ಸರ್ವಂ ಆಧಾರ್ ಮಯಂ

ಆಧಾರ್ ಕಾರ್ಡು ಒಂದು ದೇಶಕ್ಕೆ ಸೀಮಿತವೇ? ಅಥವಾ ವಿಶ್ವವ್ಯಾಪಕವೇ? ಇಲ್ಲಿನ ತಾಂತ್ರಿಕತೆಯನ್ನು ಸದರಿ ಪ್ರಾಧಿಕಾರದವರಿಗೆ ಬಿಟ್ಟು (ಸುರಕ್ಷತೆ-ಗೌಪ್ಯತೆ ದೃಷ್ಟಿಯಿಂದ) ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಬಹುದೇ?

ಬಳ್ಳಾರಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸಬೇಕು. ನಿಮ್ಮ ಆಧಾರ ಕಾರ್ಡನ್ನು ಬಸ್ ಪ್ರವೇಶ ದ್ವಾರದಲ್ಲಿನ ಕಿಂಡಿಯಲ್ಲಿ ತೂರಿಸಿದರೆ ಸಾಕು. ತಕ್ಷಣ ಅದರಲ್ಲಿನ ಪರದೆಮೇಲೆ ಮುಂದಿನ ಊರುಗಳ ಹೆಸರು, ಊರಿನ ಪ್ರಮುಖ ಗುರುತಿನ ಚಿಹ್ನೆ ಬರುತ್ತದೆ. ಅಂದರೆ ಅಕ್ಷರಸ್ಥ-ಅನಕ್ಷರಸ್ಥರಿಬ್ಬರಿಗೂ ಅನುಕೂಲವಾಗುವಂತೆ ಅಕ್ಷರ ಮತ್ತು ಚಿಹ್ನೆ(ಚಿತ್ರ)ಗಳು ಇರುತ್ತವೆ. ಉದಾ: ಹಿರಿಯೂರಿಗೆ-ವಾಣಿವಿಲಾಸ, ತುಮಕೂರಿಗೆ-ಸಿದ್ಧಗಂಗಾಮಠ; ಬೆಂಗಳೂರಿಗೆ-ಕೆಂಪೇಗೌಡ ಗೋಪುರ ಇತ್ಯಾದಿ. ಜತೆಗೆ ಅದೆಲ್ಲವೂ ಹಿರಿಯ ನಾಗರಿಕರ, ಅಂಗವಿಕಲ ಸ್ನೇಹಿ ಸೌಲಭ್ಯ ಕಲ್ಪಿತವಾಗಿರುತ್ತವೆ. ಅದನ್ನು ಒತ್ತಿದ ಕ್ಷಣ ನಿಮ್ಮ ಸೀಟಿನ ಸಂಖ್ಯೆಯೂ ಗೊತ್ತಾಗುತ್ತದೆ. ಅಲ್ಲಿ ಹೋಗಿ ಆರಾಮವಾಗಿ ಕುಳಿತೋ ಮಲಗಿಯೋ ಪ್ರಯಾಣ ಮಾಡಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಕ್ಷಣಾರ್ಧದಲ್ಲಿ ಬಸ್ ದರದ ಖರ್ಚು ಹಾಕಿ ಕೆ.ಎಸ್.ಆರ್.ಟಿ.ಸಿ.ಗೆ ಜಮಾ ಆಗಿರುತ್ತದೆ. ಇದಕ್ಕೆ ಹಣವೆಣಿಸುವ ಪ್ರಮೇಯವಿಲ್ಲ. ಅಷ್ಟೇ ಯಾಕೆ, ನಿರ್ವಾಹಕರ ಅಗತ್ಯವಿಲ್ಲ. ನೀವು ಸೇರಬೇಕಾದ ಸ್ಥಳ ಬಂದಾಗ ನಿಮ್ಮ ಸೀಟಿನ ಮುಂದಿನ ಪರದೆಯಲ್ಲಿ ಬಜ್‍ಬಜ್ ಧ್ವನಿ ಬರುತ್ತದೆ. ಆಗ ನೀವು ಮಲಗಿದ್ದರೂ ಎಚ್ಚರವಾಗಿ ಇಳಿದು ಹೋಗಬಹುದು.

ನೀವು ಆಧಾರ್ ಕಾರ್ಡ್‍ನ್ನು ಕಿಂಡಿಯಲ್ಲಿ ಹಾಕುವಾಗಲೇ ನಿಮ್ಮ ಜೈವಿಕ (ಬಯೋಮೆಟ್ರಿಕ್) ತಾಳೆಯಾಗುತ್ತದೆ. ಬೆರಳಿನ ಗುರುತು, ಕಣ್ಣಿನ ಪಾಪೆ, ಮುಖಚಹರೆ ಮುಂತಾದ ಹಲವಾರು ಆಯಾಮದಲ್ಲಿ ತಾಳೆಮಾಡಿ ಸರಿಹೊಂದಿದರೆ ಮಾತ್ರ ನಿಮಗೆ ಪ್ರವೇಶ ಪ್ರಾಪ್ತಿ. ತಪ್ಪಿದ್ದಲ್ಲಿ, ಜತೆಗೆ ಖಾತೆಯಲ್ಲಿ ಅಗತ್ಯ ಪ್ರಮಾಣದ ಮೊತ್ತವಿಲ್ಲದಿದ್ದರೂ ನಿಮಗೆ ಪ್ರವೇಶ ದೊರೆಯದು.

ಮೇಲಿನದು ಒಂದು ಉದಾಹರಣೆಯಷ್ಟೆ. ಅದೊಂದೇ ಕಾರ್ಡಿನಿಂದ ಸಕಲ ವ್ಯವಹಾರವೂ ಜರುಗುತ್ತದೆ. ನಿಮಗೆ ಆಶ್ಚರ್ಯವಾಗಬಹುದು. ಪ್ರತಿಯೊಬ್ಬನಿಗೂ ಈ ಕಾರ್ಡಿರಬೇಕು. ಇದಿದ್ದರೆ ನಿಮಗೆ ಪ್ರತ್ಯೇಕ ಗುರುತಿನಚೀಟಿ, ಬ್ಯಾಂಕ್/ ಏಟಿಎಂ, ಮತಚೀಟಿ, ಸರ್ವೆ ನಂ., ಮನೆ ನಂ., ಆಸ್ತಿ, ವಿದ್ಯುತ್, ಅನಿಲಸಂಪರ್ಕ, ಪಾನ್ ಸಂಖ್ಯೆ; ಶಿಕ್ಷಣ, ಉದ್ಯೋಗ ಸಂಸ್ಥೆ ನೀಡುವ ಸಂಖ್ಯೆ ಎಲ್ಲವೂ ಇದೇ ಆಗಿರುತ್ತದೆ. ಅವುಗಳಿಗಾಗಿ ಪ್ರತ್ಯೇಕ ಸಂಖ್ಯೆಯಾಗಲೀ ಕಾರ್ಡ್ ಆಗಲಿ ಇರುವುದಿಲ್ಲ. ನಿಮ್ಮೆಲ್ಲಾ ವ್ಯವಹಾರವೂ, ಆರ್ಥಿಕ-ಆರ್ಥಿಕೇತರ, ಈ ಆಧಾರಿತ ಕಾರ್ಡ್ ಮೇಲೆಯೇ ಜರುಗುತ್ತದೆ.
ಹಾಗಾದರೆ ಈ ಕಾರ್ಡು ಒಂದು ದೇಶಕ್ಕೆ ಸೀಮಿತವೇ? ಅಥವಾ ವಿಶ್ವವ್ಯಾಪಕವೇ? ಇಲ್ಲಿನ ತಾಂತ್ರಿಕತೆಯನ್ನು ಸದರಿ ಪ್ರಾಧಿಕಾರದವರಿಗೆ ಬಿಟ್ಟು (ಸುರಕ್ಷತೆ-ಗೌಪ್ಯತೆ ದೃಷ್ಟಿಯಿಂದ) ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಬಹುದೇ?

2009-10ರ ಸುಮಾರಿನಲ್ಲಿ ಅಂದಿನ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನಸಿಂಗ್ ಅವರು ಮಾಹಿತಿ ತಂತ್ರ ಜ್ಞಾನದ ದೈತ್ಯ ಸಂಸ್ಥೆಯಾದ ಇನ್ಫೋಸಿಸ್‍ನಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದ ನಂದನ್ ನೀಲೆಕೇಣಿ ಅವರನ್ನು ತಂದು ದೇಶದಲ್ಲಿ ಆಧಾರ ತಂತ್ರಜ್ಞಾನವನ್ನು ಜಾರಿಗೆ ತರುವ ಬೃಹತ್ ಯೋಜನೆಯನ್ನು ಅಳವಡಿಸಿಕೊಂಡರು. ಅದಕ್ಕಾಗಿ ಪ್ರಾರಂಭಿಕ ಬಡ್ಜೆಟ್ ಸುಮಾರು ಹತ್ತುಸಾವಿರ ಕೋಟಿ ಹಣವನ್ನು ಕಾಯ್ದಿರಿಸಲಾಯಿತು. ಆಗ ಇಡೀ ದೇಶವೇ ನಿಬ್ಬೆರಗಾಯಿತು. ಕೇವಲ ಒಂದು ಗುರುತಿನ ಚೀಟಿಗೆ ಇಷ್ಟೊಂದು ಅಪವ್ಯಯವೇ? ನೀಲೆಕೇಣಿಯಂಥ ಮಹಾ ತಂತ್ರಜ್ಞಾನಿ ಈವೊಂದು ಅತಿಸಣ್ಣ ಹೊಣೆಗಾರಿಕೆಗೆ ಅದು ಹೇಗೆ ಒಪ್ಪಿ ವರಿಷ್ಠಹುದ್ದೆ ತೊರೆದು ಬಂದರು ಎಂದು ಮುಂತಾಗಿ ಜನಸಾಮಾನ್ಯರೆಲ್ಲಾ ತಲೆಕೆಡಿಸಿಕೊಂಡರು. ಈ ಅನೂಹ್ಯ ಯೋಜನೆ ಅಂದಿನ ವಿರೋಧಪಕ್ಷದವರ ಕಟುಟೀಕೆಗೆ ಒಳಗಾಯಿತು. ದೇಶಾದ್ಯಂತ ಚರ್ಚಿತವಾಯಿತು. ದೇಶದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿತು. ಆದರೆ ಅದು ಇಂದಿನ ಆಧುನಿಕ ವಿದ್ಯಮಾನಗಳಿಗೆ ಅನಿವಾರ್ಯವೆಂಬುದು ವೇದ್ಯ.

ಭಾರತ ದೇಶ ಇದನ್ನು 2009ರಲ್ಲಿ ಘೋಷಣೆ ಮಾಡಿದಾಗ ಜಗತ್ತಿನ ಮಾಹಿತಿ ತಂತ್ರಜ್ಞಾನದ ದಿಗ್ಗಜ ಬಿಲ್‍ಗೇಟ್ಸ್ ಭಾರತದ 130ಕೋಟಿ ಅದೃಶ್ಯ ಜನರನ್ನು ಮಾಹಿತಿ ತಂತ್ರಜ್ಞಾನದ ಮೂಲಕ ನಂದನ್ ನೀಲೆಕೇಣಿ ಅವರು ವಿಶ್ವಕ್ಕೆ ಗುರುತಿಸಿಕೊಡುತ್ತಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.

ಅಟ್ಟಹಾಸ ಗೈಯುತ್ತಿರುವ ಭ್ರಷ್ಟಾಚಾರ, ಆಸ್ತಿ ಕಬಳಿಕೆ, ಕೊಳ್ಳುಬಾಕತನ, ಹಣಕಾಸಿನ ಅವ್ಯವಹಾರಗಳು ಅಪರಾಧಗಳು ಅಕ್ರಮ ಶೇಖರಣೆ, ಹಣದುಬ್ಬರ, ನಕಲಿನೋಟಿನ ಮುದ್ರಣ ತೆರಿಗೆ ವಂಚನೆ ಮುಂತಾದ ಅಕ್ರಮ ಆಸ್ತಿ ಸಂಪಾದನೆ ಮತ್ತು ಇತರೆ ಅಪರಾಧಗಳ ನಿಯಂತ್ರಣಕ್ಕೆ ಇದು ಅನಿವಾರ್ಯವಾಗಿದೆ. ಅದಕ್ಕೆಂದೇ ಭಾರತ ದೇಶ ಇದನ್ನು 2009ರಲ್ಲಿ ಘೋಷಣೆ ಮಾಡಿದಾಗ ಜಗತ್ತಿನ ಮಾಹಿತಿ ತಂತ್ರಜ್ಞಾನದ ದಿಗ್ಗಜ ಬಿಲ್‍ಗೇಟ್ಸ್ ಭಾರತದ 130ಕೋಟಿ ಅದೃಶ್ಯ ಜನರನ್ನು ಮಾಹಿತಿ ತಂತ್ರಜ್ಞಾನದ ಮೂಲಕ ನಂದನ್ ನೀಲೆಕೇಣಿ ಅವರು ವಿಶ್ವಕ್ಕೆ ಗುರುತಿಸಿಕೊಡುತ್ತಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು. ಅಷ್ಟೇ ಏಕೆ ಜಗತ್ತಿನ ಸುಮಾರು 650 ಕೋಟಿ ಜನರನ್ನು ವಿಶ್ವಕ್ಕೆ ಪರಿಚಯಿಸುವ ಪರಿ ಈ ಡಿಜಿಟಲ್ ಐಡಿ ಸಿಸ್ಟಂ. ಈ ಪದ್ಧತಿಯಲ್ಲಿ ವಿಶ್ವದ ಜನಸಂಖ್ಯೆ ಒಂದು ಸಾವಿರವೇಕೆ ಹತ್ತುಸಾವಿರವಾದರೂ ಚಿಂತಿಸಬೇಕಿಲ್ಲ. ಅದಕ್ಕಾಗಿ ಆಧಾರ ಸಂಖ್ಯೆ ಹನ್ನೆರಡು ಡಿಜಿಟ್ ಆಗಿರುವುದು.

ಜಗತ್ತಿನಲ್ಲಿ ವಿಶಿಷ್ಟ ಗುರುತಿನ ಯುಐಡಿ (ಯುನಿಕ್ ಐಡೆಂಟಿಫಿಕೇಷನ್)ಸಿಸ್ಟಂ ಇದೆ. ಅದೇ ಪದ್ಧತಿಯಲ್ಲಿ ಆಯಾಯ ದೇಶಗಳು ಯುಐಡಿ ಪ್ರಾಧಿಕಾರಗಳನ್ನು ರಚಿಸಿಕೊಂಡು ಅಂತರರಾಷ್ಟ್ರೀಯ ಮಟ್ಟದ ವಿಶಿಷ್ಟ ಗುರುತಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಅದರಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ-ಯುನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ) ಜಾರಿಯಲ್ಲಿದೆ. ನಮ್ಮ ದೇಶದಲ್ಲಿ ಪ್ರಾಧಿಕಾರ ಬರುವ ಮೊದಲೇ ಒಂದೆರಡು ದಶಕಗಳ ಮುಂಚಿತವಾಗಿಯೇ ಹಲವಾರು ದೇಶಗಳಲ್ಲಿ ಇದು ಪೂರ್ಣಪ್ರಮಾಣದಲ್ಲಿ ಜಾರಿಯಾಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇದರ ಪರಿಕಲ್ಪನೆಗೆ ಯುಐಡಿ ಪದ್ಧತಿ ಎಂದೇ ವಿಶ್ವಮಾನ್ಯವಾಗಿರುವುದು. ಅದನ್ನೇ ನಾವು ಪ್ರಾದೇಶಿಕವಾಗಿ ನಮ್ಮ ಜನರಿಗೆ ಸುಲಭಗ್ರಾಹ್ಯವಾಗುವಂತೆ ಮತ್ತು ಅತ್ಯಂತ ಅರ್ಥಗರ್ಭಿತವಾಗುವಂತೆ ‘ಆಧಾರ್’ ಎಂದು ಹೆಸರಿಸಿದ್ದೇವೆ. ಸಮಷ್ಟಿಯಲ್ಲಿ ಹೇಳುವುದಾದರೆ ಜಗತ್ತಿನಲ್ಲಿ ಹುಟ್ಟುವ ಪ್ರತಿ ಒಂದು ಮಗುವು ತನ್ನ ಯುಐಡಿ ಸಂಖ್ಯೆಯನ್ನು ಹಣೆಮೇಲೆ ಬರೆದುಕೊಂಡೇ ತಾಯಿಗರ್ಭದಿಂದ ಹೊರಬರುತ್ತದೆ ಎಂಬುದನ್ನು ಮರೆಯಬಾರದು. ಆ ಸಂಖ್ಯೆ ಮತ್ಯಾರಿಗೂ ಬರುವ ಪ್ರಮೇಯವೇ ಇಲ್ಲ. ಸತ್ತರೂ ಆ ಸಂಖ್ಯೆ ಬೇರೆಯವರಿಗೆ ಬಾರದು. ಉಸಿರು ನಿಂತರೂ ಈ ಗುರುತು ಬಿಟ್ಟು ಹೋಗುತ್ತಾನೆ ಎಂಬ ಅನುಭಾವಿ ಮಾತು ಅನ್ವಯವಾಗುತ್ತದೆ. ಅದಕ್ಕೆಂದೇ ಅದಕ್ಕೆ ಯುನಿಕ್ ಸಂಖ್ಯೆ ಎನ್ನುವುದು. ಅದರಲ್ಲಿ ಪ್ರತಿ ದಶಕದ ಅಥವಾ ನಿರ್ದಿಷ್ಟ ನಿರ್ಧಾರಿತ ನಿಯತಕಾಲದಲ್ಲಿ ಅಪ್‍ಡೇಟ್ ಆಗಬೇಕು. ಅದರಲ್ಲೂ ಮುಖ್ಯವಾಗಿ ಜೈವಿಕ ಚಹರೆ ಗುರುತಿನ ಕ್ಷೇತ್ರದಲ್ಲಿ. ಒಂದು ಪಕ್ಷ ಅಪಘಾತ ಮುಂತಾದ ಅವಘಡದಲ್ಲಿ ಗಣನೀಯ ಚಹರೆ ಗುರುತುಗಳು ಮಾರ್ಪಟ್ಟರೆ ಸೂಕ್ತ ವೈದ್ಯಕೀಯ ಪದ್ಧತಿಯಲ್ಲಿ ಅಪ್‍ಡೇಟ್ ಮಾಡಬೇಕಾಗುತ್ತದೆ.

ಅದಕ್ಕಾಗಿಯೇ ಈಗ ಪ್ರತಿಯೊಂದು ವ್ಯವಹಾರಕ್ಕೂ ಯುಐಡಿ ಅಳವಡಿಕೆ (ಆಧಾರ್ ಜೋಡಣೆ-ಸೀಡಿಂಗ್) ಮಾಡುತ್ತಿರುವುದು. ಸದರಿ ಪ್ರಕ್ರಿಯೆ ಇನ್ನೂ ಸಾಗುತ್ತಿದೆ. ಇದರಿಂದ ದೇಶದ ಆಡಳಿತ ವ್ಯವಸ್ಥೆಯ ಪ್ರಕ್ರಿಯೆ ಅತ್ಯಂತ ಸುಗಮವಾಗುತ್ತದೆ. ಯಾವುದೇ ಸರ್ಕಾರ ನಿಯೋಜಿತ ಫಲಾನುಭವಿಗೆ ಸಕ್ರಮದಲ್ಲಿ ಸಂದಾಯವಾಗುತ್ತದೆ. ನಕಲಿ ಫಲಾನುಭವಿಗಳು ಉದ್ಭವಿಸುವುದಿಲ್ಲ. ಅನ್ಯಮಾರ್ಗದಲ್ಲಿ ಒಬ್ಬನೇ ಫಲಾನುಭವಿ ಹಲವಾರು ಫಲಾನುಭವಗಳನ್ನು ಅನುಭೋಗಿಸುವ ಹುನ್ನಾರಗಳಿಗೆ ಕಡಿವಾಣ ಬೀಳುತ್ತದೆ. ಹೊರಹೋದಾಗ ಏನೆಲ್ಲಾ ಮರೆತರೂ ಈ ಕಾರ್ಡ್ ಒಂದಿದ್ದರೆ ಸಾಕು. ಜಗತ್ತಿನ ಎಲ್ಲಾ ವ್ಯವಹಾರ ಗಳನ್ನು ಇದರೊಂದರಿಂದಲೇ ನಡೆಸಬಹುದು.

ಅಂದರೆ ಇಡೀ ಜಗತ್ತು ಯುಐಡಿ ಮಯಂ. ನಮ್ಮ ದೇಶದಲ್ಲಿ ‘ಸರ್ವಂ ಆಧಾರ್ ಮಯಂ’.

*ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಬಳ್ಳಾರಿ.

Leave a Reply

Your email address will not be published.