ಸಮೂಹ ಮಾಧ್ಯಮಗಳು ಮತ್ತು ಕನ್ನಡ ಭಾಷೆ

ಕನ್ನಡಿಗರ ಸಹಾಯದಿಂದ ಬದುಕುತ್ತಿರುವ ಮಾಧ್ಯಮಗಳು ಕನ್ನಡದ ಅಭಿವೃದ್ಧಿಗೆ ಯಾವ ಕೊಡುಗೆಯನ್ನೂ ನೀಡುತ್ತಿಲ್ಲ, ಬದಲು ಭಾಷೆಯನ್ನೇ ಕಲುಷಿತಗೊಳಿಸುತ್ತಿವೆ.

ಪ್ರಸ್ತಾವನೆ

ಪ್ರಾದೇಶಿಕ ಭಾಷಾ ಮಾಧ್ಯಮಗಳ ಮಹತ್ವದ ಬಗ್ಗೆ ನಾವಿಂದು ಚರ್ಚೆ ನಡೆಸಬೇಕಾಗಿಲ್ಲ. ‘ರಾಷ್ಟ್ರೀಯ’ ಎಂದು ಕರೆಯಿಸಿಕೊಳ್ಳುವ ಯಾವುದೇ ಮಾಧ್ಯಮಗಳಿಗಿಂತ ಇವು ಹೆಚ್ಚು ಪ್ರಭಾವಶಾಲಿಗಳು. ಏಕೆಂದರೆ ಇವು ಜನ ಭಾಷೆಯಲ್ಲಿ ಮಾತಾಡುತ್ತವೆ. ಜನರನ್ನು ಮುಟ್ಟುವ, ಸಂಘಟಿಸುವ ಮತ್ತು ಅವರನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ಶಕ್ತಿಯೂ ಇವಕ್ಕಿವೆ. ವಸಾಹತು ಕಾಲದಲ್ಲಿ ಬ್ರಿಟಿಷರ ವಿರುದ್ಧ ಜನ ಸಂಘಟನೆ ಮಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮಗಳ ಕೊಡುಗೆ ಅನನ್ಯವಾದುದು. ಪ್ರಾದೇಶಿಕತೆಯನ್ನು ಬಿಟ್ಟುಕೊಡದೆ, ರಾಷ್ಟ್ರೀಯ ಪ್ರಜ್ಞೆಯನ್ನು ರೂಪಿಸುವಲ್ಲಿ ಭಾರತದ ಎಲ್ಲ ಭಾಷೆಗಳ ಪತ್ರಿಕೆಗಳು ಬಹಳ ಕೆಲಸ ಮಾಡಿದವು. ಹಾಗಾಗಿಯೇ ಅವು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದುವು.

1875ರಷ್ಟು ಹಿಂದೆಯೇ ಭಾರತದಲ್ಲಿ ಸುಮಾರು 374 ಪತ್ರಿಕೆಗಳು ದೇಸೀ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದು ಅವುಗಳಲ್ಲಿ ಸುಮಾರು 70 ಪತ್ರಿಕೆಗಳು ಆಗಾಗ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ನಿಷೇಧಕ್ಕೆ ಒಳಗಾಗುತ್ತಿದ್ದುವು, ಆದರೆ ಆಗಣ ಯಾವ ರಾಷ್ಟ್ರಿಯ ಪತ್ರಿಕೆಗಳ ಬಗ್ಗೆಯೂ ಬ್ರಿಟಿಷರು ತಲೆಕೆಡಿಸಿಕೊಂಡಿರಲಿಲ್ಲ ಎಂದು ಆಧುನಿಕ ಭಾರತದ ಬಗ್ಗೆ ಆಳವಾಗಿ ಅಭ್ಯಾಸ ನಡೆಸಿದ ಪ್ರೊ. ಮೃದುಲಾ ಮುಖರ್ಜಿ ಹೇಳುತ್ತಾರೆ. ಕರ್ನಾಟಕದಲ್ಲಿಯೂ ಕೂಡಾ 20ನೆಯ ಶತಮಾನದ ಆರಂಭದ ಕಾಲದಲ್ಲಿ ದಿವಾನ್ ರಂಗಾಚಾರ್ಲು, ದಿವಾನ್ ಕೆ.ಶೇಷಾದ್ರಿ ಅಯ್ಯರ್, ದಿವಾನ್ ಪಿ.ಎನ್.ಕೃಷ್ಣಮೂರ್ತಿ ಮೊದಲಾದವರು ಪತ್ರಿಕೆಗಳ ಬಗ್ಗೆ ತೀವ್ರ ಅಸಹನೆ ಹೊಂದಿದ್ದರು. ಈ ಅಸಹನೆ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, 1908ರಲ್ಲಿ ‘ಮೈಸೂರು ಸಂಸ್ಥಾನದ ಪತ್ರಿಕಾ ಪ್ರತಿಬಂಧಕ ಶಾಸನ’ ವು ಜ್ಯಾರಿಗೆ ಬಂತು. ಈ ಶಾಸನದ ಪ್ರಕಾರ, ಸರಕಾರವು ಯಾವಾಗ ಬೇಕಾದರೂ ಪತ್ರಿಕೆಯೊಂದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿತ್ತು ಮತ್ತು ಪತ್ರಕರ್ತರನ್ನು ಗಡಿಪಾರು ಮಾಡಬಹುದಿತ್ತು.

ಅಂದರೆ, ಚಾರಿತ್ರಿಕವಾಗಿ ದೇಸೀ ಭಾಷೆಗಳ ಪತ್ರಿಕೆಗಳು ಆಡಳಿತ ವ್ಯವಸ್ಥೆಗೆ ವಿರುದ್ಧವಾಗಿಯೇ ಕೆಲಸ ಮಾಡುತ್ತಾ, ಅದರ ಹುಳುಕುಗಳನ್ನು ಬಯಲಿಗೆಳೆಯುತ್ತಿದ್ದುವು. ಜನರನ್ನು ಬಹಳ ಹತ್ತಿರದಿಂದ ನೋಡುವ ಪ್ರಾದೇಶಿಕ ಮಾಧ್ಯಮಗಳಿಗೆ ಜನರ ನಾಡಿಮಿಡಿತ ಚೆನ್ನಾಗಿ ತಿಳಿದಿರುತ್ತದೆ. ಜೊತೆಗೆ ತಾನು ಮಾಡುವ ವರದಿ, ಪ್ರಕಟಣೆ, ಸುದ್ದಿ ಸಂಗ್ರಹಣಾ ವಿಧಾನ, ಜಾಹೀರಾತು ಮೊದಲಾದ ಚಟುವಟಿಕೆಗಳ ಕುರಿತ ಪ್ರತಿಕ್ರಿಯೆಯೂ ಅವಕ್ಕೆ ತಕ್ಷಣ ದೊರೆಯುತ್ತವೆ. ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಕಾರಣ, ಪ್ರಾದೇಶಿಕ ಭಾಷೆಗಳ ಜನರ ಬೆಂಬಲದಿಂದಲೆ ಬೆಳೆಯುವ ಪತ್ರಿಕೆಗಳು ಇವತ್ತು ಪ್ರಾದೇಶಿಕ ಸಂಸ್ಕೃತಿಯ ಒಳಿತಿಗೆ ಏನು ಕೊಡುಗೆ ನೀಡುತ್ತಿವೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ.

ಕನ್ನಡ ಪತ್ರಿಕೆಗಳ ಭಾಷಾ ಪ್ರೀತಿ

ಚಾರಿತ್ರಿಕವಾಗಿ, ಕನ್ನಡ ಪತ್ರಿಕೆಗಳು ಆರಂಭದಲ್ಲಿ ಧರ್ಮಪ್ರಚಾರಕ್ಕಾಗಿ ದುಡಿದುವು. ಆಮೇಲೆ ಅವು ಕರ್ನಾಟಕದ ಏಕೀಕರಣ, ಕನ್ನಡ ನಾಡಿನ ಅಭಿವೃದ್ಧಿ, ಮತ್ತು ಕನ್ನಡ ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದುವು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ (1843) ಬಾಸೆಲ್ ಮಿಶನ್ನಿನ ಒಡೆತನಕ್ಕೆ ಸೇರಿದ್ದರೂ ಅದೆಂದೂ ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಳಕೆಯಾಗಿರಲಿಲ್ಲ. ಕನ್ನಡಿಗರ ಕರ್ಮಕತೆ ಬರೆದ ಕನ್ನಡದ ಕಟ್ಟಾಳು ವೆಂಕಟರಂಗೋಕಟ್ಟಿ ಅಥವಾ ಗಳಗನಾಥರು ಸಂಪಾದಿಸುತ್ತಿದ್ದ ಕನ್ನಡ ಜ್ಞಾನ ಬೋಧಕ (1861) ಹಾಗೂ ಪ್ರಸಿದ್ಧ ವಿದ್ವಾಂಸ ಬಿ.ಎಚ್.ರೈಸ್ ಅವರು ಸಂಪಾದಿಸುತ್ತಿದ್ದ ಅರುಣೋದಯ (1862) ಪತ್ರಿಕೆಗಳು ಆಧುನಿಕ ಕನ್ನಡಕ್ಕೆ ಬುನಾದಿ ಹಾಕಿದ ಪ್ರಸಿದ್ಧ ಪತ್ರಿಕೆಗಳು.

ಮುಂದೆ ಡೆಪ್ಯುಟಿ ಚೆನ್ನಬಸಪ್ಪ ಅವರ ಬೆಂಬಲದ ಜೀವನ ಶಿಕ್ಷಣ, ಮೈಸೂರಿನ ಎಂ.ವೆಂಕಟಕೃಷ್ಣಯ್ಯನವರ ಹಿತಬೋಧಿನಿ (1883), ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ (1896), ಡಿ.ವಿ.ಗುಂಡಪ್ಪ ಅವರ ಭಾರತಿ (1907) ತಿರುಮಲೆ ತಾತಾಚಾರ್ಯ ಶರ್ಮರ ವಿಶ್ವಕರ್ನಾಟಕ (1925), ಬಿ.ಎನ್.ಗುಪ್ತರ ಪ್ರಜಾಮತ (1931), ರಂಗನಾಥ ದಿವಾಕರರ ಕರ್ಮವೀರ (1921). ಆಲೂರು ವೆಂಕಟರಾಯರ ಜಯಕರ್ನಾಟಕ (1922), ಕಡೆಂಗೋಡ್ಲು ಶಂಕರ ಭಟ್ಟರ ರಾಷ್ಟ್ರಬಂಧು (1928), ಮೊದಲಾದ ಪತ್ರಿಕೆಗಳು ಕನ್ನಡ ಭಾಷೆಯನ್ನು ಬೆಳೆಸಿದ ರೀತಿಯನ್ನು ಪತ್ರಿಕೋದ್ಯದಲ್ಲಿ ಕೆಲಸ ಮಾಡುತ್ತಿರುವವರು ಅಗತ್ಯವಾಗಿ ಗಮನಿಸಿಬೇಕು.

ದೇಶಾಭಿಮಾನಿ (1898), ತಾಯಿನಾಡು (1926), ಶುಭೋದಯ (1914), ನವಜೀವನ (1929), ಸತ್ಯಾಗ್ರಹ (1921), ಉದಯ ಭಾರತ (1927), ದೇಶಬಂಧು (1926) ಸಂಯುಕ್ತ ಕರ್ನಾಟಕ (1929), ಪ್ರಜಾವಾಣಿ (1948) ಮೊದಲಾದ ಪತ್ರಿಕೆಗಳು ಕನ್ನಡ ಭಾಷೆಯನ್ನು ಆಧುನಿಕಗೊಳಿಸುತ್ತಲೇ ಸಮಕಾಲೀನ ಕನ್ನಡಿಗರ ಆಶೋತ್ತರಗಳಿಗೆ ಧ್ವನಿಯಾದರು. ಆದರೆ ಇವತ್ತು ಕರ್ನಾಟಕದಲ್ಲಿರುವ ಸುಮಾರು 1500ಕ್ಕೂ ಹೆಚ್ಚಿನ ಪತ್ರಿಕೆಗಳು ಏನು ಮಾಡುತ್ತಿವೆ?

ಕನ್ನಡ ಟಿ.ವಿ. ವಾಹಿನಿಗಳು ಮತ್ತು ಕನ್ನಡ

1990ರ ದಶಕದ ಜಾಗತೀಕರಣದ ಆನಂತರ ಭಾರತೀಯ ಪತ್ರಿಕೋದ್ಯಮ ಬದಲಾದಂತೆ, ಕನ್ನಡ ಪತ್ರಿಕೋದ್ಯಮವೂ ಬದಲಾಯಿತು. ಸ್ಥಳೀಯ ಸಂಸ್ಕೃತಿಯ ಅಭಿವೃದ್ಧಿಯ ವಿಷಯಗಳನ್ನು ಕೈಬಿಟ್ಟು ಅವು ಉದ್ಯಮಗಳ ಕಡೆ ಮುಖಮಾಡಿದುವು. ಅದುವರೆಗೆ ಪ್ರಬಲವಾಗಿದ್ದ ಮುದ್ರಣ ಮಾಧ್ಯಮಗಳನ್ನು ಟಿವಿಗಳು ಆಕ್ರಮಿಸಿಕೊಂಡವು. ಬಂಡವಾಳಶಾಹಿಗಳು ದೊಡ್ಡ ಮಟ್ಟದಲ್ಲಿ ಸಮೂಹ ಮಾಧ್ಯಮಗಳ ಮೇಲೆ ಹಣ ಸುರಿಯಲು ಆರಂಭಿಸಿದಾಗ, ಮಾಧ್ಯಮಗಳು ಹಣ ಸುರಿದವರ ಮುಂದೆ ಮಂಡಿಯೂರಿ ಕುಳಿತುಕೊಳ್ಳಲು ಆರಂಭಿಸಿದರು.

ದೊಗಳೆ ಅಂಗಿ ಮತ್ತು ಜೋಳಿಗೆ ಹಾಕಿಕೊಂಡು, ಲಾಭವೋ ನಷ್ಟವೋ ಯೋಚಿಸದೆ, ನಾಡುನುಡಿಗೆ ಸೇವೆ ಸಲ್ಲಿಸುತ್ತಿದ್ದ ಪತ್ರಿಕೆಗಳ ಜಾಗದಲ್ಲಿ ಕಾರ್ಪೋರೇಟ್ ಸಂಸ್ಕೃತಿಯ, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಬಡವರ ಬಗ್ಗೆ ಮಾತಾಡುವ ನಿರೂಪಕರು ಕಾಣಿಸಿಕೊಂಡರು. ಕನ್ನಡದ ನಡುವೆ ಬೇಕಾದಷ್ಟು ಇಂಗ್ಲಿಷ್ ಪದಗಳನ್ನೂ ಸೇರಿಸುತ್ತಾ, ನೋಡುವವರ ನಡುವೆ ತಾನು ಮಹಾ ಬುದ್ಧಿವಂತನೆಂದು ಕೃತಕವಾಗಿ ಬಿಂಬಿಸುತ್ತಾ, ಬಗೆಬಗೆಯ ಆದೇಶಗಳನ್ನೂ, ನ್ಯಾಯ ತೀರ್ಮಾನಗಳನ್ನೂ ಕೊಡುತ್ತಾ, ಅವಶ್ಯ ಬಿದ್ದಾಗ ಬ್ಲಾಕ್ ಮೇಲ್ ತಂತ್ರಗಳನ್ನು ಅನುಸರಿಸುತ್ತಾ ಬೆಳೆದ ಮಾಧ್ಯಮಗಳು ನಾಡು ನುಡಿಗಳನ್ನು ಬೆಳಸುವ ತನ್ನ ಜವಾಬ್ದಾರಿಗಳಿಂದ ದೂರ ಸರಿಯುತ್ತಲೇ ಹೋದುವು.

ಇಂದಿನ ಮಾಧ್ಯಮಗಳಿಗೆ ಬಂಡವಾಳಶಾಹಿಗಳು ಹೊಸ ಸಿದ್ಧಾಂತವೊಂದನ್ನು ಕಲಿಸಿದ್ದಾರೆ. ಅದೆಂದರೆ ಹೇಗಾದರೂ ಮಾಡಿ ದುಡ್ಡು ಮಾಡು! ಅದಕ್ಕಾಗಿ ಬೇಕಾದರೆ, ಜನರ ನಡುವೆ ಜಗಳ ಹಚ್ಚು, ಕೋಮುವಾದ ಹೆಚ್ಚಿಸು, ಆಳುವವರನ್ನು ಕೀರ್ತಿಸು, ಜ್ಯೋತಿಷಿಗಳನ್ನು ಕೂರಿಸಿ ಮೂಢ ನಂಬಿಕೆಗಳನ್ನು ಪಸರಿಸು, ಜನಗಳನ್ನು ಮೋಸ ಮಾಡಲು ಬೇಕಾದಂತ ಸುಳ್ಳುಗಳನ್ನೋ ಪರಿಭಾಷೆಗಳನ್ನೋ ಸೃಷ್ಟಿಸು, ಏನಾದರೂ ಮಾಡು. ಆದರೆ ಹಾಕಿದ ಹಣ ಹಿಂದಿರುಗುವಂತೆ ಮಾಡು ಅಷ್ಟೆ. ಹಣ ಹಾಕಿದವರ ಋಣ ತೀರಿಸಬೇಕಾದ್ದು ಸಂಬಳ ಪಡೆಯುವವರ ಕರ್ತವ್ಯ ತಾನೇ?

ಇಂಥಲ್ಲಿ ಸಹಜವಾಗಿಯೇ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ, ತತ್ವಶಾಸ್ತ್ರದ ವಿವಿಧ ಸತ್ಯಗಳನ್ನು ಅನ್ವೇಷಿಸುವ, ಭಾಷೆ ಮತ್ತು ಸಾಹಿತ್ಯಕ್ಕೆ ಯಾವ ಮಹತ್ವವೂ ಇರುವುದಿಲ್ಲ. ಅದರ ಬದಲು ಇವೀಗ ಸ್ಥಳೀಯ ಸಂಸ್ಕೃತಿಗಳನ್ನೇ ಹೊಸಕಿ ಹಾಕಲು ಸುರುಮಾಡಿವೆ. ಕನ್ನಡದಲ್ಲಿ ಬರೆಯಲೇನೂ ತೊಂದರೆಯಿಲ್ಲದಿದ್ದರೂ, ಅನೇಕ ಟಿವಿಗಳ ಹೆಸರುಗಳು ಇಂಗ್ಲಿಷಿನಲ್ಲಿಯೇ ಇವೆ. ನಿರೂಪಕರು ಮಧ್ಯೆ ಮಧ್ಯೆ ಎಷ್ಟೊಂದು ಇಂಗ್ಲಿಷ್ ಪದಗಳನ್ನು ಬಳಸುತ್ತಾರೆಂದರೆ, ಇಂಗ್ಲಿಷಿನ ನಡುವೆ ಒಂದೊಂದು ಕನ್ನಡ ಪದಗಳು ಮಾತ್ರ ಕಾಣಿಸುವಂತಾಗಿವೆ.

ಒಂದು ಚಾನೆಲ್‍ನ ನಿರೂಪಕರೊಬ್ಬರು ಇತ್ತೀಚೆಗೆ ಹಿಂದಿಯಲ್ಲೂ ಮಾತಾಡಲೂ ಆರಂಭಿಸಿದ್ದಾರೆ. ಈ ನಡುವೆ, ಭಾಷೆ ಮತ್ತು ಸಂಸ್ಕೃತಿಗಳ ಕುರಿತು ಜನಗಳ ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತ ಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಮಾಧ್ಯಮಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು ಎಲ್ಲರೂ ಮರೆತಿದ್ದಾರೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಮಾಧ್ಯಮಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಆದರೆ ಈಗ ಬೌದ್ಧಿಕ ಸಂವಾದಗಳೆಲ್ಲಿ? ನೈತಿಕತೆಯೆಲ್ಲಿ?

ಅರಚಾಟ ಕಿರುಚಾಟಗಳ ನಡುವೆ, ಆರೋಪ ಪ್ರತ್ಯಾರೋಪಗಳ ನಡುವೆ, ಹುಸಿ ಪ್ರತಿಷ್ಠೆಗಳ ನಡುವೆ ವಿದ್ಯುನ್ಮಾನ ಮಾಧ್ಯಮಗಳು ಸೊರಗಿವೆ. ಸಾರ್ವಜನಿಕ ಲಜ್ಜೆ ಎಂಬುದೇ ಇವಕ್ಕೆ ಇಲ್ಲ. ಇವತ್ತು ಕನ್ನಡಿಗರ ಸಹಾಯದಿಂದ ಬದುಕುತ್ತಿರುವ ಮಾಧ್ಯಮಗಳು ಕನ್ನಡದ ಅಭಿವೃದ್ಧಿಗೆ ಯಾವ ಕೊಡುಗೆಯನ್ನೂ ನೀಡುತ್ತಿಲ್ಲ, ಬದಲು ಭಾಷೆಯನ್ನೇ ಕಲುಷಿತಗೊಳಿಸುತ್ತಿವೆ.

ಕೇವಲ ಹತ್ತು ನಿಮಿಷಗಳ ಕಾಲ ಕನ್ನಡದ ಟಿ.ವಿ. ವಾಹಿನಿಗಳನ್ನು ಗಮನಿಸಿ. ಅವುಗಳಲ್ಲಿ ಕನ್ನಡ ಕಾಣುವುದೇ ಕಡಿಮೆ. ಇಂಗ್ಲಿಷಿನಲ್ಲಿಯೇ ರಾರಾಜಿಸುವ ವಾಹಿನಿಗಳ ಹೆಸರುಗಳ ಜೊತೆಗೆ, ಬ್ರೇಕಿಂಗ್ ನ್ಯೂಸ್, ನೇಶನ್ @9, ಟ್ರಂಪ್ ಕಾರ್ಡ್, ಸುಪ್ರಿಂ ಕೋರ್ಟ್, ವೋಟಿಂಗ್, ಸ್ಟಾರ್ಸ್, ಬಾಕ್ಸ್‍ನಲ್ಲಿ, ಕಟ್, ಬ್ಲಾಸ್ಟ್ ಅಂಡ್ ಟ್ವಿಸ್ಟ್, ಎಕ್ಸಕ್ಲೂಸಿವ್, ರೆಡ್ ಅಲರ್ಟ್, ಸೆಕ್ಸ್ ಕಹಾನಿ, ಸ್ಟಾರ್ ಪತ್ರಕರ್ತ, ಕಮಿಂಗ್ ಅಪ್, ಫೈಟ್ ಜಲಕ್, ಬಿಗ್ ಸ್ಟೋರಿ, ಏಕ್ಷನ್, ಕನ್ನಡ ಡೈಲಾಗ್ಸ್, ಟೋಪ್ ನ್ಯೂಸ್, ಲಾಂಚ್ ಮಾಡೋದು, ಬ್ಲಾಸ್ಟ್, ಖದರ್, ಪವರ್ ಸೆಂಟರ್, ರೈಟಿಂಗ್ ರಾಕ್ಷಸ, 3 ಬೋಟ್, ಓಪನ್, ಎಂಗೇಜ್‍ಮೆಂಟ್, ಸಮನ್ಸ್, ರಿಪೋರ್ಟ್, ಸ್ಟಾರ್ ಹೋಟೆಲ್, ಕ್ಯೂಟ್ ಜೋಡಿ, ಗ್ರೀನ್ ಸ್ಯಾರಿ, ಹೀಗೆ ನೂರಾರು ಪದಗಳು ಕಿರುತೆರೆಯ ಮೇಲೆ ಕಾಣಿಸುತ್ತಲೇ ಇರುತ್ತವೆ.

ಈ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಅತ್ಯುತ್ತಮ ಪದಗಳು ಇದ್ದಾಗಲೂ ಇವರೆಲ್ಲ ಯಾಕೆ, ಯಾರಿಗಾಗಿ ಈ ಪದಗಳನ್ನು ಬಳಸಿ ಕನ್ನಡವನ್ನು ಹಾಳುಮಾಡುತ್ತಾರೋ ತಿಳಿಯದು. ಚರ್ಚೆಗೆ ಅತಿಥಿಗಳು ಬಂದಾಗ ‘ವೆಲ್ ಕಂ’ ಅಂತಾರೆ, ‘ಹೌ ಆರ್ ಯು?’ ಎಂದೂ ಕೇಳುತ್ತಾರೆ. ‘ಏನು ಬಂದಿರಿ, ಹದುಳವಿದ್ದಿರೇ ಎಂದು ಕೇಳಿದರೆ ನಿಮ್ಮ ಮೈಸಿರಿ ಹಾರಿ ಹೋಹುದೇ?’ ಎಂದ ಬಸವನ ನಾಡು ನಮ್ಮದು ಎಂಬುದನ್ನು ಇವರೆಲ್ಲ ಯಾಕೆ ಮರೆಯುತ್ತಾರೋ ತಿಳಿಯುತ್ತಿಲ್ಲ.

ಈ ಟಿವಿ ವಾಹಿನಿಗಳಿಗೆ ಹೋಲಿಸಿದರೆ, ಪತ್ರಿಕೆಗಳ ಕನ್ನಡ ಸಮಾಧಾನ ತರುವಂತಿದೆ. ಅವು ಅನೇಕ ಹೊಸ ಪದಗಳನ್ನು ಕನ್ನಡಕ್ಕೆ ಕೊಟ್ಟಿವೆ. ಆದರೂ ಕೆಲವೆಡೆ ಲವಲಗಿಏ, ಕ್ಯಾಂಪಸ್ ಛಿoಟಿಟಿeಛಿಣ, ಸ್ಟೂಡೆಂಟ್ಸು, ಸಖತ್ ಫಾಲೋಯೆರ್ಸ್, ಹೆಚ್ಚು ಲೈಕ್ಸ್, ಎವರ್ ಗ್ರೀನ್, ಲುಕ್ ರಿವೀಲ್ ಮಾಡಿದ, ಟ್ರೆಡೀಶನಲ್ ಲುಕ್, ಪುತ್ರ ಕಮ್ ಬ್ಯಾಕ್, ಪ್ರಾಕ್ಟಿಕಲ್ ಮೊದಲಾದ ಪದಗಳನ್ನು ಮುದ್ರಣದಲ್ಲಿ ಕಂಡಾಗ ಕಸಿವಿಸಿ ಉಂಟಾಗುತ್ತದೆ. ಇದು ಭಾಷಾ ಮಡಿವಂತಿಕೆಯ ಪ್ರಶ್ನೆಯಲ್ಲ, ಬದಲು ಔಚಿತ್ಯದ ಪ್ರಶ್ನೆಯಾಗಿದೆ.

ಸ್ವಯಂ ವೈರುಧ್ಯಗಳ ನಡುವೆ

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಆಳುವ ಶಕ್ತಿಶಾಲೀ ಭಾಷೆಯಾಗಿ ಇಂಗ್ಲಿಷ್ ಹಾಗೂ ಹುಸಿ ರಾಷ್ಟ್ರೀಯತೆಯ ಪರಿಣಾಮವಾಗಿ ಹಿಂದಿಯೂ ಪ್ರಭಾವಶಾಲೀ ಭಾಷೆಗಳಾಗಿ ಹೊರಹೊಮ್ಮಿವೆ. ಇವೆರಡಕ್ಕೂ ತಮ್ಮನ್ನು ಸುಲಭವಾಗಿ ಒಪ್ಪಿಸಿಕೊಂಡ ಮಾಧ್ಯಮಗಳು ಕನ್ನಡದಂಥ ಭಾಷೆಯ ಮಹತ್ವವನ್ನೇ ಅರಿಯದ ಮಟ್ಟಕ್ಕೆ ತಲುಪಿದ್ದಾರೆ. ಪಂಪ, ರನ್ನ, ಬಸವ, ಅಕ್ಕ, ಹರಿಹರ, ಕುಮಾರವ್ಯಾಸ, ಕುವೆಂಪು, ಲಂಕೇಶ್ ಮೊದಲಾದವರು ತಮ್ಮ ಕಾಲದ ಅನುಭವಗಳಿಗೆ ಕನ್ನಡದಲ್ಲಿಯೇ ಹೇಗೆ ಧ್ವನಿಯಾದರು ಎಂದು ಗೊತ್ತಿರುವ ಎಷ್ಟು ಜನ ಇವತ್ತು ಮಾಧ್ಯಮಗಳಲ್ಲಿ ದುಡಿಯುತ್ತಿದ್ದಾರೆ? ಯಾವುದೇ ವಾಹಿನಿಗೆ ಸೇರುವ ಮುನ್ನ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅವರಿಗೆ ಯಾರಾದರೂ ತಿಳಿ ಹೇಳುತ್ತಾರೆಯೇ?

ಈ ಬಗೆಯ ಬೇಜವಾಬ್ದಾರೀ ಭಾಷಾ ಬಳಕೆಯ ಬಹಳ ದೊಡ್ಡ ಅಪಾಯವೆಂದರೆ, ಸಜೀವವಾಗಿರುವ ಕನ್ನಡದಂಥ ಭಾಷೆ ನಿಧಾನವಾಗಿ ಪತನಮುಖಿಯಾಗುವುದು. 1971 ಮತ್ತು 2011ರ ನಡುವೆ ಭಾರತೀಯ ಭಾಷೆಗಳಲ್ಲಿಯೇ ಅತಿ ಕಡಿಮೆ ಬೆಳವಣಿಗೆ ತೋರಿಸಿದ್ದು ನಮ್ಮ ಕನ್ನಡ (ಹಿಂದಿ 45% ಬೆಳವಣಿಗೆ ತೋರಿಸಿದರೆ, ಕನ್ನಡ ಕೇವಲ 3.5% ಏರಿಕೆ ತೋರಿಸಿದೆ). ಇದು ನಮ್ಮ ಚಿಂತೆಗೆ ಕಾರಣವಾಗಬೇಕು.

ಕನ್ನಡದ ಒಳಗೆ ಅನ್ಯ ಭಾಷಾ ಪದಗಳು ವಿವೇಚನೆಯಿಲ್ಲದೆ ಸೇರಿಕೊಂಡಾಗ ಕನ್ನಡವು ತನ್ನ ನೆಲದಿಂದ ಬೇರ್ಪಟ್ಟು, ಸೀಮಾತೀತವಾಗುವುದರ ಕಡೆ ಮುಖ ಮಾಡಿ, ಸ್ಥಳೀಯ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವಿಶಿಷ್ಟತೆಗಳೆಲ್ಲ ಮರೆಯುತ್ತಾ, ಪೇಲವವಾಗುತ್ತದೆ. ಇವುಗಳ ಪರಿಣಾಮವಾಗಿ ನಿಂತ ನೆಲದ ಬಗ್ಗೆ ಗೌರವವಿಲ್ಲದ, ಮಣ್ಣಿನ ವಾಸನೆಯ ಅರಿವಿಲ್ಲದ ಪ್ರಜೆಗಳು ನಿರ್ಮಾಣವಾಗುತ್ತಾರೆ.

ಇವತ್ತಿನ ಕನ್ನಡ ಮಾಧ್ಯಮಗಳು ಅನೇಕ ವಿರೋಧಾಭಾಸಗಳಿಂದ ಕೂಡಿವೆ. ಜ್ಯೋತಿಷಿಗಳಿಗೆ ಸಾಕಷ್ಟು ಜಾಗ ಕೊಡುವ ಅವು, ಚಂದ್ರಾಯಣವನ್ನು ವೈಜ್ಞಾನಿಕ ಸಾಧನೆಯೆಂದು ಬಣ್ಣಿಸುತ್ತವೆ. ಕಾರಿನ ಮೇಲೆ ಕಾಗೆ ಕುಳಿತರೆ ಭಾರೀ ಚರ್ಚೆ ನಡೆಸಿ, ರಾಫೇಲ್ ವಿಮಾನದ ಚಕ್ರದ ಕೆಳಗೆ ನಿಂಬೆ ಹುಳಿ ಇಟ್ಟದ್ದರ ಬಗ್ಗೆ ಜಾಣ ಮೌನ ವಹಿಸುತ್ತವೆ. ಬಂಡವಾಳಶಾಹಿಗಳ ಬಿಗಿ ಹಿಡಿತದಲ್ಲಿ ಕುಳಿತು ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ನಡೆಸುವುದು, ಮುಕ್ತ ಮಾರುಕಟ್ಟೆಯ ಲಾಭ ಪಡೆದು ಏಕ ಸ್ವಾಮಿತ್ವದ ಪರ ವಕಾಲತು ನಡೆಸುವುದು ಇತ್ಯಾದಿಗಳನ್ನು ನಾವು ದಿನನಿತ್ಯ ನೋಡುತ್ತೇವೆ. ಇವುಗಳನ್ನು ಸರಿ ಮಾಡಿಕೊಳ್ಳದೇ ಹೋದರೆ, ಮಾಧ್ಯಮಗಳು ಸ್ವಯಂ ವೈರುಧ್ಯಗಳಿಂದಲೇ ಸತ್ತು ಹೋಗುತ್ತವೆ.

*ಲೇಖಕರು ಕನ್ನಡ ಪ್ರಾಧ್ಯಾಪಕರು, ಭಾರತೀಯ ಭಾಷೆಗಳ ಕೇಂದ್ರ, ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ನವದೆಹಲಿ.

4 Responses to " ಸಮೂಹ ಮಾಧ್ಯಮಗಳು ಮತ್ತು ಕನ್ನಡ ಭಾಷೆ

-ಪುರುಷೋತ್ತಮ ಬಿಳಿಮಲೆ

"

Leave a Reply

Your email address will not be published.