ಸತ್ತಂತಿಹರನು ಸಾಯಲು ಬಿಡಬಾರದೇಕೆ..?

-ಮೋಹನದಾಸ್

ಸತ್ತಂತಿಹರನು ಬಡಿದೆಚ್ಚರಿಸುವುದಕ್ಕಿಂತಲೂ ಹೊಸದಾದ ಪರ್ಯಾಯವೊಂದನ್ನು ಸೃಷ್ಟಿಮಾಡುವ ಅವಕಾಶವೇ ನಮಗೆ ಆಕರ್ಷಕವಾಗಿ ಕಾಣಬಹುದು.

ನವೆಂಬರ್ ಸಂಚಿಕೆಯಲ್ಲಿ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ ಎಂಬ ಕುರಿತು ಪ್ರಕಟವಾಗಿರುವ ಎಲ್ಲ ಬರಹಗಳೂ ಪಾಂಡಿತ್ಯಪೂರ್ಣವಾಗಿವೆ. ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪಿಹೆಚ್‌ಡಿ ಸಂಶೋಧನೆಗಳ ಗುಣಮಟ್ಟದ ಅವನತಿಯ ಬಗ್ಗೆ ಎಲ್ಲ ಲೇಖಕರೂ ಒಕ್ಕೊರಲಿನಿಂದ ದನಿಗೂಡಿಸಿದ್ದಾರೆ. ‘ಸತ್ತಂತಿಹರನು ಬಡಿದೆಚ್ಚರಿಸು’ ಎಂಬ ಶೀರ್ಷಿಕೆಗೆ ಅನ್ವರ್ಥವಾಗುವಂತೆ ‘ಬೀಟಿಂಗ್ ಎ ಡೆಡ್ ಹಾರ್ಸ್’ ಎಂಬ ಪದಪುಂಜದ ಬಳಕೆಯಲ್ಲಿ ವಿವಿಗಳಲ್ಲಿ ಸಂಶೋ ಧನೆಯ ಸ್ಥಿತಿಗತಿ ಎಲ್ಲರಿಗೂ ಮನವರಿಕೆಯಾಗುತ್ತಿದೆ.

ನಾವು ಆಡುಬಳಕೆಯ ಮಾತಿನಲ್ಲಿ ಹೇಳುವ ಹಾಗೂ ನಾವೆಲ್ಲರೂ ಅಂದುಕೊಂಡಂತಹ ಇತ್ಯರ್ಥಗಳನ್ನು ಮುಖ್ಯಚರ್ಚೆಯ ಬರಹಗಳು ಪುಷ್ಟೀಕರಿಸಿವೆ. ಈ ಎಲ್ಲ ಲೇಖಕರು ವಿಶ್ವವಿದ್ಯಾನಿಲಯಗಳಲ್ಲಿ ಗೌರವಯುತ ಸಂಶೋಧಕ-ಬೋಧಕರಾಗಿರುವುದು ಅವರ ಬರಹಗಳ ತಾತ್ಪರ್ಯಕ್ಕೆ ಇಂಬು ನೀಡಿದೆ ಹಾಗೂ ಬರಹಗಳ ಮೌಲ್ಯೀಕರಣಕ್ಕೆ ಒತ್ತಾಸೆಯಾಗಿದೆ. ಸಂಖ್ಯಾಶಾಸ್ತçದ ಆಧಾರದ ಮೇಲೆ ಪರಿಶೀಲಿಸಲಾಗದ ಈ ‘ಗುಣಮಟ್ಟ’ ಮತ್ತು ‘ಉತ್ಕೃಷ್ಟತೆ’ ಮಾನದಂಡಗಳನ್ನು ಈ ತೆರನಾದ ಪಾಂಡಿತ್ಯಪೂರ್ಣ ವಿಮರ್ಶೆ ಮತ್ತು ಬರಹಗಳಿಂದ ಮಾತ್ರ ನಾವು ವಿಶ್ಲೇಷಿಸಬಹುದು ಎಂದು ಕೂಡ ವೇದ್ಯವಾಗುತ್ತದೆ.

ಆದರೆ ನಮ್ಮ ಆಕ್ಷೇಪಣೆಯಿರುವುದು ಪ್ರಸ್ತುತ ಗುಣಮಟ್ಟದ ಪರಿಶೀಲನೆಯ ಮಾನದಂಡಗಳ ಬಗ್ಗೆಯಲ್ಲ. ಒಮ್ಮೆ ನಾವು ವಿವಿಗಳಲ್ಲಿ ಜ್ಞಾನಸೃಷ್ಟಿಯ ರಾಚನಿಕ ಅಸಂಭವತೆ ಮತ್ತು ಅವನತಿಗಳ ಬಗ್ಗೆ ತೀರ್ಮಾನಕ್ಕೆ ಬಂದ ನಂತರ ತೆಗೆದುಕೊಳ್ಳಬೇಕಾದ ಮುಂದಿನ ನಿಲುವುಗಳ ಬಗ್ಗೆ. ಇಂದಿನ ನಮ್ಮ ಯಾವುದೇ ಸರ್ಕಾರಿ ವಿವಿಗಳಲ್ಲಿ ಗುಣಮಟ್ಟದ ಸಂಶೋಧನೆ ಸಾಧ್ಯವಿಲ್ಲವೆಂದ ಮೇಲೆ ಏನು ಮಾಡಬೇಕು..? ಸಂಶೋಧನೆಯ ಸಾಧ್ಯತೆಗಳಿಗೇ ತಿಲಾಂಜಲಿ ನೀಡಿ ಕೈ ತೊಳೆದುಕೊಳ್ಳಬೇಕೆ..? ವಿವಿಗಳಲ್ಲಿ ಕೇವಲ ‘ಶಿಕ್ಷಣ’ ನೀಡುವ ಆಯ್ಕೆಯ ಬಗ್ಗೆಯೇ ನಮ್ಮ ಸಂಪನ್ಮೂಲಗಳನ್ನು ಕೇಂದ್ರೀಕರಿಸಬೇಕೆ..? ಅಥವಾ ‘ಉನ್ನತ’ ಮಟ್ಟದ ಶಿಕ್ಷಣ ನೀಡಲೂ ಈ ವಿವಿಗಳು ಅಸಮರ್ಥವಾಗಿವೆಯೇ ಎಂಬ ಹೊಸ ಚರ್ಚೆ ಹುಟ್ಟುಹಾಕಬೇಕೆ..? ಗುಣಮಟ್ಟದ ಜ್ಞಾನಸೃಷ್ಟಿಯೇ ಅಸಂಭವವಾಗಿದೆಯೆAದು ಕೈಚೆಲ್ಲಿ ಕುಳಿತುಕೊಳ್ಳಬೇಕೆ..?

ಮುಖ್ಯಚರ್ಚೆಯ ಲೇಖಕರು ಜ್ಞಾನಸೃಷ್ಟಿಯ ಅಗತ್ಯದ ಬಗ್ಗೆ ಒಮ್ಮತ ಹೊಂದಿದ್ದಾರೆ ಎಂದು ಅಂದುಕೊಳ್ಳೋಣ. ಆದರೆ ಇವರ ಲೇಖನಗಳಲ್ಲಿ ಇಂದಿನ ಸರ್ಕಾರಿ ವಿವಿಗಳಿಗೆ ಪರ್ಯಾಯ ವ್ಯವಸ್ಥೆ ಹುಡುಕುವ ಉಮೇದು ಕಾಣದಿರುವುದು ನಿರಾಸೆ ಮೂಡಿಸುತ್ತದೆ. ಈ ‘ಡೆಡ್ ಹಾರ್ಸ್’ಗಳನ್ನು ಗೌರವಯುತವಾಗಿ ಸಂಸ್ಕಾರ ಮಾಡಿ ಹೊಸ ಸಾಧ್ಯತೆಗಳ ಬಗ್ಗೆ ನಾವು ಗಮನ ಹರಿಸಬಾರದೇಕೆ..? 2020ರ ಹೊಸ ಶಿಕ್ಷಣ ನೀತಿಯಲ್ಲಿಯೇ ಅಡಕವಾಗಿರುವ ಗುಣಾತ್ಮಕ ಅಂಶಗಳಲ್ಲಿ ಕೆಲವನ್ನಾದರೂ ಪರಿಗಣಿಸಬಾರದೇಕೆ..? ಈ ನಿಟ್ಟಿನಲ್ಲಿ ಈ ಕೆಲವು ಪರ್ಯಾಯಗಳನ್ನು ನಿಮ್ಮ ಮುಂದಿಟ್ಟಿದೆ:

  • ನಮ್ಮ ಎಲ್ಲ ಸರ್ಕಾರಿ ವಿವಿಗಳನ್ನು ಕೇವಲ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳೆಂದು ಗುರುತಿಸಿ ಅವುಗಳ ಮೇಲಿನ ಸದ್ಯದ ಹೊರೆ, ಅಪೇಕ್ಷೆ ಹಾಗೂ ಸಂಪನ್ಮೂಲಗಳನ್ನು ಕಡಿತ ಮಾಡಬಾರದೇಕೆ..? ಇದರಿಂದ ಈ ವಿವಿ ನೌಕರರು ತಾವು ಮಾಡಬೇಕಾದ ಕೆಲಸವನ್ನಾದರೂ ಸರಿಯಾಗಿ ಮಾಡಿರೆಂದು ತಾಕೀತು ಮಾಡಬಹುದು. ಇವರಿಂದ ಸ್ವ-ಇಚ್ಛೆಯ ಸಂಶೋಧನೆಯ ಮೇಲೆ ಯಾವುದೇ ನಿರ್ಬಂಧವಿಲ್ಲವೆಂದ ಮೇಲೆ ನಾವು ಕಳೆದುಕೊಳ್ಳುವುದಾದರೂ ಏನು..?
  • ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಅಗತ್ಯ ಪೂರೈಕೆಗೆ ಸೆಂಟರ್ ಆಫ್ ಎಕ್ಸೆಲೆನ್ಸ್ ಮಾದರಿಯಲ್ಲಿ ರಾಜ್ಯದ ಕೆಲವಾರು ಸಂಶೋಧನಾ ಸಂಸ್ಥೆಗಳನ್ನು ಗುರುತಿಸಿ ಆ ಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಬಹುದು. ಅಗತ್ಯ ಬಿದ್ದಲ್ಲಿ ಇದೇ ಸೆಂಟರ್ ಆಫ್ ಎಕ್ಸೆಲೆನ್ಸ್ ಮಾದರಿಯಲ್ಲಿ ಇನ್ನೂ ಒಂದೆರೆಡು ಅಧ್ಯಯನ ಸಂಸ್ಥೆಗಳನ್ನು ತೆಗೆದು ಎಲ್ಲ ಪಿಹೆಚ್‌ಡಿ ಪದವಿ ಪ್ರದಾನಗಳ ಗುಣಮಟ್ಟವನ್ನು ಸುಧಾರಿಸಬಹುದು.
  • ಖಾಸಗಿ ವಿವಿಗಳನ್ನು ಹಾಗೂ ಖಾಸಗಿ ಅಧ್ಯಯನ ಸಂಸ್ಥೆ ಗಳನ್ನು ತೆರೆಯಬಯಸುವ ಯಾವುದೇ ಪ್ರಸ್ತಾವಕ್ಕೆ ಮುಕ್ತ ಪರವಾನಗಿ ನೀಡಬೇಕು. ಬೇಕಾದಲ್ಲಿ ಯುಜಿಸಿ ಮಾದರಿಯಲ್ಲಿ ರಾಜ್ಯಮಟ್ಟದ ಜ್ಞಾನಸೃಷ್ಟಿ ಆಯೋಗವೊಂದನ್ನು ತೆರೆದು ಕನಿಷ್ಠ-ಗರಿಷ್ಠ ಸೌಲಭ್ಯಮಿತಿ ಮತ್ತಿತರ ಮಾನದಂಡಗಳನ್ನು ನಿಯಂತ್ರಿಸಬಹುದು.
  • ಅಂತೆಯೇ ನಮ್ಮ ರಾಜ್ಯದಲ್ಲಿ ಶಾಖೆಯೊಂದನ್ನು ತೆರೆಯ ಬಯಸುವ ಯಾವುದೇ ವಿದೇಶಿ ವಿವಿಗೆ ಮುಕ್ತ ಪರವಾನಗಿ ನೀಡಿ ಸೂಕ್ತ ಸಾರ್ವತ್ರಿಕ ಮಾನದಂಡಗಳ ಆಧಾರದಲ್ಲಿ ನಿಯಂತ್ರಣ-ಪ್ರೋತ್ಸಾಹ ನೀಡಬಹುದು.

ಕೆಲವೊಮ್ಮೆ ಸತ್ತಂತಿಹರನು ಬಡಿದೆಚ್ಚರಿಸುವುದಕ್ಕಿಂತಲೂ ಹೊಸ ದಾದ ಪರ್ಯಾಯವೊಂದನ್ನು ಸೃಷ್ಟಿಮಾಡುವ ಅವಕಾಶವೇ ನಮಗೆ ಆಕರ್ಷಕವಾಗಿ ಕಾಣಬಹುದು. ಇದನ್ನು ಕಾಣಬಯಸುವ ಹೊಸತನದ ಹುಡುಕುವಿಕೆಯಲ್ಲಿ ನಾವು ಇದುವರೆಗೂ ಕಂಡರಿಯದ ವಿನೂತನ ಸಾಧ್ಯತೆಗಳು ನಮಗೆ ಗೋಚರವಾಗಬಹುದು.

Leave a Reply

Your email address will not be published.