ಸರ್ಕಾರ ಉಳಿದಿದ್ದೇ ದೊಡ್ಡ ಸಾಧನೆ!

ಸಾಮಾಜಿಕ ಅಧ್ಯಯನ, ಸಮೀಕ್ಷೆ ಇತ್ಯಾದಿ ಚಟುವಟಿಕೆಗಳ ಮೂಲಕ ದೇಶದಲ್ಲಿ ವಿವಿಧ ಸರಕಾರಗಳು ಉತ್ತಮ ಆಡಳಿತ ನೀಡಲು ಮತ್ತು ಜನತೆಗೆ ಉತ್ತರದಾಯಿಯಾಗಿರುವಂತೆ ಉತ್ತೇಜಿಸುವ ಸ್ವಯಂ ಸೇವಾ ಸಂಸ್ಥೆಯೇ ದಕ್ಷ. ಇದರಲ್ಲಿ ಪ್ರಾಧ್ಯಾಪಕರು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ತೊಡಗಿಕೊಂಡಿದ್ದಾರೆ. 2008ರಲ್ಲಿ ಈ ಸಂಸ್ಥೆ ಸ್ಥಾಪನೆಯಾಯಿತು. ವೃತ್ತಿಯಿಂದ ವಕೀಲರಾಗಿರುವ ದಕ್ಷ ಸಂಘಟನೆಯ ಸಹಸಂಸ್ಥಾಪಕ ಹರೀಶ್ ನರಸಪ್ಪ ಅವರು ಸಮ್ಮಿಶ್ರ ಸರ್ಕಾರ ಕುರಿತು ಹೀಗೆ ಹೇಳುತ್ತಾರೆ.

ಲೋಕಸಭೆ ಚುನಾವಣೆ ಮಧ್ಯದಲ್ಲಿ ಕರ್ನಾಟಕ ಕಾಂಗ್ರೆಸ್-ಜೆಡಿ(ಎಸ್) ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆಗಳನ್ನು ವಿಶ್ಲೇಷಿಸುವುದು ಕಷ್ಟದ ಕೆಲಸ. ಏಕೆಂದರೆ, ಎಲ್ಲರ ನೋಟ ಲೋಕಸಭೆ ಚುನಾವಣೆಯ ಮೇಲಿದೆ. ಆದರೆ, ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಹಾಗೂ ಅದು ಮಾಡಿರುವ ಹಾಗೂ ಮಾಡದೆ ಇರುವ ಕೆಲಸಗಳ ಬಗ್ಗೆ ಗಮನ ಹರಿಸುವುದು ಪ್ರಜಾಪ್ರಭುತ್ವಕ್ಕೆ ಮುಖ್ಯ. ಪ್ರಜಾಪ್ರಭುತ್ವ ಕೇವಲ ಚುನಾವಣೆಯಲ್ಲಿ ಮತ ಚಲಾಯಿಸುವುದರಿಂದ ಶಕ್ತಿ ತುಂಬಿಕೊಳ್ಳುವುದಿಲ್ಲ. ಚುನಾವಣೆಯ ನಂತರ ನಮ್ಮ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾವು ನಿರುಂಕುಶವಾಗಿ ಹಾಗೂ ನಿಷ್ಪಕ್ಷಪಾತದಿಂದ ವಿಶ್ಲೇಷಿಸಬೇಕು. ಆಗಲೇ ನಮ್ಮ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ದೊರಕುವುದು.

ಈ ಒಂದು ವರ್ಷದಲ್ಲಿ ನಮ್ಮ ನೆನಪಿಗೆ ಮೊದಲು ಬರುವುದು ಸರ್ಕಾರವನ್ನು ಉಳಿಸುವುದಕ್ಕಾಗಿ ಕಾಂಗ್ರೆಸ್-ಜೆಡಿ(ಎಸ್) ಪ್ರಯತ್ನ ಹಾಗೂ ಬೀಳಿಸುವುದಕ್ಕಾಗಿ ಬಿಜೆಪಿಯವರು ನಡೆಸುತ್ತಿರುವ ನಿರಂತರ ಸಾಹಸ! ‘ಸರ್ಕಾರ ಇನ್ನೊಂದು ತಿಂಗಳಾದ ನಂತರ ಇರುವುದಿಲ್ಲ’ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಮೈತ್ರಿ ಪಕ್ಷಗಳ ನಾಯಕರು, ‘ನಾವೇ ಐದು ವರ್ಷ ಇರುತ್ತೇವೆ..’ ಎಂದು ಹೇಳುತ್ತಿದ್ದಾರೆ. ಇವೆರೆಡು ದಿನನಿತ್ಯದ ಬೆಳವಣಿಗೆಗಳಾಗಿಬಿಟ್ಟಿವೆ.

ಎಂ.ಎಲ್.ಎ.ಗಳಿಗೆ ಹಣದ ಆಮಿಷ ಒಡ್ಡುವುದು ಎಷ್ಟು ಸಾಮಾನ್ಯವಾಗಿದೆಯೆಂದರೆ, ಚರ್ಚೆಯಾಗುವುದು ಕೇವಲ ಹಣದ ಮೊತ್ತ ಮಾತ್ರ! ಇದರ ಹಿಂದಿನ ಅನೈತಿಕತೆ ಚರ್ಚೆಯಾಗುವುದೇ ಇಲ್ಲ!

ಈ ವರ್ಷ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೊಡ್ಡದಾದ ಒಂದು ಕಪ್ಪು ಚುಕ್ಕೆ. ಎಂ.ಎಲ್.ಎ.ಗಳಿಗೆ ಹಣದ ಆಮಿಷ ಒಡ್ಡುವುದು ಎಷ್ಟು ಸಾಮಾನ್ಯವಾಗಿದೆಯೆಂದರೆ, ಚರ್ಚೆಯಾಗುವುದು ಕೇವಲ ಹಣದ ಮೊತ್ತ ಮಾತ್ರ! ಇದರ ಹಿಂದಿನ ಅನೈತಿಕತೆ ಚರ್ಚೆಯಾಗುವುದೇ ಇಲ್ಲ! ವಿರೋಧ ಪಕ್ಷದ ನಾಯಕರು ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡರು ಕೂಡಾ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವ ನೈತಿಕತೆಯನ್ನು ಆಡಳಿತ ಪಕ್ಷಗಳು ತೋರಿಸಲೇ ಇಲ್ಲ. ಆಡಳಿತ ಪಕ್ಷದ ಇಬ್ಬರು ಎಂ.ಎಲ್.ಎ.ಗಳು ‘ರೆಸಾರ್ಟ್ ರಾಜಕೀಯದ’ ನಡುವೆ ಕುಡಿದು ಹೊಡೆದಾಡಿದರು. ಒಬ್ಬರು ಆಸ್ಪತ್ರೆ ಸೇರಿದರೆ, ಮತ್ತೊಬ್ಬರು ತಲೆ ಮರೆಸಿಕೊಂಡು ಕೆಲವು ತಿಂಗಳ ನಂತರ ಸೆರೆಸಿಕ್ಕರು.

ಈ ರೀತಿಯ ವಾತಾವರಣದಲ್ಲಿ ಸರ್ಕಾರ ನಿಜವಾಗಿಯೂ ಕೆಲಸ ಮಾಡುತ್ತದೆಯೇ? ಅದರಲ್ಲೂ ಜನರ ಹಿತಕ್ಕಾಗಿ. ಇದು ಸಾಧ್ಯವೇ ಇಲ್ಲ ಎಂದು ನಾವು ಖಡಾಖಂಡಿತವಾಗಿ ಹೇಳಬಹುದು. ಇದರ ಜೊತೆಗೆ ಲೋಕಸಭೆ ಚುನಾವಣೆ ಬಂದಿದ್ದರಿಂದ, ಪಕ್ಷಗಳು ಚುನಾವಣೆಗೆ ಮುಖಮಾಡಿ, ಆಡಳಿತವನ್ನು ಮರೆತಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕೂಡಾ ಹಣದ ಹೊಳೆಯನ್ನೇ ಹರಿಸಿದ್ದಾರೆ. ಇಷ್ಟೊಂದು ಖರ್ಚು ಮಾಡಿದ ನಂತರ, ಪಕ್ಷಗಳು-ಅಭ್ಯರ್ಥಿಗಳು ಸ್ವಾಭಾವಿಕವಾಗಿ ಹಣ ಮಾಡಲು ತೊಡಗುತ್ತಾರೆಯೇ ಹೊರತು ಜನಹಿತ ಕಾರ್ಯಗಳನ್ನು ಮುಂಚೂಣಿಯಲ್ಲಿಡುವುದಿಲ್ಲ.

ಆಡಳಿತ ಯಂತ್ರದಲ್ಲಿ, ಕಡಿಮೆ ಅವಧಿಯಲ್ಲೇ ಅತಿಯಾಗಿ ಅಧಿಕಾರಿಗಳನ್ನು ಒಂದು ಜಾಗದಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಆದ್ದರಿಂದ ಸ್ಥಿರತೆ ಕಾಣುತ್ತಿಲ್ಲ. ಸ್ಥಿರತೆ ಇಲ್ಲದೆ ಯೋಜನೆಗಳನ್ನು ಅನುಷ್ಠಾನ ಮಾಡುವುದು ಕಷ್ಟ.

ಹೀಗಿದ್ದರು ಕೂಡಾ ನಾವು ಸರ್ಕಾರದ ಸಾಧನೆಯನ್ನು ವಿಶ್ಲೇಷಿಸಬೇಕು, ಇಲ್ಲದಿದ್ದರೆ, ನಾವು ಕೂಡಾ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ. ಕಾಂಗ್ರೆಸ್-ಜೆಡಿ(ಎಸ್) 2018ರ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದರಿಂದ ಒಂದೇ ಪ್ರಣಾಳಿಕೆ ಇರಲಿಲ್ಲ. ಸರ್ಕಾರ ರಚಿಸಿದ ನಂತರ ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮನ್ನು ಘೋಷಿಸಿದರು. ಇದರಲ್ಲಿ, ಪ್ರಮುಖವಾಗಿ ರೈತರ ಕೃಷಿ ಸಾಲ ಮನ್ನಾ, ಒಂದು ಕೋಟಿ ಉದ್ಯೋಗ ಸೃಷ್ಟಿ, ನೀರಾವರಿಗೆ ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ಮೀಸಲಿಡುವುದು, ಹೊಸ ಆರೋಗ್ಯ ನೀತಿ, ಬಡವರಿಗೆ ಇಪ್ಪತ್ತು ಲಕ್ಷ ಹೊಸಮನೆಗಳು ಮುಖ್ಯವಾಗಿ ಕಾಣಿಸಿಕೊಂಡವು. ಎರಡೂ ಪಕ್ಷಗಳ ಪ್ರಣಾಳಿಕೆಗಳಿಂದ ಕೆಲವು ಅಂಶಗಳನ್ನು ಆಯ್ದ ಈ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಸೇರಿಸಲಾಯಿತು.

ಕೆಲವು ವಿಷಯಗಳನ್ನು ಮುಖ್ಯಮಂತ್ರಿಗಳು ತಮ್ಮ ಎರಡು ಬಜೆಟ್‍ಗಳಲ್ಲಿ ಸೇರಿಸಿದ್ದಾರೆ. ಕೃಷಿ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡಿದ್ದಾರೆ. ಎಷ್ಟರ ಮಟ್ಟಿಗೆ ಇದು ರೈತರಿಗೆ ತಲುಪಿದೆ ಎನ್ನುವ ಬಗ್ಗೆ ಅಂಕಿಅಂಶಗಳು ಪೂರ್ಣವಾಗಿ ಲಭ್ಯವಿಲ್ಲದಿದ್ದರೂ ಸಹ, ಕೊಟ್ಟ ಮಾತಿಗೆ ಸರ್ಕಾರ ಬದ್ಧವಾಗಿದೆ ಹಾಗೂ ನುಡಿದಂತೆ ನಡೆಯುವ ಪ್ರಯತ್ನವನ್ನು ಮಾಡಿದೆ. ಇದೇ ನಿಟ್ಟಿನಲ್ಲಿ ಆರೋಗ್ಯ ಕರ್ನಾಟಕ, ಮಾತೃಶ್ರೀ ಯೋಜನೆ, ಕಾಯಕ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆಗಳನ್ನು ಘೋಷಿಸಿದೆ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಶಕ್ತಿ ತುಂಬಲು ಪ್ರಯತ್ನಿಸಿದೆ. ಈ ಎಲ್ಲ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಲು ಇನ್ನೂ ಒಂದು ವರ್ಷವಾದರೂ ಬೇಕು. ಇವುಗಳನ್ನು ಸಕ್ರಿಯ ಮಾಡುವುದಕ್ಕೆ ಸರಿಯಾದ ಆಡಳಿತ ಯಂತ್ರ ಹಾಗೂ ನಾಯಕತ್ವ -ರಾಜಕೀಯ ಹಾಗೂ ಆಡಳಿತ- ಬೇಕು, ಇದು ಸಿಗುತ್ತಿಲ್ಲ. ರಾಜ ಕೀಯ ಅನಿಶ್ಚತೆಯಿಂದ, ರಾಜಕೀಯ ನಾಯಕರು ಆಡಳಿತದ ಬಗ್ಗೆ ಗಮನ ಹರಿಸುತ್ತಿಲ್ಲ. ಆಡಳಿತ ಯಂತ್ರದಲ್ಲಿ, ಕಡಿಮೆ ಅವಧಿಯಲ್ಲೇ ಅತಿಯಾಗಿ ಅಧಿಕಾರಿಗಳನ್ನು ಒಂದು ಜಾಗದಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಆದ್ದರಿಂದ ಸ್ಥಿರತೆ ಕಾಣುತ್ತಿಲ್ಲ. ಸ್ಥಿರತೆ ಇಲ್ಲದೆ ಯೋಜನೆಗಳನ್ನು ಅನುಷ್ಠಾನ ಮಾಡುವುದು ಕಷ್ಟ.

ಸರ್ಕಾರದ ಕೆಲವು ನಡೆಗಳು ಸರಿ ಕಾಣುತ್ತಿಲ್ಲ:

ಮೊದಲನೆಯದಾಗಿ, ಧಾರ್ಮಿಕ ಸಂಸ್ಥೆಗಳಿಗೆ ಹಾಗೂ ಮಠಗಳಿಗೆ ನೇರವಾಗಿ ಬಜೆಟ್‍ನಲ್ಲಿ ಹಣ ನೀಡಿರುವುದು. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಬಿಜೆಪಿ ಸರ್ಕಾರ ಈ ಅಭ್ಯಾಸವನ್ನು ಶುರು ಮಾಡಿತ್ತು, ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಈ ಅಭ್ಯಾಸವನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಶುರುವಾಗಿದೆ. ಇದು ಒಂದು ಹಿನ್ನೆಡೆ.

ಎರಡನೆಯದಾಗಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮನ್ನು ಪ್ರಾರಂಭಿಸಿರುವುದು. ಇಂಗ್ಲಿಷ್ ಕಲಿಕೆ ಎಲ್ಲರಿಗೂ ಅಗತ್ಯ. ಆದರೆ, ಸರ್ಕಾರ ಇದರ ಬಗ್ಗೆ ಒಂದು ಸಂಪೂರ್ಣ ಹೊಸನೀತಿಯನ್ನು ಚರ್ಚಿಸಿ, ಘೋಷಿಸಬೇಕು. ಯೋಚನೆ ಇಲ್ಲದೆ, ದೂರದೃಷ್ಟಿಯಿಲ್ಲದೆ ಈ ನೀತಿಯನ್ನು ತಂದರೆ, ನಮ್ಮ ಮಕ್ಕಳು ಯಾವುದೇ ಭಾಷೆಯನ್ನು ಸರಿಯಾಗಿ ಕಲಿಯುವುದಿಲ್ಲ. ಇವತ್ತಿನ ಅನೇಕ ಪದವೀಧರರಿಗೂ ಕೂಡ, ಇಂಗ್ಲಿಷ್ ಹಾಗೂ ಕನ್ನಡ, ಎರಡರಲ್ಲಿ ಯಾವುದೇ ಭಾಷೆ ಕೂಡಾ ಸರಿಯಾಗಿ ಬರುವುದಿಲ್ಲ. ಈ ವಿಷಯದ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಿದೆ.

ಬೆಂಗಳೂರನ್ನು ಉಳಿಸುವ ಬಗ್ಗೆ ಈ ಸರ್ಕಾರ ಯೋಚಿಸಬೇಕು. ಇನ್ನು ಎಷ್ಟು ವರ್ಷಕಾಲ ಕಾನೂನು ಬಾಹಿರವಾಗಿ ಬೆಂಗಳೂರು ಬೆಳೆಯಬೇಕು, ಬೇರೆ ನಗರಗಳು ಅಭಿವೃದ್ಧಿಯಾಗಬಾರದೆ?

ಮೂರನೆಯದು, ಬೆಂಗಳೂರು ನಗರದಲ್ಲಿ ಸಾವಿರಗಟ್ಟಲೆ ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಘೋಷಿಸಲಾಗಿದೆ. ಇದರ ಬಗ್ಗೆ ಸಮಗ್ರ ಚರ್ಚೆ ನಡೆದಿಲ್ಲ. ಸಂವಿಧಾನದ ಪ್ರಕಾರ ಈ ರೀತಿಯ ಕೆಲಸವನ್ನು ಮೆಟ್ರೊಪಾಲಿಟನ್ ಪ್ಲಾನಿಂಗ್ ಕಮಿಟಿ (ಎಂಪಿಸಿ) ಪರಿಶೀಲಿಸಬೇಕು. ಈ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಬೆಂಗಳೂರನ್ನು ಉಳಿಸುವ ಬಗ್ಗೆ ಈ ಸರ್ಕಾರ ಯೋಚಿಸಬೇಕು. ಇನ್ನು ಎಷ್ಟು ವರ್ಷಕಾಲ ಕಾನೂನು ಬಾಹಿರವಾಗಿ ಬೆಂಗಳೂರು ಬೆಳೆಯಬೇಕು, ಬೇರೆ ನಗರಗಳು ಅಭಿವೃದ್ಧಿಯಾಗಬಾರದೆ?

ಕೊನೆಯಲ್ಲಿ, ಈ ಸರ್ಕಾರದ ಸಾಧನೆಯೇನು ಎಂಬ ಪ್ರಶ್ನೆಗೆ ನಮ್ಮಲ್ಲಿರುವ ಮೊದಲ ಉತ್ತರ -ಸರ್ಕಾರ ಬೀಳದಿರುವುದೇ ಒಂದು ದೊಡ್ಡ ಸಾಧನೆ! ಬಹುಶಃ ಇದರಲ್ಲಿ ಜನರದ್ದು ತಪ್ಪಿದೆ, ದುಡ್ಡಿನ ಆಮಿಷಕ್ಕೆ ಒಳಗಾಗುವ ಜನರನ್ನು ನಾವು ಆರಿಸಿದರೆ ಮತ್ತಿನ್ನೇನು ಅಪೇಕ್ಷೆ ಮಾಡಲಾದೀತು! ಎರಡನೇ ಉತ್ತರ -ಎಷ್ಟೆಲ್ಲ ಅಡೆತಡೆಗಳಿದ್ದರೂ ನುಡಿದಂತೆ ನಡೆಯುವ ಪ್ರಯತ್ನ ಮಾಡಿದ್ದಾರೆ ಕೆಲವು ವಿಷಯಗಳಲ್ಲಿ. ಜನರಿಗೆ ಒಳ್ಳೆಯದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಹೇಳಲು ಬೇಕಾಗಿರುವ ಅಂಕಿಅಂಶಗಳಿಗಾಗಿ ಇನ್ನೊಂದಷ್ಟು ಕಾಲ ಕಾಯಬೇಕು.

Leave a Reply

Your email address will not be published.