ಸಮಾಜದಲ್ಲಿ ಶೂನ್ಯ ಸೃಷ್ಟಿಸಿದ ಎಚ್.ಎಸ್.ದೊರೆಸ್ವಾಮಿ ಸಾವು!

ಅವರ ಜ್ಞಾಪಕಶಕ್ತಿ, ದೀರ್ಘಾಯುಷ್ಯ ಮತ್ತು ಆರೋಗ್ಯದ ಬಗ್ಗೆ ನನಗೆ ಸದಾ ಕುತೂಹಲ ವಿತ್ತು. ಹಲವು ಬಾರಿ ಕೇಳಿದ್ದೂ ಇದೆ. ಅದಕ್ಕವರು ನಕ್ಕು ಸುಮ್ಮನಾಗು ತ್ತಿದ್ದರು. ಆದರೆ ನಾನು ಬಿಡದೆ ಒತ್ತಾಯಿಸಿದಾಗ, `ನನ್ನ ಆರೋಗ್ಯದ ಗುಟ್ಟು ಬಡತನ ಮತ್ತು ಹಸಿವುಎಂದಿದ್ದರು!

-ಎ.ಟಿ.ರಾಮಸ್ವಾಮಿ

ಅಪ್ಪಟ ದೇಶಪ್ರೇಮಿಯಾಗಿದ್ದ ಶತಾಯುಷಿ ಡಾ.ಹೆಚ್.ಎಸ್.ದೊರೆಸ್ವಾಮಿ ಅವರಂತಹವರು ನಾಡಿನಲ್ಲಿ ಮತ್ತೊಬ್ಬ ಹುಟ್ಟಿಬರುವುದು ಅನುಮಾನ. ಸ್ವಾರ್ಥರಹಿತ, ಸದಾ ಶೋಷಿತರ ಬಗ್ಗೆ ಮಿಡಿವಮನ, ಸಮಾಜದ ಸಮಸ್ಯೆಗಳತ್ತವೇ ಸದಾ ಚಿಂತನೆ. ಇಳಿವಯಸ್ಸಿನಲ್ಲಿಯೂ ಅಚ್ಚಳಿಯದ ಹೋರಾಟಕ್ಕೆ ಸ್ಫೂರ್ತಿ. ಸರ್ವರಿಗೂ ಅವರು ಮಾರ್ಗದರ್ಶಕರು. ಸನ್ಮಾನ್ಯ ಗುರುಗಳ ಬಗ್ಗೆ ಎಷ್ಟೇ ಹೇಳಿದರೂ ಅದು ಕಡಿಮೆಯೇ. ಆದರೆ ಅಂತಹ ಸ್ಫೂರ್ತಿಯ ಚಿಲುಮೆ ಇನ್ನಿಲ್ಲವಲ್ಲ ಎನ್ನುವುದು ನನ್ನ ಬದುಕಿನುದ್ದಕ್ಕೂ ಸದಾ ಕಾಡುವ ನೋವಿನ ಸಂಗತಿ.

ದೊರೆಸ್ವಾಮಿ ಅವರನ್ನು ನಾನು ಯಾವತ್ತೂ ಗುರುಗಳ ಸ್ಥಾನದಲ್ಲೇ ನೋಡುತ್ತಿದ್ದೆ. ಕಳೆದ 20 ವರ್ಷಗಳಿಂದ ನನಗವರು ಚಿರಪರಿಚಿತರು. ಭೂಕಬಳಿಕೆ ಕುರಿತ ವಿಧಾನಸಭೆ ಜಂಟಿ ಸದನ ಸಮಿತಿ ಅಧ್ಯಕ್ಷನಾದ ಬಳಿಕ 2006ರಲ್ಲಿ ನನಗೆ ಅವರು ಪರಿಚಿತರಾದರು. ಆನಂತರ ಹಲವು ಸಭೆ, ಸಮಾರಂಭಗಳಲ್ಲಿ ಅವರ ಸಾಮೀಪ್ಯ ಸಿಕ್ಕಿ ಅತ್ಯಾಪ್ತವಾಗಿಬಿಟ್ಟೆ.

ಭೂಕಬಳಿಕೆ ಪತ್ತೆ ಹಚ್ಚಿದ್ದ ನಮ್ಮ

ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಾವು ನಡೆಸಿದ 39 ದಿನಗಳ ಅವಿರತ ಹೋರಾಟ ದೊರೆಸ್ವಾಮಿ ಅವರು ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧ ಬೆಸೆಯಲು ಕಾರಣವಾಯಿತು. ಅವರೇ ಸ್ವತಃ ಧರಣಿ ಸ್ಥಳಕ್ಕೆ ಬಂದು ಕುಳಿತು, ‘ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಬಾರದು. ಮಾಡು ಇಲ್ಲವೆ ಮಡಿ ಅನ್ನೋದಾದರೆ ಕೈಹಾಕೋಣ. ಇಲ್ಲದಿದ್ದರೆ ಬಿಟ್ಟುಬಿಡಿ’ ಎಂದು ದೃಢವಾಗಿ ಸೂಚಿಸಿದ್ದರು. ಇದು ನಮಗೆ ನಿಜಕ್ಕೂ ಪ್ರೇರಣೆ ಕೊಟ್ಟಿತ್ತು.

ಅಷ್ಟೂ ದಿನವೂ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದ ಅವರಿಗೆ `ಸರ್… ನೀವ್ಯಾಕೆ ಕೂರ್ತೀರಾ, ನಾವು ಮಾಡ್ತೇವೆ ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ’ ಎಂದು ಅದೆಷ್ಟೋ ಬಾರಿ ಹೇಳಿದ್ದೆ. ಆದರೆ ನೋ ಸುತಾರಾಂ ಅವರು ಒಪ್ಪಲಿಲ್ಲ. ‘ರಾಮಸ್ವಾಮಿ, ಗುರಿ ದೊಡ್ಡದಿದೆ. ಹೋರಾಟವೂ ದೊಡ್ಡದಾಗೇ ಇರಲಿ’ ಎಂದು ಹುರಿದುಂಬಿಸಿದ್ದರು. ಕೊನೆಗೂ 39ನೇ ದಿನಕ್ಕೆ ಸರ್ಕಾರ ಎಚ್ಚರವಾಗಿ ಅಂದಿನ ಸರ್ಕಾರದ ಮಂತ್ರಿಯೇ ಧರಣಿ ಸ್ಥಳಕ್ಕೆ ಬಂದು ಸದನ ಸಮಿತಿ ವರದಿ ಜಾರಿ ಮಾಡ್ತೇವೆ ಎಂದು ಘೋಷಿಸಿದ್ದರು. ಅದು ನಮ್ಮ ಹೋರಾಟಕ್ಕೆ ಸಂದ ಫಲ. ಆದರೆ ಅದು ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಆಗಲಿಲ್ಲ ಬಿಡಿ. ಅದು ಬೇರೇ ಮಾತು. ಆದರೆ ಆ ಹೋರಾಟದ ಶಕ್ತಿಯಾಗಿದ್ದವರೇ ದೊರೆಸ್ವಾಮಿ ಅವರು ಎನ್ನುವುದು ನಿಸ್ಸಂಶಯ.

ಅಹಿಂಸಾವಾದ ಪ್ರಸ್ತುತ ಫಲಿತಾಂಶ ತರದು ಎನ್ನುವ ಸ್ಥಿತಿಯಲ್ಲಿಯೂ ತಮ್ಮ ಸ್ವಾತಂತ್ರ್ಯ ಹೋರಾಟದ ಮಾದರಿಯನ್ನು ಬಿಟ್ಟುಕೊಡಲು ಅವರು ತಯಾರಿರಲಿಲ್ಲ. ನಿರಂತರ ಚಳವಳಿಗೆ ಜಯ ಇದ್ದೇ ಇದೆ ಎಂದು ನಂಬಿದ್ದರು. ಅವರೊಬ್ಬ ನಿಸ್ವಾರ್ಥ ಪರಿಪೂರ್ಣ ಮನುಷ್ಯ. ಯಾವತ್ತೂ ತ್ಯಾಗದ ಬದುಕು ಶ್ರೇಷ್ಠ ಎಂಬ ಅಚಲ ಮನೋಭಾವನೆ ಹೊಂದಿದ್ದವರು. ದೇಶಪ್ರೇಮ ಎನ್ನುವುದು ಅವರ ಜೀವದ ಕಣಕಣದಲ್ಲೂ ಇತ್ತು. ಅವರ ನೆನಪಿನ ಶಕ್ತಿ ಮಾತ್ರ ನನಗೆ ಯಾವತ್ತೂ ಅಚ್ಚರಿ ಹುಟ್ಟಿಸುತ್ತಿತ್ತು. ಸದಾ ಸಮಾಜದ ಬಗ್ಗೆ ಚಿಂತಿಸುತ್ತಿದ್ದ ಅವರು ಯಾವುದೇ ಸಮಾರಂಭದಲ್ಲಿ ಭಾಗಿಯಾಗಿದ್ದರೂ ಅದಕ್ಕೊಂದು ದೊಡ್ಡ ಶಕ್ತಿ ಬಂದುಬಿಡುತ್ತಿತ್ತು.

ದೊರೆಸ್ವಾಮಿ ಅವರು ನಿಷ್ಠುರವಾದಿ. ಸೀದಾಸಾದಾ ಮನುಷ್ಯ. ಹೇಳಬೇಕೆಂದಿದ್ದನ್ನು ಯಾವುದೇ ಮುಲಾಜಿಲ್ಲದೆ ಹೇಳಿಬಿಡುತ್ತಿದ್ದರು. ಸರ್ಕಾರ, ಪಕ್ಷ, ವ್ಯಕ್ತಿ ಯಾವುದೇ ಇರಲಿ ನೀತಿ ನಿರೂಪಣೆಯಲ್ಲಿ ದಾರಿತಪ್ಪಿದಾಗ, ಕಟುವಾಗಿಯೇ ಹೇಳುವುದು ಅವರ ಜಾಯಮಾನ. ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ಅದೇ ಅವರ ಅತಿದೊಡ್ಡ ಶಕ್ತಿ. ಸದಾ ಜನರ ಸಮಸ್ಯೆಗಳ ಪರವಾಗಿ ಮಾತನಾಡುತ್ತಿದ್ದರು.

ಅವರ ಜ್ಞಾಪಕಶಕ್ತಿ, ದೀರ್ಘಾಯುಷ್ಯ ಮತ್ತು ಆರೋಗ್ಯದ ಬಗ್ಗೆ ನನಗೆ ಸದಾ ಕುತೂಹಲವಿತ್ತು. ಹಲವು ಬಾರಿ ಕೇಳಿದ್ದೂ ಇದೆ. ಅದಕ್ಕವರು ನಕ್ಕು ಸುಮ್ಮನಾಗುತ್ತಿದ್ದರು. ಆದರೆ ನಾನು ಬಿಡದೆ ಒತ್ತಾಯಿಸಿದಾಗ `ನನ್ನ ಆರೋಗ್ಯದ ಗುಟ್ಟು ಬಡತನ ಮತ್ತು ಹಸಿವು’ ಎಂದಿದ್ದರು, ನಾನು ಚಕಿತನಾಗಿದ್ದೆ. ‘ಹೌದು ರಾಮಸ್ವಾಮಿ, ಹಸಿವಿನ ಬದುಕು ಮನುಷ್ಯನಿಗೆ ಎಲ್ಲವನ್ನೂ ಕಲಿಸುತ್ತದೆ’ ಎಂದು ಮತ್ತೆ ನಕ್ಕು ಸುಮ್ಮನಾದರು.

ಸರ್ಗೆ ಜಿಲೇಬಿ ಅಂದ್ರೆ ಪ್ರಾಣ

ದೊರೆಸ್ವಾಮಿ ಅವರಿಗೆ ಜಿಲೇಬಿ ಅಂದ್ರೆ ಪಂಚಪ್ರಾಣ. ಒಂದು ರೀತೀಲಿ ಅವರು ಜಿಲೇಬಿಪ್ರಿಯ. ಒಮ್ಮೊಮ್ಮೆ ನಾಲ್ಕೈದು ಜಿಲೇಬಿ ತಿಂದುಬಿಡುತ್ತಿದ್ದರು. ನಮ್ಮನೆಗೆ ಬಂದಾಗ ಅವರಿಗೆಂದೇ ವಿಶೇಷವಾಗಿ ಜಿಲೇಬಿ ಮಾಡಿಸಿದ್ದೆ. 4 ತಿಂದರು. ಸರ್ ಸ್ವೀಟ್ ಜಾಸ್ತಿ ಇದೆಯಲ್ವಾ ಅಂದಿದ್ದಕ್ಕೆ ನನಗೇನಾಗ್ತದೆ ಬಿಡಪ್ಪಾ ಅನ್ನೋರು.

ಕಸ ತಿನ್ನೋರಿಂದ ಸಮಸ್ಯೆ

ಬೆಂಗಳೂರಿನ ಕಸದ ಸಮಸ್ಯೆ ಉಲ್ಬಣಿಸಿದಾಗ ಅದನ್ನು ಮಂಡೂರಿಗೆ ಹಾಕಬಾರದು ಎಂದು ದೊಡ್ಡ ಪ್ರತಿಭಟನೆ ನಡೆದಿತ್ತು. ಆ ದಿನಗಳಲ್ಲಿ ದೊರೆಸ್ವಾಮಿ ಅವರೂ ಹೋರಾಟ ಬೆಂಬಲಿಸಿದ್ದರು. ‘ರಾಮಸ್ವಾಮಿ, ಇದು ಕಸದ ಸಮಸ್ಯೆ ಅಲ್ಲಪ್ಪಾ.. ಕಸ ತಿನ್ನೋರಿಂದ ಸಮಸ್ಯೆ ಉದ್ಭವಿಸಿದೆ’ ಎಂದು ಅದರ ಗಂಭೀರತೆಯನ್ನು ತಮ್ಮದೇ ಧಾಟಿಯಲ್ಲಿ ಬಿಂಬಿಸಿದ್ದರು.

ಅಗಲುವ 5 ದಿನ ಮುನ್ನ

ದೊರೆಸ್ವಾಮಿ ಅವರು ಅಗಲುವ 5 ದಿನ ಮುನ್ನ ಮಾತನಾಡಿದ್ದೆ. ಅಂದು ಅವರೊಂದಿಗಿದ್ದ ರವಿ ಕೃಷ್ಣಾರೆಡ್ಡಿ ಅವರು ಫೋನ್ ತೆಗೆದು, ‘ರಾಮಸ್ವಾಮಿ ಮಾತಾಡ್ತಿದಾರೆ’ ಅಂದರು. ‘ಹೂಂ ಕೊಡಿ’ ಎಂದು ಸ್ವೀಕರಿಸಿದರು. ‘ಸರ್ ನಿಮಗೇನೂ ಅಗಲ್ಲ, ಚೇತರಿಸಿಕೊಂಡು ಬತೀರಿ’ ಎಂದು ಶುಭಹಾರೈಸಿದ್ದೆ. ಆಗವರು, ‘ನಾನು ನಿಮ್ಮ ಸ್ಮರಣೆ ಮಾಡ್ತೀನಿ. ಮೇಲೆ ಹೋದ್ಮೇಲೂ ನಿಮ್ಮ ಸ್ಮರಣೆ ಮಾಡ್ತೀನಿ’ ಅಂದಿದ್ದರು. ಅವರು ಇನ್ನಿಲ್ಲ ಎಂಬ ವಿಷಯ ತಿಳಿದಾಗ ಅರ್ಧದಿನ ಕಣ್ಣೀರಿಟ್ಟೆ. ನನ್ನ ಬದುಕಿನ ಅತ್ಯಂತ ನೋವಿನ ಸಂಗತಿ ಇದು. ನನ್ನ ಮನಸ್ಸನ್ನು ತಲ್ಲಣಗೊಳಿಸಿದ ಸನ್ನಿವೇಶ.

ಭಸ್ಮ ನೀರಿಗೆ ಬೇಡ ಎಂದಿದ್ದರು

ಅಂತ್ಯಕ್ರಿಯೆ ಬಳಿಕ ಅವರ ಚಿತಾಭಸ್ಮಕ್ಕೆ ಕಾವೇರಿ ನೀರು ಪ್ರೋಕ್ಷಣೆ ಮಾಡಿ ಭಸ್ಮವನ್ನು ಸಮೀಪದ ತೆಂಗಿನ ಗಿಡದ ಬುಡಕ್ಕೆ ಹಾಕಿದ್ದೇವೆ. ಏಕೆಂದರೆ ಭಸ್ಮವನ್ನು ನೀರಿಗೆ ಬಿಟ್ಟರೆ ಗಂಗೆ ಮಲಿನವಾಗ್ತಾರೆ ಎಂದು ಅನೇಕ ಬಾರಿ ಉಲ್ಲೇಖಿಸಿದ್ದರು. ಅವರು ಮೌಢ್ಯ ವಿರೋಧಿಯೂ ಹೌದು. ಬಳಿಕ ಭಸ್ಮದ ಸ್ವಲ್ಪ ಭಾಗವನ್ನು ಮನೆಗೆ ತಂದು ನಮ್ಮ ತೋಟದ ತೆಂಗಿನಮರದ ಬುಡಕ್ಕೆ ಹಾಕಿದ್ದೇನೆ. ಅವರ ನೆನಪು ನಮ್ಮಲ್ಲಿ ಶಾಶ್ವತವಾಗಿಸುವ ಜೊತೆ ತೋಟವನ್ನು ಪಾವನಗೊಳಿಸಿದೆ ಎಂಬ ಭಾವನೆ ನನ್ನದು.

ನೀನು ನನ್ನ ಉತ್ತರಾಧಿಕಾರಿ ಆಗಬೇಕು ಎಂದಿದ್ದರು. ಅಷ್ಟು ಅವಿನಾಭಾವ ಸಂಬಂಧದ ಜೊತೆ ಪ್ರಾಮಾಣಿಕ ಹೋರಾಟವನ್ನು ಮೆಚ್ಚಿಕೊಂಡಿದ್ದರು. ಅಂತಹವರ ಬಾಯಿಂದ ಉತ್ತರಾಧಿಕಾರಿ ಪದ ಬಂದಿದ್ದೇ ನನ್ನ ಪುಣ್ಯ.

ಪ್ರಚಾರಕ್ಕೆ ಬರ್ಬೇಡಿ ಅಂದಿದ್ದೆ

ಅದು 2018ರ ವಿಧಾನಸಭಾ ಚುನಾವಣೆ. ನಾನು ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದೆ. ‘ರಾಮಸ್ವಾಮಿ ಅವರೇ, ಚುನಾವಣೆ ಪ್ರಚಾರಕ್ಕೆ ನಾನೂ ಬರ್ತೀನಿ. ನಿಮ್ಮಂತಹವರು ಗೆಲ್ಲಬೇಕು’ ಎಂದಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ನೀವು ಬರಬೇಡಿ ಎಂದು ಒತ್ತಡ ಹಾಕಿ ಮನವೊಲಿಸಿದ್ದೆ. ‘ಸರ್, ನೀವು ಪಕ್ಷಾತೀತ, ಜಾತ್ಯತೀತ, ಧರ್ಮಾತೀತ ವ್ಯಕ್ತಿಯಾಗಿಯೇ ಇರಬೇಕು. ಪ್ರಚಾರಕ್ಕೆ ಬಂದರೆ ಬೇರೆಯದೇ ಬಣ್ಣ ಕಟ್ಟುತ್ತಾರೆ’ ಎಂದಿದ್ದೆ. ಅದಕ್ಕವರು ನಿಮ್ಮಿಷ್ಟ ಎಂದು ಸುಮ್ಮನಾಗಿದ್ದರು. ಗೆದ್ದ ಬಳಿಕ ಮನೆಗೆ ಬಂದು ಹರಸಿ ಹಾರೈಸಿದ್ದರು.

ಅವರೊಂದಿಗಿನ ಒಡನಾಟ ಜೀವನದಲ್ಲಿ ಎಂದೂ ಮರೆಯಲಾಗದ್ದು. ಅವರಿಲ್ಲ ಎನ್ನುವುದು ಇಡೀ ಸಮಾಜದಲ್ಲಿ ಶೂನ್ಯ ಸೃಷ್ಟಿಸಿದೆ.

*ಲೇಖಕರು ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕರು; ಸರ್ಕಾರಿ ಭೂಒತ್ತುವರಿ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿ ವರದಿ ನೀಡಿದ್ದಾರೆ.

Leave a Reply

Your email address will not be published.