ಸಮಾಜಮುಖಿ ಪ್ರಕಾಶನದ ‘ಪ್ರಕಓ’ ಪುಸ್ತಕಮಾಲೆ

ಕನ್ನಡ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಕನ್ನಡಿಗರಿಗೆ ಉಪಯುಕ್ತವಾಗುವ ‘ರೀಡರ್’ ಮಾದರಿಯ ಪುಸ್ತಕಗಳ ಕೊರತೆಯಿದೆ. ಈ ಕೊರತೆಯನ್ನು ಪೂರೈಸಲು ಹಾಗೂ ‘ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ’ (ಪ್ರಕಓ) ಪುಸ್ತಕಗಳನ್ನು ಹೊರತರಲು ಸಮಾಜಮುಖಿ ಪ್ರಕಾಶನ ಬಯಸಿದೆ.

ರೀಡರ್ ಎಂದರೇನು..?  

ಯಾವುದಾದರೊಂದು ವಿಷಯದ ಬಗ್ಗೆ ಅಂದಿನವರೆಗೆ ಪ್ರಕಾಶಿತ ಪಠ್ಯಗಳ ಜ್ಞಾನಪ್ರಪಂಚವನ್ನು ಒಳಗೊಂಡು ಹಾಗೂ ಸಾಮಾನ್ಯವಾಗಿ ಅವಿವಾದಿತವಾದ ವಿಷಯವಸ್ತುಗಳೊಡನೆ ಸಮಗ್ರ ಚಿತ್ರಣ ನೀಡುವ ಹೊತ್ತಿಗೆಯನ್ನು ‘ರೀಡರ್’ ಎಂದು ವರ್ಗೀಕರಿಸಲಾಗಿದೆ. ಈ ರೀಡರ್‍ಗಳು ಸರಳ ಭಾಷೆಯಲ್ಲಿ ತನ್ನ ಆಯ್ಕೆಯ ವಿಷಯಗಳ ಬಗ್ಗೆ ಪ್ರಕಟಿತ ಸಂಶೋಧನೆಯಲ್ಲಿನ ಸ್ಥೂಲಚಿತ್ರಣ ನೀಡುವಂತಿರುತ್ತವೆ. ಈ ರೀಡರ್‍ಗಳಲ್ಲಿ ಮೂಲ ಸಂಶೋಧನೆ ಮಾಡಲು ಹೊರಟಿರುವುದಿಲ್ಲ. ಇವುಗಳಲ್ಲಿ ಒಮ್ಮುಖದ ಯಾವುದೇ ವಾದ-ಪ್ರತಿವಾದನೆ ಇರುವುದಿಲ್ಲ. ಬದಲಿಗೆ, ಅತ್ಯಂತ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಆ ವಿಷಯವನ್ನು ತಿಳಿಯಬಯಸುವ ಜ್ಞಾನಾರ್ಥಿಗೆ ಬೇಕಿರುವ ಮೂಲಭೂತ ಹಾಗು ಸಮಗ್ರ ಪರಿಚಯಾತ್ಮಕ ಲೇಖನಗಳನ್ನು ಒಳಗೊಂಡಿರುತ್ತವೆ.

ಈ ರೀಡರ್ ಒಬ್ಬನೇ ಲೇಖಕನಿಂದ ರಚಿತವಾದ ಪುಸ್ತಕವಾಗಿರಬಹುದು ಅಥವಾ ಹಲವು ಲೇಖಕರ ಬರಹಗಳನ್ನು ಅಧ್ಯಾಯಗಳಂತೆ ಪರಿಗಣಿಸಿರುವ ಪುಸ್ತಕವಾಗಿರಬಹುದು. ಆದರೆ ಇದರ ಉದ್ದೇಶದಂತೆ ಓದುಗನೊಬ್ಬನಿಗೆ ವಿಷಯವಸ್ತುವಿನ ಒಟ್ಟಾರೆ ಚಿತ್ರಣ ನೀಡುವ ಮತ್ತು ಹೆಚ್ಚಿನ ಓದಿಗೆ ಪ್ರೇರೇಪಿಸುವ ಗುರಿಯಿರುತ್ತದೆ.

ಉದಾಹರಣೆಯೊಂದನ್ನು ತೆಗೆದುಕೊಳ್ಳೋಣ. ‘ಭಾರತದ ಸಂವಿಧಾನ’ದ ಬಗೆಗಿನ ರೀಡರ್‍ನಲ್ಲಿ ಸಂವಿಧಾನವೆಂದರೇನು; ಸಂವಿಧಾನದ ಅಗತ್ಯ ಏಕಿದೆ; ಭಾರತ ಸಂವಿಧಾನದ ರಚನೆಯ ಸ್ವಾತಂತ್ರ್ಯಪೂರ್ವ ಇತಿಹಾಸವೇನು; ಸಂವಿಧಾನ ಸಭೆಯ ರಚನೆ ಹಾಗೂ ಕಾರ್ಯವೈಖರಿ; ಭಾರತ ಸಂವಿಧಾನದ ಸ್ವರೂಪ ಹಾಗೂ ಮುಖ್ಯ ಕಲಮುಗಳು; ಸಂವಿಧಾನ ತಿದ್ದುಪಡಿಯ ಅಗತ್ಯ ಹಾಗೂ ಮಾರ್ಗಗಳು; ಇಲ್ಲಿವರೆಗಿನ ಮುಖ್ಯ ತಿದ್ದುಪಡಿಗಳು; ಭಾರತದಲ್ಲಿ ಸಂವಿಧಾನದ ಬಗೆಗಿನ ಚರ್ಚೆ ಮತ್ತಿತರ ವಿಷಯಗಳನ್ನು ಒಳಗೊಂಡಿರುತ್ತದೆ. ಈ ರೀಡರ್ ಒಬ್ಬನೇ ಲೇಖಕನಿಂದ ರಚಿತವಾದ ಪುಸ್ತಕವಾಗಿರಬಹುದು ಅಥವಾ ಹಲವು ಲೇಖಕರ ಬರಹಗಳನ್ನು ಅಧ್ಯಾಯಗಳಂತೆ ಪರಿಗಣಿಸಿರುವ ಪುಸ್ತಕವಾಗಿರಬಹುದು. ಆದರೆ ಇದರ ಉದ್ದೇಶದಂತೆ ಓದುಗನೊಬ್ಬನಿಗೆ ವಿಷಯವಸ್ತುವಿನ ಒಟ್ಟಾರೆ ಚಿತ್ರಣ ನೀಡುವ ಮತ್ತು ಹೆಚ್ಚಿನ ಓದಿಗೆ ಪ್ರೇರೇಪಿಸುವ ಗುರಿಯಿರುತ್ತದೆ.

ಕನ್ನಡದಲ್ಲಿ ರೀಡರ್‍ಗಳ ಅತೀವ ಕೊರತೆಯಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯಗಳ ಹೊರತಾಗಿ ಸಿಗಬೇಕಾದ ಅಸಾಂಪ್ರದಾಯಿಕ ಶಿಕ್ಷಣದ ಗಂಭೀರ ನ್ಯೂನತೆಯಿದೆ. ಕನ್ನಡದ ಲೇಖಕರು ತಮ್ಮ ಸೃಜನಶೀಲ ಬರವಣಿಗೆಗೆ ಹೆಚ್ಚಿನ ಒತ್ತು ಕೊಟ್ಟು ಓದುಗರ ಅಗತ್ಯಗಳನ್ನು ಮರೆತಿರುವಂತೆ ಭಾಸವಾಗುತ್ತದೆ. ಸಾಮಾನ್ಯ ಓದುಗರ ಹಾಗೂ ವಿದ್ಯಾರ್ಥಿಗಳ ಅರಿವಿನ ಮಟ್ಟವನ್ನು ಹೆಚ್ಚಿಸುವ ಹೊಣೆಗಾರಿಕೆಯನ್ನು ಮರೆತಂತೆ ಅನ್ನಿಸುತ್ತದೆ. ಪ್ರಜೆಗಳೇ ಪ್ರಭುಗಳಾಗಿರುವ ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬ ನಾಗರಿಕನ ಸಾಮಾನ್ಯ ತಿಳಿವಳಿಕೆಯ ಅನಿವಾರ್ಯತೆಯನ್ನು ಮರೆತಂತೆಯೂ ಗೋಚರವಾಗುತ್ತಿದೆ. ಕನ್ನಡ ಸಮಾಜವನ್ನು ಮುಂದಿನ ದಿನಗಳಲ್ಲಿ ಉತ್ತಮಿಕೆಯೆಡೆಗೆ ಒಯ್ಯಬೇಕೆಂದರೆ ಉತ್ತಮ ಗುಣಮಟ್ಟದ ಈ ಅಸಾಂಪ್ರದಾಯಿಕ ಶಿಕ್ಷಣದ ಅಗತ್ಯವನ್ನು ಪೂರೈಸುವ ಜರೂರತೆಯಿದೆ.

ಈ ಉದ್ದೇಶದಿಂದ ಈಗಾಗಲೇ ಎರಡು ರೀಡರ್‍ಗಳ ರಚನೆಗೆ ಆಯ್ದ ಲೇಖಕರನ್ನು ಪ್ರೇರೇಪಿಸಲಾಗಿದೆ. ಈ ಎರಡು ಪುಸ್ತಕಗಳ ಸೂಚಿತ ಅಧ್ಯಾಯಗಳು ಈ ಕೆಳಕಂಡಂತಿವೆ:

ಭಗವಾನ್ ಬುದ್ಧ ಮತ್ತು ಬೌದ್ಧಧರ್ಮ

ಅಧ್ಯಾಯಗಳು

1. ಬುದ್ಧನ ಕಾಲದ ಆರ್ಯಾವರ್ತ
        -ನಾಗರಿಕತೆ ಮತ್ತು ರಾಜಕೀಯ ವಂಶಾವಳಿ.
        -ಸಾಮಾಜಿಕ ಸ್ಥಿತ್ಯಂತರ.
        -ಧಾರ್ಮಿಕತೆ ಮತ್ತು ಅಂದಿನ ವೈದಿಕ ಧರ್ಮ.
2. ಗೌತಮ ಬುದ್ಧನ ಜೀವನಚರಿತ್ರೆ
         -ಹುಟ್ಟು, ಜ್ಞಾನೋದಯ, ಜೀವನ ಮತ್ತು ಸಾವು.
3. ಬುದ್ಧನ ಉಪದೇಶ ಸಾರಾಂಶ
        -ಧಮ್ಮಪಾದ ಮತ್ತು ಮಧ್ಯಮಮಾರ್ಗ
        -ವೈದಿಕ ಧರ್ಮದಿಂದ ವಿಭಿನ್ನತೆ
        -ಜಾತಕ ಕಥೆಗಳು
4. ಬುದ್ಧನ ಅನುಯಾಯಿಗಳು
       -ಮತ್ತವರ ಉಪದೇಶ ಸಾರಾಂಶ

5. ಬೌದ್ಧಧರ್ಮ ಪ್ರಸರಣ
      -ಅಶೋಕ ಪೂರ್ವ ಬೆಳವಣಿಗೆಗಳು
      -ಅಶೋಕನ ಕೊಡುಗೆ
      -ಅಶೋಕನ ನಂತರದ ಬೆಳವಣಿಗೆಗಳು
6. ಬೌದ್ಧಧರ್ಮೀಯ ವಿಶ್ವವಿದ್ಯಾಲಯಗಳ ಕೊಡುಗೆ
      -ನಲಂದ
      -ತಕ್ಷಶಿಲಾ
      -ಗಯಾ, ಸಾರನಾಥ ಇತ್ಯಾದಿ
7. ನಾಗಾರ್ಜುನ ಮತ್ತಿತರ ಬೌದ್ಧಧರ್ಮಿಯ ಚಿಂತಕರು.
8. ಶ್ರೀಲಂಕಾ, ಮ್ಯಾನ್ಮಾರ್, ಟಿಬೆಟ್, ಚೀನಾ ಬೌದ್ಧ ಶಾಖೆಗಳು ಮತ್ತವುಗಳ ವಿಶೇಷತೆಗಳು.
9. ಹೂಯೆನ್‍ತ್ಸಾಂಗ್ ಮತ್ತಿತರ ಪ್ರವಾಸಿಗಳ ಕಣ್ಣಲ್ಲಿ ಭಾರತದ ಬೌದ್ಧಧರ್ಮ.
10. ಆಧುನಿಕ ಯುಗದಲ್ಲಿ ಬೌದ್ಧಧರ್ಮ
      -ಬೌದ್ಧಧರ್ಮೀಯ ತಾಣಗಳ ಪುನರುಜ್ಜೀವನ
      -ಅಂಬೇಡ್ಕರ್ ಮತ್ತು ದಲಿತರ ಮತಾಂತರ
      -ಟಿಬೆಟ್ ಬೌದ್ಧಧರ್ಮೀಯರ ಪ್ರಶ್ನೆ

ಬೆಂಗಳೂರು ನಗರದ ಇತಿಹಾಸ

ಅಧ್ಯಾಯಗಳು

1. ಬೆಂಗಳೂರು ಗ್ರಾಮದ ಐತಿಹ್ಯ ಮತ್ತು ಪರಿಸರ
2. ಹಿರಿಯ ಕೆಂಪೇಗೌಡ ಮತ್ತವರ ಕೊಡುಗೆ
      -ರಣಭೈರೇಗೌಡರ ಸಂತತಿ
      -ಹಿರಿಯ ಕೆಂಪೇಗೌಡರ ಜೀವನ
      -ಕೋಟೆ ಕಟ್ಟಿದ ಸಂದರ್ಭ
      -ಬೆಂಗಳೂರು ಅಭಿವೃದ್ಧಿ ಮತ್ತು ಆಡಳಿತ
3. ಇಮ್ಮಡಿ ಕೆಂಪೇಗೌಡರ ಕೊಡುಗೆ
      -ಜೀವನ ಮತ್ತು ಆಡಳಿತ
      -ಕೋಟೆ ಮತ್ತು ಗೋಪುರಗಳು
      -ಶಾಸನಗಳು, ದಾನ-ದತ್ತಿ ಪತ್ರಗಳು ಇತ್ಯಾದಿ
      -ಬೆಂಗಳೂರಿನ ರಾಜಕೀಯ ಪರಿಸರ, ರಣದುಲ್ಲಾಖಾನನಿಗೆ ಸೋಲು, ಇತ್ಯಾದಿ
      -ಮಾಗಡಿ ಕೆಂಪೇಗೌಡರ ಸಂತತಿ
4. ಆದಿಲ್ ಶಾಹಿ ಆಡಳಿತದಲ್ಲಿ ಬೆಂಗಳೂರು
      -ಶಾಹುಜಿ ಆಡಳಿತ ಕಾಲ ಮತ್ತು ನಂತರದ ವರ್ಷಗಳು
      -ಮೈಸೂರು ಅರಸರ ಆಳ್ವಿಕೆ
      -ಹೈದರಾಲಿಯ ಕಾಲ
5. ಟಿಪ್ಪು ಆಡಳಿತದಲ್ಲಿ ಬೆಂಗಳೂರು
      -ಟಿಪ್ಪುವಿನಿಂದ ಕೋಟೆ ವಿಸ್ತರಣೆ
      -ಲಾಲ್‍ಬಾಗ್ ಇತ್ಯಾದಿ
      -ಬೆಂಗಳೂರು ಯುದ್ಧ 1791
6. ಬ್ರಿಟಿಷರ ಆಡಳಿತದಲ್ಲಿ ಬೆಂಗಳೂರು
      -ಕೋಟೆ
      -ಪೇಟೆಯ ಆಡಳಿತ
      -ಬೆಂಗಳೂರು ದಂಡು ಪ್ರದೇಶದ ಅಭಿವೃದ್ಧಿ
      -ಇಂದಿನ ಬೆಂಗಳೂರಿಗೆ ಅಂದಿನ ವಿನ್ಯಾಸ
7. ಸ್ವಾತಂತ್ರ್ಯಾಪೂರ್ವ ಬೆಂಗಳೂರಿನ ಬೆಳವಣಿಗೆ.
      -ವಾಣಿಜ್ಯ ಮತ್ತು ಕೈಗಾರಿಕೆಗಳು.
      -ವ್ಯವಸ್ಥಿತ ಪಟ್ಟಣವಾಗಿ ಬೆಂಗಳೂರು.
      -ಸಾರ್ವಜನಿಕ ಸೇವೆಗಳು, ಸಂಸ್ಥೆಗಳು, ಜನಜೀವನ.
8. ಸ್ವಾತಂತ್ರ್ಯಾನಂತರದ ಬೆಂಗಳೂರು ಬೆಳವಣಿಗೆ

1947 ರಿಂದ 1991 ರವರೆಗೆ
1991 ರಿಂದ ಇಂದಿನವರೆಗೆ
ಅನುಬಂಧಗಳು / ಶಾಸನಗಳು / ದಾನ-ದತ್ತಿ ಪತ್ರಗಳು / ನಕಾಶೆಗಳು / ಚಿತ್ರಗಳು

ಮೇಲ್ಕಂಡ ಎರಡು ವಿಷಯಗಳ ಹೊರತಾಗಿ ಪ್ರಕಓ ಪುಸ್ತಕಮಾಲೆಯಲ್ಲಿ ಪ್ರಕಾಶನಕ್ಕೆ ಉದ್ದೇಶಿಸಲಾಗಿರುವ ವಿಷಯವಸ್ತುಗಳು ಹೀಗಿವೆ: 

ಕನ್ನಡ ಭಾಷೆ ಮತ್ತು ಲಿಪಿಯ ಉಗಮದ ಇತಿಹಾಸ, ಹಳಗನ್ನಡ ಕಾವ್ಯ ಪರಿಚಯ, ನಡುಗನ್ನಡ ಕಾವ್ಯ ಪರಿಚಯ, ಸ್ವಾತಂತ್ರ್ಯಪೂರ್ವ ಹೊಸಗನ್ನಡ ಸಾಹಿತ್ಯ, ಸ್ವಾತಂತ್ರ್ಯೋತ್ತರ ಆಧುನಿಕ ಕನ್ನಡ ಸಾಹಿತ್ಯ, ಕುವೆಂಪು ಸಾಹಿತ್ಯ, ಕರ್ನಾಟಕದ ಆರ್ಥಿಕ ಇತಿಹಾಸ, ಭಾರತೀಯ ಸಂವಿಧಾನ, ಬಂಡವಾಳಶಾಹಿ ನೀತಿ ಮತ್ತು ಜಾಗತೀಕರಣ, ಸಾರ್ವಜನಿಕ ನೀತಿ ಮತ್ತು ಆಯವ್ಯಯ ಮಂಡನೆ, ಕರ್ನಾಟಕ ವಿಧಾನಮಂಡಲ ಶಾಸನ ಚರಿತೆ, ಕರ್ನಾಟಕದಲ್ಲಿ ಸಮಾಜವಾದಿ ಚಳವಳಿ, ಕರ್ನಾಟಕದಲ್ಲಿ ಭಕ್ತಿ-ಧರ್ಮ ಪರಂಪರೆ, ಮಹಾವೀರ ಮತ್ತು ಜೈನಧರ್ಮ, ಬಸವಣ್ಣ – ಲಿಂಗಾಯಿತ ವೀರಶೈವ ಪರಂಪರೆ, ಕರ್ನಾಟಕದಲ್ಲಿ ಡಿಜಿಟಲ್ ಕ್ರಾಂತಿ, ಮೀಸಲಾತಿ ಚರ್ಚೆ, ಕಾವೇರಿ ವಿವಾದ ಮತ್ತು ಕರ್ನಾಟಕದ ನೀರಾವರಿ, ಹಿಂದೂ ಧರ್ಮ, ಮೊಹಮ್ಮದ್ ಪೈಗಂಬರ್ ಮತ್ತು ಇಸ್ಲಾಮ್‍ಧರ್ಮ, ಯೇಸು ಕ್ರಿಸ್ತ ಮತ್ತು ಕ್ರೈಸ್ತಧರ್ಮ.

ಮೇಲಿನ ವಿಷಯವಸ್ತುಗಳ ಬಗ್ಗೆ ರೀಡರ್ ಸಿದ್ಧಪಡಿಸುವ ಇರಾದೆಯ ಲೇಖಕರು ಸಮಾಜಮುಖಿ ಪ್ರಕಾಶನ ಸಂಪರ್ಕಿಸಲು ಕೋರಿದೆ. ಸೂಚಿತ ವಿಷಯಗಳ ಹೊರತಾಗಿಯೂ ಲೇಖಕರು ಸಮಂಜಸ ವಿಷಯ ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆಯಾದ ಲೇಖಕರಿಗೆ ಸೂಕ್ತ ವಿಷಯದ ಮೇಲೆ ರೀಡರ್ ಸಿದ್ಧಪಡಿಸುವ ಜವಾಬ್ದಾರಿಯನ್ನು ಆಕರ್ಷಕ ಸಂಭಾವನೆ ಸಹಿತ ನೀಡಲಾಗುವುದು. ಲೇಖಕರು ಸಿದ್ಧಪಡಿಸಿದ ಬರಹಗಳು ಪ್ರಕಾಶನದ ಸಂಪಾದಕೀಯ ಮಂಡಳಿಯಿಂದ ಅತ್ಯಂತ ವಿಶದವಾಗಿ ಪರಷ್ಕರಣೆಗೆ ಒಳಪಡಲಿವೆ. 

Leave a Reply

Your email address will not be published.