ಸರ್ಕಾರಿ ಬ್ಯಾಂಕುಗಳು ಮುಳುಗುತ್ತಿವೆಯೇ? ತೇಲುತ್ತಿವೆಯೇ?

-ಪದ್ಮರಾಜ ದಂಡಾವತಿ

ಬೆವರು ಸುರಿಸಿ ಗಳಿಸಿದ “ಒಳ್ಳೆಯ ಹಣ”ದ ಸುರಕ್ಷತೆ ಕುರಿತು ಕಾಳಜಿ ಇರುವ ಯಾರಾದರೂ ಓದಲೇಬೇಕಾದ ಪುಸ್ತಕ “ಬ್ಯಾಡ್ ಮನಿ.”

ಬ್ಯಾಡ್ ಮನಿ

ಇನ್‍ಸೈಡ್ ಎನ್‍ಪಿಎ ಮೆಸ್

ಅಂಡ್ ಹೌ ಇಟ್ ಥ್ರೆಟನ್ಸ್ ದಿ ಇಂಡಿಯನ್ ಬ್ಯಾಂಕಿಂಗ್ ಸಿಸ್ಟಂ

ಲೇ: ವಿವೇಕ್ ಕೌಲ್

ಪ್ರ: ಹಾರ್ಪರ್ ಬಿಜಿನೆಸ್ 2020.

ಪುಟಗಳು: 339 ಬೆಲೆ: ರೂ.599

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುಸ್ಥಿತಿಯಲ್ಲಿ ಇದೆಯೇ? ಸುಸ್ತಿ ಸಾಲದ ಮೊತ್ತ ನೂರಾ ಮೂರರ ಜ್ವರದ ಹಾಗೆ ಏರುತ್ತಿರುವಾಗ ಅಲ್ಲಿ ಸಾಮಾನ್ಯ ಜನರು ಇಟ್ಟಿರುವ ಠೇವಣಿ ಸುರಕ್ಷಿತವೇ? ಸಣ್ಣ ಪುಟ್ಟ ಸಾಲ ಕೊಡಲು ನಮ್ಮ ಜನ್ಮ ಜಾಲಾಡಿಸುವ ಬ್ಯಾಂಕುಗಳು, ಸಿಕ್ಕ ಸಿಕ್ಕ ದಾಖಲೆಗಳನ್ನು ಕೇಳುವ ಬ್ಯಾಂಕರುಗಳು ವಿಜಯ ಮಲ್ಯ, ನೀರವ್ ಮೋದಿ ಅಂಥವರಿಗೆ ಕೋಟಿಗಟ್ಟಲೆ ಸಾಲಕೊಟ್ಟುದು ಹೇಗೆ? ಅದನ್ನು ವಸೂಲು ಮಾಡುವುದು ಹೇಗೆ? ದೇಶ ಬಿಟ್ಟು ಹೋಗಲು ಅವರನ್ನು ಬಿಟ್ಟವರು ಯಾರು?… ಇಂಥ ಅನೇಕ ಪ್ರಶ್ನೆಗಳು ಸಾಮಾನ್ಯ ಜನರಿಗೆ ಯಾವಾಗಲೂ ಕಾಡಿವೆ. ಆದರೆ, ಅದಕ್ಕೆ ಉತ್ತರ ಸಿಕ್ಕಿಲ್ಲ.

ದೇಶದ ಸರ್ಕಾರಿ ಬ್ಯಾಂಕುಗಳಿಗೆ 9,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಪಂಗನಾಮ ಹಾಕಿರುವ ವಿಜಯ ಮಲ್ಯರನ್ನು ಕರೆತಂದು ತನ್ನ ಮುಂದೆ ಹಾಜರುಪಡಿಸಬೇಕು ಎಂದು ಸುಪ್ರೀಂ ಕೋರ್ಟು ಆದೇಶಿಸಿದ್ದರೂ ಇದುವರೆಗೆ ಆತ ಇಂಗ್ಲೆಂಡಿನಲ್ಲಿ ಹಾಯಾಗಿ ಇದ್ದಾರೆ. ನೀರವ್ ಬರುವುದು ಯಾವಾಗಲೋ ಏನೋ? ಇಬ್ಬರೂ ಸೇರಿಕೊಂಡು ನಮ್ಮ ದೇಶದ ಬ್ಯಾಂಕುಗಳಿಗೆ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳಿಂತ ಹೆಚ್ಚು ಸಾಲ ಬಾಕಿ ಇರಿಸಿಕೊಂಡಿದ್ದಾರೆ. ಇದು ಕೇವಲ ಇಬ್ಬರ ಮಾತಾಯಿತು. ಇಂಥವರು ಭಾರತದ ಬ್ಯಾಂಕುಗಳಿಗೆ ಇರಿಸಿಕೊಂಡಿರುವ ಸುಸ್ತಿ ಸಾಲದ ಮೊತ್ತ 10,36,187 ಕೋಟಿ ರೂಪಾಯಿಗಳು! ಇದರಲ್ಲಿ ಸರ್ಕಾರಿ ಬ್ಯಾಂಕುಗಳ ಸುಸ್ತಿ ಸಾಲದ ಪ್ರಮಾಣ 8,95,601 ಕೋಟಿ; ಉಳಿದುದು ಖಾಸಗಿ ಬ್ಯಾಂಕುಗಳ ಸುಸ್ತಿ ಸಾಲ.

ಇದನ್ನೇ ಜೆ.ಎಂ.ಕೇನ್ಸ್ ಎಂಬ ಅರ್ಥಶಾಸ್ತ್ರಜ್ಞ ಹೇಳುವುದು ಹೀಗೆ: “ನೀವು ನಿಮ್ಮ ಬ್ಯಾಂಕಿಗೆ ನೂರು ಪೌಂಡ್ ಸಾಲ ಉಳಿಸಿಕೊಂಡಿದ್ದರೆ ಅದು ನಿಮಗೆ ಸಮಸ್ಯೆಯುಂಟು ಮಾಡಬಹುದು. ಆದರೆ, ಅದೇ ನೀವು ಹತ್ತು ಲಕ್ಷ ಪೌಂಡ್‍ಗಳನ್ನು ಕಟ್ಟಬೇಕಿದ್ದರೆ ನಿಮ್ಮ ಬ್ಯಾಂಕು ಸಮಸ್ಯೆಯಲ್ಲಿ ಇದೆ ಎಂದು ಅರ್ಥ!” ಭಾರತದ ಬ್ಯಾಂಕುಗಳ ಸಮಸ್ಯೆ ಇರುವುದು ಇಲ್ಲಿ. ಅವುಗಳಿಗೆ ಸಾಲ ಕಟ್ಟಬೇಕಾದವರು ಒಂದೋ ಸಾಲ ಮರುಪಾವತಿ ಮಾಡದ ಸ್ಥಿತಿಯಲ್ಲಿ ಇದ್ದಾರೆ ಅಥವಾ ಅದನ್ನು ಮರುಪಾವತಿ ಮಾಡುವುದನ್ನು ತಪ್ಪಿಸಿಕೊಂಡೂ ಬಚಾವಾಗುವಂಥ ಪ್ರಬಲ ಸಂಪರ್ಕಗಳನ್ನು ಅವರು ಸರ್ಕಾರದಲ್ಲಿ ಹೊಂದಿದ್ದಾರೆ.

ಇದನ್ನೆಲ್ಲ ಹೇಳುವ “ಬ್ಯಾಡ್ ಮನಿ” ಎಂಬ ಬಹುಪ್ರಸಿದ್ಧ ಪುಸ್ತಕವನ್ನು ಇದೇ ವರ್ಷ ಪ್ರಕಟಿಸಿರುವ ವಿವೇಕ್ ಕೌಲ್ ಒಬ್ಬ ಹುಟ್ಟು ಪತ್ರಕರ್ತ. ಹಾಗೆ ಹೇಳಲು ಕಾರಣವಿದೆ: ರಾಂಚಿಯ ಈ ಯುವಕ ಎಲ್ಲರ ಹಾಗೆ ಎಂ.ಬಿ.ಎ ಮಾಡಲೆಂದು ಹೋದರು. ಅದರಂಥ ವ್ಯರ್ಥ ಕೆಲಸ ಇನ್ನೊಂದು ಇಲ್ಲ ಎಂದು ಅರ್ಧದಲ್ಲಿಯೇ ಬಿಟ್ಟು ಬಂದರು. ಪಿಎಚ್.ಡಿ ಮಾಡೋಣ ಎಂದು ಹೋಗಿ ಮೂರು ವರ್ಷ ಮಣ್ಣು ಹೊತ್ತು ಅದನ್ನೂ ಬಿಟ್ಟು ಬಿಟ್ಟರು. ಪತ್ರಿಕೋದ್ಯಮಕ್ಕೆ ಬಂದರು. ಹೌದು, ಇದು ನನಗೆ ಸಲ್ಲುವ ಜಾಗ ಎಂದುಕೊಂಡು ಅಲ್ಲಿಯೇ ಉಳಿದುಕೊಂಡರು. ಅವರು ಈಗ ಅನೇಕ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದಾರೆ. ‘ವ್ಯರ್ಥ ಕೆಲಸ’ ಎಂದು ಎಲ್ಲಿಂದ ಹೊರಟು ಬಂದಿದ್ದರೋ ಈಗ ಅಲ್ಲಿಗೇ ಹೋಗಿ (ಐಐಎಂ ಬೆಂಗಳೂರು, ಐಐಎಂ ಇಂದೋರ್, ಐಐಎಂ ಕೋಯಿಕ್ಕೋಡ್ ಇತ್ಯಾದಿ ಕಡೆಗಳಲ್ಲಿ) ಪಾಠ ಮಾಡುತ್ತಾರೆ!

ಅರ್ಥಶಾಸ್ತ್ರ ಅವರ ಆಸಕ್ತಿಯ ವಿಷಯ. ಅವರೇ ಮೂರು ಸಂಪುಟಗಳಲ್ಲಿ ವಿಸ್ತಾರವಾಗಿ ಬರೆದಿರುವ “ಈಜಿ ಮನಿ” ಕೂಡ ಹೆಸರು ಮಾಡಿದ ಕೃತಿ. ಪ್ರಸ್ತುತ ಇಲ್ಲಿ ಚರ್ಚಿಸಿರುವ “ಬ್ಯಾಡ್ ಮನಿ”, ಕುಲಗೆಟ್ಟು ಹೋಗಿರುವ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ. ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಬಿಡುವು ಸಿಕ್ಕಾಗ ಅಪರಾಧ ಕಥೆಗಳನ್ನು ಓದುವ ಕೌಲ್, ತಮ್ಮ ಈ ಪುಸ್ತಕದಲ್ಲಿ ನಮ್ಮ ಬ್ಯಾಂಕುಗಳಲ್ಲಿ ನಡೆಯುತ್ತಿರುವ “ಅಪರಾಧ”ಗಳಿಗೆ ಪತ್ತೇದಾರನ ದುರ್ಬೀನು ಹಿಡಿಯುವ ಕೆಲಸ ಮಾಡಿದ್ದಾರೆ.

“ದಿ ಎಕನಾಮಿಸ್ಟ್” ನಿಯತಕಾಲಿಕವು, “ನೀವು ನಿಮ್ಮ ಬ್ಯಾಂಕಿಗೆ ಶತಕೋಟಿ ಪೌಂಡ್‍ಗಳನ್ನು ಕೊಡಬೇಕಾಗಿದೆ ಎನ್ನುವುದಾದರೆ ಅದು ಎಲ್ಲರಿಗೂ ಸಮಸ್ಯೆ ಎಂದೇ ಅರ್ಥ” ಎಂದು ಕೇನ್ಸ್‍ರ ಮಾತನ್ನು, ಈಗಿನ ಕಾಲದ ವಿದ್ಯಮಾನಗಳಿಗೆ ಅನ್ವಯಿಸಿ ವಿಸ್ತರಿಸಿತ್ತು. ಅದು ನಿಜ ಎನ್ನುವ ಹಾಗೆ, ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸರ್ಕಾರಿ ವಲಯದ ಬ್ಯಾಂಕುಗಳಿಗೆ ಸಂದಾಯವಾಗಬೇಕಾದ ಸಾಲದ ಪ್ರಮಾಣ ನಿರಂತರವಾಗಿ ಏರುತ್ತಿದೆ. ಮತ್ತು ವಸೂಲಾಗದ ಈ ಸಾಲದ ಸುಳಿಯಿಂದ ಹೊರಗೆ ಬರುವುದು ಹೇಗೆ ಎಂಬುದು ಈ ಬ್ಯಾಂಕುಗಳಲ್ಲಿ ಇರುವವರಿಗೂ ಗೊತ್ತಿಲ್ಲ, ಸರ್ಕಾರದಲ್ಲಿ ಇರುವವರಿಗೆ ಮೊದಲೇ ಗೊತ್ತಿಲ್ಲ. ಏಕೆಂದರೆ ಇದಕ್ಕೆ ಉತ್ತರದಾಯಿಯಾದವರು ಬ್ಯಾಂಕುಗಳಲ್ಲಿಯೂ ಇಲ್ಲ; ಸರ್ಕಾರದಲ್ಲಿಯೂ ಇಲ್ಲ. ಕೌಲ್ ಅವರು “ಈ ಸಮಸ್ಯೆಗೆ ಪರಿಹಾರ ಯಾರಿಗೂ ಬೇಕಾಗಿಲ್ಲ. ಎಲ್ಲರಿಗೂ ಅದನ್ನು ಮುಂದಿನವರಿಗೆ ವರ್ಗಾಯಿಸುವುದು (ಏiಛಿಞ ಣhe ಛಿಚಿಟಿ ಜoತಿಟಿ ಣhe ಡಿoಚಿಜ) ಮಾತ್ರ ಬೇಕಾಗಿದೆ” ಎನ್ನುತ್ತಾರೆ.

 ಹಾಗೆಂದು ಸರ್ಕಾರ ಸುಮ್ಮನೆ ಇರಲೂ ಆಗದು. ಸಾರ್ವಜನಿಕ ವಲಯದ ಬ್ಯಾಂಕುಗಳ ಒಡೆತನ ಇರುವುದು ಸರ್ಕಾರದ ಬಳಿ. ಅರ್ಥಶಾಸ್ತ್ರದಲ್ಲಿ ಪುಕ್ಕಟೆ ಊಟ ಎನ್ನುವುದು ಇಲ್ಲ. ಅದಕ್ಕೆ ಯಾರಾದರೂ ಹಣ ಕಟ್ಟಲೇಬೇಕು. ಕೇಂದ್ರ ಸರ್ಕಾರ 2011-19 ರ ನಡುವಿನ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು “ಮುಳುಗದಂತೆ ನೋಡಿಕೊಳ್ಳಲು” 2,91,504 ಕೋಟಿ ರೂಪಾಯಿಗಳನ್ನು ಅವುಗಳಲ್ಲಿ ತೊಡಗಿಸಿದೆ. 2019 ರ ಏಪ್ರಿಲ್‍ನಿಂದ ಅದೇ ವರ್ಷದ ನವೆಂಬರ್ ಮಧ್ಯಭಾಗದ ವರೆಗೆ ಈ ರೀತಿ ತೊಡಗಿಸಿದ ಮೊತ್ತ 60,314 ಕೋಟಿ ರೂಪಾಯಿಗಳು. ಹಾಗಾದರೆ ಈ ಪುಕ್ಕಟೆ ಊಟದ ಬಿಲ್ ಎತ್ತುವವರು ಯಾರು? “ನಾವು, ತೆರಿಗೆ ಪಾವತಿ ಮಾಡುವವರು ಮತ್ತು ಜೀವ ವಿಮಾ ನಿಗಮದಲ್ಲಿ ಹಣ ಹೂಡುತ್ತಿರುವವರು; ದುರಂತ ಎಂದರೆ ನಮಗೆ ಇದು ತಿಳಿಯುತ್ತಲೂ ಇಲ್ಲ” ಎಂದು ವಿವೇಕ್ ಕೌಲ್ ಬರೆಯುತ್ತಾರೆ.

 ಎರಡು ಭಾಗದಲ್ಲಿ ಇರುವ “ಬ್ಯಾಡ್ ಮನಿ” ಪುಸ್ತಕದ ಮೊದಲ ಭಾಗದಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಬೆಳೆದು ಬಂದ ರೀತಿ ಮತ್ತು ಅದರ ಮೇಲೆ ಸರ್ಕಾರದ ಭದ್ರಮುಷ್ಟಿಯ ಹಿಡಿತವನ್ನು ವಿವರಿಸಿ ಅಂತಿಮವಾಗಿ ಈ ಹಿಡಿತದಿಂದಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹೇಗೆ ಮುಳುಗುವ ಹಂತಕ್ಕೆ ತಲುಪಿವೆ ಎಂಬುದನ್ನು ಲೇಖಕರು ವಿವರಿಸುತ್ತಾರೆ. ಎರಡನೇ ಭಾಗದಲ್ಲಿ ಈ ಬ್ಯಾಂಕುಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಬಿಡಿಸಿ ಇಡುತ್ತಾರೆ. ಗಣಿತದ ಹಾಗೆ ಅರ್ಥಶಾಸ್ತ್ರವೂ ಕ್ಲಿಷ್ಟವಾದ ವಿಚಾರ. ಆದರೆ, ಕೌಲ್ ಈ ಕ್ಲಿಷ್ಟವಾದ ವಿಚಾರವನ್ನು ಅತ್ಯಂತ ಸರಳವಾಗಿ, ಕಣ್ಣಿಗೆ ಕಟ್ಟುವ ಹಾಗೆ, ಲೆಕ್ಕವಿಲ್ಲದಷ್ಟು ಆಕರ ಸೂಚಿಗಳ ಮೂಲಕ ವಿವರಿಸುತ್ತಾರೆ.

 “ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12,647.97 ಕೋಟಿ ರೂಪಾಯಿ ಟೋಪಿ ಹಾಕಿದ ನೀರವ್ ಮೋದಿ ಎಂಬ ‘ಸುಪರಿಚಿತ ವ್ಯಕ್ತಿ’ಯ ಪ್ರಕರಣ ಬಯಲಿಗೆ ಬರದೇ ಇದ್ದಿದ್ದರೆ ಬ್ಯಾಂಕುಗಳ ಸುಸ್ತಿ ಸಾಲದ ಸಮಸ್ಯೆ ಈ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿರಲಿಲ್ಲ. ನೀರವ್ ಜೊತೆಗೆ ವಿಜಯ ಮಲ್ಯರ 9,000 ಕೋಟಿ ರೂಪಾಯಿ, ಜತಿನ್ ಮೆಹ್ತಾ ಅವರ 7,000 ಕೋಟಿ ರೂಪಾಯಿ ಮತ್ತು ನಿತಿನ್ ಜಯಂತಿಲಾಲರ 5,000 ಕೋಟಿ ಸಾಲದ ಹಗರಣಗಳು ಸೇರಿಕೊಂಡಿದ್ದರೂ, ಈ ಹಗರಣಗಳು ಬಯಲಿಗೆ ಬಂದ 2018ರ ಕಾಲಕ್ಕೆ ಆಗಲೇ ದೇಶದ ಬ್ಯಾಂಕುಗಳ ಸುಸ್ತಿ ಸಾಲದ ಪ್ರಮಾಣ ಎಂಟು ಲಕ್ಷ ಕೊಟಿಯ ಆಸುಪಾಸು ಇತ್ತು. ಪ್ರಿಯಾಂಕಾ ಚೋಪ್ರಾ ಅವರಂಥ ತಾರೆಗಳನ್ನು ತನ್ನ ವಜ್ರಗಳ ವ್ಯಾಪಾರದಲ್ಲಿ ಮಿಂಚಿಸುತ್ತ ತಾನೂ ಮಿಂಚುತ್ತಿದ್ದ ನೀರವ್ ಮೋದಿ ಪ್ರಕರಣ ಬಯಲಿಗೆ ಬರದೇ ಇದ್ದಿದ್ದರೆ ಆತನ ಬಗೆಗೆ ಮತ್ತು ಒಟ್ಟು ಬ್ಯಾಂಕುಗಳ ದುಃಸ್ಥಿತಿ ಕುರಿತು ಜನರು ಮಾತನಾಡುತ್ತಿರಲಿಲ್ಲ. ಏಕೆಂದರೆ ಇಂಥ ವಿಷಯಗಳು ಬಯಲಿಗೆ ಬರಲು ಒಂದು ‘ಸುಪರಚಿತ ಮುಖ’ ಬೇಕಾಗುತ್ತದೆ.  ಈ ಸ್ಥಿತಿಯನ್ನು ಮನಃಶಾಸ್ತ್ರಜ್ಞರು IಜeಟಿಣiಜಿIeಜ ಟiಜಿe ಎಂದು ಕರೆದಿದ್ದಾರೆ” ಎಂದು ಕೌಲ್ ವಿವರಿಸುತ್ತಾರೆ.

ಭಾರತದ ಬ್ಯಾಂಕುಗಳ ಕಷ್ಟ ಆರಂಭವಾದುದು ಈಚೆಗೇನೂ ಅಲ್ಲ. “1992-93 ರಷ್ಟು ಹಿಂದೆಯೇ ಈ ಬ್ಯಾಂಕುಗಳ ಸುಸ್ತಿ ಸಾಲದ ಪ್ರಮಾಣ ಶೇ 23.1 ರಷ್ಟು ಇತ್ತು. ಇದು ಸಣ್ಣ ಪ್ರಮಾಣವೇನೂ ಅಲ್ಲ. ಮುಂದಿನ ವರ್ಷ ಇದು ಶೇ 24.8 ಕ್ಕೆ ಏರಿತು. ಅಂದರೆ ಬ್ಯಾಂಕುಗಳು ಕೊಟ್ಟ ಒಟ್ಟು ಸಾಲದಲ್ಲಿ ಕಾಲುಭಾಗ ಸುಸ್ತಿ ಸಾಲವೇ ಆಗಿತ್ತು.  1984-87 ರಲ್ಲಿ ಕೇಂದ್ರದ ಹಣಕಾಸು ರಾಜ್ಯ ಸಚಿವರಾಗಿದ್ದ ಜನಾರ್ದನ ಪೂಜಾರಿಯವರು ಗ್ರಾಮೀಣ ಪ್ರದೇಶಗಳ ತಮ್ಮ ಪ್ರವಾಸಕ್ಕಿಂತ ಮುಂಚೆ ಸಾವಿರಾರು ಜನರಿಗೆ ಸಾಲದ ಅರ್ಜಿ ಕೊಟ್ಟಿರಬೇಕಿತ್ತು ಎಂದು ಬಯಸುತ್ತಿದ್ದರು; ಮತ್ತು ಮೇಳಗಳಲ್ಲಿಯೇ ಸಾಲ ಹಂಚಿಕೆಯಾಗುವಂತೆ ಅವರು ನೋಡಿಕೊಳ್ಳುತ್ತಿದ್ದರು” ಎಂದು ಬ್ಯಾಂಕುಗಳ ಈಗಿನ ಸಮಸ್ಯೆಗಳ ಮೂಲವನ್ನು ಲೇಖಕರು ಹುಡುಕುತ್ತಾರೆ.

1989 ರ ವಿಶ್ವ ಬ್ಯಾಂಕ್ ಕಾರ್ಯಸೂಚಿ ಪತ್ರಿಕೆಯು ಇಂಥ ಸಾಲ ಹಂಚಿಕೆಗಳನ್ನು “ಹೊಣೆಗೇಡಿ ಹಣಕಾಸು ನಡೆ ಎಂದು ಕರೆಯಿತು. ದುರಂತ ಎಂದರೆ, ಸಾಮಾಜಿಕ ವಲಯಗಳಿಗೆ ಸಣ್ಣಪುಟ್ಟ ರೀತಿಯಲ್ಲಿ ಸಹಾಯ ಮಾಡುವ ಉದ್ದೇಶದ ಈ ವ್ಯವಸ್ಥೆ ಅಂತಿಮವಾಗಿ ಭಾರಿ ಪ್ರಮಾಣದಲ್ಲಿ ಸಾಲ ಪಡೆದ ಕ್ರೋನಿ ಕ್ಯಾಪಿಟಲಿಸ್ಟ್‍ರಿಗೂ ಸರ್ಕಾರ ತನ್ನದೇ ರೀತಿಯಲ್ಲಿ ಸಹಾಯ ಮಾಡುವ ಹಂತಕ್ಕೆ ಹೋಗಿ ಮುಟ್ಟಿತು” ಎಂದು ಕೌಲ್ ಅಭಿಪ್ರಾಯಪಡುತ್ತಾರೆ.

 ಇಂಥ ಮೇಳಗಳು ನಿಂತ ನಂತರ 21ನೇ ಶತಮಾನದ ಮೊದಲ ದಶಕದ ಅರ್ಧ ಭಾಗದ ವರೆಗೂ ಸುಸ್ತಿ ಸಾಲದ ಪ್ರಮಾಣ ನಿಯಂತ್ರಣದಲ್ಲಿಯೇ ಇತ್ತು. ‘ಆರ್ಥಿಕ ಚೇತರಿಕೆ’ ಕಾಣಿಸಿಕೊಳ್ಳುತ್ತಿದೆ ಎಂದು ಅನಿಸುತ್ತಿದ್ದಂತೆಯೇ ಬ್ಯಾಂಕುಗಳು ಕೈಗಾರಿಕೆÉ, ಮೂಲ ಸೌಕರ್ಯ ನಿರ್ಮಾಣ ಹಾಗೂ ಇಂಧನ ವಲಯಗಳಿಗೆ ಉದಾರವಾಗಿ ಸಾಲ ಕೊಡಲು ತೊಡಗಿದುವು. ಈ ಆರ್ಥಿಕ ಚೇತರಿಕೆ ಹೆಚ್ಚು ದಿನ ಸ್ಥಿರವಾಗಿ ನಿಲ್ಲಲಿಲ್ಲ. ಹಾಗೆ ನೋಡಿದರೆ 2008ರಲ್ಲಿಯೇ ಜಾಗತಿಕ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿತ್ತು. ಆದಾಗ್ಯೂ “ಶೇ 9 ರ ಜಿ.ಡಿ.ಪಿ ಬೆಳವಣಿಗೆಯನ್ನು ನಗದು ಮಾಡಿಕೊಳ್ಳಲು ಹೋಗಿ ಬೆಲೆಯುಳ್ಳ ಹಣ ಹೇಗೆ ತನ್ನ ಮೌಲ್ಯ ಕಳೆದುಕೊಂಡಿತು” ಎಂಬುದನ್ನು ಕೌಲ್ ವಿವರಿಸಿದ್ದಾರೆ.

2011-12ರ ವೇಳೆಗೆ ಆರ್ಥಿಕ ಸ್ಥಿತಿ ಎಲ್ಲಿಗೆ ಬಂದು ತಲುಪಿತ್ತು ಎಂದರೆ, “ತಮ್ಮ ಮರುಪಾವತಿ ಸಾಮಥ್ರ್ಯಕ್ಕೆ ಮೀರಿ ಕಂಪೆನಿಗಳು ಸಾಲ ಪಡೆದುಕೊಂಡಿದ್ದುವು. ಉದ್ಯಮ ವಲಯಕ್ಕೆ ಕೊಟ್ಟಿದ್ದ ಶೇ.73 ರಷ್ಟು ಸಾಲವು ಒಟ್ಟು ಸುಸ್ತಿ ಸಾಲದ ನಾಲ್ಕರಲ್ಲಿ ಮೂರನೇ ಪಾಲಿನಷ್ಟು ಇತ್ತು.” ಅಂದರೆ ದೊಡ್ಡ ಸಾಲಗಾರರು ದೊಡ್ಡ ಸುಸ್ತಿದಾರರೂ ಆಗಿದ್ದರು ಎಂದು ಅರ್ಥ. “2018ರ ಮಾರ್ಚ್ 31ರಲ್ಲಿ ಇದ್ದ ಒಟ್ಟು ಸುಸ್ತಿ ಸಾಲದ ಪ್ರಮಾಣ 9.61 ಲಕ್ಷ ಕೋಟಿ. ಅದರಲ್ಲಿ ಉದ್ಯಮದ ಪಾಲು 7.03 ಲಕ್ಷ ಕೋಟಿ. ಕೃಷಿ ಮತ್ತು ಪೂರಕ ಕ್ಷೇತ್ರಗಳ ಸಾಲದ ಪ್ರಮಾಣ ಕೇವಲ 85,344 ಕೋಟಿ ರೂಪಾಯಿ.”

 ರಿಜರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಡಾ.ರಘುರಾಮನ್ ರಾಜನ್ ಅವರು 2013ರಲ್ಲಿ ಮೊದಲ ಚಾಟಿ ಬೀಸಿ ಸುಸ್ತಿ ಸಾಲವನ್ನು ಬಯಲಿಗೆ ಎಳೆದರು. ಬ್ಯಾಂಕುಗಳಿಗೆ ಶಿಸ್ತು ಕಲಿಸಲು ಹೆಣಗಿದರು. ಅವರ ನಂತರ ಬಂದವರೂ ಇದೇ ಕ್ರಮಗಳನ್ನು ಮುಂದುವರಿಸಿದರು. ಆದರೆ, ಬೇಕಾಬಿಟ್ಟಿ ಸಾಲ ಕೊಟ್ಟು ಅದನ್ನು ವಸೂಲು ಮಾಡುವ ಹೊಣೆಗಾರಿಕೆ ಮರೆತ ಬ್ಯಾಂಕುಗಳಿಗೆ ಪಾಠ ಕಲಿಸಲು ಹೊರಟ ರಾಜನ್, ಉರ್ಜಿತ್ ಪಟೇಲ್ ಬದಲು, “ಇತಿಹಾಸ ಪದವೀಧರರಾದ ಶಶಿಕಾಂತ್ ದಾಸ್ ಅವರು ಆರ್‍ಬಿಐ ಗವರ್ನರ್ ಆಗುವುದು ಸರ್ಕಾರಕ್ಕೆ ಹೆಚ್ಚು ಇಷ್ಟದ ಸಂಗತಿ ಆಗಿತ್ತು.”

ಸಮಸ್ಯೆಗಳಿಗೆ ಸರಿಯಾದ ಉತ್ತರ ಹುಡುಕಲು ಇಷ್ಟವಿಲ್ಲದೇ ಇದ್ದಾಗ ಬೇರೆ ಇನ್ನೇನೋ ಮಾಡುವಂತೆ ಈಗಿನ ಕೇಂದ್ರ ಸರ್ಕಾರವು ಬ್ಯಾಂಕುಗಳ ವಿಲೀನಕ್ಕೆ ಕೈ ಹಾಕಿದೆ. ಇದೊಂದು ನಿರರ್ಥಕ ಕಸರತ್ತು. ‘ಹಾರ್ವರ್ಡ್ ಬಿಜಿನೆಸ್ ರಿವ್ಯೂ’ನ ಲೇಖನದ ಪ್ರಕಾರ ‘ವಿಲೀನಗಳ ಮತ್ತು ಸ್ವಾಧೀನಗಳ ವೈಫಲ್ಯದ ಪ್ರಮಾಣ ಶೇ 70ರಿಂದ 90ರಷ್ಟು’ ಎನ್ನುವ ಲೇಖಕರು “ಕೇವಲ ಶೇ 6.2ರಷ್ಟು ಮಾತ್ರ ಸುಸ್ತಿ ಸಾಲವಿದ್ದ, ಉಳಿದ ಬ್ಯಾಂಕುಗಳಿಗೆ ಮಾದರಿಯಾಗಬೇಕಿದ್ದ, ವಿಜಯಾ ಬ್ಯಾಂಕನ್ನು ಶೇ 22.7 ರಷ್ಟು ಮತ್ತು ಶೇ 12.5 ರಷ್ಟು ಸುಸ್ತಿ ಸಾಲ ಹೊಂದಿದ್ದ ದೇನಾ ಮತ್ತು ಬರೋಡಾ ಬ್ಯಾಂಕ್ ಜೊತೆಗೆ ವಿಲೀನ ಮಾಡಿದ್ದುದನ್ನು ಸಮರ್ಥಿಸುವುದು ಹೇಗೆ” ಎಂದು ಪ್ರಶ್ನಿಸುತ್ತಾರೆ. ಇದಕ್ಕಿಂತ ಮೊದಲು ನಡೆದ ವಿಲೀನದಲಿ,್ಲ ಕ್ರಮವಾಗಿ ಶೇ 28.8, ಶೇ 25.5 ಮತ್ತು ಶೇ 22.9 ರಷ್ಟು ಸುಸ್ತಿ ಸಾಲದ ಪ್ರಮಾಣ ಹೊಂದಿದ್ದ ಎಸ್‍ಬಿಎಂ (ಮೈಸೂರು), ಎಸ್‍ಬಿಪಿ (ಪಟಿಯಾಲ) ಮತ್ತು ಎಸ್‍ಬಿಎಚ್(ಹೈದರಾಬಾದ್)ಗಳು ಕೇವಲ ಶೇಕಡ 7.2 ರಷ್ಟು ಸುಸ್ತಿ ಸಾಲ ಹೊಂದಿದ್ದ ಎಸ್.ಬಿ.ಐ ನ ಹೆಗಲು ಏರಿ ಕುಳಿತುದನ್ನೂ ಪ್ರಶ್ನಿಸುತ್ತಾರೆ.

ಸರ್ಕಾರಕ್ಕೆ ವಿವೇಕ ಮತ್ತು ಅಧಿಕಾರ ಎರಡೂ ಜೊತೆಯಾಗಿ ಹೋಗುವುದು ಬೇಕಿರುವುದಿಲ್ಲ. ನೀರವ್ ಮೋದಿ ಮತ್ತು ಮಲ್ಯ ಅಂಥವರಿಗೆ ಸಾಲ ಕೊಡುವುದು ಜಾಣತನವಲ್ಲ ಎಂದು ಬ್ಯಾಂಕಿನ ಅಧಿಕಾರಿಗಳಿಗೆ ತಿಳಿದಿರಬಹುದು. ಆದರೆ, ಸಾಲ ನಿರಾಕರಿಸುವ ಅಧಿಕಾರ ಅವರಿಗೆ ಇರುವುದಿಲ್ಲ. ಅದೇ ಎಚ್‍ಡಿಎಫ್‍ಸಿ ಬ್ಯಾಂಕಿನ ಉಪ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪರೇಶ್ ಸುಖತಂಕರ್ ಅವರು ಮಲ್ಯ ಅವರಿಗೆ ಸಾಲ ಕೊಡಲು ನಿರಾಕರಿಸುತ್ತಾರೆ. “ನೀವು ಅಪಾಯಕಾರಿ ವ್ಯಕ್ತಿ. ನಿಮ್ಮಂಥವರು ನಮ್ಮ ಬ್ಯಾಂಕಿಗೂ ಅಪಾಯಕಾರಿಯೇ. ನನ್ನ ಉತ್ತಮ ಸ್ನೇಹಿತರಾದ ನೀವು ಕಾಫಿ ಕುಡಿಯಿರಿ, ಜಾಗ ಖಾಲಿ ಮಾಡಿರಿ” ಎಂದು ಹೇಳಿ ಮಲ್ಯ ಅವರನ್ನು ಸಾಗಹಾಕಿದ್ದ ಪರೇಶ್ ಅವರ ಹಾಗೆ ವಿವೇಕದಿಂದ ಮತ್ತು ಅಧಿಕಾರಯುತವಾಗಿ ನಡೆದುಕೊಳ್ಳುವುದು ಸರ್ಕಾರಿ ಬ್ಯಾಂಕಿನವರಿಗೆ ಸಾಧ್ಯವಿಲ್ಲ. ಖಾಸಗಿ ಬ್ಯಾಂಕುಗಳಲ್ಲಿ ಹಗರಣ ಮಾಡಿದ ಯಸ್ ಬ್ಯಾಂಕಿನ ರಾಣಾ ಕಪೂರ್ ಆಗಲಿ, ಐಸಿಐಸಿಐ ಬ್ಯಾಂಕಿನ ಚಂದಾ ಕೊಚ್ಚಾರ್ ಆಗಲಿ ಬಚಾವಾಗಲು ಆಗಿಲ್ಲ. ಆದರೆ, ಸರ್ಕಾರಿ ಬ್ಯಾಂಕಿನ ಎಷ್ಟು ಎಂ.ಡಿ.ಗಳು ಅಥವಾ ಸಿ.ಇ.ಒಗಳು ಸಿಕ್ಕಿ ಬಿದ್ದಿದ್ದಾರೆ ಎಂದು ಕೌಲ್ ಕೇಳಿದ್ದಾರೆ.

“ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿ ಇರುವಾಗ ಸಾಲ ಕೊಡುವಂತೆ ಬ್ಯಾಂಕುಗಳಿಗೆ ಕುಮ್ಮಕ್ಕು ಕೊಡುವುದು ಸರ್ಕಾರಗಳ ತಕ್ಷಣದ ಪ್ರಲೋಭನೆ. ಹಾಗೆಯೇ ತಮಗೆ ನಿಕಟವಾಗಿರುವ ಕ್ರೋನಿ ಕ್ಯಾಪಿಟಲಿಸ್ಟ್‍ರಿಗೆ ಸಹಾಯ ಮಾಡುವುದೂ ಅವುಗಳಿಗಿರುವ ಅನಿವಾರ್ಯತೆ. ಇದರ ದುಷ್ಪರಿಣಾಮ ಆಗುವುದು ನಮ್ಮಂಥ ತೆರಿಗೆ ಪಾವತಿದಾರರ ಮೇಲೆ. ಮೌಲ್ಯ ಕಳೆದುಕೊಂಡ ಹಣದ ಬಿಕ್ಕಟ್ಟು ನಮ್ಮ ಮೇಲೆ ಎರಗುವುದು ದೂರವೇನೂ ಇಲ್ಲ” ಎಂದು ಕೌಲ್ ತಮ್ಮ ಪುಸ್ತಕವನ್ನು ಮುಗಿಸಿದ್ದಾರೆ.

ಐಎಂಎದಂಥ ದಗಲ್ಬಾಜಿಗಳು ನಡೆಸುವ ಚಿನ್ನ ಬೆಳ್ಳಿ ಅಂಗಡಿಗಳಲ್ಲಿ ಹಾಗೂ ದಗಾಕೋರರು ನಡೆಸುವ ಗುರು ರಾಘವೇಂದ್ರ ಸಹಕಾರಿ ಬ್ಯಾಂಕುಗಳಲ್ಲಿ ಹೋಗಿ ಜನ ಹಣ ಇಟ್ಟು ಏಕೆ ಮೂರು ನಾಮ ಹಾಕಿಸಿಕೊಳ್ಳುತ್ತಾರೆ ಎಂಬುದನ್ನು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನ (ಪಿಎಂಸಿ) ಹಗರಣದ ಮೂಲಕ ಪರೋಕ್ಷವಾಗಿ ವಿವರಿಸುವ ಲೇಖಕರು ಸರ್ಕಾರಿ ಬ್ಯಾಂಕಿನಲ್ಲಿ ಇಟ್ಟಿರುವ ಹಣದ ಸುರಕ್ಷತೆಯ ಕುರಿತೂ ಗಂಭೀರ ಅನುಮಾನಗಳನ್ನು ಎತ್ತಿದ್ದಾರೆ. ಈ ಅನುಮಾನಗಳನ್ನು ಎತ್ತಬೇಕಿದ್ದ ಮಾಧ್ಯಮ ಮೌನವಾಗಿದೆ. ಏಕೆಂದರೆ, “ಭಾರತೀಯ ಮಾಧ್ಯಮವು ಬಹುತರವಾಗಿ ತಾನು ವರದಿ ಮಾಡುವ ಕಂಪೆನಿಗಳು ಏನನ್ನು ಬರೆಯಬೇಕು ಎಂದು ಬಯಸುತ್ತವೆಯೋ ಅದನ್ನು ಮಾತ್ರ ಬರೆಯುತ್ತ್ತದೆ. ಏಕೆಂದರೆ ನಿಮಗೆ ಉಣಬಡಿಸುವ ಕೈಯನ್ನು ಯಾರಾದರೂ ಕಚ್ಚುತ್ತಾರೆಯೇ” ಎಂದು ಅವರು ಕೇಳುತ್ತಾರೆ!

*ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕರು. ಹಲವು ಕೃತಿಗಳ ಲೇಖಕರು. ಈಚೆಗೆ ದೇವದತ್ತ ಪಟ್ಟನಾಯಕರ ಬೃಹತ್ ಇಂಗ್ಲಿಷ್ ಕೃತಿ “ಸೀತಾ ರಾಮಾಯಣ”ವನ್ನು ಕನ್ನಡಕ್ಕೆ ತಂದಿದ್ದಾರೆ.

Leave a Reply

Your email address will not be published.