ಸಮಯದ ಉಳಿತಾಯ ಖಾತೆ ಟೈಮ್ ಬ್ಯಾಂಕಿಂಗ್

ನಾವು ನಮ್ಮ ಬಳಿ ಇರುವ ಹೆಚ್ಚುವರಿ ಸಮಯವನ್ನು ಹಣದಂತೆ ಬ್ಯಾಂಕಿನಲ್ಲಿ ಕೂಡಿಡಬಹುದು. ಇದಕ್ಕೆ ಟೈಮ್ ಬ್ಯಾಂಕಿಂಗ್ ಅಂತ ಹೆಸರು. ಏಕೆಂದರೆ ಈ ವ್ಯವಸ್ಥೆಯಲ್ಲಿ ಎಲ್ಲವೂ ಬ್ಯಾಂಕ್ ರೀತಿಯಲ್ಲೇ ನಡೆಯುತ್ತದೆ, ಆದರೆ ಹಣದ ಬದಲಿಗೆ ಗಂಟೆಗಳ ಚಲಾವಣೆಯಾಗುತ್ತದೆ!

ಅದೊಂದು ನೀರವ ರಾತ್ರಿ, ಕರೆಂಟು ಹೋಗಿದ್ದರಿಂದ, ಗಕ್ಕನೆ ಫ್ಯಾನ್ ನಿಂತು, ಪಕ್ಕನೆ ಎಚ್ಚರವಾಗಿಬಿಟ್ಟಿತು. ಕೆಲವೇ ಕ್ಷಣಗಳಲ್ಲಿ ನಿಶ್ಯಬ್ದವಾದ ಕೋಣೆಯನ್ನೆಲ್ಲಾ ಬಚ್ಚಲು ಮನೆಯಲ್ಲಿ ಸೋರುತ್ತಿದ್ದ ನಲ್ಲಿಯ ಟಿಪ್ ಟಿಪ್ ಮತ್ತು ಗೋಡೆಯ ಮೇಲಿನ ಗಡಿಯಾರದ ಟಿಕ್ ಟಿಕ್ ಆವರಿಸಿಕೊಂಡಿತು. ರೆಪೇರಿಯಾಗದ ನಲ್ಲಿಯನ್ನು ಶಪಿಸುತ್ತಾ ಎದ್ದು, ಅದರ ಕೆಳಗೊಂದು ಬಕೆಟ್ ಇಟ್ಟು ಬಂದೆ. ಇನ್ನು ಗಡಿಯಾರವನ್ನು ದುರುಗುಟ್ಟಿಕೊಂಡು ನೋಡುತ್ತಾ, ಇದರಿಂದ ಉದುರಿ ಹೋಗುತ್ತಿರುವ ಕ್ಷಣಗಳನ್ನೂ ಕೂಡಿಟ್ಟು ನಾಳೆ ಬಳಸಿಕೊಳ್ಳುವ ಹಾಗಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು, ಎಂದು ಕೊಂಡು ಹತಾಶಳಾಗಿ ಕಿಟಕಿ ಹೊರಗೆ ಇಣುಕಿ ನೋಡಿದೆ. ಆಗಲೇ ಬೆಳಗಿನ ಜಾವ ನಾಲ್ಕು. ಬೀದಿಯ ಆ ಕೊನೆಯಲ್ಲಿ ಇದ್ದ ಬೆಂಚಿನ ಮೇಲೆ ಗಸ್ತು ತಿರುಗಿ ತಿರುಗಿ ಸಾಕಾದ ವಾಚಮನ್ ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿದ್ದ. ಈ ಕೊನೆಯಲ್ಲಿ ಹಾಲು ಹಾಕುವ ಹುಡುಗ ಖಾಲಿ ಕ್ರೇಟುಗಳ ಮುಂದೆ ಎದೆ ಮೇಲೆ ಕೈ ಕಟ್ಟಿಕೊಂಡು ನಿಂತು ವ್ಯಾನಿಗೆ ಕಾಯುತಿದ್ದ. ಇವರೊಂದಿಗೆ ನಿವೃತ್ತಿ ಹೊಂದಿ ಖಾಲಿ ಕುಳಿತವರು, ಮಾಲೀಕರಿಗಾಗಿ ಕಾರಿನಲ್ಲಿ ಕಾಯುತ್ತಿರುವ ಚಾಲಕರು, ಗ್ರಾಹಕರಿಲ್ಲದ ಅಂಗಡಿಯ ಸೇಲ್ಸ್ ಗರ್ಲ್ ಮುಂತಾದವರೆಲ್ಲಾ ನೆನಪಾದರು. ಇವರೆಲ್ಲರ ಬಳಿ ಕೊಳೆಯುತ್ತಿರುವ ಸಮಯವನ್ನು ಹೇಗಾದರೂ ಸಂಗ್ರಹಿಸಿ ಜೋಪಾನವಾಗಿ ಇಡುವಂತಿದ್ದರೆ ಎನಿಸಿತು. ನಿಮಗೂ ಎಂದಾದರೂ ಹೀಗೆ ಅನ್ನಿಸಿದೆಯೇ?

ಹಾಗಾದರೆ ನಾನು ಹೇಳಹೊರಟಿರುವ ವಿಷಯ ನಿಮಗೆ ಖಂಡಿತ ಉಪಯುಕ್ತವಾದುದು. ಹೌದು, ನಾವು ನಮ್ಮ ಬಳಿ ಇರುವ ಹೆಚ್ಚುವರಿ ಸಮಯವನ್ನು ಹಣದಂತೆ ಬ್ಯಾಂಕಿನಲ್ಲಿ ಕೂಡಿಡಬಹುದು. ಇದಕ್ಕೆ ಟೈಮ್ ಬ್ಯಾಂಕಿಂಗ್ ಅಂತ ಹೆಸರು. ಏಕೆಂದರೆ ಈ ವ್ಯವಸ್ಥೆಯಲ್ಲಿ ಎಲ್ಲವೂ ಬ್ಯಾಂಕ್ ರೀತಿಯಲ್ಲೇ ನಡೆಯುತ್ತದೆ, ಆದರೆ ಹಣದ ಬದಲಿಗೆ ಗಂಟೆಗಳ ಚಲಾವಣೆಯಾಗುತ್ತದೆ!

ಅಮೆರಿಕ ಮತ್ತು ಹಲವು ಯೂರೋಪ್ ದೇಶಗಳಲ್ಲಿ ಈಗಾಗಲೇ ಇಂತಹ ಒಂದು ಪದ್ಧತಿ ಬಳಕೆಯಲ್ಲಿದೆ. ಅಂದಹಾಗೆ ಇದೇನೂ ಊಹಿಸಿಕೊಳ್ಳಲು ಕಷ್ಟವಾದ, ವಾಸ್ತವಕ್ಕೆ ದೂರವಾದ ವಿಚಾರವೇನಲ್ಲ. ಏಕೆಂದರೆ ಅನೌಪಚಾರಿಕ ವಾಗಿ ಅಕ್ಕ ಪಕ್ಕದ ಮನೆಯವರು ಅಥವಾ ಸ್ನೇಹಿತರು ಮೊದಲಿನಿಂದಲೂ ಹೀಗೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತಲೇ ಬಂದಿದ್ದಾರೆ. ಆದರೆ ಇದನ್ನು ಔಪಚಾರಿಕವಾಗಿ ಒಂದು ಕಟ್ಟುಪಾಡಿಗೆ ಬದ್ಧವಾಗಿ, ಶಿಸ್ತಿನಿಂದ ಮತ್ತು ಸಹಾಯ ಅಥವಾ ಋಣದಲ್ಲಿದ್ದೇವೆ ಎಂದುಕೊಂಡು ಮುಲಾಜಿಗೆ ಒಳಗಾಗದೆ ಮಾಡಿದರೆ ಅದೇ ಟೈಮ್ ಬ್ಯಾಂಕಿಂಗ್ ಆಗುತ್ತದೆ.

ಇದನ್ನು ಇನ್ನಷ್ಟು ವಿವರವಾಗಿ ಒಂದು ಉದಾಹರಣೆಯೊಂದಿಗೆ ಹೇಳುವೆ. ನನ್ನ ಬಳಿ ಇಂದು ಎರಡು ಗಂಟೆಗಳು ಹೆಚ್ಚುವರಿ ಇವೆ ಎಂದಾಗ, ನಾನು ನನ್ನ ಸಮುದಾಯದಲ್ಲಿ ಅಗತ್ಯವಿರುವ ಮತ್ತೊಬ್ಬ ರಿಗೆ, ಅವರಿಗೆ ಬೇಕಾದ ಸೇವೆಯನ್ನು ಸಲ್ಲಿಸುವುದು. ಇಲ್ಲಿ ಸೇವೆ ಎಂದರೆ ಮಗುವನ್ನು ನೋಡಿಕೊಳ್ಳುವುದು, ಪೇಟೆಯಿಂದ ದಿನಸಿ ಸಾಮಾನು ಅಥವಾ ಔಷಧಿ ತಂದು ಕೊಡುವುದು, ಕಾರು ಓಡಿಸುವುದು, ಮಕ್ಕಳಿಗೆ ಪಾಠ ಹೇಳಿಕೊಡುವುದು, ಮನೆಯ ಸುತ್ತಮುತ್ತ ಕಾಡಿನಂತೆ ಬೆಳೆದ ಗಿಡಗಂಟೆಗಳನ್ನು ಸವರಿ ಸ್ವಚ್ಛ ಮಾಡುವುದು, ವೃದ್ಧರನ್ನು ನೋಡಿಕೊಳ್ಳುವುದು, ಮುದ್ದಿಗಾಗಿ ಸಾಕಿದ ನಾಯಿ ಬೆಕ್ಕುಗಳನ್ನು ನೋಡಿಕೊಳ್ಳುವುದು ಮುಂತಾದ ಕೆಲಸಗಳು. ಆಗ ನನ್ನ ಖಾತೆಯಲ್ಲಿ ಎರಡು ಗಂಟೆಗಳು ಜಮೆಯಾಗುತ್ತವೆ. ಮುಂದೆ ಒಂದು ದಿನ ನನಗೆ ಅಗತ್ಯವಿದ್ದಾಗ ಸಮುದಾಯದ ಬೇರೊಬ್ಬರು ನನಗೆ ಬೇಕಾದ ಸೇವೆಯನ್ನು ಎರಡು ಗಂಟೆ ಉಚಿತವಾಗಿ ಮಾಡಿಕೊಡುವರು. ಹೀಗೆ ಜಮೆಯಾಗುತ್ತಾ ಹೋದ ಗಂಟೆಗಳನ್ನು ಮುಂದೆ ನಮಗೆ ಬೇಕಾದ ರೀತಿಯಲ್ಲಿ ಬೇರೆ ಸದಸ್ಯರಿಂದ ಮರಳಿ ಪಡೆಯಬಹುದು. ಸೋಜಿಗವಲ್ಲವೇ?

ಟೈಮ್ ಬ್ಯಾಂಕಿಂಗ್ ಪರಿಭಾಷೆ ಮತ್ತು ಪ್ರಸ್ತುತತೆ

ಟೈಮ್ ಬ್ಯಾಂಕಿಂಗ್ ಒಂದು ಸಮುದಾಯದಲ್ಲಿ ಪರಸ್ಪರ ಸಂಬದ್ಧತೆಯನ್ನು ಆಧರಿಸಿ, ಗಂಟೆಗಳನ್ನೇ ಚಲಾವಣೆಯ ನಾಣ್ಯವನ್ನಾಗಿಸಿಕೊಂಡು ಸೇವೆಗಳನ್ನು ವಿನಿಮಯ ಮಾಡಿಕೊಳ್ಳುವ ಪದ್ಧತಿ. ಒಬ್ಬ ವ್ಯಕ್ತಿ ತನಗೆ ಪ್ರಾವೀಣ್ಯ ಇರುವ ಕೆಲಸವನ್ನು ಕೆಲವು ಗಂಟೆ ಮಾಡಿಕೊಟ್ಟು ಬದಲಿಗೆ ತನಗೆ ಬೇಕಾದ ಮತ್ತೊಂದು ಕೆಲಸವನ್ನು ಅಷ್ಟೇ ಗಂಟೆಗಳಷ್ಟು ಹೊತ್ತು ಮತ್ತೊಬ್ಬರಿಂದ ಪಡೆಯುವುದು. ಇಲ್ಲಿ ಕೆಲಸ ಮಾಡಿದವನು ಮತ್ತು ಮಾಡಿಸಿಕೊಂಡವನು ಹಣ ಕೊಡುವ
ಅಥವಾ ಪಡೆಯುವ ಹಾಗಿಲ್ಲ.

ಒಂದು ಸಮುದಾಯದಲ್ಲಿ, ಉದಾಹರಣೆಗೆ ಮಹಾನಗರಗಳ ಒಂದು ಸಮುಚ್ಚಯದಲ್ಲಿ ವಾಸಿಸುತ್ತಿರುವ ಜನರು, ಟೈಮ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲಿಚ್ಛಿಸುವವರೆಲ್ಲಾ ಸದಸ್ಯರಾಗುತ್ತಾರೆ. ಎಲ್ಲರ ಹೆಸರಿನಲ್ಲಿ ಒಂದು ಖಾತೆ ತೆರೆಯಲ್ಪಡುವುದು. ಒಬ್ಬ ಸದಸ್ಯ ತಾನು ಆರೋಗ್ಯದಿಂದಿರುವಾಗ, ಖಾಲಿ ಕುಳಿತಿರುವಾಗ, ಅಗತ್ಯವಿರುವ ಸದಸ್ಯರಿಗೆ ಸೇವೆ ಒದಗಿಸಿ ತನ್ನ ಮುಪ್ಪಿನ ಕಾಲಕ್ಕೋ ಅಥವಾ ರೋಗ-ರುಜಿನಗಳಿಗೆ ತುತ್ತಾದಾಗಲೋ, ಅಥವಾ ತನಗೆ ಬೇಕಾದ ಸೇವೆಗಳನ್ನು ಪಡೆಯಲು ಸಾಕಷ್ಟು ಹಣ ಇಲ್ಲದಾಗಲೋ ಹಿಂತಿರುಗಿ ಪಡೆಯುವ ವ್ಯವಸ್ಥೆ ಮಾಡಿಕೊಳ್ಳಬಹುದು.

ಟೈಮ್ ಬ್ಯಾಂಕಿಂಗ್ ಅನ್ನು ನಮ್ಮ ನಾಡಿಗೆ, ನಮ್ಮ ಪರಿಸರಕ್ಕೆ ಅನುಗುಣವಾಗಿ ಹೋಲಿಸಿಕೊಂಡರೆ ಹೇಗಿರಬಹುದು? ಮೊದಲಿನಂತೆ ಈಗ ಒಟ್ಟು ಕುಟುಂಬಗಳಲ್ಲಿ ಜೀವನ ನಡೆಸುವುದು ವಿರಳವಾಗಿದೆ. ಒಂದು ಮನೆ ಎಂದರೆ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಒಡಹುಟ್ಟಿದವರು ಹೀಗೆ ಎಲ್ಲರೂ ಜೊತೆಯಲ್ಲಿ ವಾಸಿಸುತ್ತಿದ್ದಾಗ ಮಕ್ಕಳನ್ನು ಮತ್ತು ಮುದುಕರನ್ನು ಒಂಟಿಯಾಗಿ ಬಿಟ್ಟು ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ಆದರೆ ಈಗ ವಿಭಜಿತ ಕುಟುಂಬಗಳು, ಅದರಲ್ಲೂ ಅಪ್ಪಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು, ಮೇಲಾಗಿ ಒಬ್ಬರೋ ಇಬ್ಬರೋ ಮಕ್ಕಳು; ಹೀಗಿರುವಾಗ ಅಕ್ಕಪಕ್ಕದ ಮನೆಯವರು ಮತ್ತು ಸ್ನೇಹಿತರ ಮೇಲೆ ಅವಲಂಬನೆ ಅನಿವಾರ್ಯ ಆಗುತ್ತದೆ. ಸಹಾಯ ರೂಪದಲ್ಲಿ ಆಗಾಗ ಸೇವೆ ಸಿಕ್ಕರೂ, ಅನುದಿನದ ಅನಿವಾರ್ಯತೆಗೆ ಹಣ ತೆತ್ತು, ಅಪರಿಚಿತರಿಂದ ಸೇವೆ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಟೈಮ್ ಬ್ಯಾಂಕಿಂಗ್ ಎನ್ನುವ ಪದ್ಧತಿಯಲ್ಲಿ ಈ ಕಷ್ಟ ಇರುವುದಿಲ್ಲ ಮತ್ತು ಇದು ಎಲ್ಲರಿಗೂ ಅನುಕೂಲವಾದ್ದರಿಂದ ಒಂದು ಸಮುಚ್ಚಯ ಅಥವಾ ಸಮುದಾಯದ ಹೆಚ್ಚು ಜನ ಇದರಲ್ಲಿ ಸ್ವಇಚ್ಛೆಯಿಂದಲೇ ಪಾಲ್ಗೊಳ್ಳುತ್ತಾರೆ. ಹಾಗಾಗಿ ನಗರಗಳಲ್ಲಿ ಇದು ಹೆಚ್ಚು ಪ್ರಸ್ತುತವಾಗುತ್ತದೆ. 

ಹಾಸಿಗೆ ಹಿಡಿದಿರುವ ಅಜ್ಜಿಯನ್ನು ಬಿಟ್ಟು ಎಲ್ಲಿಗೂ ಹೋಗಲಾರದ ಮನೆಯೊಡತಿ, ಟೈಮ್ ಬ್ಯಾಂಕಿಂಗ್ ಸದಸ್ಯರ ಸೇವೆಯಿಂದ ಮೂರು ತಾಸು ಸಿನೆಮಾ ನೋಡಲು ಹೋಗಿ ಬರಬಹುದು. ಬದಲಿಗೆ ಆ ಸದಸ್ಯರ ಮಕ್ಕಳನ್ನು ತನ್ನ ಮನೆಯಲ್ಲಿ ಕೂರಿಸಿಕೊಂಡು ಕತೆ ಪುಸ್ತಕ ಓದಬಹುದು. ಇಂಗ್ಲಿಷಿನಲ್ಲಿ ಪ್ರವೀಣೆಯಾದ ಮಹಿಳೆ ಎದುರು ಮನೆಯ ಐಟಿ ಉದ್ಯಮಿಯ ಮಕ್ಕಳಿಗೆ ಇಂಗ್ಲಿಷ್ ಪಾಠ ಹೇಳಿಕೊಟ್ಟು ತಾನು ಅವನಿಂದ ಕಂಪ್ಯೂಟರು ಕಲಿಯಬಹುದು. ಅಡಿಗೆ ಮಾಡುವುದನ್ನು ಕಲಿಸಿ ಗೃಹಿಣಿಯೊಬ್ಬಳು ಅಲಂಕಾರ ಮಾಡುವುದನ್ನು ಕಲಿಯಬಹುದು. ಇನ್ನೂ ಹೆಚ್ಚೆಂದರೆ ಎಲ್ಲಿಗಾದರೂ ಬೇಗ ಹೋರಾಡಬೇಕೆಂದಾಗ ಮನೆಗೆಲಸದವಳು ಬಂದಿಲ್ಲದಿದ್ದರೆ ಎದುರು ಮನೆ ಅಜ್ಜಿಗೆ ಕೀಲಿ ಕೊಟ್ಟು, ಮುಸುರೆ ಪಾತ್ರೆ ತೊಳೆಸಿಡುವಂತೆ ಹೇಳಿ ಹೋಗಬಹುದು. ಪ್ರಾಯದವರು ತಮ್ಮ ಹೆಚ್ಚುಹೆಚ್ಚು ಸಮಯವನ್ನು ಖಾತೆಯಲ್ಲಿ ಜಮಾ ಮಾಡಿ ತಮ್ಮ ವೃದ್ಧಾಪ್ಯದಲ್ಲಿ ಬಳಸಿಕೊಳ್ಳಬಹುದು.

ಮೇಲೆ ನೀಡಿದ ಉದಾಹರಣೆಗಳೆಲ್ಲಾ ಈಗಾಗಲೇ ನಡೆಯುತ್ತಿರುವಂತವೇ ಆಗಿದ್ದರೂ ಟೈಮ್ ಬ್ಯಾಂಕಿಂಗ್ ಪದ್ಧತಿಯಿಂದ ಯಾರೂ ಯಾವ ಸಂದರ್ಭದಲ್ಲೂ ಸಹಾಯ ಬೇಡುತ್ತಿರುವಂತೆ ಮೈ ಎಲ್ಲಾ ಹಿಡಿ ಮಾಡಿಕೊಂಡು ಮುಜುಗರ ಪಡಬೇಕಿಲ್ಲ. ಆದರೆ ಇದರ ಸಫಲತೆ ಸಮುದಾಯದ ಬದ್ಧತೆ ಮತ್ತು ಸಿದ್ಧಾಂತಗಳ ಮೇಲೆ ಅವಲಂಬಿತವಾಗಿರುವುದು.

ಟೈಮ್ ಬ್ಯಾಂಕಿಂಗ್ ಸಿದ್ಧಾಂತಗಳು

ಒಬ್ಬ ಸದಸ್ಯ ಒಂದು ಗಂಟೆಯನ್ನು ಜಮಾ ಮಾಡಬೇಕೆಂದರೆ ಮತ್ತೊಬ್ಬ ಸದಸ್ಯ ಅದನ್ನು ಪಡೆಯಲು ಮತ್ತು ಮುಂದೆ ಒಂದು ದಿನ ಹಿಂದಿರುಗಿಸಲು ಸಿದ್ಧನಿರಬೇಕು. ಮತ್ತು ಇಡೀ ಸಮುದಾಯದ ಸದಸ್ಯರೆಲ್ಲರೂ ಇದಕ್ಕೆ ಬದ್ಧರಾಗಿರಬೇಕು. ಹೀಗೆ ಬದ್ಧರಾದ ಗುಂಪನ್ನೇ ಟೈಮ್ ಬ್ಯಾಂಕ್ ಎನ್ನಬಹುದು. ಇದರ ಯಶಸ್ಸಿಗೆ ಮುಖ್ಯವಾಗಿ ಒಬ್ಬರ ಮುಂದಾಳತ್ವ, ಮೇಲ್ವಿಚಾರಣೆ ಅಥವಾ ಆಡಳಿತ ಇರಬೇಕು. ಏಕೆಂದರೆ ಪುಕ್ಸಟ್ಟೆ ಸಿಗುವ ಸೌಲಭ್ಯಗಳನ್ನು ಹಿಂದಿರುಗಿಸುವ ಸಮಯ ಬಂದಾಗ, ಮೈಗಳ್ಳತನ ಮಾಡಿ, ಸುಳ್ಳು ನೆವ ಹೇಳಿ ತಪ್ಪಿಸಿಕೊಳ್ಳುವವರು ಇದ್ದರೆ ಖಂಡಿತ ಅದು ಎಲ್ಲರ ಉತ್ಸಾಹವನ್ನು ಕರಗಿಸಿ, ವಿಶ್ವಾಸ -ನಂಬಿಕೆಗಳನ್ನೇ ಬುಡಮೇಲು ಮಾಡಬಹುದು. ಕೊಡುಕೊಳ್ಳುವ ಈ ಪದ್ಧತಿಯಲ್ಲಿ ಯಾವುದು ಸ್ವೀಕಾರಾರ್ಹ, ಯಾವುದು ಅಲ್ಲ ಎನ್ನುವ ಬಗ್ಗೆ ಖಚಿತವಾದ, ಎಲ್ಲರಿಗೂ ಒಪ್ಪಿಗೆಯಾಗುವ ನಿಲುವು ತಳೆಯಬೇಕು. ಇದೆಲ್ಲಕ್ಕಿಂತ ಮಿಗಿಲಾಗಿ ಟೈಮ್ ಬ್ಯಾಂಕಿಂಗ್ ಅನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಅದರದ್ದೇ ಆದ ಐದು ಮುಖ್ಯ ಮೌಲ್ಯಗಳಿವೆ; ಅವುಗಳನ್ನು ಪಾಲಿಸಬೇಕು.

ಟೈಮ್ ಬ್ಯಾಂಕಿಂಗ್ ನಿರ್ವಹಣೆ

ಟೈಮ್ ಬ್ಯಾಂಕಿಂಗ್ ನಿರ್ವಹಣೆಗಾಗಿ ಈಗಾಗಲೇ ಕೆಲವು ಸಾಫ್ಟವೇರುಗಳು ಲಭ್ಯವಿದೆ. ಅವುಗಳಲ್ಲಿ ಮುಖ್ಯವಾದವು TimeRepublik, hOurWorld’s Time and Talents ಮತ್ತು Community Forge.. ಇವುಗಳ ಸಹಾಯದಿಂದ ಮನೆಯಲ್ಲಿ ಕುಳಿತೇ ಸದಸ್ಯರು ತಾವು ಯಾವ ಯಾವ ಸೇವೆಗಳನ್ನು ಮಾಡಲು/ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಬಹುದು. ತಮ್ಮ ಪ್ರೊಫೈಲುಗಳಲ್ಲಿ ತಮಗೆ ತಿಳಿದಿರುವ, ಪರಿಣತಿ ಇರುವ ಕೆಲಸಗಳ ಬಗ್ಗೆ ಹೇಳಿಕೊಳ್ಳಬಹುದು ಮತ್ತು ತಮಗೆ ಯಾವ ಸೇವೆಗಳ ಅಗತ್ಯವಿದೆ ಎಂತಲೂ ಹೇಳಬಹುದು. ಸದಸ್ಯರ ಖಾತೆ ಸಿದ್ಧಪಡಿಸಿ, ಜಮೆ ಆದ ಸಮಯದ ಲೆಕ್ಕ ಇಡಬಹುದು. ಮುಖ್ಯವಾದ ವಿಚಾರಗಳನ್ನು ಎಲ್ಲರ ಗಮನಕ್ಕೆ ತರಬಹುದು. ಹಬ್ಬ ಹರಿದಿನದ ಆಚರಣೆಗೆ ಮುಂಚಿತವಾಗಿಯೇ ಯೋಜನೆ ಹಾಕಿಕೊಳ್ಳಬಹುದು. ಹೊಸ ಸದಸ್ಯರು ಸೇರ್ಪಡೆಯಾಗಬಹುದು ಮತ್ತು ಕಾರಣಾಂತರದಿಂದ ನಿರ್ಗಮಿಸಲೂ ಬಹುದು. ನಿರ್ವಹಣೆಗೆ ಅಗತ್ಯವಿರುವ ಸಿಬ್ಬಂದಿ, ಸೌಲಭ್ಯಗಳನ್ನು ಕೇಳಬಹುದು. ಹೀಗೆ ಒಂದು ವ್ಯವಸ್ಥಿತವಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸಬಹುದು.

ಕೊನೆಯ ಮಾತು

ಸಹಜವಾಗಿಯೇ ಹೊಸ ವಿಷಯಗಳು ಮತ್ತು ಬದಲಾವಣೆಗಳು ಕುತೂಹಲ ಕೆರಳಿಸುತ್ತವೆ. ಈ ಪ್ರಬಂಧದಲ್ಲಿ ಟೈಮ್ ಬ್ಯಾಂಕಿಂಗ್ ಎನ್ನುವ ವಿಷಯ ಕುರಿತು ಹೇಳಿದ ವಿಚಾರಗಳು ಇಂತಹ ಒಂದು ಪದ್ಧತಿಯನ್ನು ನಮ್ಮ ನೆರೆ-ಹೊರೆ ಅಥವಾ ಸುತ್ತ ಮುತ್ತಲಿನ ಜನರೊಂದಿಗೆ ಸೇರಿ ಹುಟ್ಟುಹಾಕಲು ಪ್ರೇರಣೆಯಾಗಬಹುದು. ನಗರವಾಸಿಗಳಿಗೆ ಇದು ಅತ್ಯಂತ ಪ್ರಸ್ತುತ ಮತ್ತು ಅನುಕೂಲಕರವಾಗಿರುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವ ಬದಲು ಉರುಳುತ್ತಿರುವ ಕಾಲದ ಜೊತೆಗೇ ನಾವೂ ಮಿಂಚಬಹುದು ಮತ್ತು ನಮ್ಮ ನೆರೆಹೊರೆಯಲ್ಲಿ ಸ್ನೇಹ, ಸೌಹಾರ್ದವನ್ನು ಮೆರೆಯಬಹುದು.

ಟೈಮ್ ಬ್ಯಾಂಕಿಂಗ್ ಮೌಲ್ಯಗಳು

ಅಮೆರಿಕಾದ ಎಡ್ಗರ ಕಾಹ್ನ್ ಎನ್ನುವ ವಕೀಲರು ಆಧುನಿಕ ಟೈಮ್ ಬ್ಯಾಂಕಿಂಗ್ ಅನ್ನು ಮೊದಲಿಗೆ ಹುಟ್ಟು ಹಾಕಿದರು. ಇವರು ಕೆಲವು ಟೈಮ್ ಬ್ಯಾಂಕುಗಳು ಯಶಸ್ವಿಯಾಗಲು ಮುಖ್ಯವಾಗಿ ಅವುಗಳು ಪಾಲಿಸಿಕೊಂಡು ಬರುತ್ತಿರುವ ಮೌಲ್ಯಗಳೇ ಕಾರಣ ಎಂಬುದನ್ನು ಮನಗಂಡು, ‘No more throwing away people’ ಎನ್ನುವ ತಮ್ಮ ಪುಸ್ತಕದಲ್ಲಿ ಕೆಳಕಂಡ ಐದು ಮೌಲ್ಯಗಳನ್ನು ಉಲ್ಲೇಖಿಸಿದ್ದಾರೆ. ಬಹುತೇಕ ಟೈಮ್ ಬ್ಯಾಂಕುಗಳು ಇವುಗಳನ್ನು ಪ್ರಾರಂಭದಲ್ಲೇ ಅಂಗೀಕರಿಸಿ ಇದರ ಪಾಲನೆಗೆ ಶ್ರಮಿಸುತ್ತವೆ.

1. ಮೊದಲನೆಯದಾಗಿ, ಪ್ರತಿಯೊಬ್ಬ ಮನುಷ್ಯನೂ ಆಸ್ತಿ ಇದ್ದಂತೆ; ಯಾರೂ ನಿಷ್ಪ್ರಯೋಜಕರಲ್ಲ; ತಮ್ಮದೇ ಆದ ರೀತಿಯಲ್ಲಿ ಉಪಯುಕ್ತತೆಯನ್ನು ಕಂಡುಕೊಳ್ಳಬಲ್ಲರು.

2. ಎರಡನೆಯದಾಗಿ, ಹಣದಿಂದ ಎಲ್ಲಾ ಸೇವೆಗಳನ್ನು ಕೊಂಡುಕೊಳ್ಳಲು ಆಗುವುದಿಲ್ಲ; ಒಂದು ಕುಟುಂಬ, ಸಮುದಾಯದಲ್ಲಿ ಆತ್ಮೀಯತೆ, ಬಾಂಧವ್ಯ, ಅನ್ಯೋನ್ಯತೆ ಬೆಳೆಸುವುದು, ನೆರೆಹೊರೆಯಲ್ಲಿ ಹೊಸ ಚೈತನ್ಯ ತುಂಬುವುದು, ಪ್ರಜಾಪ್ರಭುತ್ವವನ್ನು ನಿಜಾರ್ಥದಲ್ಲಿ ಪಾಲಿಸುವುದು, ಸಾಮಾಜಿಕ ನ್ಯಾಯಬದ್ಧತೆ ಒದಗಿಸುವುದು ಮುಂತಾದುವು. ಟೈಮ್ ಬ್ಯಾಂಕಿನಲ್ಲಿ ಜಮೆಯಾದ ಸಮಯವನ್ನು ಇಂತಹ ಸೇವೆಗಳನ್ನು ಗುರುತಿಸಲು, ಬೆಲೆ ಕೊಡಲು ಮತ್ತು
ಪುರಷ್ಕರಿಸಲು ಮೀಸಲಿಡಬೇಕು. ಅಲ್ಲದೆ ಯಾವ ಕೆಲಸವೂ ಕೀಳಲ್ಲ ಎನ್ನುವ ಕೆಲಸದ ಹಿರಿಮೆಯ ಭಾವನೆಯನ್ನೂ ಬೆಳೆಸುತ್ತದೆ.

3. ಪರಸ್ಪರ ಸಂಬದ್ಧತೆ ಕೊಡುಕೊಳ್ಳುವಿಕೆಯು ಏಕ ಮಾರ್ಗೀಯವಾಗಿರದೆ ಎರಡೂ ಕಡೆಯಿಂದ ಸಕ್ರಿಯವಾಗಿದ್ದಾಗ ಇದರಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ಮಾನ್ಯತೆ, ಅಧಿಕಾರ ದೊರೆತಂತಾಗುತ್ತದೆ. ಯಾರೂ, ಯಾರ ಹಂಗಿನಲ್ಲಿರದೆ, ದಾಕ್ಷಿಣ್ಯಕ್ಕೊಳ ಗಾಗದೆ ಆತ್ಮ ಗೌರವದಿಂದ ಇರಬಹುದು. ಆರಂಭದಲ್ಲಿ ಈ ಪ್ರಕ್ರಿಯೆಯಲ್ಲಿ ಉಂಟಾಗಬಹುದಾದ ತೊಡಕುಗಳಿಗೆ ಮಾನಸಿಕವಾಗಿ ಸಿದ್ಧರಾಗಿರಬಹುದು. ಕ್ರಮೇಣ ಎಲ್ಲರೂ ಇದಕ್ಕೆ ಹೊಂದಿಕೊಂಡಾಗ ಹೆಚ್ಚು ಗೊಂದಲಗಳಿರುವುದಿಲ್ಲ.

4. ಟೈಮ್ ಬ್ಯಾಂಕಿಂಗ್ ಒಂದು ಸಮುದಾಯದ ಸಾಮಾಜಿಕ ಬೆಸುಗೆ, ಬಾಂಧವ್ಯಗಳಿಗೆ ಭದ್ರ ಬುನಾದಿಯನ್ನು ಒದಗಿಸುತ್ತವೆ. ಇಂತಹ ಸೇವೆಗಳಿಗೆ ಅನಿವಾರ್ಯವಾಗಿ ಹಣ ತೆರುವುದು ತಪ್ಪುತ್ತದೆ, ಯಾರೋ ಅಪರಿಚಿತರು ನಮ್ಮ ಮನೆಗಳಿಗೆ ಬರುವುದಕ್ಕಿಂತ ನಮ್ಮ ಪರಿಚಯದವರೇ ಬರುವುದು ಸುರಕ್ಷಿತವಲ್ಲವೇ? ಅಲ್ಲದೆ ಹಣವೂ ಉಳಿಯುತ್ತದೆ.

5. ಪರಸ್ಪರ ಗೌರವ ನೀಡುವುದರಿಂದ ಅಭಿವ್ಯಕ್ತಿ, ಧಾರ್ಮಿಕ, ಆರ್ಥಿಕ ಸ್ವಾತಂತ್ರ್ಯ ಹೆಚ್ಚುತ್ತದೆ. ಮೇಲುಕೀಳೆಂಬ ಭಾವನೆ ತೊಲಗುತ್ತದೆ.

 

*ಲೇಖಕಿ ಭಾರತೀಯ ವಾಯುಪಡೆಯಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಕಥೆ, ಕವಿತೆ, ಲೇಖನ ಬರೆಯುತ್ತಾರೆ. ಪ್ರಸ್ತುತ ಕೇಂದ್ರ ಸರ್ಕಾರದ ರಾಷ್ಟ್ರೀಯ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗಿ. ಮೂಲತಃ ಶಿವಮೊಗ್ಗೆ ಬಳಿಯ ಹನುಮಂತಾಪುರದವರು, ಬೆಂಗಳೂರಿನಲ್ಲಿ ವಾಸ.

Leave a Reply

Your email address will not be published.