ಸಮನ್ವಯ ಸಾಧ್ಯವೇ?

ಸಂಪಾದಕ

ಆ ತಾಯಿ ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಮಗನನ್ನು ನೋಡಲು ತವಕಿಸುತ್ತಿದ್ದಳು. ಮಗ ಮೊದಲ ಬಾರಿ ತಂದೆತಾಯಿ ಬಿಟ್ಟು ಹೊರಗೆ ಹೋಗಿದ್ದ. ಪ್ರತಿಯೊಂದಕ್ಕೂ ತಾಯಿಯನ್ನೇ ಅವಲಂಬಿಸಿದ್ದ, ಮೀಸೆ ಮೂಡಿದರೂ ಅಮ್ಮನ ಸೆರಗು ಬಿಡದ, ಮೃದು ಸ್ವಭಾವದ ಮಗ ಅಪರಿಚಿತ ಊರು-ಜನರ ಜೊತೆ ಹೇಗೆ ಹೊಂದಿಕೊಳ್ಳುವನೋ ಎಂಬ ಆತಂಕ ಆಕೆಯದು. ಆತ ಆಗಾಗ ದೂರವಾಣಿ ಕರೆ ಮಾಡಿ ಅಮ್ಮನಿಗೆ ಧೈರ್ಯ ತುಂಬುತ್ತಾನಾದರೂ ಅಮ್ಮನ ಅಳುಕು ತುಳುಕುತ್ತಲೇ ಇತ್ತು; ಅವಳ ಅಂತರಂಗದಲ್ಲಿ ಅಂಕೆಗೆ ಸಿಗದ ಆತಂಕ, ಅದುಮಿಡಲು ಆಗದ ದುಗುಡ.

ವೃತ್ತಿ ಬದುಕಿನ ದೈನಂದಿನ ಒತ್ತಡದಲ್ಲಿ ಮುಳುಗಿದ್ದ ಅಪ್ಪನಿಗೆ ಬಿಡುವಿಲ್ಲದಷ್ಟು ಕಾರ್ಯ ಬಾಹುಳ್ಯ. ಅಲ್ಲದೆ ಆತ ತನ್ನ ಮಗ ಕುಟುಂಬದ ಪರಿಧಿ ಹೊರಗೆ ಸ್ವತಂತ್ರವಾಗಿ ಬೆರೆಯುವುದನ್ನು, ಬೆಳೆಯುವುದನ್ನು ಕಲಿಯಲಿ ಎಂದು ಬಯಸುವ ಜವಾಬ್ದಾರಿಯುತ ತಂದೆ. ಮಗನ ವಿಷಯದಲ್ಲಿ ಅಪ್ಪನ ಮಿದುಳು ಮತ್ತು ಅಮ್ಮನ ಹೃದಯದ ನಡುವೆ ಸೇತುವೆ ಇರಲಿಲ್ಲ. ಮಗ ಇರುವ ದೂರದೂರಿಗೆ ಹೋಗಿಬರಲು ಆ ಗೃಹಿಣಿಗೆ ಜೊತೆಗೊಬ್ಬರು ಬೇಕಿತ್ತು. ಅದೊಂದು ದಿನ ಪಕ್ಕದ ಮನೆಯ ಗೆಳತಿ ತವರಿಗೆ ಹೋಗುತ್ತಿರುವ ವಿಷಯ ತಿಳಿದು ಆ ತಾಯಿಯ ಆಸೆಗೆ ರೆಕ್ಕೆ ಮೂಡಿತು. ಗೆಳತಿಯ ತವರೂರಿನಲ್ಲೇ ಕಾಲೇಜು ಸೇರಿದ್ದ ಮಗನನ್ನು ಕಾಣಲು ಹೊರಟುನಿಂತಳು.

ಹಿಂದಿನ ದಿನ ಸರೋರಾತ್ರಿ ತನಕ ಅಡುಗೆ ಮನೆಯಲ್ಲಿ ಒಂದೇಸಮನೆ ಸದ್ದು ಕೇಳಿಬರುತ್ತಿತ್ತು. ರವೆ ಹುರಿಯುವುದು, ತುಪ್ಪ ಸುರಿಯುವುದು, ಕಡಾಯಿಯಲ್ಲಿ ಕರಿಯುವುದು, ಆಗಾಗ ಡಬರಿ ಮೇಲೆ ಪಟಪಟ ಬಡಿದು ಸೌಟಿಗೆ ಮೆತ್ತಿದ ಹಿಟ್ಟು ಉದುರಿಸುವುದು ನಡೆದೇ ಇತ್ತು. ಹೊರಗಿವಿಗೆ ಕೇವಲ ಪಾತ್ರೆಗಳ ನಿರ್ಜೀವ ತಾಕಲಾಟವಾಗಿ ಕೇಳಿಸುತ್ತಿದ್ದ ಸದ್ದಿನ ಹಿಂದೆ ಅಂತಃಕರಣದ ಸಂವೇದನೆಗಳು ಸಪ್ಪಳವಿಲ್ಲದೆ ಸುಳಿದಾಡುತ್ತಿದ್ದವು. ಹದವಾಗಿ ಬೆರೆತ ಅಡುಗೆ ಪದಾರ್ಥಗಳ ಜೊತೆಗೆ ಅಮ್ಮನ ಮಮತೆ ಮಿಳಿತಗೊಂಡು ಹೊಮ್ಮಿತು ಘಮಘಮ. ಅದ್ಯಾವುದೋ ಜಾವದಲ್ಲಿ ಹಣೆಯ ಮೇಲಿನ ಬೆವರು ಒರೆಸಿಕೊಳ್ಳುತ್ತ ಅಡುಗೆಮನೆಯಿಂದ ಹೊರಬಂದ ಆ ಮಹಿಳೆ ಮೊಗದಲ್ಲಿ ಅಪ್ಪಟ ತಾಯಿಯ ಬಿಂಬ.

ಮರುದಿನ ಹನ್ನೊಂದು ಗಂಟೆ ರೈಲಿಗೆ ಹೊರಡಲು ತಾಯಿ ಎಂಟು ಗಂಟೆಗೇ ಸಿದ್ಧವಾಗಿ ಸಂಭ್ರಮದಿಂದ ಕುಳಿತಿದ್ದಳು. ದೊಡ್ಡ ದೊಡ್ಡ ಡಬ್ಬಿಗಳಲ್ಲಿ ಮಗನ ಇಷ್ಟದ ತಿಂಡಿಗಳು. ಮನೆಖರ್ಚು ಉಳಿಸಿ ಕೂಡಿಟ್ಟಿದ್ದ ಎಣಿಸದ ಹಣವನ್ನು ಪರ್ಸಿನಲ್ಲಿ ತುರುಕಿಕೊಳ್ಳಲು ಮರೆತಿರಲಿಲ್ಲ. ಈ ಮೊತ್ತ ಎಂದಿದ್ದರೂ ಮಗನ ಬಾಬತ್ತು. ಅದೇ ಸಮಯಕ್ಕೆ ಬಂದ ಮಗನ ಮೊಬೈಲ್ ಕರೆಯನ್ನು ಮುಖ ಅರಳಿಸಿಕೊಂಡು ಸ್ವೀಕರಿಸಿದಳು ತಾಯಿ. ಮಗನ ಸಂಕ್ಷಿಪ್ತ, ನಿರ್ಲಿಪ್ತ ನಿವೇದನೆ: ಕಾಲೇಜಿನಲ್ಲಿ ಯಾವುದೋ ಸೆಮಿನಾರು ಏರ್ಪಾಟಾಗಿದೆ, ನೀನು ಇವತ್ತು ಬರುವುದು ಬೇಡ! ಅಮ್ಮ ಆಘಾತದಿಂದ ಕುಸಿಯಲಿಲ್ಲ; ಮಗನ ಅಸಹಾಯಕತೆಯನ್ನು ಸಮಚಿತ್ತದಿಂದಲೇ ಗ್ರಹಿಸಿ ಸ್ವತಃ ಸಂತೈಸಿಕೊಂಡಳು.

ಇದು ಕಥೆಯಲ್ಲ; ಇತ್ತೀಚೆಗೆ ಗೆಳೆಯನ ಕುಟುಂಬದಲ್ಲಿ ನಡೆದ ಘಟನೆ. ಈ ಬಗೆಯ ಪ್ರಸಂಗಗಳು ಅನೇಕರ ಬಾಳಿನಲ್ಲಿ ವಿವಿಧ ರೂಪಗಳಲ್ಲಿ ಜರುಗುತ್ತಿವೆ. ಅಮ್ಮನ ಮಮತೆ, ಅಪ್ಪನ ವಾಸ್ತವಿಕತೆ ಮತ್ತು ಮಗನ ಆದ್ಯತೆಗಳ ನಡುವೆ ಎಲ್ಲೋ ಸೂತ್ರ ತಪ್ಪಿದಂತಹ ಪರಿಸ್ಥಿತಿ. ಇದು ಕೌಟುಂಬಿಕ ಬದುಕಿನಾಚೆಗಿನ ಸಾಮಾಜಿಕ ಸಂಬಂಧಗಳಿಗೂ ಅನ್ವಯವಾಗುವ ಸಂದರ್ಭ. ಸರಿತಪ್ಪುಗಳ ವಿಶ್ಲೇಷಣೆ ಮೀರಿ ಈ ಭಿನ್ನ ನಡೆಗಳ ನಡುವೆ ಸಮನ್ವಯ ಸಾಧಿಸುವ ಸವಾಲು ನಮ್ಮೆದುರಿಗಿದೆ.

ಸಂಪಾದಕ:ಚಂದ್ರಕಾಂತ ವಡ್ಡು

ಗೌರವ ಸಹಸಂಪಾದಕ:ಪೃಥ್ವಿದತ್ತ ಚಂದ್ರಶೋಭಿ

ಮುಖಪುಟ ವಿನ್ಯಾಸ: ನ್ಯೂಲೈನ್

ಒಳಪುಟ ವಿನ್ಯಾಸ: ಹನುಮಂತರಾವ್ ಕೌಜಲಗಿ

ಸಂಪಾದಕೀಯ ಸಲಹಾ ಸಮಿತಿ
ವಸಂತ ಶೆಟ್ಟಿ | ಟಿ.ಆರ್.ಅನಂತರಾಮು | ಹನುಮಂತರೆಡ್ಡಿ ಶಿರೂರು | ರಘುನಂದನ
ಡಾ.ಪುರುಶೋಥಮ ಬಿಳಿಮಲೆ | ಪದ್ಮರಾಜ ದಂಡಾವತಿ | ಡಾ.ಕೆ.ಪುಟ್ಟಸ್ವಾಮಿ
ಡಾ.ಟಿ.ಆರ್.ಚಂದ್ರಶೇಖರ | ಬಿ.ಜಯಪ್ರಕಾಶಗೌಡ | ಸಿ.ಚನ್ನಬಸವಣ್ಣ | ಸುನಂದಾ ಕಡಮೆ
ಡಾ.ರಂಗನಾಥ ಕಂಟನಕುಂಟೆ | ಡಾ.ಜಾಜಿ ದೇವೇಂದ್ರಪ್ಪ | ಎಸ್.ಆರ್.ವಿಜಯಶಂಕರ್
ಚಂದ್ರಶೇಖರ ಬೆಳಗೆರೆ | ಎಂ.ಕೆ.ಆನಂದರಾಜೇ ಅರಸ್

ಸಮಾಜಮುಖಿ
ನಂ.8, ಡಾ.ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ), ಕುಮಾರ ಪಾರ್ಕ್ ಪಶ್ಚಿಮ, ಶೇಷದ್ರಿಪುರಂ,
ಬೆಂಗಳೂರು 560020, ಮೊ: 9606934018, samajamukhi2017@gmail.com

Leave a Reply

Your email address will not be published.