ಸರಕಾರದ ಬಾಗಿಲಿಗೆ ಹೋಗಿಲ್ಲ

ಹುಬ್ಬಳ್ಳಿಯ ನಿವಾಸಿ 58 ವರ್ಷದ ರೇವಣಸಿದ್ಧಪ್ಪ ನಾಯ್ಕರ ಜಾತಿಯಿಂದ ಲಿಂಗಾಯತ ಬಣಜಿಗನಾದರೂ, ತನ್ನ ಸಮಾಜ ಮುಖ್ಯವಾಹಿನಿಯಲ್ಲಿದ್ದರೂ ಬಡತನವೇನೂ ಹೋಗಿಲ್ಲವೆಂದು ಬಹಳ ದುಃಖದ ದನಿಯಲ್ಲಿ ಹೇಳುತ್ತಾರೆ.

ರೇವಣಸಿದ್ಧಪ್ಪ ನಾಯ್ಕರ ಅವರ ಮೂಲ ಊರು ಹಳ್ಯಾಳದ ಕಡಪಟ್ಟಿಯಾಗಿದ್ದು, ತಾಯಿಯ ತವರೂರು ಹುಬ್ಬಳ್ಳಿಯ ರಾಯನಾಳ. ತನ್ನ ಹುಟ್ಟಿದ ದಿನದಿಂದಲೇ ಹೆಣ್ಣಜ್ಜಿ ಮನೆಯಲ್ಲಿ ಬೆಳೆದು ಎರಡನೇ ಕ್ಲಾಸ್‍ವರೆಗೆ ಕಲಿತು ಅದೇ ಹಳ್ಳಿಯ ಹೊಲಗಳಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು.

ಮುಂದೆ 18 ವರ್ಷಕ್ಕೆ ಕೆ.ಇ.ಸಿ. ಕಿಲೋಸ್ಕರ ಎಲೆಕ್ಟ್ರಿಕ್ ಕಂಪನಿಯಲ್ಲೂ ದಿನಕ್ಕೆ 6 ರೂಪಾಯಿ ಸಂಭಾವನೆ ಮೇರೆಗೆ ದಿನಗೂಲಿ ನೌಕರನಾಗಿ ಸೇರಿಕೊಂಡು 10 ವರ್ಷ ಕೆಲಸಮಾಡಿ ತನ್ನ ದಿನಗೂಲಿ 40 ರೂಪಾಯಿ ಆಗುವಾಗ ಕೆಲಸ ಬಿಟ್ಟು ಸೋದರ ಮಾವನ ಮಾತಿನ ಮೇರೆಗೆ ಹಳ್ಯಾಳದ ಕಡಪಟ್ಟಿಯಲ್ಲಿ ಹೊಲದ ಕೂಲಿಕಾರ್ಮಿಕನಾಗಿ ದುಡಿತ ಪ್ರಾರಂಭಿಸಿದರು. ಆದರೆ ಅಲ್ಲೂ ಸೋದರ ಮಾವನಿಂದ ಮೋಸ ಹೋಗಿ ಮತ್ತೆ ಹುಬ್ಬಳ್ಳಿಯ ಕೆ.ಇ.ಸಿ.ಯಲ್ಲಿ ಕೆಲಸಕ್ಕೆ ಸೇರಿಕೊಂಡರು. 5 ವರ್ಷದ ನಂತರ ಕಂಪನಿ ಮುಚ್ಚಿತು. ಆಗ ಪರಿಚಯಸ್ಥರಾದ ಶಲ್ಲಿಕೇರಿ ಅವರು ಶಿರೂರ್ ಪಾರ್ಕನ ಹತ್ತಿರ ಅವರದೇ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡರು. ಅವರ ಪ್ರೀತಿ ವಿಶ್ವಾಸ ಗೆದ್ದು ಅದೇ ಅಂಗಡಿಯನ್ನು ಬಾಡಿಗೆಗೆ ಪಡೆದರು. ಆದರೆ ಕಾರ್ಪೊರೇಷನ್‍ನವರು ಅಂಗಡಿ ಕಿತ್ತುಹಾಕಿದರು.

ಕಂಪನಿಯಲ್ಲಿ ದುಡಿದು ಉಳಿತಾಯ ಮಾಡಿದ ಹಣದಲ್ಲಿ ಒಂದು ಸ್ವಂತ ಆಟೊ ಖರೀದಿಸಿ ಈಗ ಜೀವನ ನಡೆಸುತ್ತಾರೆ. ಮುಂದೆ ಮಕ್ಕಳಿಗೆ ಹಾಗೂ ಹೆಂಡತಿಗೆ ದಿನಪತ್ರಿಕೆಯ ಮಾರಾಟ ಅಂಗಡಿಯನ್ನು ಹಾಕಿಕೊಟ್ಟಿದ್ದಾರೆ.

ಮನೆ ಕಟ್ಟಬೇಕು, ಮಕ್ಕಳ ಮದುವೆ ಮಾಡಬೇಕು, ತನ್ನ ಸಾಕು ಮಕ್ಕಳಾದ ಶಿವಾನಂದ ಹಾಗೂ ಸಿದ್ಧಮ್ಮಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬ ಹಂಬಲವಿದೆ. ತನ್ನ 58ನೇ ವಯಸ್ಸಿನಲ್ಲೂ, ಅಂತಹ ಬಡತನದಲ್ಲೂ ಪರರಿಗೆ ಸಹಾಯ ಮಾಡುವ ಉನ್ನತ ಗುಣದಿಂದಲೇ ಹುಬ್ಬಳ್ಳಿಯ ಶಿರೂರ ಪಾರ್ಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ರೇವಣಸಿದ್ಧಪ್ಪ ಚಿರಪರಿಚಿತ.

‘ಬಡತನ ಯಾರಿಗೂ ಹೇಳಿಕೊಂಡು ಬರುವುದಿಲ್ಲ. ಅದಕ್ಕೆ ಜಾತಿಯಿಲ್ಲ, ಧರ್ಮವಿಲ್ಲ. ಕ್ಯಾನ್ಸರ್ ಬಿಟ್ಟು ಹೋಗತೈತ್ರಿ, ಆದರ ಈ ಬಡತನ ಎಂಬ ರೋಗ ಬಿಡಿಸಿಕೊಳ್ಳಾಕ್ ಬಹಳ ಕಷ್ಟ ಐತ್ರಿ’ ಎಂದು ತನ್ನ ಜೀವನದ ಒಂದೊದೆ ಎಳೆಗಳನ್ನು ಬಿಚ್ಚಿಟ್ಟ ಹುಬ್ಬಳ್ಳಿಯ ನಿವಾಸಿ 58 ವರ್ಷದ ರೇವಣಸಿದ್ಧಪ್ಪ ನಾಯ್ಕರ ಜಾತಿಯಿಂದ ಲಿಂಗಾಯತ ಬಣಜಿಗನಾದರೂ ತನ್ನ ಸಮಾಜ ಮುಖ್ಯವಾಹಿನಿಯಲ್ಲಿದ್ದರೂ ಬಡತನವೇನೂ ಹೋಗಿಲ್ಲವೆಂದು ಬಹಳ ದುಃಖದ ದನಿಯಲ್ಲಿ ಹೇಳುತ್ತಾರೆ.

ತನ್ನ 25ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡ ರೇವಣಸಿದ್ಧಪ್ಪ ಅವರಿಗೆ ಇಬ್ಬರು ಗಂಡುಮಕ್ಕಳು. ಒಬ್ಬನನ್ನು ಪದವೀಧರನನ್ನಾಗಿಸಿದರೂ ಅವನಿಗೆ ನೌಕರಿ ಇಲ್ಲ. 25 ವರ್ಷದ ವೀರೇಶ ಅನಿವಾರ್ಯವಾಗಿ ತನ್ನ ಗೆಳೆಯರ ಹತ್ತಿರ ಸಾಲಮಾಡಿ ಸ್ವಂತ ಆಟೊ ಖರೀದಿಸಿ ನಡೆಸುತ್ತಿದ್ದಾನೆ. 19 ವರ್ಷದ ಇನ್ನೋರ್ವ ಮಗ ಗಣೇಶ ದಿನಪತ್ರಿಕೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾನೆ. ಹೆಂಡತಿ ನಿರ್ಮಲಾ ಕೂಲಿ ಕೆಲಸ ಬಿಟ್ಟು 10 ವರ್ಷದಿಂದ ದಿನಪತ್ರಿಕೆ ಮಾರಾಟದ ಅಂಗಡಿ ನಡೆಸುತ್ತಿದ್ದಾಳೆ. ಪತ್ರಿಕೆ ವಿತರಣೆ ಅಷ್ಟೇನೂ ಲಾಭ ತಂದು ಕೊಡುವುದಿಲ್ಲ. ಆದರೆ 6 ಜನರ ಒಂದೊತ್ತು ಊಟಕ್ಕೆ ಸರಿದೂಗುತ್ತದೆ ಎಂದು ಹೇಳುತ್ತಾಳೆ ನಿರ್ಮಲಕ್ಕ.

ಮಹಿಳಾ ಸ್ವಸಹಾಯ ಸಂಘದಲ್ಲಿ ಸ್ವಲ್ಪ ಉಳಿತಾಯ ಹಾಗೂ ಸಾಲದ ಮೂಲಕ ಜೀವನಕ್ಕೊಂದಿಷ್ಟು ಸುರಕ್ಷತೆ ಭಾವನೆ ಇದೆ. ತಮ್ಮ ದುಡಿಯುವ ಕೈಗಳು ಅನಾರೋಗ್ಯಕ್ಕೊಳಗಾಗದಿರಲಿ ಎಂದು ಪ್ರಾರ್ಥಿಸುತ್ತ, ತಮ್ಮತಮ್ಮ ಕೆಲಸಕ್ಕೆ ಅಣಿಯಾದರು.

‘ನಾವು ಇಂದಿಗೂ ಸರಕಾರದ ಬಾಗಿಲಿಗೆ ಹೋಗಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ ನಮ್ಮ ಶ್ರಮದ ಜೀವನಕ್ಕೆ ಯಾರೂ ಸಹಾಯ ಮಾಡೋಲ್ಲವೆಂಬುದು ನಮ್ಮ ಬುದ್ಧಿಗೆ ತಿಳಿದಿದೆ’ ಎಂದು ಮಗ ಗಣೇಶ ಹತಾಶೆಯ ಭಾವನೆ ವ್ಯಕ್ತಪಡಿಸುತ್ತಾನೆ. ರೆವಣಸಿದ್ಧಪ್ಪ ತನ್ನ ಪರಿವಾರದೊಂದಿಗೆ ವಾಸವಿರುವುದು ಶಿರೂರ ಪಾರ್ಕಿನಲ್ಲಿರುವ ಹಾವೇರಿಶೆಟ್ಟರ ಅವರ ಖುಲ್ಲಾ ಜಾಗೆಯಲ್ಲಿ ಹಾಕಿಕೊಂಡಿರುವ ಒಂದು ಚಿಕ್ಕ ಗುಡಿಸಲಲ್ಲಿ! ಜೊತೆಗೆ ಅಲ್ಲೆ ದೂಕೂಗಾಡಿಯಲ್ಲಿ ದಿನಪತ್ರಿಕೆ ಅಂಗಡಿಯನ್ನೂ ಇಟ್ಟುಕೊಂಡಿದ್ದಾರೆ.

ಬ್ಯಾಂಕ್ ಬ್ಯಾಲೆನ್ಸಗಳಿಲ್ಲ, ಉಳಿತಾಯದ ಯೋಜನೆಗಳಂತೂ ಬಲುದೂರು. ಸ್ವಂತಮನೆ ಕಟ್ಟಬೇಕು ಎನ್ನುವ ಆಸೆಯಿಂದ ಎಲ್ಲ ದುಡಿಯುವ ಕೈಗಳು ಸೇರಿ ಇತ್ತೀಚೆಗೆ ಒಂದು ಅಕ್ರಮ-ಸಕ್ರಮ ನಿವೇಶನ ಖರೀದಿಸಿದ್ದಾರೆ. ಆದರೆ ಆರ್ಥಿಕ ತೊಂದರೆಯಿಂದ ಮನೆ ಅರ್ಧಕ್ಕೆ ನಿಂತಿದೆ. ಮಳೆಗಾಲ ಮುಗಿಯುವುದರಲ್ಲಿ ಸಂಪೂರ್ಣ ಕಟ್ಟಿ ಚಳಿಗಾಲ ಬರುವುದರೊಳಗಾಗಿ ಮನೆ ಸೇರಿಕೊಳ್ಳುವ ಆಸೆಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಮಹಿಳಾ ಸ್ವಸಹಾಯ ಸಂಘದಲ್ಲಿ ಸ್ವಲ್ಪ ಉಳಿತಾಯ ಹಾಗೂ ಸಾಲದ ಮೂಲಕ ಜೀವನಕ್ಕೊಂದಿಷ್ಟು ಸುರಕ್ಷತೆ ಭಾವನೆ ಇದೆ. ತಮ್ಮ ದುಡಿಯುವ ಕೈಗಳು ಅನಾರೋಗ್ಯಕ್ಕೊಳಗಾಗದಿರಲಿ ಎಂದು ಪ್ರಾರ್ಥಿಸುತ್ತ, ತಮ್ಮತಮ್ಮ ಕೆಲಸಕ್ಕೆ ಅಣಿಯಾದರು.

ಅಸಂಘಟಿತ ವಲಯದ ಶ್ರಮಿಕರಿಗೆ ಬ್ಯಾಂಕುಗಳಲ್ಲಿ ಸಾಲಕ್ಕೆ ಜಾಮೀನು ಕೊಡುವವರು ಯಾರು? ಇಂದಿಗೂ ಯಾವುದೇ ಸರಕಾರಿ ಅಧಿಕಾರಿ ಇವರನ್ನು ಭೇಟಿಯಾಗಿ ಸಹಾಯಹಸ್ತ ಚಾಚಿಲ್ಲ. ಆದರೆ ಕಣ್ಮುಂದೆ ಕಂಡ ಬಡವರ ಮಕ್ಕಳ ಪಾಲನೆಯನ್ನು ಮಾತ್ರ ಈ ದಂಪತಿ ಮಾಡುತ್ತಲೇ ಇದ್ದಾರೆ.

Leave a Reply

Your email address will not be published.