ಸಮಾನ ಮನಸ್ಕ ನಾಗರಿಕರು ಸ್ಥಾಪಿಸಿದ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ

ಸಮಾಜಮುಖಿಯ ಸಂಪಾದಕೀಯ ತಂಡವು ಬಿ.ಐ.ಸಿ.ಯ ಗೌರವ ನಿರ್ದೇಶಕರಾದ ವಿ.ರವಿಚಂದರ್ ಅವರೊಡನೆ ಈ ಸಂಸ್ಥೆಯ ಉದ್ದೇಶಗಳು, ಪ್ರಸ್ತುತತೆ ಮತ್ತು ಬೆಂಗಳೂರಿನ ನಾಗರಿಕರೊಡನೆ ಹೊಂದಿರುವ ಸಂಬಂಧಗಳ ಬಗ್ಗೆ ಮುಕ್ತ ಚರ್ಚೆಯನ್ನು ನಡೆಸಿತು. ಈ ಚರ್ಚೆಯ ಸಂಕ್ಷಿಪ್ತರೂಪ ಇಲ್ಲಿದೆ.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿ.ಐ.ಸಿ.)ವು 2005ರಲ್ಲಿ ಬೆಂಗಳೂರಿನ ಸಮಾನ ಮನಸ್ಕ ಪ್ರಜ್ಞಾವಂತ ನಾಗರಿಕರು ಸ್ಥಾಪಿಸಿದ ವೇದಿಕೆ. ಇಂದಿನ ಬೆಂಗಳೂರಿನ ಕ್ರಿಯಾತ್ಮಕತೆ, ಮಹತ್ವಾಕಾಂಕ್ಷೆ ಮತ್ತು ಭವಿಷ್ಯಮುಖಿ ಆಯಾಮಗಳನ್ನು ಪ್ರತಿನಿಧಿಸುವ ಈ ವೇದಿಕೆಯಲ್ಲಿ ಸರ್ಕಾರಿ ಅಧಿಕಾರಿಗಳು, ಬುದ್ಧಿಜೀವಿಗಳು, ಕಲಾವಿದರು ಮತ್ತು ವೃತ್ತಿಪರರು ಪಾಲುದಾರರಾಗಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ 750ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿರುವ ಬಿ.ಐ.ಸಿ. ಕಲೆ, ಸಂಸ್ಕೃತಿ, ಸಾಹಿತ್ಯ, ತಂತ್ರಜ್ಞಾನ, ಉದ್ಯಮ, ರಾಜಕಾರಣ ಮತ್ತು ಸಾರ್ವಜನಿಕ ಜೀವನಗಳ ಕುರಿತಾದ ಗಂಭೀರ ಚರ್ಚೆಗಳನ್ನು ಜವಾಬ್ದಾರಿಯುತ ರೀತಿಯಲ್ಲಿ ನಡೆಸುತ್ತ ಬಂದಿದೆ ಎನ್ನುವುದು ಈ ಸಂಸ್ಥೆಯ ಹೆಗ್ಗಳಿಕೆ. ಮೇ ಅಂತ್ಯ ಮತ್ತು ಜೂನ್ ಪ್ರಾರಂಭದ ದಿನಗಳ ಕಾರ್ಯಕ್ರಮಗಳನ್ನೆ ಗಮನಿಸಿ. ಎರಡು ವಾರಗಳ ಸಮಯದಲ್ಲಿ ಭಾರತೀಯ ಸಾಹಿತ್ಯ, 2019 ಲೋಕಸಭಾ ಚುನಾವಣೆಗಳ ಫಲಿತಾಂಶ, ಕನ್ನಡ ಕಾವ್ಯ, ಪರಿಸರ ಮತ್ತು ಹುಲಿಗಳು, ಕೃತಕ ಬುದ್ಧಿಮತ್ತೆ ಇತ್ಯಾದಿಗಳ ಬಗ್ಗೆ ಚರ್ಚೆಗಳ ಆಯೋಜನೆಯಾಗಿದೆ. ಇವುಗಳಲ್ಲಿ ವಲ್ಚೇರು ನಾರಾಯಣರಾವ್, ಉಲ್ಲಾಸ್ ಕಾರಂತ್ ಮತ್ತು ಕಾರ್ತಿಕ್ ಹೊಸನಗರರಂತಹ ವಿಶ್ವಮಾನ್ಯರು ಭಾಗವಹಿಸಲಿದ್ದಾರೆ.

2019ರ ಫೆಬ್ರವರಿ ತಿಂಗಳಿನವರೆಗೆ ಟೆರಿ (ದ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್) ಸಂಸ್ಥೆಯ ಆವರಣದಿಂದ ಬಿ.ಐ.ಸಿ. ಕಾರ್ಯ ನಿರತವಾಗಿತ್ತು. ಈಗ ದೊಮ್ಮಲೂರಿನಲ್ಲಿನ ಸುಸಜ್ಜಿತವಾದ ತನ್ನದೆ ಆದ ಆವರಣಕ್ಕೆ ಸ್ಥಳಾಂತರಗೊಂಡಿದೆ. ಪ್ರಜಾವಾಣಿ ಬಳಗದ ಕೆ.ಎನ್.ಶಾಂತಕುಮಾರ್ ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

ಸಮಾಜಮುಖಿಯ ಸಂಪಾದಕೀಯ ತಂಡವು ಬಿ.ಐ.ಸಿ.ಯ ಗೌರವ ನಿರ್ದೇಶಕರಾದ ವಿ.ರವಿಚಂದರ್ ಅವರೊಡನೆ ಈ ಸಂಸ್ಥೆಯ ಉದ್ದೇಶಗಳು, ಪ್ರಸ್ತುತತೆ ಮತ್ತು ಬೆಂಗಳೂರಿನ ನಾಗರಿಕರೊಡನೆ ಹೊಂದಿರುವ ಸಂಬಂಧಗಳ ಬಗ್ಗೆ ಮುಕ್ತಚರ್ಚೆಯನ್ನು ನಡೆಸಿತು. ಈ ಚರ್ಚೆಯ ಸಂಕ್ಷಿಪ್ತರೂಪ ಇಲ್ಲಿದೆ.

ಬಿ.ಐ.ಸಿ.ಯ ಸಾಂಸ್ಥಿಕ ಸ್ವರೂಪ ಮತ್ತು ಪ್ರೇರಣೆಗಳ ಸುತ್ತಮುತ್ತ ನಮ್ಮ ಚರ್ಚೆಯು ಪ್ರಾರಂಭವಾಯಿತು. ದೆಹಲಿಯಲ್ಲಿರುವ ಇಂಡಿಯಾ ಇಂಟರನ್ಯಾಷನಲ್ ಸೆಂಟರ್ ಮಾದರಿಯನ್ನೆ ಬಿ.ಐ.ಸಿ. ಸಹ ಅನುಸರಿಸುತ್ತಿದೆಯೆ ಎನ್ನುವ ಪ್ರಶ್ನೆಗೆ ರವಿಚಂದರ್ ತಾವು ಆ ಮಾದರಿಗೆ ಮಾತ್ರವೆ ಸೀಮಿತವಾಗಲು ಬಯಸುವುದಿಲ್ಲ ಎಂದರು. ಇಂತಹ ಸಂಸ್ಥೆಗಿರುವ ಸಾಧ್ಯತೆಗಳೇನು ಎನ್ನುವುದನ್ನು ಬಿ.ಐ.ಸಿ. ಈಗ ಅನ್ವೇಷಿಸುತ್ತಿದೆ. ಬಹುಮುಖ್ಯವಾಗಿ ಬೆಂಗಳೂರಿನ ಬೌದ್ಧಿಕ, ವ್ಯಾವಹಾರಿಕ ಮತ್ತು ಸಾಂಸ್ಕೃತಿಕ ಸಮೃದ್ಧತೆಗಳು ನಗರದ ಸಾಫ್ಟ್ ಪವರ್ (ಮೃದು ಶಕ್ತಿ) ಅನ್ನು ಬಿಂಬಿಸುತ್ತವೆ. ಆ ಶಕ್ತಿಯನ್ನು ಅಭಿವ್ಯಕ್ತಿಸುವ ಕೆಲಸವನ್ನು ಬಿ.ಐ.ಸಿ ಮಾಡಲು ಸಜ್ಜುಗೊಂಡಿದೆ. ಈ ಸಂಸ್ಥೆಯ ಗುರುತು ಮತ್ತು ಅನನ್ಯತೆ ಅದೇನನ್ನು ಮಾಡುತ್ತಿದೆ ಎನ್ನುವುದರಿಂದ ರೂಪುಗೊಳ್ಳುತ್ತಿದೆ. ಆ ಮೂಲಕ ಇತರ ನಗರಗಳಲ್ಲಿರುವ ಇಂತಹ ಸಂಸ್ಥೆಗಳಿಗೆ ಬಿ.ಐ.ಸಿ.ಯೆ ಮಾದರಿಯಾಗಲಿದೆ ಎನ್ನುವುದು ರವಿಚಂದರ್ ಅವರ ಖಚಿತ ನಿಲುವು.

ಹಾಗಾದರೆ ಬಿ.ಐ.ಸಿ. ಮಾಡುತ್ತಿರುವುದಾದರೂ ಏನು? 2005ರಲ್ಲಿ ಅತ್ಯುತ್ಸಾಹದಿಂದಲೆ ಪ್ರಾರಂಭವಾದರೂ, ನಿಧಾನವಾಗಿ ವಿಕಸನಗೊಂಡಿರುವ ಈ ಸಂಸ್ಥೆಯ ಬೆಳೆದು ಬಂದ ಹಾದಿಯ ಬಗ್ಗೆ ರವಿಚಂದರರ ಅನಿಸಿಕೆಗಳಿವು: ಪ್ರಾರಂಭದಲ್ಲಿ ಸಂಪನ್ಮೂಲಗಳ ಮತ್ತು ಆವರಣದ ಕೊರತೆಯಿದ್ದ ಕಾರಣ ಹೆಚ್ಚಿನ ಕಾರ್ಯಕ್ರಮಗಳು ನಡೆದಿರಲಿಲ್ಲ. ಜೊತೆಗೆ ಹೆಚ್ಚಿನ ಕಾರ್ಯಕ್ರಮಗಳು ಇಂಗ್ಲೀಷಿನಲ್ಲಿಯೆ ನಡೆಯುತ್ತಿದ್ದವು. ಇವುಗಳು ರಾಜಕಾರಣ ಮತ್ತು ಸಮಾಜಶಾಸ್ತ್ರೀಯ ಕುರಿತಾದ ಚರ್ಚೆಗಳಾಗಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸಭಾಂಗಣದ ಸಮಸ್ಯೆಯಿತ್ತು. ಈ ನಡುವೆ 2011ರಲ್ಲಿ ರಾಜ್ಯ ಸರ್ಕಾರವು ಬಿ.ಐ.ಸಿ.ಗೆ ದೊಮ್ಮಲೂರಿನಲ್ಲಿ ಸಿ.ಎ. ನಿವೇಶನವೊಂದನ್ನು ನೀಡಿದ್ದು ಒಂದು ಮುಖ್ಯವಾದ ಘಟ್ಟ. ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದಿರಾನಗರದ ನಾಗರಿಕರು ನ್ಯಾಯಾಲಯಕ್ಕೆ ಹೋದರು.

ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಗೆಲ್ಲುವ ಮೂಲಕ ಇದನ್ನು ಉಳಿಸಿಕೊಂಡದ್ದು ಬಿ.ಐ.ಸಿ.ಗೆ ಹೆಗ್ಗಳಿಕೆಯ ವಿಷಯವಲ್ಲ. ಬದಲಿಗೆ ಈ ಸಂಸ್ಥೆಗೆ ಆಂತರಿಕ ನೈತಿಕ ದಿಕ್ಸೂಚಿಯಿದೆ ಎನ್ನುವುದನ್ನು ಗಮನಿಸಬೇಕು ಎನ್ನುತ್ತಾರೆ ರವಿಚಂದರ್. ಈ ಸಂಸ್ಥೆಯು ಬೌದ್ಧಿಕತೆ ಮತ್ತು ಇಂದ್ರಿಯಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ, ಪಕ್ಷಾತೀತ ನೆಲೆಯಲ್ಲಿ ಮುಕ್ತ ಚರ್ಚೆಯನ್ನು ಸಾಧ್ಯವಾಗಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ರಾಜಕೀಯ ಪಕ್ಷ ಅಥವಾ ಸಿದ್ಧಾಂತಗಳಿಗೆ ಸೀಮಿತಗೊಳ್ಳದೆ, ಬೆಂಗಳೂರಿನ ನಾಗರಿಕರ ಹಿತಾಸಕ್ತಿಗಳನ್ನು ಹಾಗೂ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುವ ವೇದಿಕೆಯಾಗಿ ಬಿ.ಐ.ಸಿ. ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಧ್ರುವೀಕರಣಗೊಂಡಿರುವ ಇಂದಿನ ದಿನಗಳಲ್ಲಿ ಎಲ್ಲರೂ ಜೊತೆಗೂಡಿ, ಮುಕ್ತವಾಗಿ ಪರಸ್ಪರರ ವಿಚಾರಗಳನ್ನು ಗೌರವಿಸುವ ನಾಗರಿಕ ವೇದಿಕೆಯಾಗಬೇಕು ಎನ್ನುವುದು ರವಿಚಂದರ್ ಅವರ ಸ್ಪಷ್ಟ ನುಡಿ.

ಬಿ.ಐ.ಸಿ. ಒಂದು ಸಾರ್ವಜನಿಕ ಸಂಸ್ಥೆ, ಬೆಂಗಳೂರು ಕ್ಲಬ್ ಅಥವಾ ಇತರೆ ಕೆಲಸ ಕ್ಲಬ್‍ಗಳಂತೆ ಖಾಸಗಿ ಸಂಸ್ಥೆಯಲ್ಲ ಎಂದು ರವಿಚಂದರ್ ಒತ್ತಿಹೇಳುತ್ತಾರೆ. ಬಿ.ಐ.ಸಿ.ಯ ಸದಸ್ಯರು ಮತ್ತು ದಾನಿಗಳು ಇದರ ಚಟುವಟಿಕೆಗಳನ್ನು ನಡೆಸಲು ಸಹಾಯ ಮಾಡುತ್ತಾರೆ. ಆದರೆ ಇದರ ಎಲ್ಲ ಚಟುವಟಿಕೆಗಳು ಬೆಂಗಳೂರಿನ ಎಲ್ಲ ನಾಗರಿಕರೂ ಭಾಗವಹಿಸಲು ಮುಕ್ತವಾಗಿದೆ.

ತನ್ನ ಸ್ವಂತ ಕಟ್ಟಡವನ್ನು ಈಗ ಪಡೆದುಕೊಂಡ ನಂತರ ಮುಂದೇನು ಮಾಡಬೇಕು ಎನ್ನುವ ಪ್ರಶ್ನೆಗೆ ಬಿ.ಐ.ಸಿ. 2.0 ಪರಿಕಲ್ಪನೆಯನ್ನು ಮುಂದಿಡುತ್ತಾರೆ. ಹಣ ಮತ್ತು ಆವರಣವನ್ನು ಪಡೆದಿರುವ ಇಂದು ನಮಗೆ ಕನಸು ಕಾಣಲು ಸಾಧ್ಯ ಎನ್ನುತ್ತ ಬಿ.ಐ.ಸಿ. ಆಯೋಜಿಸುತ್ತಿರುವ ವಿಶಿಷ್ಟ ಕಾರ್ಯಕ್ರಮಗಳ ಬಗ್ಗೆ ರವಿಚಂದರ್ ತುಂಬ ಉತ್ಸಾಹದಿಂದ ಮಾತನಾಡುತ್ತಾರೆ. ಉದಾಹರಣೆಗ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವ ರೀತಿಯ ಉಪನ್ಯಾಸಗಳು ಮತ್ತು ಮಾಸ್ಟರ್ ಕ್ಲಾಸ್‍ಗಳನ್ನು ನಡೆಯುತ್ತಿವೆ. ಉದಾಹರಣೆಗೆ, ಮೇ ತಿಂಗಳ ಕಡೆಯಲ್ಲಿ ವಲ್ಚೇರು ನಾರಾಯಣರಾವ್ ಭಾರತೀಯ ಸಾಹಿತ್ಯದ ಜೊತೆಗೆ ತಮ್ಮ ಅನುಸಂಧಾನವನ್ನು ಕುರಿತು ಆರು ಉಪನ್ಯಾಸಗಳನ್ನು ನಡೆಸಿಕೊಟ್ಟರು. ವಿಜ್ಞಾನ, ಕಲೆ ಇತ್ಯಾದಿಗಳ ಬಗ್ಗೆ ಇದೆ ರೀತಿಯಲ್ಲಿ ಉಪನ್ಯಾಸ ಮಾಲೆಗಳನ್ನು ಆಯೋಜಿಸುವ ಯೋಜನೆಗಳಿವೆ.

ಬಿ.ಐ.ಸಿ.ಯ ಕಾರ್ಯಕ್ರಮಗಳು ಮತ್ತು ಸಾಂಸ್ಥಿಕ ಪರಿಕಲ್ಪನೆಗಳನ್ನು ಬಣ್ಣಿಸುತ್ತಲೇ ರವಿಚಂದರ್ ಈ ಸಂಸ್ಥೆಯು ನಾಗರಿಕ ಚಳುವಳಿಗಳನ್ನು ಯೋಜಿಸುವ ಅಥವಾ ಸಂಶೋಧನೆಗಳನ್ನು ಮಾಡುವುದಿಲ್ಲ ಎನ್ನುತ್ತಾರೆ. ಮಿಗಿಲಾಗಿ ಇದು ಸರ್ಕಾರದಿಂದ ಯಾವುದೆ ಅನುದಾನವನ್ನು ಪಡೆಯುತ್ತಿಲ್ಲ. ಬಿ.ಐ.ಸಿ. ತನ್ನ ನಿವೇಶನಕ್ಕೆ ಸಹ ಮಾರುಕಟ್ಟೆ ಬೆಲೆಯನ್ನು ನೀಡಿ ಪಡೆದುಕೊಂಡಿದೆ. ಹಲವಾರು ಸರ್ಕಾರಿ ಅಧಿಕಾರಿಗಳು ಈ ಸಂಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರೂ ಸಹ ಸರ್ಕಾರದಿಂದ ದೂರವಿರುವುದು ಕ್ಷೇಮ ಎಂದು ರವಿಚಂದರ್ ವಾದಿಸುತ್ತಾರೆ. ಇದು ಬೆಂಗಳೂರಿನ ನಾಗರಿಕರ ಸಂಘಟನೆಯಾಗಿಯೆ ಉಳಿಯಬೇಕು.

ಬಿ.ಐ.ಸಿ. ಕಾರ್ಯಕ್ರಮಗಳು ಇಂಗ್ಲೀಷ್ ಕೇಂದ್ರಿತ ಹಾಗೂ ಗಣ್ಯ ಮತ್ತು ಮೇಲ್ವರ್ಗದವರಿಗೆ ಸೀಮಿತವಾಗಿವೆಯೆ? ಈ ಸಂಸ್ಥೆಯು ಹೇಗೆ ಬೆಂಗಳೂರಿನ ಸಾಮಾನ್ಯ ಜನರ ಸಂಸ್ಥೆಯಾಗಿ ಬೆಳಯಬಹುದು ಮತ್ತು ಸಾಮಾನ್ಯ ಜನರೂ ಭಾಗವಹಿಸುವ ವೇದಿಕೆಯಾಗಬಹುದು ಎನ್ನುವ ಸವಾಲು ರವಿಚಂದರ್ ಸಾಮಾನ್ಯವಾಗಿ ಎದುರಿಸುವ ಪ್ರಶ್ನೆ. ಅವರು ಸಹ ಇದುವರಗೆ ಬಿ.ಐ.ಸಿ.ಯ ಕಾರ್ಯಕ್ರಮಗಳು ಕನ್ನಡ ಮತ್ತು ಭಾರತೀಯ ಭಾಷೆಗಳಲ್ಲಿ ಹೆಚ್ಚಾಗಿ ನಡೆಯುತ್ತಿಲ್ಲ. ಆದರೆ ಈಗ ಪ್ರಜ್ಞಾಪೂರ್ವಕವಾಗಿ ಬೆಂಗಳೂರಿನ ಸಂಸ್ಕೃತಿಯ ಎಲ್ಲ ಆಯಾಮಗಳನ್ನು ಪ್ರತಿಬಿಂಬಿಸುವ ಮತ್ತು ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿಯಿದೆ ಎಂದು ಅಂತಹ ಕಾರ್ಯಕ್ರಮಗಳ ದೊಡ್ಡ ಪಟ್ಟಿಯನ್ನು ಮುಂದಿಡುತ್ತಾರೆ. ಕನ್ನಡದ ಪರಿಸರ ಗೀತೆಗಳ ಕಾರ್ಯಕ್ರಮ, ಶಿವರಾಮ ಕಾರಂತರ ಬದುಕು ಮತ್ತು ಸಾಹಿತ್ಯಗಳ ಕುರಿತಾದ ಉಪನ್ಯಾಸಗಳು ಹಾಗೂ ಕರ್ನಾಟಕದ ಏಕೀಕರಣದ ಕುರಿತಾದ ಚರ್ಚೆ ಇತ್ಯಾದಿಗಳನ್ನು ಬಿ.ಐ.ಸಿ. ಆಯೋಜಿಸುತ್ತಿದೆ.

ಇಷ್ಟಾದರೂ ಬಿ.ಐ.ಸಿ.ಯಂತಹ ಸಂಸ್ಥೆಗಳು ನಗರದ ಕುಲೀನ ಮತ್ತು ಗಣ್ಯವರ್ಗಗಳ ನಿಯಂತ್ರಣದಲ್ಲಿಯೆ ಉಳಿದಿವೆ, ಉಳಿಯುತ್ತಿವೆ ಎನ್ನುವುದೂ ಸಹ ಸತ್ಯವೆ. ಇಂತಹ ಸಂಸ್ಥೆಗಳ ಅಗತ್ಯ ಮತ್ತು ಪ್ರಸ್ತುತತೆಯೇನು? ಈ ಪ್ರಶ್ನೆಗಳಿಗೆ ಸರಳ ಉತ್ತರಗಳಿಲ್ಲ. ಸಾರ್ವಜನಿಕ ವಲಯದ ವಿಶ್ವವಿದ್ಯಾನಿಲಯಗಳೆ ಅಪ್ರಸ್ತುತ, ಅನವಶ್ಯಕ ಎನ್ನುವ ಅಭಿಪ್ರಾಯವಿರುವ ಸಮಯದಲ್ಲಿ ಬಿ.ಐ.ಸಿ. ತನ್ನ ಕಾರ್ಯಕ್ರಮಗಳ ಮೂಲಕ ತನ್ನ ಪ್ರಸ್ತುತತೆಯನ್ನು ಸಾಬೀತುಪಡಿಸಿಕೊಳ್ಳಬೇಕಾಗಿದೆ. ಅದರ ಕಾರ್ಯಕ್ರಮಗಳ ವ್ಯಾಪ್ತಿಯನ್ನು ಗಮನಿಸಿದರೆ ಬಿ.ಐ.ಸಿ.ಯ ಸಮಾಜಮುಖಿ ಗುಣ ಸ್ಪಷ್ಟವಾಗಿ ಗೋಚರಿಸುತ್ತದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ. ಬೆಂಗಳೂರಿನ ನಾಗರಿಕರು ಅದರ ಲಾಭವನ್ನು ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಅನುಮಾನಗಳಿಲ್ಲ.

Leave a Reply

Your email address will not be published.