ಸಮುದಾಯಗಳ ಅಸ್ಮಿತೆಯ ಕಾವ್ಯ ಶ್ರೀ ಪಾರ್ಥಲಿಂಗ ಚರಿತಾಮೃತ

ಇಡೀ ಕಾವ್ಯ ಕಾಡು-ನಾಡು, ಬಡವ-ಬಲ್ಲಿದ, ವಿನಯ ಅಹಂಕಾರ, ಭಕ್ತಿ-ದಾಷ್ಟ್ರ್ಯ ಮುಂತಾದ ಹಲವಾರು ವೈರುಧ್ಯ ಮತ್ತು ಸಮರಸದ ಕಥನವನ್ನು ಒಳಗೊಂಡಿದೆ. ಜಾತಿಸಂಕರ ಮಾಡಿ ಜಾತ್ಯತೀತರನ್ನು ಅಪ್ಪಿಕೊಳ್ಳುವ, ಕತ್ತಲನ್ನು ಕಳೆಯುವ, ಬಾಳಿನಲ್ಲಿ ಬೆಳಕನ್ನು ಬೀರುವ, ದ್ವೇಷವನ್ನು ಕಳೆದು ಪ್ರೀತಿಯನು ಬೆಳೆಸುವ ಪಾರ್ಥಲಿಂಗ ಮಹಿಮಾ ಪುರುಷ ನಾಗಿ ಚಿತ್ರಿತನಾಗಿದ್ದಾನೆ. ಜ್ಞಾನ-ಭಕ್ತಿ ಎರಡನ್ನೂ ಆಶಯವಾಗುಳ್ಳ ಈ ಕಾವ್ಯ ಭೂತ, ವರ್ತಮಾನ ಹಾಗೂ ಭವಿಷ್ಯತ್ತಿನ ತ್ರಿಕಾಲ ಸೂತ್ರದ ಹೆಣಿಗೆಯಲ್ಲಿ ರೂಪುಗೊಂಡಿದೆ.

ರಾಮಾಯಣ ಮತ್ತು ಮಹಾಭಾರತಗಳು ನಮ್ಮದೇಶದ ಪರಿಸರ ಮತ್ತು ಸಮುದಾಯಗಳಿಗೆ ಆನೇಕ ರೀತಿಯ ಸೃಜನಶೀಲ ಸರಕನ್ನು ಒದಗಿಸಿವೆ. ಬಹುಶಃ ಭಾರತದ ಎಲ್ಲ ಭಾಷೆಗಳಲ್ಲಿ ರಾಮಾಯಣ, ಮಹಾಭಾರತದ ಕಥೆಗಳು ರಚನೆಯಾಗಿವೆ. ಮೌಖಿಕ ಮತ್ತು ಶಿಷ್ಟ ಎರಡೂ ಪರಂಪರೆಯಲ್ಲಿ ಇವು ಕಂಡುಬರುತ್ತವೆ.

ಮಹಾಭಾರತದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಪಾಶುಪತವನ್ನು ಪಡೆವ ಈ ಕಥೆಗೂ, ಕಾಡುವಾಸಿಗಳಾದ ಗೊಲ್ಲರ ‘ಶ್ರೀ ಪಾರ್ಥಲಿಂಗಚರಿತೆ’ಗೂ ಎಲ್ಲಿಗೆಲ್ಲಿಯ ಸಂಬಂಧ. ‘ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪಿನಂತೆ’ ಇದೊಂದು ಕುತೂಹಲದಾಯಕವಾದ ಕಥೆ. ಇಂಥ ಜನಪದ ಕತೆಗಳು ಸಮುದಾಯಗಳ ಅಥವಾ ಮಾನವರ ಸಂಸ್ಕೃತಿಕ ಚರಿತ್ರೆ ಅರಿಯುವಲ್ಲಿ ಪ್ರಮುಖವಾದವು ಎನ್ನುವದು ನನ್ನ ಭಾವನೆ. ಇವು ಭಾರತದ ಹಿಂದುಳಿದ ತಳಸಮುದಾಯಗಳು ತಮ್ಮ ಸಂಸ್ಕೃತಿಕ ಮೇಲ್ಚನೆಯ ಐಡೆಂಟಿಟಿಯ ಭಾಗವಾಗಿ ಸೃಷ್ಟಿಸಿಕೊಂಡ ಕಥನಗಳಾಗಿವೆ. ತಮ್ಮ ಸಂಸ್ಕೃತಿಗೊಂದು ಪುರಾಣ ಕಟ್ಟಿಕೊಳ್ಳುವ ಸಹಜ ಪ್ರಕ್ರಿಯೆಯೂ ಇದಾಗಿದೆ.

‘ಶ್ರೀಪಾರ್ಥಲಿಂಗ ಚರಿತಾಮೃತ’ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಕಾವ್ಯ. ಒಟ್ಟು ಏಳು ಅಧ್ಯಾಯಗಳ 497 ಪದ್ಯಗಳಿಂದ ಕೂಡಿರುವ ಕೃತಿ. ಇದು ಶಿವನು ಬಸವನಿಗೆ ಹೇಳಿದ ಕಥೆ.

ಭಂಗ ಬಡುವಾ ಭಕ್ತವೃಂದಕೆ ಮುಕ್ತಿ ತೋರುವ ‘ಶ್ರೀಪಾರ್ಥಲಿಂಗಚರಿತಾಮೃತ’ ಒಂದು ಸಮುದಾಯದ ಕಾವ್ಯವಾಗದೆ, ಇಡೀ ನಾಡಿನ ಜನರನ್ನು ಆವರಿಸುವ ಮಹಿಮೆಯನ್ನು ಪಡೆದುಕೊಂಡಿದೆ. ಹಾಗೆ ನೋಡಿದರೆ ಕನ್ನಡದಲ್ಲಿ ಭಕ್ತಿ ಸಾಹಿತ್ಯ ಪರಂಪರೆಗೆ ವಿಶಿಷ್ಟವಾದ ಚರಿತ್ರೆಯಿದೆ. ಹರಿಹರ ಮತ್ತವನ ಹಿಂದು-ಮುಂದಿನ ಅನೇಕ ಕವಿಗಳು ಭಕ್ತಿಯ ಕುರಿತಾದ ಕಾವ್ಯಗಳನ್ನು ರಚಿಸಿದ್ದಾರೆ. ಭಕ್ತಿಯಲ್ಲಿಯೇ ಶಿವಪಾರಮ್ಯ ಹಿರಿದು. ಸಾಹಿತ್ಯದ ಎಲ್ಲಾ ಕಾಲಘಟ್ಟಗಳಲ್ಲಿ ಶಿವಭಕ್ತಿ ಜಲಪಾತದಂತೆ ದುಮ್ಮಿಕ್ಕಿ ಹರಿದಿದೆ. ಕನ್ನಡದಲ್ಲಿ ಹರಿಹರನನ್ನು ಬಿಟ್ಟರೆ ಶಿವಭಕ್ತಿಯ ಮಹಿಮೆಯನ್ನು, ಮೇಲ್ಮೆಯನ್ನು ಸಾರಿದ ಷಡಕ್ಷರಿಯ ‘ಶಭರ ಶಂಕರ ವಿಳಾಸ’ ವಿಶಿಷ್ಟವಾದ ಕಾವ್ಯ. ಇದೇ ಸಾಲಿಗೆ ಸೇರುವ ‘ಶ್ರೀ ಪಾರ್ಥಲಿಂಗ ಚರಿತಾಮೃತ’ದಲ್ಲಿ ಅಹಂಕಾರ ಮತ್ತು ಶ್ರೇಷ್ಠತೆಯ ವ್ಯಸನ ಮಾನವ ಸಹಜ ದೌರ್ಬಲ್ಯಗಳಾಗಿವೆ. ಹೀಗಾಗಿ ಕಾಲದಿಂದ ಕಾಲಕ್ಕೆ ಮಾನವನನ್ನು ಮಾನವೀಯ ಶ್ರೇಷ್ಠತೆಯ ಮೌಲ್ಯಗಳಕಡೆಗೆ ಎಳೆದೊಯ್ಯುವ ಪ್ರಸಂಗಗಳು ದೈವತ್ವದ ಹಿರಿಮೆಯನ್ನು ಎತ್ತಿಹಿಡಿದಿವೆ. ಮಾನವ ಜೀವನದ ಮೌಲ್ಯಗಳ ಉದಾತ್ತ ದರ್ಶನ, ವಾಸ್ತವಿಕ ಪ್ರಜ್ಞೆ, ಕರುಣೆ, ರೌದ್ರ, ಭಕ್ತಿ ರಸಗಳ ಸಹಜಾಕರ್ಷಣೆ, ಭಕ್ತರನ್ನು ಹೆಚ್ಚಿಸಿಕೊಳ್ಳುವ ಅಥವಾ ತನ್ನ ಒಕ್ಕಲಾಗಿಸಿಕೊಳ್ಳುವ ಜಾನಪದ ಮಹಾಕಾವ್ಯಗಳ ನಾಯಕರ ಲಕ್ಷಣ ‘ಶ್ರೀಪಾರ್ಥಲಿಂಗ ಚರಿತಾಮೃತ’ದಲ್ಲಿವೆ.

ಕವಿ ಪರಮೇಶ್ವರಪ್ಪನವರ ‘ಶ್ರೀಪಾರ್ಥಲಿಂಗ ಚರಿತಾಮೃತ’ ನಾಲ್ಕು ಕಾರಣಗಳಿಗಾಗಿ ಮಹತ್ವದ್ದಾಗಿದೆ. ಒಂದು: ಆಧುನಿಕ ಸಂದರ್ಭದಲ್ಲಿ ಷಟ್ಪದಿಯ ಛಂದಸ್ಸಿನಲ್ಲಿ ಕಾವ್ಯರಚಿಸುವುದು ಅಸಾಧ್ಯ ಎನ್ನುವ ಕಾಲದಲ್ಲಿ ಷಟ್ಪದಿಯಲ್ಲಿ ರಚನೆಯಾಗಿರುವುದು. ಎರಡು: ಒಂದು ಸಮುದಾಯದ ಕಾವ್ಯವಾಗಬಹುದಾಗಿದ್ದ ಇದು ಜಾತ್ಯತೀತ ನೆಲೆಯ, ಜೀವಪರವಾದ ಕಾವ್ಯವಾಗಿರುವುದು. ಮೂರು: ಈಗಾಗಲೇ ಜಾನಪದ ಗದ್ಯ ರೂಪದಲ್ಲಿದ್ದ ಸ್ವಚ್ಚಂದ ಮೌಖಿಕ ಕಥನ ಶಿಷ್ಟ ಪರಿಭಾಷೆಯ ಕಾವ್ಯದ ಚೌಕಟ್ಟಿಗೆ ಒಳಗಾಗಿ ರಚನೆಯಾಗಿರುವುದು. ನಾಲ್ಕು: ಪುರಾಣ-ಚರಿತ್ರೆಯ ಸಂಗಮವಾದ ಜನ ಕಾವ್ಯದಲ್ಲಿ ಸಮಕಾಲೀನ ಸಂಗತಿಗಳು ತೆರೆದುಕೊಂಡಿರುವುದು.

ಶ್ರೀ ಪಾರ್ಥಲಿಂಗ ಚರಿತಾಮೃತ
ನಿರುತ ಪ್ರಕಾಶನ,
ಮೊದಲ ತಿರುವು, ಅಯ್ಯಣ್ಣ ಕಾಲೋನಿ,
ಕ್ರಿಡಾಂಗಣ ರಸ್ತೆ, ಚಿತ್ರದುರ್ಗ.
ಪು: 170, ಬೆಲೆ: 120

‘ಶ್ರೀಪಾರ್ಥಲಿಂಗ ಚರಿತಾಮೃತ’ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಕಾವ್ಯ. ಒಟ್ಟು ಏಳು ಅಧ್ಯಾಯಗಳ 497 ಪದ್ಯಗಳಿಂದ ಕೂಡಿರುವ ಕೃತಿ. ಇದು ಶಿವನು ಬಸವನಿಗೆ ಹೇಳಿದಕಥೆ. ಇಲ್ಲಿ “ಜನಪದೀಯರು ಹಾಡುವ ಪಾರ್ಥಕಥೆಯನು, ಶಾಯಿಯಿಂದಲಿ ಕೃತಿ ರಚಿಸಿದೆನು ವಿಮಲ ಮನಸಿನಲಿ” ಎನ್ನುವ ಕವಿಯ ಸಾಲು ಕುಮಾರವ್ಯಾಸನ ವಿನಯವನ್ನು ಕಾಣಿಸಿದೆ. ಈ ಕಾವ್ಯದ ಪೀಠಿಕಾಧ್ಯಾಯದಲ್ಲಿ ಏಕದಂತ, ಶಾರದೆ, ಲಕ್ಷ್ಮೀ, ಗಿರಿಜೆ, ಶಿವ (ಲಿಂಗ), ಸೂರ್ಯ, ವಾಯು, ಭೂಮಿ, ಜಲದೇವತೆಯನ್ನು ಪ್ರಾರ್ಥಿಸಿರುವುದು ಗಮನಿಸಿದರೆ, ಸಾಮಾಜಿಕ, ರಾಜಕೀಯ ಹಾಗೂ ನಿಸರ್ಗದ ದೃಷ್ಟಿಯಿಂದಲೂ ಕವಿ ವರ್ತಮಾನದ ಅನೇಕ ತಲ್ಲಣಗಳಿಗೆ ಪರಿಹಾರದ ನಿವೇದನೆಯನ್ನು ಮಾಡಿಕೊಂಡಿರುವಂತೆ ಕಾಣುತ್ತದೆ. ಅಂದರೆ ಕಾವ್ಯವು ಸಮಾಜವನ್ನುಉದ್ದರಿಸುತ್ತದೆ ಎಂಬ ಅಚಲ ವಿಶ್ವಾಸ ಕವಿಯದು.

ಸಂಚು ಹೂಡುವೆ ಜೀವ ಜಗದಲಿ
ಪಂಚಭೂತವು ನಿನ್ನ ವಶವನೆ
ಸಂಚರಿಸುವಾ ಗ್ರಹಗಳಿಗೆ ಸಂಚಾಲಕನು ನೀನು
ಅಂಚಿನಲಿ ನಾವಿರುವೆವೀಗಲೆ
ಯಿಂಚರದ ದನಿಯುಡುಗಿಯಡಗಿದೆ
ಹೊಂಚುಗಾರನು ಲಿಂಗ ಮಹಿಮನೆ ನೀಡು ಮಂಗಳವ

ಎಂಬ ಶಕ್ತವಾದ ಸಾಲುಗಳು ವರ್ತಮಾನದ ಭೀಕರತೆಯನ್ನುಚಿತ್ರಿಸುತ್ತ ಭವಿಷ್ಯದ ಬೆಳಕನ್ನು ಅರಸುತ್ತವೆ. ಆ ನಂತರದ ಪದ್ಯಗಳಲ್ಲಿಯೂ ಮನುಷ್ಯನ ಅಂತರಂಗ ಮತ್ತು ಬಹಿರಂಗಗಳ ಮಲಿನದ ಬಗ್ಗೆ ಹಾಗೂ ಅವು ನಿರ್ಮಲಗೊಳ್ಳಬೇಕಾದ ಬಗ್ಗೆ ಕಾವ್ಯದುದ್ದಕ್ಕೂ ವರ್ತಮಾನದ ಎಚ್ಚರಿಕೆಯನ್ನು ಕವಿ ದಾಖಲಿಸಿದ್ದಾರೆ.

ಕಾಡಿನಿಂದ ನಾಡಿಗೆ ಸಾಗುವ ಪಾರ್ಥಲಿಂಗನ ಜೀವನದ ಕಥನ, ಇಂದ್ರಕೀಲದಲ್ಲಿ ಪಾರ್ಥ ಪಾಶುಪತ ಪಡೆದ ಘಟನೆಯಿಂದ ಕಾವ್ಯ ಪ್ರಾರಂಭವಾಗುತ್ತದೆ. ಪಾಂಡವರು ಸರ್ವವನ್ನು ಸೋತು ವನವಾಸಕ್ಕೆ ಹೊರಟಿದ್ದಾರೆ. ಅಡವಿಯ ಹೊಕ್ಕ ಪಾಂಡವರು ಗುಡಿಸಲಿನಲ್ಲಿ ವಾಸವಿದ್ದಾರೆ. ಅರಮನೆ ತೊರೆದು ಕಾಡಿನ ಕತ್ತಲೆಯಲ್ಲಿ ಗುಡಿಸಲಿಗೆ ಕಾಲಿಟ್ಟ ಪಾರ್ಥನ ಜೀವನವು ಕಾಡಿನ ಸಂಸರ್ಗದಿಂದ ಸಂಗಮೇಶ್ವರನಾಗಿ ಪಾರ್ಥಲಿಂಗನಾಗುವತ್ತ ಸಾಗುತ್ತದೆ. ಈ ಸಂದರ್ಭದ ಕಾಡಿನ ವರ್ಣನೆ ಕಾವ್ಯದಲ್ಲಿ ಮನೋಜ್ಞವಾಗಿ ಚಿತ್ರಣಗೊಂಡಿದೆ. ಇಲ್ಲಿ ಪಾಂಡವರ ಬದುಕಿನ ಚಿತ್ರಣ ಮಾತ್ರವಲ್ಲ ಕಾಡಿನ ಜನರ ಬದುಕಿನ ಸಂಕಟದ ಚಿತ್ರಣವೂ ಮೂಡಿ ಬಂದಿದೆ.

ಗೊಲ್ಲರು ‘ಮರಳಲಿಂಗ’ವನ್ನು ಹೊತ್ತುಕಾಡು-ಮೇಡಿನಲ್ಲಿ ಅಲೆಯುತ್ತಾರೆ. ಅವರಲ್ಲಿ ಈಷ್ರ್ಯೆ, ದುರ್ನಡತೆ ಮೂಡಿ ಲಿಂಗವನ್ನುತುಂಗಭದ್ರೆ ದಡದಲ್ಲಿಟ್ಟು ಡೆಲ್ಲಿ ಪಟ್ಟಣ ಸೇರುತ್ತಾರೆ. ಲಿಂಗವನ್ನು ಬಿಟ್ಟು ಗೊಲ್ಲರು ಡೆಲ್ಲಿ ಸೇರಿದರೆ, ಅವರೊಳಗಿನ ಕಾಡುಗೊಲ್ಲರು ಋಷಿಯ ಶಿಷ್ಯರು, ಕಪಟವರಿಯದವರು, ಶಿವ-ಪಾರ್ಥಕಾದಾಡಿದ ಇಂದ್ರ ಕೀಲದ ಸ್ಥಳಮಹಿಮೆಯನ್ನು ಗುರುಮುಖೇನ ಅರಿತು ‘ಲಿಂಗ’ವನ್ನು ಪೂಜಿಸಿದರು.

ಧರ್ಮರಾಯ ತನ್ನ ತಮ್ಮನಾದ ಅರ್ಜುನನನ್ನು ಪಾಶುಪತ ಪಡೆಯಲು ಇಂದ್ರಕೀಲಕ್ಕೆ ಕಳಿಸುತ್ತಾನೆ. ಕಾಡು ಹೊಕ್ಕ ಅರ್ಜುನ ಅಲ್ಲಿ ಸಿಗುವ ವಿವಿಧ ಹಣ್ಣುಗಳನ್ನು ತಿಂದುಂಡು ಶಿವನ ಕುರಿತು ಉಗ್ರ ತಪಸ್ಸು ಮಾಡುತ್ತಾನೆ. ಇಲ್ಲಿ ಶಿವ-ಪಾರ್ಥ ಇಬ್ಬರ ನಡುವೆ ಯುದ್ಧ ನಡೆಯುತ್ತದೆ. ಪಾರ್ಥನಿಗೆ ಸೋಲಾಗುತ್ತದೆ. ಶಿವನನ್ನು ಪೂಜಿಸದೇ ಸೋಲಾಯಿತೆಂದರಿತ ಪಾರ್ಥ ಮತ್ತೆ ‘ಮರಳಲಿಂಗನ’ ಮಾಡಿ ಪೂಜಿಸುತ್ತಾನೆ. ಪಾಶುಪತವನ್ನು ಪಡೆಯುತ್ತಾನೆ. ದಣಿದ ಪಾರ್ಥನಿಗೆ ಇಂದ್ರ ಉಪಚರಿಸುತ್ತಾನೆ. ಮರಳಿ ಬಂದು ಪಾಂಡವರು ಕೂಡಿಕೊಂಡು ಕೌರವರಗೆಲಿದು ನೆಲವನಾಳಿದರು. ಅತ್ತ ಪಾರ್ಥ ಪೂಜಿಸಿದ ‘ಮರಳಲಿಂಗ’ವೇ ಕಲಿಯುಗದಲ್ಲಿ ‘ಪಾರ್ಥಲಿಂಗ’ವಾಗಿ ಜೀವತುಂಬಿ, ಜೀವಪರವಾಗಿ, ಜಂಗಮವಾಗಿ ಜನರನುದ್ಧರಿಸುವ, ಅವರ ಸಂಕಟಗಳಿಗೆ ಪರಿಹಾರ ನೀಡುವ ಯಾತ್ರೆ ಕೈಗೊಳ್ಳುವುದೇ ಈ ಕಾವ್ಯದ ಕಥಾ ಹಂದರ.

ಗೊಲ್ಲರು ‘ಮರಳಲಿಂಗ’ವನ್ನು ಹೊತ್ತು ಕಾಡು-ಮೇಡಿನಲ್ಲಿ ಅಲೆಯುತ್ತಾರೆ. ಅವರಲ್ಲಿ ಈಷ್ರ್ಯೆ, ದುರ್ನಡತೆ ಮೂಡಿ ಲಿಂಗವನ್ನು ತುಂಗಭದ್ರೆ ದಡದಲ್ಲಿಟ್ಟು ಡೆಲ್ಲಿ ಪಟ್ಟಣ ಸೇರುತ್ತಾರೆ. ಲಿಂಗವನ್ನು ಬಿಟ್ಟು ಗೊಲ್ಲರು ಡೆಲ್ಲಿ ಸೇರಿದರೆ, ಅವರೊಳಗಿನ ಕಾಡುಗೊಲ್ಲರು ಋಷಿಯ ಶಿಷ್ಯರು, ಕಪಟವರಿಯದವರು, ಶಿವ-ಪಾರ್ಥ ಕಾದಾಡಿದ ಇಂದ್ರಕೀಲದ ಸ್ಥಳಮಹಿಮೆಯನ್ನು ಗುರುಮುಖೇನ ಅರಿತು ‘ಲಿಂಗ’ವನ್ನು ಪೂಜಿಸಿದರು. ಕೀರತಾರ್ಜುನರು ಕಾದಾಡಿದ ಈ ನೆಲವನ್ನೇ ಸುಕ್ಷೇತ್ರವೆಂದು ಭಾವಿಸಿದರು. ಹೀಗೆ ಕಾಡಿನಲ್ಲಿ ವಾಸವಿದ್ದ ಒಂದೇ ಜನಾಂಗ ಎರಡು ಪಂಗಡಗಳಾಗಿ ಹೋದದ್ದು, ಕಾಡು-ನಾಡವರ ನಡುವಿನ ಸಂಘರ್ಷದ ಕಥೆಯೂ ಆಗಿ ಕಾವ್ಯ ಚಿತ್ರಣವಾಗಿದೆ.

ಅತ್ತ ತುಂಗಭದ್ರೆಯ ದಡದಲ್ಲಿ ಬಿದ್ದಿದ್ದ ‘ಮರಳಲಿಂಗವು’ ಜಂಗಮರೂಪ ತಾಳುತ್ತದೆ. ಎಲ್ಲೆಲ್ಲಿಯೂ ಅಧರ್ಮ ತಾಂಡವವಾಡುತ್ತಿದೆ. ಹೀಗಾಗಿ ಧರ್ಮವನ್ನು ಬಿತ್ತಿ ಅಧರ್ಮ ದೂರ ಮಾಡಬೇಕೆಂದು ಮರಳಲಿಂಗ  ಚಿಂತಿಸುತ್ತಾನೆ. ಶಿವಭಕ್ತಳಾದ ಆರೂಢಪುರದ ದಾನಶೀಲಮ್ಮ ಮಕ್ಕಳಿಲ್ಲದ ಬಂಜೆ, ಒಮ್ಮೆ ಮಾರುವೇಷದಲ್ಲಿ ಶಿವ ಅವಳನ್ನು ಬಂಜೆ ಎಂದು ನಿಂದಿಸುತ್ತಾನೆ. ನೊಂದ ಆಕೆ ಶಿವನನ್ನು ಧ್ಯಾನಿಸುತ್ತಾಳೆ. ಶಿವ ಕುಂಬಳದ ಬೀಜಗಳನ್ನು ಕೊಟ್ಟು ಬಂಡೆಯಲ್ಲಿ ಊರಿ ನಿತ್ಯ ನೀರೆರೆಯಲು ತಿಳಿಸುತ್ತಾನೆ. ಹಾಗೇ ಮಾಡಿದ ದಾನಮ್ಮ ‘ಜಗದ ಅಘವನು ತೊಳೆಯುವ ಗಂಗೆಯನು’ ಎರೆಯುತ್ತಾಳೆ. ಶಿವ ಮರ್ಮನ್ನರಿಯದ ಊರಜನರು ಅಪನಂಬಿಕೆಯನು ವ್ಯಕ್ತಪಡಿಸುತ್ತಾರೆ. ಈ ವರ್ಣನೆ ಕೆಳಗಿನ ಪದ್ಯದಲ್ಲಿ ಮನೋಜ್ಞವಾಗಿ ಚಿತ್ರಣಗೊಂಡಿದೆ.

ನಡೆವ ಮುಗಿಲನು ತಡೆಯಬಲ್ಲೆವೆ
ಹುಡುಕ ಬಲ್ಲೆವೆ ಗಗನ ಗಡಿಯನು
ಕುಡಿಯ ಮಗನನು ಪಡೆಯ ಬಲ್ಲಳೆ ಬಂಜೆ ಬಸಿರಿನಲಿ
ಕಡಲ ನೀರನು ಕುಡಿಯ ಬಲ್ಲೆವೆ
ಸುಡುವ ಕೆಂಡವ ಮಡಿಲಲಿಡುವರೆ
ಮೃಡನ ಮರ್ಮವನರಿಯಬಹುದೇನೆಂದರಾ ಜನರು

ಬಂಡೆಯಲ್ಲಿ ಬಿತ್ತಿದ ಬೀಜ ಚಿಗುರೊಡೆದು ಹನ್ನೆರಡು ಕಟ್ಟಾಳುಗಳು ಕೀಳಲಾಗದಂತ ಕುಂಬಳ ಕಾಯಿಯಾಗುತ್ತದೆ. ಅದು ಮಾಗುತ್ತದೆ, ಹಣ್ಣಾಗುತ್ತದೆ. ಅದನ್ನು ಬ್ರಾಹ್ಮಣರಿಗೆ ಹಾಗೂ ಜಂಗಮರಿಗೆ ನೀಡುತ್ತಾಳೆ. ಅದನ್ನು ಕೀಳಲು ಯಾರಿಗೂ ಅಸಾಧ್ಯವಾದ್ದರಿಂದ ಹಿಂದಿರುಗಿಸುತ್ತಾರೆ. ಶಿವನ ಪ್ರೇರಣೆಯಿಂದ ಆಕೆ ಎತ್ತಿ ಹಿಂದಕ್ಕೆ ಎಸೆದಾಗ, ಆ ಹಣ್ಣು ಹನ್ನೆರಡು ಹೋಳಾಗಿ ಹೋಗುತ್ತದೆ. (ಕಾವ್ಯದಲ್ಲಿ ಪದ್ಯ 34-40ರ ವರೆಗೆ ಈ ವರ್ಣನೆಚೆನ್ನಾಗಿ ಮೂಡಿದೆ.) ಈ ಹನ್ನೆರಡು ಹೋಳುಗಳನ್ನು ಒಂದು ದ್ವಾರದಲ್ಲಿ ಇಡುತ್ತಾಳೆ.

ಶಿವನ ಕರುಣೆಯಿಂದ ಈ ದಾನಶೀಲೆಗೆ ಹುಟ್ಟಿದ ಮಗು ಸಾಮಾನ್ಯವಾದುದಲ್ಲ. ಆ ‘ಮರಳಲಿಂಗ’ವೇ ಈಕೆಯ ಮಗುವಾಗಿದ್ದಾನೆ. ಅವನ ಆರ್ಭಟವಾದರೂ ಕಡಿಮೆಯೇನಲ್ಲ. ಈ ಕೆಳಗಿನ ಪದ್ಯವನ್ನು ಗಮನಿಸಿ.

ಮೊಲೆಯ ಹಾಲನು ನಲಿದು ಕುಡಿಯದೆ
ಕೆಲೆದು ಬಾಲೆಯ ಮೈಯ ಕಚ್ಚುತ
ಚಲಿತರಕ್ತವ ಬಿಡದೆ ಕುಡಿದನು ಕೇಕೆ ಹಾಕುತಲಿ
ಕಲೆಸಿದಳು ಪುರಜನರನಾಗಲೆ
ಮಳಲಲಿಂಗನುರುಬೆಯನರಿದರು
ಕಳೆಯಬೇಕಿವನಾರ್ಭಟವನೆಂದು ಕಳಕಳಿಸಿದರು

ಇಂಥ ‘ಮಳಲಲಿಂಗನ’ ಆರ್ಭಟವನ್ನು ತಾಳಲಾಗದೆ ಬಿಲದಲ್ಲಿ ಹಾಕಿ ಬಂಡೆ ಎಳೆದು ಮುಚ್ಚುತ್ತಾರೆ. ಅಲ್ಲಿಂದಲೂ ಹೊರ ಬಂದು ಆರ್ಭಟಿಸುತ್ತಾನೆ. ಕಡಲಿಗೆ ಎಸೆಯುತ್ತಾರೆ.  ಅಲ್ಲಿ ಲಿಂಗನು ಕಡಲ ನಡುವಿನ ಬಂಡೆಯನೇರಿ ಕುಳಿತುಕೊಳ್ಳುತ್ತಾನೆ. ಆ ಲಿಂಗಶಿಶುವನ್ನು ದನಕಾಯುವ ನಾಗ ಕಂಡು ಹೆದರುತ್ತಾನೆ. ಹೆದರಬೇಡ ‘ಹರುಷದಿಂದಲಿ ಕರೆದುಕೊಂಡೊಯ್ದೆನ್ನ ಭಜಿಸೆಂದು’ ಭರವಸೆನೀಡುತ್ತಾನೆ. ಆಗಲಿ ಎಂದು ಆಶ್ರಯ ಕೊಟ್ಟ ನಾಗನ ಪಶುಗಳನ್ನೆಲ್ಲಾ ಪಾರ್ಥಲಿಂಗ ನುಂಗಿ ಬಿಡುತ್ತಾನೆ. ಇಲ್ಲಿರಲಾಗದೆಂದು ಸಂಚಾರಿಯಾದ ಪಾರ್ಥಲಿಂಗ ರಕ್ಕಸಿಯ ಸಂಹಾರ ಮಾಡಿ ಜನರ ಹಿತಕಾಯುತ್ತಾನೆ. ಅಲ್ಲಿಂದ ಬಾಗೇಪಲ್ಲಿ ರೆಡ್ಡೆರ ಜಾಗದಲ್ಲಿ ನೆಲೆ ನಿಲ್ಲುತ್ತಾನೆ. ಅಲ್ಲಿರಲಾಗದೆಂದು ಮತ್ತೆ ಉಪ್ಪಾರ ಚಿಕ್ಕನಿಗೆ ಒಲಿದು, ಇವನ ಮೂಲಕ ಜಾತಿ–ಧರ್ಮಗಳ ಸಂಕೋಲೆಯನ್ನು ಮೀರುವ ವಿವೇಕವನ್ನು ಕೊಡುವ ಮರಳಲಿಂಗ ಜಾತ್ಯತೀತ ತತ್ವವನ್ನು ಸಾರುತ್ತಾನೆ. ಇಲ್ಲಿಂದ ಮತ್ತೆ ತೇಕಲವಟ್ಟಿ, ದೊಡ್ಡತೇಕಲವಟ್ಟಿ, ಹುತ್ತೇರಿಗುಡ್ಡ, ಹರಿಯಬ್ಬೆ, ಕರಡಿ ಬುಳ್ಳಪ್ಪನ ರೊಪ್ಪ ಹೀಗೆ ಪಾರ್ಥಲಿಂಗನ ಯಾತ್ರೆ ಕೂಡ್ಲ ಹಳ್ಳಿಯ ನದಿಗಳ ತಟಕ್ಕೆ ಸಾಗುತ್ತದೆ.

ಇಡೀ ಕಾವ್ಯ ಕಾಡು-ನಾಡು, ಬಡವ-ಬಲ್ಲಿದ, ವಿನಯ–ಅಹಂಕಾರ, ಭಕ್ತಿ–ದಾಷ್ಟ್ರ್ಯ, ಮುಂತಾದ ಹಲವಾರು ವೈರುಧ್ಯ ಮತ್ತು ಸಮರಸದ ಕಥನವನ್ನು ಒಳಗೊಂಡಿದೆ. ಜಾತಿಸಂಕರ ಮಾಡಿ ಜಾತ್ಯತೀತರನ್ನು ಅಪ್ಪಿಕೊಳ್ಳುವ, ಕತ್ತಲನ್ನು ಕಳೆಯುವ, ಬಾಳಿನಲ್ಲಿ ಬೆಳಕನ್ನು ಬೀರುವ, ದ್ವೇಷವನ್ನು ಕಳೆದು ಪ್ರೀತಿಯನು ಬೆಳೆಸುವ ಪಾರ್ಥಲಿಂಗ ಮಹಿಮಾಪುರುಷನಾಗಿ ಚಿತ್ರಿತನಾಗಿದ್ದಾನೆ.

ಈ ಪಾರ್ಥಲಿಂಗನು ಜಂಗಮನಾಗಿ ಕಷ್ಟವೆಂದವರ ಕರುಣೆಯಿಂದ ಸಲುಹುತ್ತಾನೆ. ದುಷ್ಟರಿಗೆ ಶಿಕ್ಷೆ ನೀಡಿ ಸರಿದಾರಿಗೆ ತರುತ್ತಾನೆ. ಇಷ್ಟಪಟ್ಟವರಿಗೆ ಮುಕ್ತಿ ನೀಡುತ್ತಾನೆ. ಇಲ್ಲಿ ಬರುವ ಕೊರಚೆ ತಿಮ್ಮವ್ವ ಎಂಬ ಶರಣೆಯ ಪ್ರಸಂಗ ಈ ಕಾವ್ಯದ ಮನೋಜ್ಞ ಚಿತ್ರಣವಾಗಿದೆ. ಪರಮ ಪಾರ್ಥಲಿಂಗನ ಆರಾಧನೆ ಮಾಡುವ ಕೊರಚೆ ತಿಮ್ಮವ್ವ ಕಡುಬಡವಿ, ಆದರೂ ಪರಮಭಕ್ತೆ. “ಹರಕು ಸೀರೆಯ ಶರಣೆ, ಬರೆದಳಾ ಭಗವಂತನ ಮನದಿ, ಸೆರಗನೆಳೆಯುತ ತುಪ್ಪದಾರತಿಯೆತ್ತಿ ಬೆಳಗಿದಳು” ಎಂಬುದು ಆಕೆಯ ಭಕ್ತಿ ಶ್ರೀಮಂತಿಕೆಯ ಸಂಕೇತವಾಗಿದೆ. ಆದರೆ ಭಕ್ತಿಗೆ ಸೋಲುವ ಪಾರ್ಥಲಿಂಗ ಮುಕ್ತಿಯ ಅರಸುವ ತಿಮ್ಮವ್ವನ ಬದುಕಿಗೆ ದಾರಿ ತೋರಿಸುತ್ತಾನೆ.

ಹೀಗೆ ಈ ಇಡೀ ಕಾವ್ಯ ಕಾಡು-ನಾಡು, ಬಡವ-ಬಲ್ಲಿದ, ವಿನಯ–ಅಹಂಕಾರ, ಭಕ್ತಿ–ದಾಷ್ಟ್ರ್ಯ, ಮುಂತಾದ ಹಲವಾರು ವೈರುಧ್ಯ ಮತ್ತು ಸಮರಸದ ಕಥನವನ್ನು ಒಳಗೊಂಡಿದೆ. ಜಾತಿಸಂಕರ ಮಾಡಿ ಜಾತ್ಯತೀತರನ್ನು ಅಪ್ಪಿಕೊಳ್ಳುವ, ಕತ್ತಲನ್ನು ಕಳೆಯುವ, ಬಾಳಿನಲ್ಲಿ ಬೆಳಕನ್ನು ಬೀರುವ, ದ್ವೇಷವನ್ನು ಕಳೆದು ಪ್ರೀತಿಯನು ಬೆಳೆಸುವ ಪಾರ್ಥಲಿಂಗ ಮಹಿಮಾಪುರುಷನಾಗಿ ಚಿತ್ರಿತನಾಗಿದ್ದಾನೆ. ಜ್ಞಾನ-ಭಕ್ತಿ ಎರಡನ್ನೂ ಆಶಯವಾಗುಳ್ಳ ಈ ಕಾವ್ಯ ಭೂತ, ವರ್ತಮಾನ ಹಾಗೂ ಭವಿಷ್ಯತ್ತಿನ ತ್ರಿಕಾಲ ಸೂತ್ರದ ಹೆಣಿಗೆಯಲ್ಲಿ ರೂಪಗೊಂಡಿದೆ.

ಪುರಾಣದಲ್ಲಿ ಚರಿತ್ರೆಯನ್ನು, ಚರಿತ್ರೆಯಲ್ಲಿ ವರ್ತಮಾನವನ್ನು ಸೇರಿಸಿ ಕಾವ್ಯರಚನೆ ಮಾಡುವುದು ಕನ್ನಡಕಾವ್ಯ ಪರಂಪರೆಯಲ್ಲಿ ಹೊಸದೇನಲ್ಲ. ಪಂಪನಂಥ ಕವಿಗಳು ಇದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಯಶಸ್ಸು ಪಡೆದಿದ್ದಾರೆ. ಈ ಕಾವ್ಯದಲ್ಲಿಯೂ ಅಂತಹ ಸೂಚನೆ ಕಾಣಿಸುತ್ತದೆ. ಪುರಾಣ ಮತ್ತು ಚರಿತ್ರೆಯ ಕಥೆಯನ್ನು ಹೇಳುವಾಗ ವಾಸ್ತವಿಕ ಸಂಗತಿಗಳು ಕಥೆಗೆ ಸಂಬಂಧಿಸಿರದಿದ್ದರೂ ಅದನ್ನು ಪೂರಕವಾಗಿ ತರುವ ಮೂಲಕ ಕಾವ್ಯವನ್ನು ಜೀವಂತಿಕೆಗೊಳಿಸುವ, ಅದನ್ನು ಕಾಲಾತೀತಗೊಳಿಸುವ ನೆಲೆ ಶಕ್ತವಾದ ಕವಿಗೆ ಮಾತ್ರ ಸಾಧ್ಯ. ಈ ಪ್ರಯತ್ನ ಕಾವ್ಯದ ಮೂರನೇ ಅಧ್ಯಾಯದಲ್ಲಿ 85 ರಿಂದ 98ರ ವರೆಗಿನ ಪದ್ಯಗಳಲ್ಲಿ ಕಾಣಬಹುದು.

ಕವಿಯೇ ಹೇಳುವಂತೆ ‘ನಿಜವಾದ ಕಾವ್ಯ ವರ್ತಮಾನವನ್ನು ಒಳಗೊಂಡಾಗಲೇ ಅದು ಸಾರ್ಥಕವಾಗುತ್ತದೆ. ಯಾವುದೇ ಪುರಾಣ ಚರಿತ್ರೆಯನ್ನು ಕುರಿತು ಒಂದು ಕಾವ್ಯ ಹೇಳುತ್ತಿದ್ದರೂ, ಓದುಗರಿಗೆ ತನ್ನ ಕಣ್ಣ ಮುಂದಿನ ಅನುಭವಗಳ ಸಾರ ಇಲ್ಲದಿದ್ದರೆ ಓದುಗನ ಎದೆಯ ದನಿಯಾಗಲು ಸಾಧ್ಯವಿಲ್ಲ. ’ಈ ಆಶಯದೊಂದಿಗೆ ಕಾವ್ಯ ಸಾರ್ಥಕ್ಯ ಪಡೆದಿದೆ. ಕಾವ್ಯ ಎಂಬುದು ಬರೀ ರಂಜನೆಗಾಗಿ ಅಲ್ಲದೆ, ಅದು ಮನಸ್ಸನ್ನು ಬೆಸೆಯುವ, ಸಮಾಜವನ್ನು ವಿಕಾಸಗೊಳಿಸುವ, ಭಕ್ತಿಗೆ ಮುಕ್ತಿ ಕಲ್ಪಿಸುವ ಆ ಮೂಲಕ ಆನಂದ ಹೊಂದುವ ಧೋರಣೆ ಇಲ್ಲಿ ಕಾಣಿಸುತ್ತದೆ.

Leave a Reply

Your email address will not be published.