ಸದ್ಯ, ಸರಿಯಾದ ದಾರಿಯಲ್ಲಿದ್ದೇವೆ!

ಇಂದು ಒಂದು ಚಿಂತನೆ, ಒಬ್ಬ ವ್ಯಕ್ತಿ ಅಥವಾ ಒಂದು ಸಂಘಟನೆಯನ್ನು ಸಾರಾಸಗಟಾಗಿ ದ್ವೇಷಿಸುವ ವಿಧ ಒಂದೆಡೆ ಇದ್ದರೆ, ಎಲ್ಲವನ್ನೂ ಕುರುಡು ನಂಬಿಕೆಯಿAದ ಮೋಹಿಸುವ ಅತಿರೇಕದ ತುದಿಯನ್ನು ಇನ್ನೊಂದೆಡೆ ಕಾಣಬಹುದು. ಇವೆರಡೂ ವಿಧಾನಗಳಿಂದ, ಪೂರ್ವಗ್ರಹಗಳಿಂದ ವಿಮೋಚನೆಗೊಂಡು ಮುನ್ನೆಡೆಯಬೇಕು ಎಂಬ ಸಮಾಜಮುಖಿಯ ಪ್ರಕಟಿತ ನಿಲುವನ್ನು ನೀವೆಲ್ಲಾ ಒಪ್ಪಿದ್ದೀರಿ ಎಂದು ಭಾವಿಸುತ್ತೇನೆ.

ನಾವು ಯಾವುದೇ ವಿಷಯವನ್ನು ಮಾಸಿಕ ಚರ್ಚೆಗೆ ಆಯ್ಕೆ ಮಾಡಿಕೊಂಡಾಗ ಆ ಚರ್ಚೆ ಆದಷ್ಟೂ ಮುಕ್ತವಾಗಿರಬೇಕು, ಭಿನ್ನ ಅಭಿಪ್ರಾಯಗಳಿಗೂ ಜಾಗೆ ಇರಬೇಕು, ಸಮಚಿತ್ತದಿಂದ ಕೂಡಿರಬೇಕು, ಒಟ್ಟಾರೆ ಓದುಗರ ಬೌದ್ಧಿಕತೆಯನ್ನು ಉದ್ದೀಪಿಸಬೇಕು, ಸಂಬAಧಿಸಿದವರ ಕಣ್ಣು ತೆರೆಸಬೇಕು ಎಂಬ ಕನಿಷ್ಠ ನಿಯಮಗಳನ್ನು ಪಾಲಿಸುತ್ತೇವೆ. ಅಂತೆಯೇ ಚರ್ಚೆಯಲ್ಲಿ ಭಾಗವಹಿಸುವವರಿಗೆ ತಮ್ಮ ಅಭಿಪ್ರಾಯಗಳನ್ನು ಭಿಡೆ ಇಲ್ಲದೆಯೇ ಹಂಚಿಕೊಳ್ಳಲು ಅನುವಾಗುವಂತೆ ಸಮಾಜಮುಖಿಯ ಪರಿಶುದ್ಧ ಬಿಳಿಹಾಳೆಗಳನ್ನು ಒದಗಿಸಬೇಕೆಂಬುದು ನಮ್ಮ ಉದ್ದೇಶ.

‘ರಾಷ್ಟಿçÃಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು?’ ಎಂಬ ಪ್ರಶ್ನೆಯನ್ನು ಬಹಿರಂಗವಾಗಿ ಮುಂದಿಟ್ಟಾಗ ಅನೇಕರು ನಾನಾ ಕಾರಣಗಳಿಂದ ಹುಬ್ಬೇರಿಸಿದರು; ಕೆಲವರು ನಿಬ್ಬೆರಗಾದರು, ಹಲವರು ಮೆಚ್ಚಿಕೊಂಡರು ಇಲ್ಲವೇ ಎಚ್ಚರಿಸಿದರು, ಉಳಿದವರು ಅಂತರ ಕಾಯ್ದುಕೊಂಡರು. ಇಲ್ಲಿ ಮತ್ತೊಂದು ಸಂಗತಿಯನ್ನು ನಿಮ್ಮೊಂದಿಗೆ ಪ್ರಸ್ತಾಪಿಸಲೇಬೇಕಿದೆ. ಚರ್ಚೆಯ ಸಮತೋಲನದ ದೃಷ್ಟಿಯಿಂದ ಆರ್.ಎಸ್.ಎಸ್. ಸಂಪರ್ಕದಲ್ಲಿರುವವರು, ಸಂಘದಲ್ಲಿ ಸಕ್ರಿಯವಾಗಿರುವವರು, ಒಲವುಳ್ಳವರು ಹಾಗೂ ಟೀಕಾಕಾರರ ಪಾಲ್ಗೊಳ್ಳುವಿಕೆಗಾಗಿ ನಾನು ಸತತ ಪ್ರಯತ್ನ ನಡೆಸಿದೆ:

‘ಚರ್ಚೆಗೆ ಪ್ರಶ್ನೆಗಳನ್ನು ಫ್ರೇಮ್ ಮಾಡಿದ ರೀತಿಯೇ ಏಕಮುಖ ಚಿಂತನೆ ಮತ್ತು ಜಾರಿಕೊಳ್ಳುವ ಮನಃಸ್ಥಿತಿ ಎಂದು ಲೇಖನ ಪ್ರಾರಂಭಿಸುವ ಸ್ವಾತಂತ್ರö್ಯವಿದ್ದರೆ ಬರೆಯಬಹುದು’ ಎಂದರು ಸಂಘದ ಒಬ್ಬ ಚಿಂತಕ. ‘ಖಂಡಿತಾ ಬರೆಯಿರಿ. ಲೇಖನಕ್ಕೆ ತಾತ್ವಿಕ ನೆಲೆಗಟ್ಟು, ಗಂಭೀರ ನಿರೂಪಣೆ ಅತ್ಯಗತ್ಯ’ ಎಂದು ಉತ್ತರಿಸಿದೆ. ‘ಪ್ರವಾಸದಲ್ಲಿದ್ದೇನೆ, ಗಡುವಿನೊಳಗೆ ಬರೆಯುವುದು ಕಷ್ಟ’ ಎಂದರು. ‘ಎಷ್ಟೇ ತಡವಾದರೂ ಪರವಾಗಿಲ್ಲ, ಬರೆದುಕೊಡಿ’ ಎಂದು ಪಟ್ಟು ಹಿಡಿದೆ. ಅವರು ಕೊನೆಗೂ ಬರೆಯಲಿಲ್ಲ! ಒಬ್ಬ ಪ್ರಗತಿಪರ ಚಿಂತಕರು, ‘ನಿಮ್ಮ ಸಂಪಾದಕೀಯ ಸಲಹಾ ಸಮಿತಿಯಲ್ಲಿ ಯಾರಿದ್ದಾರೆ?’ ಎಂದು ಕೇಳಿದರು. ತಕ್ಷಣ ನಮ್ಮ ತಂಡದ ಪಟ್ಟಿ ಎದುರಿಗಿಟ್ಟೆ. ಅವರು ಮುಗುಮ್ಮಾಗಿ, ‘ನಾನು ನಿಮಗೆ ಬರೆಯುವುದಿಲ್ಲ’ ಎಂದರು. ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತು ‘ನಮಸ್ಕಾರ’ ಹೇಳಿದೆ. ಒಪ್ಪಿಕೊಂಡ ಕೆಲವರ ಲೇಖನಗಳು ಪತ್ರಿಕೆ ಮುದ್ರಣಕ್ಕೆ ಹೋಗುವ ಈ ಹಂತದವರೆಗೂ ನನ್ನನ್ನು ತಲುಪಿಲ್ಲ; ಅವರ ಲೇಖನಗಳು ಬಹುಶಃ ಮೀಸಲಾತಿ ಹೋರಾಟದ ದೆಸೆಯಿಂದ ಮೆಜೆಸ್ಟಿಕ್‌ನಲ್ಲಿ ಉಂಟಾದ ಸಂಚಾರ ದಟ್ಟಣೆಯಲ್ಲಿ ಸಿಲುಕಿರಬೇಕು!

ಒಂದು ಸಮಾಧಾನಕರ ಸಂಗತಿ ಎಂದರೆ, ಚರ್ಚೆಯ ವಿಷಯ ಆರ್.ಎಸ್.ಎಸ್. ಪರ ಮತ್ತು ವಿರೋಧಿ ಬಣಗಳೆರಡಕ್ಕೂ ಅವರವರದೇ ಕಾರಣಗಳಿಗಾಗಿ ಇಷ್ಟವಾಗಿಲ್ಲ; ಮುಜುಗರಕ್ಕೂ ಈಡುಮಾಡಿದೆ. ಇದು ನಾವು ಸರಿ ದಾರಿಯಲ್ಲಿ ಸಾಗುತ್ತಿದ್ದೇವೆ ಎಂಬುದಕ್ಕೆ ಸಣ್ಣ ಸಾಕ್ಷಿ!

ನಿಜ ಹೇಳಬೇಕೆಂದರೆ ನಾವು ಈ ಬಾರಿಯ ಮುಖ್ಯ ಚರ್ಚೆಯ ಮೇಜಿಗೆ ತರಬಯಸಿದ್ದು ಆರ್.ಎಸ್.ಎಸ್. ಸಂಘಟನೆ ತನ್ನ ಘೋಷಿತ ಧ್ಯೇಯೋದ್ದೇಶಗಳ ಜೊತೆಗೆ ಹೆಜ್ಜೆ ಹಾಕುತ್ತಿದೆಯೇ ಎಂಬ ಪ್ರಶ್ನೆಯನ್ನು. ಆದರೆ ಚರ್ಚೆಯ ಕೇಂದ್ರಕ್ಕೆ ಪೂರಕವಾಗಿ, ಪೀಠಿಕೆಯಾಗಿ, ವಿಸ್ತರಣೆಯಾಗಿ ಸಂಘ ಕುರಿತ ಅನೇಕ ಸಂಗತಿಗಳು ಸಹಜವಾಗಿಯೇ ವಿಶ್ಲೇಷಣೆಗೆ ಒಳಪಟ್ಟಿರುವುದನ್ನು ಗುರುತಿಸಬಹುದು.

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕವನ್ನು ಬದಿಗೊತ್ತಿ ಆರ್ಭಟಿಸುತ್ತಿರುವ ಮೀಸಲಾತಿ ಹೋರಾಟಗಳನ್ನು ನಿಜನೆಲೆಯಲ್ಲಿ ಅರ್ಥೈಸಿಕೊಳ್ಳಲು ನೀವು ಓದಲೇಬೇಕಾದ ವಿವಾದ ಕುರಿತ ಸರಣಿ ಲೇಖನಗಳು ಈ ಸಂಚಿಕೆಯಲ್ಲಿವೆ. ಉಳಿದಂತೆ ತಿಂಗಳು ಪೂರ್ತಿ ಸೇವಿಸಬಹುದಾದಷ್ಟು ವೈವಿಧ್ಯಮಯ ‘ಓದಿನ ಬುತ್ತಿ’ ನಿಮ್ಮ ಕೈಯಲ್ಲಿದೆ.

Leave a Reply

Your email address will not be published.