳಿ ಹೇಳಿ ತುಂಬಾ ಸ್ವಾರಸ್ಯಕರವಾಗಿ ಹೇಳುತಿದ್ದೀರಿ ಎಂದರು.

ಸಾರ್, ಆ ವಿರೋಧ ಪಕ್ಷದ ನಾಯಕರ ನಾಯಿಗೆ ನಮ್ಮ ಸಚಿವರ ನಾಯಿ ಬಗ್ಗೆ ಒಳಗೊಳಗೆ ಭಾರಿ ಅಸಮಾಧಾನವಿತ್ತು. ಏಕೆಂದರೆ ವಿರೋಧ ಪಕ್ಷದ ನಾಯಕರ ಮನೆಗೆ ಸಚಿವರ ಮನೆಗೆ ಬಂದಷ್ಟು ಜನ ಬರುತ್ತಿರಲಿಲ್ಲ, ಹಾಗಾಗಿ ಆ ನಾಯಿಯನ್ನು ಹೆಚ್ಚಿನ ಜನರು ಮಾತನಾಡಿಸುತ್ತಿರಲಿಲ್ಲ ಅದರ ಗುಣಗಾನ ಮಾಡುತ್ತಿರಲಿಲ್ಲ. ಆದರೆ ನಮ್ಮ ಸಚಿವರ ಮನೆಗೆ ಬಂದ ಜನರೆಲ್ಲಾ ಸಚಿವರ ನಾಯಿಯನ್ನು ಮಾತನಾಡಿಸುವುದು, ಅದರ ಗುಣಗಾನ ಮಾಡುವುದನ್ನು ಪ್ರತಿದಿನವೂ ನೋಡುತ್ತಿದ್ದ ಆ ವಿರೋಧ ಪಕ್ಷದ ನಾಯಕರ ನಾಯಿಗೆ ಭಾರಿ ಹೊಟ್ಟೆಯುರಿ ಆಗುತ್ತಿತ್ತು.

ಪ್ರತಿದಿನವೂ ಸಾಯಂಕಾಲ ಆಟವಾಡಲು ಸಚಿವರ ಮತ್ತು ವಿರೋಧ ಪಕ್ಷದ ನಾಯಕರ ನಾಯಿಗಳನ್ನು ಬಿಡುತ್ತಿದ್ದರು. ಮೇಲ್ನೋಟಕ್ಕೆ ಎರಡೂ ಭಾರಿ ಅನ್ಯೋನ್ಯವಾಗಿವೆ ಎನ್ನುವಂತೆ ಕಾಣುತ್ತಿದ್ದರೂ ಎರಡಕ್ಕೂ ಮನಸ್ಸಿನೊಳಗೆ ಭಾರಿ ಅಸಮಾಧಾನವಿತ್ತು. ಎರಡೂ ಭೇಟಿಯಾದ ತಕ್ಷಣ ಉಭಯ ಕುಶಲೋಪರಿ ವಿಚಾರಿಸುತ್ತಾ ನೀನೇನು ಊಟ ಮಾಡಿದೆ ನೀನೇನು ಊಟ ಮಾಡಿದೆ ಎಂದು ಪರಸ್ಪರ ಕೇಳುತ್ತಿದ್ದವು. ಸಚಿವರ ನಾಯಿಯು ಮಾಮೂಲಿಯಾಗಿ ಅನ್ನ ಮಜ್ಜಿಗೆ ಇಲ್ಲವೆ ರಾಗಿ ಗಂಜಿ ಇಲ್ಲವೆ ರಾಗಿ ಮುದ್ದೆ ತಿಂದೆ ಎಂದು ಹೇಳುತ್ತಿತ್ತು. ಆದರೆ ಆ ವಿರೋಧ ಪಕ್ಷದ ನಾಯಕರ ನಾಯಿ ಅತೀ ಗರ್ವದಿಂದ ನಾನು ದಿನವೂ ವಿವಿಧ ರೀತಿಯ ಮಾಂಸಾಹಾರವಿಲ್ಲದೆ ಊಟವನ್ನೇ ಮಾಡುವುದಿಲ್ಲ. ಒಂದು ದಿನ ಕುರಿ ಮಾಂಸ, ಇನ್ನೊಂದು ದಿನ ಕೋಳಿ ಮಾಂಸ, ಮತ್ತೊಂದು ದಿನ ಮೀನಿನ ಊಟ, ನೋಡು ಇಂದು ತಿಂದ ಮಾಂಸದ ವಾಸನೆ ಇನ್ನೂ ಇದೆ ಎಂದು ಬಾಯಿ ತೆರೆದು ಅದರ ವಾಸನೆಯನ್ನು ಸಚಿವರ ನಾಯಿಗೆ ತೋರಿಸುತ್ತಿತ್ತು. ನಮ್ಮ ಸಚಿವರ ನಾಯಿಯು ಅದರ ಬಾಯಿಯ ವಾಸನೆಯನ್ನು ನೋಡಿ ಕ್ಯಾಬಿನೆಟ್ ದರ್ಜೆಯ ಸಚಿವರ ನಾಯಿಯಾದ ನನಗೆ ಈ ಭಾಗ್ಯವಿಲ್ಲವಲ್ಲ ಎಂದು ಒಳಗೊಳಗೆ ಕಣ್ಣೀರು ಸುರಿಸುತ್ತಿತ್ತು.

ವಿರೋಧ ಪಕ್ಷದ ನಾಯಕರ ನಾಯಿ ಅಷ್ಟಕ್ಕೆ ಸುಮ್ಮನಾಗದೆ, ನೀನು ಹೆಸರಿಗೆ ಮಾತ್ರ ಕ್ಯಾಬಿನೆಟ್ ಸಚಿವರ ನಾಯಿ, ಪಾಪ ನಿನಗೆ ತಿಂಗಳಿಗೊಂದುಬಾರಿಯಾದರೂ ಮಾಂಸಾಹಾರ ಸಿಗುವುದಿಲ್ಲ. ಅದು ನಿನ್ನ ಹಣೆಬರಹದಲ್ಲಿ ಬರೆದಿಲ್ಲ ಬಿಡು. ಒಂದುಪಕ್ಷ ನೀನು ಮನುಷ್ಯನಾಗಿದ್ದರೆ ಆ ಸಚಿವರನ್ನು ಬಿಟ್ಟು ಎಲ್ಲಿ ರುಚಿ ರುಚಿಯಾದ ಮಾಂಸ ಸಿಗುತ್ತದೊ ಅಲ್ಲಿಗೆ ಓಡಿಹೋಗು ಎಂದು ಹೇಳುತ್ತಿದ್ದೆ. ಆದರೆ ನಾವು ನಾಯಿಗಳು, ಮನುಷ್ಯ ಜಾತಿಯಂತೆ ರುಚಿ ಕಂಡಲ್ಲಿಗೆ ಓಡಿಹೋಗಿ ಆಗಾಗ ನಿಷ್ಠೆಯನ್ನು ಬದಲಾಯಿಸುವಂತಿಲ್ಲ. ಪಾಪ ನಿನ್ನದೆಂತಹ ಬಾಳು ಎಂದು ಸಮಾಧಾನ ಹೇಳಿದಂತೆ ಮಾಡಿ ದಿನವೂ ಮೂದಲಿಸುತ್ತಿತ್ತು.

ಪಾಪ ಸಚಿವರ ನಾಯಿಯು ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ದಿನ ರಾತ್ರಿಯೂ ಚಿಂತಿಸುತ್ತಿತ್ತು. ನಾನು ಕ್ಯಾಬಿನೆಟ್ ದರ್ಜೆ ಸಚಿವರ ನಾಯಿಯಾಗಿ ತಿಂಗಳಿಗೊಮ್ಮೆಯೂ ಮಾಂಸ ತಿನ್ನದ ನನ್ನ ಬಾಳು ಒಂದು ಬಾಳೆ, ಎಂದು ಕೊರಗಿ ಕೊರಗಿ ಜೀವನದಲ್ಲಿ ಬಹಳ ಜುಗುಪ್ಸೆಗೊಂಡಿತ್ತು. ಇದೇ ದುಃಖದಲ್ಲಿ ನಾನಿನ್ನು ಬದುಕಿದ್ದೂ ಏನು ಪ್ರಯೋಜನ, ನಾನು ಹೆಸರಿಗೆ ಮಾತ್ರ ಕ್ಯಾಬಿನೆಟ್ ಸಚಿವರ ನಾಯಿ. ಅದು ವಿರೋಧ ಪಕ್ಷದ ನಾಯಕರ ನಾಯಿಯಾದರೂ ಅದಕ್ಕೆ ದಿನವೂ ಎಂತಹ ಉಪಚಾರ ಎಂದು ಚಿಂತಿಸಿ ಚಿಂತಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿತು.

ಒಂದುದಿನ ಯಾರಿಗೂ ಹೇಳದೆ ಹೋಗಿ ಚಲಿಸುವ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡುಬಿಟ್ಟಿತು ಸಾರ್. ವಿರೋಧ ಪಕ್ಷದ ನಾಯಕರ ನಾಯಿಯು ಹೇಳಿದಂತೆ ಒಂದು ಪಕ್ಷ ಅದು ನಮ್ಮಂತೆ ಮನುಷ್ಯರಾಗಿದ್ದರೆ ಇಷ್ಟೊತ್ತಿಗೆ ಈ ಸಚಿವರನ್ನು ಬಿಟ್ಟು ಬೇರೆ ಯಾವುದಾದರೂ ಸಚಿವರ ಹತ್ತಿರ ಓಡಿಹೋಗುತ್ತಿತ್ತು. ನಾಯಿ ಜಾತಿಗೆ ನಿಷ್ಠೆ ಬದಲಿಸುವ ಕಲ್ಯಾಣಗುಣವನ್ನು ದೇವರು ಕೊಟ್ಟಿಲ್ಲವಲ್ಲ ಸಾರ್ ಎಂದೆ. ಅವರು ನಗುತ್ತಾ ಸಂತಾಪ ಸೂಚಿಸುತ್ತಾ, ನೋಡಿ ನೀವು ಎಷ್ಟಾದರೂ ಬಹಳ ಬುದ್ಧಿವಂತರು, ಆ ನಾಯಿಯ ಮನಸ್ಸನ್ನು ಎಷ್ಟು ಚೆನ್ನಾಗಿ ತಿಳಿದುಕೊಂಡಿದ್ದೀರಿ, ಅದರ ಸಾವನ್ನು ಮನಸ್ಸಿಗೆ ನಾಟುವಂತೆ ಹೇಳಿದಿರಿ. ಆದರೆ, ಆ ಗನ್‍ಮ್ಯಾನ್‍ಗೆ ಈರೀತಿ ಹೇಳಲು ಬರುವುದಿಲ್ಲ ಎಂದರು. ನಾವೂ ಈ ಸಸ್ಯಾಹಾರಿ ಸಚಿವರ ಹತ್ತಿರ ಕೆಲಸ ಮಾಡುತ್ತಿದ್ದೇವೆ ಅಂದಮೇಲೆ ನಮ್ಮದೂ ಸಹ ಆ ನಾಯಿಯ ಬಾಳೆ ಅಲ್ಲವೇ ಸಾರ್ ಎಂದೆ.

ಆ ವ್ಯಕ್ತಿಗೆ ನಾಯಿಯ ಸಾವನ್ನು ಇಷ್ಟೊಂದು ವಿವರವಾಗಿ ಹೇಳಲು ಮುಖ್ಯ ಕಾರಣವೂ ಇತ್ತು. ಅವರು ನಮ್ಮ ಸಚಿವರ ಮುಂದೆ ನಿಷ್ಠೆಯನ್ನು ತೋರಿಸಿದಂತೆ ಮಾಡಿ ಸಚಿವರ ವಿರೋಧಿಗಳ ಪಾಳಯದಲ್ಲಿ ನಮ್ಮ ಸಚಿವರನ್ನು ಬಯ್ಯುತ್ತಿದ್ದರು ಎಂಬ ವಿಷಯ ನನಗೆ ಗೊತ್ತಿತ್ತು, ಅದಕ್ಕಾಗಿ ನಾಯಿ ನೆಪ ಮಾಡಿಕೊಂಡು ಅವರಿಗೆ ನಿಷ್ಠೆಯ ಬಗ್ಗೆ ಒತ್ತಿ ಒತ್ತಿ ಹೇಳಿದ್ದೆ.

ಮೂರು ಬಡ್ಲ್ಯಾಕ ಎಬ್ಸು

ನಾನು ಉತ್ತರ ಕರ್ನಾಟಕ ಭಾಗದ ಸಚಿವರುಗಳ ಆಪ್ತ ಸಿಬ್ಬಂದಿಯಾಗಿ ಕೆಲಸ ಮಾಡಿದ ಅವಕಾಶಗಳೇ ಹೆಚ್ಚು. ನನ್ನ ಬಹಳಷ್ಟು ಸಹೋದ್ಯೋಗಿಗಳು ಹಳೇ ಮೈಸೂರಿನ ಭಾಗದವರು ಇರುತ್ತಿದ್ದರು. ಸಚಿವರ, ನನ್ನ ಹಾಗೂ ನನ್ನ ಸಹೋದ್ಯೋಗಿಗಳ ಭಾಷೆಗಳಲ್ಲಿ ಬಹಳ ವ್ಯತ್ಯಾಸವಿರುತ್ತಿತ್ತು. ನಾನು ಬಳ್ಳಾರಿ ಜಿಲ್ಲೆಯವನಾಗಿರುವುದರಿಂದ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದುದರಿಂದ ಮತ್ತು ಮೈಸೂರಿನಲ್ಲಿ ಮೂರುವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿದ ಅನುಭವವಿರುವುದರಿಂದ ನನಗೆ ಉತ್ತರ ಕರ್ನಾಟಕದ ಭಾಷೆ ಹಾಗೂ ಹಳೇ ಮೈಸೂರು ಭಾಷೆಗಳು ಚೆನ್ನಾಗಿ ಆರ್ಥವಾಗುತ್ತವೆ.

ಒಮ್ಮೆ ಉತ್ತರ ಕರ್ನಾಟಕದ ಸಚಿವರೊಬ್ಬರು ಉತ್ತರ ಕರ್ನಾಟಕ ಭಾಗಕ್ಕೆ ಪ್ರವಾಸ ಹೋದಾಗ ಬೆಳಿಗ್ಗೆ ಮತ್ತು ಸಾಯಂಕಾಲ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆ ಭಾಗದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಆದಷ್ಟು ಮಧ್ಯಾಹ್ನ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ. ಸಚಿವರು ಬೆಳಗಿನ ಕಾರ್ಯಕ್ರಮ ಮುಗಿಸಿ ವಿಶ್ರಾಂತಿ ಗೃಹಕ್ಕೆ ಬಂದು ಊಟ ಮಾಡಿ ವಿಶ್ರಾಂತಿ ಪಡೆಯುವ ದೃಷ್ಟಿಯಿಂದ ಗನ್‍ಮ್ಯಾನ್‍ನನ್ನು ಕರೆದು, ‘ನಾನು ಸ್ವಲ್ಪಹೊತ್ತು ಮಲಗುತ್ತೇನೆ ನೀ ನನ್ನನ್ನ ಮೂರು ಬಡ್ಲ್ಯಾಕ ಎಬ್ಸು’ ಎಂದು ಹೇಳಿದರಂತೆ.

ಸಚಿವರ ಕೊಠಡಿಯು ಮೊದಲನೇ ಮಹಡಿಯಲ್ಲಿತ್ತು, ನಾನು ಊಟ ಮಾಡಿ ನೆಲ ಮಹಡಿಯಲ್ಲಿದ್ದ ಕೊಠಡಿಯಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡುತ್ತಾ ವಿಶ್ರಾಂತಿ ಪಡೆಯುತ್ತಿದ್ದೆ. ಗನ್‍ಮ್ಯಾನ್ ಬಂದು ಬಾಗಿಲನ್ನು ತಟ್ಟಿದ, ಬಾಗಿಲು ತೆಗೆದ ತಕ್ಷಣ ಅವನು ಗಾಬರಿಯಾಗಿರುವುದು ನನ್ನ ಗಮನಕ್ಕೆ ಬಂದಿತು. ಅವನನ್ನು ಏನು ಎಂದು ಕೇಳಿದೆ, ಸ್ಥಳೀಯ ಅಧಿಕಾರಿಗಳು ನನ್ನ ಜೊತೆ ಇದ್ದುದರಿಂದ ಅವನು ಅವರನ್ನು ನೋಡಿ, ಏನೂ ಇಲ್ಲಾ ಸಾರ್ ಎಂದು ಹೋದ. ಮತ್ತೆ ಸ್ವಲ್ಪ ಸಮಯದ ನಂತರ ಬಂದು ಬಾಗಿಲನ್ನು ಬಡಿದ, ತೆಗೆದಾಕ್ಷಣ ಸಾರ್ ಸ್ವಲ್ಪ ಈ ಕಡೆ ಬರುತ್ತೀರಾ ಎಂದು ಅದೇ ಗಾಬರಿಯಿಂದ ಕರೆದ. ನಾನು ಹೊರ ಹೋದೆ.

ಏನು, ಏಕೆ ಇಷ್ಟೊಂದು ಗಾಬರಿಯಾಗಿದ್ದೀಯಾ, ಎಂದು ಕೇಳಿದೆ. ಅವನು ಮತ್ತಷ್ಟು ಹೆದರಿ ಸಾರ್, ಸಾಹೇಬರು (ಮಿನಿಸ್ಟರ್) ಈಗ ನಾನು ಮಲಗುತ್ತೇನೆ ನಂತರ ನೀನು ಮೂರು ಬಡಿದು ನನ್ನನ್ನು ಎಬ್ಬಿಸು ಎಂದು ಹೇಳಿದರು ಸಾರ್, ನಾವೆಲ್ಲಾದರೂ ಸಚಿವರನ್ನು ಬಡಿಯಲು ಸಾಧ್ಯವೇ, ನೀವೇ ಅವರನ್ನು ಬಡಿದು ಎಬ್ಬಿಸಿರಿ ಎಂದ. ನನಗೆ ನಗು ಬಂದಿತು, ನಗುತ್ತಾ ಸರಿಯಾಗಿ ಹೇಳು ಸಚಿವರು ಏನೆಂದು ಹೇಳಿದರು ಎಂದೆ. ಅವನು ಅದೇ ಗಾಬರಿಯಲ್ಲಿ, ಮೂರು ಬಡಿದು ಎಬ್ಬಿಸು ಎಂದರು ಸಾರ್, ಎಂದ. ಸರಿಯಾಗಿ ಕೇಳಿಸಿಕೊಂಡೆಯಾ ಎಂದು ಮತ್ತೆ ಕೇಳಿದೆ, ಅವನು ಹೌದು ಸಾರ್, ಸಾಯಂಕಾಲ 5 ಗಂಟೆ ಕಾರ್ಯಕ್ರಮಕ್ಕೆ ಹೋಗಬೇಕು ಅದಕ್ಕೆ ಮೂರು ಬಡಿದು ಎಬ್ಬಿಸು ಎಂದರು ಸಾರ್ ಎಂದ.

ನನಗೆ ನಗು ತಡೆಯಲಾಗಲಿಲ್ಲ. ನಗುತ್ತಾ ಮೂರು ಬಡ್ಲ್ಯಾಕ ಎಬ್ಸು ಎಂದು ಹೇಳಿದರೇನೊ, ಎಂದು ಕೇಳಿದೆ. ಹೌದು ಹೌದು ಹಾಗೆಯೇ ಹೇಳಿದರು ಸಾರ್ ಎಂದ. ನೀನು ತಿಳಿದಂತೆ ಅದರ ಅರ್ಥ ಮೂರು ಬಡಿದು ಎಬ್ಬಿಸು ಅಂತಾ ಅಲ್ಲ, ಮೂರು ಗಂಟೆ ಬಡಿದಾಕ್ಷಣ ಅಂದರೆ ಮೂರುಗಂಟೆಯಾದಾಕ್ಷಣ ಎಬ್ಬಿಸು ಎಂದು ಅರ್ಥ ಎಂದೆ. ಆಗ ಅವನು ಹೋ, ಹಾಗಾ ಸಾರ್ ಎನ್ನುತ್ತ ಸಮಾಧಾನದ ಉಸಿರು ಬಿಟ್ಟ. ಸಚಿವರ ಭಾಷೆ ನಮಗೆ ಸರಿಯಾಗಿ ಅರ್ಥವಾಗುವುದಿಲ್ಲ ಸಾರ್, ನೀವು ಹೇಳಿದಿರಿ ಸರಿ. ನೀವು ಇಲ್ಲದಿದ್ದರೆ ನಾನು ಏನು ಮಾಡಬೇಕಾಗಿತ್ತು ಸಾರ್, ಸಚಿವರನ್ನು ಬಡಿಯುವುದು ಹೇಗೆ ಎಂದು ಯೋಚಿಸುತ್ತಿದ್ದೆ ಎಂದ. ಅವನನ್ನು ಕಳುಹಿಸಿ ನಾನು ನಗುತ್ತಾ ಕೊಠಡಿಯೊಳಗೆ ಹೋದಾಗ ಅಧಿಕಾರಿಗಳು, ಏಕೆ ಸಾರ್ ನಗುತ್ತೀರಿ ಎಂದರು. ಅವರಿಗೆ ನಡೆದ ಈ ಪ್ರಸಂಗವನ್ನು ಹೇಳಿದೆ, ಅವರೂ ನಕ್ಕರು.

ಮತ್ತೊಮ್ಮೆ ಬಿಜಾಪುರ ಜಿಲ್ಲೆಯ ಸಚಿವರೊಬ್ಬರ ಜೊತೆ ಕೆಲಸ ಮಾಡುತ್ತಿದ್ದಾಗ ನಡೆದ ಪ್ರಸಂಗವಿದು. ಬೆಂಗಳೂರಿನಲ್ಲಿ ಸಚಿವರ ವಾಸಕ್ಕಾಗಿ ಸರ್ಕಾರ ಕೊಟ್ಟಿದ್ದ ಖಾಸಗಿ ಮನೆಯಲ್ಲಿ ಸಚಿವರೊಬ್ಬರೆ ಇರುತ್ತಿದ್ದರು, ಅವರ ಕುಟುಂಬದವರು ತಮ್ಮ ಊರಿನಲ್ಲಿ ಇರುತ್ತಿದ್ದರು. ಒಂದು ದಿನ ಸಚಿವರು ಪ್ರವಾಸದಿಂದ ಬೆಂಗಳೂರಿನ ಮನೆಗೆ ಬೆಳಿಗ್ಗೆ 8.00 ಗಂಟೆಗೆ ಬಂದರು, 9.30ಕ್ಕೆ ಸಚಿವ ಸಂಪುಟ ಸಭೆಗೆ ಹೋಗಬೇಕಿತ್ತು. ಸಚಿವರು ಬಂದ ತಕ್ಷಣ ನಾನು ಸಚಿವ ಸಂಪುಟ ಸಭೆಯ ವಿಷಯಗಳನ್ನು ತೋರಿಸುತ್ತಿದ್ದೆ. ಅವರು ಬೇಗನೆ ಸ್ನಾನ ಮಾಡಿಕೊಂಡು ರೆಡಿಯಾಗಿ ಬರುತ್ತೇನೆ ಎಂದು ಹೇಳಿ, ಮನೆಯಲ್ಲಿದ್ದ ಡಿ-ಗ್ರೂಪ್ (ದಲಾಯತ್) ನೌಕರನನ್ನು ಕರೆದು ಹೋಟೆಲ್‍ನಿಂದ ತಿಂಡಿ ತರಲು ಕಳುಹಿಸಿದರು.

ಅಲ್ಲಿದ್ದ ಗನ್‍ಮ್ಯಾನ್‍ನನ್ನು ಕರೆದು ಅವನಿಗೆ 50 ರೂಪಾಯಿಗಳ ಒಂದು ನೋಟನ್ನು ಕೊಟ್ಟು ನೀ ಹೋಗಿ ಗಡಾನ (ಬೇಗನೆ) ಒಂದು ಪಾನ ಮತ್ತ ಎಳ್ಡು ಬಾಳಿಕಾಯಿ ತಗಂಬಾ ಎಂದು ಹೇಳಿದರು. ಅವನು ಹಳೇ ಮೈಸೂರು ಪ್ರಾಂತದವನಾಗಿದ್ದ, ಆಯ್ತು ಸ್ವಾಮಿ ಎಂದು ಹೊರಟ. ಸುಮಾರು ಅರ್ಧ ಗಂಟೆ ಕಳೆದರೂ ಅವನು ಬರಲೇ ಇಲ್ಲ, ಲೇಟಾಯಿತೆಂದು ಸಚಿವರು ಚಡಪಡಿಸುತ್ತಿದ್ದರು. ಈಗಿನಂತೆ ಆಗ ಮೊಬೈಲ್ ಫೋನ್‍ಗಳು ಇರಲಿಲ್ಲ. ಅವನನ್ನು ಹುಡುಕಲು ಡ್ರೈವರ್‍ನನ್ನು ಕಳುಹಿಸಿದೆವು. ಡ್ರೈವರ್ ಒಂದು ದಿಕ್ಕಿಗೆ ಹೋದರೆ ಇವನು ಇನ್ನೊಂದು ದಿಕ್ಕಿನಿಂದ ಕೈಯಲ್ಲಿ ಎರೆಡು ಬಾಳಿ ಕಾಯಿ ಮತ್ತು ಒಂದು ಪಾನ್ (ಬೀಡಾವನ್ನು) ಹಿಡಿದುಕೊಂಡು ಬಂದ. ಸಾರ್ ಇವು ಇಲ್ಲೆಲ್ಲೂ ಹತ್ತಿರದಲ್ಲಿ ಸಿಗಲಿಲ್ಲ ಅದಕ್ಕಾಗಿ ಸ್ವಲ್ಪ ದೂರದಲ್ಲಿರುವ ಮಾರ್ಕೆಟ್‍ಗೆ ಹೋಗಿ ತಂದೆ ಎಂದು ಸಚಿವರ ಮುಂದೆ ಇಟ್ಟ.

ಸಚಿವರು ಅವುಗಳನ್ನು ನೋಡುತ್ತಾ, ನಿನಗಾ ತಲಿ ಸರಿ ಐತಾ ಇಲ್ಲಾ, ಬೆಳಿಗ್ಗೆ ಬೆಳಿಗ್ಗೆ ಬೀಡಾ ತಂದೀಯಲ್ಲಾ, ಈ ಹಸೀ ಬಾಳಿಕಾಯಿ ತಿನ್ನಾಕ ಬರ್ತೈತೇನು ಎಂದರು. ಆಗ ಅವನು ನೀವೇ ಹೇಳಿದ್ರಲ್ಲಾ ಸ್ವಾಮಿ, ಒಂದು ಪಾನ್, ಎರೆಡು ಬಾಳಿ ಕಾಯಿ ತೆಗೆದುಕೊಂಡು ಬಾ ಎಂದು, ಈ ಬಾಳಿಕಾಯಿ ತಿನ್ನಲು ಬರುವುದಿಲ್ಲ ಪಲ್ಯ ಮಾಡಲು ಬರುತ್ತದೆ ಎಂದ. ಸಚಿವರು ಅಯ್ಯೋ ಮಹರಾಯ ಹೋಗಿ ಹೋಗಿ ನಿನಗ ಹೇಳಿದೆನಲ್ಲಾ, ಎನ್ನುತ್ತಾ, ತಿಂಡಿ ತರಲು ಹೋಗಿದ್ದ ಅವರ ಊರಿನ ಡಿ-ಗ್ರೂಪ್ ನೌಕರನನ್ನು ಕರೆದು ಬೇಗನೆ ಪಾನ ಮತ್ತು ಬಾಳಿಕಾಯಿಗಳನ್ನು ತರಲು ಹೇಳಿದರು. ಅವನು ಐದೇ ನಿಮಿಷದಲ್ಲಿ ಎರೆಡು ಬಾಳೆ ಹಣ್ಣು ಮತ್ತು ಒಂದು ಷೇವಿಂಗ್ ಬ್ಲೇಡ್‍ಅನ್ನು ತಂದು ಸಚಿವರ ಮುಂದಿಟ್ಟ. ಅವರ ಭಾಷೆಯಲ್ಲಿ ಪಾನ ಎಂದರೆ ಷೇವಿಂಗ್ ಬ್ಲೇಡ್ ಮತ್ತು ಬಾಳಿಕಾಯಿ ಎಂದರೆ ಬಾಳೆ ಹಣ್ಣು. ಗನ್‍ಮ್ಯಾನ್ ತಂದಿದ್ದ ಎರೆಡು ಬಾಳಿಕಾಯಿಗಳನ್ನು ಸಚಿವರು ಅವನ ಕೈಗೆ ಕೊಡುತ್ತಾ, ಇವೆರಡನ್ನೂ ನೀನೆ ತಿಂದು ಆಮೇಲೆ ಬೀಡ ತಿನ್ನು ಎಂದು ಹೇಳಿ ನಗುತ್ತಾ ಸ್ನಾನ ಮಾಡಲು ಹೊರಟರು. ಗನ್‍ಮ್ಯಾನ್‍ನ ಗಾಬರಿಯನ್ನು ನೋಡಿ ಎಲ್ಲರೂ ನಕ್ಕೆವು.

ಇದೇ ಸಚಿವರೊಂದಿಗೆ ಮತ್ತೊಂದು ಊರಿಗೆ ಹೋದಾಗ ಸಚಿವರು ವ್ಯಕ್ತಿಯೊಬ್ಬನೊಂದಿಗೆ ಮಾತನಾಡುತ್ತಾ, ಸರಿ ನಿನ್ನ ಹೆಸರನ್ನು ನಮ್ಮ ಪಿ.ಎ. (ಆಪ್ತ ಸಹಾಯಕ) ಹತ್ತಿರ ಬರೆಯಿಸು ಎಂದು ಹೇಳಿ ನನ್ನ ಕಡೆ ನೋಡುತ್ತಾ ಇವರ ಹೆಸರನ್ನು ಬರೆದುಕೊಳ್ಳಿ ಎಂದು ಹೇಳಿದರು. ನಾನು ಸರಿ ಎನ್ನುತ್ತಾ ಆ ವ್ಯಕ್ತಿಯ ಹೆಸರನ್ನು ಕೇಳಿದೆ. ಆ ವ್ಯಕ್ತಿಯು ತನ್ನ ಹೆಸರು ಶ್ರೀ ಹಣಮಂತರಾಯ ಜಹಗೀರದಾರ್ ಭೀಮರಾಯ ಜಹಗೀರದಾರ್ ಹೂವಿನಹಿಪ್ಪರಗಿ ಎಂದು ಹೇಳಿದ. ನಾನು ಆ ವ್ಯಕ್ತಿಗೆ ನನಗೆ ನಿಮ್ಮ ವಿಳಾಸ ಬೇಕಿಲ್ಲ, ನಿಮ್ಮ ಹೆಸರನ್ನು ಮಾತ್ರ ಹೇಳಿ ಎಂದೆ.

ಆ ವ್ಯಕ್ತಿಯು ಇದೇ ನನ್ನ ಹೆಸರು, ನನ್ನ ಪತ್ತಾ (ಅಡ್ರಸ್) ಕೊಡ್ಲಿ ಏನ್ರೀ ಸರ (ಸರ್) ಎಂದರು. ಅವರ ಹೆಸರನ್ನು ಕೇಳಿಯೇ ಸುಸ್ತಾದ ನಾನು ಇನ್ನು ವಿಳಾಸ ಎಷ್ಟು ಉದ್ದವಿರುತ್ತದೋ ಎಂದು ಯೋಚಿಸಿ, ಬೇಡ ಬೇಡ ನಿಮ್ಮ ಹೆಸರು ಮಾತ್ರ ಸಾಕು ಎಂದು, ಏನು ನಿಮ್ಮ ಹೆಸರು ಇಷ್ಟೊಂದು ಉದ್ದ ಇದೆ ಎಂದೆ. ಆಗ ಅವರು ನಮ್ಮ ಕಡೆ ಹೀಂಗಾ ಸರ ಎಂದು ಹೇಳುತ್ತಾ ವಿವರಣೆ ಕೊಡಲು ಪ್ರಾರಂಭಿಸಿದರು, ಹಣಮಂತರಾಯ ನನ್ನ ಹೆಸರು ಸರ, ಜಹಗೀರದಾರ ಎಂಬುದು ನಮ್ಮ ಮನೆತನದ ಹೆಸರು ಸರ. ಭೀಮರಾಯ ಎಂಬುದು ನಮ್ಮಪ್ಪನ ಹೆಸರು ಸರ, ಜಹಗೀರದಾರ ಎಂಬುದು ಮತ್ತೆ ನಮ್ಮ ಮನೆತನದ ಹೆಸರು ಸರ ಮತ್ತ ಹೂವಿನ ಹಿಪ್ಪರಗ್ಯಾಗ ನಮ್ಮ ಮುತ್ತಜ್ಜನ ಮುತ್ತಜ್ಜೋರು ಇದ್ದರಂತೆ, ಈಗ ನಮ್ಮ ಮುತ್ಯಾನ (ಅಜ್ಜ) ಕಾಲದಿಂದ ಈ ಊರಿನ್ಯಾಗ ಅದೀವ್ರಿ ಸರ, ಎಂದು ನಗುತ್ತಾ ಈಗಿನ ಪತ್ತಾ ಕೊಡ್ಲಾ ಸರ ಎಂದು ಮತ್ತೊಮ್ಮೆ ಕೇಳಿದ. ಈ ವಿವರಣೆ ಕೇಳಿ ಸುಸ್ತಾಗಿದ್ದ ನಾನು ಸಾಕು ಸಾಕು ಎಂದೆ.

 

ಹಾಂಗ ಮಾಡಿದ್ರ ಹ್ಯಾಂಗ

ಸಚಿವರು ಪ್ರವಾಸದಲ್ಲಿದ್ದಾಗ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸುವುದು ರೂಢಿ. ಅದರಲ್ಲೂ ವಿಶೇಷವಾಗಿ ತಮ್ಮ ಮತಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ಅಲ್ಲಿಯ ಸಣ್ಣಪುಟ್ಟ ಸಮಸ್ಯೆಗಳನ್ನು ಆಲಿಸಿ, ಅವುಗಳು ಸ್ಥಳೀಯ ಸಮಸ್ಯೆಗಳಾಗಿದ್ದಲ್ಲಿ ಸ್ಥಳೀಯ ಅಧಿಕಾರಿಗಳನ್ನು ಕರೆದು ಅವರ ಎದುರಿಗೆ ಸಾಧ್ಯವಾದಷ್ಟು ಅಲ್ಲಿಯೇ ಬಗೆಹರಿಸುತ್ತಾರೆ.

ನಮ್ಮ ಸಚಿವರು ತಮ್ಮ ಮತಕ್ಷೇತ್ರಕ್ಕೆ ಭೇಟಿ ನೀಡಿದಾಗ ಜನರು ಹಲವಾರು ಸಮಸ್ಯೆಗಳ ಮನವಿಪತ್ರಗಳನ್ನು ತರುತ್ತಿದ್ದರು. ನಾನು ಆಪ್ತ ಸಹಾಯಕನಾಗಿ ಬಹಳಷ್ಟು ಅನುಭವ ಹೊಂದಿದವನೆಂಬ ಕಾರಣದಿಂದ ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಅವುಗಳನ್ನು ಅಧಿಕಾರಿಗಳೊಂದಿಗೆ ಮಾತನಾಡಿ ಬಗೆಹರಿಸಲು ಸಚಿವರು ನನಗೆ ಹೇಳುತ್ತಿದ್ದರು. ಒಮ್ಮೆ ಒಬ್ಬ ಶಿಕ್ಷಕರು ತಮಗೆ ಆರು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲವೆಂದು ಸಚಿವರಿಗೆ ದೂರು ಸಲ್ಲಿಸಿದರು. ಸಚಿವರು ಅವರ ಅಹವಾಲನ್ನು ಅಲ್ಲಿಯೇ ಬಗೆಹರಿಸುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಯನ್ನು ಕರೆಯಿಸುವಂತೆ ನನಗೆ ಹೇಳಿದರು. ನಾನು ಸ್ಥಳೀಯ ಸಹಾಯಕ ಶಿಕ್ಷಣಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯ ವಿಷಯವನ್ನು ತಿಳಿಸಿ, ಆ ಸಮಸ್ಯೆಯ ಪೂರ್ಣಮಾಹಿತಿಯೊಂದಿಗೆ ಮಾನ್ಯ ಸಚಿವರನ್ನು ಭೇಟಿಮಾಡಿ ಚರ್ಚಿಸಲು ತಿಳಿಸಿದೆ.

ಸದರಿ ಅಧಿಕಾರಿಯವರು ಬಂದಾಗ ಸಚಿವರು ದೂರು ನೀಡಿದ ಶಿಕ್ಷಕರನ್ನು ಕರೆದು ಆ ಅಧಿಕಾರಿಗಳ ಎದುರಿಗೆ ಕೇಳಿದಾಗ, ಶಿಕ್ಷಕರು ತಮಗೆ ಆರು ತಿಂಗಳುಗಳಿಂದ ಸಂಬಳ ಕೊಡದಿರುವ ಬಗ್ಗೆ ಆ ಅಧಿಕಾರಿಯ ವಿರುದ್ಧ ದೂರು ಹೇಳಿದರು. ಆರು ತಿಂಗ್ಳುಗಟ್ಲೆ ಪಗಾರ (ಸಂಬಳ) ಕೊಡದಿದ್ರ ಅವ್ರು ಹ್ಯಾಂಗ ಬದ್ಕಬೇಕು, ಹಾಂಗ ಮಾಡಿದ್ರ ಹ್ಯಾಂಗ, (ಹಾಗೆ ಮಾಡಿದರೆ ಹೇಗೆ) ಎಂದು ಆ ಅಧಿಕಾರಿಯನ್ನು ಕೇಳಿದರು. ಆಗ ಆ ಅಧಿಕಾರಿಯು, ಸದರಿ ಶಿಕ್ಷಕರಿಗೆ ಬೇರೆ ಊರಿಗೆ ವರ್ಗಾವಣೆಯಾಗಿದ್ದು ಅವರ ಬದಲಿಗೆ ಬೇರೊಬ್ಬ ಶಿಕ್ಷಕರು ಕೆಲಸಕ್ಕೆ ಹಾಜರಾಗಿರುವುದಾಗಿ ಮತ್ತು ಈ ಶಿಕ್ಷಕರು ವರ್ಗವಾಗಿರುವ ಸ್ಥಳಕ್ಕೆ ಹೋಗದೆ ಇಲ್ಲಿಯೇ ಸಂಬಳ ಕೇಳುತ್ತಿರುವುದರಿಂದ ತಾವು ಸಂಬಳಕೊಡಲು ಬರುವುದಿಲ್ಲವೆಂದು ತಿಳಿಸಿದರು. ಅರೇ ಹೀಂಗಾ, ವರ್ಗಿ (ವರ್ಗಾವಣೆ) ಆದಮ್ಯಾಲ ಹೋಗದಿದ್ರ ಪಗಾರ (ಸಂಬಳ) ಕೊಡಾಕ ಹ್ಯಾಂಗ ಬರ್ತದ, ಹಾಂಗ ಮಾಡಿದ್ರ ಹ್ಯಾಂಗ, ಎಂದು ಶಿಕ್ಷಕರನ್ನು ಸಚಿವರು ಕೇಳಿದರು.

ಸಚಿವರ ಮಾತಿಗೆ ಸಹಾಯಕ ಶಿಕ್ಷಣಾಧಿಕಾರಿಗಳು ತಲೆತೂಗಿದರು. ಅಲ್ಲಾ ಸಾರ್ ನನ್ನನ್ನ ಈ ಊರಿನಿಂದ 15 ಕಿಲೋಮೀಟರ್ ದೂರದ ಊರಿಗೆ ವರ್ಗ ಮಾಡಿದ್ದಾರೆ. ನನ್ನ ಹೆಂಡ್ರು ಮಕ್ಳು ಇದಾ ಊರಾಗ ಅದಾರ. ನಾ ಹೊಲ ಮನಿ, ಹೆಂಡ್ರು ಮಕ್ಳು ಬಿಟ್ಟು ಅಷ್ಟು ದೂರ ಹ್ಯಾಂಗ ಹೋಗ್ಲಿ, ನಾ ಹೋದ್ರ ಹೊಲಮನಿ ಹಾಳುಬಿದ್ದು ಹೋಗ್ತಾವ ಎಂದು ಶಿಕ್ಷಕರು ಹೇಳಿದರು. ಅದಕ್ಕೂ ತಲೆಹಾಕಿದ ಸಚಿವರು ಹೌದು 15 ಕಿಲೋಮೀಟರ್ ದೂರದ ಊರಿಗೆ ವರ್ಗಿ ಮಾಡಿದ್ರ ಹ್ಯಾಂಗ, ಅವ್ರು ಹೆಂಡ್ರು ಮಕ್ಳು ಹೊಲ ಮನಿ ಬಿಟ್ಟು ಹ್ಯಾಂಗ ಹೋಗ್ಬೇಕು, ಹಾಂಗ ಮಾಡಿದ್ರ ಹ್ಯಾಂಗ, ಎಂದು ಸಹಾಯಕ ಶಿಕ್ಷಣಾಧಿಕಾರಿಯನ್ನು ಕೇಳಿದರು.

ವರ್ಗಾವಣೆಯನ್ನು ತಾವು ಮಾಡಿಲ್ಲ ಸರಕಾರ ಮಾಡಿದೆ ಎಂದು ಸಹಾಯಕ ಶಿಕ್ಷಣಾಧಿಕಾರಿಗಳು ಹೇಳಿದಾಗ, ಸಚಿವರು ಹೌದಾ, ಪಾಪ ವರ್ಗಿ ಇವ್ರು ಮಾಡಿಲ್ಲಂತೆ, ಸರ್ಕಾರ ಮಾಡೈತಂತೆ, ನೀವು ಹಾಂಗ ಮಾಡಿದ್ರ ಹ್ಯಾಂಗ, ಎಂದು ಶಿಕ್ಷಕರನ್ನು ಕೇಳಿದರು. ಒಟ್ಟಾರೆ ಸಮಸ್ಯೆಯನ್ನು ಬಗೆಹರಿಸದೆ ಇಬ್ಬರ ಮಾತಿಗೂ “ಹಾಂಗ ಮಾಡಿದ್ರ ಹ್ಯಾಂಗ”, ಎಂದು ಕೇಳುತ್ತಿದ್ದರು. ಶಿಕ್ಷಕರು ಮತ್ತು ಸಹಾಯಕ ಶಿಕ್ಷಣಾಧಿಕಾರಿಗಳು ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳಲು ಪ್ರಾರಂಭಿಸಿದರು. ಈ ಪ್ರಹಸನ ನೋಡಿದ ನಾನು ಸಾರ್ ಅವರೊಂದಿಗೆ ನಾನು ಮಾತನಾಡುತ್ತೇನೆ ಎಂಬ ದೃಷ್ಟಿಯಿಂದ ಸಚಿವರ ಮುಖವನ್ನು ನೋಡಿದೆ. ಸಚಿವರಿಗೆ ಅದು ಅರ್ಥವಾಗಿ ಇಬ್ಬರೂ ನನ್ನ ಜೊತೆ ಮಾತನಾಡಲು ಹೇಳಿ ಕಳುಹಿಸಿದರು, ಇಬ್ಬರೂ ನನ್ನ ಜೊತೆ ಬಂದರು. ವರ್ಗಾವಣೆ ಮಾಡಿರುವುದು ಸರ್ಕಾರ, ಇದರಲ್ಲಿ ಸಹಾಯಕ ಶಿಕ್ಷಣಾಧಿಕಾರಿಗಳ ಪಾತ್ರ ಏನೂ ಇಲ್ಲ, ನೀವು ದಯವಿಟ್ಟು ವರ್ಗವಾಗಿರುವ ಊರಿಗೆ ಹೋಗಿ ಕೆಲಸಕ್ಕೆ ಹಾಜರಾಗಿ. ಹೇಗಿದ್ದರೂ ಮುಂದಿನ ತಿಂಗಳಲ್ಲಿ ಮತ್ತೆ ಸಾರ್ವಜನಿಕ ವರ್ಗಾವಣೆಗಳು ಪ್ರಾರಂಭವಾಗುತ್ತವೆ. ಆಗ ನಿಮ್ಮನ್ನು ಮತ್ತೆ ಇದೇ ಊರಿಗೆ ವರ್ಗಮಾಡಲು ಸಚಿವರಿಂದ ಮಿನಿಟ್ ಹಾಕಿಸೋಣ ಎಂದು ಶಿಕ್ಷಕರಿಗೆ ಹೇಳಿದಾಗ ಅವರು ಹಾಗೇ ಆಗಲಿ ಎಂದು ಒಪ್ಪಿದರು.

ಇನ್ನೊಂದುಬಾರಿ ಇದೇ ರೀತಿಯ ಸಮಸ್ಯೆ ಬಂದಿತು. ಒಬ್ಬ ರೈತ ಬಂದು ಸ್ಥಳೀಯ ಬ್ಯಾಂಕಿನವರು ತಮಗೆ ಸಾಲ ನೀಡುತ್ತಿಲ್ಲವೆಂದು ಸಚಿವರಿಗೆ ದೂರು ಸಲ್ಲಿಸಿದರು. ದೂರು ಕೇಳಿದ ಸಚಿವರು ಹಾಂಗ ಮಾಡಿದ್ರ ಹ್ಯಾಂಗ, ಆ ಬ್ಯಾಂಕಿನ ಮೇನೇಜರನ್ನು ಕರೆಯಿಸೆಂದು ನನಗೆ ಹೇಳಿದರು. ಮೇನೇಜರನ್ನು ಕರೆಯಿಸಿದೆ. ಯಾಕ್ರೀ ಇವ್ರಿಗೆ ಸಾಲ ಕೊಟ್ಟಿಲ್ಲ ಎಂದು ರೈತರ ಎದುರಿಗೇ ಸಚಿವರು ಅವರನ್ನು ಕೇಳಿದರು. ಸಾರ್ ಸಾಲ ಕೊಡಲು ನಾನು ಈಗಲೇ ತಯಾರಿದ್ದೇನೆ, ಅವರ ಸಾಲದ 1/3ರಷ್ಟು ಹಣ ಮೊದಲು ಅವರ ಖಾತೆಯಲ್ಲಿರಬೇಕು, ಅದನ್ನು ಖಾತೆಗೆ ಕಟ್ಟಿದ ತಕ್ಷಣ ಸಾಲದ ಹಣ ಬಿಡುಗಡೆಮಾಡುತ್ತೇನೆ, ಅದನ್ನು ಅವರಿಗೆ ತಿಳಿಸಿದ್ದೇನೆ. ಆದರೆ ಅವರು ಅದನ್ನೂ ಕಟ್ಟಲು ತಯಾರಿಲ್ಲ ಎಂದರು. ಆಗ ಸಚಿವರು ರೈತನ ಕಡೆ ತಿರುಗಿ, ಹೌದು ನೀವು ಹಾಂಗ ಮಾಡಿದ್ರ ಹ್ಯಾಂಗ, ಎಂದರು.

ಆಗ ಆ ರೈತ ‘ಅರೇ ಅಷ್ಟು ರೊಕ್ಕ ನನ್ನ ಬಲ್ಲೆ ಇದ್ರ (ಅಷ್ಟೊಂದು ಹಣ ನನ್ನ ಹತ್ತಿರವಿದ್ದರೆ) ನಾನ್ಯಾಕ ಸಾಲ ಕೇಳೋಕ ಅವ್ರ ಬ್ಯಾಂಕಿಗೆ ಹೋಗ್ತಿದ್ದೆ’ ಎಂದರು. ಆಗ ಸಚಿವರು ಬ್ಯಾಂಕ್ ಮೇನೇಜರ್ ಕಡೆ ತಿರುಗಿ, ಹೌದಲ್ಲ ಅವ್ರ ಹತ್ರ ರೊಕ್ಕ ಇದ್ರ ನಿಮ್ಮಹತ್ರ ಸಾಲ ಕೇಳಾಕ ಯಾಕ ಬರ್ತಿದ್ರು, ಹಾಂಗ ಮಾಡಿದ್ರ ಹ್ಯಾಂಗ, ಎಂದರು. ಇಲ್ಲ ಸಾರ್ ನಮ್ಮ ಬ್ಯಾಂಕ್ ರೂಲ್ಸ್ ಹಾಗೆ ಇದೆ 1/3ರಷ್ಟು ಹಣ ಕಟ್ಟಲೇಬೇಕು ಎಂದರು. ಆಗ ಸಚಿವರು ಹೌದು ಬ್ಯಾಂಕ್ ರೂಲ್ಸ್ ಹಾಂಗ ಇದ್ದಮೇಲೆ ಮೇನೇಜರ್ ಏನಮಾಡಾಕ ಬರ್ತೈತಿ, ರೊಕ್ಕ ಕಟ್ಲಾಕ ಬೇಕು, ಹಾಂಗ ಮಾಡಿದ್ರ ಹ್ಯಾಂಗ, ಎನ್ನುತ್ತಾ ರೈತನ ಮುಖ ನೋಡಿದರು.

ಇದನ್ನು ನೋಡುತ್ತಿದ್ದ ಜನರಿಗೆ ಒಂದು ರೀತಿಯ ಮನರಂಜನೆ ಸಿಕ್ಕಂತಾಗಿ ನಗು ಬಂದರೂ ನಗದೆ ಸುಮ್ಮನೆ ಕುಳಿತಿದ್ದರು. ಯಥಾ ಪ್ರಕಾರ ಅವರಿಬ್ಬರ ಜೊತೆ ಮಾತನಾಡುವಂತೆ ಸಚಿವರು ನನಗೆ ಹೇಳಿದರು. ಇಬ್ಬರನ್ನೂ ಹೊರಗಡೆ ಕರೆದ ನಾನು, ಅಲ್ಲಾ ಯಜಮಾನ್ರೆ ಅವರ ಬ್ಯಾಂಕಿನ ರೂಲ್ಸ್ ಹಾಗೆ ಇದೆ, ಮೇನೇಜರ್ ಅದನ್ನ ಬಿಟ್ಟು ಸಾಲ ಕೊಡುವಂತಿಲ್ಲ. ಅದಕ್ಕಾಗಿ ನೀವು ಎಲ್ಲಿಯಾದ್ರೂ ಕೈಸಾಲ ಮಾಡಿ ಅವರು ಹೇಳಿದ 1/3ರಷ್ಟು ರೊಕ್ಕ ಬ್ಯಾಂಕಿಗೆ ಕಟ್ಟಿರಿ, ಮೇನೇಜರ್ ಕೂಡಲೆ ಸಾಲದ ರೊಕ್ಕ ಬಿಡುಗಡೆ ಮಾಡುತ್ತಾರೆ, ಆ ರೊಕ್ಕದಲ್ಲಿ ಕೈಸಾಲ ತೀರಿಸಬಹುದು ಎಂದೆ. ಅದಕ್ಕೆ ಮೇನೇಜರ್ ಒಪ್ಪಿದರು. ಹಾಂಗಾದ್ರ ಈಗ್ಲೆ ಕೈಸಾಲ ತಂದು ರೊಕ್ಕ ಕಟ್ತೀನಿ, ನೀವು ನಾಳೀಕೆ (ನಾಳೆಗೆ) ಸಾಲ ಕೊಡ್ಬೇಕು ಎಂದು ಹೇಳಿ ಹೊರಟರು, ಅದಕ್ಕೆ ಮೇನೇಜರ್ ಒಪ್ಪಿ ನನಗೆ ಥ್ಯಾಂಕ್ಸ್ ಹೇಳಿ ಹೋದರು.

ಇಂತಹ ಹಲವಾರು ಪ್ರಕರಣಗಳು ನಡೆದಿದ್ದವು. ನಮ್ಮ ಸಚಿವರು ಒಬ್ಬರು ಒಂದು ಹೇಳಿದರೆ ಅದಕ್ಕೂ ಸರಿ ಎನ್ನುತ್ತಿದ್ದರು, ಇನ್ನೊಬ್ಬರು ಇನ್ನೊಂದು ಹೇಳಿದರೆ ಅದಕ್ಕೂ ಸರಿ ಎನ್ನುತ್ತಿದ್ದರು. ಸಚಿವರು ಹಾಂಗ ಮಾಡಿದ್ರ ಹ್ಯಾಂಗ? ಒಟ್ಟಾರೆ ಸಮಸ್ಯೆ ಇತ್ಯರ್ಥವಾಗುತ್ತಿರಲಿಲ್ಲ. ಮಧ್ಯದಲ್ಲಿ ಇನ್ನೊಬ್ಬರು ಪ್ರವೇಶಿಸಿ ಅದನ್ನು ಇತ್ಯರ್ಥಪಡಿಸಬೇಕಾಗುತ್ತಿತ್ತು.

 

ಕಾಡು ಕೋಳಿ ತಿನ್ನಿ ಸಾರ್

ರಾಜ್ಯಾದ್ಯಂತ ಪ್ರತಿವರ್ಷವೂ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯವರು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವನ್ಯಜೀವಿ ಸಂರಕ್ಷಣಾ ಸಪ್ತಾಹವನ್ನು ಆಚರಣೆ ಮಾಡಿ ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ನಾನು ಒಬ್ಬ ಅರಣ್ಯ ಸಚಿವರ ಆಪ್ತ ಸಿಬ್ಬಂದಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವನ್ಯಜೀವಿ ಸಂರಕ್ಷಣಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವರ ಜೊತೆ ಹೋಗಿದ್ದೆ. ಕೊಡಗಿನ ಜನರು ಶಿಸ್ತಿನ ಸಿಪಾಯಿಗಳು, ಎಲ್ಲದರಲ್ಲೂ ಅವರು ಶಿಸ್ತನ್ನು ಪಾಲಿಸುತ್ತಾರೆ ಮತ್ತು ಆತಿಥ್ಯಪ್ರಿಯರು. ಸಮಾರಂಭವನ್ನು ಬಹಳ ಅಚ್ಚುಕಟ್ಟಾಗಿ ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಕೆಲವು ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳ ಸದಸ್ಯರು ಸಹ ಭಾಗವಹಿಸಿದ್ದರು. ಎಲ್ಲರಿಗೂ ತಿಳಿದಂತೆ ಕೊಡಗು ಜಿಲೆಯಲ್ಲಿ ಬಹಳಷ್ಟು ಜನರು ಮಾಂಸಾಹಾರಿಗಳು, ಮಾಂಸಕ್ಕಾಗಿ ಹಂದಿಗಳನ್ನು ಸಾಕುತ್ತಾರೆ ಮತ್ತೂ ಕೆಲವರು ಕಾಡುಹಂದಿ ಮೊದಲಾದ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ತಿನ್ನುತ್ತಾರೆ. ಅವರೇ ಹೇಳುವಂತೆ ಕಾಡು ಪ್ರಾಣಿಗಳ ಮಾಂಸವು ಸಾಕಿದ ಪ್ರಾಣಿಗಳ ಮಾಂಸಕ್ಕಿಂತ ಹೆಚ್ಚು ರುಚಿಕರವಾಗಿರುತ್ತದಂತೆ.

ಮೇಲ್ಕಂಡ ಸಪ್ತಾಹದಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ಒಬ್ಬ ಅಧಿಕಾರಿಯು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಭಾರಿ ಆವೇಶದಿಂದ ಮಾತನಾಡಿದರು: ಯಾವ ಯಾವ ಅರಣ್ಯಗಳಲ್ಲಿ ಯಾವ ಯಾವ ಜಾತಿಯ ಪ್ರಾಣಿಗಳು ಎಷ್ಟೆಷ್ಟು ಇವೆ, ಅದರಲ್ಲೂ ಅವುಗಳಲ್ಲಿ ಗಂಡು ಹೆಣ್ಣು ಪ್ರಾಣಿಗಳೆಷ್ಟು ಎಂಬುದನ್ನು ನಿಖರವಾಗಿ ಹೇಳಿದರು. ಗಂಡು ಹೆಣ್ಣಿನ ಅನುಪಾತದಲ್ಲಿ ಬಹಳ ಅಂತರವಿರುವುದರಿಂದ ಅವುಗಳ ಜನನ ಪ್ರಮಾಣದಲ್ಲಿ ಇಳಿಮುಖವಾಗುತ್ತಿರುವ ಬಗ್ಗೆಯೂ ಹೇಳಿ, ಮಾನವನ ಬೇಟೆಗೆ ಪ್ರತೀ ವರ್ಷವೂ ಯಾವ ಯಾವ ಕಾಡಿನಲ್ಲಿ ಎಷ್ಟೆಷ್ಟು ಜಾತಿಯ ಪ್ರಾಣಿಗಳು ಬಲಿಯಾಗುತ್ತಿವೆ ಎಂಬ ಅಂಕಿ ಅಂಶಗಳನ್ನು ಸಹ ಕೊಟ್ಟರು.

ಅವರ ಈ ಮಾಹಿತಿ ಸಂಗ್ರಹ ನಮಗೆಲ್ಲಾ ಅಚ್ಚರಿ ಮೂಡಿಸಿತು, ಅವರ ಭಾಷಣದ ನಂತರ ಸಚಿವರು ಅವರು ಸಂಗ್ರಹಿಸಿರುವ ಮಾಹಿತಿ ಬಗ್ಗೆ ಅವರನ್ನು ಪ್ರಶಂಶಿಸಿದರು. ಸಚಿವರ ಮಾತಿನಿಂದ ಪುಳಕಿತರಾದ ಅವರು ಇಷ್ಟೇ ಅಲ್ಲ ಸಾರ್ ಕಾಡು ಜನರು ಎಷ್ಟು ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ ಮತ್ತು ಬೇಟೆಗಾಗಿ ಬರುವ ನಮ್ಮ ರಾಜ್ಯದ ಮತ್ತು ಹೊರ ರಾಜ್ಯದ ಜನರು ಎಷ್ಟು ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ ಎಂಬ ಮಾಹಿತಿಯೂ ನನ್ನಲ್ಲಿ ಇದೆ, ಅದನ್ನೆಲ್ಲಾ ಹೇಳುತ್ತಾ ಹೋದರೆ ಸಮಯ ಹೆಚ್ಚಾಗುತ್ತದೆಂದು ಪೂರ್ಣ ಮಾಹಿತಿ ಕೊಡಲಿಲ್ಲ ಎಂದರು. ನಮಗೆ ಮತ್ತಷ್ಟೂ ಆಶ್ಚರ್ಯವಾಯಿತು.

ಕಾರ್ಯಕ್ರಮದ ನಂತರ ಊಟದ ಏರ್ಪಾಡನ್ನು ಅಲ್ಲಿಯೇ ಮಾಡಿದ್ದರು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಎಂಬ ಎರಡು ಬೋರ್ಡ್‍ಗಳನ್ನು ಊಟದ ಹಾಲಿನಲ್ಲಿ ಹಾಕಿದ್ದರು. ನಾನು ಮತ್ತು ಸಚಿವರು ಊಟ ಮಾಡಲು ಸಸ್ಯಾಹಾರ ಎಂಬ ಕಡೆ ಹೊರಟೆವು. ಆವೇಶಪೂರಿತ ಭಾಷಣ ಮಾಡಿದ ಆ ವ್ಯಕ್ತಿಯು ಗಾಬರಿಯಿಂದ ಏನೋ ಪ್ರಮಾದವಾಗಿದೆ ಎನ್ನುವ ರೀತಿಯಲ್ಲಿ ನಮ್ಮ ಹತ್ತಿರ ಓಡಿ ಬಂದು ಸಾರ್ ಸಾರ್ ನೀವು ಈಕಡೆ ಬನ್ನಿ, ಆಕಡೆ ಏಕೆ ಹೋಗುತ್ತಿದ್ದೀರಿ ಅದು ಸಸ್ಯಾಹಾರಿ ಊಟ ಎಂದರು.

ನಾನು ಮತ್ತು ಸಚಿವರು ಇಬ್ಬರೂ ಸಸ್ಯಾಹಾರಿಗಳೇ, ಆದುದರಿಂದ ಅಲ್ಲಿಯೇ ಊಟ ಮಾಡುತ್ತೇವೆ ಎಂದೆ. ಆ ಮನುಷ್ಯ ಇಲ್ಲಾ ಸಾರ್ ನೀವು ಬರುತ್ತೀರೆಂದು ಜಿಂಕೆ ಮಾಂಸದ ಮತ್ತು ಕಾಡು ಕೋಳಿ ಮಾಂಸದ ಮೂರ್ನಾಲ್ಕು ಬಗೆಯ ಅಡುಗೆಗಳನ್ನು ಮಾಡಿಸಿದ್ದೇವೆ, ದಯವಿಟ್ಟು ಈಕಡೆ ಬನ್ನಿ ಎಂದರು. ಸಚಿವರು ತಾವು ಮಾಂಸಾಹಾರ ತಿನ್ನುವುದಿಲ್ಲವೆಂದು ಹೇಳಿದರು. ಕೊನೆಗೆ ಆ ವ್ಯಕ್ತಿ ನನ್ನ ಹತ್ತಿರ ಬಂದು ನೀವಾದರೂ ಬನ್ನಿ ಎಂದು ಗೋಗರೆದರು. ನಾನು ಸಹ ಸಸ್ಯಾಹಾರಿ, ಮಾಂಸಹಾರವನ್ನು ಸೇವಿಸುವುದಿಲ್ಲವೆಂದು ಹೇಳಿದೆ. ಅವರು ಬಿಡದೆ, ಎಂದೂ ನೀವು ಯಾವುದೇ ಮಾಂಸಹಾರವನ್ನು ಸೇವಿಸಿಲ್ಲವೆ ಎಂದು ಕೇಳಿದರು. ನಾನು ಸೇವಿಸಿಲ್ಲವೆಂದು ಹೇಳುತ್ತಾ ಕೋಳಿ ಮೊಟ್ಟೆಯನ್ನೂ ಸಹ ತಿಂದಿಲ್ಲ, ತಿನ್ನವುದೂ ಇಲ್ಲವೆಂದು ಹೇಳಿದೆ.

ಇದುವರೆಗೂ ತಿನ್ನದಿದ್ದರೇನಾಯಿತು, ಇಂದು ತಿನ್ನಿರಿ, ಕಾಡು ಕೋಳಿಯ ಮಾಂಸ ತುಂಬಾ ರುಚಿಕರವಾಗಿರುತ್ತದೆ. ಜನರು ಅದನ್ನು ಇಷ್ಟಪಡುವುದರಿಂದ ಅದನ್ನೆ ಹೆಚ್ಚಾಗಿ ಹಾಕಿಸಿಕೊಂಡು ತಿಂದುಬಿಡುತ್ತಾರೆ, ಬೇಗನೆ ಮುಗಿದು ಹೋಗುತ್ತದೆ, ಬನ್ನಿ ಸಾರ್ ಎಂದು ಮತ್ತೆ ನನ್ನ ಹಿಂದೆ ಬಿದ್ದರು. ಇಲ್ಲಾ ಸಾರ್, ನಾನು ತಿನ್ನುವುದಿಲ್ಲ, ಒಂದು ಪಕ್ಷ ನಾನು ಮಾಂಸಾಹಾರಿಯಾಗಿದ್ದರೂ ಇಂದು ಮಾತ್ರ ಇಲ್ಲಿ ಅದನ್ನು ತಿನ್ನುತ್ತಿರಲಿಲ್ಲ ಎಂದೆ. ಅವರು ಏಕೆ ಸಾರ್ ಕೆಲವರು ಸೋಮವಾರ ಮೊದಲಾದ ವಾರಗಳಂದು ತಿನ್ನುವುದಿಲ್ಲ, ಆದರೆ ಇಂದು ಬುಧವಾರ ತಿನ್ನಬಹುದಲ್ಲ ಎಂದು ಮತ್ತೆ ನನ್ನನ್ನು ಕರೆದರು.

ಆ ಕಾರಣದಿಂದಲ್ಲ, ಇಂದು ನಾನಾಗಲೀ ಇಲ್ಲವೆ ಸಚಿವರಾಗಲಿ ಇಲ್ಲಿ ಯಾವುದೇ ಪ್ರಾಣಿಯ ಮಾಂಸವನ್ನು ತಿಂದಲ್ಲಿ, ಮುಂದಿನ ವರ್ಷದ ಇದೇ ಸಪ್ತಾಹದಲ್ಲಿ ನೀವು ನಿಮ್ಮ ಭಾಷಣದಲ್ಲಿ ಪ್ರಾಣಿಗಳ ಅಂಕಿ ಅಂಶಗಳನ್ನು ಕೊಡುವಾಗ, ಕಳೆದ ವರ್ಷದ ವನ್ಯಜೀವಿ ಸಂರಕ್ಷಣಾ ಸಪ್ತಾಹದ ಉದ್ಘಾಟನೆಗೆ ಬಂದಿದ್ದ ಮಾನ್ಯ ಅರಣ್ಯ ಸಚಿವರಾದ ಶ್ರೀ… ಅವರು ಹಾಗೂ ಅವರ ಆಪ್ತ ಸಹಾಯಕರಾದ ಶ್ರೀ ಚಿದಾನಂದ ಮತ್ತು ಸಚಿವರ ಗನ್‍ಮ್ಯಾನ್, ಡ್ರೈವರ್‍ಗಳ ಊಟಕ್ಕಾಗಿ ಕಾಡು ಕೋಳಿ ಮತ್ತು ಜಿಂಕೆ ಮಾಂಸದಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. ಅದಕ್ಕಾಗಿ ಹದಿನೈದು ಕಾಡು ಕೋಳಿಗಳನ್ನು ಮತ್ತು ಎರಡು ಜಿಂಕೆ ಮರಿಗಳನ್ನು ಕೊಂದು ಅವರಿಗೆ ಆಹಾರ ತಯಾರಿಸಲಾಗಿತ್ತು. ಅವರು ಅವುಗಳನ್ನು ತಿಂದುಹೋಗಿದ್ದಾರೆ, ಅದುದರಿಂದ ಅಷ್ಟು ಸಂಖ್ಯೆಯ ಕೋಳಿಗಳು ಮತ್ತು ಜಿಂಕೆಗಳು ಕಾಡಿನಲ್ಲಿ ಕಡಿಮೆಯಾಗಿವೆ ಎಂದು ಹೇಳುತ್ತೀರಿ, ಅದಕ್ಕಾಗಿ ನಾನು ತಿನ್ನುವುದಿಲ್ಲವೆಂದೆ.

ಅದಕ್ಕೆ ಆ ವ್ಯಕ್ತಿ ನಕ್ಕು, ಏನು ಮಾಡಿದರೂ ಈ ವ್ಯಕ್ತಿ ಬಗ್ಗವುದಿಲ್ಲವೆಂದು ತಾನೊಬ್ಬನೇ ಮಾಂಸಾಹಾರದ ಕಡೆ ಊಟಕ್ಕೆ ಹೊರಟ.

ನಾನು ಸಸ್ಯಾಹಾರಿ ಊಟ ಹಾಕಿಕೊಳ್ಳಲು ಹೋದಾಗ, ಇನ್ನೊಬ್ಬ ವ್ಯಕ್ತಿಯು ಬಂದು, ಕೊಡಗಿನ ವಿಶೇಷ ಅಡುಗೆಗಳಾದ ಕಡಬು, ಕಣಿಲೆ ಮತ್ತಿತರ ಅಡುಗೆಗಳನ್ನು ತೋರಿಸಿ ಇವುಗಳು ಪೂರ್ಣ ಸಸ್ಯಾಹಾರಿ ಎಂದು ನನ್ನ ತಟ್ಟೆಯಲ್ಲಿ ಹಾಕಿ ತಾವೂ ನನ್ನ ಜೊತೆಯಲ್ಲೇ ಊಟಕ್ಕೆ ಕುಳಿತರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ್ದಕ್ಕೆ ಮತ್ತು ಕಾರ್ಯಕ್ರಮದಲ್ಲಿ ಆ ವ್ಯಕ್ತಿ ಕೊಟ್ಟ ಅಂಕಿ ಅಂಶಗಳ ಬಗ್ಗೆ ಹೊಗಳಿದೆ. ಆಗ ನನ್ನ ಜೊತೆ ಕುಳಿತಿದ್ದ ವ್ಯಕ್ತಿಯು ಹೌದು ಸಾರ್ ಅವನೊಬ್ಬನೇ ಆ ನಿಖರವಾದ ಮಾಹಿತಿಯನ್ನು ಕೊಡಬಲ್ಲ, ಬೇರೆಯವರಿಂದ ಅದು ಸಾಧ್ಯವಿಲ್ಲ ಎಂದ.

ಅವರು ಹಾಗೇಕೆ ಹೇಳುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗದಿದ್ದರೂ ನಾನು ಸುಮ್ಮನೆ ಅವರ ಮುಖ ನೋಡಿ ಹುಸಿ ನಗೆ ಬೀರಿ ಸುಮ್ಮನಾದೆ. ಅವರೇ ಮಾತು ಮುಂದುವರಿಸಿ ಆ ಅಂಕಿ ಅಂಶಗಳನ್ನು ಕೊಟ್ಟ ವ್ಯಕ್ತಿಯು ದಿನವೂ ಕಾಡು ಕೋಳಿ ಇಲ್ಲದೇ ಊಟವನ್ನೇ ಮಾಡುವುದಿಲ್ಲ. ಆಗಾಗ ಬೇರೆಯವರಿಂದ ಬೇಟೆಯಾಡಿಸಿ ಇಲ್ಲವೆ ಕಾಡಿನಲ್ಲಿ ವಾಸವಿರುವ ಗಿರಿ ಜನರು ಬೇಟೆಯಾಡಿ ತಂದ ಕಾಡು ಹಂದಿ, ಜಿಂಕೆ ಮೊದಲಾದ ಪ್ರಾಣಿಗಳ ಮಾಂಸವನ್ನು ಅವನು ವಾರದಲ್ಲಿ ಮೂರ್ನಾಲ್ಕುಬಾರಿ ತಿನ್ನುತ್ತಾನೆ. ಅವನೇ ಪ್ರಾಣಿಗಳನ್ನು ಕೊಲ್ಲಿಸಿ ತಿನ್ನುತ್ತಿರುವುದರಿಂದ ಪ್ರಾಣಿಗಳ ಸಂಖ್ಯೆ ಮತ್ತು ಅವುಗಳು ಗಂಡೋ ಹೆಣ್ಣೋ ಎಂಬ ಬಗ್ಗೆ ಅವನೊಬ್ಬನೇ ನಿಖರವಾದ ಮಾಹಿತಿ ಕೊಡಬಲ್ಲ ಎಂದರು.

ಅಷ್ಟರಲ್ಲಿ ಅಂಕಿ ಅಂಶ ಕೊಟ್ಟ ವ್ಯಕ್ತಿಯು ಎರಡು ತಟ್ಟೆ ತುಂಬಾ ಮಾಂಸಹಾರಗಳನ್ನು ಹಾಕಿಕೊಂಡು ಬಂದು ನಮ್ಮ ಹತ್ತಿರವೇ ಕುಳಿತು ಮಾತನಾಡಲು ಪ್ರಾಂಭಿಸಿದರು. ಅವರ ತಟ್ಟೆಯಲ್ಲಿನ ಮಾಂಸವನ್ನು ನೋಡಿದ ನಾನು ಅದು ಯಾವ ಪ್ರಾಣಿಯ ಮಾಂಸವೆಂದು ಕೇಳಿದಾಗ, ಒಂದು ತಟ್ಟೆಯಲ್ಲಿರುವುದು ಜಿಂಕೆ ಮಾಂಸ ಮತ್ತು ಕಾಡು ಹಂದಿಯ ಮಾಂಸವೆಂದು ಮತ್ತೊಂದು ತಟ್ಟೆಯಲ್ಲಿರುವುದು ಕಾಡು ಕೋಳಿಯ ಮಾಂಸವೆಂದು ಹೇಳಿ, ಒಂದು ಪೀಸ್ ಹಾಕುತ್ತೇನೆ ರುಚಿ ನೋಡಿ ಸಾರ್ ಎಂದರು. ಬೇಡ ನಾನು ತಿನ್ನುವುದಿಲ್ಲವೆಂದು ಹೇಳಿದೆ. ನನಗೆ ಅವರ ವನ್ಯಜೀವಿ ಸಂರಕ್ಷಣೆಯ ಕಾಳಜಿ ಬಗ್ಗೆ ಹಾಗೂ ಅವರ ತಟ್ಟೆಯಲ್ಲಿದ್ದ ಕಾಡು ಪ್ರಾಣಿಗಳ ಜೀವದ ಬಗ್ಗೆ ಅಯ್ಯೋ ಎನಿಸಿತು.

 

ಸುಡುಗಾಡು ಇಲ್ರೀ ಸರ

ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದ ಮುಳುಗಡೆಯಾಗಿ ಮರು ವಸತಿ ಯೋಜನೆಯಡಿ ಸ್ಥಳಾಂತರಗೊಂಡ ಕೆಲವು ಹಳ್ಳಿಗಳಿಗೆ ಒಬ್ಬ ಸಚಿವರೊಂದಿಗೆ ನಾನು ಪ್ರವಾಸ ಹೋಗಿದ್ದೆ. ಅಂತಹ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಂದಗತಿಯಲ್ಲಿ ನಡೆದಿತ್ತು. ಬಹಳಷ್ಟು ಹಳ್ಳಿಗಳಲ್ಲಿ ಅದರ ಬಗ್ಗೆಯೇ ದೂರುಗಳು ಕೇಳಿಬರುತ್ತಿದ್ದವು. ಒಂದು ಹಳ್ಳಿಯಲ್ಲಿ ಸಚಿವರ ಕಾರ್ಯಕ್ರಮಕ್ಕಾಗಿ ಮರದ ಹಲಗೆಗಳನ್ನು ಹಾಕಿ ಎತ್ತರದಲ್ಲಿ ಚಿಕ್ಕ ಡಯಾಸ್ ನಿರ್ಮಿಸಿ ಅದಕ್ಕೆ ಶಾಮಿಯಾನವನ್ನು ಹಾಕಿದ್ದರು. ಸಚಿವರು ಅದರ ಮೇಲೆ ಹೋಗುವ ಮುನ್ನವೇ ಬಹಳಷ್ಟು ಜನರು ಅದರ ಮೇಲೆ ತುಂಬಿಕೊಂಡಿದ್ದರು. ಸಚಿವರು ಬಹಳ ಪ್ರಯಾಸಪಟ್ಟು ಜನರ ಮಧ್ಯದಲ್ಲಿ ಅವರ ಸಹಾಯದಿಂದ ಮೇಲೆ ಹತ್ತಿ ಹೋಗಬೇಕಾಯಿತು. ಅದು ಯಾವಾಗ ಬಿದ್ದುಹೋಗುತ್ತದೆಯೋ ಎಂಬ ಸ್ಥಿತಿಯಲ್ಲಿ ವಾಲಾಡುತ್ತಿತ್ತು.

ಕಾರ್ಯಕ್ರಮ ಪ್ರಾರಂಭವಾಯಿತು, ಅದರ ಮೇಲಿದ್ದ ಯಾರೂ ಕೆಳಗೆ ಇಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ಇನ್ನೂ ಕೆಲವರು ಅದರ ಮೇಲೆ ಹೋಗುವ ಹರಸಾಹಸವನ್ನು ಮಾಡುತ್ತಿದ್ದರು. ಎಲ್ಲರಿಗೂ ಸಚಿವರೊಂದಿಗೆ ಫೋಟೋದಲ್ಲಿರಬೇಕೆಂಬ ಆಸೆ. ನಾನು ಅದರ ಸ್ಥಿತಿಯನ್ನು ಕಂಡು ಮೇಲಕ್ಕೆ ಹೋಗದೆ ಕೆಳಗಡೆ ನಿಂತಿದ್ದೆ. ಸಚಿವರು ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದು ಅವುಗಳನ್ನು ಗನ್‍ಮ್ಯಾನ್ ಕೈಯಲ್ಲಿ ಕೊಟ್ಟು ನನಗೆ ಕೊಡಲು ಹೇಳುತ್ತಿದ್ದರು. ನಾನು ಕೆಳಗಡೆ ನಿಂತು ಅವುಗಳನ್ನು ತೆಗೆದುಕೊಳ್ಳುತ್ತಿದ್ದೆ. ಡಯಾಸ ವಾಲಾಡಾಕ ಹತ್ತೈತಿ (ಸ್ಟೇಜ್ ತೂಗಾಡುತ್ತಿದೆ) ಸ್ವಲ್ಪ ಮಂದಿ (ಕೆಲವು ಜನರು) ಕೆಳಗ ಇಳೀರಿ ಎಂದು ಮೈಕ್‍ನಲ್ಲಿ ಪ್ರಾಯೋಜಕರು ವಿನಂತಿಸಿದರೂ ಯಾರೂ ಇಳಿಯಲಿಲ್ಲ.

ಮತ್ತೊಬ್ಬ ವ್ಯಕ್ತಿ ಅರ್ಜಿಯನ್ನು ಹಿಡಿದುಕೊಂಡು ಅದನ್ನು ಸಚಿವರಿಗೆ ತಾನೇ ಖುದ್ದಾಗಿ ಕೊಡಬೇಕೆಂದು ಡಯಾಸ್ ಏರಲು ಪ್ರಯತ್ನಿಸುತ್ತಿದ್ದ, ಆದರೆ ಅಲ್ಲಿ ಜಾಗವಿರಲಿಲ್ಲ. ಮೇಲಿದ್ದವರು ತಾವೇ ಆ ಅರ್ಜಿಯನ್ನು ಸಚಿವರ ಕೈಗೆ ಕೊಡುವುದಾಗಿ ಹೇಳಿ ಅರ್ಜಿಯನ್ನು ತಮ್ಮ ಕೈಗೆ ಕೊಡುವಂತೆ ಆ ವ್ಯಕ್ತಿಗೆ ಹೇಳುತ್ತಿದ್ದರು. ಆದರೆ ಆ ವ್ಯಕ್ತಿಯು ಅರ್ಜಿಯಲ್ಲಿನ ವಿಷಯ ಬಹಳ ಗಂಭೀರವಿರುವುದರಿಂದ ತಾನೇ ಖುದ್ದಾಗಿ ಅದನ್ನು ಸಚಿವರ ಕೈಗೆ ಕೊಡಬೇಕೆಂದು ಡಯಾಸ್ ಹತ್ತಲು ಹರಸಾಹಸ ಪಡುತ್ತಿದ್ದ. ಆ ವ್ಯಕ್ತಿ ನನ್ನನ್ನು ನೋಡಿ ಸರ (ಸಾರ್) ನೀವು ಮಂತ್ರಿ ಕಡೆಯವರೇನ್ರಿ, ಎಂದ. ಹೌದು ನಾನು ಅವರ ಆಪ್ತ ಸಹಾಯಕ ಎಂದೆ. ಸರ, ನಾನು ಮಂತ್ರಿಗಳ ಕೈಯ್ಯಾಗ ಖುದ್ದಾಗಿ ಈ ಅರ್ಜಿ ಕೊಡಬೇಕು, ನನ್ನನ್ನ ಸ್ವಲ್ಪ ಮ್ಯಾಲ ಬಿಡಾಕ ಪೋಲೀಸರಿಗೆ ಹೇಳ್ರಿ ಸರ ಎಂದ. ಜನ ನಿಮ್ಮೂರಿನವರೇ ನೀವೆ ಹೇಳಿಕೊಂಡು ಹೋಗಿರಿ, ಅಲ್ಲಿ ಜಾಗವೂ ಇಲ್ಲ, ಹೇಗೆ ಹೋಗುತ್ತೀರಿ ಎಂದೆ. ಇಲ್ಲರೀ ಸರ ವಿಷಯ ಭಾಳ ಗಂಭೀರ ಅದರೀ ಅಂದ.

ಕೊನೆಗೆ ಮೇಲಿದ್ದ ಮುಖಂಡನೊಬ್ಬ ಆ ವ್ಯಕ್ತಿಗೆ ಅವರದೇ ಭಾಷೆಯ ಧಾಟಿಯಲ್ಲಿ ಹೇಳಿದ: ಆ ಅರ್ಜಿಯನ್ನು ಸಚಿವರ ಕೈಗೆ ನೀನು ಕೊಟ್ಟರೆ ಸಚಿವರು ಅದನ್ನು ನಿನ್ನ ಹತ್ತಿರ ನಿಂತಿರುವ ಅವರ ಕೈಯಲ್ಲಿ ಕೊಡುತ್ತಾರೆ. ಆದುದರಿಂದ ನಿನ್ನ ಅರ್ಜಿಯನ್ನು ಅಲ್ಲಿ ನಿಂತಿರುವ ಅವರ ಕೈಗೆ ಕೊಡು ಎಂದು ನನ್ನನ್ನು ತೋರಿಸಿ ಹೇಳಿದ. ಆಗ ಆ ವ್ಯಕ್ತಿಯು ಮನಸ್ಸಿಲ್ಲದೆ ನನಗೆ ಅರ್ಜಿ ಕೊಟ್ಟು ಅದರಲ್ಲಿನ ವಿಷಯವನ್ನು ಹೇಳಲು ಪ್ರಾರಂಭಿಸಿದ. ಅವರ ಹಾಗೂ ನನ್ನ ಭಾಷೆಯ ಶೈಲಿಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು.

ಸರ (ಸಾರ್) ನಮ್ಮೂರು ಮುಣಗಿ (ಮುಳುಗಿ) ಹೋತ್ರೀ, ಈಗ ಇಲ್ಲೀಗೆ ನಮ್ಮನ್ನ ತಂದ ಹಾಕ್ಯಾರ, ಈ ಊರಾಗ ಸುಡುಗಾಡಿಲ್ರಿ (ಸ್ಮಶಾನ) ಸರ, ಅದಕ ಅರ್ಜಿ ಕೊಡಾಕ ಹತ್ತೀನಿ ಸರ, ಎಂದ. ಆ ವ್ಯಕ್ತಿಯ ಅಹವಾಲನ್ನು ಕೇಳಿದ ನಾನು ಆ ವ್ಯಕ್ತಿಯನ್ನು ಒಮ್ಮೆ ಮೇಲಿಂದ ಕೆಳಕ್ಕೆ ಪರಾಮರ್ಶಿಸಿದೆ. ಆತನು ಅರ್ಜೆಂಟಾಗಿ ಸುಡುಗಾಡಿಗೆ ಹೋಗುವ ಸ್ಥಿತಿಯಲ್ಲೇನು ಇರಲಿಲ್ಲ, ಆರೋಗ್ಯವಂತನಾಗಿ ಇಳಿ ವಯಸ್ಸಿನವನಾಗಿದ್ದ. ಆ ವ್ಯಕ್ತಿ ಹೇಳಿದಂತೆ ಅವರ ಮನವಿ ತುಂಬಾ ನ್ಯಾಯಯುತವಾಗಿರುವುದಾಗಿ ಹಾಗೂ ತುಂಬಾ ತುರ್ತಾಗಿ ಆಗಬೇಕಾದ ಕೆಲಸವಾಗಿತ್ತು. ಸ್ಮಶಾನವಿಲ್ಲದೆ ಜನರು ಎಷ್ಟು ದಿನದವರೆಗೂ ಸಾಯುವುದನ್ನು ಮುಂದೂಡಲು ಸಾಧ್ಯ?

ಯಮನಿಗೂ ಈ ಊರಿನಲ್ಲಿ ಸುಡುಗಾಡು ಇಲ್ಲವೆಂಬುದು ಗೊತ್ತಿರುವುದಿಲ್ಲ ಮತ್ತು ಈ ಕಾರಣ ಹೇಳಿದರೂ ಅವನು ಕೇಳುವುದಿಲ್ಲ. ಸುಡುಗಾಡಿನ ಬಗ್ಗೆ ನಿಮ್ಮ ಮುಖ್ಯಮಂತ್ರಿಯವರನ್ನ ಕೇಳಿ, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನಿಮ್ಮ ಎಕ್ಸ್‍ಪಯರಿ ಡೇಟ್ ಮುಗಿದುಹೋಗಿದೆ ಆದುದರಿಂದ ನಿಮ್ಮನ್ನ ಕರೆದುಕೊಂಡು ಹೋಗುವುದು ಮಾತ್ರ ನನ್ನ ಕೆಲಸ ಎಂದು ಅವನು ಹೇಳುತ್ತಾನೆ. ಅವರ ಅರ್ಜಿಯನ್ನು ಪಡೆದ ನಾನು ಯಜಮಾನ್ರೇ ನೀವು ಕೇಳೋದು ಸರಿ ಇದೆ, ಪಾಪ ಜನ ಸುಡುಗಾಡು ಇಲ್ಲದಿದ್ರ ಸಾಯಾಕ ಹೆದ್ರಬೇಕಾಗ್ತದ, ಅವ್ರು ನೆಮ್ಮದಿಯಿಂದ ಸಾಯಲು ಮನಸ್ಸಾಗುವುದಿಲ್ಲ.

ಹೌದು, ನಿಮ್ಮೂರಾಗ ಸರ್ಕಾರಿ ಆಸ್ಪತ್ರೆ ಐತೇನ್ರೀ ಎಂದು ಕೇಳಿದೆ. ನಾನು ಹೇಳಿದ್ದಕ್ಕೆಲ್ಲ ಹೌದ್ರೀ ಸರ ಎನ್ನುತ್ತಾ ಸರ್ಕಾರಿ ದವಾಖಾನಿ (ಆಸ್ಪತ್ರೆ) ಐತಲ್ರೀ ಸರ, ಎಂದ. ಅದರಾಗ ಡಾಕ್ಟ್ರು ಅದರೇನ್ರಿ ಎಂದು ಕೇಳಿದೆ. ಇಲ್ರೀ ಸರ ಸರಕಾರದೋರು ಯಾರ್ನೋ ಹಾಕ್ಯಾರಂತ ಒಂದು ವರ್ಸ (ವರ್ಷ) ಆತ್ರೀ ಇನ್ನೂ ಯಾರೂ ಬರಾಕ ವಲ್ರು, ಎಂದ. ಹಾಗಾದ್ರೆ, ಮೊದಲು ಸರ್ಕಾರಿ ಆಸ್ಪತ್ರೆಗೆ ಡಾಕ್ಟರನ್ನು ಹಾಕಲು ಅರ್ಜಿ ಕೊಡ್ರಿ, ಅವರೇ ಇಲ್ಲ ಅಂದಮೇಲೆ ಪಾಪ ಜನ ಯಾಕ ಸಾಯ್ತಾರ? ಅವರನ್ನ ಹಾಕಿದ ಮೇಲೆ ಸುಡುಗಾಡಿಗೆ ಜಾಗ ಕೇಳ್ರಿ ಎಂದೆ. ಅವರಿಗೆ ನಾನು ಹೇಳಿದ್ದು ಎಷ್ಟರಮಟ್ಟಿಗೆ ಅರ್ಥವಾಯಿತೊ ಗೊತ್ತಿಲ್ಲ, ಹಾಂಗ ಆಗ್ಲಿರೀ ಸರ, ಎಂದು ಬಗ್ಗಿ ಒಂದು ಸಲಾಮು ಹಾಕಿ ಹೊರಟು ಹೋದರು.

ಸಮಾರಂಭ ಮುಗಿದ ನಂತರ ನನ್ನ ಪರಿಚಿತರಾದ ಆ ತಾಲ್ಲೂಕಿನ ತಹಶೀಲ್ದಾರರೊಂದಿಗೆ ನಾನು ಆ ಅರ್ಜಿಯ ಬಗ್ಗೆ ಮಾತನಾಡಿದಾಗ ಅವರು ಸುಡುಗಾಡಿನ ಕೆಲಸ ಪ್ರಗತಿಯಲ್ಲಿದೆ, ಜಾಗವನ್ನು ಗುರುತಿಸಿದ್ದು ಅದರಲ್ಲಿ ಕೆಲವರು ಅತಿಕ್ರಮಣ ಮಾಡಿದ್ದು ಅದನ್ನು ತೆರೆವುಗೊಳಿಸಿ ಸರಹದ್ದುಗಳನ್ನು ಗುರುತಿಸುವ ಕೆಲಸ ಮಾತ್ರ ಬಾಕಿ ಇದೆ, ಜನರು ಈಗಾಗಲೆ ಅದನ್ನು ಉಪಯೋಗಿಸುತ್ತಿದ್ದಾರೆಂದು ತಿಳಿಸಿದರು. ಸುಡುಗಾಡಿನ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳುತ್ತಿದ್ದೀರಿ, ಅಂದರೆ ಜನ ನೆಮ್ಮದಿಯಿಂದ ಸಾಯಬಹುದಲ್ಲವೆ, ಅರ್ಜೆಂಟಾಗಿ ಸಾಯುವವರಿಗೆ ಯಾವ ತೊಂದರೆ ಇಲ್ಲವೇ, ಎಂದು ಕೇಳಿದೆ.

ಅವರು ನನ್ನ ಮಾತಿನ ಶೈಲಿಯಿಂದ ಸ್ವಲ್ಪ ವಿಚಲಿತರಾದಂತೆ ಕಂಡರು. ಆಗ ನಾನು ಮೇಲೆ ನಡೆದ ಪ್ರಸಂಗವನ್ನು ಅವರಿಗೆ ಹೇಳಿದಾಗ ಅವರೂ ನಕ್ಕರು. ಸುಡುಗಾಡಿನ ಕೆಲಸ ಬೇಗನೆ ಮುಗಿಸಿ ಸಾಯುವವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿರಿ, ಜನ ಸತ್ತಮೇಲೆ ನಮ್ಮ ತಾಲ್ಲೂಕಿನ ತಹಶೀಲ್ದಾರರ ಸಹಾಯದಿಂದ ನಾವು ನೆಮ್ಮದಿಯಿಂದ ಸತ್ತೆವೆಂದು ದೇವರಿಗೆ ನಿಮ್ಮ ಉದಾರತನದ ಬಗ್ಗೆ ವರದಿ ಸಲ್ಲಿಸುತ್ತಾರೆ ನಿಮಗೂ ಪುಣ್ಯ ಬರುತ್ತದೆ ಎಂದೆ. ಆ ತಹಶೀಲ್ದಾರರೂ ನಗುತ್ತಾ, ಅಲ್ಲಿ ನಮ್ಮ ಕೆಲಸದ ಪ್ರಗತಿ ಬಗ್ಗೆ ವರದಿ ಕೇಳಲು ನಿಮ್ಮಂತಹ ಆಪ್ತ ಸಹಾಯಕರು ಇರುವುದಿಲ್ಲ ಬಿಡಿ ಸಾರ್ ಎಂದರು. ನೀವು ಹೇಳುವುದು ನಿಜ ಸಾರ್ ವರದಿ ಕೇಳಲು ನಾವು ಅಲ್ಲಿರುವುದಿಲ್ಲ, ಅಲ್ಲಿ ನೀವು ಮತ್ತು ಸಚಿವರು ಮಾತ್ರ ಇರುತ್ತೀರಿ. ಏಕೆಂದರೆ ನಾವು ಸ್ವರ್ಗದಲ್ಲಿರುತ್ತೇವಲ್ಲ, ಎಂದು ನಾನೂ ಅವರಿಗೆ ಸರಿಯಾದ ಉತ್ತರ ಕೊಟ್ಟೆ. ಅಲ್ಲಿದ್ದ ಅಧಿಕಾರಿಗಳೆಲ್ಲರೂ ಸೇರಿ ನಕ್ಕೆವು.

Leave a Reply

Your email address will not be published.