ಸರ್ಕಾರದ ತಪ್ಪು ನೀತಿನಿಲುವು ಸಂಕಟಸ್ಥಿತಿಯ ಮೂಲ

ಟಿ.ಎಸ್.ವೇಣುಗೋಪಾಲ್

ಮೊದಲಿಗೆ ನಾವು ತಪ್ಪಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಬೇಕು. ಆಮೇಲೆ ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಅದಕ್ಕೆ ಪ್ರಾಮಾಣಿಕ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ತಪ್ಪು ಮಾಡುತ್ತಲೇ ಇರುತ್ತೇವೆ.

ಒಂದು ದೇಶದ ಅಥವಾ ಜಗತ್ತಿನ ಆರ್ಥಿಕತೆಯ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಹಲವು ಅಳತೆಗೋಲುಗಳು ಸಾಧ್ಯ. ಸಾಮಾನ್ಯವಾಗಿ ಜಿಡಿಪಿಯನ್ನು ಅಳತೆಗೋಳಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ ವಿತ್ತೀಯ ಕೊರತೆ ಇರಬಹುದು ಅಥವಾ ಇನ್ಯಾವುದೇ ಇರಬಹುದು, ಆರ್ಥಿಕತೆಯ ಪ್ರತಿಯೊಂದು ಅಂಶವನ್ನು ಜಿಡಿಪಿಯ ಶೇಕಡವಾರು ಪ್ರಮಾಣದಲ್ಲೇ ಲೆಕ್ಕ ಹಾಕುವುದು ರೂಢಿ. ಆದರೆ ಅದು ಒಂದು ಸ್ಥೂಲ ಮಾಪಕ ಅಷ್ಟೇ. ಅದು ಜನರ ಬದುಕಿನ ಸ್ಥಿತಿಯನ್ನು, ಆರ್ಥಿಕತೆಯ ಎಷ್ಟೋ ವಿವರಗಳನ್ನು, ವಾಸ್ತವಗಳನ್ನು ಹೇಳುವುದಿಲ್ಲ ಎಂದು ಹಲವು ಅರ್ಥಶಾಸ್ತ್ರಜ್ಞರು ಬಲವಾಗಿ ವಾದಿಸಿದ್ದಾರೆ. ಅದು ಸತ್ಯ ಕೂಡ.

ಹಾಗಾಗಿ ಜಿಡಿಪಿಯ ಜೊತೆಗೆ ಬಡತನ, ಶಿಕ್ಷಣ, ಆರೋಗ್ಯ, ಅಸಮಾನತೆ, ನಿರುದ್ಯೋಗ, ಇತ್ಯಾದಿ ಹಲವು ಅಂಶಗಳನ್ನು ಗಮನಿಸದೇ ಹೋದರೆ ಒಂದು ದೇಶದ ಒಟ್ಟಾರೆ ಆರ್ಥಿಕ ಸ್ಥಿತಿಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ಇದರ ಜೊತೆಗೆ ಜನರಿಗಿರುವ ಸ್ವಾತಂತ್ರ್ಯ, ಮುಕ್ತ ವಾತಾವರಣ, ಸಂಕಷ್ಟದ ಸಮಯದಲ್ಲಿ ಸರ್ಕಾರದ ಸ್ಪಂದನೆ ಇವೆಲ್ಲವೂ ಕೂಡ ಮುಖ್ಯವಾಗುತ್ತದೆ.

ಬೇರೆ ಬೇರೆ ಆರ್ಥಿಕತೆಗಳನ್ನು ಹೋಲಿಸಿ ನೋಡುವುದು ಹೆಚ್ಚು ಸಂಕೀರ್ಣವಾದ ಸಮಸ್ಯೆ. ಹಾಗೆ ಹೋಲಿಸಿ ನೋಡಿದಾಗ ಹಲವು ವಿಷಯಗಳಲ್ಲಿ ನೆರೆಯ ಬಾಂಗ್ಲಾದೇಶ, ಸಿಲೋನ್ ಅಂತಹ ರಾಷ್ಟ್ರಗಳು ನಮಗಿಂತ ಮುಂದಿವೆ. ಕೆಲವು ಕ್ಷೇತ್ರಗಳಲ್ಲಿ ಭಾರತ ಅದಕ್ಕಿರುವ ಸ್ವಾಭಾವಿಕ ಅನುಕೂಲದಿಂದಾಗಿ ಮುಂದಿದೆ. ಒಟ್ಟು ಜಗತ್ತಿನ ಆರ್ಥಿಕತೆಗೆ ಹೋಲಿಸಿದಾಗಲೂ ನಾವು ಇರಬೇಕಾದ ಸ್ಥಿತಿಯಲ್ಲಿ ಇಲ್ಲ. ಅಂದರೆ ನಮ್ಮ ಸಾಮಥ್ರ್ಯದ ಮಟ್ಟಕ್ಕೆ ನಾವು ಬೆಳೆದಿಲ್ಲ. 5 ಟ್ರಿಲಿಯನ್ ಆರ್ಥಿಕತೆ, ರೈತರ ವರಮಾನವನ್ನು ದ್ವಿಗುಣಗೊಳಿಸುವುದು ಇತ್ಯಾದಿ ಗುರಿಗಳು ಕೂಡ ಕೇವಲ ಘೋಷಣೆಗಳಾಗಿವೆಯೇ ಹೊರತು ಅವು ನಮ್ಮ ಆದ್ಯತೆಯೂ ಆಗಿಲ್ಲ ಅನ್ನುವ ಅನುಮಾನ ಬರುತ್ತದೆ.

ಹಿನ್ನೆಲೆಯಲ್ಲಿ ಮೊದಲು ಭಾರತದ ಆರ್ಥಿಕತೆಯನ್ನು ಸ್ಥೂಲವಾಗಿ ಗಮನಿಸಬಹುದು. ಸಮಾಜಮುಖಿ ಎತ್ತಿರುವ ಉಳಿದ ಪ್ರಶ್ನೆಗಳಿಗೆ ಸುಮಾರಾಗಿ ಒಂದೇ ಉತ್ತರ ಸಾಧ್ಯ ಅನ್ನಿಸುತ್ತದೆ. ನಾನು ಅಂಕಿ ಅಂಶಗಳ ಹಿಂದೆ ಹೋಗುವುದಿಲ್ಲ. ಅಧಿಕೃತ ಅಂಕಿ ಅಂಶಗಳ ಬಗ್ಗೆ ಒಟ್ಟಾರೆಯಾಗಿ ವಿಶ್ವಾಸವೂ ಕಡಿಮೆಯಾಗಿದೆ.

ಭಾರತದ ಆರ್ಥಿಕತೆ ತುಂಬಾ ಸಂಕಷ್ಟದಲ್ಲಿದೆ. ಸಾಮಾನ್ಯವಾಗಿ ಇದನ್ನು ಕೋವಿಡ್ ನಂತರದ ಬೆಳವಣಿಗೆ ಎಂಬಂತೆ ನೋಡಲಾಗುತ್ತಿದೆ. ಹಾಗೆ ನೋಡುವುದು ಸಮಸ್ಯೆಯನ್ನು ಸರಳೀಕರಿಸಿದ ಹಾಗೆ. ಪಿಡುಗಿನ ಮೊದಲೇ ನಮ್ಮ ದೇಶದ ಆರ್ಥಿಕತೆ ಸಂಕಟದಲ್ಲಿತ್ತು. ಕೊರೋನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು ಅಥವಾ ನಮ್ಮನ್ನು ಕಾಡುತ್ತಿರುವ ಸಮಸ್ಯೆಯ ವಾಸ್ತವವನ್ನು ಸ್ಪಷ್ಟವಾಗಿ ಅನಾವರಣಗೊಳಿಸಿ, ನಮ್ಮ ಮುಂದೆ ಇಟ್ಟಿತು.

ನಿಜ, ಕೊರೋನ ನಿಯಂತ್ರಿಸಲು ಜಾರಿಗೆ ತಂದ ಲಾಕ್ಡೌನ್ನಿಂದ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ಜನರ ಜೀವನ ಅಸ್ತವ್ಯಸ್ಥಗೊಂಡಿತು. ಲಕ್ಷಾಂತರ ಜನ ನೆಲೆ ಪ್ರಾಣ ಕಳೆದುಕೊಂಡರು. ನಮ್ಮ ಆರ್ಥಿಕತೆಯಲ್ಲಿ ಜನರಿಗೆ ಸುರಕ್ಷತೆಯಿಲ್ಲ, ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಮರ್ಪಪಕವಾಗಿಲ್ಲ, ಸಂಕಷ್ಟದ ಸಮಯವನ್ನು ಎದುರಿಸುವಷ್ಟು ಸಿದ್ದತೆ ನಮಗಿಲ್ಲ ಎನ್ನುವುದು ತುಂಬಾ ಸ್ಪಷ್ಟವಾಯಿತು. ಅಷ್ಟೇ ಅಲ್ಲ, ಎಷ್ಟು ಲಸಿಕೆಗಳು ಬೇಕು, ನಮ್ಮ ಘೋಷಣೆಗೆ ಬೇಕಾದಷ್ಟು ಲಸಿಕೆಗಳು ನಮ್ಮಲ್ಲಿ ಲಭ್ಯವಿದೆಯೇ, ಇತ್ಯಾದಿ ಸಾಮಾನ್ಯ ತಿಳಿವಳಿಕೆಯೂ ನಮಗಿಲ್ಲ ಎಂಬುದು ಸ್ಪಷ್ಟವಾಯಿತು.

ಜನರಿಗೆ ಸಂಕಷ್ಟದ ಸಮಯದಲ್ಲಿ ಬೆಂಬಲ ಬೇಕು. ವಿಶ್ವಾಸ ಮೂಡಿಸಬೇಕು. ಸರ್ಕಾರಕ್ಕೆ ಅದನ್ನು ಕೊಡುವುದಕ್ಕೆ ಸಾಧ್ಯವಾಗಬೇಕು. ಕನಿಷ್ಠ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿದೆ ಎಂಬ ವಿಶ್ವಾಸ ಜನರಲ್ಲಿ ಇರಬೇಕು. ಇದರಲ್ಲಿ ನಾವು ಸೋತಿದ್ದೇವೆ. ಮೊದಲಿಗೆ ನಾವು ತಪ್ಪಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಬೇಕು. ಆಮೇಲೆ ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಅದಕ್ಕೆ ಪ್ರಾಮಾಣಿಕ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ತಪ್ಪು ಮಾಡುತ್ತಲೇ ಇರುತ್ತೇವೆ.

ಅದು ಸಾಧ್ಯವಾಗಬೇಕಾದರೆ ಪರಿಣತರ ಅಭಿಪ್ರಾಯಗಳನ್ನು ಕೇಳುವ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕುರಿತು ಗೌರವ, ಬೇರೆಯವರ ಅಭಿಪ್ರಾಯವನ್ನು ಗೌರವಿಸುವ, ವಿಕೇಂದ್ರೀಕೃತ ಕಾರ್ಯವಿಧಾನ ಇತ್ಯಾದಿ ಬೇಕಾಗುತ್ತವೆ. ಅವುಗಳ ಕೊರತೆ ನಿಜವಾಗಿ ಸಮಸ್ಯೆಗೆ ಕಾರಣ. ವಿಪರೀತ ಕೇಂದ್ರೀಕರಣ, ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ತಾತ್ಸಾರ, ಟೀಕೆಗಳಿಗೆ ಅಸಹನೆ ಇವುಗಳಿಂದಾಗಿ ನಮ್ಮ ಸಮಸ್ಯೆಗಳು ನಮಗೆ ಕಾಣುತ್ತಿಲ್ಲ. ಸರ್ಕಾರವನ್ನು ಒತ್ತಾಯಿಸುವ, ಅವರನ್ನು ತಿದ್ದುವ ಕೆಲಸವನ್ನು ಮಾಡಲು ಯಾರೂ ಮುಂದೆ ಬರುವುದಿಲ್ಲ. ನಿಮ್ಮದೇ ರೀತಿಯಲ್ಲಿ ಯೋಚಿಸುತ್ತಿರುವ, ನಿಮ್ಮನ್ನು ಮೆಚ್ಚುವ ಮಂದಿ, ಹೊಗಳುಭಟ್ಟರು ಸುತ್ತುವರಿದಿರುತ್ತಾರೆ. ನಿಮ್ಮದೇ ಅಭಿಪ್ರಾಯಗಳು ನಿಮಗೆ ಕೇಳಿಸುತ್ತಿರುತ್ತದೆ. ಜಾಗತಿಕ ಮಟ್ಟದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತೇವೆ.

ಜಗತ್ತು ನಮ್ಮನ್ನು ನಂಬುವುದಕ್ಕೆ, ನಮ್ಮ ಮೇಲೆ ವಿಶ್ವಾಸವಿಡುವುದಕ್ಕೆ ಇದು ಅವಶ್ಯಕ. ಜಗತ್ತಿನ ವಿಶ್ವಾಸ ಆರ್ಥಿಕ ಬೆಳವಣಿಗೆಗೆ ತುಂಬಾ ಅವಶ್ಯಕ. ಪ್ರಜಾಸತ್ತೆ ಮತ್ತು ಆರ್ಥಿಕ ಬೆಳವಣಿಗೆ ಪರಸ್ಪರ ಪೂರಕವಾದ ಅಂಶಗಳು. ಚೀನಾದಂತಹ ನಿರಂಕುಶ ಸರ್ಕಾರಗಳು ಬೆಳವಣಿಗೆ ಸಾಧಿಸಿವೆ ನಿಜ, ಆದರೆ ಜಗತ್ತು ಇಂದು ಅದನ್ನು ಅನುಮಾನದಿಂದ ನೋಡುತ್ತವೆ. ಅನುಮಾನ ಅದರ ಆರ್ಥಿಕತೆಗೆ ತೊಂದರೆ ಮಾಡಿದೆ. ಚೀನಾದ ಯಾವುದೇ ಆ್ಯಪ್ ಬಳಸುವಾಗಲೂ ನಮ್ಮ ಯಾವುದೋ ಮಾಹಿತಿ ಸೋರಿಹೋಗುತ್ತದೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿರುತ್ತದೆ.

ಸದ್ಯದ ಭಾರತದ ಸ್ಥಿತಿಯನ್ನು ಗಮನಿಸೋಣ:

ಭಾರತದ ಆರ್ಥಿಕತೆಯಲ್ಲಿ ತೀವ್ರ ಕುಸಿತ ಕಾಣುತ್ತಿದ್ದೇವೆ. ಇದು ಮೊದಲ ಬಾರಿಯಲ್ಲ ಅನ್ನೋದು ನಿಜ. ಹಿಂದೆಯೂ ಹೀಗೆ ಆಗಿತ್ತು. 1958, 1966, 1973 ಹಾಗೂ 1980ರಲ್ಲಿ ಒಟ್ಟು ನಾಲ್ಕು ಬಾರಿ ಕುಸಿದಿತ್ತು. ಆದರೆ ಪ್ರಮಾಣದಲ್ಲಿ ಕುಸಿದಿರಲಿಲ್ಲ. 2020-21ರಲ್ಲಿ ಭಾರತದ ಆರ್ಥಿಕತೆಯಲ್ಲಿ ಒಟ್ಟಾರೆ ಶೇಕಡ 7.3ರಷ್ಟು ಕುಸಿತವನ್ನು ಕಾಣುತ್ತಿದ್ದೇವೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿಯುತ್ತದೆ ಅಂದುಕೊಂಡಿದ್ದೆವು. ಆದರೆ ಅಷ್ಟು ಕುಸಿಯಲಿಲ್ಲ ಅಂತ ಬೇಕಾದರೆ ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಉಳಿದ ಅಂಶಗಳನ್ನು ಗಮನಿಸಿದರೆ, ಪರಿಸ್ಥಿತಿ ಗಂಭೀರವಾಗಿರುವುದು ಕಾಣಿಸುತ್ತದೆ.

ಉದಾಹರಣೆಗೆ ಅಸಮಾನತೆಯನ್ನು ಗಮನಿಸಿ. ಮೇಲುಸ್ತರದ ಶೇಕಡ 1ರಷ್ಟು ಜನರ ಕೈಲಿ ಶೇಕಡ 42.5ರಷ್ಟು ಸಂಪತ್ತಿದೆ. ಕೆಳಸ್ತರದ ಶೇಕಡ 50ರಷ್ಟು ಜನ ಕೇವಲ ಶೇಕಡ 2.5ರಷ್ಟು ಸಂಪತ್ತಿನಲ್ಲಿ ಜೀವನ ನಡೆಸುತ್ತಿದ್ದಾರೆ. ಕೊರೋನ ನಂತರ ಬಡವರ ಸಂಖ್ಯೆ ದುಪ್ಪಟ್ಟಾಗಿದೆ. ಮಧ್ಯಮವರ್ಗದವರ ಸಂಖ್ಯೆ ಶೇಕಡ 33ರಷ್ಟು ಕಮ್ಮಿಯಾಗಿದೆ. 25 ಮಿಲಿಯನ್ ಜನ ಕೆಲಸ ಕಳೆದುಕೊಂಡಿದ್ದಾರೆ. ಕೋಟ್ಯಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರ ಕಲಿಕೆಯ ಮಟ್ಟ ಕಡಿಮೆಯಾಗಿದೆ. ಪೌಷ್ಟಿಕಾಂಶದ ಕೊರತೆ ತೀವ್ರವಾಗಿದೆ, ಜನರ ಕೊಳ್ಳುವ ಸಾಮಥ್ರ್ಯ ಕಡಿಮೆಯಾಗಿದೆ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಈಗ ಆರ್ಥಿಕತೆ ಮೊದಲಿನ ಸ್ಥಿತಿಗಾದರೂ ಬರಬೇಕು. ಅದಕ್ಕೆ ಈಗ ಅಂದುಕೊಂಡಿರುವ ಹಾಗೆ ಆರ್ಥಿಕತೆ ಶೇಕಡ ಏಳೋ ಎಂಟೋ ದರದಲ್ಲಿ ಏರಿದರೆ ಸಾಲುವುದಿಲ್ಲ. ಹೆಚ್ಚಿನ ತಯಾರಿ, ಪೂರ್ವಸಿದ್ಧತೆ ಬೇಕು. ಉದಾಹರಣೆಗೆ ಶಿಕ್ಷಣ ತೆಗೆದುಕೊಳ್ಳಿ. ಈಗ ಕೋಟ್ಯಂತರ ಮಕ್ಕಳು ಶಾಲೆಯಿಲ್ಲದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸೆಲ್ ಫೋನ್ ಹಾಗೂ ಕಂಪ್ಯೂಟರ್ ಸೌಲಭ್ಯವಿಲ್ಲದ ಅವರಿಗೆ ಯಾವ ರೀತಿಯ ಶಿಕ್ಷಣವೂ ಸಿಕ್ಕಿಲ್ಲ. ಜೊತೆಗೆ ಕಲಿತಿದ್ದನ್ನೂ ಮರೆತಿರುತ್ತಾರೆ. 5ನೆಯ ತರಗತಿಯ ಹುಡುಗ ಈಗ ಮೂರನೆಯ ತರಗತಿಯ ಮಟ್ಟಕ್ಕೆ ಬಂದಿರುತ್ತಾನೆ. ಅವನನ್ನು ಮತ್ತೆ ಮಟ್ಟಕ್ಕೆ ತರುವುದಕ್ಕೆ ಏನು ಮಾಡಬೇಕು? ಶಾಲೆಗಳು ಮತ್ತೆ ಪ್ರಾರಂಭವಾದಾಗ ನಾವು ಇದನ್ನು ಸರಿ ಮಾಡುವುದಕ್ಕೆ ಏನು ಮಾಡುತ್ತೇವೆ?

25 ಮಿಲಿಯನ್ ಜನ ಕೆಲಸ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಹತ್ತು ಮಿಲಿಯನ್ ಜನ ಪಟ್ಟಿಗೆ ಸೇರುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವುದು ಹೇಗೆ? ಇವೆಲ್ಲವುಗಳಿಗೆ ಪೂರ್ವಸಿದ್ಧತೆ, ಸಿದ್ಧತೆ, ಯೋಜನೆ, ಪ್ರಾಮಾಣಿಕ ಪ್ರಯತ್ನ ತೀರಾ ಅವಶ್ಯಕ. ಅದಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಆರ್ಥಿಕತೆಯೂ ಬೆಳೆಯಬೇಕು. ಭೂಮಿ ಕೆಲಸ ಕೊಡುತ್ತಿಲ್ಲ. ಖಾಸಗೀ ಕ್ಷೇತ್ರ ಉದ್ಯೋಗ ಸೃಷ್ಟಿಸುತ್ತಿಲ್ಲ. ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಖಾಸಗೀಕರಣ ಇವುಗಳಿಗೆ ಮದ್ದಲ್ಲ.

ಉದಾರಣೆಗೆ ಪಟ್ಟಣಗಳಲ್ಲಿ ಉದ್ಯೋಗ ನೀಡುವುದಕ್ಕೆ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಚಿಂತಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮನರೇಗ ಯೋಜನೆಗೆ ಹೆಚ್ಚಿರುವ ಬೇಡಿಕೆ ಅದರ ಅವಶ್ಯಕತೆಯನ್ನು ಸ್ಪಷ್ಟಪಡಿಸಿದೆ. ಜನರಿಗೆ ಭದ್ರತೆ ಬೇಕು. ಅದು ಉದ್ಯೋಗ ಕೇಂದ್ರಿತ ಭದ್ರತೆ ಆಗಬೇಕು. ಅದರಿಂದ ಮನರೇಗ ಅಂತಹ ಯೋಜನೆಗಳನ್ನು ಪಟ್ಟಣಗಳಲ್ಲಿ ರೂಪಿಸುವುದು ಅನಿವಾರ್ಯ. ಅದು ಸದ್ಯದ ತುರ್ತು.

ಇದರ ಜೊತೆಗೆ ಜನರ ತಕ್ಷಣದ ಸಮಸ್ಯೆಗಳಿಗೆ ಮಿಡಿಯುವ ಗುಣ ಸರ್ಕಾರಕ್ಕೆ ಇರಬೇಕು. ಕೊರೋನಾದ ಎರಡನೇ ಅಲೆ ಜನರನ್ನು ಹೆಚ್ಚು ಘಾಸಿಗೊಳಿಸಿದೆ. ಆರ್ಥಿಕ ಸಂಕಷ್ಟದ ಜೊತೆಗೆ ಅಪಾರ ಸಾವುನೋವು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಎರಡನೆಯ ಅಲೆ ಮಧ್ಯಮ ಹಾಗೂ ಮೇಲ್ವರ್ಗದ ಜನರನ್ನು ಕಾಡಿದೆ. ಬಡತನ ಹೆಚ್ಚಾಗಿದೆ. ಶೇಕಡ 97ರಷ್ಟು ಜನರ ನೈಜ ವರಮಾನ ಕಡಿಮೆಯಾಗಿದೆ. ಎನ್ನುತ್ತದೆ ಸಿಎಂಐಇ ವರದಿ. ಜನರಲ್ಲಿ ಆತಂಕ ಹೆಚ್ಚಾಗಿದೆ. ವಿಶ್ವಾಸ ಕಡಿಮೆಯಾಗಿದೆ. ಹಾಗಾಗಿ ಅವರು ಖರ್ಚುಮಾಡಲು ಮುಂದೆ ಬರುವುದಿಲ್ಲ. ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಆತಂಕದ ವಿಷಯ. ಸಣ್ಣ ಉದ್ದಿಮೆಗಳು ಅಷ್ಟು ಬೇಗ ಮತ್ತೆ ಪ್ರಾರಂಭವಾಗುವುದಿಲ್ಲ. ಸಮಯ ತೆಗೆದುಕೊಳ್ಳುತ್ತದೆ.

ಇವೆಲ್ಲದರ ಒಟ್ಟಾರೆ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ವಿಶೇಷವಾಗಿ ಬಡಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಹಾಗಾಗಿ ಬಳಕೆಯಲ್ಲಿ ಕುಸಿತವನ್ನು ಕಾಣುತ್ತಿದ್ದೇವೆ. ಇದು ನಿಜವಾಗಿ ಕಾಳಜಿಯ ವಿಷಯ. ಜನರ ಕೊಳ್ಳುವ ಸಾಮಥ್ರ್ಯ ಹೆಚ್ಚಬೇಕು. ಅದು ಬೇಡಿಕೆಯನ್ನು ಹೆಚ್ಚಿಸುತ್ತದೆ. ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ. ಸರ್ಕಾರ ಮಧ್ಯೆ ಪ್ರವೇಶಿಸಿ ಆಹಾರ, ಇತ್ಯಾದಿ ನೆರವು ನೀಡುವುದರ ಜೊತೆಗೆ ನಗದು ರೂಪದಲ್ಲಿ ನೆರವು ನೀಡಬೇಕು.

Àಲವು ದೇಶಗಳು ಆರ್ಥಿಕ ಪುನಶ್ಚೇತನಕ್ಕೆ ಧಾರಾಳವಾಗಿ ಹಣ ವೆಚ್ಚ ಮಾಡಿವೆ. ನಿಟ್ಟಿನಲ್ಲಿ ಭಾರತ ಮಾಡಿರುವುದು ಕಡಿಮೆ. ಇದಕ್ಕಾಗಿ ಎಲ್ಲರೂ ಒತ್ತಾಯಿಸಿದ್ದರು. ಇದನ್ನು ಸಮರ್ಪಕವಾಗಿ ಮಾಡದೇ ಇದ್ದುದಕ್ಕೆ ತೀವ್ರವಾಗಿ ಟೀಕಿಸಿದ್ದರು. ನಗದು ನೆರವಿಗೆ ಕೇವಲ ಅರ್ಥಶಾಸ್ತ್ರಜ್ಞರು ಮಾತ್ರವಲ್ಲ, ವಿರೋಧ ಪಕ್ಷದವರು, ನಾಗರಿಕ ಸಂಸ್ಥೆಗಳು ಅಷ್ಟೇ ಅಲ್ಲ ಬಂಡವಾಳಶಾಹಿ ಸಂಘಟನೆಗಳು ಕೂಡ ಒತ್ತಾಯಿಸಿದವು. ಆರ್ಥಿಕತೆಯ ನಿಜವಾದ ಸಮಸ್ಯೆ ಇರುವುದು ಜನರಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿರುವುದು ಎಂದು ಇವರೆಲ್ಲರೂ ಒಪ್ಪಿಕೊಂಡಿದ್ದರು.

ಕೋಟಕ್ ಮಹೀಂದ್ರ ಬ್ಯಾಂಕಿನ ಒಡೆಯ ಉದಯ್ ಕೋಟಕ್ ವಿತ್ತೀಯ ಕೊರತೆಯನ್ನು ಹೆಚ್ಚಿಸಬೇಕು ಅಂತ ಬಲವಾಗಿ ವಾದಿಸಿದರು. ಇನ್ನೂ ಮುಂದುವರಿದು ಇದಕ್ಕಾಗಿ ಹಣವನ್ನು ಮುದ್ರಿಸಬೇಕೆಂಬ ಸಲಹೆಯನ್ನೂ ಕೂಡ ಆತ ಮುಂದಿಟ್ಟ. ಇದನ್ನು ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರಿಂದ ನಿರೀಕ್ಷಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಸರ್ಕಾರಕ್ಕೆ ಇದರಲ್ಲಿ ಮನಸ್ಸಿಲ್ಲ. ಕೊರೋನಾದಿಂದ ಸತ್ತವರ ಕುಟುಂಬಕ್ಕೆ ನೆರವು ನೀಡುವುದಕ್ಕೆ ತಮ್ಮಲ್ಲಿ ಹಣವಿಲ್ಲ ಎಂದು ಸುಪ್ರೀಂಕೋರ್ಟಿನ ಮುಂದೆ ಸರ್ಕಾರ ಹೇಳಿಕೆ ನೀಡಿತು.

ಸರ್ಕಾರಗಳು ವಿತ್ತೀಯ ಶಿಸ್ತನ್ನು ಕಾರಣವಾಗಿ ಕೊಡುತ್ತವೆ. ವಿತ್ತೀಯ ಕೊರತೆ ಹೆಚ್ಚಬಾರದು ಎಂದು ವಾದಿಸುತ್ತಿವೆ. ಶೇಕಡ 3 ಮಿತಿಯನ್ನು ಮೀರಬಾರದೆಂದು ಹೇಳುತ್ತಿದೆ. ಜನರಿಗೆ ನೆರವಾದರೆ ವಿತ್ತೀಯ ಕೊರತೆ ಏರಿಬಿಡುತ್ತದೆ, ಹಣದುಬ್ಬರ ಹೆಚ್ಚುತ್ತದೆ ಇತ್ಯಾದಿ ವಾದಗಳನ್ನು ಮುಂದಿಡುತ್ತಿದೆ. ಐರೋಪ್ಯ ಯುನಿಯನ್ ಸ್ಥಿರತೆ ಹಾಗೂ ಬೆಳವಣೆಗೆಯ ಒಪ್ಪಂದವನ್ನು (ಎಸ್ಜಿಪಿ) ಕೊರೋನಾಗಾಗಿ ಸಡಿಲಿಸಿಕೊಂಡಿತ್ತು. ಮತ್ತೆ 2023 ವೇಳೆಗೆ ಅದಕ್ಕೆ ಮರಳುತ್ತೇವೆ ಎಂದು ಹೇಳಿಕೊಂಡಿದೆ. ಅಲ್ಲಿಯ ಎಡಪಕ್ಷಗಳು ಇದನ್ನು ವಿರೋಧಿಸುವಷ್ಟು ಬಲವಾಗಿಲ್ಲ. ಭಾರತದಲ್ಲಿ ಕೂಡ ಇಂದು ನವ ಉದಾರವಾದಿ ನೀತಿಗೆ ಮುಕ್ತವಾಗಿ ಬೆಂಬಲ ನೀಡುತ್ತಿರುವುದನ್ನು ನೋಡಬಹುದು.

ದೊಡ್ಡ ಉದ್ದಿಮೆದಾರರೊಂದಿಗಿನ ಇವರ ನಿಕಟ ನಂಟು ಢಾಳಾಗಿ ಕಾಣುತ್ತದೆ. ಅದರಲ್ಲಿ ಯಾವುದೇ ಮುಜುಗರವನ್ನು ಸರ್ಕಾರ ತೋರುತ್ತಿಲ್ಲ. ಸ್ವದೇಶಿ ಜಾಗರಣ ಮಂಚ ಇತ್ಯಾದಿಗಳನ್ನು ಕೈಬಿಡಲಾಗಿದೆ. ಕಾರ್ಪೋರೇಟ್ ಜಗತ್ತಿಗೆ ಧಾರಾಳವಾಗಿ ಕರುಣೆ ತೋರಲಾಗುತ್ತಿದೆ. ರಫೇಲ್ ಡೀಲ್ ಅಂತಹ ಎಷ್ಟೋ ಡೀಲ್ಗಳು ನಡೆದುಹೋಗಿವೆ. ಹಾಗಾಗಿಯೇ ಇಡೀ ಆರ್ಥಿಕತೆ ಕುಸಿಯುತ್ತಿದ್ದರೂ ಇವರ ವರಮಾನ ಮಾತ್ರ ಸುರಕ್ಷವಾಗಿದೆ. ರೈತರ ಹಕ್ಕುಗಳು, ರೈತರ ಹಿತಾಸಕ್ತಿ ಕೇಳುವರೇ ಇಲ್ಲ. ವರ್ಷವಿಡೀ ಹೋರಾಡಿದರೂ ಆಡಳಿತ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.

ಅಮೆರಿಕೆಯ ಬೈಡನ್ ಹೇಳುತ್ತಿರುವ ಕೇನ್ಸ್ ನೀತಿಯನ್ನು ಮತ್ತೆ ತರಬೇಕೆನ್ನುವ ಸಲಹೆಗೂ ಅಂತಹ ಬೆಂಬಲವೇನಿಲ್ಲ. ಅವರು ಸರ್ಕಾರದ ಖರ್ಚನ್ನು ಹೆಚ್ಚಿಸುವ ಹಾಗೂ ಅದಕ್ಕೆ ಹಣಕ್ಕಾಗಿ ವಿತ್ತೀಯ ಕೊರತೆಯ ಮಿತಿಯನ್ನು ಹೆಚ್ಚಿಸುವ ಹಾಗೂ ಬಂಡವಾಳಿಗರ ಮೇಲೆ ತೆರಿಗೆಯನ್ನು ಹೆಚ್ಚಿಸುವ ಕೆಲವು ನೀತಿಯನ್ನು ಘೋಷಿಸಿದ್ದಾರೆ. ಕೇನ್ಸ ನೀತಿಗೆ ಅಂತಹ ಬೆಂಬಲವೇನು ಕಾಣುತ್ತಿಲ್ಲ. ಬೈಡೆನ್ ನೀತಿ ಬಿಕ್ಕಟ್ಟಿಗೆ ಮದ್ದು ಅಂತ ಹೇಳುತ್ತಿಲ್ಲ. ಆದು ಯಶಸ್ವಿಯಾಗಬೇಕಾದರೆ ಆಮದಿನ ಮೇಲೆ ನಿರ್ಬಂಧಗಳನ್ನು ಹಾಕಬೇಕಾಗುತ್ತದೆ. ಇದು ಬಹುದಿನ ನಡೆಯೋದಿಲ್ಲ. ಹಾಗಾಗಿ ಮತ್ತೆ ವಿತ್ತೀಯ ಶಿಸ್ತಿಗೆ ಮರಳುತ್ತಾರೆ. ಒಟ್ಟಿನಲ್ಲಿ ಆರ್ಥಿಕ ಸ್ಥಗಿತತೆ ಹಾಗೂ ಬಿಕ್ಕಟ್ಟು ಮುಂದುವರಿಯುತ್ತದೆ.

ಇಂತಹ ವಿತ್ತೀಯ ನೀತಿಯಿಂದ ಹಣದುಬ್ಬರವೇನೂ ಕಡಿಮೆಯಾಗಿಲ್ಲ, ವಿತ್ತೀಯ ಕೊರತೆಯೂ ಕಮ್ಮಿಯಾಗಿಲ್ಲ, ಆರ್ಥಿಕ ಪುನಶ್ಚೇತನವೂ ಸಾಧ್ಯವಾಗಿಲ್ಲ. ಸಾಂಪ್ರದಾಯಿಕ ನೀತಿಯ ಅಸಂಗತತೆ ಬಂಡವಾಳಿಗರಿಗೂ ಅರ್ಥವಾಗುತ್ತಿದೆ. ಆದರೂ ಸರ್ಕಾರ ಅಂಟುಕೊಂಡೇ ಇದೆ. ಹಾಗಾಗಿ ಬಂಡವಾಳಶಾಹಿ ನೀತಿ ಯಶಸ್ವಿಯಾಗಿದೆ ಅನ್ನುವುದಕ್ಕೆ ಸಾಧ್ಯವಿಲ್ಲ.

ಇನ್ನು ಉಳ್ಳವರ ಮತ್ತು ಸಾಮಾನ್ಯರ ನಡುವಿನ ಆದಾಯ/ಸಂಪತ್ತಿನ ಅಂತರ ಹಿಗ್ಗುತ್ತಿದ್ದರೂ ನಮ್ಮ ಸಮಾಜವೇಕೆ ಅದನ್ನು ಗಂಭೀರ ಮತ್ತು ಅಪಾಯಕಾರಿಯೆಂದು ಪರಿಗಣಿಸಿಲ್ಲ? ದೇಶದ ಸಾಂಸ್ಥಿಕ ಬಿಕ್ಕಟ್ಟು ಮತ್ತು ಮುಕ್ತ ಉದ್ಯಮಶೀಲತೆಗೆ ಒದಗಿರುವ ಅಡೆತಡೆಗಳನ್ನು ನಾವೇಕೆ ಗುರುತಿಸುತ್ತಿಲ? ನಮ್ಮ ಕೃಷಿ ಬಿಕ್ಕಟ್ಟು, ನಗರೀಕರಣದ ಅಸ್ತವ್ಯಸ್ತ ಸ್ಥಿತಿ, ನಿರುದ್ಯೋಗ ಮತ್ತು ದಲಿತಹಿಂದುಳಿದವರ ಅಸಹಾಯಕತೆ ನಮ್ಮನ್ನೇಕೆ ಬೆಚ್ಚಿಬೀಳಿಸುತ್ತಿಲ್ಲ?

ನನ್ನ ಪ್ರಶ್ನೆ ಸ್ವಲ್ಪ ಭಿನ್ನ. ಇವೆಲ್ಲದರ ತಿಳಿವಳಿಕೆ ಇದ್ದರೂ ಅವುಗಳನ್ಯಾಕೆ ವಿರೋಧಸುತ್ತಿಲ್ಲ ಅನ್ನುವುದು. ವಿರೋಧದ ಕೊರತೆ, ಅಥವಾ ವಿರೋಧ ಇದ್ದ ಕಡೆ ಅದು ಯಶಸ್ವಿಯಾಗದೇ ಇರುವುದು ಹೆಚ್ಚು ಗಂಭೀರವಾದ ಸಮಸ್ಯೆ. ಅದನ್ನು ಕೇವಲ ಆರ್ಥಿಕ ನೆಲೆಯಲ್ಲಿ ನೋಡಲಾಗುವುದಿಲ್ಲ. ಉದಾಹರಣೆಗೆ ಡಿಮಾನಿಟೈಸೇಷನ್ನು ಜನ ಬೆಂಬಲಿಸಿದ್ದು ಒಂದು ಆರ್ಥಿಕ ನೀತಿಯಾಗಿ ಅಲ್ಲ. ಬಹುಶಃ ನೈತಿಕ ಕಾರಣಗಳಿಂದ. ಹಾಗಾಗಿ ಯಾಕೆ ವಿರೋಧಿಸುತ್ತಿಲ್ಲ ಅನ್ನುವುದು ಹೆಚ್ಚು ವಿಶಾಲವಾದ ಪ್ರಶ್ನೆ.

ನಾವು ಕೇವಲ ಆರ್ಥಿಕ ನೀತಿಗಳನ್ನಷ್ಟೇ ವಿರೋಧಿಸದೇ ಮೌನವಾಗಿಲ್ಲ. ವೈಯುಕ್ತಿಕ ಸ್ವಾತಂತ್ರ್ಯ, ಮಾತಿನ ಹಕ್ಕು, ಪ್ರಜಾಸತ್ತಾತ್ಮಕ ಹಕ್ಕನ್ನು ಹತ್ತಿಕ್ಕುವುದು ಮುಂತಾದ ಯಾವುದನ್ನೂ ವಿರೋಧಿಸುತ್ತಿಲ್ಲ. ಎಲ್ಲಾ ಹೋರಾಟಗಳೂ ಪ್ರತ್ಯೇಕಗೊಂಡಿವೆ. ರೈತರ ಹೋರಾಟವನ್ನು ಬೆಂಬಲಿಸಿ ಕಾರ್ಮಿಕರು ರಸ್ತೆಗೆ ಇಳಿಯುವುದಿಲ್ಲ. ಮಾನವ ಹಕ್ಕಿಗೆ ಅನ್ಯಾಯವಾದಾಗ ಉಳಿದವರು ಸುಮ್ಮನಾಗುತ್ತೇವೆ. ಮೊದಲಿಗಿಂತ ಹೆಚ್ಚಾಗಿ ನಾವು ಪ್ರತ್ಯೇಕ ದ್ವೀಪಗಳಾಗುತ್ತಿದ್ದೇವೆ. ಕೆಲವರಿಗೆ ದೇಶ, ಧರ್ಮ, ಸಂಸ್ಕೃತಿಯ ಪ್ರಶ್ನೆಗಳು ತುಂಬಾ ಮುಖ್ಯ. ಹೀಗೆ ಹಲವು ಕಾರಣಗಳನ್ನು ಕೊಡುತ್ತಾ ಹೋಗಬಹುದು. ಯಾವುದೂ ಪೂರ್ತಿಯಾಗಿ ಉತ್ತರವಲ್ಲ.

*ಲೇಖಕರು ಸಂಖ್ಯಾವಿಜ್ಞಾನದ ನಿವೃತ್ತ ಪ್ರಾಧ್ಯಾಪಕರು; ಸಂಗೀತ ಮತ್ತು ಅರ್ಥವಿಜ್ಞಾನಗಳಲ್ಲಿ ವಿಶೇಷ ಆಸಕ್ತಿ. ಕರ್ನಾಟಕ ಶಾಸ್ತ್ರೀಯ ಸಂಗೀತ ತಜ್ಞೆ, ಇಂಗ್ಲಿಶ್ ಸಾಹಿತ್ಯದ ನಿವೃತ್ತ ಪ್ರಾಧ್ಯಾಪಕಿ, ತಮ್ಮ ಬಾಳಸಂಗಾತಿ ಶೈಲಜಾ ಅವರೊಂದಿಗೆ ಹತ್ತಾರು ಪುಸ್ತಕ ರಚಿಸಿ, ‘ರಾಗಮಾಲಾಪ್ರಕಾಶನದಿಂದ ಪ್ರಕಟಿಸಿದ್ದಾರೆ.

Leave a Reply

Your email address will not be published.