ಸತ್ತಂತಿಹರನು ಬಡಿದೆಚ್ಚರಿಸು: ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕøಷ್ಟತೆ ತರುವುದು ಹೇಗೆ?

ನಮ್ಮ ವಿಶ್ವವಿದ್ಯಾನಿಲಯಗಳಲ್ಲಿನ ಪಿಹೆಚ್‍ಡಿ ಪ್ರಬಂಧಗಳನ್ನು ಯಾವುದೇ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳು ಉಪಯುಕ್ತವೆಂದು ಉದ್ಧರಿಸಿದ್ದನ್ನು ಅಥವಾ ಬಳಸಿದ್ದನ್ನು ನೀವು ಕಂಡಿದ್ದೀರಾ..? ಈ ‘ಸಂಶೋಧಿತ’ ಪ್ರಬಂಧಗಳನ್ನು ಯಾವುದೇ ಯೋಜನೆ, ನೀತಿ ರಚನೆ ಅಥವಾ ಕಾರ್ಯಕ್ರಮಗಳಿಗೆ ಆಧಾರವಾಗಿ ಉಪಯೋಗಿಸಿದ್ದನ್ನು ನೀವು ಕೇಳಿದ್ದೀರಾ..? ನಿಮ್ಮ ಉತ್ತರ ‘ಇಲ್ಲ’ವೆನ್ನುವುದು ನಮ್ಮ ಎಣಿಕೆ. ಆದರೆ ‘ಇಲ್ಲ’ ಎನ್ನುವಾಗ ನಿಮಗೆ ಆಶ್ಚರ್ಯವಾಗುವುದಿಲ್ಲ.

ಏಕೆಂದರೆ ನಮ್ಮ ವಿವಿಗಳ ಒಳಗೆ ಮತ್ತು ಹೊರಗೆ ಸಂಶೋಧನೆಯಾಗುತ್ತಿರುವ ಬರಹಗಳು ದಶಕಗಳ ಹಿಂದಿನಿಂದಲೇ ತಮ್ಮ ಉಪಯುಕ್ತತೆ, ಸಾಂದರ್ಭಿಕತೆ ಮತ್ತು ಗುಣಮಟ್ಟವನ್ನು ಕಳೆದುಕೊಂಡಿವೆ. ಈಗ ನಮ್ಮ ವಿವಿಗಳು ನೀಡುವ ಡಾಕ್ಟರೇಟ್‍ಗಳಿಗೂ ಮೈಸೂರು-ಮಂಡ್ಯದಲ್ಲಿ ದಂಧೆಯಾಗಿರುವ ‘ಗೌಡಾ’ಗಳಿಗೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.

ಬೇರೆ ಯಾವ ದೇಶದಲ್ಲಿಯೂ ‘ಸಂಶೋಧನೆ’ ಈ ಮಟ್ಟಕ್ಕೆ ಇಳಿದಿಲ್ಲ. ಅಲ್ಲಿನ ಪಿಹೆಚ್‍ಡಿ ಪ್ರಬಂಧಗಳು ಹಾಗೂ ಬೇರೆಲ್ಲ ಅಧ್ಯಯನಗಳು ಹೊಸದೇನನ್ನೋ ಹೇಳುವ, ವಸ್ತುಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸುವ ಮತ್ತು ಬದಲಾವಣೆಗಳನ್ನು ಸೂಚಿಸುವ ಮಾರ್ಗಸೂಚಿಗಳಾಗಿರುತ್ತವೆ. ಇವು ಅಲಕ್ಷಿತ ವಿಷಯಗಳು ಮತ್ತು ಪ್ರಶ್ನೆಗಳನ್ನು ಎತ್ತುವುದರ ಜೊತೆಗೆ ನಮ್ಮ ಗ್ರಹಿಕೆಯನ್ನೇ ಬದಲಿಸಬಲ್ಲ ಹೊಸ ಚಿಂತನೆ ಮತ್ತು ಜ್ಞಾನಸೃಷ್ಟಿಯನ್ನು ಹೊರತರುತ್ತವೆ. ಹಾಗಾದರೆ..

  • ನಮ್ಮ ವಿವಿಗಳ ಒಳಗೆ ಮತ್ತು ಹೊರಗೆ ಇಂದು ನಾವು ಕಾಣುತ್ತಿರುವ ಸಂಶೋಧನೆಗಳು ಏಕೆ ಮತ್ತು ಹೇಗೆ ಅನುಪಯುಕ್ತವಾಗಿವೆ..?
  • ಈ ಸಂಶೋಧನೆಗಳನ್ನು ಏಕೆ ನಾವು ನಿರ್ದಾಕ್ಷಿಣ್ಯವಾಗಿ ಮೌಲ್ಯಮಾಪನ ಮಾಡುತ್ತಿಲ್ಲ..? ಏಕೆ ಕಟುವಾಗಿ ಟೀಕಿಸುತ್ತಿಲ್ಲ..?
  • ನಮ್ಮ ಉನ್ನತ ಶಿಕ್ಷಣದ ಕೋರ್ಸುಗಳಲ್ಲಿ ಸಂಶೋಧನೆಯ ವೈಜ್ಞಾನಿಕ ರೀತಿ-ರಿವಾಜುಗಳು ಹಾಗೂ ಉತ್ಕøಷ್ಟ ಮಾದರಿ -ಪದ್ಧತಿಗಳನ್ನೇಕೆ ಹೇಳಿಕೊಡುತ್ತಿಲ್ಲ..?
  • ನಮ್ಮ ಸರ್ಕಾರಿ ವಿವಿಗಳಲ್ಲಿನ ಸಂಶೋಧನೆಗಳಲ್ಲಿ ಉತ್ಕøಷ್ಟತೆ ನಿಜಕ್ಕೂ ಸಾಧ್ಯವಿದೆಯೇ..? ಸಾಧ್ಯವಾದರೆ ಹೇಗೆ..? ಸಾಧ್ಯವಿಲ್ಲವಾದರೆ ಏನು ಮಾಡಬೇಕು..?

ಈ ಪ್ರಶ್ನೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು, ಕರ್ನಾಟಕದ ಗತಕಾಲ ಮತ್ತು ವರ್ತಮಾನಗಳ ಬಗೆಗಿನ ಹೊಸ ಜ್ಞಾನಸೃಷ್ಟಿಯನ್ನು ಅವಲೋಕಿಸುವುದು ಮತ್ತು ವಿಮರ್ಶಿಸುವುದು ಮುಂದಿನ ಸಂಚಿಕೆಯ ಮುಖ್ಯಚರ್ಚೆಯ ಉದ್ದೇಶ. ಈ ಗಂಭೀರ ಪ್ರಶ್ನೆಗಳನ್ನು ಸಹ ಸುಮ್ಮನೆ ಸಾಮಾನ್ಯ ತಿಳಿವಳಿಕೆಯ,

ದೇಶಾವರಿ ವಿಮರ್ಶೆಯಾಗಿಸದೆ, ನಿರ್ದಿಷ್ಟವಾದ ರೀತಿಯಲ್ಲಿ ಕೇಳಲು ಸಾಧ್ಯವೆ? ಉದಾಹರಣೆಗೆ, ಮೊದಲ ಸಹಸ್ರಮಾನದ ರಾಜಮನೆತನಗಳಾದ ಗಂಗರು ಮತ್ತು ಕದಂಬರ ಬಗ್ಗೆ, ಅವರ ಮುಖ್ಯ ಕೇಂದ್ರಗಳಾದ ಬನವಾಸಿ, ಶ್ರವಣಬೆಳಗೊಳ ಮತ್ತು ತಲಕಾಡುಗಳ ಬಗ್ಗೆ ನಮಗೆ ಹೊಸ ಒಳನೋಟಗಳನ್ನು ಕೊಡಬಲ್ಲ ಸಂಶೋಧನೆಗಳು ಯಾವುವು? ಕರ್ನಾಟಕದ ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳಗಳ ಬಗ್ಗೆ ನಂಬಲರ್ಹವಾದ ಪ್ರಾಥಮಿಕ ಮಾಹಿತಿಯನ್ನು ಒದಗಿಸಬಲ್ಲ ಬರವಣಿಗೆಗಳು ಏಕಿಲ್ಲ..?

ಇಂತಹ ಸಂಶೋಧನೆಗಳು, ಬರವಣಿಗೆಗಳು ಇಲ್ಲದೆ ಕರ್ನಾಟಕಕ್ಕೆ ಅಗತ್ಯವಿರುವ ಪುರಾತತ್ವ ನೀತಿಯನ್ನಾಗಲಿ, ಪ್ರವಾಸೋದ್ಯಮ ನೀತಿಯನ್ನಾಗಲಿ ರೂಪಿಸುವುದು ಹೇಗೆ..?

ವಿವಿಧ ಪಕ್ಷಗಳು ಅನುಸರಿಸಿರುವ ಸಾರ್ವಜನಿಕ ನೀತಿಯೇನು? ಸರ್ಕಾರಗಳ ಸಾರ್ವಜನಿಕ ನೀತಿ ರೂಪುಗೊಳ್ಳುವಾಗ ಯಾವ ಪ್ರಭಾವಗಳು, ಕಾರಣಗಳು ಮುಖ್ಯವಾಗುತ್ತವೆ? ಇವುಗಳ ಬಜೆಟ್ ಆದ್ಯತೆಗಳಲ್ಲಿ ಏನಾದರೂ ವೈಶಿಷ್ಟ್ಯವಿದೆಯೆ? ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಗಳು ಕೈಗೆತ್ತಿಕೊಳ್ಳಬಹುದಾಗಿರುವ ಯೋಜನೆಗಳಾವುವು? ಈ ತೆರನಾದ ಹತ್ತುಹಲವು ಸಾಧ್ಯತೆಗಳ ಬಗ್ಗೆ ಪರಿಣಾಮಕಾರಿ ಸಂಶೋಧನೆಗಳು ಏಕೆ ಆಗುತ್ತಿಲ್ಲ..?

ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳದೆ, ಸರಿಯಾದ ಉತ್ತರಗಳನ್ನು ಕಂಡುಕೊಳ್ಳದೆ, ಸಮೃದ್ಧ ಕರ್ನಾಟಕದ ಕನಸು ನನಸಾಗಲು ಸಾಧ್ಯವಿಲ್ಲ. ನಮಗೆ ಇಂದು ಅಗತ್ಯವಿರುವ ಚಿಂತನೆ ಮತ್ತು ಸಂಶೋಧನೆಗಳ ಮಾದರಿಗಳು ಮತ್ತು ವಿಧಾನಗಳ ಬಗ್ಗೆ ಒಂದು ಮುಕ್ತ ಚರ್ಚೆ ಇಲ್ಲಿದೆ.

 

Leave a Reply

Your email address will not be published.