ಸಮೂಹ ರೋಗನಿರೋಧಕ ಶಕ್ತಿ ನೆಚ್ಚಿಕೊಳ್ಳಬಹುದೇ?

-ಹೇಮಂತ್ ಎಲ್. ಚಿಕ್ಕಬೆಳವಂಗಲ

ಕೋವಿಡ್ 19 ಸಾಂಕ್ರಾಮಿಕವು ವಿಶ್ವದ ಇತರೆ ದೇಶಗಳಲ್ಲಿ ಬಾಧಿಸಿದಂತೆ ಭಾರತದಲ್ಲಿ ತೊಂದರೆ ಕೊಟ್ಟಿಲ್ಲ. ಇದಕ್ಕೆ ಭಾರತೀಯರ ರೋಗನಿರೋಧಕ ಶಕ್ತಿ ಮತ್ತು ವಾತಾವರಣ ಎರಡೂ ಕಾರಣ. ಈ ನಡುವೆ ಲಸಿಕೆಗೆ ಮೊದಲೇ ದೇಶಾದ್ಯಂತ ಸಮೂಹ ರೋಗ ನಿರೋಧಕ ಶಕ್ತಿ ಪಸರಿಸಿದೆ ಎಂಬ ಹೊಸ ಚರ್ಚೆಯೊಂದು ಶುರುವಾಗಿದೆ.

ಅನ್ಯಜೀವಿಯೊಂದು ನಮ್ಮ ದೇಹದ ಮೇಲೆ ದಾಳಿ ಮಾಡಿದರೆ ಅದನ್ನು ಪ್ರತಿರೋಧಿಸುವ ಜೈವಿಕ ಕ್ರಿಯೆ ನಡೆಯುತ್ತದೆ. ಇದನ್ನು ಪ್ರತಿರೋಧಕ ಶಕ್ತಿ ಎನ್ನುತ್ತಾರೆ. ಭಾರತೀಯರಲ್ಲಿ ಈ ಪ್ರತಿರೋಧಕ ಗುಣ ಅಧಿಕವಾಗಿರುವುದರಿಂದಲೇ ರೋಗ ತೀವ್ರತೆ ಹೆಚ್ಚಾಗದೆ, ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ. ಕೋವಿಡ್ ಲಸಿಕೆ ಕಂಡುಹಿಡಿಯುವಷ್ಟರಲ್ಲಿ ರೋಗವು ಇಡೀ ಸಮೂಹಕ್ಕೆ ಹರಡಿ, ಜನಸಾಮಾನ್ಯರಲ್ಲೇ ಅದಕ್ಕೆ ಬೇಕಾದ ಪ್ರತಿರೋಧವೊಂದು ಸ್ವಾಭಾವಿಕವಾಗಿ ಸೃಷ್ಟಿಯಾಗಿ ರೋಗದ ಹರಡುವಿಕೆಗೆ ಕಡಿವಾಣ ಬೀಳುತ್ತದೆ ಎಂಬುದು ಕೆಲವರ ವಾದ. ಇದನ್ನು ಸಮೂಹ ರೋಗನಿರೋಧಕ ಶಕ್ತಿ (Herd Immunity) ಎಂದು ಕರೆಯಲಾಗುತ್ತದೆ.

ಭಾರತದ ಈಗಿನ ಪರಿಸ್ಥಿತಿಯಲ್ಲಿ ಕೋವಿಡ್ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಇಳಿಕೆಮುಖವಾಗುತ್ತಿರುವುದಕ್ಕೆ ಕಾರಣಗಳು ಬೇರೆಯೇ ಇವೆ ಎನಿಸುತ್ತದೆ. ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡಾಗ ಸರಕಾರ ಮಾಡಿದ ಮೊದಲ ಕೆಲಸವೆಂದರೆ ಖಿಇSಖಿ-ಖಿಖಂಅಇ-ಖಿಖಇಂಖಿ ಎಂಬ 3ಖಿ ಸೂತ್ರವನ್ನು ಅನುಸರಿಸಿದ್ದು. ಅಂದರೆ ಸೋಂಕು ಇದೆಯೇ ಎಂದು ಪರೀಕ್ಷಿಸಿ, ನಂತರ ಅವರಿಂದ ಮತ್ತೊಬ್ಬರಿಗೆ ಹರಡಿರಬಹುದಾದ ಜಾಡನ್ನು ಪತ್ತೆಹಚ್ಚಿ, ಸೋಂಕಿತರಿಗೆ ಚಿಕಿತ್ಸೆ ನೀಡುವುದು. ಮೊದಮೊದಲಿಗೆ ಈ ಸೂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಿದ ಸರ್ಕಾರಗಳು ಸೋಂಕಿತರ ಸಂಖ್ಯೆಯಲ್ಲಿ ಉಂಟಾದ ಗಣನೀಯ ಏರಿಕೆಯಿಂದ ಒತ್ತಡಕ್ಕೆ ಸಿಲುಕಿದ್ದಲ್ಲದೆ, ಪರೀಕ್ಷೆ, ಕಾಂಟ್ಯಾಕ್ಟ್ ಟ್ರೇಸಿಂಗ್ ಮತ್ತು ಚಿಕಿತ್ಸೆಗಾಗಿ ಅಪಾರ ಪ್ರಮಾಣದ ಸಂಪನ್ಮೂಲಗಳನ್ನು ವಿನಿಯೋಗಿಸಿದವು. ಸಂಪನ್ಮೂಲ ಕರಗುತ್ತಾ ಬಂದಂತೆ ನಿಧಾನವಾಗಿ ತನ್ನ ಯೋಜನೆಗಳನ್ನು ಸರಳೀಕರಣಗೊಳಿಸತೊಡಗಿದವು.

ಮೊದಲು ಸೋಂಕಿತರಿಗೆ, ಮತ್ತವರ ಪ್ರಥಮ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕದ ಎಲ್ಲ ವ್ಯಕ್ತಿಗಳಿಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ ಒಂದು ಅಧ್ಯಯನದ ಪ್ರಕಾರ ಈಗ ಸೋಂಕಿತರಿಗೆ ಮಾತ್ರ ಪರೀಕ್ಷೆ ಮಾಡಿ ಅವರ ಕುಟುಂಬಕ್ಕೆ ಪರೀಕ್ಷಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗುತ್ತಿದೆ. RTPCR ಪರೀಕ್ಷೆಯ ಫಲಿತಾಂಶ ತಡವಾಗುವ ಕಾರಣಕ್ಕೆ RAT(RAPID ANTIGEN TEST) ಕಿಟ್ ಗಳನ್ನು ಉಪಯೋಗಿಸುತ್ತಿದೆ. ಆದರೆ RTPCR ಮತ್ತು RAT ಕಿಟ್‍ಗಳ ಫಲಿತಾಂಶದ ನಿಖರತೆಯಲ್ಲಿ 80:20 ವ್ಯತ್ಯಾಸವಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಾದರೂ ನಿಖರ ಫಲಿತಾಂಶದಲ್ಲಿನ ಕೊರತೆಯಿಂದಾಗಿ ಕೋವಿಡ್ ಕೇಸುಗಳು ಗಣನೀಯವಾಗಿ ಇಳಿಕೆಯಾಗುತ್ತಿವೆ. ಇನ್ನು ಕೋವಿಡ್‍ನಿಂದ ಆಗುತ್ತಿರುವ ಸಾವುಗಳೂ ಸಹ ಸರಿಯಾಗಿ ದಾಖಲಾಗುತ್ತಿಲ್ಲ. ಆದರೆ ಭಾರತದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖರಾದವರ ಸಂಖ್ಯೆಯು ವಿಶ್ವದಲ್ಲೇ ಹೆಚ್ಚಿದ್ದು, ರೋಗ ನಿರೋಧಕ ಶಕ್ತಿಯ ಬಗ್ಗೆ ಭರವಸೆಯಂತೂ ಮೂಡಿದೆ. ಇವೆಲ್ಲ ಅಂಶಗಳನ್ನು ಪರಿಶೀಲಿಸಿದರೆ ಸಮೂಹ ರೋಗ ನಿರೋಧಕ ಶಕ್ತಿ ಬಂದಿದೆ ಎಂದು ನಿರ್ಧರಿಸುವುದು ತುಸು ಕಷ್ಟ.

ನೈಸರ್ಗಿಕ ಸಮೂಹ ರೋಗ ನಿರೋಧಕ ಶಕ್ತಿಯನ್ನು ದುಡಿಸಿಕೊಳ್ಳುವ ವಿಫಲ ಪ್ರಯೋಗ: ಕೋವಿಡ್ 19 ಸಾಂಕ್ರಾಮಿಕವು ತಾರಕಕ್ಕೇರಿ ಲಾಕ್ ಡೌನ್ ವಿಧಿಸಿದ್ದ ಸಂದರ್ಭದಲ್ಲಿಯೇ, ಅದರ ಅವಶ್ಯಕತೆ ಇಲ್ಲ, ಜನರನ್ನು ಸೋಂಕಿಗೆ ಒಳಗಾಗಲು ಬಿಡಿ, ಅವರಲ್ಲಿನ ರೋಗನಿರೋಧಕ ಶಕ್ತಿ ಸ್ವಾಭಾವಿಕವಾಗಿ ವೃದ್ಧಿಸಿ ತಂತಾನೇ ರೋಗದ ಪಸರಿಸುವಿಕೆ ಕಡಿಮೆಯಾಗುತ್ತದೆ ಎಂಬ ವಾದಗಳು ಕೇಳಿಬಂದುವು. ಕೋವಿಡ್ ಒಂದು ಯಃಕಶ್ಚಿತ್ ಉಸಿರಾಟದ ತೊಂದರೆ ಉಂಟುಮಾಡುವ ಜ್ವರ ಎಂದು ಸಾಮಾಜಿಕ ಅಂತರ ಕಾಪಾಡದೆ ನಿರ್ಲಕ್ಷ್ಯ ತೋರಲಾಯಿತು. ಇದರಿಂದ ಗಳಿಸಿಕೊಂಡಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು.

ಸ್ವಾಭಾವಿಕ ಸಮೂಹ ರೋಗ ನಿರೋಧಕ ಶಕ್ತಿಯನ್ನು ದೊಡ್ಡದಾಗಿ ಸಮರ್ಥನೆ ಮಾಡಿದ ಮೊದಲ ದೇಶ ಸ್ವೀಡನ್. ಆದರೆ ಯಾವಾಗ ತನ್ನ ನೆರೆಯ ದೇಶಗಳಿಗಿಂತ ಹತ್ತು ಪಟ್ಟು ಹೆಚ್ಚಿನ ಸಾವುಗಳು ಉಂಟಾದವೋ, ಸಾಂಕ್ರಾಮಿಕದಿಂದಾಗಿ ತನ್ನ ಜಿಡಿಪಿ ಕುಸಿಯಿತೋ ಆಗ ಮೊದಲ ಲಾಕ್ಡೌನ್ ಘೋಷಣೆ ಮಾಡಿತು. ಬ್ರೆಜಿಲ್ ಕೂಡಾ ಇದೇ ಹಾದಿ ತುಳಿಯಿತು. ಜರ್ಮನಿ ಮತ್ತು ಫ್ರಾನ್ಸ್ ನಂತಹ ಯೂರೋಪಿನ ದೇಶಗಳು ಕೂಡಾ ಸಮೂಹ ರೋಗ ನಿರೋಧಕ ಶಕ್ತಿಯನ್ನು ನಗದೀಕರಿಸಲು ಪ್ರಯತ್ನಿಸಿ ವಿಫಲವಾಗಿವೆ. ಅಮೆರಿಕದ ವಿಜ್ಞಾನಿಗಳ ಗುಂಪೊಂದು ನೈಸರ್ಗಿಕ ಸಮೂಹ ರೋಗ ನಿರೋಧಕ ಶಕ್ತಿಯನ್ನು ಹೇಗೆ ಆರೋಗ್ಯ ರಕ್ಷಣೆಗೆ ವಿನಿಯೋಗಿಸಿಕೊಳ್ಳಬೇಕು ಎಂದು ವಿವರಿಸುವ ದಾಖಲೆ ದಿ ಗ್ರೇಟ್ ಬ್ಯಾರಿಂಗ್ಟನ್ ಡಿಕ್ಲರೇಶನ್ (ಖಿhe ಉಡಿeಚಿಣ ಃಚಿಡಿಡಿiಟಿgಣoಟಿ ಆeಛಿಟಚಿಡಿಚಿಣioಟಿ) ಇನ್ನೂ ಒಪ್ಪಿತವಾಗಿಲ್ಲ.

ಕೋವಿಡ್ ಲಸಿಕೆಗಳು ಮತ್ತು ಸಮೂಹ ರೋಗ ನಿರೋಧಕ ಶಕ್ತಿ: ಯಾವುದೇ ಸಾಂಕ್ರಾಮಿಕ ರೋಗದ ಲಸಿಕೆಗಳ ಯಶಸ್ಸು ಕೂಡಾ ಸಮೂಹ ರೋಗ ನಿರೋಧಕ ಶಕ್ತಿಯ ಮೇಲೆಯೇ ಅವಲಂಬಿತವಾಗಿದೆ. ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‍ನಲ್ಲಿ ಪ್ರಕಟವಾಗಿರುವ ಡಾ.ಸಾದ್ ಓಮರ್ ಮತ್ತಿತರ ಸೋಂಕುಶಾಸ್ತ್ರಜ್ಞರ ಒಂದು ಸಂಶೋಧನಾ ವರದಿಯ ಪ್ರಕಾರ `ಸಮೂಹ ರೋಗನಿರೋಧಕದ ಮಿತಿ’ ( Herd Immunity Threshold) ಯ ಮೇಲೆ ಲಸಿಕೆಗಳು ಯಶಸ್ವಿಯಾಗುತ್ತವೆ.  ಜನಸಂಖ್ಯೆಯ ಒಂದು ಪ್ರಮಾಣದ ವ್ಯಕ್ತಿಗಳು ತಮ್ಮಲ್ಲಿರುವ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯಿಂದ, ರೋಗದ ಹರಡುವಿಕೆಯ ಸರಪಳಿಯನ್ನು ತುಂಡರಿಸುತ್ತಾರೆ. ಈ ವ್ಯಕ್ತಿಗಳ ಪ್ರಮಾಣ ಹೆಚ್ಚಿದಂತೆಲ್ಲ ಸಾಂಕ್ರಾಮಿಕದ ಸ್ಫೋಟವು ಕಡಿಮೆಯಾಗಿ, ರೋಗಾಣುವಿನ ಹರಡುವಿಕೆಗೆ ಕಡಿವಾಣ ಬೀಳುತ್ತದೆ. ಸರಳವಾದ ಮಾದರಿಯಲ್ಲಿ ಹೇಳುವುದಾದರೆ, `ಸಮೂಹ ರೋಗನಿರೋಧಕದ ಮಿತಿ’ಯು ರೋಗಾಣುವಿನ ಮೂಲ ಸಂತಾನೋತ್ಪತ್ತಿ (R0) ಯ ಮೇಲೆ ಅವಲಂಬಿತವಾಗಿದ್ದು (1 – 1/R0) ಎಂಬ ಸೂತ್ರದಿದಂದ ಅಳೆಯಲಾಗುತ್ತದೆ. ಇಲ್ಲಿ ಖ0 ಎಂದರೆ ಒಬ್ಬ ಸೋಂಕಿತನಿಂದ ಸೋಂಕಿಗೊಳಗಾಗುವ ಜನರ ಸರಾಸರಿ ಸಂಖ್ಯೆ.

ದಡಾರದಂತಹ ಸಾಂಕ್ರಾಮಿಕದ ರೋಗ ನಿರೋಧಕ ಮಿತಿಯು 12-18 (ಚಿತ್ರ-1). ಅಂದರೆ ದಢಾರವನ್ನು ಹತೋಟಿಗೆ ತರಬೇಕಾದರೆ ಅತಿ ದೊಡ್ಡ ಪ್ರಮಾಣದ ಜನಸಂಖ್ಯೆಗೆ ರೋಗನಿರೋಧಕ ಶಕ್ತಿಯು ಇರಬೇಕಾಗುತ್ತದೆ. ಕೋವಿಡ್-19 ಶುರುವಾದಾಗಿನಿಂದಲೂ ನಡೆದ ಅಧ್ಯಯನಗಳ ಪ್ರಕಾರ ರೋಗ ನಿರೋಧಕ ಮಿತಿಯು 2-3ರ ಆಸುಪಾಸಿನಲ್ಲಿದೆ. ಯಾವುದೇ ಲಸಿಕೆ ಇಲ್ಲದೆಯೇ ಸಮೂಹ ರೋಗನಿರೋಧಕ ಶಕ್ತಿಯ ಪ್ರಮಾಣ 60-70% ಇರುತ್ತದೆ. ಆದರೆ ಇದರ ಕಾಲಾವಧಿಯು ಅತ್ಯಲ್ಪ ಪ್ರಮಾಣದ್ದಾಗಿದ್ದು, ಲಸಿಕೆಯು ಲಭ್ಯವಿಲ್ಲದಿದ್ದಲ್ಲಿ ರೋಗವು ಪುನಃ ಆಸ್ಫೋಟಿಸುತ್ತದೆ.

ಸಾಂಕ್ರಾಮಿಕ ರೋಗವೊಂದನ್ನು ಹತೋಟಿಯಲ್ಲಿಟ್ಟು, ಅದರ ನಿರ್ನಾಮ ಮಾಡಲು ದೀರ್ಘಕಾಲದವರೆಗೆ ಸಮೂಹ ರೋಗನಿರೋಧಕ ಶಕ್ತಿಯನ್ನು ಉನ್ನತ ಮಟ್ಟದಲ್ಲೇ ಇಟ್ಟುಕೊಳ್ಳಬೇಕಾಗುತ್ತದೆ. ಲಸಿಕೆಯು ಇದಕ್ಕೆ ಬೇಕಾದ ಪೂರಕ ಸಾಮಥ್ರ್ಯವನ್ನು ಒದಗಿಸುತ್ತದೆ. ಅದನ್ನು ಈ ಕೆಳಗಿನ ಚಿತ್ರಗಳಲ್ಲಿ ಕಾಣಬಹುದು.

ಕೆಲವು ಆರೋಗ್ಯವಂತ ವ್ಯಕ್ತಿಗಳು ಲಸಿಕೆಯಿಲ್ಲದೆ ನೈಸರ್ಗಿಕ ರೋಗ ನಿರೋಧಕ ಶಕ್ತಿ ಹೊಂದಿದ್ದರೂ, ಸೋಂಕಿತರ ಸಂಪರ್ಕಕ್ಕೆ ಬಂದಾಗ ಕೆಲ ಕಾಲಾನಂತರ ರೋಗಕ್ಕೆ ತುತ್ತಾಗಬಹುದು. ಅವರೊಂದಿಗೆ ಬಹಳಷ್ಟು ಮಂದಿಯು ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ.

ಆದರೆ ಸಮೂಹವೊಂದರ ಆರೋಗ್ಯಕರ ಸಾಮಾನ್ಯ ವ್ಯಕ್ತಿಗಳಿಗೆ ಲಸಿಕೆಯನ್ನು ನೀಡಿದರೆ ಅವರಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚುವುದರಿಂದ ರೋಗದ ಹರಡುವಿಕೆಯನ್ನು ನಿಯಂತ್ರಣದಲ್ಲಿಡಬಹುದು. ಹೀಗೆ ಲಸಿಕೆಗಳ ಮೂಲಕ ಸಮೂಹ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಬಹುದು. ಇದನ್ನು ಪ್ರಚೋದಿತ ಸಮೂಹ ರೋಗ ನಿರೋಧಕ ಶಕ್ತಿ ಎನ್ನುತ್ತಾರೆ (Induced Herd Immunity). ಇದರೊಂದಿಗೆ ಸೋಂಕಿತರನ್ನು ಬೇರ್ಪಡಿಸಿ ಚಿಕಿತ್ಸೆ ನೀಡುವ ಮೂಲಕ ಸಾಂಕ್ರಾಮಿಕವನ್ನು ಹತೋಟಿಗೆ ತರಬಹುದು.

ಸಾಮೂಹಿಕ ರೋಗ ನಿರೋಧಕ ಶಕ್ತಿ ಸ್ವಾಭಾವಿಕವಾಗಿಯೇ ಇರುವಾಗ, ಲಸಿಕೆಯ ಮೇಲೆ ಅವಲಂಬನೆ ಅನಗತ್ಯ, ಎಂಬ ಹುಸಿ ಭರವಸೆಯು ಮೂಡಿದರೆ ಜನರು ಕೋವಿಡ್‍ನ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳುತ್ತಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ, ಮಾಸ್ಕ್ ಧರಿಸದೆ ತಿರುಗಾಡುವ ಪ್ರವೃತ್ತಿ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿಯು ಕುಂದುವಲ್ಲಿ ವಾಯು ಮಾಲಿನ್ಯ, ಆಹಾರ ಪದ್ಧತಿ ಮತ್ತಿತರ ನೈಸರ್ಗಿಕ ಅಂಶಗಳು ತಮ್ಮದೇ ಪಾತ್ರ ವಹಿಸುತ್ತವೆ. ಕಾಲಕ್ರಮೇಣ ಕೊರೋನಾ ವೈರಸ್ ಆಕ್ರಮಣಕಾರಿಯಾಗಿ ರೂಪಾಂತರ ಹೊಂದಬಹುದು (mutate). ಅಕಸ್ಮಾತ್ ವೈರಸ್ ಆಕ್ರಮಣಕಾರಿಯಾಗಿ ಬದಲಾದರೆ ಅದನ್ನು ಪ್ರತಿರೋಧಿಸುವ ಸ್ವಾಭಾವಿಕ ರೋಗನಿರೋಧಕ ಶಕ್ತಿಯಲ್ಲಿ ಕುಂದುಂಟಾಗಬಹುದು. ಇದರಿಂದ ತಮ್ಮನ್ನು ಸೋಂಕಿಗೆ ಒಡ್ಡಿಕೊಳ್ಳುವ ಸಂಭವವೇ ಹೆಚ್ಚು.

ಈಗಾಗಲೇ ಆಗ್ನೇಯ ಇಂಗ್ಲೆಂಡಿನಲ್ಲಿ ಹೊಸ ರೀತಿಯ ಕೊರೋನಾ ವೈರಾಣು ಕಾಣಿಸಿಕೊಂಡ ಪರಿಣಾಮ ನಾಲ್ಕನೆಯ ನಿರ್ಬಂಧವನ್ನು ಹೇರಲಾಗಿದೆ. ವಿಶ್ವದ ಸೋಂಕಿತರ ಸಂಖ್ಯೆ 75 ಕೋಟಿ ದಾಟಿದೆ. ಸಾವಿನ ಪ್ರಮಾಣಗಳು ಮತ್ತೊಮ್ಮೆ ಏರುಗತಿಯಲ್ಲಿ ಸಾಗಿವೆ. ಈ ಪರಿಸ್ಥಿತಿಯಲ್ಲಿ ಕೇವಲ ಸ್ವಾಭಾವಿಕ ಸಮೂಹ ರೋಗನಿರೋಧಕ ಶಕ್ತಿಯನ್ನು ನೆಚ್ಚಿಕೊಂಡು ಕೂರುವುದು ಸಾಧುವಲ್ಲ.

*ಲೇಖಕರು ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದವರು; ಎಲೆಕ್ಟ್ರಿಕಲ್-ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರು. ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಕನ್ನಡದ ಭರವಸೆಯ ವಿಜ್ಞಾನ ಲೇಖಕರು.

Leave a Reply

Your email address will not be published.