ಸತ್ವ ಪರೀಕ್ಷೆಯ ಕಾಲ

ಒಂದು ವ್ಯವಸ್ಥೆ ಮತ್ತು ಒಬ್ಬ ವ್ಯಕ್ತಿಯ ಸತ್ವ ಪರೀಕ್ಷೆ ಆಗುವುದು ತಲೆ ಹೋಗುವಂತಹ ತೀವ್ರ ಸಂಕಷ್ಟದ ಸನ್ನಿವೇಶದಲ್ಲಿಯೇ. ಕೊರೊನಾ ಕಾರಣದಿಂದ ಅಂತಹ ಸ್ಥಿತಿ ತಂತಾನೇ ನಿರ್ಮಾಣವಾಗಿದೆ. ಇದೀಗ ಸತ್ವ ಪರೀಕ್ಷೆಗೆ ಈಡಾಗಿರುವುದು ಇಡೀ ಪ್ರಪಂಚದ ಆರೋಗ್ಯ ಮತ್ತು ಆಡಳಿತ ವ್ಯವಸ್ಥೆಯಷ್ಟೇ ಅಲ್ಲ; ಪ್ರತಿಯೊಬ್ಬ ಮನುಷ್ಯ ಜೀವಿಯೂ ಹಲವು ಬಗೆಯ ಸಂದಿಗ್ಧ, ವೈರುಧ್ಯ, ಬೆರಗಿನಲ್ಲಿ ಸಿಲುಕಿದ್ದಾನೆ. ನಿರ್ದಿಷ್ಟ ಪಠ್ಯವಿಲ್ಲದ, ಬೋಧಕರಿಲ್ಲದ, ಸಿದ್ಧತೆಗೆ ಸಮಯವಿಲ್ಲದ ಈ ಪರೀಕ್ಷೆಯಲ್ಲಿ ಎಲ್ಲರಿಗೂ ಪಾಸಾಗುವ ಅವಕಾಶ ಅಥವಾ ನಪಾಸಾಗುವ ಅಪಾಯ ಸರಿಸಮಾನ.

ವ್ಯಕ್ತಿಗಳ ವಿಷಯದಲ್ಲಿ ತಕ್ಷಣಕ್ಕೆ ಫಲಿತಾಂಶ ಅಪೇಕ್ಷಿಸುವಂತಹ ಪರೀಕ್ಷೆಯೂ ಇದಲ್ಲ. ಹಾಗೆನೋಡಿದರೆ ವ್ಯಕ್ತಿಯೊಬ್ಬನ ಸರಿತಪ್ಪುಗಳ ಪರಿಣಾಮ, ಪ್ರಭಾವ ಬಹಳ ಸೀಮಿತ ಪರಿಧಿಯೊಳಗೆ ಉಳಿಯುವಂತಹದು. ಆದರೆ ಒಂದು ವ್ಯವಸ್ಥೆಯ ಗೆಲುವು ಅಥವಾ ಸೋಲು ಬಹುದೊಡ್ಡ ಸಮುದಾಯನ್ನು ತೆಕ್ಕೆಗೆ ತೆಗೆದುಕೊಂಡಿರುತ್ತದೆ. ಆ ದೃಷ್ಟಿಯಿಂದ ಕೋವಿಡ್-19 ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕಾರ್ಯ ವೈಖರಿ ಗಮನಿಸಿದರೆ ವ್ಯವಸ್ಥೆ ಮೇಲಿನ ಭರವಸೆ ಕಳಚಿಬೀಳುತ್ತದೆ.

ಇನ್ನೊಂದು ಮಗ್ಗುಲಿನಿಂದ ನಿರುಕಿಸಿದರೆ ವ್ಯವಸ್ಥೆಯ ನಿಯಂತ್ರಣದ ಹೊಣೆ ಹೊತ್ತ ಸರ್ಕಾರದ ಮೇಲೆ ವಿಶ್ವಾಸವಿರಿಸುವುದು ಕೂಡಾ ಮುಗ್ಧತೆ ಎನ್ನಿಸಿಕೊಂಡೀತು! ಈ ರಾಜಕೀಯ ಪಕ್ಷಗಳು, ಅವುಗಳ ಮುಖಂಡರು, ಅವರು ಚುನಾಯಿತರಾಗುವ ರೀತಿ, ಸರ್ಕಾರ ರೂಪುಗೊಳ್ಳುವ ಪ್ರಕ್ರಿಯೆ, ಅವರ ಹಣದಾಹ, ಸ್ವಜನ ಪಕ್ಷಪಾತ ಬಲ್ಲವರು ಇವರಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?

ಸಮುದಾಯದ ಒಳಹೊಕ್ಕು ಆಕಳಿಸುತ್ತಿರುವ ಕೊರೊನಾ ವೈರಾಣು ವಿಶಿಷ್ಟ ಮತ್ತು ವಿಚಿತ್ರ ಸನ್ನಿವೇಶಕ್ಕೆ ಕಾರಣವಾಗಿದೆ. ಅನೇಕರ ಬಯಕೆಯಂತೆ ಇದರ ವಿರುದ್ಧ ಯುದ್ಧ ಹೂಡಬೇಕಿಲ್ಲ; ಸಮರದ ಭಾಷೆ, ಉದ್ವೇಗ, ಉನ್ಮಾದ ಉಪಯೋಗಕ್ಕೆ ಬರಲಾರವು. ಈ ವೈರಾಣುವಿನ ಹುಟ್ಟು ಮತ್ತು ಪ್ರಸರಣ ನಿಸರ್ಗದ ಸಹಜ ಕ್ರಿಯೆ ಎಂಬುದು ನಮಗೆ, ನಮ್ಮನ್ನು ಕಾಪಾಡಲು ರೂಪಿಸಿದ ವ್ಯವಸ್ಥೆಗೆ ಮೊದಲು ಮನವರಿಕೆಯಾದರೆ ಅರ್ಧ ಹೊಳೆ ದಾಟಿದಂತೆ. ನಾವು ಕೊರೊನಾ ವಿರುದ್ಧವೂ ಹೋರಾಡಬೇಕಿಲ್ಲ; ರೋಗಿಯನ್ನೂ ದೂರಬೇಕಿಲ್ಲ. ಬದಲಾಗಿ ನಮ್ಮ ಜೀವನ ಶೈಲಿ ಮತ್ತು ಜೀವನ ದೃಷ್ಟಿಯನ್ನು ಪ್ರಕೃತಿಯತ್ತ ಅಭಿಮುಖಗೊಳಿಸಿಕೊಳ್ಳುವುದು ಬಹಳ ಮುಖ್ಯ,

ಈ ಸಂಚಿಕೆಯ ಹೂರಣ ಸಂಯೋಜಿಸುವ ಅಂತಿಮ ಘಟ್ಟವಾಗಿ ಸಂಪಾದಕೀಯ ಟಿಪ್ಪಣಿ ಬರೆಯಲು ಕುಳಿತಾಗ ಪರಿಚಿತ ವೈದ್ಯೆಯೊಬ್ಬರ ದೂರವಾಣಿ ಕರೆ ಬಂದಿತು. ಅವರು ತಮ್ಮ ಎರಡನೇ ಮಗ ಅನ್ಯ ಜಾತಿಯ ಗೆಳತಿಯನ್ನು ಬಾಳಸಂಗಾತಿಯಾಗಿಸಿಕೊಳ್ಳಲು ನಿರ್ಧರಿಸಿದ ಸುದ್ದಿಯನ್ನು ಉತ್ಸಾಹದಿಂದ ಹಂಚಿಕೊಂಡರು. ಇತ್ತೀಚೆಗೆ ಅಂತರ್ಜಾತಿ ಮದುವೆಯಾದ ತಮ್ಮ ಮೊದಲ ಮಗನ ಹೆಂಡತಿಯ ಒಳ್ಳೆಯತನವನ್ನು ಬಾಯ್ತುಂಬಾ ಹೊಗಳಿದರು. ಹಾಗೆಯೇ ದಶಕಗಳ ಹಿಂದೆ ತಾವು ಅಂತರ್ಜಾತಿ ಮದುವೆಯಾದಾಗಿನಿಂದ ತಮ್ಮ ಅವಿದ್ಯಾವಂತ ಅತ್ತೆ ತಮ್ಮನ್ನು ಸ್ವಂತ ಮಗಳಿಗಿಂತ ಹೆಚ್ಚು ಮಮತೆಯಿಂದ ನಡೆಸಿಕೊಳ್ಳುತ್ತಿರುವುದನ್ನು ನೆನೆದರು. ಅವರ ದನಿಯಲ್ಲಿ ಅತ್ತೆ-ಸೊಸೆ ಎರಡೂ ಸತ್ವ ಪರೀಕ್ಷೆಗಳನ್ನು ಗೆದ್ದ ಮುದವಿತ್ತು.

ಏಕಕಾಲಕ್ಕೆ ಅತ್ತೆಯಾಗಿ ಸೊಸೆಯನ್ನೂ, ಸೊಸೆಯಾಗಿ ಅತ್ತೆಯನ್ನೂ ಹೊಗಳುವ ವಿರಳ ನಿದರ್ಶನವಿದು. ಒಬ್ಬ ವ್ಯಕ್ತಿ ಅತ್ತೆಯಾಗಿ ಕೌಟುಂಬಿಕ ವ್ಯವಸ್ಥೆಯ ಒಡತಿಯಾದರೆ, ಸೊಸೆಯಾಗಿ ಆ ವ್ಯವಸ್ಥೆಯ ಸದಸ್ಯೆಯಾಗಿರುತ್ತಾಳೆ. ಸಮಾಜದಲ್ಲಿನ ಅತ್ತೆಯ ಸಾಂಪ್ರದಾಯಿಕ ದಬ್ಬಾಳಿಕೆ ಮತ್ತು ಮದುವೆಯಾದ ಹೊಸದರಲ್ಲೇ ಅತ್ತೆಯಿಂದ ಗಂಡನನ್ನು ಅಗಲಿಸುವ ಸೊಸೆಯ ಆಧುನಿಕ ರೂಪಗಳೇ ನಮ್ಮ ಸುತ್ತ ಹೆಚ್ಚಾಗಿ ಕಾಣಿಸುತ್ತಿರುವಾಗ ಈ ವೈದ್ಯರ ಅನುಭವ ಹೊಸ ಭರವಸೆಯಾಗಿ ಕಾಣಿಸುತ್ತದೆ.

ಸತ್ವ ಪರೀಕ್ಷೆಗಳಲ್ಲಿನ ಗೆಲುವಿಗೆ ಕಾರಣವಾಗುವ ಮುಕ್ತ ಮನಸ್ಸು ಮತ್ತು ಪ್ರಾಮಾಣಿಕ ನಡೆನುಡಿಗಳು ವೈರಾಣು ಸೋಂಕಿನಂತೆ ಯಾರ ನಿಯಂತ್ರಣಕ್ಕೂ, ನಿರ್ಬಂಧಕ್ಕೂ ಸಿಗದಿರಲಿ; ಯಾವ ಜಾತಿ, ಧರ್ಮ, ದೇಶ, ಅಂತಸ್ಥಿನ ತರತಮಗಳಿಲ್ಲದೇ ಸಮುದಾಯದೊಳಗೆ ಹರಡಲಿ, ಶಾಶ್ವತವಾಗಿ ನೆಲೆಸಲಿ.

-ಸಂಪಾದಕ

Leave a Reply

Your email address will not be published.