ಸಮಕಾಲೀನ ಸಾಹಿತಿಗಳೂ ಸಾಂಕ್ರಾಮಿಕ ವೈರಾಣುವೂ

ವಿಜ್ಞಾನಿಗಳು ಪ್ರಸ್ತುತ ಪಿಡುಗಿಗೆ ಲಸಿಕೆ ಮತ್ತು ಔಷಧಿ ಕಂಡುಹಿಡಿಯುವ ಪ್ರಯತ್ನದಲ್ಲಿ ತಲ್ಲೀನರಾದರು. ಇವನ್ನೆಲ್ಲ ನೋಡಿಕಂಡ ಸಾಹಿತಿಗಳು ಅವುಗಳ ಭಯಾನಕತೆಯನ್ನು, ಪರಿಣಾಮವನ್ನು ಅಕ್ಷರಗಳಲ್ಲಿ ಕಟ್ಟಿಕೊಡಲು ಮುಂದಾಗಿದ್ದಾರೆ.

ಪ್ರಕೃತಿಯ ಅನೇಕ ವೈಚಿತ್ರ್ಯಗಳಲ್ಲಿ ಸಾಂಕ್ರಾಮಿಕ ರೋಗಗಳೂ ಸ್ಥಾನ ಗಳಿಸಿವೆ. ಕೆಲವು ಸಾಂಕ್ರಾಮಿಕಗಳು ಚೈತ್ರಕ್ಕೊಂದು, ವೈಶಾಖಕ್ಕೊಂದು ಎಂಬಂತೆ ಕಾಲಗತಿಗನುಗುಣವಾಗಿ ಬಂದು ಉದ್ದೀಪನಗೊಂಡು, ಬೆದರಿಕೆ ಹಾಕಿ ಅಥವಾ ತುಳಿದು ಹಾಕಿ ಋತುಪಲ್ಲಟವಾಗುತ್ತಲೇ ಮರೆಯಾಗುತ್ತವೆ. ಮತ್ತೆ ಕೆಲವು, ಅವುಗಳಗಿಷ್ಟ ಬಂದಾಗ ಎದ್ದು ಬಂದು ಹಾನಿಮಾಡಿ, ಮರೆಯಾಗಿ ಒಂದಷ್ಟು ಕಾಲದ ಬಳಿಕ ಮತ್ತೆ ದಾಳಿಯಿಡುತ್ತವೆ. ಇನ್ನು ಕೆಲವು ಕಣ್ಣಾಮುಚ್ಚಾಲೆಯಾಡುತ್ತ ಮನುಷ್ಯ ಸ್ನೇಹಿಯ ಸೋಗುಹಾಕಿ ಜೊತೆಗಿರುತ್ತವೆ.      

ಈ ಬಾರಿಯ ಸಾಂಕ್ರಾಮಿಕ ವೈರಾಣು ಕೊರೋನಾ ಏಕಕಾಲಕ್ಕೆ ಜಗತ್ತನ್ನೇ ವ್ಯಾಪಿಸಿದ್ದೊಂದು ವಿಶೇಷ. ಸಿಡುಬು, ಪ್ಲೇಗ್‌ನಂತಹ ಸಾಂಕ್ರಾಮಿಕ ರೋಗವನ್ನು ಪ್ರಾದೇಶಿಕವಾಗಿ ತಡೆಹಿಡಿಯುವುದು ಸಾಧ್ಯವಾಗಿತ್ತು. ಇದಂತೂ ಋತುಪಲ್ಲಟವನ್ನೂ ಲೆಕ್ಕಿಸಲಿಲ್ಲ, ಪ್ರತಿರೋಧವನ್ನೂ ಲೆಕ್ಕಿಸಲಿಲ್ಲ. ಅದರ ಅಬ್ಬರವನ್ನಾದರೂ ತಡೆಯೋಣವೆಂದು ಲಾಕ್‌ಡೌನ್, ಕ್ವಾರಂಟೈನ್, ಜನತಾ ಕರ್ಫ್ಯೂ ಮುಂತಾದ ಹಲವು ಅಡವುಗಳನ್ನು ಪ್ರಯೋಗಿಸಲಾಯಿತು. ವಿಜ್ಞಾನಿಗಳು ವ್ಯಾಕ್ಸಿನ್ ಹಾಗೂ ಇತರ ಔಷಧಗಳನ್ನು ಕಂಡುಹಿಡಿಯುವ ನಿರಂತರ ಪ್ರಯತ್ನದಲ್ಲಿ ತಲ್ಲೀನರಾದರು. ಇವನ್ನೆಲ್ಲ ನೋಡಿಕಂಡ ಸಾಹಿತಿಗಳು ಅವುಗಳ ಭಯಾನಕತೆಯನ್ನು, ಪರಿಣಾಮವನ್ನು ವಿವಿಧ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ಕೊರೋನಾವನ್ನು ಮಹಾಮಾರಿಯೆಂದೂ ಭೀಕರ ದಾಳಿಕೋರ ಎಂದೂ ವಿಧವಿಧವಾಗಿ ದೂರದರ್ಶಿನಿಗಳು ಚಿತ್ರಿಸಿ ಅಟ್ಟಹಾಸಗೈದಿದ್ದರೆ, ಪತ್ರಿಕೆಗಳಲ್ಲಿ ತಮ್ಮದೇ ಆದ ಬಗೆಯಲ್ಲಿ ಅಂಕಣಕಾರರು, ಪತ್ರಕರ್ತರು, ಸಾಹಿತಿಗಳು, ಕವಿಗಳು ಚಿತ್ರಿಸಿ ಸ್ವೋಪಜ್ಞತೆ ಮೆರೆದಿದ್ದಾರೆ. ಅನಂತಮೂರ್ತಿಯವರ ‘ಸಂಸ್ಕಾರ’ದಲ್ಲಿ ಪ್ಲೇಗಿನಿಂದ ಮೃತನಾದ ನಾರಣಪ್ಪನ ಹಾಗೆ ಇಲ್ಲೂ ಕೊರೋನಾ ‘ಗತ’ರು ಕತೆ, ಕವನ, ಲೇಖನಗಳಿಗೆ ಆಹಾರ ಒದಗಿಸಿದ್ದಾರೆ.

ಕೋವಿಡ್-19 ಪ್ರಾರಂಭವಾದಲ್ಲಿಂದ ಮೊದಲ್ಗೊಂಡು ನಿರಂತರವಾಗಿ ಪತ್ರಿಕೆಯೊಂದಕ್ಕೆ ಹನಿಕವನವನ್ನು ಬರೆಯುತ್ತಿದ್ದವರು ಹೆಚ್.ಡುಂಡಿರಾಜ್. ಕೊರೋನಾದ ಎಲ್ಲ ಆಯಾಮಗಳನ್ನೂ ಗಂಭೀರವಾಗಿ ಪರಿಗಣಿಸಿ -ಒಂದೊಂದಕ್ಕೂ ಹಾಸ್ಯದ ಪೋಷಾಕು ತೊಡಿಸಿ- ಓದುಗರ ಮುಂದಿಟ್ಟಿದ್ದಾರೆ. ಸ್ಯಾನಿಟೈಸರ್, ಮಾಸ್ಕ್, ವರ್ಕ್ ಫ್ರಮ್ ಹೋಮ್ -ಇಂತಹ ಯಾವುದೇ ವಿಷಯವನ್ನು ಡುಂಡಿರಾಜರು ಕೈಬಿಟ್ಟವರಲ್ಲ. ವೈರಾಣು ಎಷ್ಟು ಅಪಾಯಕಾರಿ ಎಂದರೆ,

ಹೆಚ್ಚುಹೆಚ್ಚು ಎಚ್ಚರಿಕೆ

ವಹಿಸುವುದು ಉತ್ತಮ

ಯಾಕೆ ಸುಮ್ಮನೆ ರಿಸ್ಕು?

ಅಂತ ಇಲ್ಲೊಬ್ಬರು

ಹಾಕುತ್ತಿದ್ದಾರೆ ಈಗ

                          ತಮ್ಮ ನಾಯಿಗೂ ಮಾಸ್ಕು!

-ಪ್ರಾಣಿಗಳಿಗೂ ಸೋಂಕು ಬರುವ ಅಪಾಯವಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಕವಿ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂಬುದು ಪ್ರಸ್ತುತ ಹನಿಗವನದ ಸಾರ.

ಒಂದು ಕಾಲವಿತ್ತು: ವಿದೇಶದಿಂದ ನಮ್ಮವರು ಬರುವ ದಿನ ಮನೆಮಂದಿಗೆಲ್ಲ ಹಬ್ಬ. ಬರುವವರನ್ನು ಕರೆತರುವುದಕ್ಕೆ ವಿಮಾನ ತಾವಳಕ್ಕೆ ಒಪ್ಪೊತ್ತು ಮುಂಚೆಯೇ ಹೋಗಿ, ಕೈಗೊಂದು ಹೂಗುಚ್ಛಕೊಟ್ಟು ಅಪ್ಪಿ ಮುದ್ದಾಡಿ ಸ್ವಾಗತಿಸುತ್ತಿದ್ದೆವು. ಈಗಿನ ಪರಿಸ್ಥಿತಿ ನೆನೆದು ಡುಂಡಿರಾಜರು ಹೀಗೆ ಹೇಳುತ್ತಾರೆ:

ಸ್ವಾಗತಿಸುತ್ತಿದ್ದರು ಅಂದು

ಸ್ವದೇಶಕ್ಕೆ ಬಂದಾಗ ನಗುತ್ತ

ಆರತಿ ಬೆಳಗಿ ತಿಲಕ ಇಟ್ಟು

ಈಗ, ಹುಬ್ಬುಗಂಟಿಕ್ಕಿಕೊಂಡು

ಕೈಗೆ ಸ್ಯಾನಿಟೈಸರ್ ಕೊಟ್ಟು

ಹಣೆಯ ಮೇಲೆ ಬೆಳಕು ಬಿಟ್ಟು (ಸ್ವಾಗತ)

 ಅಂಕಣಕಾರರೂ ಆಗಿರುವ ಡುಂಡಿರಾಜರು ಬರೆದ ‘ಮನೆಯೊಳಗೆ ಕೂರೋಣ, ನಾಶವಾಗಲಿ ಕರೋನ.’ ಎಂಬ ಅಂಕಣದಲ್ಲಿ ಕರೋನಾ ಕುರಿತು ಕವಿಗಳು ಬರೆಯುವುದ ಕಂಡು, ಬೆಚ್ಚಿಬಿದ್ದು, ‘ಕಂಪಿಸಿತು ಭೂಮಿ ಒಂದು ಸೆಕೆಂಡು, ಕರೋನಾ ಕವಿಗಳ ದಂಡುಕಂಡು’ -ಎಂದಿದ್ದಾರೆ. ಇದು ಸುಳ್ಳಲ್ಲ.

ಕ್ಯಾಪ್ಟನ್ ಗೋಪಿನಾಥರ ಒಂದು ಲೇಖನ ಓದಿದೆ. ‘ನಕಲಿ ಸೆಕ್ಯುಲರ್‌ಗಳು, ನಕಲಿ ಹಿಂದೂಗಳು!’ ಎಂಬ ಶಿರೋನಾಮೆ ಹೊತ್ತ ಈ ಲೇಖನದಲ್ಲಿ ಮೇಲೆ ಹೇಳಿದ ಎರಡೂ ಅಂಶಗಳು ದೇಶದ ಆತ್ಮವನ್ನೇ ನಾಶ ಮಾಡುತ್ತವೆ ಎಂದಿದ್ದಾರೆ. ಅಷ್ಟೇ ಆಗಿದ್ದರೆ ಅದನ್ನಿಲ್ಲಿ ಉದ್ಧರಿಸುವ ಅಗತ್ಯವಿರಲಿಲ್ಲ. ಮುಂದುವರಿದು, ‘ಈ ರೋಗವು ಕೊರೋನಾ ವೈರಾಣುವಿಗಿಂತಲೂ ಕೆಟ್ಟದ್ದಾಗಿದೆ’ ಎನ್ನುತ್ತಾರೆ. ಇಷ್ಟು ಸಾಕು, ನಕಲಿ ಸೆಕ್ಯುಲರ್ ಹಾಗೂ ನಕಲಿ ಹಿಂದೂಗಳನ್ನು ಹಾಗೂ ಕೊರೋನಾ ವೈರಾಣುಗಳನ್ನು ಅರ್ಥಮಾಡಿಕೊಳ್ಳಲು. ಮುಂದಿನ ದಿನಗಳಲ್ಲಿ ಕೊರೋನಾ ಎಂಬುದು ಭಯದ ಅಟ್ಟಹಾಸದ, ಭೀಕರತೆಯ, ಮಾರಣಹೋಮದ, ಘಟಸ್ಫೋಟದ, ಮಹಾಮಾರಿಯ ರೂಪಕವೂ ಪ್ರತೀಕವೂ ರ‍್ಯಾಯಪದವೂ ಆದರೆ ಅಚ್ಚರಿಯಿಲ್ಲ!

ಇಂತಹದೇ ಒಂದು ಅಂಕಣವನ್ನು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಬರೆದಿದ್ದಾರೆ: ‘ಇಳೆ ಎಂದರೆ ಬರಿ ಮಣ್ಣಲ್ಲ, ನಮಗೋ ನೋಡುವ ಕಣ್ಣಿಲ್ಲ’ ಎಂಬ ಬರಹದಲ್ಲಿ ಪ್ರಕೃತಿಯ ಮೇಲೆ ಮಾನವನ ಅರಚಾಟಗಳನ್ನೆಲ್ಲ ಬಣ್ಣಿಸುತ್ತ ಕೊನೆಯ ಒಂದು ಸಾಲಿನಲ್ಲಿ ‘ಕೊರೋನಾ ರೂಪದಲ್ಲಿ ಈ ಎಚ್ಚರಿಕೆಯ ದನಿ ಕೇಳಿಸುತ್ತದೆ. ಹಾಗೆ ಕೇಳಿಸುತ್ತಿರುವಾಗಲೇ ವಿಶಾಖಪಟ್ಟಣದ ವಿಷಾನಿಲ ನಮ್ಮನ್ನಾವರಿಸುತ್ತದೆ. ದೂರದ ಯಮುನೆಯಿರಲಿ, ನಮ್ಮ ವೃಷಭಾವತಿ ತಿಳಿಯಾಗುತ್ತಿರುವ ಹೊತ್ತಿನಲ್ಲೇ ಮತ್ತೆ ಚಟುವಟಿಕೆ ಆರಂಭಿಸಿದ ಕೈಗಾರಿಕೆಗಳು ತ್ಯಾಜ್ಯವನ್ನು ಸುರಿದು ಚರಂಡಿ ಮಾಡುತ್ತಿವೆ…’ ಎಂದಿದ್ದಾರೆ. ಕೊರೋನಾ ನಮಗೊಂದು ಎಚ್ಚರಿಕೆಯ ರೂಪದಲ್ಲಿ ಬಂದಿದೆ. ಯಾವ್ಯಾವಾಗ ನಾವು ಪ್ರಕೃತಿಯನ್ನು ಅರ್ಥೈಸಿಕೊಳ್ಳದೆ ವಿಕೃತಿಯೊಡ್ಡುತ್ತೇವೋ ಆವಾಗಲೆಲ್ಲ ಆಕೆ ನಮಗೆ ಪ್ರತಿಯೇಟು ನೀಡುತ್ತಾಳೆ. ಒಮ್ಮೊಮ್ಮೆ ಒಂದೊಂದು ರೂಪದಲ್ಲಿ ದಾಳಿ ಇಟ್ಟು ಬುದ್ಧಿ ಕಲಿಸುತ್ತಾಳೆ, ಆದರೂ ಮಾನವ ಬುದ್ಧಿಕಲಿಯಲಾರ ಎಂಬುದೇ ನಿಜವಾದ ಸತ್ಯ.

ಕೊರೋನಾವನ್ನು ನೇರವಾಗಿ ವಿಶ್ಲೇಷಣೆಗೆ ಒಳಪಡಿಸುವ ಹಲವು ಲೇಖನಗಳು ಪರಿಸರ ತಜ್ಞ ನಾಗೇಶ ಹೆಗಡೆಯವರ ಲೇಖನಿಯಿಂದ ಮೂಡಿಬಂದಿವೆ. ಇತರ ದೇಶಗಳು ಕೊರೋನಾವನ್ನು ತಡೆಗಟ್ಟಲು ವಹಿಸಿದ ಎಚ್ಚರ, ಈ ನಿಟ್ಟಿನಲ್ಲಿ ಭಾರತ ಎಲ್ಲಿದೆ? ಯುರೋಪ್ ರಾಷ್ಟçಗಳು ಹೇಗೆ ಸೋತಿವೆ- ಎಲ್ಲವೂ ಅವರ ವಿಶ್ಲೇಷಣೆಯಲ್ಲಿ ಸೇರಿಕೊಂಡಿವೆ. ಪುಟ್ಟ ತೈವಾನ್ ಹೇಗೆ ಕೊರೋನಾವನ್ನು ಎದುರಿಸಿತು ಎಂಬ ವಿವರಣೆ ನೀಡುತ್ತಲೇ ಆ ರಾಷ್ಟçವನ್ನು ಮಾದರಿಯಾಗಿಟ್ಟುಕೊಳ್ಳಬೇಕಿತ್ತು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಸಾರ್ಸ್ ಜೊತೆಗೆ ಹೋರಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಚರ್ನೋಬಿಲ್ ದುರಂತವನ್ನು ಮತ್ತೊಮ್ಮೆ ನೆನಪಿಸಿದ್ದಾರೆ.

ಒಂದು ದೃಷ್ಟಾಂತದ ಮೂಲಕ ಇಂಥ ದುರಂತಗಳ ಒಟ್ಟಾರೆ ಮಾರಕಗುಣವನ್ನು ನಮ್ಮ ಮುಂದಿಟ್ಟಿದ್ದಾರೆ: ’ಒಂದು ಕಾರನ್ನು ನೀವು ಹೈಸ್ಪೀಡಿನಲ್ಲಿ ನಡುರಾತ್ರಿಯಲ್ಲಿ ಓಡಿಸುತ್ತೀರಿ ಅಂದುಕೊಳ್ಳಿ. ಅದರ ಸುರಕ್ಷಾ ಪರೀಕ್ಷೆ ಮಾಡಲೆಂದು ನೀವು ಹೆಡ್ಲೆöÊಟ್ ಆಫ್ ಮಾಡುತ್ತೀರಿ. ಆ ಮೇಲೆ ಬ್ರೇಕ್ ಪೆಡಲನ್ನು ಕಿತ್ತುಹಾಕುತ್ತೀರಿ. ಮೂರನೆಯ ಹಂತದ ಪರೀಕ್ಷೆಗೆಂದು ಸ್ಟೀರಿಂಗ್ ಚಕ್ರವನ್ನು ಕಿತ್ತು ಹಾಕುತ್ತೀರಿ. ದುರಂತವಲ್ಲದೆ ಇನ್ನೇನಾಗುತ್ತದೆ?’ ಹೀಗಾಯಿತು ಚರ್ನೋಬಿಲ್ ದುರಂತ, ಹೀಗಾಯಿತು ಕೊರೋನಾ ಸೃಷ್ಟಿ. ಹೆಜ್ಜೆಹೆಜ್ಜೆಗೂ ಪ್ರಕೃತಿಯನ್ನು ಮೆಟ್ಟಿನಿಲ್ಲುವ ಯತ್ನದ ಮಾನವರ ಹುಂಬತನಕ್ಕೆ ಸರಿಯಾಗಿಯೇ ನಾಗೇಶ ಹೆಗಡೆಯವರು ಚಾಟಿಬೀಸಿದ್ದಾರೆ.

ವೈರಾಣುವನ್ನು ವೈನೋದಿಕವಾಗಿ ಗೇಲಿಮಾಡುತ್ತ ಆ ಕುರಿತಾಗಿಯೇ ಅಣಕುಸಾಹಿತಿ ಎನ್.ರಾಮನಾಥರು ಹತ್ತಾರು ಅಂಕಣ ಬರೆದು ಕರೋನಾ ಮಾತ್ರವಲ್ಲ; ವೈರಸ್‌ಗಳ ವೈವಿಧ್ಯದ ಬಗ್ಗೆ, ಅದನ್ನು ತಡೆಗಟ್ಟುವ ಪ್ರಯತ್ನದ ಬಗ್ಗೆ, ಮಾಸ್ಕ್ ಧರಿಸದಿರುವ ಬಗ್ಗೆ, ಸಾಮಾಜಿಕ ಅಂತರ, ಕ್ವಾರಂಟೈನ್ ಇತ್ಯಾದಿಗಳ ಬಗ್ಗೆ ಲಾಕ್‌ಡೌನ್ ಕಾಲದ ಸಮಯದ ಸದುಪಯೋಗದ ಬಗ್ಗೆ, ಇಷ್ಟಾದರೂ ಬುದ್ಧಿಬರದ ನಮ್ಮ ಜನರ ಬಗ್ಗೆ – ನವುರಾಗಿ ಕತ್ತಿಮಸೆದಿದ್ದಾರೆ.

ಕೊರೋನಾದ ವೈವಿಧ್ಯಮಯ ಆರ್ಭಟಕ್ಕೆ ಹೊಂದಿಕೊಂಡು ಅಂಕಣಗಳಿಗೆ ಯಥೋಚಿತ ಶಿರೋನಾಮೆ ನೀಡಿದ್ದಾರೆ: ಕರೋನಾ ಪ್ಯಾರ್ ಹೈ, ಸೂರ್ಯ ಮಂಡಿಸಿದ ಮಾಸ್ಕ್ ವಾದ, ವೈರಸಾಯನ, ಲಾಕ್ ಡೌನ್ ಕಾಲವೂ ಹನಿ ನೀರಾವರಿಯೂ, ಕ್ಲೋಸ್ ಎನ್‌ಕೌಂಟ್ ವಿದ್ ಕೊರೋನಾ ಬ್ರಿಗೇಡ್, ನಿಮ್ಜನಕ್ಕೆ ಬುದ್ಧಿ ಇಲ್ಲ- ಮುಂತಾದವುಗಳು. ಇವರ ಮಾತುಗಳಲ್ಲಿ ಟೀವಿಯವರ ಭಸ್ಮಾಸುರ, ಪ್ರಚಂಡ, ಮಾರಿಯ ರೌದ್ರನರ್ತನ, ವಿಕಟಾಟ್ಟಹಾಸ, ಮುಂತಾದ ಪದಗಳಿಲ್ಲ. ಸಾಕಷ್ಟು ಗೇಲಿ ಎಬ್ಬಿಸುವ ಅಣಕಿಸುವ, ಕೊರೋನಾವನ್ನು ಹಂಗಿಸುತ್ತಲೇ ಅವುಗಳು ತಂದೊಡ್ಡುವ ಅಪಾಯದ ಬಗ್ಗೆ ಎಚ್ಚರಿಕೆ ನೀಡುವ, ಪ್ರಜೆಗಳಿಗೆ ಪರೋಕ್ಷವಾಗಿ ಬುದ್ಧಿಹೇಳುವ ಬಗೆಯ ಪ್ರಯೋಗಗಳಿವೆ.

ಹನಿಗವಿಗಳು ಕೊರೋನಾವನ್ನು ಬಣ್ಣಿಸಿದಂತೆಯೆ ಇಡಿಗವನಗಳೂ ರಾಜ್ಯಾದ್ಯಂತ ಬೇಕಾದಷ್ಟು ಹುಟ್ಟಿಕೊಂಡು ಕೊರೋನಾ ಜೊತೆ ಗುದ್ದಾಡಿವೆ. ಪ್ರಸಿದ್ಧ ಕವಿ ಹೆಚ್.ಎಸ್.ವೆಂಕಟೇಶಮೂರ್ತಿಯವರು ತಮ್ಮ ‘ಕಣ್ಣಿಲ್ಲದ ಕೇಡು’ ಎಂಬ ಕವನದ ಮೂಲಕ ಕೊರೋನಾ ಬೀರಿದ ಸಾಮಾಜಿಕ ಪರಿಣಾಮಗಳನ್ನು ಓದುಗರ ಮುಂದಿಡುತ್ತಾರೆ. ಅವುಗಳಲ್ಲಿ ಸತ್ಪರಿಣಾಮ, ದುಷ್ಪರಿಣಾಮ -ಎರಡೂ ಇವೆ.

ಬೆಳಗಾದರೆ ಠಕರಾಯಿಸುವ ಭವಿಷ್ಯವಾದಿಗಳು ಎಲ್ಲಿಗೆ ಹೋದರು?

ದಾರಿಮಧ್ಯೆ ಎದ್ದ ಗುಡಿಗುಂಡಾಂತರಗಳು? ಮಾರುಕಟ್ಟೆ?

ಈಗ ಪ್ರತಿ ಬಾಗಿಲಿಗೂ ಬೀಗ. ಅದೃಶ್ಯರೂಪಿಗೆ ಎಲ್ಲುಂಟು ತಡೆಗೋಡೆ?

ಅರ್ಧ ಮುಗಿದಿದೆ ನನ್ನ ಕವಿತೆ, ಲೇಖನಿ ಕೆಳಗಿಟ್ಟರೆ ಕೆಟ್ಟೆ.

 

 -ಈ ‘ಅದೃಶ್ಯರೂಪಿ’ ಎಲ್ಲಿ ಹೇಗೆ ಬೇಕಾದರೂ ನುಸುಳಬಲ್ಲ. ಹೆಚ್ಚೇಕೆ? ಅರ್ಧಮುಗಿದ ಕವಿತೆಯನ್ನು ಪೂರ್ತಿಗೊಳಿಸುವ ಧೈರ್ಯವನ್ನು ಕವಿಯಿಂದ ಕಸಿದುಕೊಳ್ಳಬಲ್ಲ- ಎಂದು ಹೇಳುವುದರ ಮೂಲಕ ಅದರ ಭೀಕರತೆ ಎಷ್ಟಿದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ.. ಅದರ ಜೊತೆಗೇನೆ ದೇವರ, ಭವಿಷ್ಯಕಾರರ ಹುಸಿತನವನ್ನು ಬಯಲುಗೊಳಿಸುವುದು ಕೊರೋನಾದ ಕೊಡುಗೆ ಎಂಬುದನ್ನೂ ವೆಂಕಟೇಶಮೂರ್ತಿಯವರು ನೆನಪಿಸುತ್ತಾರೆ.

ಕೆಲವು ಕೊರೋನಾ ಕುರಿತ ತತ್ವಪದಗಳ ಮಾದರಿಗಳೂ ನಮ್ಮ ಕಣ್ಣಮುಂದಿವೆ. ಅಲ್ಲೂ ವೈವಿಧ್ಯಮಯ ವಿಚಾರಗಳಿವೆ. ನಮ್ಮ ಒಲುಮೆಯ ಕವಿಯತ್ರಿ ಸವಿತಾ ನಾಗಭೂಷಣ ಅವರು,

ಗುಡಿಗುಂಡಾರ ಮಸೀದಿ ಚರ್ಚು ಇಲ್ದೇ ಹೋದ್ರೂ ಪರವಾಗಿಲ್ಲ

ಜಾತಿ ಕುಲ ಮತ ವ್ರತ ತಿಳ್ಕೊಂಡಷ್ಟು ದೊಡ್ಡದು ಅಲ್ಲ!

ಬಡವ ಬಲ್ಲಿದ ಹಿರಿತನ ಸಿರಿತನ ಎಷ್ಟೋ ಅಷ್ಟು… ಲೆಕ್ಕಕೇ ಇಲ್ಲ!

ದೇಶ ಕೋಶ ವೇಷ ಭಾಷೆ ಅನ್ಕೊಂಡಷ್ಟು ದೊಡ್ಡದು ಅಲ್ಲ

ದಾಳಿ ದಾಳಿ ದಾಳಿ ದಾಳಿ ಬಂತೋ ಬಂತು ನಂದೇ ಪಾಳಿ

 

-ಎನ್ನುತ್ತಾ ನಶ್ವರವಾದ ಈ ಪ್ರಪಂಚದ ಮಾನವ ನಂಬಿಕೆಗಳ ಬುಡವನ್ನು ಅಲುಗಾಡಿಸುತ್ತಾರೆ. ಗುಡಿಯಿಂದ, ಜಾತಿಯಿಂದ, ಸಿರಿತನದಿಂದ, ದೇಶ-ಭಾಷೆಯಿಂದ ಏನು ಮಹತ್ವದ್ದನ್ನು ಸಾಧಿಸಿದಂತಾಯಿತು, ಪ್ರಯೋಜನವನ್ನು ಪಡೆದಂತಾಯಿತು? ಎಂಬ ಪ್ರಶ್ನೆಯನ್ನೆತ್ತುತ್ತಾರೆ. ಆದರೆ ‘ನಿಮ್ಮ ಒಲುಮೆಯ ಗೂಡಿಗೆ’ ಎನ್ನುವ ಇನ್ನೊಂದು ಕವನದಲ್ಲಿ ಹೊರದೇಶದಲ್ಲಿರುವವರು ಹತಾಶರಾಗಬೇಕಿಲ್ಲ. ಅವರು ತಾಯ್ನಾಡಿಗೆ ಹಿಂದಿರುಗಲಿ. ಇಲ್ಲಿ, ‘ಬಿತ್ತಿ ಬೆಳೆಯೋಣ, ಹಂಚಿ ತಿನ್ನೋಣ, ಅಂಜದೆ ಬದುಕೋಣ’ ಎಂದು ಮಾತೃಹೃದಯವನ್ನು ಬಿಂಬಿಸುತ್ತಾರೆ.

ಕವಿ ಡಾ.ವಡ್ಡಗೆರೆ ನಾಗರಾಜಯ್ಯನವರು ತತ್ತ್ವಪದ ರೂಪದ ಕವನವನ್ನು ರಚಿಸಿ, ಹಾಡಿ, ಹಾಡಿಸುವುದರ ಮೂಲಕ  ಜನರಲ್ಲಿ ಎಚ್ಚರಿಕೆ ಮೂಡಿಸಲು ಯತ್ನಿಸಿದ್ದಾರೆ:

ಕೂಲಿ ಕಾರ್ಮಿಕರ ಬವಣೆ ನೋಡಣ್ಣಾ| ಅವರಿಗೆ

ಕೂಲಿ ಕುಂಬಳಿ ಸಿಕ್ಕುತಿಲ್ಲಣ್ಣಾ|

ಹಾಸಲಿಲ್ಲ ಹೊದೆಯಲಿಲ್ಲ| ನೆತ್ತಿಮೇಲೆ ಸೂರು ಇಲ್ಲ

ಉಡಲು ತೊಡಲು ಬಟ್ಟೆಕೊಟ್ಟು

ದವಸಧಾನ್ಯ ಹಂಚಿತಿನ್ನಿ|| ಕೊರೋನಾ||

ಬವಣೆಗಳ ನಡುವೆಯೂ ಮನುಜನೇಹಿಗರಾಗಿ, ಎಲ್ಲವನ್ನೂ ಸರಿದೂಗಿಸಿಕೊಂಡು ಮುನ್ನಡೆಯಿರಿ ಎಂಬ ಸಂದೇಶವನ್ನು ಕವಿ ನೀಡುತ್ತಾರೆ. ಕವಯತ್ರಿ ಕಾತ್ಯಾಯಿನಿ ಕುಂಜಿಬೆಟ್ಟು ಅವರು ನಮ್ಮನ್ನು ಕಾಡುವ ವೈರಾಣುವನ್ನು ಹಳೆಯ ಆನೆ-ಇರುವೆ ಕತೆಯೊಂದಿಗೆ ಸಮೀಕರಿಸುತ್ತಾರೆ:

…ಆನೆಯ ಸೊಂಡಿಲೊಳಗೆ ಕುಳಿತು ಕಚ್ಚಿ

ಯಕಶ್ಚಿತ್ ಇರುವೆಯು ಅದಕ್ಕಿಂತ ಬಲಶಾಲಿ

ಎಂಬುದನ್ನು ಸಾಬೀತು ಪಡಿಸಿದ ಕತೆ…

 

-ಇದಕ್ಕೆ ಕಾರಣವೇನು ಎಂಬುದನ್ನು ಕವಿಯತ್ರಿ ಶೋಧಿಸುತ್ತಾರೆ. ಭೂಮಿಯ ಧಾರಣ ಶಕ್ತಿಯನ್ನು ಲಕ್ಷ್ಯ ಮಾಡದೆ ನಡೆಸಿದ ಬೃಹತ್ ನಗರಗಳ ನಿರ್ಮಾಣ, ಪರಿಸರ ನಾಶ, ಜಲಮಾಲಿನ್ಯ, ವಾಯುಮಾಲಿನ್ಯ ಇತ್ಯಾದಿ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳುತ್ತಾರೆ. ರಕ್ತಬೀಜಾಸುರನ ಸಂತಾನವನ್ನು ಬಗಲಲ್ಲಿಟ್ಟು ಮಾನವರು ಪಡುತ್ತಿರುವ ಪಾಡನ್ನು ಕವಯತ್ರಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಝೂಮ್ ಆ್ಯಪ್, ಮೈಕ್ರೋಸಾಫ್ಟ್ ಹಾಗೂ ಇತರ ಆ್ಯಪ್‌ಗಳನ್ನು ಬಳಸಿ ಅನೇಕ ಸಾಹಿತ್ಯ ಸಂಘಗಳು ಅಲ್ಲಲ್ಲಿ ಕೊರೋನಾ ಕವಿಗೋಷ್ಠಿ, ಕತೆ ಓದುವಿಕೆ ನಡೆಸಿವೆ. ವಾಟ್ಸಾಪ್, ಫೇಸ್‌ಬುಕ್, ಮೆಸೆಂಜರ್ ಮುಂತಾದ ಆ್ಯಪ್‌ಗಳು ಕೊರೋನಾ ಕುರಿತ ಬರಹಗಳನ್ನು ಬಿತ್ತರಿಸಿದ್ದೇ ಬಿತ್ತರಿಸಿದ್ದು. ಅನೇಕ ಅತ್ಯುತ್ತಮ ಗೆಳೆಯರು ಕೊರೋನಾ ನಿಮಿತ್ತವಾಗಿ ಸರಕಾರದ ಪರವಾಗಿ, ವಿರುದ್ಧವಾಗಿ ಕಿಡಿಕಾರಿದ್ದೇ ಕಾರಿದ್ದು. ಎಷ್ಟರ ಮಟ್ಟಿಗೆ ಎಂದರೆ ಅಂಥ ಬರವಣಿಗೆಗಳ ಪರಿಣಾಮವಾಗಿ ಹಲವರು ಪರಸ್ಪರ ಮುಖನೋಡದಷ್ಟು ಶತ್ರುಗಳಾಗಿಬಿಟ್ಟಿದ್ದಾರೆ!

ಇಂತಹ ಸಾಂಕ್ರಾಮಿಕ ರೋಗದ ಕುರಿತು ರಾಶಿರಾಶಿ ಕವನಗಳು, ಲೇಖನಗಳು ಪ್ರಕಟವಾಗಿದ್ದರೂ ಕೈಗೆಟಕಿದ ಕೆಲವನ್ನಿಟ್ಟುಕೊಂಡು ಪ್ರಸ್ತುತ ಲೇಖನ ಸಿದ್ಧಪಡಿಸಲಾಗಿದೆ. ಮುದ್ರಣ ವ್ಯವಸ್ಥೆ ಬಂದ್ ಆಗಿದ್ದುದರಿಂದಲೂ ವೈರಾಣುವಿನಿಂದ ಭಯಭೀತರಾಗಿದ್ದುದರಿಂದಲೂ ಮೌನವ್ರತಕ್ಕೆ ಮೊರೆಹೋದ ಕಾರಣದಿಂದಲೂ ಹಿಂದೆಸರಿದ ಅನೇಕ ಸಾಹಿತಿಗಳು ಮುಂದಿನ ದಿನಗಳಲ್ಲಿ ವಿರಾಟ್ ರೂಪದೊಂದಿಗೆ ಹೊರಬರುವ ನಿರೀಕ್ಷೆಯಿದೆ.

Leave a Reply

Your email address will not be published.